ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೊರೆಗಳೆ.. ಉಳಿಸಿ ತಿನ್ನುವಷ್ಟು ಅನ್ನವನ್ನಾದರೂ ನಮ್ಮ ತಟ್ಟೆಗಳಲ್ಲೇ

ಕೇಶವ ರೆಡ್ಡಿ ಹಂದ್ರಾಳ

ದೊರೆಗಳೆ ,ದೊರೆಗಳೆ , ರಾಜ್ಯವನಾಳುವ ದೊರೆಗಳೆ,

ರಾಷ್ಟ್ರವನಾಳುವ ದೊರೆಗಳೆ, ನಮ್ಮ ಮೊರೆಯನೂ ಒಂದಿಷ್ಟು ಆಲಿಸಿ ಪಾಲಿಸಿ

ದೊರೆಗಳೇ ನಿಜ ನಾವು ನೀವು ಸಾಕಿದ ಕುರಿಗಳೇ ..‌.!
ನೀವು ಮಾತ್ರ ನಾವು ಹುಟ್ಟಿಸಿದ ನರಿ ತೋಳಗಳೇ….!!

ಚಿನ್ನದ ಗಟ್ಟಿಗಳನ್ನೆಲ್ಲ ಪೇರಿಸಿಕೊಳ್ಳಿ ನಿಮ್ಮ ಹಟ್ಟಿಗಳಲ್ಲೆ;
ಉಳಿಸಿ ತಿನ್ನುವಷ್ಟು ಅನ್ನವನ್ನಾದರೂ ನಮ್ಮ ತಟ್ಟೆಗಳಲ್ಲೆ.

ತುಂಬಿಸಿಕೊಳ್ಳಿ ಬೇಕಾದರೆ ನೀವೇ ನಿಮ್ಮ ಪೀಪಾಯಿಗಳ ತುಂಬಾ ಬ್ರಾಂದಿ ವಿಸ್ಕಿಬೀರು ;
ಉಳಿಸಿ ಬಾಯಾರಿಸಿಕೊಳ್ಳಲು ನಮಗೂ ಒಂದಿಷ್ಟು ನೀರು.

ನೀವೇ ನಡೆಸಿ ಕಾರುಬಾರು ನುಂಗಿ ಎಕರೆಗಟ್ಟಲೇ ಭೂಮಿ ,ಕೆರೆ ,ಕುಂಟೆ ,ಕಾಲುವೆ ,ಜಹಗೀರು;
ಬಿಟ್ಟು ಬಿಡಿ ನಮ್ಮ ತಲೆಯ ಮೇಲೂ ಒಂದು ಸಣ್ಣ ಸೂರು ಸಂರಕ್ಷಿಸಿಕೊಳ್ಳಲು ನಮ್ಮ ನರಸತ್ತ ಬೇರು.

ಹರಡಿ ಹಾಸಿಕೊಳ್ಳಿ ಭೂಮಿ ಆಕಾಶದಲ್ಲೆಲ್ಲ ನಿಮ್ಮ ಸುಖದ ಸುಪ್ಪತ್ತಿಗೆ;
ನಮಗೂ ಬಿಡಿ ಕಾಲು ಚಾಚುವಷ್ಟಾದರೂ ಹಾಸಿಕೊಳ್ಳಲು ಹಾಸಿಗೆ.
ಆಗಸಕ್ಕೆ ಬೇಕಾದರೂ ಹಾಕಿಕೊಳ್ಳಿ ಏಣಿ ; ನಮಗೆ ನಿರಂತರ ತೂತು ಬಿದ್ದ ದೋಣಿ.

ಒಲಿಸಿಕೊಳ್ಳಿ ನೀವೇ ಎಲ್ಲಾ ಪಾಂಡಿತ್ಯ . ಧರ್ಮ , ದೇವರು , ಕಾನೂನು- ಕಟ್ಟಳೆ ಸದಾ ನಿಮ್ಮ ವಶ;
ಆಗದಿದ್ದರೆ ಸಾಕು ನಮ್ಮೆದೆಗಳಲ್ಲಿ ಕಾರುಣ್ಯ, ಶ್ರಮ , ಕರ್ಮ,ಸಂಸ್ಕಾರ ಸರ್ವ ನಾಶ…

ಖಾಲಿ ಮಾಡಿ ನೀವೆ ಕುಡಿ ಕುಡಿದು ಎಲ್ಲಾ ಅಮೃತ ಕಲಶಗಳನು ..
ಆದರೆ , ಪ್ಲೀಸ್ – ಪ್ಲೀಸ್ ಕದಿಯಬೇಡಿ ಬದುಕು ಕಲಿಸುವ ನಮ್ಮ ವಿಷದ ಬಟ್ಟಲುಗಳನು….
ಸತ್ತರೂ ಬದುಕಿಸುವ ವಿಷಾದ ಕನಸುಗಳನು…

‍ಲೇಖಕರು Avadhi GK

22 February, 2018

2 Comments

  1. Anasuya M R

    ಸರ್, ನಿಮ್ಮ ಮೊರೆ ಎಲ್ಲರ ಮೊರೆಯೂ ಸಹಾ. ಇಂಥಾ
    ದೈನೇಸಿ ಪರಿಸ್ಥಿತಿ ಬಂದಿರುವುದು ನಮ್ಮ ದುರಂತವೇ ಸರಿ ಮನ ಮುಟ್ಟುವ ಅಭಿವ್ಯಕ್ತಿ

  2. Sangeeta Kalmane

    ಮನುಷ್ಯನ ಸಂಕಟ ಇನ್ನೂ ಯಾವ ಪರಿ ತಲುಪಬಹುದೊ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading