ಧ್ವನ್ಯಾಲೋಕದಲ್ಲಿ ಹೀಗಾಗಿ ಹೋಯ್ತು..

ಸಂವರ್ತ ‘ಸಾಹಿಲ್’

ಇತ್ತೀಚೆಗೆ  ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕದಲ್ಲಿ ಒಂದು ಉಜ್ವಲ ಚಣ ಘಟಿಸಿತು.

ಸಂದರ್ಭ: ಲಕ್ಷ್ಮೀಶ ತೋಳ್ಪಾಡಿ ಅವರ ‘ಭಕ್ತಿಯ ನೆಪದಲ್ಲಿ’ ಮತ್ತು ಡಾ| ಮಹಾಬಲೇಶ್ವರ್ ಹೆಗಡೆ ಅವರು ಸಂಪಾದಿಸಿ ಅನುವಾದಿಸಿದ ಎ.ಕೆ. ರಾಮಾನುಜನ್ ಅವರ ಭಕ್ತಿಯ ಕುರಿತಾದ ಲೇಖನಗಳ ಸಂಗ್ರಹ ‘ಭಕ್ತಿ ಕಂಪಿತ’ ಪುಸ್ತಕಗಳ ಬಿಡುಗಡೆ ಸಮಾರಂಭ.

ಕಾರ್ಯಕ್ರಮದ ಉದ್ಘಾಟನೆ ನಡೆದದ್ದು ಗುರು ಬನ್ನಂಜೆ ಸಂಜೀವ ಸುವರ್ಣರ ‘ಭಕ್ತಿ’ ಯಕ್ಷ ಪ್ರಸ್ತುತಿಯ ಮೂಲಕ. ಉದ್ಹಾಟನೆಗೆಂದು ಗುರು ಸಂಜೀವ ಸುವರ್ಣರು ತಮ್ಮ ಶಿಷ್ಯ/ ಸಹೋದ್ಯೋಗಿ ಜೊತೆಗೂಡಿ ವಿಧುರನ ಮನೆಗೆ ಕೃಷ್ಣ ಬರುವ ಭಾಗವನ್ನು ಪ್ರಸ್ತುತ ಪಡಿಸಿದರು.

ಕೃಷ್ಣ ಮನೆಗೆ ಬಂದಿದ್ದಾನೆ, ವಿಧುರ ಪರವಶನಾಗಿದ್ದಾನೆ. ವಿಧುರನ ಖುಷಿ ಮಾತಿಗೆ ನಿಲುಕದ್ದು. ಕೃಷ್ಣನನ್ನು ಕಣ್ಣತುಂಬ ನೋಡುತ್ತಾ ಬಾಯಿತುಂಬಾ ಹೊಗಳುತ್ತಾ ವಿಧುರ ಮೈಮರೆತಿದ್ದಾನೆ. ಪ್ರಸ್ತುತಿಯ ಈ ಸಂದರ್ಭದಲ್ಲಿ ವಿಧುರನ ಪಾತ್ರ ವಹಿಸಿದ ಗುರು ಸುವರ್ಣರು ಮಂಡಿ ಹಾಕಲು ಕುಂತರು. (ಮಂಡಿ ಮೇಲೆ ಕುಳಿತು ಸುತ್ತು ಹಾಕುವ ಯಕ್ಷಗಾನದ ಒಂದು ಹೆಜ್ಜೆ)

ಉಪನ್ಯಾಸಕ್ಕೆಂದೇ ಮೀಸಲಿಟ್ಟ ಧ್ವನ್ಯಾಲೋಕದ ಸೀಮಿತ ರಂಗಸ್ಥಳದ ಮೇಲೆ, ಮಂಡಿ ಹಾಕಲು ಆರಂಭಿಸಿದ ವಿಧುರ/ ಗುರು ಸುವರ್ಣರಿಗೆ, ನಡುವೆ ಆಶೀರ್ವಾದ ನೀಡುವ ಭಂಗಿಯಲ್ಲಿ ನಿಂತಿದ್ದ ಕೃಷ್ಣ, ಅಡ್ಡಿಯಾದ! ಮಂಡಿ ಹಾಕುತ್ತಿದ್ದ ಗುರು ಸುವರ್ಣ/ ವಿಧುರ ತೀರಾ ನಿರ್ದಾಕ್ಷಿಣ್ಯವಾಗಿ ಆದರೂ ಗೌರವಹಾರವಾಗಿ ಕೃಷ್ಣನನ್ನು ಬದಿಗೆ ಸರಿಸಿದರು. ಕೃಷ್ಣ ಆ ಮೆತ್ತನೆಯ ನೂಕುವಿಕೆಗೆ ಬದಿಗೆ ಸರಿದು ವಿಧುರ/ ಗುರು ಸುವರ್ಣರಿಗೆ ಮಂಡಿ ಹಾಕಲು ಜಾಗ ಮಾಡಿಕೊಟ್ಟ.

ಆ ಒಂದು ಚಣದಲ್ಲಿ ಮೈಯಲ್ಲಿ ವಿದ್ಯುತ್ಸಂಚಾರವಾದದ್ದು ಸುಳ್ಳಲ್ಲ!

ಪುಸ್ತಕ ಬಿಡುಗಡೆ ಬಳಿಕ ಮಾತನಾಡುತ್ತಾ ಲಕ್ಷ್ಮೀಶ ತೋಳ್ಪಾಡಿ ಆ ಕ್ಷಣವನ್ನು ನೆನೆಯುತ್ತ, “ಭಕ್ತ ಜಾಗ ಕೇಳುತ್ತಾನೆ, ಕೃಷ್ಣ ಜಾಗ ಮಾಡಿಕೊಡುತ್ತಾನೆ. ಇಲ್ಲವಾದಲ್ಲಿ ಕೃಷ್ಣನಿಗೆ ಜಾಗವಿಲ್ಲ,” ಎಂದರು. ಕೇಳಿ ರೋಮಾಂಚನವಾಯಿತು.

ಆದರೆ ಆ ಸಂದರ್ಭದಲ್ಲಿ ಆ ಚಣ ನನಗೆ ಕಂಡಿದ್ದು ಸ್ವಲ್ಪ ಭಿನ್ನವಾಗಿ.

ಭಕ್ತಿಗೆ, ದೇವರೇ ತನ್ನ ನಿಶ್ಚಲತೆಯಿಂದ/ ಜಡತ್ವದಿಂದ ಅಡ್ಡಿಯಾಗುವುದು. ಹಾಗೆ ದೇವರೇ ಅಡ್ಡಿಯಾದಾಗ ಭಕ್ತಿ, ದೇವರನ್ನೇ ಬದಿಗೆ ಸರಿಸಿ ಮುಂದುವರಿಯುತ್ತದೆ. ಮತ್ತು ಅದೇ ಸಂದರ್ಭದಲ್ಲಿ ಜಡವಾದ ದೇವರನ್ನು ಭಕ್ತಿ ಜಂಗಮವಾಗಿಸುತ್ತದೆ. ಕೊನೆಗೂ ಭಕ್ತಿಯಲ್ಲಿ ಸೆಂಟರ್ ಸ್ಟೇಜ್ ಆವರಿಸುವುದು ದೇವರಲ್ಲ, ಭಕ್ತಿ ಮತ್ತು ಭಕ್ತಿಯ ಮೂಲಕ ಭಕ್ತ!

ಕೊನೆಗೆ, ಸಮಾರಂಭದ ಅಧ್ಯಕ್ಷರಾದ ನಾಡೋಜ ಕೆ.ಪಿ.ರಾವ್ ಅವರು ಅಧ್ಯಕ್ಷ ಭಾಷಣ ಮಾಡುತ್ತಾ ‘ಭಕ್ತಿ’ ಯಕ್ಷ ಪ್ರಸ್ತುತಿಗೆ ಮುನ್ನ ಗುರು ಸಂಜೀವ ಸ್ವರ್ಣರು ಪ್ರಸ್ತುತಪಡಿಸಿದ ಗಣಪತಿ ವಂದನೆಯನ್ನು ಸ್ಮರಿಸಿಕೊಂಡು, “ನೀವು ಗಮನಿಸಿರಬಹುದು ಗಣಪತಿಯನ್ನು ವಂದಿಸುತ್ತಾ ವಂದಿಸುತ್ತಾ ಸುವರ್ಣರು ತಾವೇ ಗಣಪತಿಯೂ ಆಗುತ್ತಿದ್ದರು,” ಎಂದರು.

ಅದು ಕೇವಲ ಏಕ ವ್ಯಕ್ತಿ ನಾಟ್ಯದಲ್ಲಿ ಆ ನೃತ್ಯಪಟುವೆ ಗಣಪತಿಯ ಪಾತ್ರವನ್ನು ಮತ್ತು ಅದನ್ನು ವಂದಿಸುವ ಪಾತ್ರವನ್ನು ನಿರ್ವಹಿಸುವ ಕುರಿತ ಮಾತಾಗಿರಲಿಲ್ಲ. ಅದು ಭಕ್ತಿಯ ಕುರಿತಾದ ಮಾತಾಗಿತ್ತು.

‍ಲೇಖಕರು avadhi

February 19, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಅನುಪಮಾ ಪ್ರಸಾದ್

    ಸಂವರ್ತ ಅವರೇ, ಒಂದು ಅಪೂರ್ವ ಘಟನೆ, ಒಂದು ಅನಿರೀಕ್ಷಿತ ಸಂದರ್ಭ ಸೃಜನಶೀಲತೆಗೆ ಒಳ ಹೊಳಹು ಕೊಡುವುದೆಂದರೆ ಹೀಗೇ ಅಲ್ಲವೆ. ನಿಮ್ಮ ಹೊಳಹು, ನೀವದನ್ನು ಕಟ್ಟಿಕೊಟ್ಟ ರೀತಿ ಓದುವವರಿಗೆ ಇನ್ನೊಂದನ್ನೇ ಹೊಳೆಯಿಸುವಂತಿದೆ. ಧನ್ಯವಾದ ಆ ಕ್ಷಣವನ್ನು ಹಂಚಿಕೊಂಡಿದ್ದಕ್ಕೆ.
    ಅನುಪಮಾ ಪ್ರಸಾದ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: