ಕಣ್ಣು ಕುಕ್ಕುವ ನಗರಗಳು, ಕಾಣದ ಕೊಳೆಗೇರಿಗಳು
ಜಿ ಪಿ ಬಸವರಾಜು
ಇತ್ತೀಚೆಗೆ ಚೆನ್ನೈ ನಗರದ ಬಗ್ಗೆ ಅನೇಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾದವು. ಆ ನಗರದ 375ನೇ ಹುಟ್ಟುಹಬ್ಬದ ಕಾರಣಕ್ಕೆ ಈ ನಗರದ ಬಗ್ಗೆ ಬರೆಯಲು ಮಾಧ್ಯಮ ವಲಯ ಉತ್ಸಾಹ ತೋರಿತು. ಇದು ಸಹಜ. ಒಂದು ನಗರಕ್ಕೆ ತನ್ನದೇ ಆದ ನೆನಪುಗಳು ಇರುತ್ತವೆ; ಇತಿಹಾಸ ಇರುತ್ತದೆ; ವರ್ತಮಾನವೂ ಇರುತ್ತದೆ. ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮುಖಗಳೂ ಇರುತ್ತವೆ. ಹಾಗೆಯೇ ಆಧುನಿಕ ಮುಖದ ವಿದ್ಯಮಾನಗಳೂ, ಪುರಾತನಕ್ಕೆ ಸಂಬಂಧಿಸಿದ ಸಂಗತಿಗಳೂ ಇರುತ್ತವೆ. ಇರಲೇಬೇಕು. ಇವೆಲ್ಲವನ್ನು ಒಮ್ಮೆ ನೋಡುವುದು ಕುತೂಹಲದ ಓದಿಗೆ ಅವಕಾಶವನ್ನೂ ಕಲ್ಪಿಸುತ್ತದೆ.
ಚೆನ್ನೈ ನಗರವೆಂದರೆ ಅದು ಹಳೆಯ ಮದ್ರಾಸು. ಮದ್ರಾಸ್ ನಗರವೆಂದರೆ ಹಳಬರಿಗೆ ಅಲ್ಲಿಯ ಫಿಲ್ಟರ್ ಕಾಫಿ, ಕರ್ನಾಟಕ ಸಂಗೀತ, ಭರತ ನಾಟ್ಯ, ಚೌಕಾಸಿಯ ಆಟೋಗಳು, ದಿ ಹಿಂದೂ ಪತ್ರಿಕೆಯ ಕ್ರಾಸ್ವರ್ಡ್ ಇತ್ಯಾದಿ ಹತ್ತಾರು ನೆನಪುಗಳು. ಈಗಲೂ ಇವೆಲ್ಲ ಇರುವುದು ನಿಜ. ಜೊತೆಗೆ ಮದ್ರಾಸ್ ನಗರವನ್ನು ಭಾರತದ ಡೆಟ್ರಾಯಿಟ್ ಎಂಬ ಕೀರ್ತಿಗೆ ಕಾರಣವಾದ ಹಲವಾರು ಸಂಗತಿಗಳು. ಅಲ್ಲಿನ ದುಡಿಮೆ, ಪೈಪೋಟಿ, ಕೈಗಾರಿಕೆಗಳ ಬೃಹತ್ ಬೆಳವಣಿಗೆ ಇತ್ಯಾದಿ ಅನೇಕ ಅಂಶಗಳನ್ನು ಹಲವರು ಉತ್ಸಾಹದಿಂದ ಬರೆದರು. ಒಂದು ನಗರದ ಹುಟ್ಟುಹಬ್ಬದ ಸಂದರ್ಭದಲ್ಲಿ ಇವೆಲ್ಲ ನೆನಪಾಗುತ್ತವೆ.

ಪ್ರತಿಯೊಂದು ನಗರಕ್ಕೂ ಹುಟ್ಟು, ವಿಕಾಸದ ಚರಿತ್ರೆಗಳು ಇರುತ್ತವೆ. ನಮ್ಮ ಬೆಂಗಳೂರು ನಗರವನ್ನೇ ನೋಡಿದರೂ ಅದಕ್ಕೆ ಇತಿಹಾಸವಿದೆ; ವರ್ತಮಾನವೂ ಇದೆ. ಸಮುದ್ರ ಮಟ್ಟದಿಂದ 300 ಅಡಿ ಎತ್ತರದ ಬೆಂಗಳೂರು ನಗರದ ಹವೆಯನ್ನೇ ಮುಕ್ತ ಮನಸ್ಸಿನಿಂದ ಬಣ್ಣಿಸುವ ಕಾಲವೂ ಒಂದಿತ್ತು. ಹಳಬರು ಕಂಡ ಬೆಂಗಳೂರೆಂದರೆ ಈ ಹವೆಯ ಬಣ್ಣನೆಯೇ ತುಂಬಿರುತ್ತದೆ; ಬಸವನಗುಡಿ, ಮಲ್ಲೇಶ್ವರ, ಲಾಲ್ಬಾಗ್, ಕಬ್ಬನ್ಪಾರ್ಕ್, ಗಾಂಧೀಬಜಾರ್, ವಿದ್ಯಾಥರ್ಿ ಭವನದ ದೋಸೆ, ಎಂಟಿಆರ್ನ ಊಟ, ಜಟಕಾ, ಮುಕ್ತವಾಗಿ ನಡೆದಾಡಬಲ್ಲ ಜಾಗಗಳು ಇತ್ಯಾದಿ ಹಲವಾರು ಸಂಗತಿಗಳ ಸುತ್ತ ಸವಿನೆನಪುಗಳು ಸುತ್ತಿಕೊಂಡುಬಿಡುತ್ತವೆ. ಇಲ್ಲಿಯ ಸಹನೆಯ ಬಗ್ಗೆ, ಸಂಸ್ಕೃತಿಯ ಬಗ್ಗೆ, ಎಲ್ಲರಿಗೂ ಜಾಗ ಕೊಡುವ ನಮ್ಮ ಬೆಂಗಳೂರಿಗರ ವಿಶಾಲ ಮನೋಭಾವದ ಬಗ್ಗೆ ಮಾತುಗಳು ಬಂದು ಹೋಗುತ್ತವೆ. ಆದರೆ ನಾವು ಯಾರೂ ವರ್ತಮಾನದ ಬೆಂಗಳೂರನ್ನು ಅಷ್ಟಾಗಿ ಗಮನಿಸುವುದಿಲ್ಲ. ಗಮನಿಸಿದರೂ ಒಂದೆರಡು ಸಂಗತಿಗಳ ಬಗ್ಗೆ ಗೊಣಗುತ್ತೇವೆ. ಈ ನಗರದಲ್ಲಿ ಗಾಳಿಯೇ ಇಲ್ಲ, ವಾಹನಗಳ ಭರಾಟೆಯಲ್ಲಿ ಇಲ್ಲಿ ಬದುಕುವುದು ಕಷ್ಟ ಇತ್ಯಾದಿ ಮಾತುಗಳು ಮಾಮೂಲು ಗೊಣಗಾಟಗಳೇ ಅಗಿರುತ್ತವೆ.
ಈ ನಗರದ ಅಥವಾ ಇನ್ನಾವುದೇ ನಗರದ ಕೊಳಚೆ ಪ್ರದೇಶಗಳ ಬಗ್ಗೆ ನಾವು ಮಾತನಾಡುವುದಿಲ್ಲ. ನಮಗೆ ಹೆಚ್ಚು ಗೊತ್ತಿರುವುದೂ ಇಲ್ಲ. ಇವತ್ತಿಗೂ ನಮ್ಮ ನಗರದ ಕೊಳೆಗೇರಿಗಳು ಬಹು ಜನರಿಗೆ ಅಪರಿಚಿತ ತಾಣಗಳೇ. ನೀವು ರೈಲು ಪ್ರಯಾಣಿಕರಾಗಿದ್ದರೆ, ಕೊಳಗೇರಿಯ ಒಂದು ಸಣ್ಣ ಝಲಕ್ ಆದರೂ ಕಾಣಸಿಗುತ್ತದೆ. ಇನ್ನೇನು ಬೆಂಗಳೂರು ಬಂತು ಎನ್ನುವುದನ್ನು ಈ ಕೊಳೆಗೇರಿಗಳು ಸಾರಿ ಹೇಳುತ್ತವೆ. ನಿಮ್ಮ ಪ್ರಯಾಣ ಹಗಲಿನದಾಗಿದ್ದರೆ, ಈ ಕೊಳೆಗೇರಿಯ ಅನೇಕ ಮುಖಗಳು ಹಾಗೆಯೇ ನಿಮ್ಮ ನೋಟದ ಪರದೆಯ ಮೇಲೆ ಸರಿದು ಹೋಗುತ್ತವೆ. ಈ ಕೊಳೆಗೇರಿಗಳನ್ನು ದಾಟದಿದ್ದರೆ, ರೈಲು ಬೆಂಗಳೂರು ಕೇಂದ್ರ ರೈಲು ನಿಲ್ದಾಣವನ್ನು ತಲುಪುವುದೇ ಇಲ್ಲ. ಇದು ಬಹುಪಾಲು ಎಲ್ಲ ನಗರಗಳ ವಿಚಾರದಲ್ಲಿಯೂ ಹೀಗೆಯೇ. ರೈಲು ಹಳಿಗಳ ಆಚೆ ಈಚೆ ಚಾಚಿಕೊಂಡಿರುವ ಈ ಕೊಳೆಗೇರಿಗಳು, ಅಲ್ಲಿನ ಬದುಕು, ಬಡತನ, ಗೂಡುಗಳಂಥ ಮನೆಗಳು ಭಾರತ ದರ್ಶನವನ್ನೂ ಮಾಡಿಸುತ್ತವೆ. ಇದು ಭಾರತವಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ.
ಬೆಂಗಳೂರು ನಗರವನ್ನೇ ತೆಗೆದುಕೊಂಡರೆ ಈ ನಗರ ಕಳೆದ ಹತ್ತು ವರ್ಷಗಳಲ್ಲಿ ಅಗಾಧವಾಗಿ ಬೆಳೆದಿದೆ ಎನ್ನುವುದರ ಜೊತೆಗೆ ಕೊಳೆಗೇರಿಗಳ ಸಂಖ್ಯೆಯೂ ಬೆಳೆದಿದೆ. 2003ರಲ್ಲಿ ಈ ನಗರದಲ್ಲಿದ್ದ ಕೊಳೆಗೇರಿಗಳ ಸಂಖೆ,್ಯ ಅಧಿಕೃತ ಅಂಕಿ ಅಂಶಗಳ ಪ್ರಕಾರ 473. ಹತ್ತು ವರ್ಷಗಳ ನಂತರ ಅಂದರೆ 2013ರಲ್ಲಿ ಈ ಕೊಳೆಗೇರಿಗಳ ಸಂಖ್ಯೆ 597 ಆಗಿದೆ. ಬೆಂಗಳೂರಿನ ಜನಸಂಖ್ಯೆಯ (84.25 ಲಕ್ಷ) ಶೇ16.45 ರಷ್ಟು ಜನ ಅಂದರೆ 13.86 ಲಕ್ಷ ಜನ ಈ ಕೊಳೆಗೇರಿ ನಿವಾಸಿಗಳು. ಕುಡಿಯುವ ನೀರು, ಗಾಳಿ, ಓಡಾಡುವ ರಸ್ತೆ, ಇರಲು ಮನೆ ಇತ್ಯಾದಿ ಹತ್ತಾರು ಕನಿಷ್ಟ ಸೌಲಭ್ಯಗಳನ್ನು ಬೆಂಗಳೂರಿನ ಜನ ಕೇಳಿದರೆ, ಈ ಕೊಳೆಗೇರಿಯ ಜನ ಏನನ್ನೂ ಕೇಳುವುದಿಲ್ಲ. ನಿತ್ಯವೂ ಅವರದು ಹೋರಾಟ; ನಿತ್ಯವೂ ಪರದಾಟ. ಮೈಚಾಚಿಕೊಳ್ಳಲು ಒಂದಿಷ್ಟು ನೆಲ ಸಿಕ್ಕರೆ ಮುಗಿಯಿತು, ಅವರ ರಾತ್ರಿ ಕಳೆದು ಹೋಗುತ್ತದೆ. ಅವರ ಜೋಪಡಪಟ್ಟಿ ಸೋರದಿದ್ದರೆ ಮಳೆಗಾಲ ಮುಗಿದುಹೋಗುತ್ತದೆ. ಎಲ್ಲಿಯೋ ನೀರು, ಎಲ್ಲಿಯೋ ಗಾಳಿ, ಎಲ್ಲಿಯೋ ಬೆಳಕು, ಎತ್ತಲೋ ಹಗಲು ರಾತ್ರಿಗಲೂ; ಅಂತೂ ಬದುಕಿನ ಚಕ್ರ ಇಲ್ಲಿ ಸುತ್ತುತ್ತಲೇ ಇರುತ್ತದೆ. ಇಲ್ಲಿ ಸೂರ್ಯ ಹುಟ್ಟುತ್ತಾನೆ, ಎಂದಿನಂತೆ; ಮುಳುಗುತ್ತಾನೆ ಎಂದಿನಂತೆ. ಅವರ ಮುರಿದ ಕನಸುಗಳನ್ನು ಮತ್ತೆ ಚಿಗುರಿಸುವಂತೆ ಬಾನತುಂಬ ಚುಕ್ಕೆಗಳು ಹೊಳೆಯುತ್ತ, ರಾತ್ರಿಯನ್ನು ಬೆಳಗುತ್ತಿರುತ್ತವೆ. ಇಲ್ಲಿಯೂ ಹೂವು ಅರಳುತ್ತವೆ. ಕೋಗಿಲೆಗಳು ಕೂಗುತ್ತವೆ.
ಉದ್ಯೋಗ ಹುಡುಕಿ ಬಂದವರು, ಕನಸಿನ ಮಹಲುಗಳನ್ನು ಕಟ್ಟಿ ಕುಸಿದು ಹೋದವರು, ಎಲ್ಲಿ ಏನು ಎತ್ತ ಎಂಬುದು ತಿಳಿಯದೇ ಗೊಂದಲಗೆಟ್ಟವರು, ಅಸಹಾಯಕರಾಗಿ ಬದುಕನ್ನು ಕೆಂಗಣ್ಣಿನಿಂದ ನೋಡುವವರು ಎಲ್ಲರೂ ಇಲ್ಲಿ ಬೀಡುಬಿಟ್ಟಿರುತ್ತಾರೆ. ಇವರನ್ನೇ ಬಂಡವಾಳ ಮಾಡಿಕೊಂಡು ಬದುಕಿನ ಜಟಕಾ ಬಂಡಿ ಓಡಿಸುವವರೂ ಇಲ್ಲಿಯೇ ಠಿಕಾಣಿ ಹೂಡಿರುತ್ತಾರೆ. ಇಸ್ಪೇಟು, ಜೂಜು, ಬೀಡಿ, ಪಿಕ್ಪಾಕೇಟು ಎಲ್ಲ ವಿದ್ಯೆಗಳೂ ಇಲ್ಲಿ ಬೀಡುಬಿಟ್ಟಿರುತ್ತವೆ. ರಾಜಕಾರಣಿಗಳ ಓಟುಗಳೂ ಇಲ್ಲಿಯೇ ಕೊಳ್ಳಲು ಮತ್ತು ಮಾರಲು ಅಂಗಡಿಗಳನ್ನು ತೆರೆದಿರುತ್ತವೆ. ಇಲ್ಲಿಯ ಬದುಕನ್ನು ನೋಡುವವರು ಯಾರು? ಎಲ್ಲರೂ ರೇಸಿನಲ್ಲಿ ಓಡುವವರೇ.
ಬಡವರಿಗೆ ಅಕ್ಕಿ, ಉದ್ಯೋಗ ಭತ್ಯೆ, ಶಿಕ್ಷಣ, ಆರೋಗ್ಯ ಇತರ ಕನಿಷ್ಟ ಸೌಲಭ್ಯಗಳನ್ನು ಯೋಚಿಸುವ ಸರ್ಕಾರ ಈ ಕೊಳೆಗೇರಿಗಳ ಬಗ್ಗೆ ಎಷ್ಟು ಯೋಚಿಸಿದೆ. ಯೋಜನೆಗಳೇನೋ ತಯಾರಾಗುತ್ತವೆ. ಕೊಳಚೆ ನಿರ್ಮೂಲನ ಮಂಡಳಿ ಇರುತ್ತದೆಯೇ ಹೊರತು, ಕೊಳಚೆಗಳು ನಿಮರ್ೂಲನ ಆಗುವುದಿಲ್ಲ. ಇಡೀ ಭಾರತದಲ್ಲಿರುವ ಕೊಳೆಗೇರಿಗಳನ್ನು ಸುಧಾರಿಸುವ ದಿಕ್ಕಿನಲ್ಲಿ ಕೇಂದ್ರ ಸರ್ಕಾರ ಯಾಕೆ ಸರಿಯಾದ ಕಾರ್ಯಕ್ರಮ ರೂಪಿಸುವುದಿಲ್ಲ?
ಮುಂಬೈ ಕೊಳೆಗೇರಿಗಳ ಬಗ್ಗೆ ಹೇಳದಿರುವುದೇ ಒಳ್ಳೆಯದು. ಕೊನೆಯ ಪಕ್ಷ ನಾವು ಬೆಂಗಳೂರು, ಮೈಸೂರು, ಧಾರವಾಡ-ಹುಬ್ಬಳ್ಳಿ ಮೊದಲಾದ ನಗರಗಳ ಕೊಳೆಗೇರಿಗಳ ಬಗ್ಗೆ ಚಿಂತಿಸುವುದು ಅತ್ಯಗತ್ಯ. ಈ ಸಮಸ್ಯೆ ಬೃಹದಾಕಾರವಾಗಿ ಬೆಳೆಯುವುದಕ್ಕೆ ಮುನ್ನವೇ ಸಕರ್ಾರ ಈ ಕೊಳೆಗೇರಿಗಳ ಸಮಸ್ಯೆಗೊಂದು ಸರಿಯಾದ ಪರಿಹಾರವನ್ನು ಹುಡುಕಬೇಕು. ಕೊಳೆಗೇರಿಯಲ್ಲಿರುವವರೂ ಮನುಷ್ಯರು ಎಂಬ ಅರಿವು ನಮಗಾಗಬೇಕು. ನಮ್ಮ ನಮ್ಮ ನಗರಗಳ ವೈಭವವನ್ನು ಬಣ್ಣಿಸಿಕೊಳ್ಳುವ ನಾವು ಈ ಕೊಳೆಗೇರಿಗಳತ್ತ ಕಣ್ಣು ಹಾಯಿಸದೆ ಇರುವುದು ಮಹಾ ದ್ರೋಹವಾಗುತ್ತದೆ. ಪ್ರತಿಯೊಂದು ನಗರದಲ್ಲಿಯೂ ಕೊಳೆಗೇರಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಯುತ್ತ ಹೋಗಬೇಕು. ಅನಿವಾರ್ಯವಾಗಿ ಇರಲೇಬೇಕಾದ ಕೊಳೆಗೇರಿಗಳ ಪರಿಸ್ಥಿತಿ ಸುಧಾರಿಸುತ್ತ ಹೋಗಬೇಕು. ಇಲ್ಲವಾದರೆ ಇವೇ ನಗರಗಳನ್ನು ನುಂಗುವ ಅಪಾಯ ಇದ್ದೇ ಇರುತ್ತದೆ. ಈ ಅಪಾಯ ನಮಗೆ ಅರ್ಥವಾಗದಿದ್ದರೆ ನಾವು ತೆರಬೇಕಾದ ಬೆಲೆ ಬಹಳ ದೊಡ್ಡದಾಗುತ್ತದೆ.
ಈ ಕೊಳೆಗೇರಿಗಳಲ್ಲಿ ಬೆಳಕಿಗೆ ಬಾರದ ಮಹಾನ ಕ್ರೀಡಾಪಟುಗಳಿರಬಹುದು; ಮಹಾನ್ ಸಂಗೀತಗಾರರು, ಕಲಾವಿದರು, ನಟನಟಿಯರು, ಮಹಾನ್ ಪ್ರತಿಭಾವಂತರು ಇರಬಹುದು. ಅವರನ್ನು ಮನುಷ್ಯರಾಗಿ ನೋಡುವುದು ನಮಗೆ ಸಾಧ್ಯವಾದಾಗ ಈ ಪ್ರತಿಭೆಗಳು ಅರಳಲು ಸಾಧ್ಯ. ನಮಗೆಲ್ಲ ಶಿಕ್ಷಣ ಬೇಕಾಗಿರುವಂತೆ ಇವರಿಗೂ ಉತ್ತಮ ಶಿಕ್ಷಣ ಬೇಕು; ನಮ್ಮಂತೆ ಅವರಿಗೂ ಎಲ್ಲ ಸೌಲತ್ತುಗಳೂ ಬೇಕು. ಒಂದು ರಾಷ್ಟ್ರದ ವಿಕಾಸವೆಂದರೆ ಎಲ್ಲರ ವಿಕಾಸ; ಇಡೀ ಭಾರತದ ಚೈತನ್ಯ ಅರಳಿದರೆ ಮಾತ್ರ ಈ ವಿಕಾಸ ಸಾಧ್ಯವಾಗುತ್ತದೆ. ನಗರಗಳ ಹಿರಿಮೆ ತಿಳಿಯಬೇಕಾದದ್ದೂ ಇಂಥ ಪ್ರದೇಶಗಳ ಅಭಿವೃದ್ಧಿಯ ಮೂಲಕವೇ. ಗುಜರಾತ್ ಮಾದರಿಯ ಅಭಿವೃದ್ಧಿಯೇ ಇಡೀ ಭಾರತದ ಅಭಿವೃದ್ಧಿ ಎಂದರೆ ಅದರ ಸ್ವರೂಪವೇ ಬೇರೆಯಾದೀತು.
ಸೌಜನ್ಯ : ಸಂಯುಕ್ತ ಕರ್ನಾಟಕ



0 Comments