ಜಿ ಪಿ ಕುಸುಮಾ ಓದಿದ ‘ಲಂಡನ್ ಟು ವ್ಯಾಟಿಕನ್ ಸಿಟಿ’

ಓದುಗರೆದೆಯಲ್ಲಿ ನವಿರಾಗಿ ಪ್ರವಾಸ ಪ್ರೀತಿಯನ್ನು ಮುದ್ರಿಸುವ ಕೃತಿ ‘ಲಂಡನ್ ಟು ವ್ಯಾಟಿಕನ್ ಸಿಟಿ’  

ಡಾ ಜಿ ಪಿ ಕುಸುಮಾ

ಪ್ರವಾಸ ಅಂದಾಕ್ಷಣ ಹುಚ್ಚೆದ್ದು ಕುಣಿಯದ ಮನಸ್ಸುಗಳಿಲ್ಲ ಅಲ್ಲವೇ ? ಪ್ರವಾಸ ಪ್ರೇಮ ಎಲ್ಲಾ ದೇಶಗಳ ಜನರಲ್ಲೂ ಇದೆ.  ಅದೊಂದು ಆರೋಗ್ಯಕರ ವ್ಯಸನ ಇದ್ದ ಹಾಗೆ.  ಪ್ರವಾಸಕ್ಕೆ ಹೋಗಿ ಖುಷಿ ಪಟ್ಟು ಅಲ್ಲಿ ತಮಗಾದ ಅನುಭವಗಳನ್ನು  ಹಂಚಿಕೊಳ್ಳುವಂತಹ ಈ ಪ್ರವಾಸ ಕಥನ  ಪ್ರಕಾರವು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಒಂದಾಗಿದೆ.  ಇದು ವ್ಯಕ್ತಿಯ ಪ್ರಯಾಣದ ಅನುಭವಗಳ  ಸತ್ಯವಾದ ಖಾತೆಯಾಗಿದೆ.   ಪ್ರವಾಸ ಕಥನ ಇನ್ನೊಬ್ಬರನ್ನು ಆ ಊರು ನೋಡಲು ಪ್ರೆರೇಪಿಸುವಂತಿರಬೇಕು ಅಂತ ಹೇಳುತ್ತಾರೆ.  

ಈ ನಿಟ್ಟಿನಲ್ಲಿ ಕವಿ, ಲೇಖಕ ಗೋಪಾಲ ತ್ರಾಸಿಯವರ  ‘ಲಂಡನ್ ಟು ವ್ಯಾಟಿಕನ್ ಸಿಟಿ’ ಎಂಟು ದೇಶ – ನೂರೆಂಟು ವಿಶೇಷ ಎನ್ನುವ  ಪ್ರವಾಸ ಕಥನ ಪ್ರತಿಯೊಬ್ಬರೂ ಸಹ ಓದಲೇ ಬೇಕಾದಂತಹ ಕೃತಿ. ನನಗಂತೂ ಯೂರೋಪನ್ನು ಸುತ್ತಿ ಬಂದ ಅನುಭವವಾಗಿದೆ.   ಪ್ರವಾಸವನ್ನು ಅತಿಯಾಗಿ ಇಷ್ಟ ಪಡುವ  ಲೇಖಕ ಗೋಪಾಲ ತ್ರಾಸಿಯವರು ಹದಿಮೂರು ದಿನಗಳಲ್ಲಿ  ಯೂರೋಪಿನ ಎಂಟು ದೇಶಗಳಾದ ಲಂಡನ್, ಹಾಲೆಂಡ್, ಬೆಲ್ಜಿಯಂ, ಪ್ಯಾರಿಸ್, ಜರ್ಮನಿ, ಸ್ವಿಝರ್ ಲ್ಯಾಂಡ್, ಇಟಲಿ ಮತ್ತು ವ್ಯಾಟಿಕನ್ ಸಿಟಿ  ಸುತ್ತಿ  ಬಂದ ತಮ್ಮ ಅನುಭವಗಳನ್ನು ಪ್ರಾಮಾಣಿಕವಾಗಿ ಈ ಕೃತಿಯಲ್ಲಿ ನಿರೂಪಿಸಿದ್ದಾರೆ. 

ಸ್ವಭಾವತ: ಹಾಸ್ಯಪ್ರಿಯರಾದ ತ್ರಾಸಿಯವರ ಇಲ್ಲಿನ ಬರಹಗಳಲ್ಲಿ ಹಾಸ್ಯದ ಝಲಕನ್ನು ಅಲ್ಲಲ್ಲಿ ಕಾಣಬಹುದು. ಪ್ರತಿ ದೇಶವನ್ನು ಕಂಡಾಗ ಅವರಿಗೆ ತಮ್ಮ ದೇಶವು ಕಣ್ಣೆದುರಿಗೆ ಕುಣಿಯುತ್ತದೆ.  ಅವರ ಬುದ್ಧಿ ತನಗರಿವಿಲ್ಲದೆ ಎರಡನ್ನೂ ತೂಗಿ ನೋಡುತ್ತದೆ.  ಅಲ್ಲಿನ ಬೆಳಗು, ನೈಸರ್ಗಿಕ ಸೌಂದರ್ಯ, ಆ ಪ್ರಶಾಂತತೆ ಎಲ್ಲವೂ ಇವರ ಕವಿ ಮನಸ್ಸು ತಾಯ್ನೆಲದ ಕವಿ ಕಾವ್ಯಗಳನ್ನು ನೆನೆಯುತ್ತದೆ.  ಪ್ರವಾಸದುದ್ದಕ್ಕೂ ಅಲ್ಲಲ್ಲಿ ನಡೆಯುವ ಮೋಜಿನ ಸಂಗತಿಗಳನ್ನು ದಾಖಲಿಸುತ್ತದೆ.  ಆಯಾ ಸ್ಥಳಗಳ ಭೇಟಿಯ  ನೆನಪಿಗಾಗಿ ಮನಮೆಚ್ಚಿದ ವಸ್ತುಗಳನ್ನು ಖರೀದಿಸಿಯೂ,ಈ ಪ್ರವಾಸವನ್ನು ತಾವು ಸವಿದ ಮಾತಲ್ಲಿ ಕಟ್ಟಿಕೊಟ್ಟು ಪ್ರವಾಸ ಕಥನ ಪರಂಪರೆಯನ್ನು ಉಳಿಸುವಲ್ಲಿ ಶೃಮಿಸಿರುವ ಲೇಖಕ ತ್ರಾಸಿಯವರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು.

ಹಿರಿಯ ಕವಿ ಸಾಹಿತಿ ಬಿ.ಎ. ಸನದಿಯವರು ಮುಂಬೈಯಿಂದ ಮಲೇಶಿಯಾಕ್ಕೆ ಎಂಬ ಪತ್ರದಲ್ಲಿ ಅವರು ಹೀಗೆ ಬರೆಯುತ್ತಾರೆ;

“ಪ್ರಿಯ ಮಧುವಂತೀ 

ಸಂಚಾರಕ್ಕೆ ಹೊರಟ ಮೇಲೆ ಕೊಂಚ ಜ್ಞಾನದೊಡನೆ ಕೊಂಚ ಮನೋರಂಜನೆಯನ್ನೂ ಅನುಭವಿಸಿ ಬರುವುದು ನನಗಿಷ್ಟವಾದ ಪ್ರೀತಿ. ಕ್ರಿಯಾ, ಜ್ಞಾನ, ಮನೋರಂಜನೆಗಳ ಮಧುರ ಮಿಲನವಾಗುವುದಿದ್ದರೆ ಆ ಸಂಚಾರಕ್ಕೊಂದು ಅರ್ಥ- ಒಂದು ಸಾರ್ಥಕತೆ.  ಹೊರಗಿನ ಹೊಟೇಲುಗಳಲ್ಲಿ ನಿಂತು, ತಿಂದುಂಡು ಮೋಜು ಮಾಡಿ ಬರುವುದಕ್ಕೆ ಸಂಚಾರವೆನ್ನಲಾದೀತೇ ?“ ಎಂದು ಸನದಿಯವರು ಕೇಳುತ್ತಾರೆ.

ಇಲ್ಲಿ ತ್ರಾಸಿಯವರೂ ಸಹ ಹೀಗೇ.  ಅವರ ಪ್ರವಾಸದಲ್ಲಿ  ಜ್ಞಾನ  ಮನೋರಂಜನೆಗಳು ಮಧುರ ಮಿಲನವಾದ ಪರಿಯನ್ನು ಈ ಕೃತಿಯಲ್ಲಿ ಅನಾವರಣಗೊಳಿಸುತ್ತಾರೆ. ಅವರು ಬರೇ ಸುತ್ತಾಡಿದ್ದಲ್ಲ. ಪ್ರತಿಯೊಂದು ಕಡೆಗೆ ಹೋದಾಗಲೂ ಮನಸ್ಸಿಗೆ ಕೆಲಸ ಕೊಡುತ್ತಿದ್ದರು.  ಅನಿಸಿದ್ದನ್ನು ದಾಖಲಿಸಿದರು. ಇಂತಹ ಒಂದು ಮಹತ್ವದ ಕೃತಿಯನ್ನು ಕೊಟ್ಟರು.  ಈ ಕೃತಿಯಲ್ಲಿ ನೂರೆಂಟು ವಿಶೇಷಗಳಲ್ಲ ಸಹಸ್ರ ವಿಶೇಷತೆಗಳಿವೆ.  

ಪ್ರವಾಸದ ಹೆಜ್ಜೆ ಗುರುತುಗಳನ್ನು ಲೇಖಕರು ಹನ್ನೆರಡು ಲೇಖನಗಳಲ್ಲಿ ಹಂಚಿಕೊಂಡಿದ್ದಾರೆ.  ವಿಶೇಷವೆಂದರೆ ಲೇಖನದ ಒಂದೊಂದು ಶಿರೋನಾಮೆಯೂ ಆಕರ್ಷಕವಾಗಿರುವುದು. ಶಿಸ್ತಿನ ಸಿಪಾಯಿ ಲಂಡನ್, ಸುಖ ಸಮೃದ್ಧ ದೇಶ ಹಾಲೆಂಡ್, ಫ್ಯಾಷನ್ ಪಟ್ಟಣ ಪ್ಯಾರಿಸ್, ಭೂಲೋಕದ ಸ್ವರ್ಗ ಸ್ವಿಝರ್ ಲ್ಯಾಂಡ್, ಇಟಲಿ ಎಂಬ ಕಲಾತ್ಮಕ ದೇಶ… ಹೀಗೆ ಶಿರೋನಾಮೆಗಳು  ಕಣ್ಸೆಳೆಯುವುದಲ್ಲದೆ ಆಯಾ ದೇಶಗಳ ಒಳಗಣ ವೈಶಿಷ್ಟತೆಯನ್ನು ದರ್ಶಿಸುವಂತಿವೆ.

ಒಂದು ಇತಿಹಾಸ ಪ್ರಸಿದ್ಧ ಸ್ಥಳಕ್ಕೆ ಪ್ರವಾಸ ಹೋಗುವಾಗ ಆ ನಾಡಿನ ಬಗ್ಗೆ ಏನೂ ತಿಳಿಯದೆ ಸುತ್ತಾಡಿ ಬರುವುದು ಎಂದರೆ ಬಹಳ ನಷ್ಟವೇ ಸರಿ, ಮತ್ತು ಪ್ರವಾಸ ಕಥನ ಬರೆಯುವಾಗ ಅದರಲ್ಲಿ ಕೇವಲ ತಮ್ಮ ತಿರುಗಾಟದ ನೇರ ವರದಿಗಳನ್ನು ನೀಡುತ್ತಾ ಹೋದರೆ ಅದು ಬಹಳ ಬೋರ್ ಹೊಡೆಸಿ ಬಿಡುತ್ತದೆ. ಆದರೆ ಇಲ್ಲಿ ಹಾಗಾಗದಂತೆ ಲೇಖಕರು ಬಹಳ ಎಚ್ಚರಿಕೆ ವಹಿಸಿದ್ದಾರೆ. ತಮ್ಮ ಹಸಿ ಹಸಿ ಅನುಭವಗಳನ್ನು ಇಲ್ಲಿ ಕಲಾತ್ಮಕವಾಗಿ ಓದುಗರಿಗೆ ನೀಡುತ್ತಾ ಅವರೊಂದಿಗೆ ನಾವೂ ಕೂಡ ಪ್ರವಾಸದಲ್ಲಿರುವಂತೆ ನೋಡಿಕೊಂಡಿದ್ದಾರೆ.  ಇದು ಗೋಪಾಲ್ ಅವರ ಬರವಣಿಗೆಯ ಚಮತ್ಕಾರ ಅಂತ ಹೇಳಬೇಕು.

ಕೃತಿಯುದ್ದಕ್ಕೂ ಲೇಖಕರ ಲೇಖನಿಯ ಲವಲವಿಕೆಯನ್ನು  ನಾವು ಗುರುತಿಸಬಹುದು, ಮತ್ತು ಅವರು ಸಂವೇದನಶೀಲ ಕವಿಯೂ ಆಗಿರುವುದರಿಂದ ಇಲ್ಲಿನ ಭಾಷೆ ಕಾವ್ಯಾತ್ಮಕವಾಗಿದ್ದು ಮುದ ನೀಡುತ್ತದೆ. ಅರ್ಧ ಪುಟದಲ್ಲಿ ಬರೆಯಬಹುದಾದುದನ್ನು ಕೆಲವೇ ಸಾಲುಗಳಲ್ಲಿ ಅವರು ಹಿಡಿದಿಡುತ್ತಾರೆ. ಇದು ಲೇಖಕರ ಹೆಚ್ಚುಗಾರಿಕೆ ಅಂತಲೇ ಹೇಳಬೇಕು. ಆ ಭಾಷಾ ಪ್ರಭುತ್ವ ಮೆಚ್ಚುವಂತಹದ್ದು. ವಿಷಯದಲ್ಲಿ ಘನತೆ, ಗಾಂಭಿರ್ಯ, ಅರ್ಥವಂತಿಕೆ, ಸೂಕ್ಷ್ಮತೆ ಸಮ್ಮಿಶ್ರಣಗೊಂಡು ಬರಹ ಸಹಜವಾಗಿ ಹೂವರಳಿ ಕಂಗೊಳಿಸುವಂತಿದೆ. ದೃಷ್ಟಿಯ ವೃಷ್ಟಿಯಲ್ಲಿ ಸೃಷ್ಟಿಸುವ ಸ್ಪಷ್ಟ ಉದಾತ್ತತೆ ಈ ಬರಹಗಳಲ್ಲಿದೆ. ಆದುದರಿಂದ ಅದು ಓದುಗರೆದೆಯಲ್ಲಿ ನವಿರಾಗಿ ಪ್ರವಾಸ ಪ್ರೀತಿಯನ್ನು ಮುದ್ರಿಸುತ್ತದೆ.  

ಇಲ್ಲಿ ಇನ್ನೊಂದು ವಿಶೇಷತೆ ಎಂದರೆ ಅವರು ಪ್ರವಾಸದ ಅನುಭವಗಳನ್ನು ಗ್ರೌಂಡ್ ಲೆವೆಲ್ ನಿಂದ ಕೊಡುತ್ತಾ ಹೋಗುತ್ತಾರೆ.  ವಿದೇಶ ಪ್ರವಾಸ ಬಗ್ಗೆ, ವಿಮಾನ ಪ್ರಯಾಣದ ಬಗ್ಗೆ ತಮ್ಮ ತಯಾರಿಗಳು, ಯಾವ ಯಾವ ವಸ್ತುಗಳನ್ನು ಅಗತ್ಯ ತೆಗೆದುಕೊಂಡು ಹೋಗಬೇಕು ಎಂಬ ವಿವರಗಳನ್ನು ಆಪ್ತವಾಗಿ ವಿವರಿಸುತ್ತಾರೆ. ಕೆಲವು ವೈಯಕ್ತಿಕ ಚಡಪಡಿಕೆಗಳು, ಅನಿರೀಕ್ಷಿತ ಸಮಸ್ಯೆಗಳು, ಅನಿರೀಕ್ಷಿತ ಖುಷಿ, ಆಯಾ ಸಂದರ್ಭಗಳಲ್ಲಿನ ಮೋಜಿನ ಸಂಗತಿ, ಭೇಟಿಕೊಟ್ಟ ಪ್ರದೇಶಗಳ ಮತ್ತು ಸ್ಥಳಗಳ ಮಹತ್ವದ ಮಾಹಿತಿಗಳನ್ನು ನೀಡುತ್ತಾ ಹೋಗುವುದರಿಂದ ಬಹಳ ಕುತೂಹಲಕಾರಿಯಾಗಿ ಆಸಕ್ತಿಯಿಂದ ಈ ಕೃತಿ ಓದಿಸಿಕೊಂಡು ಹೋಗುತ್ತದೆ.

ಶಿಸ್ತಿನ ಸಾಮ್ರಾಜ್ಯ ಲಂಡನ್ ನೆಲದಲ್ಲಿ ಕಾಲಿರಿಸಿದಾಗ ಈ ಲೇಖಕರ ಕಣ್ಗಳಿಗೆ ಆ ದೇಶದವರು ಹೇಗೆ ಕಾಣುತ್ತಾರೆಂದರೆ ; 

“ಜಗತ್ತಿನಲ್ಲೇ ಇಷ್ಟು ಶ್ರೀಮಂತ ದೇಶ ಆಧುನಿಕತೆಯ ಹೆಸರಲ್ಲಿ ಪ್ರಗತಿಯ ನೆಪದಲ್ಲಿ ತಮ್ಮ ಸುತ್ತಮುತ್ತಲಿನ ಪ್ರಕೃತಿಯನ್ನು ವಂಚಿಸುವುದನ್ನು ಸುತರಾಂ ಮಾಡದವರು. ಇಡೀ ವ್ಯವಸ್ಥೆ ಹಸಿರು, ಗಾಳಿ, ಬೆಳಕು ಮತ್ತು ಮಣ್ಣನ್ನು ಸಹ ಕಾಳಜಿಯಿಂದ ಸಲುಹುವಂತೆ ಕಂಡರೆ ಅತಿಶಯೋಕ್ತಿಯಲ್ಲ ಅನಿಸಿತು.”  ಅಂತ ಹೇಳುತ್ತಾರೆ.  ಓದುತ್ತ ಹೋಗುವಾಗ ಆ ದೃಶ್ಯ ಹೇಗಿರಬಹುದೆಂದು ನಾವು ವಿಜುವಲೈಸ್ ಮಾಡಬಹುದಾಗಿದೆ. 

‘ಲಂಡನ್ ಆಯ್’ ಬಗ್ಗೆ ಬರೆಯುವಾಗ ಅದರ  ಸಮಗ್ರ ಮಾಹಿತಿ ನೀಡುತ್ತಾರೆ.  ಇದನ್ನು ಮಿಲೇನಿಯಂ ವೀಲ್ ಅಂತಲೂ ಕರೆಯುತ್ತಾರಂತೆ. ಈ ಪರ್ವತ ಗಾತ್ರದ ತೂಗು ತೊಟ್ಟಿಲು ನಿಗದಿ ಪಡಿಸಿದ ದಿನದಂದೇ ಕರಾರುವಾಕ್ಕಾಗಿ 31.12.1999 ರ ಮಧ್ಯರಾತ್ರಿ ಅಂದರೆ 2000 ಇಸವಿಯ ಪ್ರಾರಂಭದಂದು ಸಾರ್ವಜನಿಕರಿಗೆ ತೆರವುಗೊಳಿಸಲಾಯಿತು. ಇದೊಂದು ಐತಿಹಾಸಿಕ ಘಟನೆ ಅಂತ ಬರೆಯುತ್ತ ಅದಕ್ಕೆ ಆಗ ತಗಲಿದ ವೆಚ್ಚ, ಸಮಯ, ಇನ್ನಿತರ ಅತ್ಯಗತ್ಯ ಮಾಹಿತಿಗಳನ್ನು ನೀಡುತ್ತಾರೆ. ಇವೆಲ್ಲವನ್ನು ಓದುವಾಗ ಲೇಖಕರ ದೃಷ್ಟಿಕೋನದ  ಬಗ್ಗೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಅವರ ಶ್ರಮವೂ ಎದ್ದು ಕಾಣುತ್ತದೆ.

ಇನ್ನು ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್. ಇದು ‘ಐತಿಹಾಸಿಕವಾಗಿ ಬ್ರಿಟಿಷ್ ಪರಂಪರೆಯ ಗೌರವ ಮುಕುಟ. ಬ್ರಿಟಿಷ್ ರಾಜ ಮನೆತನದ ಕೇಂದ್ರ ಈ ಅರಮನೆ’ ಅಂತ ಹೇಳಿಕೊಂಡು ಬಹಳ ಸುಂದರವಾಗಿ ಸುತ್ತಮುತ್ತಲಿನ  ವಿವರಣೆ ನೀಡುತ್ತಾರೆ. ಲಂಡನ್ ಬ್ರಿಡ್ಜ್ ಬಗ್ಗೆ ಅವರ ಅಭಿಪ್ರಾಯ, “ಈ ದೈತ್ಯಾಕಾರದ ಆಕರ್ಷಕ ಬ್ರಿಡ್ಜು, ಬ್ರಿಡ್ಜಿಗೆ ಬ್ರಿಡ್ಜೂ ಹೌದು, ಟವರಿಗೆ ಟವರೂ ಹೌದು!“ ಅದು ಹೇಗಿರಬಹುದೆಂದು ನಾವು ಊಹಿಸಿಕೊಳ್ಳಬೇಕು ಅಷ್ಟೇ.

ಮುಂದೆ ಫ್ರಾನ್ಸಿನ  ಪ್ಯಾರಿಸಿಗೆ ಹೋದಾಗ ಲೇಖಕರ ಆಸಕ್ತಿಯನ್ನು ಕೆರಳಿಸಿದ್ದು ಅದರ ಇತಿಹಾಸ. ಅವರು ಬರೆಯುತ್ತಾರೆ, “ಇಂದಿನ  ಶ್ರೀಮಂತ ಫ್ರಾನ್ಸ್ ದೇಶದ ಇತಿಹಾಸದ ಪುಟಗಳೆಲ್ಲ ಸಾಮ್ರಾಜ್ಯಶಾಹಿ ಅಧಿಕಾರ ದಾಹಿಗಳಿಂದಾಗಿ ರಕ್ತಸಿಕ್ತವಾಗಿರುವುದು ಗೋಚರಿಸುತ್ತದೆ..” ಮುಂದೆ ಲೇಖಕರು ‘ಚಾರಿತ್ರಿಕ ಫ್ರೆಂಚ್ ಮಹಾಕ್ರಾಂತಿಯ ಸುತ್ತಮುತ್ತ’ ಎನ್ನುವ ಶೀರ್ಷಿಕೆಯಡಿಯಲ್ಲಿ ಚರಿತ್ರೆಯನ್ನು ವಿವರಿಸುತ್ತಾರೆ. ಇವೆಲ್ಲವೂ  ಓದುಗರನ್ನು ತುಸು ಬೆರಗುಗೊಳಿಸುವಂತಹದ್ದು.

ಐಫಿಲ್ ಟವರ್ ನ್ನು ಹೇಗೆ ವರ್ಣಿಸುತ್ತಾರೆ ನೋಡಿ. ಭಾಷೆಯನ್ನು ಬಳಸುವ ಇವರ ತಂತ್ರ ಆಕರ್ಷಕವಾದುದು. ಐಫಿಲ್ ಟವರ್ ಎನ್ನುವುದು ಜಾಗತಿಕ ಅದ್ಭುತ – ವಿಸ್ಮಯ ಅಂತಂದು, “ಕಣ್ಣೆದುರು ಕಾಣುತ್ತಿರುವುದು ಕನಸೋ ಎಂಬಂತೆ ಮೂಕ ವಿಸ್ಮಿತರಾಗಿ ನೋಡುತ್ತಿದ್ದೆವು !” ಅಂತ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಹೀಗೆ ತಮಗಾದ ಸಂತಸವನ್ನು ಅವರು ಅಕ್ಷರಗಳಲ್ಲಿ ಹಿಡಿದಿಡುವ ಪರಿ ಅನನ್ಯವಾದುದು.  ಐಫಿಲ್ ಟವರಿಗೆ ಹತ್ತಿರದಲ್ಲೇ ಹರಿಯುವ ಸೆಯಿನ್ ನದಿ ಕವಿ ಮನಸ್ಸಿನ ಈ ಲೇಖಕನಿಗೆ ‘ನೀಲಿ ಹೆಬ್ಬಾವೊಂದು ಪ್ಯಾರೀಸನ್ನು ಸುತ್ತಿಕೊಂಡಂತೆ ಭಾಸವಾಗಿತ್ತು !’   ಐಫಿಲ್ ಟವರ್ ಪರಿಸರದಲ್ಲಿ ಸ್ಮರಣಿಕೆಗಳನ್ನು  ಖರೀದಿಸುವಾಗ ಉತ್ಸಾಹಿ ಕರಿ ಯುವಕನ ಜೊತೆಗೆ ನಡೆದ ‘ಚಲ್ ಚಲ್ ಫಕೀರ’ ಮೋಜಿನ ಘಟನೆ ಓದುಗರಿಗೆ ಕಚಗುಳಿಯಿಡುವಂತಿದೆ.

ಹೀಗೆ ಪ್ರತಿಯೊಂದು ಸ್ಥಳಕ್ಕೆ ಹೋದಾಗಲೂ ಅಲ್ಲಿಯ ವಿಶೇಷತೆಗಳನ್ನು ತಿಳಿದು ಅದರ ಬಹುಮುಖ್ಯ ಮಾಹಿತಿಗಳನ್ನು ಕೊಡಲಿಕ್ಕೆ ಲೇಖಕರು ಬಹಳಷ್ಟು ಆಸಕ್ತರಾಗಿರುತ್ತಾರೆ. ಜರ್ಮನಿಯ ಬ್ಲಾಕ್ ಫಾರೆಸ್ಟ್ ಪ್ರದೇಶಕ್ಕೆ ಹೋದಾಗ; ಸ್ವಿಝರ್ ಲ್ಯಾಂಡಿನ ಧುಮ್ಮಿಕ್ಕುವ ರೈಹಿನ್ ಜಲಪಾತ ವೀಕ್ಷಿಸುವಾಗ; ಹತ್ತು ಸಾವಿರ ಅಡಿ ಎತ್ತರದ ಮೌಂಟ್ ಟಿಟಿಲಿಸ್ ನಲ್ಲಿ   ತೂಗು ಸೇತುವೆ ಮೇಲೆ ಭಯಭೀತಿಯಿಂದಲೇ ಹೆಜ್ಜೆ ಇರಿಸಿ ಮತ್ತೆ ಧೈರ್ಯದಿಂದ ಮುನ್ನಡೆ ಇಟ್ಟ ಲೇಖಕರ ಮನೋಸ್ಥೈರ್ಯ ವರ್ಷಗಳೇ ಕಳೆದರೂ ನಮ್ಮ ಚಿತ್ತದಲ್ಲಿ ಅಚ್ಚೊತ್ತಿರುವಂತಹದ್ದಾಗಿದೆ ; ಇಟಲಿಯಲ್ಲಿನ ವೇನಿಸ್ ನಗರದಲ್ಲಿಯ ಕಾಲುವೆಗಳು, ದೃಷ್ಟಿ ಸೇತುವೆ, ಚಿತ್ತಾಕರ್ಷಕ ನಾವೆಗಳಲ್ಲಿ ವಿಹಾರ…. ಎಲ್ಲವನ್ನೂ ಪುಟ್ಟ ಬಾಲಕನಂತೆ ಸಂಭ್ರಮಿಸಿದ ಲೇಖಕರು ಈ ಪ್ರವಾಸ ಕಥನವನ್ನು ಪ್ರೌಢವಾಗಿ ಬರೆದು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಪ್ರವಾಸ ಕಥನಗಳಲ್ಲಿ ಆಸಕ್ತಿ ಇರುವವರು, ಆ ಮೂಲಕ ಯುರೋಪ್ ಪ್ರವಾಸದ ಬಗ್ಗೆ ತಿಳಿದುಕೊಳ್ಳ ಬಯಸುವವರಿಗೆ ಇದು ಒಂದು ಮಾರ್ಗದರ್ಶಕ ಕೃತಿಯಾಗಿದೆ.  

ಸಾಗರದಾಚೆಯ ನಾಡನಲ್ಲಿ ಸುತ್ತಿ ಬಂದ ಲೇಖಕ ಗೋಪಾಲ ತ್ರಾಸಿಯವರು ಒಂದೆಡೆ ಹೇಳುತ್ತಾರೆ, “ಈ ಪ್ರವಾಸದ ಅನುಭವ, ನೂತನ ಅರಿವು, ವಿನೂತನ ಜ್ಞಾನತಂತಿಯನ್ನು ಮೀಟಿದ್ದು ಅಕ್ಷರಶ: ಸತ್ಯ.“ ಎಂದ ಅವರ ಮಾತಿನಲಿ ತಥ್ಯವಿದೆ. ಅದು ಅಕ್ಷರಶ: ನಿಜ. 

ಈ ಕೃತಿಯಲ್ಲಿ ಅಳವಡಿಸಿಕೊಂಡ ಚಿತ್ರಗಳಿಗೆ ಟಿಪ್ಪಣಿ ಮತ್ತು ಅವು ವರ್ಣಚಿತ್ರಗಳಾಗಿದ್ದರೆ ಕೃತಿಯ ಅಂದ ಇನ್ನಷ್ಟು ಹೆಚ್ಚುತ್ತಿತ್ತು. 

ಅವರ ಪ್ರವಾಸ ಪ್ರೀತಿ ಹೀಗೇ ನಿರಂತರವಾಗಿರಲಿ. ಇನ್ನಷ್ಟು ಇಂತಹ ಸದಾವಾಕಾಶಗಳು ಒದಗಿ ಬಂದು ಅವರಿಂದ ಪ್ರವಾಸ ಕಥನ ಕೃತಿಗಳು ಹೊರಬರುತ್ತಿರಲೆಂದು ಹಾರೈಸೋಣ.

‍ಲೇಖಕರು Admin

December 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: