ಧೃವೀಕರಣದ ದಿನಗಳಲ್ಲಿ ಪ್ರೀತಿ..

ಹರೀಶ್ ಗಂಗಾಧರ್

(ಜಗತ್ತಿನ ಯಾವ ಸಮಾಜಕ್ಕೂ ವ್ಯಕ್ತಿಗಳ ಭಾವನಾತ್ಮಕ ಬದುಕಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಲಾಗಿಲ್ಲ.)

ಕೇರಳ ಸ್ಟೋರಿಯಂತಹ ಚಲನಚಿತ್ರ ನೋಡಿ ನಾಡಿನ ಕೆಲ ಜನ ಉದ್ವೇಗಕ್ಕೆ ಒಳಗಾಗಿದ್ದಾರೆ. ಪ್ರಖ್ಯಾತ ಇಸ್ರೇಲಿ ನಿರ್ದೇಶಕ ನಾಡಾವ್ ಲಾಪಿಡ್ ಕಾಶ್ಮೀರ್ ಫೈಲ್ಸ್ ಚಿತ್ರವನ್ನ “ಸುಳ್ಳು ಪ್ರಚಾರಕ್ಕೆಂದು ಮಾಡಿದ ಅಶ್ಲೀಲ ಚಿತ್ರ”ವೆಂದು ತೆಗಳಿದರು, ಚಿತ್ರ ಸಾವಿರಾರು ಕೋಟಿ ಲಾಭವಂತು ಮಾಡಿದೆ. ಇಂತಹ ಪ್ರೋಪಗ್ಯಾಂಡ ಚಿತ್ರಗಳ ನಡುವೆ ನಲವತ್ತೈದು ಸೆಕೆಂಡ್ ಗಳ ಜಾಹೀರಾತೊಂದು ನಮ್ಮ ಪರದೆಗಳ ಮೇಲೆ ಕಾಣಿಸಿಕೊಂಡು ಮಾಯವಾಗಿದೆ. ಪತ್ರಕರ್ತರನ್ನ, ಶಿಕ್ಷಣ ತಜ್ನರನ್ನ ಸಮ್ಮನಾಗಿಸಿದ ನಂತರ, ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮೇಲೆ ವಿಷ ಕಾರಿದ ನಂತರ, ಸಾಮಾಜಿಕವಾಗಿ ಬದ್ದ, ಪಾರದರ್ಶಕ ನ್ಯೂಸ್ ಚಾನೆಲ್ಗಳ ಮೇಲೆ ಆಕ್ರಮಣ ನೆಡೆಸಿದ ನಂತರ, ಬಾಲಿವುಡ್ ಚಿತ್ರಗಳನ್ನ ಗುರಿಯಾಗಿಸಿದ ನಂತರ, ಟ್ರೊಲ್ ಸೇನೆಯ ಕಣ್ಣು ಬಿದ್ದದ್ದು ಈ ಪುಟ್ಟ ಜಾಹಿರಾತಿನ ಮೇಲೆ.

ಟ್ರೋಲ್ ಸೇನೆ ರೊಚ್ಚಿಗೆದ್ದು ಆ ನಲವತ್ತೈದು ಸೆಕೆಂಡ್ ಗಳ ಜಾಹಿರಾತನ್ನು ಬ್ಯಾನ್ ಮಾಡಿಸುವವರೆಗೆ ಪಟ್ಟು ಹಿಡಿದದ್ದು ಏತಕ್ಕೆ? ಆ ಜಾಹಿರಾತಿನಲ್ಲಿ ಅಂತಹ ಅಪಮಾನಕಾರಿಯಾದುದು, ಆಕ್ಷೇಪಾರ್ಹವಾದುದೇನಿತ್ತು? ಆ ಜಾಹಿರಾತು ಯಾವುದು?

ತನಿಷ್ಕ್ ಎಂಬುದು ದೇಶದ ಚಿರಪರಿಚಿತ ಒಡವೆಯಂಗಡಿ. ಟಾಟಾದವರ ಪ್ರಖ್ಯಾತ ಬ್ರ್ಯಾಂಡ್ ಇದು. ಟಾಟಾ ತನಿಷ್ಕ್ ನೀಡಿದ ಜಾಹಿರಾತಿನಲ್ಲಿ ಈ ಸಣ್ಣ ಕತೆಯಿತ್ತು. ಮುಸ್ಲಿಂ ಮನೆಯೊಂದರಲ್ಲಿ ಸಡಗರ, ಹಬ್ಬದ ವಾತಾವರಣ. ಸಂಭ್ರಮ, ಹರುಷಕ್ಕೆ ಮಿತಿಯಿಲ್ಲದ ಮುಸ್ಲಿಂ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಹಿಂದೂ ಸೊಸೆಗೆ ಸೀಮಂತ ನಡೆಯುತ್ತಿದೆ! ನವ ವಿವಾಹಿತ ಹೆಣ್ಣು ಮಗಳ ಬದುಕಲ್ಲಿ ಭಾರಿ ಬಿರುಗಾಳಿಯನ್ನೇ ಎಬ್ಬಿಸುವ ಮದುವೆಯ ಆ ಆರಂಭಿಕ ದಿನಗಳಲ್ಲಿ, ಅತ್ತೆ ಮತ್ತು ಗಂಡ ಆತ್ಮೀಯತೆ ಹಾಗು ಸೈರಣೆಯಿಂದ ನೆಡೆದುಕೊಂಡ ಉದಾಹರಣೆಗಳೇ ಇಲ್ಲದ ದೇಶದಲ್ಲಿ ಮುಸ್ಲಿಂ ಮನೆತನವೊಂದು ಹಿಂದೂ ವಧುವನ್ನ ಸ್ವೀಕರಿಸಿ, ಹಿಂದೂ ಸಂಪ್ರದಾಯದಂತೆ ಸೀಮಂತ ನೆಡೆಸುವುದನ್ನ ಈ ಜಾಹಿರಾತಿನಲ್ಲಿ ತೋರಿಸಲಾಗಿದೆ. “ಅತ್ತೆ ನಿಮ್ಮ ಮನೆಗಳಲ್ಲಿ ಸೀಮಂತ ಮಾಡುವ ಸಂಪ್ರದಾಯವಿಲ್ಲ ಆಲ್ವಾ?” ಎಂಬ ಸೊಸೆಯ ಪ್ರಶ್ನೆಗೆ “ಮಗಳನ್ನ ಖುಷಿಯಾಗಿಡುವ ಸಂಪ್ರದಾಯ ಎಲ್ಲಾ ಮನೆಗಳಲ್ಲಿದೆ” ಎಂದೇಳಿ ಅತ್ತೆ ಸೊಸೆಗೆ ತನಿಷ್ಕ್ ನೆಕ್ಲೆಸ್ ಒಂದನ್ನ ತೊಡಿಸುತ್ತಾಳೆ. ಪ್ರೀತಿಗೆ ಧರ್ಮ ಸಂಪ್ರದಾಯಗಳ ಸರಹದ್ದುಗಳಿಲ್ಲವೆಂದು ಸೂಚಿಸುತ್ತಾ, ಧಾರ್ಮಿಕ ಭಿನ್ನತೆಗಳ ನಡುವೆಯೂ ನಾವು ಐಕ್ಯತೆಯಿಂದ ಕೆಲಸ ಮಾಡಿದರೆ ಏನೆಲ್ಲಾ ಸಾಧಿಸಬಹುದು ಎಂಬ ಮಾತುಗಳೊಂದಿದೆ ಜಾಹಿರಾತು ಕೊನೆಯಾಗುತ್ತದೆ.

ಸಹಜ ಹುಟ್ಟೊಲವು ಆದ ಕೋಮು ಪ್ರವೃತ್ತಿಗೆ ಬಿದ್ದ ಟ್ರೋಲ್ ಸೇನೆ ಈ ಸೆಕ್ಯುಲರ್ ಜಾಹಿರಾತಿನ ಮೇಲೆ ಮುಗಿಬಿದ್ದವು. ಮತ್ತದೇ ಲವ್ ಜಿಹಾದ್ ಆರೋಪ. ಹಿಂದೂ ಹೆಣ್ಣು ಮಕ್ಕಳನ್ನ ಪುಸಲಾಯಿಸಿ ಮದುವೆಯಾಗಿ ಭಾರತವನ್ನ ಇಸ್ಲಾಮಿಕ್ ರಾಷ್ಟ್ರ ಮಾಡುವ ಹುನ್ನಾರವಿದು ಎಂಬ ಆಪಾದನೆ. ಇಂತಹ ಮದುವೆಗಳು ಕುಟುಂಬಕ್ಕೆ ಸೀಮಿತವಾದ ವಿಚಾರವಲ್ಲ ಇದು ಇಡೀ ಸಮುದಾಯದ, ಧರ್ಮದ, ಅಳಿವು-ಉಳಿವಿನ ಪ್ರಶ್ನೆ ಎಂಬುವ ವಾದ. ಜಾಹಿರಾತು ನೈತಿಕ ಗಡಿಯನ್ನ ಮೀರಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದೆ, ತಕ್ಷಣ ಬ್ಯಾನ್ ಮಾಡಿ ಎಂಬ ತೀವ್ರ ತಾಕೀತು. ರಾಜಕೀಯ ಲಾಭಕ್ಕಾಗಿ ದಶಕಗಳಿಂದ ಪೋಷಿಸಿಕೊಂಡು ಬಂದ ಕೋಮು ದಳ್ಳುರಿಯಿದು. ಇತ್ತೀಚಿನ ದಿನಗಳಲ್ಲಿ ವ್ಯಾಪಿಸುತ್ತಿರುವ ಅಸಹಿಷ್ಣತೆಗೆ ರಾಜಕೀಯದ ಹೊರತಾಗಿ ಯಾವುದೇ ನೆಲೆಗಳಿಲ್ಲ. ಹೀಗೆ ಧಾರ್ಮಿಕ, ಜಾತಿ ಅಸಹಿಷ್ಣತೆಗೆ, ನಿರಂತರ ಕಿರುಕುಳಕ್ಕೆ ಕಮರಿಹೋದ ಪ್ರೇಮಿಗಳ, ಯುವ ಜೋಡಿಗಳ ಲೆಕ್ಕವಿಡಲು ಮರೆತ ದೇಶ ನಮ್ಮದು.

ನಮ್ಮ ಸಮಾಜದಲ್ಲಿ ಧಾರ್ಮಿಕ ಉನ್ಮಾದದಾಚೆಗಿರುವ ಜನರ ಊಹೆಗಳೂ ಕೂಡ ಹಾಗೆ ಇವೆ. ವ್ಯಕ್ತಿಗಳ ನಡುವಿರುವ ವರ್ಗ, ಶಿಕ್ಷಣ, ನಡುವಳಿಕೆ, ಮನೋಧರ್ಮ, ಗುಣ ಸಾಮ್ಯತೆಗಳಿಂದ ಹುಟ್ಟುವ ಸಹಜ ಆಕರ್ಷಣೆ, ಹೊಂದಾಣಿಕೆಯ ಮುಂದೆ ಹಿಂದೂ-ಮುಸ್ಲಿಂ ಧರ್ಮ ಬೇಧದ ಗೆಲುವಾಗುತ್ತದೆ ಎಂಬ ಊಹೆ ನಮ್ಮ ಸಮಾಜದಲ್ಲಿ ದಟ್ಟವಾಗಿವೆ. ಹಿಂದೂ ಮಹಿಳೆಯೊಬ್ಬಳು ಮುಸ್ಲಿಂ ಯುವಕನನ್ನ ಮದುವೆಯಾದರೆ ಎದುರಿಸಬೇಕಾದ ಸಾಮಾಜಿಕ ಕ್ರೋಧ ಮೇಲಿನ ಊಹೆಯಿಂದಲೇ ಜನಿಸುತ್ತದೆ ಎಂದರೆ ತಪ್ಪಲ್ಲ.

ವಧುವಿನ ಮತಾಂತರಕ್ಕೆಂದೇ ಮದುವೆ ಏರ್ಪಾಡಾದರೆ ಅಂತಹ ಮದುವೆಗಳ ವಿರುದ್ಧ ಏಳುವ ಪ್ರತಿಭಟನೆಗೆ, ಆಕ್ಷೇಪಣೆಗೆ ಅರ್ಥವಿದೆ. ಆದರೆ ಅಂತರ್ ಧರ್ಮಿಯ ವಿವಾಹಗಳೆಲ್ಲವೂ ಮತಾಂತರಕ್ಕೇ ಆಗುತ್ತವೆಂಬುದು ಸತ್ಯಕ್ಕೆ ದೂರವಾದುದು. ಈ ಜಾಹಿರಾತಿನಲ್ಲಿ ಕಾಣುವ ವಧು ಮದುವೆಯ ನಂತರವೂ ತನ್ನ ಹಿಂದೂ ಅಸ್ಮಿತೆಯನ್ನ ಉಳಿಸಿಕೊಂಡಿದ್ದಾಳೆ. ಮುಸ್ಲಿಂ ಮನೆಯೊಂದರಲ್ಲಿ ಹಿಂದೂ ಸಂಪ್ರದಾಯದಂತೆ ಸೀಮಂತ ನಡೆಯುತ್ತಿದೆ! ತಕರಾರು ತೆಗೆದ ಟ್ರೋಲ್ ಸೇನೆ ಈ ಎರಡು ಅಂಶಗಳಿಂದಲೇ ತಣ್ಣಗಾಗಬೇಕಿತ್ತು. ಆದರೆ ಅಂತರ್ ಜಾತಿ/ಧರ್ಮಿಯ ವಿವಾಹಗಳನ್ನೇ ಸಂಪ್ರದಾಯ/ಸಮಾಜ ಬಾಹಿರವೆಂದು (incontestable social norms) ನಂಬಿರುವ ಸಮಾಜದಲ್ಲಿ ಬದುಕುವ ನಮಗೆ ತನಿಷ್ಕ್ ಜಾಹಿರಾತ ಎಂದಿಗೂ ಒಪ್ಪಿತವಾಗದು.

ತನಿಷ್ಕ್ ಹಗರಣ, ಜಾಹಿರಾತಿನಲ್ಲಿ ಆಕ್ಷೇಪಣಾರ್ಹವಾದದ್ದನೇನು ಕಾಣದ ಸೆಕ್ಯುಲರ್ ಎಲೀಟ್ ಬುದ್ದಿಜೀವಿಗಳಿಗೂ ಮತ್ತು ಸಾಂಪ್ರದಾಯಿಕ ಕಟ್ಟಳೆಗಳನ್ನ ಉಸಿರು ಮಾಡಿಕೊಂಡಿರುವ, ಆ ಸಂಪ್ರದಾಯಕ್ಕಾಗಿ ಉಸಿರು ಬಿಡುವ ಬಹುಸಂಖ್ಯಾತ ಜನಸಾಮಾನ್ಯರ ನಡುವಿರುವ ಮಹಾ ಕಂದಕಕ್ಕೆ ಹಿಡಿದ ಕನ್ನಡಿಕೂಡ. ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮದೊಳಗಿನ ಅಂತರ್ಜಾತಿ ವಿವಾಹವನ್ನೇ ಸಹಿಸದ ಸಮಾಜ ಅಂತರ್ ಧರ್ಮಿಯ ವಿವಾಹವನ್ನ ಒಪ್ಪಿತೇ?

ಎಲ್ಲಕಿಂತ ಮಿಗಿಲಾಗಿ ತನಿಷ್ಕ ಜಾಹಿರಾತು ಅಂತರ ಧರ್ಮಿಯ ಮದುವೆಯನ್ನ, ಸೌಹಾರ್ದತೆಯನ್ನ ವಿಜೃಂಭಿಸುವ ಜೊತೆಗೆ ಪ್ರೇಮ ವಿವಾಹಕ್ಕೂ ಮನ್ನಣೆ ನೀಡುವುದು ಸಂಪ್ರದಾಯವಾದಿಗಳಿಗೆ ಅರಗಿಸಿಕೊಳ್ಳಲಾಗದ ವಿಷಯ. ಅಂತರ ಜಾತಿ/ಧರ್ಮಿಯ ವಿವಾಹಗಳು ಸಾಮಾನ್ಯವಾಗಿ ಪ್ರೇಮ ವಿವಾಹಗಳೇ ಆಗಿರುತ್ತವೆ. ಪ್ರೇಮ ವಿವಾಹವೆಂದರೆ ವ್ಯಕ್ತಿಗತ ನಿರ್ಧಾರ, ವಿಶಿಷ್ಟ ಅಸ್ಮಿತೆ, ಸ್ವತಂತ್ರ ಗಂಡು ಅದಕ್ಕಿಂತ ಹೆಚ್ಚಾಗಿ ಹೆಣ್ಣಿನ ಆಶಯ.

ಜಾಹಿರಾತಿನಲ್ಲಿ ಕಾಣುವ ಸಮಾನತಾಭಾವದಲ್ಲಿರುವ ಕುಟುಂಬ ವ್ಯಕ್ತಿಗತ ನಿರ್ಧಾರ, ಅಸ್ಮಿತೆ, ಹೆಣ್ಣಿನ ಒತ್ತಾಸೆಗಳನ್ನ ಒಪ್ಪಬಹುದೇ ಹೊರತು ಉಸಿರುಗಟ್ಟಿಸುವ ಸಂಪ್ರದಾಯವಾದದ ನೇಣಿನ ಕುಣಿಕೆಯಲ್ಲಿ ಬಿಗಿದುಕೊಂಡಿರುವ ಸಮಾಜವನ್ನ ಒಪ್ಪಲಾರದು. ಮತ್ತೊಂದೆಡೆ ಸಂಪ್ರದಾಯವಾದಿಗಳು ಜಾಹೀರಾತು ಎತ್ತಿಹಿಡಿಯುವ ಎಲ್ಲೇ ಮೀರಿದ ಒಲವು , ಆಯ್ಕೆ ಸ್ವತಂತ್ರ, ಸಬಲಗೊಂಡ ಹೆಣ್ಣನ್ನ ಎಂದಿಗೂ ಆಲಂಗಿಸಲಾರರು. “ಲವ್ ಜಿಹಾದ್” ನೆಪದಲ್ಲಿ ನಡೆಯುವ ದಾಳಿಗಳು, ವ್ಯಕ್ತಿಯ ಆಯ್ಕೆ ಸ್ವತಂತ್ರವನ್ನ ಮುಟುಕುಗೊಳಿಸುವ, ಪ್ರೇಮಿಗಳಲ್ಲಿ ಆತಂಕ ಮೂಡಿಸಿ ಧರ್ಮ/ಜಾತಿ ಕಾಯ್ದುಕೊಳ್ಳುವ, ಹೆಣ್ಣನ್ನು ಪುರುಷ ಪ್ರಾಧಾನ್ಯ ಸಂಪ್ರದಾಯವೆಂಬ ಗೂಟಕ್ಕೆ ಮತ್ತೆ ಕಟ್ಟಿಹಾಕುವ ಪ್ರಯತ್ನಗಳು ಮಾತ್ರ.

ಹಳ್ಳಿಗಳು ಪಟ್ಟಣವಾಗುತ್ತಿದಂತೆ, ನಗರಗಳು ಮಹಾನಗರಗಳಾಗಿ ಬೆಳೆದಂತೆ, ನಮ್ಮ ದೇಶದ ಹಳೆಯ ಸಂಪ್ರದಾಯಗಳು ಮಾಸಿ, ಸಂಪ್ರದಾಯವಾದಿಗಳು ಸಾಧಿಸಿದ್ದ ಸಮುದಾಯದ ಮೇಲಿನ ಹಿಡಿತ ವೇಗವಾಗಿ ಕ್ಷೀಣಿಸುತ್ತಿದೆ. ಇಂದಿನ ಭಾರತೀಯ ಸಾಮಾಜಿಕ ವಾಸ್ತವ ನಿರಂತರ ಬದಲಾಗುತ್ತಿದೆ. ನಾವು ಪ್ರತಿದಿನ ಬಳಸುವ ಮೆಟ್ರೋ, ಬಸ್ಸು, ಕೆಲಸ ಮಾಡುವ ಜಾಗಗಳು, ತಿನ್ನುವ ಹೋಟೆಲ್ಗಳು, ಶಿಕ್ಷಣ ಸಂಸ್ಥೆಗಳು, ಶಾಪಿಂಗ್ ಮಾಲ್ಗಳೆಲ್ಲಾ ಅಂತರ ಜಾತಿ, ಅಂತರ ಧರ್ಮಿಯರನ್ನ ಮುಖಾಮುಖಿಯಾಗಿಸುತ್ತದೆ. ಮುಖಾಮುಖಿ ಸಂವಾದದ ಜೊತೆಗೆ ವರ್ಚುಯಲ್ ಸಂವಹನ ಮಾಧ್ಯಮಗಳು ಹೆಚ್ಚಿನ ಮಾತುಕತೆಗೆ ಅನುಕೂಲ ಮಾಡಿಕೊಡುತ್ತದೆ, ಹಲವು ಬಾರಿ ಈ ಮಾತುಕತೆಗಳು, ಗಂಭೀರ ಚರ್ಚೆಗಳಾಗಿ, ವಿವಾದ ಮನಸ್ತಾಪಗಳಲ್ಲಿ ಕೊನೆಯಾದರೆ, ಕೆಲ ಬಾರಿ ಪ್ರೀತಿ ಚಿಗುರೊಡೆಯುತ್ತದೆ. ಹೀಗೆ ಹುಟ್ಟಿದ ಪ್ರೀತಿಗೆ ಧರ್ಮ, ಜಾತಿಗಳ ಹಂಗಿರುವುದಿಲ್ಲ, ಅಸಹಿಷ್ಣ ಸಂಪ್ರದಾಯವಾದಿಗಳ ಭಯವಿರುವುದಿಲ್ಲ. No society has ever managed to completely control the emotional life of individuals. ಜಗತ್ತಿನ ಯಾವ ಸಮಾಜಕ್ಕೂ ವ್ಯಕ್ತಿಗಳ ಭಾವನಾತ್ಮಕ ಬದುಕಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಲಾಗಿಲ್ಲ. ಜಾಹೀರಾತು, ಚಲನಚಿತ್ರಗಳು ಕೂಡ ಹಿರಿಯರು ನಿಶ್ಚಯಿಸಿದ ಮದುವೆಗಳ ಬಗ್ಗೆ ಪ್ರತಿಪ್ರವಾಹ ಹುಟ್ಟಿಹಾಕಿದೆ, ಎಲ್ಲ ಯುವಕರ ಮನದಲ್ಲೂ ತನ್ನಿಷ್ಟದ ಗೆಳೆಯನ ಸಂಗಡ ಪ್ರೀತಿಯ ಅಲೆಯಲ್ಲಿ ತೇಲಿ ಅವನನ್ನೇ ತನ್ನ ಜೀವನಸಂಗಾತಿ ಮಾಡಿಕೊಳ್ಳುವ ಆಸೆ ಅರಳಿಸಿದೆ.

ಇದರ ಜೊತೆಗೆ ಮಹಾನಗರಗಳಲ್ಲಿ ನೆಲೆಸಿರುವ ಹಿಂದಿನ ಪೀಳಿಗೆಯವರು ಕೂಡ ತಮ್ಮ ಮೊಂಡುತನವನ್ನ ಬಿಟ್ಟಿದ್ದಾರೆ. ಸಾಕಷ್ಟು ಕಡೆಯಲ್ಲಿ ಮೊದಲಿದ್ದ ಸಾಮಾಜಿಕ ಬಹಿಷ್ಕಾರ, ಅಸಮ್ಮತಿ, ಅಸಹನೆ ನಿಧಾನವಾಗಿ ಒಪ್ಪಿಗೆ, ಕ್ಷಮೆ, ಅನುಕೂಲತೆ, ಸಾಮರಸ್ಯವಾಗಿ ಬದಲಾಗಿದೆ. ಮೊಮ್ಮಕ್ಕಳ ಮುದ್ದು ನಗು ನೋಡಿದ ಮೇಲಂತೂ ಹಳಬರ ಹಠ ಅಹಂಕಾರ ಕರಗಿ ಹೋಗುತ್ತದೆ. (ಅಚಿಬೆ ಬರೆದ ಪುಟ್ಟ ಕತೆ – Marriage is a private affair ನೆನಪಾಯಿತು) ಒಂದು ಹಂತ ದಾಟಿದ ನಂತರ ತಮ್ಮ ಅಭಿಪ್ರಾಯವನ್ನ ವಯಸ್ಸಿಗೆ ಬಂದ ಮಕ್ಕಳ ಮೇಲೆ ಹೇರಲಾಗುವುದಿಲ್ಲ, ಅವರು ಒಪ್ಪಿದ ಸಂಗಾತಿಯನ್ನ ನಿರಾಕರಿಸಲಾಗುವುದಿಲ್ಲ ಎಂದು ಅರಿತಿದ್ದಾರೆ.

ಸಮಾಜದಲ್ಲಾಗುತ್ತಿರುವ ಮೇಲಿನ ಬದಲಾವಣೆಗಳನ್ನ ಅಲ್ಲಗಳೆಯುವುದು ಒಂದೆಡೆ ಮೂರ್ಖತನದ ಪ್ರತೀಕವಾದರೆ ಮತ್ತೊಂದೆಡೆ ಸಂಪ್ರದಾಯ, ಕಟ್ಟಳೆಗಳೇ ಪ್ರೀತಿಗಿಂತ ಮಿಗಿಲಾದವು ಎಂಬ ಮೂಲಭೂತವಾದಿಗಳ ಬೊಬ್ಬೆ ಬದಲಾಯಿಸಲಾಗದ ಹೃದಯಹೀನ ಮತಾಂಧರನ್ನ ಪ್ರತಿಫಲಿಸುತ್ತದೆ. ನಂಬಿದ ಟೊಳ್ಳು ಸಿದ್ದಾಂತಗಳಿಗೆ ಜೋತು ಬೀಳುವ ಮತಾಂಧತೆ ಹವ್ಯಾಸಿ ಹಗೆ ಬಿತ್ತುವವರಲ್ಲಿ ಸರ್ವೇ ಸಾಮಾನ್ಯವಾದರೂ ಹಗೆತನ ಭಾರತದ ಬಹುಪಾಲು ಪ್ರಜೆಗಳ ಗುಣವಲ್ಲ.

ಭಾರತದಲ್ಲಿ ಅಂತರ ಧರ್ಮಿಯ ಮದುವೆಗಳ ಕುರಿತಾಗಿ ಸಾಮಾಜಿಕ ಅಸಹಿಷ್ಣತೆಯಿದೆ ನಿಜ ಆದರೆ ಟ್ರೋಲ್ ಸೇನೆ ಬಿಂಬಿಸುವ ಮಟ್ಟಕ್ಕೆ ಈ ಅಸಹಿಷ್ಣತೆಯಿಲ್ಲ. ಹಾಗಾದರೆ ಈ ಅಸಹಿಷ್ಣತೆ, ಅಪರಿಮಿತ ದ್ವೇಷ ಹುಟ್ಟುವುದಾದರೂ ಎಲ್ಲಿ? ಹಳೆಯ ಎಲೀಟ್ಗಳನ್ನ ಸ್ಥಳಾಂತರಿಸಿ ಹಣ, ಅಧಿಕಾರ ಅನುಭವಿಸಬೇಕೆಂಬ ಹೆಬ್ಬಯಕೆಯಲ್ಲಿರುವ ಭಾರತದ ಹೊಸ ಪವರ್ ಎಲೀಟ್ಗಳೇ ಈ ದ್ವೇಷ ಬಿತ್ತುತ್ತಿರುವವರು.

ಬಹುಸಂಖ್ಯಾತರೊಳಗಿದ್ದುಕೊಂಡೆ ದ್ವೇಷ ಬಿತ್ತುವ ಅಲ್ಪಸಂಖ್ಯಾತರಾದ ಈ ಎಲೀಟ್ಗಳು, ದ್ವೇಷ ಸಾಮೂಹಿಕವಾದುದೆಂದು ವಾದಿಸುತ್ತಾರಷ್ಟೆ. ಜನ ಸಮೂಹ ನಮ್ಮೊಡನೆ ಇದೆಯೆಂದು ಪದೇ ಪದೇ ಹೇಳುತ್ತಾ ಜನರನ್ನ ಪ್ರಚೋದಿಸಿ ಸಾಮಾಜಿಕ ಹಾಗು ರಾಜಕೀಯ ಲಾಭ ತಮ್ಮದಾಗಿಸಿಕೊಳ್ಳುತ್ತಾರೆ. ಸಂಕುಚಿತ ಪಂಥೀಯ ನೋಟವನ್ನ ಜನಾಭಿಪ್ರಾಯವೆಂದು ಹೇಳಿಬಿಡುತ್ತಾರೆ. ದ್ವೇಷದ ಹಿಂದೆ ಕಾರ್ಪೊರೇಟ್ ಹಿತಾಸಕ್ತಿಗಳು ಕೂಡ ಕೆಲಸ ಮಾಡುತ್ತವೆ ಎಂಬುದನ್ನ ಬಿಡಿಸಿಹೇಳಬೇಕಿಲ್ಲ.In reality, this wrath and hate is manufactured by a predominantly male-dominated discourse of new elites with a surfeit of power and money. Love Jihad is part of this discourse.

ಧೃವೀಕರಣದ ಕಾಲದಲ್ಲಿ ಇಂತಹ ಕಂಟೆಂಟ್ ಒಪ್ಪಿ ಜಾಹೀರಾತಿನ ಪ್ರಸಾರಕ್ಕೆ ಮುಂದಾದ ತನಿಷ್ಕ ಧೈರ್ಯ ಮೆಚ್ಚುವಂತದ್ದು. ಜಾಹೀರಾತು ಸೌಹಾರ್ದತೆ ಮತ್ತು ಪ್ರೀತಿಗೆ ಆದ್ಯತೆ ನೀಡಿತ್ತು. ಆದರೆ ಹಸಿದ ತೋಳಗಳಂತೆ ಬಯಲಿಗಿಳಿದ ಎಲೆಟ್ರಾನಿಕ್ ಮತ್ತು ಸೋಶಿಯಲ್ ಮೀಡಿಯಾಗಳು ಕೆಲವೇ ದಿನಗಳಲ್ಲಿ ಜಾಹೀರಾತನ್ನ ಬ್ಯಾನ್ ಮಾಡಿಸಿದ್ದವು. ಪ್ರಭುತ್ವ ಸುಮ್ಮನಿದ್ದು ಈ ಮೂಲಭೂತವಾದಿಗಳಿಗೆ ಮೌನ ಸಮ್ಮತಿ ಸೂಚಿಸಿತ್ತು. ಪ್ರಭುತ್ವದ ಮೌನ ನಿರೀಕ್ಷಿತ ಪ್ರತಿಕ್ರಿಯೇ ಆಗಿತ್ತು.

Much is at stake in India today. ಇಲ್ಲಿ ಬರಿಯ ಸೌಹಾರ್ದತೆಗಷ್ಟೆಯಲ್ಲದೆ ಲಿಂಗ ಸಮಾನತೆ, ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಬೇಕಿದೆ. “ಸಹಜ ಸಾಮಾಜಿಕ ಬದಲಾವಣೆಗಳನ್ನ ಭಾರತೀಯರು ವಿರೋಧಿಸುತ್ತಾರೆ, ಎಲ್ಲಾ ಹಿಂದೂಗಳು ಮುಸ್ಲಿಂ ದ್ವೇಷಿಗಳು” ಎಂಬ ಮಾತಗಳಲ್ಲಿ ಯಾವುದೇ ಹುರುಳಿಲ್ಲ. ಜನ ಸಾಮಾನ್ಯರು ಒಟ್ಟಿಗೆ, ಸಾಮರಸ್ಯದಿಂದ ಬದುಕುವ ಕನಸು ಕಾಣುತ್ತಾರೆ ಆದರೆ ದ್ವೇಷ ಉಗುಳುವ ಟ್ರೋಲ್ ಸೇನೆ ಮತ್ತು ಆ ಸಂದೇಶವನ್ನ ಮೂಲೆ ಮೂಲೆಗೆ ಕಳುಹಿಸುವ ಮಂತಾಂಧರ ಹಿಂಡು ಭಾರತದ ಮುಖ ಛಾಯೆಯನ್ನು ಬದಲಾಯಿಸಿಯೇ ತೀರುತ್ತೇವೆಂದು ಪಣ ತೊಟ್ಟಿದ್ದಾರೆ…

(ಸ್ಪೂರ್ತಿ – ರಾಜೀವ್ ಭಾರ್ಗವ ಬರೆದ ಲೇಖನ)

‍ಲೇಖಕರು avadhi

May 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: