ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

ನಟಿಸಬೇಕಯ್ಯಾ ಅಮಾಯಕನಂತೆ
ಹಾಗಲ್ಲಿ ನಿಂತು ಸಿಗರೇಟು ಸೇದುತ್ತ ನಿಂತವನ
ಕಣ್ಣೇಕೆ ನಿನ್ನ ಕಡೆಗೇ ನೆಟ್ಟಿದೆ?
ಅವನು ಪೋಲಿಸನೇ
ಪತ್ರಕರ್ತನೆ
ಪಕ್ಷದ ಕಾರ್ಯಕರ್ತನೇ, ಇಲ್ಲ
ರಹಸ್ಯ ಗೂಡಾಚಾರನೇ?
ಯಾರಾದರು ಆಗಿರಬಹುದು !
ಯುದ್ದದ ಭೀತಿ ಹುಟ್ಟಿಸಿದ ಪ್ರಭುಗಳ
ಅತ್ಯಾಪ್ತನಾಗಿರಬಹುದು
ಅವನು ಯಾರಾದರಾಗಿರಲಿ
ಇರು ನೀನು ನಿನ್ನೆಚ್ಚರದಲ್ಲಿ
ಸಾದ್ಯವಾದರೆ ಹುಬ್ಬಗಂಟಿಕ್ಕದೆ ಮಾತಾಡು
ಅನಗತ್ಯವಾದರು ಸರಿಯೆ ಮುಗುಳ್ನಗು
ಹಸಿವಾಗಿದ್ದರೂ ತೇಗು, ಹೊಟ್ಟೆ ತುಂಬಿದವನಂತೆ
ಅರ್ಥವಾದರೂ ಎಲ್ಲ ನಟಿಸು ಅಮಾಯಕನಂತೆ.
ಮಾತಾಡದಿರು ಬೆಲೆಯೇರಿಕೆಯ ಬಗ್ಗೆ
ಹಣವಿರದೆ ಬಾಗಿಲು ಮುಚ್ಚಿದ ಮಿಷೀನುಗಳ ಬಗ್ಗೆ
ಪಕ್ಷಗಳ ಬಗ್ಗೆ ಮಾತಾಡದಿರು
ವಿಪಕ್ಷಗಳನು ಟೀಕಿಸುತ್ತಿರು!
ಸುಮ್ಮನೆ ಇದ್ದು ಬಿಡು ಬದುಕಿಯೂ ಸತ್ತಂತೆ
ಇರಲಾಗಿದಿದ್ದರೆ ಹೀಗೆ
ನೀನೇ ಸತ್ತು ಹೋಗಿಬಿಡು
ಸದ್ದಿರದೆ
ಮೃತ್ಯುಪತ್ರ ಬರೆಯದೆ!





0 Comments