ನಂದಿನಿ ಹೆದ್ದುರ್ಗ
ಗೊತ್ತಿರಲಿಲ್ಲ ನಮಗೆ
ಹೀಗಾಗಬಹುದೆಂದು
ಈಗಷ್ಟೇ ಮೊಳಕೆಯೊಡೆದು
ಬೆಳಕು ನೋಡಿದ
ಒಂದು ಮಹಾವೃಕ್ಷದ
ಆರ್ದ್ರ ಅಹಂಕಾರದಂತೆ
ನಮ್ಮ ವಿಧಿಯ ಬಟ್ಟಲಿನ
ಜೇನು ಪಾನಕದ
ಅಡಿಯಲ್ಲಿತ್ತು
ಆ ದಿನ.
ಕಡಲು ತನ್ನ ತಡಿಯ ಉದ್ದಕ್ಕೂ
ಪಹರೆ ಕಣ್ಣುಗಳ
ಹೊಂದಿಸಿ
ಮುಳುಗಿಸುವ ಹುನ್ನಾರದಲ್ಲಿದ್ದಾಗ
ನಾವು ಹೂವು ಮತ್ತು ಗಾಳಿಯ
ಸಂಬಂಧದಲ್ಲಿದ್ದೆವು

ಇರುಳು ಪರಿಮಳದ ಹರವು
ಮೀರಿ ಬೀಸಿದರೆ
ಮೆದುಪಕಳೆಗಳ ಮೇಲೆ
ಗೀರುಗೆರೆಗಳೆದ್ದು
ಅವಧಿಗೂ ಮುನ್ನವೇ ತೊಟ್ಟು ಕಳಚಿ
ಮರಳುವ ಹೊರಳುವ
ಎಲ್ಲ ತೊರೆಯುವ
ಸಂಗತಿಗಳ ಕುರಿತು
ಕಂಬನಿ ಮತ್ತು ಹದವಾದ
ವಿರಹದೊಂದಿಗೆ
ಚರ್ಚಿಸಿದ್ದೆವು
ಆತಂಕಿತನಾಗಿ ನನ್ನ ಕ್ಷಮಿಸು
ನನ್ನ ಕ್ಷಮಿಸು
ಎನ್ನುವ ನಿನ್ನ ಜೀವ
ಬಾಡದಂತೆ ಒಂದೇ ಒಂದು
ನೆಂದನೋಟ ತೂರಿದ್ದ
ನೆನಪು ನನಗೆ
ಗೊತ್ತಿರಲಿಲ್ಲ ನಮಗೆ
ಹೀಗಾಗಬಹುದೆಂದು
ನನ್ನ ಅಗ್ನಿಪರ್ವತ ಸಿಡಿದರೆ
ಕಿಚ್ಚು ಅಸೂಯೆ ಅನುಮಾನಗಳ
ಬೆಳೆ ಹುಲುಸೆದ್ದರೆ
ಕೊರಳು ಹುರಿಗೊಳಿಸಿ
ರಣವೀಳ್ಯೆ ನೀಡಿದರೆ
ನಿನದು
ಜೀವಕಾರುಣ್ಯದ ಪ್ರಣಯ
ನೆರೆನುಗ್ಗುವ ಒಲುಮೆ
ಇಲ್ಲದ ಕೊರತೆಗಳ ಸುಳ್ಳೇ
ಸೃಷ್ಟಿಸಿ ಸುಖಾಸುಮ್ಮನೆ
ಕೊರಗಿದರೆ
ಸಣ್ಣದಾಗುತ್ತದೆ ನಿನ್ನ
ಜೀವ, ಚುಳ್ಳೆನ್ನುತ್ತದೆ ಹೃದಯ
ಈ ರಾತ್ರಿ ಮುಗಿಯುತ್ತಲೂ
ಕಾಯುತ್ತೇನೆ ಹೊಸದಾಗೆ ಕಾದಲು
ನಾ ನಿನ್ನ ಕಾದಲೆ
ನಿನ್ನ ಕಡುದಟ್ಟ ಹುಬ್ಬುಗಳ
ನಡುವೆ ನನ್ನ ಮೋಹದ ಚಿಟ್ಟೆ
ಇಟ್ಟ ಮೊಟ್ಟೆಯೊಡೆದು
ಮುಳುಮುಳುಮುಳು ಹುಳು
ಸಹನೆ ಮೀರಿ ಹುಳುವೆತ್ತಿ ಉರಿವ
ನೀರೊಲೆಗೆ ತೂರಬೇಕೆಂದು
ಮುಷ್ಟಿಯಲ್ಲಿ ನೀ
ಹಿಡಿದಾಗಲೆಲ್ಲ ನೀಲಿರೆಕ್ಕೆಯ
ಚಿಟ್ಟೆ
ಅದೋ..ಮುಂಗೈಗೆ
ಮುತ್ತಿಡುತ್ತದೆ.
‘ನನ್ನ ಚಿಟ್ಟೆ.. ನನ್ನ ಚಿಟ್ಟೆ’
ಎಂದು ಹಂಬಲಿಸುವ ಆ ನಿನ್ನ ಧ್ವನಿ
ಈ ಲೋಕದ್ದಲ್ಲ…ತಿಳಿದಿದೆ
ಗೊತ್ತಿರಲಿಲ್ಲ ನಮಗೆ
ಹೀಗಾಗುತ್ತದೆ
ಎಂದು
ನಿನಗಾಗಿಯೇ ಹಾಡು ಕಲಿಯುತ್ತಿದೆ
ಹಕ್ಕಿ
ನಾನುಡುವುದೂ ತಿಳಿಗುಲಾಬಿ ಉಡುಗೆ
ಮೊದಲು ಭೆಟ್ಟಿಯ ಊರು
ಪುಣ್ಯಕ್ಷೇತ್ರ
ಹಾದಿಯುದ್ದಕ್ಕೂ ಬೆಳೆದ ಹೂಮರ
ಪಾರಿಜಾತ
ಕೂಡುವ ಎಡೆ ಕರಾರು ಮುರಿದ ಕಣಿವೆ
ಮಾತಾದಾಗಲೆಲ್ಲ ಸುತ್ತೂ
ನದೀ ಮುಖಜ ಭೂಮಿ
ಅದೃಶ್ಯ ಜೀವಗಳು ನಾವು
ಹೊತ್ತೇ ತಿರುಗುತ್ತೇವೆ
ಈ ಹಾದಿ ಮುಗಿಯುವವರೆಗೂ
ಪರಸ್ಪರರ ಹೆಗಲಿನಲ್ಲಿ
ಮೆದುಳಿನಲ್ಲಿ ಹೃದಯದಲ್ಲಿ
ಆತ್ಮದಲ್ಲಿ
ಗೊತ್ತಿರಲಿಲ್ಲ ನಮಗೆ
ಹೀಗಾಗಬಹುದೆಂದು






0 Comments