ಪ್ರೀತಿ ನಾಗರಾಜ್
ಮೈಸೂರಿನಲ್ಲಿ ನಮ್ಮ ಮನೆ ಇರುವುದು ಆಲ್ಮೋಸ್ಟ್ ಊರ ಹೊರಗೆ. ಅಂದರೆ ನಾವಿರುವ ಜಾಗದ ಕೊನೆಯ ಗೆರೆಗೆ ಹಳ್ಳಿಯೊಂದರ ಗೆರೆ ಶುರುವಾಗುತ್ತದೆ. ಹಾಗಾಗಿ ಇಲ್ಲಿನ ಕುರಿ ರೇಟು, ಮಟನ್ ಚೀಟಿ, ಚಿಕನ್ ಧಾರಣೆ, ಹುಣಸೆ ಮರದ ಕಾಂಟ್ರಾಕ್ಟ್ ದರ ಈ ವರ್ಷ ಎಷ್ಟು ಬಿತ್ತು, ಮಾರಿ ಹಬ್ಬದ ರಾಜಕೀಯ, ಇಲ್ಲಿನ ಪಾರ್ಟಿಗಳು, ಸ್ವ ಸಹಾಯ ಸಂಘದ ಬಗ್ಗೆ ಗಂಡಸರ ಅಸಹನೆ (ನಮ್ಮ ಕೆಲಸದ ಸಹಾಯಕಿ ಮೂರು ಸಂಘದ ಮೆಂಬರ್ರು!) ಮನೆಗಿಷ್ಟು ಓಟಿನ ರೇಟು, ಹಬ್ಬದ ಖರೀದಿ ಎಲ್ಲವೂ ಹಾಸುಹೊಕ್ಕು.
ಮಾರಿ ಹಬ್ಬ ಮೂರು ವಾರ ಇದೆ. ಬೇಸಗೆಯ ಮೊದಲ ಪಾದ ಇದು. ಮರಗಳೆಲ್ಲ ಬೋಳಾಗಿ ಕುರಿಗಳು ಮಕಮಕ ನೋಡಿಕೊಂಡು ಬ್ಯಾ ಬ್ಯಾ ಎಂದು ಅಂಗಲಾಚುತ್ತಿರುವಾಗ ಅತ್ತಿತ್ತ ನೋಡಿ ಒಂದು ಕೈಯ್ಯಿನ ಕುರಿಗಾಹಿಯೊಬ್ಬಳು ಚಕ್ ಅಂತ ಹಸಿರೆಲೆ ತುಂಬಿದ ಮರದ ಕೊಂಬೆಯ ಕತ್ತರಿಸಿ ಅವಕ್ಕೆ ಉಣಿಸುವದನ್ನು ನೋಡಿಯೇ ಅಚ್ಚರಿಪಡಬೇಕು. ಅವಳ ಬಲಗೈ ಯಾವುದೋ ಕರೆಂಟು ವೈರಿಗೆ ಬಲಿಯಾಯಿತಂತೆ. ಈಗ ಅವಳು ಪೂರಾ leftist. ಸಖತ್ ಚುರುಕು.
ಮಧ್ಯಾಹ್ನದ ಬಿರು ಬಿಸಿಲಿನಲ್ಲೆ ಇರಲಿ ಸುರಿಯುತ್ತಿರುವ ಮಳೆಯೇ ಇರಲಿ…ಕುರಿಗಳನ್ನು ಎಂದೂ ಉಪವಾಸ ಇಡಬಾರದು ಎನ್ನುವುದು ಅವಳ ಸಿದ್ಧಾಂತ. ಒಂದೇ ಕೈಯ್ಯಲ್ಲಿ ತನ್ನ ಕುರಿ ಆಗ ತಾನೇ ಹೆತ್ತ ಮರಿಯನ್ನು ಜೋಪಾನ ಮಾಡಿ ಎತ್ತಿಕೊಂಡು ಹೋಗುತ್ತಾಳೆ.
ಮೊನ್ನೆ ಕೊಂಬೆ ಕತ್ತರಿಸಿದ್ದ ಕಂಡು ಯಾರೋ ಜೋರು ಮಾಡಿದರು.

“ಏನಮ್ಮಾ ನಿಮಗೆ ಕಾಮನ್ ಸೆನ್ಸ್ (!) ಇಲ್ವಾ? ಮರಗಳನ್ನೆಲ್ಲಾ ಕಡೀತೀರಿ…”
“ಅಯ್ಯಾ…ನಾನ್ ಕುರಿಗ ನಾಕ ಎಲ ಆಕಿದೆ ಕನ್ ಬುಡಿ. ಏನ ಮರ ಕೂದು ಬಿಸಾಕ್ನಿಲ್ವಲಾ?”
“ಮರ ಹಾಳಾಗಲ್ವಾ ಅಮ್ಮಾ? ಇದ್ರಿಂದಾನೆ ಮಳೆ ಕಡಿಮೆ ಆಗುತ್ತೆ” (ಮೇಲ್ಮಧ್ಯಮ ವರ್ಗದ ಕಾನ್ವೆಂಟ್ ಮಗು ಇದು ಅಂತ ಪ್ರತ್ಯೇಕ ಹೇಳಬೇಕಾ?)
“ಸಾ… ನೀವ್ ಮನ ಕಟ್ಕಂದಿರಾ ಜಾಗದೆಲಿ ಎಂಥೆಂಥಾ ಮರ ನಿಂತ್ಕಂದಿದ್ವು ಗ್ವತ್ತಾ ಸಾಮೆ? ಎಲ್ಲಾ ಕಡುದು ಬುಟ್ಟಿ ಸೈಟ ಮಾಡಿರು…ಆಮ್ಯಾಲ ಮನ ಕಟ್ಟೀರು ದ್ವಾಡ್ ದ್ವಾಡ್ ಮರಾ ಇದ್ದ ಜಾಗ್ದೆಲಿ ಸೊ ಪ್ಪುನ್ ಕಂತೆ ಅಂಗೆ ಇರಾ ಮರಾ ಆಕ್ಬುಟ್ಟಿ ಮಳ ಬಾ ಅಂದ್ರ ಬಂದಾದಾ? ಇವೆಲ್ಲಾ ನಮ್ ಜಮೀನು ಸಾಮೆ, ಆವಾಗ ಮಾರ್ ಬುಟ್ಟೋ…ನಾವ್ ನಾಕ ಎಲ ಕುರಿಗೆ ಆಯ್ತಾದ ಅಂತ ಆಕುದ್ರೆ ಯೊಳಾಕ ಬಂದೀರಿ. ಇರ್ಲಿ ಬುಡಿ…ವೊಯ್ತಿನ್ ಮುಂದುಕ…ಅಷ್ಟ್ ಮರಾ ಇದ್ವು…ನಿಮ್ ಜನ ಒಂದು ಬೇರ್ ತುಂಡ್ನೂ ಬಡ್ನೀಲವಲ್ಲ? ಮರಾ ಚಿಗುತ್ರ ರಪ್ ಅಂತ ಕಿತ್ತಾಕೀರು…ಈಗ ನಮಗ ಯೊಳೀರ ಸಾಮೆ…
ನಡೀ ಹೈ ಹೈ ಹೈ…” ಎಂದುಕೊಳ್ಳುತ್ತಾ ಹೋದಳು. ನಾನು ಬೆಪ್ಪಾಗಿ ದಿನವೆಲ್ಲಾ ಅದೇ ಮಾತ ಯೋಚಿಸುತ್ತಾ ಕೂತಿದ್ದೆ.
ಈಗ ಬಂದು ಬಿಸಿನೀರು ಬಕೆಟ್ಟಿನಲ್ಲಿ ನೋಯುತ್ತಿರುವ ಕಾಲಿಗೆ ಶಾಖ ಕೊಡಲು ಕೂತಿರುವೆ. ಅಲ್ಲಿ ಹಳ್ಳಿಯಲ್ಲಿ ಭಜನೆ ಸಾಗಿದೆ.
“ಯಾಕೆ ಬಡದಾಡ್ತೀ ತಮ್ಮಾ…ಮಾಯಾ ಮೆಚ್ಚಿ…ಸಂಸಾರ ನೆಚ್ಚಿ…ನೀನೋದ ಗಳಿಗೆ ತಮ್ಮ ಕಣ್ಣ ಮುಚ್ಚಿ…ಮಣ್ಣ ಮುಚ್ಚಿ…”
ನಾಳೆ ಏನು ಹೊಸ ಆಧ್ಯಾತ್ಮ ಸಿಕ್ಕೀತು ಅಂತ ಹಸಿದು ಕಾಯುತ್ತಿರುವೆ…






Nija intahavarindale Aadyatma ,Jeevana pata ella kaleebahudu. Chennagi barediddiri Preeti
ತುಂಬ ಚಂದದ ಬರಹ ಪ್ರೀತಿ. ಖುಶಿಯೂ ಆಯ್ತು; ವಿಚಾರಕ್ಕೂ ಹಚ್ಚಿತು.
ಅರ್ಥವತ್ತಾಗಿದೆ
ಸಾಮಾನ್ಯರಿಗಿರುವ ಸಾಮಾನ್ಯ ಜ್ಞಾನದ ಕೊರತೆಯೂ ಪರಿಸರದ ಈ ವಿನಾಶಕ್ಕೆ ಕಾರಣ