ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಡುರಾತ್ರಿಯ ಕೆಟ್ಟ ಕನಸುಗಳೂ

ಸಾಮಂತ್ರಿ ಜ್ಯೋತಿ

ಒಂಟಿ ಹೆಣ್ಣುಗಳಿಗೆ ಬರುವ
ನಡುರಾತ್ರಿಯ ಕೆಟ್ಟ ಕನಸುಗಳೂ
ಎರಡು ನಿಮಿಷಕ್ಕಿಂತ ಹೆಚ್ಚು
ಎದೆಬಡಿತ ಏರಿಸಲಾರವು..
ಎಲ್ಲದರ ಆಯಸ್ಸೂ ಕ್ಷಣಿಕವೆಂದು
ನಂಬುವಂತೆ ಅವರನ್ನ ಶಿಕ್ಷಿಸಲಾಗಿದೆ..

ಮಧ್ಯರಾತ್ರಿಗಳು ಎಂದಿಗೂ
ಆಪ್ತವಲ್ಲದದವರಿಗೆ ಮಳೆಗಾಲ
ಅಕ್ಷರಶಃ ಶಾಪ!
ಇಡೀ ಜಗತ್ತಲ್ಲಿ ಧರ್ಮ ತುಳುಕುತಿದೆ
ಹಿಡಿಬೊಗಸೆ ದಯೆಗಾಗಿ
ಕತ್ತಲಿಡೀ ತಡವರಿಸುತಾರೆ..

ಸಾವರಿಸಿಕೊಳುವ ಮುನ್ನ
ಇನ್ಯಾವುದೋ ಸದ್ದು
ಮತ್ಯಾವುದೋ ನೆನಪು
ನೇರ ದಾಳಿಯಿಡುತ್ತದೆ
‘ಅಳುವುದಿಲ್ಲ ಗಟ್ಟಿ ಹೆಣ್ಣುಗಳು’
ಎಂಬಂತೆ ಮತ್ತೆ ಮತ್ತೆ ತೇಪೆ
ಹಾಕುತಲೇ ಇವೆ ಸಮಾಜದ ಸೌಜನ್ಯಗಳು..

ಗಾಳಿ ತಂಡಿಯಿಸಿದರೆ
ಹೊದಿಕೆ ಉಸಿರುಗಟ್ಟಿಸುತ್ತವೆ
ಬೆಳಗು-ಕತ್ತಲುಗಳು
ಸ್ಪರ್ಧೆಗಿಳಿದವರಂತೆ
ನರನಾಡಿಗಳ ಹಸಿರುಗಟ್ಟಿಸುತವೆ..

ಬೆಳಗು ಹರಿಸಲು ಖುದ್ದು
ಜಗಳಾಡುತಾಳೆ ರಾತ್ರಿಯೊಂದಿಗೆ..
ಕತ್ತಲಿಗವಳ ಮೇಲೆ ಅದಮ್ಯಪ್ರೇಮ..
ಮಾತುಕೇಳದಿರುಳಿನ ಹೆಗಲಿಗೆ
ಅಸಹಾಯಕವಾಗಿ ಒರಗುತಾಳೆ..
ದ್ವೇಷವಿರದ ಪಾಪದಂಧಕಾರ
ಬೆಳಕೋಡುತ್ತಲೇ ಜೊತೆಯಾಗುತ್ತದೆ ತಪ್ಪದೆ..

ಶತಮಾನಗಳಿಂದ.. ಹೀಗೆಯೇ
ರಾಜಸತ್ವವನ್ನ ಸಂಭಾಳಿಸಿದ್ದು
ಸೋತವರನ್ನ ಸಾಂತ್ವನಿಸಿದ್ದು
ಜಗತ್ತಿನ ಜೀವಗಳುಳಿಸಿದ್ದು
ತಮಸ್ಸೇ ಅಲ್ಲವೆ…!!

‍ಲೇಖಕರು Admin

11 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading