ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಂದಿನಿ ಹೆದ್ದುರ್ಗ ಕವಿತೆ – ನಮ್ಮ ಭೆಟ್ಟಿಯ ದಿನ…

ನಂದಿನಿ ಹೆದ್ದುರ್ಗ

ನಮ್ಮ ಭೆಟ್ಟಿಯ ದಿನ ನಿಕ್ಕಿ
ಮಾಡು ಬೇಗ

ಮಳೆ ಸುರಿವ ಈ ರಾತ್ರಿ
ಹಕ್ಕಿ ಮಲಗಿರಬಹುದು
ಬಳಲಿರಬಹುದು ಹೂಬಿಟ್ಟ ಮರ
ಮುಂದುವರೆದಿರಬಹುದು
ನೆಲದ ಹುಳುಗಳ ಕೊಸರು

ಕಣ್ಣ ಕೊನೆಯಿಂದ
ನೆನಪ ಹನಿಯೊಂದು
ಬೆಚ್ಚಗೆ ಜಾರಿ
ಹಾದಿ ಬದಲಿಸುತ್ತಿದೆ

ನೀನಲ್ಲಿ ಹೇಗಿದ್ದೀಯಾ?
ಊಟಕ್ಕೆ ಏನಿತ್ತು ಈ ರಾತ್ರಿ?
ಯಾವ ಉದ್ಗ್ರಂಥ ಓದುತ್ತಿದ್ದೀ ಈಗ?
ಛೆ..ಸದ್ದು ಮಾಡದೆ ತಿನ್ನು ಮಾರಾಯ
ಪಡೆದ
ಹಸಿ ಮುತ್ತು ಆರಿಲ್ಲವಾ?
ಹಣೆಯ ಕಲೆಗೆ ಮದ್ದು ಮಾಡಬೇಡ
ಧಮ್ಮಯ್ಯ
ಈ ಸಂಜೆಯೂ ಅವಳೊಂದಿಗೇನಾ?

ಎಷ್ಟೊಂದು ಕಾರಣಗಳಿವೆ
ನಿನ್ನ ಪ್ರೀತಿಸಲು ನನಗೆ

ಮತ್ತದೆ
ಪಟಾಪಟಿ ಲುಂಗಿ ಬಿಗಿದು
ಬೆಳೆದ ಬಿಳಿಗಡ್ಡ‌ ನೀವಿ
ಕಣ್ಣಪಾಪೆಯೊಳಗೂ
ನಿನ್ನ ಮುದುಕುತನ ತೋರಿ…
ತೋ..
ಕನ್ನಡಿ ಸವೆಯುವುದಿಲ್ಲವೋ
ಇನ್ನಷ್ಟು ಹೊತ್ತು ನನ್ನನ್ನೇ ನೋಡು

ಮೋಡಗಟ್ಟಿದ ರಾತ್ರಿಗಳಲ್ಲಿ
ನೆಲದ ಮೋಹಕ್ಕೆ ಬಿದ್ದು
ನುಗ್ಗಿ ಬರುವ ಹಠದ ಧೂಳಿನ
ನೆನಪು
ಬೆಳಕ ಕಾಲಹಾದಿಯೂ
ಹೀಗೆ
ಕಾಣೆಯಾಯಿತೋ ಜಾಣ
ಇದು ಹೀಗೆ ಯಾಕೆ ನೋವು!?
ಬಿದ್ದ ಎಳೆಯ ಎಲೆಯೊಂದು ಬಿಕ್ಕದೆ
ಬೇರ ಬಳಿಸಾರಿದೆ

ಇಲ್ಲಿ ಯಾರು ಉಪಮೆ?ಯಾವುದಕ್ಕೆ?

ಎಲ್ಲಿಂದಲಾದರೂ ಓದು
ಅಸ್ತವ್ಯಸ್ತದ ಕವಿತೆ ಇದು
ಗೊತ್ತಿದೆ..
ನೀನು
ಉದ್ದಾಮ ಪಂಡಿತನೇ
ವ್ಯಾಕರಣ ದೋಷ ಎತ್ತಿ
ಹಾಡುವೆಯಾ,ಹಾಡು
ನಾನು ಹತ್ತು ಫೇಲು

ಹಸಿದು ಬರುವ ಎಲ್ಲ
ದುಂಬಿಗಳೂ
ಆ ಹೂವಿಗೆ ಪತ್ರ ಮಾತ್ರ
ಬರೆಯುತ್ತಿವೆ ಹುಡುಗ
ಹತ್ತಿರ ಬರಲಾರವು,ಭಯವಂತೆ
ಝಗಮಗಿಸಬಾರದು ಹೀಗೆ
ಬೆಂಕಿಯ ಹಾಗೆ
ಎನ್ನಬೇಡ ಮತ್ತೆಮತ್ತೆ
ನಾನು ಹುಡುಗನೆನ್ನುವ
ನನ್ನ ಮುದುಕನೇ
ಒಮ್ಮೆ ಹಾರಿ ನೋಡು
ಈ ಅಗ್ನಿಕುಂಡಕ್ಕೆ
ಕೆಂಡ ಹೀರಿ ಅರಳಿರುವ
ಹೂವು ನಾನು
ಚಿರಯೌವ್ವನೆ

ಏನಾಗುತ್ತಿದೆ ನಿನ್ನಲ್ಲಿ ಈಗ?
ದಿನಚರಿ ಜಾಸ್ತಿಯಾ?
ಮಳೆಗಾಲ ಮುಗಿಯಿತಾ?
ನಮ್ಮ ಭೆಟ್ಟಿಯ ದಿನ ನಿಕ್ಕಿ ಮಾಡು ಬೇಗ.
..
ನೀ

‍ಲೇಖಕರು Admin

21 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading