
ರಾಜಕುಮಾರ ಮಡಿವಾಳರ
ನಡೆದು ಬರುತ್ತಿದ್ದಿರಿ….
ಚುಮುಚುಮು ಚಳಿಯ ನಸುಕಲಿ
ತಲೆಗೊಂದು ಬೆಚ್ಚನೆಯ ಸ್ಕಾರ್ಫು
ಎದುರು ಸಿಕ್ಕವರಿಗೆಲ್ಲ ಬೆಳಗ ನಗು ಚೆಲ್ಲುತ್ತ
ಬಾನ ಜೋಳಿಗೆಯಿಂದ ತೂಕಡಿಸುವ
ಸೂರ್ಯ ಗೋಣು ಹೊರಗಿಣುಕಿಸಿ ನೋಡಿದಂತೆ
ಎಷ್ಟು ಹಗುರ? ಮಣ್ಣು ನೊಂದಿತೆನುವ ನೋವೆ?
ಎಂಥ ಮಧುರ ಹೆಜ್ಜೆಗಳ ಎಣಿಸಿ ಇಡುತ್ತಿದ್ದಿರಿ
ನಗರಕ್ಕೆ ಕಲ್ಯಾಣವ ಬಳೆವ ಹಾಗೆ…!
ನಡೆದು ಬರುತ್ತಿದ್ದಿರಿ….
ಎರಡು ಸಲ ಸಣ್ಣಧನಿಯಲಿ ಕೂಗಿ
ಶೃತಿ ಖಚಿತ ಪಡಿಸಿಕೊಂಡು ಕೀಂವ್ವನೇ
ಹೋರುಧನಿಗೇರಿಸಿ ಕಂಠ
ಮಳೆಯ ಧೋ ಕರೆದಂತೆ
ಅತ್ತಿಕೊಳ್ಳದ ಕೊರಕಲಿನಲಿ ಕೇಕೆ
ಹಾಕಿ ರಿಂವ್ವನೆ ಗರಿಕೊಡವಿ
ಬಳುಕಿಸಿ ನಡು, ನವಿಲು ಕುಣಿಯಲಣಿಯಾದಂತೆ..

ಇತ್ತೀಚೆಗೆ ನಡೆದು ಬರುತ್ತಿದ್ದಿರಿ….
ಹಳೆಕಾಲದ ದೊಡ್ಡಗಡಿಯಾರದ
ತೆಳು ಲೋಲಕ ಮೈ, ಇಡಿಯ ಹಿಡಿಮಾಡಿ
ಸಂಭಾಳಿಸಿ ಸಾವಧಾನದಲಿ
ಕೊಟ್ಟ ಚಾವಿ ಕಸುವಿನವಧಿ ಇಂದೋ
ತಪ್ಪಿದರೆ ನಾಳೆ ಮುಗಿಯಬಂದಂತೆ..
ಯೂನಿವರ್ಸಿಟಿಯ ಅತಿಥಿಗೃಹ ಮುಟ್ಟಿ
ಹಿರೇಮಠರ ಅಧ್ಯಯನ ಕೇಂದ್ರ ಹಾದು
ಈಗ ವಾಪಸ್ಸಿನ ಸಮಯ ಮಂಪರಗಣ್ಣ
ಮೆಲ್ಲಗೆ ಬಿಡಿಸಿ ಅರಳು ಮಲ್ಲಿಗೆ
ನಿನ್ನೆ ಶಾಲ್ಮಲೆಯಲಿ ಮುಳುಗಿದ್ದ ರವಿ
ದುಮ್ಮನೆದ್ದು ತಲೆಕೊಡವುತ್ತಿದ್ದಂತೆ
ಕಿರಣವೇಣಿಯಿಂದ ಅರಿಷಿಣದ ನೀರು ಚಿಲ್ಲನೆ
ಬಾನಿಂದ ಜುಮುರು ಚೆಂಬೆಳಕು ನೆಲತುಂಬ,
ಜೇನಲ್ಲಿ ಅದ್ದಿತೆಗೆದ ಬಂಗಾರ ಹೂ ಕಲ್ಯಾಣ ನಗರ.
ತಡವಾಯ್ತು ಕವಿಗಳೆ
ನಡೆದು ಬನ್ನಿರಿ ಮನೆಗೆ






0 Comments