ನಂದಿನಿ ಹೆದ್ದುರ್ಗ ಕವಿತೆ- ಪದ್ಯ ಓದಿ ಮುಗಿಸಿ…

ನಂದಿನಿ ಹೆದ್ದುರ್ಗ

ಪದ್ಯ ಓದಿ ಮುಗಿಸಿ
ನಿಸ್ತೇಜ ಖುಷಿಯಂಥದ್ದೇನೊ ಘಟಿಸಿ
ಈಚೆಗಷ್ಟೆ ಬಳಕೆಗೆ ಬಂದಿದ್ದ ಚಾಳೀಸು
ತಲೆಗೇರಿಸಿ‌ ಕಣ್ಣು ಮುಚ್ಚಿ
ಕಾಲು ಚಾಚಿದೆ
ಕಾಣಲಿಕ್ಕೆ ಒರಟೊರಟು ಬೊಮ್ಮಟೆ
ಯಂತನಿಸುವವಳ ಪದಪದವೂ
ಎಂಥ ಮಧುರ
ಎಲ್ಲಾ ಸಲ್ಲಲಿತಗಳೂ
ಒಮ್ಮೆಗೆ ಹದಗೊಂಡು
ಹರಗಿಕೊಂಡಿವೆ ಇಲ್ಲಿ
ಬಿತ್ತಿದ್ದೆಲ್ಲವೂ ಮೈದುಂಬಿದ ಬೆಳೆ
ಮುಂದೆ ಎಂದಾದರೊಂದು‌ ಸಿಕ್ಕರೆ
ಹಗ್ಗಿಸಿಕೊಳ್ಳಬೇಕು ಅಕ್ಕರೆಯಲ್ಲಿ
ಅವಳ ಮೀನು ಕೊಚ್ಚಿದ ಕೈಗೆ
ಪದ್ಯ ಹೇಗೆ ಅಂಟುತ್ತವೆ ಎಂದು
ವಿಂಗಡಿಸಿ ಕೇಳಬೇಕು ಎಂದುಕೊಳ್ಳುವಾಗಲೇ

ಇವನು ಮೊನ್ನೆ ನೋಡಿದ ನಾಟಕ
ದ ಪ್ರಧಾನವಲ್ಲದ ಪಾತ್ರದ
ಅವಳನ್ನು ಅಡಿಮುಡಿ ತನಕ ಹೊಗಳಿ
ಮೆಚ್ಚುಗೆ ಸೂಚನೆಗೆ ಒಂದು ಅಪ್ಪುಗೆ
ಅಷ್ಟೇ ಅಂಥ ಅವಘಡವೇನು ಇಲ್ಲ ಹುಚ್ಚಿ
ಅಂತ ಸಂತೈಸಿದ್ದು ಎದೆಗಿಳಿದು
ಅವನ ತೋಳಿಗೊರಗಿದರೆ ಯಾವುದೊ ಅಪರಿಚಿತ ವಾಸನೆ
ಗೆ
ಒಳಗೊಂದು ಕೌರ್ಯ ಹೆಡೆಯಾಡಿ
ಮುಂದಿನ ಮೂರು ಮೂರು ವಾರ
ಈ ಲೋಕದ್ದೆಲ್ಲ ಬಣಬಣ
ಮೌನವೋ ಕ್ರೋಧವೋ
ಅಂತರ್ಯುದ್ಧ.
ಮೊನ್ನೆ ನನ್ನೊಂದಿಗೇ ಕುಳಿತು ಯಾವುದೋ
ನಾಟಕ ನೋಡಿ ಅದರ ನಾಯಕಿಯ
ಹೆಸರಿಗಾಗಿ
ಎಬರಾಡಿದ್ದು ಅವಳದೊಂದು ಸದ್ದು
ಕಿವಿಗೆ ಬಿದ್ದರೆ ಪಾವನವೆಂಬಂತೆ ಕಳವಳಿಸಿದ್ದು
ಸಿಕ್ಕರೆ ತಬ್ಬಿಯೇಬಿಡುತ್ತಾನೇನೊ ನೆಪವೊಡ್ಡಿ
ಎಂಬುದೆಲ್ಲ ನೆನಪಾಗಿ
ಹಗ್ಗಿಸಿಕೊಳ್ಳುವುದು ಅಂದರೆ ಸಲೀಸಲ್ಲ ಎನಿಸಿತ್ತು

ಮೊನ್ನೆ ದೂರದ ಊರಿಗೆ ಕವಿತೆ ಓದಲಿಕ್ಕೆಂದು
ಹೋದ ಗೆಳತಿ ಮೂರು ದಿನ
ಮನಸ್ಸು ಕಳೆದುಕೊಂಡಿದ್ದಳು
ಏನಾಯಿತೇ ಎಂದರೆ ಸಿಡಿಸಿಡುಕು
ಆರನೇ ದಿನಕ್ಕೆ ಅವಳೇ ಹೇಳಿದಳು
ಅಲ್ಲಿನ ನಡುವಯದ ವಿಮರ್ಶಕನೊಬ್ಬ
ಇವಳೋದು ಮೆಚ್ಚಿ ಕೋಣೆವರೆಗೂ ಬಂದು
ಊರಿನ ವಿಶೇಷ ತಿನಿಸು ಇಟ್ಟು
ಕಣ್ಣಿಗೆ ಕಣ್ಣು ನೆಟ್ಟು ಹಗ್ಗಿಸಿಕೊಂಡನಂತೆ
ಮೆಲ್ಲಗೆ ಲವ್ ಯು ಮಾ ಎಂದನಂತೆ
ಅದರಲ್ಲೇನಿದೆ ಮಾಮೂಲಿ ಎಂದರೆ
ಹಾಳು ಬೇನೆ ಒಕ್ಕರಿಸಿದೆ ಕಣೇ
ತೊಳೆದರೂ ಹೋಗದ ನವಿರು ವಾಸನೆ
ತೋಳ ತುಂಬಕೂ ಅವನೆಂದರೆ ಬರೀ ಅವನೆ
ಹೀಗೊಂದು ತಬ್ಬುಗೆಯ ಕಂಡೇ ಇರಲಿಲ್ಲ
ಈ ತನಕ ಈ ಐನಾತಿ ಜೀವ
ಎಂದಿದ್ದು ಕಂಡು ಬೆಚ್ಚಿದ್ದೆ

ಮಾರಿದೇವರಿಗೆ
ಎರಡು ಮೊಗ್ಗಿನ ದಾಸಾವಾಳ
ಪಚ್ಚಕರ್ಪೂರ ಹಾಕಿದ ಶೀಕರಣೆ
ತುಪ್ಪದಾರತಿಯ ಲಂಚ ಒಡ್ಡಿ
ಇವನು ಹಗ್ಗಿಸಿಕೊಂಡ ವಾಸನೆ
ಹೇಳಹೆಸರಿಲ್ಲದಂತೆ ತೊಳೆದುಹೋಗಲಿ
ಹರಿದು ವೃಷಾಭವತಿ ಸೇರಿ ಮತಿಹೀನವಾಗಲಿ
ಎಂದೇನೋ ಖಬರಿಲ್ಲದಂತೆ ಬೇಡಿ
ಎಫ್ಬಿಯಲ್ಲಿ ಬೆಳಗಾಗೆದ್ದು ನೋಡಿದರೆ
ಈ ಊರಿನ ಕವಿಯೂ
ಆ ಊರಿನ ವಿಮರ್ಶಕನೂ
ಊರು ಬಿಟ್ಟಿದ್ದರು

ಇವನ ಫ್ರೆಂಡಲಿಸ್ಟಿನಲ್ಲಿ
ಪ್ರಧಾನವಲ್ಲದ ಆ ಪ್ರಧಾನ ಪಾತ್ರದ
ಅವಳು ಹೊಸದಾಗಿ ಕೂಡಿಕೆಯಾಗಿದ್ದಳು.

‍ಲೇಖಕರು avadhi

April 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: