ಪ್ರವರ ಕೊಟ್ಟೂರು
ಹಾಳೆ ಮಡಿಚಿ
ಬೆರಳ ಉಗುರಿಂದ ಗೀರಿ
ಚೆಂದದ ದೋಣಿಯಾಗಿದೆ,
ಬೆನ್ನ ಮೇಲೆಯಾದರೋ ಅದು ಕೊರೆದು ನಿಂತ
ಕಾಲುವೆ,
ಉಗುರ ಸಂದುಗಳಲ್ಲಿ ಬೆನ್ನಿಂದ ಹೆಕ್ಕಿದ
ಗುಟುಕು ಚರ್ಮ,
ಕಿಡಕಿಯ ಮಂದ ಬೆಳಕಿನ
ಕಟ್ಟಿನ ನಡುವೆ
ಆನಿಕೊಂಡು ಕಾಫಿ ಕಪ್ಪನ್ನು ಅಂಟಿ
-ಸುತ್ತಾಳೆ ತುಟಿಗೆ,
ಗಾಜಿನಿಂದ ಈಚೆಗೆ
ಹೊಸ್ತಿಲು ದಾಟದ ಗಾಳಿ
ತೇಲಲರಿಯದ ಮುಳುಗಲರಿಯದ
ದೋಣಿ
ತೋರು ಬೆರಳ ಚಾಚಿ
ತೇಲಬೇಕೆಂಬ ಒಂದೇ ಹಠಕ್ಕೆ, ದೋಣಿಯ ನೂಕುತ್ತಾಳೆ
ಮಗುವಂತೆ,
ಕಾಫಿ ಹೀರುವ ಸದ್ದು
ಕಿಡಕಿ ಗಾಜಿಗೆ ಬಡಿದು, ಬೀಳುತ್ತದೆ
ಸಣ್ಣ ದೀಪದ ಹುಳುವಿನಂತೆ
ಜೋರು ಮಳೆ ಹೊರಗೆ,
ತಾರಸಿಯಿಂದ ಬಿದ್ದ ನೀರು, ಅಂಗಳಕ್ಕೆ ನದಿ
-ಯಾಯ್ತು, ಬಣ್ಣ ತುಂಬಿಕೊಂಡ ಅದರದ್ದು
ಥೇಟು ಕಾಫಿ ಕಪ್ ನ ತಳದಲ್ಲುಳಿದ
ಕೊನೆ ಗುಟುಕಿನ ಅವ
-ತಾರ
ಕಾಫಿ ಖಾಲಿಯಾಗಿದೆ,
ದೋಣಿ ಹರಡಿ,
ಹಾಳೆಯಲ್ಲಿ ಮಳೆ ಪದ್ಯ ಬರೆಯುತ್ತಾಳೆ





0 Comments