ಓ ಮೈ ಗಾಡ್..ಏನಾಗಿ ಹೋಯ್ತು ನನ್ನೂರಿನ ಬಣ್ಣಗಳಿಗೆ..!!

 

 

 

 

ಗಿರಿಧರ ಕಾರ್ಕಳ 

 

ಇವತ್ತು ನನ್ನ ಬಾಲ್ಯದ ಗೆಳೆಯನ ಮಗಳ ಮದುವೆಗೆ ಉಪ್ಪಿನಂಗಡಿಗೆ ಬಂದಿದ್ದೆ. ಗೆಳೆಯನ ಭಾವ, ಕತೆಗಾರ ಫಕೀರ್ ಮಹಮದ್ ಕಟ್ಪಾಡಿಯೂ ಬಂದಿದ್ರು. ಯಾವತ್ತೂ ಮಾತನಾಡುವಂತೆ ಕರಾವಳಿಯ ಬದಲಾಗುತ್ತಿರುವ ಬಣ್ಣಗಳ ಬಗ್ಗೆ ಅವರೇನೂ ಮಾತನಾಡಲಿಲ್ಲ.ಆದರೆ ಅವರ ಮೌನವೇ ಎಲ್ಲವನ್ನೂ ಹೇಳುತ್ತಿತ್ತು..!!

ಮದುವೆ ಹಾಲ್ ನಿಂದ ಈಚೆ ಬಂದು ಪುತ್ತೂರು ಕಲ್ಲಡ್ಕ ಮಂಗಳೂರು ದಾರಿಯಾಗಿ ಉಡುಪಿಗೆ ಬಂದೆ. ಯಾರು ಏನೇ ಹೇಳಲಿ, ನನಗಂತೂ ದಾರಿಯುದ್ದಕ್ಕೂ ಕಾಣಿಸಿದ್ದು ಎರಡೇ ಬಣ್ಣಗಳು..!! ಪುತ್ತೂರಿನ ತರಕಾರಿ ಮಾರ್ಕೆಟಿನ ತಾಜಾ ತರಕಾರಿ ತೆಂಗಿನಕಾಯಿ ರಾಶಿ, ಕಲ್ಲಡ್ಕದ ಲಕ್ಷ್ಮೀ ಹೋಟೇಲಿನ ಕಡಕ್ ಚಾ, ಮಂಗಳೂರು ಮೀನು ಮಾರ್ಕೇಟಿನ ಬಗೆ ಬಗೆಯ ಮೀನು ಸಿಗಡಿ ರಾಶಿ, ಕಟಪಾಡಿಯ ಮಟ್ಟಿಗುಳ್ಳ, ಶಂಕರಪುರದ ಮಲ್ಲಿಗೆ ಹೂರಾಶಿ, ಮಲ್ಪೆ ಸಮುದ್ರ ತೀರದ ಸಂಜೆಯ ಆಗಸ..ಓ ಮೈ ಗಾಡ್ ಎಲ್ಲಿ ನೋಡಿದರೂ ಎರಡೇ ಬಣ್ಣ ಕಾಣಿಸ್ತಿದೆ..!!

“ನಮ್ಮೂರಲ್ಲಿ ಹಂಗೇನಿಲ್ಲ” ಅಂತ ನನ್ನೂರ ಗೆಳೆಯರೊಬ್ಬರು ಬರೆದರು. ಇಲ್ಲ ಇಲ್ಲ..ಒಳಗೊಳಗೇ ಕೆಂಡವಾಗಿ ಸುಡುತ್ತಿದೆ ಅಂತ ಮತ್ತೊಬ್ಬರು ಬರೆದರು.

ಮಂಗಳೂರಲ್ಲಿ ಬಸ್ಸಿನಲ್ಲಿ ಕೂತಿದ್ದಾಗ ಕೇಸರೀ ವಾಹನಗಳ ದೊಡ್ಡ ಮೆರವಣಿಗೆ ಹೋಗ್ತಿತ್ತು. ನೋಡಿದರೆ ಅದು ಕುಡುಪು ಅನಂತಪದ್ಮನಾಭ ದೇವಸ್ಥಾನಕ್ಕೆ ಭಕ್ತರು ಒಯ್ಯುತ್ತಿರುವ ಹೊರೆಕಾಣಿಕೆ..!! ವಾಹನಗಳಲ್ಲಿ ತುಂಬಿದ ಅಕ್ಕಿ,ತರಕಾರಿ ಬೇಳೆ ಕಾಯಿ ಹೂ ಎಲ್ಲವುಗಳ ಬಣ್ಣ ಕೇಸರಿಗೆ ತಿರುಗಿದೆ. ಕೇಸರೀ ಧ್ವಜ ಎಲ್ಲರನ್ನೂ ಆವಾಹಿಸಿಕೊಂಡಿತ್ತು. ಮುಂದೆ, ಪಡುಬಿದ್ರೆ ಬಳಿ ಒಂದು ಧಾರ್ಮಿಕ ಮೆರವಣಿಗೆಯ ಹೆಜ್ಜೆಗಳಿಗೂ ಹಸಿರು ಬಣ್ಣ..!!

ಮಂಗಳೂರಿನ ಮೀನು,ಕಟಪಾಡಿ ಮಟ್ಟಿಗುಳ್ಳ, ಮಲ್ಲಿಗೆ ಹೂ, ತಾಜಾ ತರಕಾರಿ ಎಲ್ಲಕ್ಕೂ ಅವುಗಳದೇ ಬಣ್ಣವಿದ್ದರೂ ಅದನ್ನು ಮಾರುವವರನ್ನು ಮಾತಾಡಿಸಿದರೆ ಎರಡೇ ಬಣ್ಣ ಹೊದ್ದಿರುವುದು ಕಾಣಿಸಿತು..!!

ಹೌದು, ನಾಳೆ ರಾಷ್ಟ್ರೀಯ ನಾಯಕರು ನಮ್ಮೂರಿಗೆ ಬರ್ತಾರಂತೆ. ಬೆಂಕಿಪೆಟ್ಟಿಗೆ ಕಿಸೆಯಲ್ಲಿ ಇಟ್ಟುಕೊಂಡವರೆಲ್ಲ ಎರಡೇ ಬಣ್ಣಗಳನ್ನು ಕಲರ್ ಪುಲ್ಲಾಗಿ ವರ್ಣಿಸುತ್ತಿದ್ದಾರೆ.

ಕುದ್ಮುಲ್ ರಂಗರಾವ್, ಕಾರ್ನಾಡು ಸದಾಶಿವರಾಯರು, ಕಾರಂತರು, ಗೋವಿಂದ ಪೈಗಳು, ಅಡಿಗರು, ಹೆಬ್ಬಾರರು.. ಎಲ್ಲರೂ ಸೇರಿ ಬಳಿದಿದ್ದ ನನ್ನೂರಿನ ಬಣ್ಣಗಳೆಲ್ಲ ಯಾಕೆ ಹೀಗೆ ಕಲಸಿ ಹೋಗಿ ಎರಡೇ ಬಣ್ಣಗಳಾದವು?

ಓ ದೇವರೇ,ಏನಾಗಿ ಹೋಯ್ತು ನನ್ನೂರ ಬಣ್ಣಗಳಿಗೆ..??

‍ಲೇಖಕರು avadhi

February 19, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Anasuya M R

    ಏಳು ಬಣ್ಣಗಳು ಸೇರಿ ಆದ ಶುದ್ದ ಬಿಳಿಯ ಬಣ್ಣವೆಲ್ಲಿ
    ಕಾಣೆಯಾಯಿತು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: