ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ದ್ರೌಪದಿಯ ಸೀರೆಗೆ ದುಶ್ಶಾಸನ ಕೈ ಹಾಕಿದಾಗಲೇ ಗಾಂಧಾರಿ ಎದ್ದಿದ್ದರೆ ?..’ – ಸ್ವರ್ಣ ಎನ್ ಪಿ

ಹೆಂಗರುಳಿಗೆ ಕೆಲ ಪ್ರಶ್ನೆಗಳು

– ಸ್ವರ್ಣ ಎನ್ ಪಿ

ಬಹುಶಃ 1997 ಇರಬೇಕು ,ನಾಲ್ಕು ಜನ ಪ್ರತಿಷ್ಟಿತರ ಮಕ್ಕಳು ಸೇರಿ ದೆಹಲಿಯಲ್ಲಿ ಮೊನ್ನೆ ನಡೆದ ಕುಕೃತ್ಯವನ್ನೇ ಮಾಡಿದ್ದರು. ಸುಂದರವಾಗಿದ್ದ ಹುಡುಗಿಯೊಬ್ಬಳ ಸ್ನೇಹಿತೆಯ ಮುಖಾಂತರ ಹುಡುಗಿಯನ್ನ ಜಲಪಾತದ ಪ್ರವಾಸಕ್ಕೆಂದು ಕರೆದೊಯ್ದು ನಂತರ ಕೊಂದಿದ್ದರು. ಸಣ್ಣ ಊರಿನಲ್ಲಿ ಗುಲ್ಲೋ ಗುಲ್ಲು. ಆ ವಾರದ ಟ್ಯಾಬ್ಲಾಯ್ಡ್ ಒಂದು ಇದನ್ನ ಮುಖ್ಯ ಸಮಾಚಾರ ಮಾಡಿತು ಆದರೆ ಪತ್ರಿಕೆಯ ಒಂದೂ ಸಂಚಿಕೆ ಊರಿಗೆ ತಲುಪಲಿಲ್ಲ.
ನಮ್ಮ ಜೊತೆ ಓದುತ್ತಿದ್ದ ಒಬ್ಬನ ತಂಗಿ ಎಷ್ಟೋ ದಿನ ಕಾಲೇಜು, ಪಾಠದ ಮನೆ ಎಲ್ಲೂ ಕಾಣಲಿಲ್ಲ. ನಂತರ ಎಲ್ಲ ಮಾಮೂಲು. ಆಗ ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದ ನಮಗೆ ಹೆಣ್ಣೆಂಬ ಕಾರಣಕ್ಕೆ ಹೆದರಿಕೆಯಾದ ಬಹುಶಃ ಮೊದಲ ಪ್ರಸಂಗವಿದು ಕಷ್ಟ ಪಟ್ಟು ಸಂಪಾದಿಸಿದ ಟ್ಯಾಬ್ಲಾಯ್ಡ್ನಲ್ಲಿದ್ದ ಹುಡುಗಿಯ ಮುದ್ದಾದ ಕಪ್ಪು ಬಿಳುಪು ಚಿತ್ರ ಇಂದೂ ಕಣ್ಣಿಂದ ಮರೆಯಾಗಿಲ್ಲ.
ಕೆಲ ವರ್ಷದ ನಂತರ ನಾಲ್ವರಲ್ಲಿ ಒಬ್ಬ ಹುಡುಗನಿಗೆ ಮದುವೆ ನಿಶ್ಚಯವಾಯಿತು, ನಿಶ್ಚಿತಾರ್ಥಕ್ಕೆ ಹೋಗುವಾಗ ಅಪಘಾತವಾಗಿ ಅವನು ಮತ್ತು ಜೊತೆಯಲ್ಲಿದ್ದ ಅವನ ತಮ್ಮಂದಿರೂ ಪ್ರಾಣ ಬಿಟ್ಟರು. ಒಂದೇ ದಿನ ಆ ಮನೆಯ ಮೂವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದರು. ಹುಡುಗಿಯ ತಂದೆ ತಾಯಿಗಳ ಶಾಪ ಅಂತ ಮತ್ತೆ ಊರು ಮಾತಾಡಿತು. ಸತ್ತ ಒಬ್ಬನನ್ನುಳಿದು ಇನ್ನೆಲ್ಲರೂ ಈಗ ಚೆನ್ನಾಗೇ ಇರಬಹುದು.
ಈ ಪ್ರಕರಣವನ್ನು ನೆನೆಸಿಕೊಂಡರೆ ಹೆಣ್ಣಾದ ಕೆಲವರಿಗೆ ಕೆಲ ಪ್ರಶ್ನೆಗಳಿವೆ (ಗಂಡಸರ ಪ್ರಶ್ನೆಗಳು ನಮಗೆ ಗೊತ್ತಿಲ್ಲ) : ಹುಡುಗರು ಇಂಥದಕ್ಕೆ ಕರೆದಿರುವುದು ಎಂದು ಗೊತ್ತಿದ್ದೂ ಅವಳನ್ನ ಆ ಜಾಗಕ್ಕೆ ಕರೆದೊಯ್ದಳಲ್ಲ ಆ ಹುಡುಗಿಯ ಗೆಳತಿ ಅವಳದು ಹೆಂಗರುಳೇ ? ಮಗ ಹೆಣ್ಣೊಬ್ಬಳ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದಾಗಲೂ ಮಾತಾಡದೇ ಉಳಿದ ತಾಯಿಯದು ಹೆಂಗರುಳೇ ? ಒಡ ಹುಟ್ಟಿ, ತನ್ನ ರಕ್ಷಣೆಯ ಭಾರ ಹೊತ್ತು ಇನ್ನೊಬ್ಬಳ ಬದುಕನ್ನ ಕೊನೆಗಾಣಿಸಿದ ಎಂದ ಮೇಲೂ ಅವನನ್ನ ಅಣ್ಣ ಎಂದು ಕರೆದಳಲ್ಲ ಅವನ ತಂಗಿ, ಅವಳದು ಹೆಂಗರುಳೇ ? ಇವನಿಂಥವನು ಎಂದೂ ಗೊತ್ತಿದ್ದೂ ಮದುವೆಯಾಗಲು ಒಪ್ಪಿದ್ದಳಲ್ಲ ಆ ಹುಡುಗಿ ಅವಳದು ಹೆಂಗರುಳೇ ? ದ್ರೌಪದಿಯ ಸೀರೆಗೆ ದುಶ್ಶಾಸನ ಕೈ ಹಾಕಿದಾಗಲೇ ಗಾಂಧಾರಿ ಎದ್ದಿದ್ದರೆ ?
ಹೆಣ್ಣು ಮಕ್ಕಳಿಗೆ ಆತ್ಮ ರಕ್ಷಣೆಯ ಪಾಠ ಹೇಳಿಕೊಡಬೇಕು ಸರಿ, ಜೊತೆಗೆ ಹೇಳಬೇಕಾದ್ದು ಶೀಲ ವೆಂಬುದು ಬರೀ ದೇಹಕ್ಕೆ ಸಂಬಂಧಿಸಿದ್ದಲ್ಲ , ಹೆಣ್ಣಿನ ರಕ್ಷಣೆ ಅರ್ಧ ಅವಳ ಹೊಣೆಯಾದರೆ ಅರ್ಧ ಹೊಣೆ ಸಮಾಜದ್ದು. ಜೀವಿಗಳ ಮೇಲೆ ನಡೆಯುವ ಪ್ರತೀ ದೌರ್ಜನ್ಯಕ್ಕೂ ನಾಗರೀಕ ಸಮಾಜ ತಲೆತಗ್ಗಿಸಬೇಕು , ತಗ್ಗಿಸದಿದ್ದರೆ ಅದು ಸಮಾಜ ಅವನತಿಯತ್ತ ಸಾಗುತ್ತಿರುವ ಮುಖ್ಯ ಲಕ್ಷಣ.
 

‍ಲೇಖಕರು G

3 January, 2013

10 Comments

  1. D.Ravivarma

    ಹೆಣ್ಣು ಮಕ್ಕಳಿಗೆ ಆತ್ಮ ರಕ್ಷಣೆಯ ಪಾಠ ಹೇಳಿಕೊಡಬೇಕು ಸರಿ, ಜೊತೆಗೆ ಹೇಳಬೇಕಾದ್ದು ಶೀಲ ವೆಂಬುದು ಬರೀ ದೇಹಕ್ಕೆ ಸಂಬಂಧಿಸಿದ್ದಲ್ಲ , ಹೆಣ್ಣಿನ ರಕ್ಷಣೆ ಅರ್ಧ ಅವಳ ಹೊಣೆಯಾದರೆ ಅರ್ಧ ಹೊಣೆ ಸಮಾಜದ್ದು. ಜೀವಿಗಳ ಮೇಲೆ ನಡೆಯುವ ಪ್ರತೀ ದೌರ್ಜನ್ಯಕ್ಕೂ ನಾಗರೀಕ ಸಮಾಜ ತಲೆತಗ್ಗಿಸಬೇಕು , ತಗ್ಗಿಸದಿದ್ದರೆ ಅದು ಸಮಾಜ ಅವನತಿಯತ್ತ ಸಾಗುತ್ತಿರುವ ಮುಖ್ಯ ಲಕ್ಷಣ.
    haudu idu appata satya….

  2. Badarinath Palavalli

    ನಾನು ಬ್ಲಾಗ್ ಲೋಕದಲ್ಲಿ ಅತ್ಯಂತ ಮೆಚ್ಚುಗೆ ನೋಟದಿಂದ ನೋಡುವ ಬರಹಗಾರ್ತಿ ಸ್ವರ್ಣ ಅವರು.
    ಇಂದು ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಮಹಿಳೆಯರ ಮೇಲೆನ ದೌರ್ಜನ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಇಲ್ಲಿ ಚಿತ್ರಿಸಿಕೊಟ್ಟಿದ್ದಾರೆ.
    ನಾಗರೀಕ ಸಮಾಜ ಎಂದು ಸುಧಾರಿಸುವುದೋ?

  3. ಜಿ,ಎನ್,ನಾಗರಾಜ್

    ‘ಅವಧಿ’ಯಲ್ಲಿ ದೈಹಿಕ ರೇಪ್-ಸಾಮಾಜಿಕ ರೇಪ್ ಎಂಬ ಎರಡು ಪರಿಕಲ್ಪನೆಗಳನ್ನು ಲೇಖಕಿಯೊಬ್ಬರು ಸರಿಯಾಗಿಯೇ ರೂಪಿಸಿದ್ದಾರೆ. ದೈಹಿಕ ರೇಪ್ ಮಾಡುವ ಮಹಿಳೆಯನ್ನು ಭೋಗವಸ್ತುವಾಗಿ ಮಾತ್ರ ಕಾಣುವ ಕ್ರೂರಿ ಪುರುಷ.ಆದರೆ ಸಾಮಾಜಿಕ ರೇಪ್ ಅನ್ನು ಪುರುಷರು,ಮಹಿಳೆಯರೂ ಕೂಡಿ ಮಾಡುತ್ತಾರೆ.ಅದರಲ್ಲಿ ಮಹಿಳೆಯರ ಪಾತ್ರವೇ ಹೆಚ್ಚು ಎನ್ನಬಹುದು. ಇದಕ್ಕೆ ಕಾರಣ ಮಹಿಳೆಯರ ಮನಸ್ಸಿನಲ್ಲಿ ತುಂಬಿಕೊಂಡಿರುವ ಪುರುಷ ಪ್ರಾಧಾನ್ಯತೆಯ ಮೌಲ್ಯಗಳು. ಹೀಗೆ ಪುರುಷ ಪ್ರಾಧಾನ್ಯವನ್ನು ಸ್ಥಾಪಿಸಿದ ಪಾಳೇಯಗಾರೀ ಸಮಾಜದ ರಚನೆ,ಅದರ ಹಿಡಿತ ಹೊಂದಿದ್ದ ಪಟ್ಟಭದ್ರ ಹಿತಗಳು ಎಂಬುದನ್ನು ಮರೆಯದಿರೋಣ

  4. ಸುದೀಪ್.ಬಿ.ಎಸ್

    ‘ಶೀಲ’ ಮತ್ತು ಅದರ ರಕ್ಪಣೆಯ ಕಲ್ಪನೆ ಪುರುಷ ಪ್ರಧಾನ ವ್ಯವಸ್ಥೆಯ ತಂತ್ರವೆನ್ನುತ್ತಾರೆ ಸ್ತ್ರೀವಾದಿಗಳು. ಇದಕ್ಕೆ ಏನು ಹೇಳುವುದು?

  5. Mohan V Kollegal

    ಮೊದಲನೆಯದಾಗಿ ನೀವು ಹೇಳಿದಂತೆ ಇಂತಹ ಅತ್ಯಾಚಾರಗಳು ಅನೇಕ ಗಲ್ಲಿಗಳಲ್ಲಿ ನಡೆದಿವೆ, ನಡೆಯುತ್ತಿವೆ. ಅಷ್ಟು ದೊಡ್ಡ ಸುದ್ದಿಯಾಗಲು ಅದು ದೆಹಲಿಯಲ್ಲಿ ನಡೆದಿಲ್ಲ! ದೈಹಿಕ ಅತ್ಯಾಚಾರವಲ್ಲದೇ ನಾಗರಾಜಣ್ಣನವರು ಹೇಳಿದಂತೆ ಸಾಮಾಜಿಕ ಅತ್ಯಾಚಾರಗಳು ಹೆಚ್ಚಿವೆ. ಎಷ್ಟೋ ಕಡೆ ಮದುವೆಯೆಂಬುದೇ ಇಷ್ಟಕ್ಕನುಗುಣವಾಗಿ ನಡೆಯದ ಅತ್ಯಾಚಾರವಾಗಿದೆ. ಎಷ್ಟೋ ಹೆಣ್ಣು ಮಕ್ಕಳು ಯಾರನ್ನೋ ಇಷ್ಟಪಟ್ಟು ಇನ್ನಾರ ತೃಷೆಗೋ ಯಂತ್ರವಾಗಿ ಮಾನಸಿಕವಾಗಿ ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ. ಅಲ್ಲಿ ಕೇವಲ ಪುರುಷನ ತಪ್ಪಿರುವುದಿಲ್ಲ, ನೀವು ಉಲ್ಲೇಖಿಸಿದಂತೆ ಒಂದು ಗುಂಪಿನ ತಪ್ಪಿರುತ್ತದೆ, ಹೆಚ್ಚಾಗಿ ಮಹಿಳೆಯರೇ ಗೌಪ್ಯತೆ ಕಾಪಾಡಿಕೊಳ್ಳುವ ನೆಪದಲ್ಲಿ ಈ ಕುಕೃತ್ಯ ಮಾಡಿರುತ್ತಾರೆ. ಆದುದರಿಂದ ‘ಅತ್ಯಾಚಾರ’ ಎನ್ನುವ ಪದದ ಅರ್ಥವನ್ನು ವಿಸ್ತರಿಸಿ ಎಲ್ಲಾ ಕೋನಗಳಿಂದಲೂ ನೋಡುವುದನ್ನು ಎಲ್ಲರೂ ಕಲಿಯಬೇಕು. ಆ ನಿಟ್ಟಿನಲ್ಲಿ ಸಕಾಲಿಕ ಲೇಖನ…

  6. Mahesh

    ಸುದೀಪ್ ರವರೇ ಸ್ತ್ರೀವಾದಿಗಳೇನು? ಎಲ್ಲರಿಗೂ ಗೊತ್ತಾಗುವಂತಹ ಸರಳ ಸತ್ಯ ಅದು. ಹೆಣ್ಣಿನ ಶೀಲವನ್ನು ದೈವತ್ವಕ್ಕೇರಿಸಿ ದೈಹಿಕ ರೇಪಿಸ್ಟಗಳು ಮತ್ತು ಸಾಮಾಜಿಕ ರೇಪಿಸ್ಟಗಳ ಮೂಲಕ ಸುಲಭವಾಗಿ ನಿಯಂತ್ರಿಸುವ ಸಾಧನ ಅದು.

  7. chalam

    ಅನಿಸಿಕೆ ಒಂದು-ಅತ್ಯಾಚಾರ ತುಂಬಾ ಜಾಸ್ತಿಯಾಗಿದೆ.ಯಾಕೆಂದರೆ ಮಾದ್ಯಮಗಳಲೆಲ್ಲಾ ಇದೇ ಸುದ್ದಿ.
    ಅನಿಸಿಕೆ ಎರಡು-ದೆಹಲಿಯಲ್ಲಿ ಅದೂ ಮೆಡಿಕಲ್ ವಿದ್ಯಾಥಿ೵ನಿ ಮೇಲೆ ನಡೆದ ಅತ್ಯಾಚಾರದಿಂದಾಗಿ ದೇಶದಲ್ಲಿ ಅತ್ಯಾಚಾರ ಹೆಚ್ಚಾಗಿದೆ.
    ಹೀಗೆ ಹೇಳಿದ ಗೆಳೆಯನ ಅನಿಸಿಕೆ ಕೊಂಚ ಉತ್ಪ್ರೇಕ್ಷೆ ಅನಿಸಿತು.ಪ್ರತಿಭಟನೆ,ಮಾದ್ಯಮಗಳ ಕಾಳಜಿ ಇವೆಲ್ಲವೂ ಸರಿ ಆದರೆ ಅತ್ಯಾಚಾರದ ವಿರುದ್ದ ಸರಿಯಾದ ಜನಾಭಿಪ್ರಾಯ ಮೂಡಿಸಲು ಸಫಲವಾಗುತ್ತಿಲ್ಲವೇನೋ ಅನಿಸುತ್ತಿದೆ.ಯಾಕೆಂದರೆ ಹೀಗೆ ಕೇಳಿದ ಗೆಳೆಯನಂತವರದು ಸಾಮಾನ್ಯ ಅನಿಸಿಕೆಯಾದರೂ ಅಂತಹವರು ಬಹುಸಂಖ್ಯೆಯಲ್ಲಿರುತ್ತಾರೆ.
    ಚಚೆ೵,ಅಭಿಪ್ರಾಯಗಳಿಗಿಂತಲೂ ಪರಿಹಾರ ಮುಖ್ಯವಲ್ಲವೇ?ಮಾತನಾಡುತ್ತಾ ಯಡಿಯೂರಪ್ಪ ಸಕಾ೵ರ ಬೀಳಿಸಿದ ನಂತರ ಅತ್ಯಾಚಾರ ಮರೆತು ಹೋಗಿಬಿಡಬಹುದು.

  8. ಭವ್ಯ ಎಲ್ ಹಳ್ಳಿ

    ಹೆಣ್ಣು ಮಕ್ಕಳಿಗೆ ಆತ್ಮ ರಕ್ಷಣೆಯ ಪಾಠ ಹೇಳಿಕೊಡಬೇಕು ಸರಿ, ಜೊತೆಗೆ ಹೇಳಬೇಕಾದ್ದು ಶೀಲ ವೆಂಬುದು ಬರೀ ದೇಹಕ್ಕೆ ಸಂಬಂಧಿಸಿದ್ದಲ್ಲ , ಹೆಣ್ಣಿನ ರಕ್ಷಣೆ ಅರ್ಧ ಅವಳ ಹೊಣೆಯಾದರೆ ಅರ್ಧ ಹೊಣೆ ಸಮಾಜದ್ದು. ಜೀವಿಗಳ ಮೇಲೆ ನಡೆಯುವ ಪ್ರತೀ ದೌರ್ಜನ್ಯಕ್ಕೂ ನಾಗರೀಕ ಸಮಾಜ ತಲೆತಗ್ಗಿಸಬೇಕು ,ಎಂಬುದೇನೂ ಸರಿ ಆತ್ಮ ರಕ್ಷಣೆಯ ಪಾಠ ಹೇಳಿಕೊಡಬೇಕಿರುವುದು ಹೆಣ್ಣು ಮಕ್ಕಳಿಗೆ ಮಾತ್ರವೇ,ಗಂಡು ಮಕ್ಕಳಿಗೆ ಬೇಡವೇ ಸಮಾಜದ ಭಾಗವಾಗಿರುವ ಇವರಿಗೆ ಸಮಾಜದ ಹೊಣೆ ಎಂದಾಕ್ಷಣ ನಾವಲ್ಲವೆಂದೆ ಹೆಚ್ಚಾಗಿ ಭಾವಿಸುತ್ತಾರೆ.ಅತ್ಯಾಚಾರವಾದ ಮೇಲೆ ಯಾವ ಕಾನೂನುಗಳಿವೆ. ಅಥವಾ ಯಾವ ಯಾವ ಕಾನೂನುಗಳು ಇರಬೇಕು ಎಂಬುದನ್ನು ಯೋಚಿಸುವ ಬದಲು ಅತ್ಯಾವಾಗದಂತೆ ನೊಡಿಕೊಳ್ಳವು ಹೇಗೆ ಎಂಬುದನ್ನು ನಾವೆಲ್ಲಾ ಯೋಚಿಸಬೇಕಿದೆ.

  9. Utham danihalli

    Hennina sheela kevala dhehakke sambandisadala adhu manasige kuda sambanda pattidhu
    Jothege nimma prasnegallu sariyagiye edhe yla thayandiru akka thangiyaru jarutharagale beku

  10. Kiran Shetty

    ಹೌದು.. ಆವತ್ತು ಮಾತೆ ಗಾಂಧಾರಿ ಎದ್ದು ಬಂದು ತನ್ನ ಮಗ ದುಶ್ಯಾಸನನ ಕಪಾಳಕ್ಕೆ ಹೊಡೆಯಬೇಕಿತ್ತು..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading