ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಂದಿನಿ ಹೆದ್ದುರ್ಗ ಹೊಸ ಕವಿತೆ- ಅಡ್ಡಾಡಿಕೊಂಡಿರಲಿ ಬಿಡು…

ನಂದಿನಿ ಹೆದ್ದುರ್ಗ

ನಿನ್ನೆಯಿಂದಲೂ ಹೀಗೆ ಆಗುತ್ತಿದೆ.
ನೀನು ಹುಕುಮು ಹೊರಡಿಸಿದ್ದಕ್ಕೆ
ಒಂದಾದರೂ ಸಾಲು ಒಲವಿನ ಕವಿತೆ
ಬರೆಯೋಣವೆಂದುಕೊಂಡೆ.
ಸರಿಘಳಿಗೆಗೆ ನಿಬ್ಬು ಮುರಿಯಬೇಕೆ
ಇಂದು ಮುಂಜಾನೆಯೂ ಅಷ್ಟೇ
ಇವನೊಡನೆ ಜಗಳ

ಮರೂಭೂಮಿಯಲಿ ಕುಳಿತು ನದಿಯ ಧ್ಯಾನಿಸಬೇಕು.
ಹರಿವ ಲಾವಾದ ಎದಿರು ಬರ್ಫ ಹೊದಿಯಬೇಕು.
ಒಣಮರದಡಿ ನಿಂತು ಹೂ ಆಯಬೇಕು.

ನಿನ್ನ ಬೇಟಿಯಾದ ಸಮಯ ಎದೆಗೆ ಆವಾಹಿಸಿಕೊಂಡು,
ಒಂದು ಹದ ಬಿಸಿಗೆ ಹೆಂಚು ಕಾಯಿಸಿಕೊಂಡು

ಕಡುಕಂದು ಅಂಗಿ, ಅರೆನೆರೆತ ಮೀಸೆ
ಅಚ್ಚ ಬಿಳಿ ಬಣ್ಣ, ಗಂಡು ಗಾಂಭಿರ್ಯ.
ಕಂಡಕೂಡಲೇ ಎಂದೆನಿಸದಿದ್ದರೂ
ನೋಡುನೋಡುತ್ತ ರುಚಿಸಿದೆ.
ಅರೇಂಜ್ಡ್ ಮ್ಯಾರೇಜಿನ ಗಂಡನಂತೆ.

ಅಕ್ಷರಗಳು ಅದೋ ಆ ಹೂವಿನ
ಮರದಡಿ ಹೂಚೆಂಡು ಆಡುತ್ತಿವೆ.
ಖುಷಿ ನೋಡಿದರೆ ಕರೆಯಲು ಮನಸೇ ಬಾರದು.
‘ಒಂದು ಒಲವಿನ ಕವಿತೆ’ಎನುವ ತಲೆಬರಹಕ್ಕಷ್ಟೆ
ಹೊದ್ದು ಮಲಗಿದ್ದವು ಒದಗಿದ್ದು.

ಹೂವ ಎರಚಾಡಿ ಘಮಗುಡುವ
ಅಕ್ಷರಗಳ ಗದ್ದರಿಸಿ, ಮುದ್ದಿಸಿ ನಿನ್ನ
ಕುರಿತಾದ ಕವಿತೆಯೊಳಗೆ ಕೂರಿಸಬೇಕೆಂದರೆ
ಸುಮ್ಮನೇ ಅಲ್ಲ.
ಇದು ಹಿಡಿದರದು ಓಡುವುದು.
ಓಡಿದ್ದು ಕರೆವಲ್ಲಿ ಕೂತದ್ದು ಕುಪ್ಪಳಿಸುವುದು.

ಓ ನನ್ನ ಮುದ್ದುಮುದ್ದು ಗಂಡೇ.!!
ತುಟಿಯ ಜೇನಿಗೆ ಕವಿತೆ ಬರೆಯಲೇಬೇಕೇ.?
ಅಡ್ಡಾಡಿಕೊಂಡಿರಲಿ ಬಿಡು ಅಕ್ಷರ.
ಹೂಮರದಡಿ ಕದ್ದುಕೂರುವಾಡಲಿ
ಹೊಳೆದಂಡೆಯಲಿ ದಣಿದು ಬರಲಿ.
ಮರದ ತುದಿಯೇರಿ ಮೈಮರೆಯಲಿ.
ತಡರಾತ್ರಿ ಅಂಗಳದಲಿ ಅಂಗಾತ ಮಲಗಿ
ಹುಣ್ಣಿಮೆ ಹೊದ್ದು ಮುದ್ದಿಸಿಕೊಳ್ಳಲಿ.

ಬಾಗಿಲು ತಟ್ಟಿದಾಗ ಬಾ ಎಂದು ಒಳಕರೆದು
ಕಾಲು ನೀರು ಕೊಟ್ಟು, ಮುದ್ದಿಸಿ
ತಟ್ಟೆ ಹಾಕುವೆ.
ಗಟ್ಟಿಸಿ ಕರೆಯಲಾರೆ
ಕಟ್ಟಿ ಹಾಕಲಾರೆ.
ಈಗೊಮ್ಮೆ ಬೇಟಿಯಾದ ಘಳಿಗೆಗಳ
ಹೊದ್ದು
ಅರೆಗಣ್ಣಿನಲಿ ಕದಪು ಕೆಂಪಾದುದ ಕ್ಲಿಕ್ಕಿಸಿ ಕಳಿಸುವೆ.
ಸಾಲದೆ.?
ಅಕ್ಷರಗಳಲಿ ಅನುರಾಗ ಬಂಧಿಸಿ ತ್ರಾಸ ಕೊಡಲಾರೆ.
ಒಪ್ಪಿಗೆಯೇ.?

‍ಲೇಖಕರು Avadhi

4 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading