ದೈವಗಳೆಂದರೆ ಯಾರು? ದೇವರುಗಳೆಂದರೆ ಯಾರು ?

ಜಿ ಎನ್ ನಾಗರಾಜ್

ಕಾಂತಾರದ ಭೂತ ಕೋಲಗಳ ಚರ್ಚೆಯ ಹಿನ್ನೆಲೆಯಲ್ಲಿ..

ಮಾರಮ್ಮ, ಎಲ್ಲಮ್ಮ, ಕರಿಯಮ್ಮ, ಕೆಂಚಮ್ಮ, ಚೌಡಮ್ಮ,ಕಾಳಮ್ಮ ಮೊದಲಾದ ಸಾವಿರಾರು ಅಮ್ಮಗಳು ಮಾತ್ರ ಪೂಜಿತರಾಗಿದ್ದ ಕಾಲ ಮುಂದೆ ಸರಿದ ಮೇಲೆ ಅಂದಿನ ಸಮುದಾಯಗಳು ರಾಮ, ಕೃಷ್ಣ, ವಿಷ್ಣು ಮತ್ತವರ ಪರಿವಾರ, ಶಿವ ಮತ್ತವನ ಪರಿವಾರಗಳನ್ನು ಪೂಜಿಸಲಾರಂಭಿಸಿದರು. ಬೃಹತ್ ದೇವಾಲಯಗಳಲ್ಲಿ ಅವರನ್ನು ಆರಾಧಿಸುವುದೇ ಮಹಾ ಭಾಗವೆಂದುಕೊಂಡರು ಎಂಬ ಜನಜನಿತ ಭಾವನೆ ಬೆಳೆಸಲಾಗಿದೆ.

ಆದರೆ ಅಮ್ಮ ದೇವತೆಗಳ ಏಕಸ್ವಾಮ್ಯದ ನಂತರ ಪೂಜಿಸಲ್ಪಟ್ಟ ಪುರುಷ ದೇವರುಗಳು ಬೇರೆಯೇ ಇವೆ. ನಮ್ಮ ಕಣ್ಣಿಗೆ ಕಾಣುವ ನೇತ್ರಾಣಿ ಜಟ್ಟಿಗ, ಗುಡಿ ಜಟ್ಟಿಗ, ಕುಂಟ ಜಟ್ಟಿಗ, ಮೋಟಗಾರ ಜಟ್ಟಿಗ, ಕೋಟೆ ಜಟ್ಟಿಗ, ಹೊಗೇಡಿ ಜಟ್ಟಿಗ, ಹೊಟ್ಕಾಣಿ ಜಟ್ಟಿಗರಂತಹ ಹಲವಾರು ತೆರನ ಜಟ್ಟಿಗಗಳು, ಹಲವಾರು ಬೀರರು, ಪಂಜುರ್ಲಿ, ಮೈಸಂದಾಯ, ಕಲ್ಲುರ್ಟಿ, ಕೊರಗಜ್ಜ, ಚೆನ್ನಯ ಮೊದಲಾದ ಭೂತಗಳೆಂದು ಕರೆಯಲ್ಪಡುವ ದೈವಗಳು, ಮಾದಪ್ಪ, ಮಂಟೇಸ್ವಾಮಿ, ಬಲೀಂದ್ರ, ಬೀರಪ್ಪ, ಭೈರವ, ಜುಂಜಪ್ಪ, ಮೈಲಾರ, ನಾಗ ದೇವತೆ, ಇಗ್ಗುತ್ತಪ್ಪ, ಪಾಲನಾಯಕ, ಬಲಾಮಗ,ಪಾಕತ್ತಯ್ಯ, ಓಬಳ ದೇವರು, ಗಾದ್ರಿ ಪಾಲನಾಯಕ, ಸೂರನಾಯಕ, ರಾಜಲ ದೇವರು, ಬೋರೆ ದೇವರು, ಬೋಸೇ ದೇವರು, ಚಿಂತಲ ಗುಟ್ಟೆ ಬೋರುವ,ಕುರಿ ಹಟ್ಟಿ ಬೊಮ್ಮ ದೇವರು, ಶಮಬುನ ಸ್ವಾಮಿ, ವಾಮುನಿ ಸ್ವಾಮಿ, ಮುನಿ ( ಮುನೇಶ್ವರ ) ಹೀಗೆ‌ ನೂರಾರು ದೈವಗಳು ಬೇರೆಯೇ ಸತ್ಯವನ್ನು ಹೇಳುತ್ತವೆ. ಜಿಲ್ಲೆ ಜಿಲ್ಲೆಗೆ ಅಲ್ಲ ತಾಲ್ಲೂಕು ತಾಲ್ಲೂಕುಗಳಲ್ಲಿಯೂ ಹತ್ತಾರು ಬೇರೆ ಬೇರೆ ದೈವಗಳನ್ನು ,ಅವರ ವಿಭಿನ್ನ ಆಚರಣೆಗಳನ್ನು ನೋಡಬಹುದು.

ಈ ಬುಡಕಟ್ಟು ದೈವಗಳು ವಿಶ್ವಾದ್ಯಂತ – ಆಫ್ರಿಕಾ, ಯುರೋಪು, ಏಷ್ಯಾ, ಆಸ್ಟ್ರೇಲಿಯಾ, ಅಮೇರಿಕ ಖಂಡಗಳಲ್ಲಿ ಇದ್ದ ಬುಡಕಟ್ಟು ಸಮಾಜದಲ್ಲಿ ಒಂದೇ ರೀತಿಯ ನಂಬಿಕೆಯನ್ನು ಆಧರಿಸಿದ್ದವು. ಸರಿಸುಮಾರು ಒಂದೇ ರೀತಿ ಪೂಜೆಗೊಳ್ಳುತ್ತಿದ್ದವು. ಇದೇ ಲೇಖನ ಮಾಲೆಯ ಇತರ ಲೇಖನಗಳಲ್ಲಿ ವಿವಿಧ ಪ್ರದೇಶದ ದೈವಗಳ ಬಗ್ಗೆ ವಿವರಗಳನ್ನು ನೀಡಲಾಗಿದೆ ಮತ್ತು ದೈವಗಳ ಆಚರಣೆಗಳಲ್ಲಿ ಆದ ಮೂರು ಹಂತದ ಬೆಳವಣಿಗೆಗಳ ಬಗ್ಗೆ ವಿವರಿಸಲಾಗಿದೆ.

ಈ ದೈವಗಳಲ್ಲಿ ಮೂರು ತೆರನ ದೈವಗಳನ್ನು ಗುರುತಿಸಬಹುದು. ಎಲ್ಲಕ್ಕಿಂತ ಮೊದಲಿಗೆ ಅಮ್ಮ ದೈವಗಳು , ಗಾಳಿ, ಮಳೆ ಬೆಂಕಿ ಎಂಬ ಪ್ರಕೃತಿಯ ಅಂಗಗಳು. ನಂತರ ಟೋಟೆಂ ಎಂಬ ಕುಲ ಗುರುತಾದ ಪ್ರಾಣಿ, ಪಕ್ಷಿ, ಮರ ದೈವಗಳು,
ಮೂರನೇ ತಲೆಮಾರಾಗಿ ಮೇಲೆ ಹೇಳಿದ ಬುಡಕಟ್ಟು ವೀರ ದೈವಗಳು.

ಪುರಾಣೀಕರಣದ ಮೂಲಕ ವೈದಿಕೀಕರಣ:

ಈ ದೈವಗಳ ಹೆಸರಿಗೆ ಈಶ್ವರನನ್ನು ಸೇರಿಸುವುದು, ವೀರಭದ್ರ, ನಂದಿ ಎಂಬಂತೆ ಅವನ ಶಿವ ಗಣಕ್ಕೆ ಸೇರಿದವರೆಂದು ಹೇಳುವುದು, ನರಸಿಂಹ , ಕೃಷ್ಣ, ವಿಷ್ಣು ಮೊದಲಾದ ಅವತಾರಗಳು ,ಅವರ ಪರಿವಾರ ದೇವರುಗಳೊಡನೆ ಸಮೀಕರಿಸುವುದು ಇಂತಹ ಪುರಾಣೀಕರಣಕ್ಕೆ ಒಳಗಾಗಿರುವ ದೈವಗಳು ಸಾವಿರಾರು. ಬೀರಪ್ಪನನ್ನು ಬೀರೇಶ್ವರ,ಮೈಲಾರನನ್ನು ಮೈಲಾರ ಲಿಂಗ, ಭೈರವನನ್ನು ಭೈರವೇಶ್ವರ ಎಂದರೆ ಮುಗಿಯಿತಲ್ಲ. ಹಾಗೆಯೇ ಮುರುಗನೆಂಬ, ಅಯ್ಯಪ್ಪರೆಂಬ ಹಲವು ಕಾಡು ದೈವಗಳು ಆರ್ಮುಗ,ಶಿವ- ವಿಷ್ಣುವಿನ ಪುತ್ರರೆಂದು, ತಿಮ್ಮಪ್ಪ ಶ್ರಿನಿವಾಸನೆಂದು ಚೆಲುವಪ್ಪ ಚೆಲುವ ನಾರಾಯಣನೆಂದು ಇತ್ಯಾದಿ ರೂಪ ತಳೆದವರು ಮತ್ತೆಷ್ಟೋ.

ನಮ್ಮ ದೇಶದ ಅತ್ಯಂತ ವೈಭವದ ಶಿವ,ರಾಮ,ಕೃಷ್ಣರ ದೇವಾಲಯಗಳಿಗಿಂತ ಲಕ್ಷಾಂತರ ಭಕ್ತರನ್ನು ಇಂದಿಗೂ ಸೆಳೆಯುತ್ತಿರುವುದು ಇಂತಹ ದೈವಗಳೆ. ಇವರ ಜೊತೆಗೆ ಅಮ್ಮ ದೈವಗಳ ಜನಪ್ರಿಯತೆಯನ್ನು ಕೂಡಿಸಿದರೆ ದೇಶದ ಜನಪ್ರಿಯ ಆರಾಧ್ಯ ದೈವಗಳ ಬಗೆಗಿನ ಕಲ್ಪನೆಯೇ ಬೇರೆಯಾಗುತ್ತದೆ. ಅಮ್ಮ ದೈವಗಳನ್ನು ಪಾರ್ವತಿ,ಲಕ್ಷ್ಮಿಯರ ಸ್ವರೂಪಗಳೆಂದು ಪುರಾಣಿಕರಣಗೊಳಿಸಿರುವುದು ಬೇರೆ ಇದೆ.

ದೇವರುಗಳಿಗೂ ದೈವಗಳಿಗೂ ಮುಖ್ಯ ವ್ಯತ್ಯಾಸವೆಂದರೆ ದೈವಗಳು ಬುಡಕಟ್ಟು ಸದಸ್ಯರು. ಆಯಾ ಬುಡಕಟ್ಟಿನ ಸಂರಕ್ಷಕರು.

ದೇವರುಗಳೆಂದು ನಂತರ ಕಲ್ಪಿಸಲಾದವರು ಸರ್ವ ಸೃಷ್ಟಿ ಕರ್ತರು, ದೇವಲೋಕ, ಕೈಲಾಸ, ವೈಕುಂಠಗಳಿಗೆ ಸೇರಿದವರು. ಆಗಾಗ ಭೂಲೋಕಕ್ಕೆ ಬರುವವರು, ಅವತಾರವೆತ್ತುವವರು. ಬುಡಕಟ್ಟು, ಕುಲಗಳ ಪರಿಧಿಯನ್ನು ಮೀರಿ ಎಲ್ಲರಿಂದ ಪೂಜೆಗೊಳ್ಳುವವರು.

ಈ ದೇವರುಗಳೂ ಮೂಲದಲ್ಲಿ ಬುಡಕಟ್ಟು ದೈವಗಳೇ. ಆದರೆ ರಾಜಪ್ರಭುತ್ವಗಳ ಸ್ಥಾಪನೆಯ ನಂತರ ದೇವರುಗಳಾಗಿ ಬೃಹತ್ ದೇವಾಲಯಗಳಲ್ಲಿ ಪ್ರತಿಷ್ಟಪಿಸಲ್ಪಟ್ಟವರು. ಈ ಬಗ್ಗೆ “ಸಾರ್ವತ್ರಿಕ ದೇವರುಗಳ ಹೊಸ ಬೆಳೆ” ಎಂಬ ಈ ಮಾಲೆಯ ಲೇಖನವನ್ನು ಗಮನಿಸಿ. ಆದರೆ ಅಮ್ಮ ಕೇಂದ್ರಿತ ಮಾನವ ಸಮುದಾಯದ ಚರಿತ್ರೆಯ ಮುಂದಿನ ಹೆಜ್ಜೆಯನ್ನರಸುವರೆ ಮುಖ್ಯವಾದ ಅಂಶವೆಂದರೆ ಹಲವು ಸಾವಿರ ಅಮ್ಮಗಳ ಜೊತೆಗೆ ಸಾವಿರಾರು ಪುರುಷ ದೈವಗಳ ಸೇರ್ಪಡೆಯಾಯಿತು ಎಂಬುದು.

ಈ ಪ್ರಕ್ರಿಯೆ ಮಾನವ ಸಮಾಜದ ರಚನೆಯ ಇತಿಹಾಸದ ಬಗ್ಗೆ, ವಿಶೇಷವಾಗಿ ಭಾರತದಲ್ಲಿನ ಪ್ರಕ್ರಿಯೆಯ ಬಗ್ಗೆ ನಮಗೆ ತಿಳಿಸುವುದೇನು ?

ಈ ದೈವಗಳು ಬಹಳಷ್ಟು ಬುಡಕಟ್ಟು ವೀರರು. ಬುಡಕಟ್ಟುಗಳನ್ನು ಕಾಡು ಪ್ರಾಣಿಗಳು ಮೊದಲಾದ ಅಪಾಯಗಳಿಂದ ರಕ್ಷಿಸಿದವರು, ತಮ್ಮ ದನ,ಕುರಿಗಳನ್ನು ರೋಗ ರುಜಿನಗಳಿಂದ ರಕ್ಷಿಸುವವರು, ಕರ್ನಾಟದಲ್ಲಿ ವ್ಯಾಪಕವಾಗಿರುವ ವೀರಗಲ್ಲುಗಳು,ಶಾಸನಗಳು, ನೆತ್ತರ ಕೊಡುಗೆ ಉಂಬಳಿಗಳು ಹೇಳುವಂತೆ ತುರುಗೊಳ್‌ಗಳಿಂದ ( ದನಗಳ ಅಪಹರಣ ) , ಏಳೂರು ದೇವರ ಕಾಳಗ ಎಂಬಂತಹ ಜಾನಪದ ಕಾವ್ಯಗಳು ವರ್ಣಿಸುವಂತೆ ಕುರಿ ಮಂದೆಗಳ ಅಪಹರಣಗಳಿಂದ ( ಕುರಿ ಮಂದೆಗಳ ಅಪಹರಣಗಳು ,ಅವು ದೊಡ್ಡ ಪ್ರಮಾಣದಲ್ಲಿದ್ದರೂ ಅವುಗಳಿಗೆ ಶಾಸನಗಳು, ವೀರಗಲ್ಲುಗಳು ಇಲ್ಲವೆನ್ನುವಷ್ಟು ಅಪರೂಪ. ಹಾಗೆಯೇ ಎಮ್ಮೆಗಳ ಅಪಹರಣದ ಬಗ್ಗೆ ಶಾಸನಗಳು ಅಪರೂಪ.) ರಕ್ಷಿಸಿದ ವೀರರು. ಅಂದು ನೂರಾರು ಕೆಲವೊಮ್ಮೆ ಸಾವಿರಾರು ದನಗಳನ್ನು ಒಂದು ಮಂದೆಯಲ್ಲಿ , ಒಂದು ಬುಡಕಟ್ಟಿನಲ್ಲಿ ಸಾಕುತ್ತಿದ್ದ ಸಾಧ್ಯತೆಗಳನ್ನು ಬಳ್ಳಾರಿಯ ಬೃಹತ್ ಶಿಲಾಯುಗ ಕಾಲದಲ್ಲಿ ಸಗಣಿಯನ್ನು ರಾಶಿ ಹಾಕಿ ಸುಟ್ಟ ದೊಡ್ಡ ಬೂದಿ ಗುಡ್ಡಗಳು ತೋರಿಸುತ್ತವೆ. ಈ ರೀತಿ ತುರುಗೊಳ್,ಕುರಿಗೊಳ್‌ಗಳು ಈ ಪಶುಪಾಲಕರು ತಮ್ಮ ಪಶು ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಗಳ ಭಾಗವಾಗಿವೆ.ಹುಲ್ಲುಗಾವಲುಗಳ ಬಗ್ಗೆ ಹೊಡೆದಾಟಗಳಾಗಿವೆ. ಕೆಲವು‌ ಶಾಸನಗಳು ಬೇಡರು ಆಹಾರದ ಸಲುವಾಗಿ ಈ ಪಶುಗೊಳ್‌ಗಳಲ್ಲಿ ತೊಡಗಿದ್ದರೆಂಬುದನ್ನೂ ತಿಳಿಸುತ್ತವೆ.

ಮತ್ತೆ ಕೆಲವು ವೀರರು ಬೇಟೆಗಳಲ್ಲಿ ಪ್ರಾಣ ತೆತ್ತವರು. ಅಂತಹ ಕೆಲವು ದೇವರುಗಳಿಗೆ ಬ್ಯಾಟೆ ವೀರ, ಬ್ಯಾಟೆರಾಯ ಎಂದು ಕರೆದು ಪೂಜಿಸುವ ಪದ್ಧತಿ ಕೆಲವೆಡೆ ಇದೆ.

ರಾಕ್ಷಸರುಗಳ ಸೃಷ್ಟಿ:

ಈ ದೈವಗಳಲ್ಲಿಯೂ ಬಹಳ ಜನ ರಾಕ್ಷಸರುಗಳನ್ನು ನಾಶ ಮಾಡಿದವರೆಂದು ಹೇಳಲಾಗಿದೆ. ಮೈಲಾರ ಮಣಿಮಲ್ಲಾಸುರ ಎಂಬ ರಾಕ್ಷಸನನ್ನು ಕೊಂದಿದ್ದಾನೆ. ಬೈರವ ಅಥವಾ ಶಿವ ಆದಿ ಚುಂಚನಗಿರಿಯಲ್ಲಿ ಚುಂಚ, ಕಂಚ ಎಂಬ ರಾಕ್ಷಸರನ್ನು ಕೊಂದನಂತೆ. ಉತ್ತರ ಕನ್ನಡ ಜಿಲ್ಲೆಯ ಜಟ್ಟಿಗರನ್ನು ವೀರರುಗಳಂತೆ ಪೋಷಾಕು,ಆಯುಧ ಧರಿಸಿದಂತೆ ಪೂಜಿಸಲ್ಪಡುತ್ತಾರೆ. ಇವರೂ ರಾಕ್ಷಸರುಗಳನ್ನು ಕೊಂದು ದೇವರುಗಳಾದವರಂತೆ. ಹೀಗೆ ಹಲವು ಬುಡಕಟ್ಟು ದೈವಗಳು ರಾಕ್ಷಸ ಸಂಹಾರ ಮಾಡಿದ್ದಾರೆ. ಇನ್ನು ಚಾಮುಂಡಿ,ದುರ್ಗೆ,ಕಾಳಿ ಮೊದಲಾದ ದೈವಗಳ ರಾಕ್ಷಸ ಸಂಹಾರದ ಪುರಾಣಗಳು ಎಲ್ಲರಿಗೂ ತಿಳಿದದ್ದೆ. ಅಂತಹ ಕತೆಗಳು ಇನ್ನು ಕೆಲವು ಊರಮ್ಮ,ಕುಲದೇವತೆಗಳ ವಿಷಯದಲ್ಲೂ ಇವೆ.

ಆದರೆ, ಈ ದೇವರುಗಳು ಪೂಜೆಗೊಳ್ಳುವ ಪ್ರದೇಶಗಳನ್ನು ನೋಡಿದರೆ ಇಲ್ಲಿ ಯಾವ ರಾಕ್ಷಸರು ,ಯಾವಾಗ ಬಂದರು ಎಂಬ ಪ್ರಶ್ನೆಗಳು ಏಳುತ್ತವೆ. ನಮ್ಮ ಮಹಾ ಕಾವ್ಯಗಳಲ್ಲಿ ಕೆಲವು ರಾಕ್ಷಸರು ದೈತ್ಯಾಕಾರ, ತಮ್ಮಿಚ್ಛೆಯಂತೆ ರೂಪ ಬದಲಿಸಬಲ್ಲವರು, ಮಾಯಾವಿಗಳು ,ಕಪ್ಪು ಬಣ್ಣದ , ಬೆಂಕಿಯುಗುಳುವ ಕಣ್ಣುಗಳ, ಕೊರೆ ದಾಡೆಗಳನ್ನುಳ್ಳ ಮಾನವೇತರಂತೆ ಚಿತ್ರಿಸಿದ್ದರೂ ಮತ್ತೆ ಹಲವರು ದೇವರೆಂದು ಚಿತ್ರಿಸಲ್ಪಟ್ಟವರ, ದೇವರ ರಕ್ಷಣೆಗೊಳಗಾದವರೆಂಬುವರ ಶತ್ರುಗಳಷ್ಟೆ. ತಮ್ಮ ಶತ್ರುಗಳನ್ನು, ತಮ್ಮ ಆಚರಣೆಗಳಿಗಿಂತ ಭಿನ್ನರಾದವರನ್ನು ರಾಕ್ಷಸರೆಂದು ಚಿತ್ರಿಸುವುದು ನಮ್ಮ ಕಾವ್ಯ ಪುರಾಣಗಳಲ್ಲಿ ಬಹಳ ಸಾಮಾನ್ಯವಾಗಿದೆ. ಇಂತಹುದೇ ಕಲ್ಪನೆಯಿಂದ ಬುಡಕಟ್ಟುಗಳ ಜನರೂ ತಮ್ಮ ಆದಿ ಕಾಲದ ಶತ್ರುಗಳನ್ನೆಲ್ಲಾ ಶತ್ರುಗಳೆಂದು ಚಿತ್ರಿಸಿದರೇ ಎಂಬ ಸಂಶಯ ಬರುತ್ತದೆ. ಈ ದೇವರುಗಳು ಎದುರಿಸಿದ,ಸೋಲಿಸಿದ, ಕೊಂದ ರಾಕ್ಷಸರುಗಳು ಎಂದರೆ ತಮಗೆ ಎದುರಾಳಿಯಾಗಿದ್ದ ಇತರ ಕೃಷಿಕ ಅಥವಾ ಬೇಟೆಗಾರ ಬುಡಕಟ್ಟುಗಳ ನಾಯಕರುಗಳೇ ಎನಿಸುವಂತಿದೆ. ಮಹಿಷಾಸುರನೂ ಕೋಣವನ್ನು ಕುಲ ಲಾಂಛನ ಅಥವಾ ಟೋಟೆಂ ಆಗುಳ್ಳ ಒಂದು ಬುಡಕಟ್ಟಿನ ನಾಯಕನೇ ಇರಬಹುದು.
ಈ ರೀತಿ ರಾಕ್ಷಸ ಸಂಹಾರದ ಚಿತ್ರಣ ಅಂದು ಹೆಚ್ಚುತ್ತಿದ್ದ ಬುಡಕಟ್ಟುಗಳ ನಡುವಣ ಕಾಳಗಗಳನ್ನು ಸೂಚಿಸುತ್ತದೆ.

ಅಂದು ಕೃಷಿಕರ ನಡುವೆ ಫಲವತ್ತಾದ , ನೀರಿನ ಸೌಲಭ್ಯವುಳ್ಳ ಭೂಮಿಗಾಗಿ, ಪಶು ಸಂಗೋಪಕರ ನಡುವೆ ದನಗಳು , ಕುರಿಗಳು,ಎಮ್ಮೆಗಳ ಮಂದೆಗಳಿಗಾಗಿ ಸಂಘರ್ಷಗಳಾಗಿವೆ. ಪಶು ಸಂಗೋಪಕರು ಮತ್ತು ಕೃಷಿಕರ ನಡುವಣ ಸಂಘರ್ಷವೂ ಬಹಳ ವ್ಯಾಪಕ. ಪಶುಪಾಲಕರು ಭೂಮಿಯನ್ನು ಹುಲ್ಲುಗಾವಲಾಗಿ ಬಳಸಬೇಕೆಂದು, ರೈತರು ಅದನ್ನು ಕೃಷಿ ಭೂಮಿಯಾಗಿ ಪರಿವರ್ತಿಸಬೇಕೆಂದು ಸಂಘರ್ಷಗಳು ವ್ಯಾಪಕವಾಗಿದ್ದವು. ಇವು ಆರ್ಯ ಪಶುಪಾಲಕ, ಇತರ ಕೃಷಿಕ ಬುಡಕಟ್ಟುಗಳ ನಡುವಣ ಸಂಘರ್ಷವಾಗಿ ವೇದಗಳ ಕಾಲದಿಂದ ಹಾಗೂ ಪುರಾಣಗಳಲ್ಲಿ ಹಲವು ರೀತಿಯಲ್ಲಿ ವ್ಯಕ್ತವಾಗಿವೆ. ವಿಶ್ವಾಮಿತ್ರ ಮತ್ತು ವಸಿಷ್ಟರ ನಡುವೆ ಕಾಮಧೇನುವಿಗಾಗಿ , ಕೃಷ್ಣ ಮತ್ತು ಇಂದ್ರ, ಕೃಷ್ಣ ಮತ್ತು ಭೂಮಿಯ ಪುತ್ರ ನರಕನ ನಡುವೆ ನರಕ ಚತುರ್ದಶಿಗೆ ಕಾರಣವಾದ ಸಂಘರ್ಷ, ಸಾವಿರಾರು ಪಶುಗಳ ಬಲಿಕೊಡಲಾಗುತ್ತಿದ್ದ ಯಜ್ಞಗಳ ವಿರುದ್ಧ ಬುದ್ಧನ ಸಂಘರ್ಷ, ಹೀಗೆ ಹಲವು ಕಥಾನಕಗಳ ಬುಡದಲ್ಲಿ ಈ ಸಂಘರ್ಷ ಹುದುಗಿದೆ. ಕೃಷಿಕರ ನಡುವೆ ಬೇಟೆಗಾರರು ಮತ್ತು ಕೃಷಿಕರ ನಡುವೆ ಬೇಟೆಗಾರರನ್ನು ಕಾಡಿನಿಂದ ಹೊರಹಾಕಿ ಕೃಷಿ ಭೂಮಿಯನ್ನಾಗಿ ಪರಿವರ್ತಿಸುವುದಕ್ಕಾಗಿ, ಬೇಟೆಗಾರರು ರೈತರು ಶೇಖರಿಸಿಟ್ಟಿದ್ದ ಆಹಾರ ಧಾನ್ಯಗಳ ಅಪಹರಣಕ್ಕಾಗಿ ಮತ್ತು ಬೇಟೆಯನ್ನು ಬಿಟ್ಟು ಕೃಷಿಯಲ್ಲಿ ತೊಡಗಿಕೊಳ್ಳುವ ಪ್ರಯತ್ನಗಳಲ್ಲಿ ಭೂಮಿಗಾಗಿ ಸಂಘರ್ಷಗಳಾಗಿವೆ. ರಾಮಾಯಣದಲ್ಲಿ ರಾಮನಿಂದ ರಾಕ್ಷಸರು ವಾಸ ಮಾಡುತ್ತಿದ್ದ ತಾಟಕಾ ವನ ,ದಂಡಕಾರಣ್ಯ ಮೊದಲಾದ ಕಾಡುಗಳ ಮೇಲೆ ಧಾಳಿ, ಮಹಾಭಾರತದ ಖಾಂಡವ ವನ ದಹನದ ಪ್ರಸಂಗ ಅಂತಹುದು. ಬೇಟೆಗಾರರು ಮತ್ತು ಪಶುಪಾಲಕರ ನಡುವೆ ಆಹಾರದ ಪಶುಗಳಿಗಾಗಿ ಸಂಘರ್ಷಗಳು ನಡೆದಿವೆ ಎಂಬುದನ್ನು ಹಲವು ಶಾಸನಗಳು ಎತ್ತಿ ತೋರಿಸುತ್ತವೆ.

ಈ ರೀತಿಯ ವಿವಿಧ ಭೂಮಿ ಕಾಳಗಗಳು, ತುರುಗೊಳ್, ಎಮ್ಮೆಗೊಳ್,ಕುರಿಗೊಳ್‌ಗಳಲ್ಲಿ ಯಶಸ್ವಿಯಾದ ಅಥವಾ ಮಡಿದ ವೀರರುಗಳು ಆಯಾ ಬುಡಕಟ್ಟುಗಳ ವೀರರಾದರು, ದೇವರುಗಳಾದರು. ಈ ವೀರರುಗಳೆಲ್ಲ ಮನುಷ್ಯರೇ. ಬುಡಕಟ್ಟುಗಳ ಸದಸ್ಯರಾಗಿದ್ದವರೇ. ಹೀಗಾಗಿ ಈ ದೇವರುಗಳು , ಈ ಮೊದಲಿನ ಅಮ್ಮ ದೇವತೆಗಳಂತೆ ಮನುಷ್ಯರಾಗಿದ್ದವರೇ. ಅದೇ ರೀತಿ ಇವರೂ ಕೂಡಾ ಜಗತ್ತಿನ ಸೃಷ್ಟಿ, ಸ್ಥಿತಿ,ಲಯಗಳ ಕರ್ತರುಗಳಲ್ಲ. ಜಗನ್ನಿಯಾಮಕರುಗಳಲ್ಲ. ಅಂತಹ ದೇವರುಗಳ ಕಲ್ಪನೆ ಮಾನವರಿಗೆ ಅಂದು ಮೂಡಿರಲೇ ಇಲ್ಲ.

ಪುರಾತತ್ವ ಶಾಸ್ತ್ರದ ಉತ್ಖನನಗಳು, ಅಧ್ಯಯನಗಳಲ್ಲಿ ಕರ್ನಾಟಕದ ನೂತನ ಶಿಲಾಯುಗದ ನಂತರದ ಬೃಹತ್ ಶಿಲಾಯುಗದ ಕಲ್ಗೋರಿಗಳಲ್ಲಿ ಸತ್ತವರೊಂದಿಗೆ ಅವರು ಉಪಯೋಗಿಸುತ್ತಿದ್ದ ವಸ್ತುಗಳನ್ನು ಹೂಳುವ ಪದ್ಧತಿ ಇತ್ತು. ಈ ರೀತಿಯ ವಸ್ತುಗಳಲ್ಲಿ ಕೃಷಿಗಿಂತ ಯುದ್ಧದ ಆಯುಧಗಳಾದ ಈಟಿ,ಭರ್ಚಿ ಮುಂತಾದವು ಹೆಚ್ಚಾಗಿವೆಯೆಂದು ಸಂಶೋಧಕರು ತಿಳಿಸಿದ್ದಾರೆ.

ಕರ್ನಾಟಕದ ದೂರ ವಾಣಿಜ್ಯ

ಬುಡಕಟ್ಟುಗಳ ನಡುವಣ ಅಸಮಾನತೆಗಳು ಎಡೆ ಮಾಡಿಕೊಟ್ಟ ಯುದ್ಧಗಳು ಒಂದೆಡೆಯಾದರೆ ಭಿನ್ನತೆಗಳಿಂದಾಗಿ ಸೃಷ್ಟಿಯಾದ ವಾಣಿಜ್ಯದ,ಅದರಲ್ಲೂ ದೂರ ವಾಣಿಜ್ಯದ ಪರಿಸ್ಥಿತಿಯ ನಿರ್ಮಾಣ ಮತ್ತೊಂದು ಕಡೆ.

ಹೀಗೆ ಇತಿಹಾಸ ಪೂರ್ವ ಕಾಲದ ಬೃಹತ್ ಶಿಲಾಯುಗದಲ್ಲಿಯೇ ಕಬ್ಬಿಣದ ಆಯುಧಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಕರ್ನಾಟಕದ ಪಶ್ಚಿಮ ಘಟ್ಟಗಳು, ಬಳ್ಳಾರಿ, ಕೋಲಾರ ಮೊದಲಾದ ಪ್ರದೇಶಗಳಲ್ಲಿ ಸಾಧಿಸಲಾಗಿತ್ತು. ಇವುಗಳನ್ನು ಗಂಗಾ ನದಿ ಬಯಲಿನ ಹಾಗೂ ದಕ್ಷಿಣ ಭಾರತದ ವಿವಿಧ ಪ್ರದೇಶಗಳವರೂ ಕೊಳ್ಳುತ್ತಿದ್ದರು.

ಕರ್ನಾಟಕದ ಕಬ್ಬಿಣದ ತಯಾರಿಕೆ ಈಜಿಪ್ಟಿನಲ್ಲಿ ದೊರಕಿದೆಯಂತೆ. ಜೊತೆಗೆ ರೋಮ್ ಸಾಮ್ರಾಜ್ಯದ ನಾಣ್ಯಗಳು ಕರ್ನಾಟಕದ ಹಲವೆಡೆಗಳಲ್ಲಿ ಮುಖ್ಯವಾಗಿ ಅಂದಿನ ವಾಣಿಜ್ಯ ಮಾರ್ಗಗಳಲ್ಲಿ ದೊರಕಿವೆ. ಕೋಲಾರ,ಬೆಂಗಳೂರು ಬಳಿಯ ಯಶವಂತಪುರ, ಹಾನಗಲ್ ಶಿರಸಿ ಮೊದಲಾದ ಸ್ಥಳಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಇವು ದೊರಕಿವೆ. ಗ್ರೀಕ್ ನಾಟಕವೊಂದತಲ್ಲಿ ಕನ್ನಡ,ತುಳುವಿನ ಪದಗಳು ಇವೆಯೆಂದು ಸಂಶೋಧಕರು ತಿಳಿಸಿದ್ದಾರೆ. ಶ್ರೀಲಂಕಾ ಮತ್ತು ಬನವಾಸಿ ಮೊದಲಾದ ಕರಾವಳಿಯ ನಡುವೆ ಕಡಲ ಸಂಚಾರ ಗಣನೀಯವಾಗಿತ್ತು ಎಂದು ಶ್ರೀಲಂಕಾದ ಬೌದ್ಧ ಸಾಹಿತ್ಯ ಗ್ರಂಥಗಳಿಂದ ತಿಳಿದು ಬರುತ್ತದೆ.

ಹೀಗೆ ಕರ್ನಾಟಕದಿಂದ ಕಬ್ಬಿಣದ ವಸ್ತುಗಳು, ಅಕ್ಕಿ,ಶ್ರೀಗಂಧ,ಮೆಣಸು,ಅಡಿಕೆ, ಆನೆಯ ದಂತ ಮತ್ತು ಇತರ ಕಾಡಿನ ಉತ್ಪನ್ನಗಳು ದೇಶದೊಳಗೇ ದೂರದೂರಕ್ಕೆ ಹಾಗೆಯೇ ವಿದೇಶಕ್ಕೆ ಮಾರಲಾಗುತ್ತಿತ್ತು.

ಹೀಗೆ ಕೃಷಿ ಮತ್ತು ಪಶುಪಾಲನೆಗಳು ಮತ್ತು ನಂತರ ಹೆಚ್ಚಿದ ಕಾಳಗ ಮತ್ತು ವಾಣಿಜ್ಯಗಳು ಪ್ರಾಚೀನ ಶಿಲಾಯುಗದ ಕೊನೆಯ ಕಾಲದಿಂದ ಬೃಹತ್ ಶಿಲಾಯುಗದವರೆಗೆ ಇದ್ದ ಜೀವನ ಪರಿಸ್ಥಿತಿ ಮತ್ತು ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿದವು. ಇಲ್ಲಿಯವರೆಗೆ ಬುಡಕಟ್ಟಿನ ಪೋಷಣೆ,ಪಾಲನೆ ಮಾಡಲು ಆಹಾರದ ಸಂಗ್ರಹಣೆ, ವೀಕ್ಷಣೆ, ಅನುಭವ ಮಥನದ ಮೂಲಕ ಪ್ರಕೃತಿಯ ಬಗೆಗಿನ ಅರಿವು ಪಶು ಸಾಕಣೆಯ ಮತ್ತು ಕೃಷಿಯ ಅನ್ವೇಷಣೆ ಮತ್ತು ಕೌಶಲ್ಯದಲ್ಲಿ ಬುಡಕಟ್ಟಿನ ಇತರೆಲ್ಲರಿಗಿಂತ ಒಂದು ಕೈ ಮೇಲಾಗಿದ್ದರು ಅನುಭವೀ ಹಿರಿಯ ಮಹಿಳೆಯರು.

ಬುಡಕಟ್ಟಿನಲ್ಲಿ ಹಿರಿಯ ಮಹಿಳೆಯ ನಾಯಕತ್ವದ ಒಂದು ಆಧಾರ ತಾಯಿ ಮಕ್ಕಳು, ಮೊಮ್ಮಕ್ಕಳ ನಡುವಣ ಪ್ರೀತಿ, ಮಮತೆ ಎಂಬ ಸಹಜ ಸಂಬಂಧವಾದರೆ ಮತ್ತೊಂದು ಹಿರಿಯ ಮಹಿಳೆಯ ಅನುಭವ ಜನ್ಯ ಜ್ಞಾನವಾಗಿತ್ತು. ಈಗ ಪರಿಸ್ಥಿತಿ ಬದಲಾಯಿತು. ಯುದ್ಧದಲ್ಲಿ ಪದೇ ಪದೇ ಅಥವಾ ನಿರಂತರವಾಗಿ ತೊಡಗಲು ಅಥವಾ ವಾಣಿಜ್ಯಕ್ಕಾಗಿ ದೂರ ಪ್ರದೇಶಗಳಿಗೆ ದೀರ್ಘ ಕಾಲ ಪ್ರಯಾಣಿಸಲು ಮಹಿಳೆಗೆ ಬುಡಕಟ್ಟಿನ ಪಾಲನೆ,ಪೋಷಣೆಯ ಕರ್ತವ್ಯಗಳು ತೊಡಕಾದವು. ಹಿಂದಿನ ಲೇಖನಗಳಲ್ಲಿ ಹೇಳಿದಂತೆ ಮಹಿಳಾ ಮುಖ್ಯಸ್ಥೆಯರು ಇವುಗಳಲ್ಲಿ ಪುರುಷರಿಗೇ ಹೆಚ್ಚಾಗಿ ಹೊಣೆ ನೀಡಬೇಕಾಯಿತು. ಆಕೆಯ ಅನುಭವ ಮತ್ತು ಯುದ್ಧ, ವಾಣಿಜ್ಯಗಳಲ್ಲಿ ತೊಡಗಿದ ಪುರುಷರ ಅನುಭವ ಬೇರೆಯಾಯಿತು.

ಜನರ ನಿತ್ಯದ ಬದುಕು,ಅವರ ಪಾಲನೆ, ಪೋಷಣೆಯಲ್ಲಿ ಆಕೆಯ ಅರಿವು ಎಂದಿನಂತೆ ಮೇಲ್ಮಟ್ಟದಲ್ಲಿಯೇ ಇತ್ತು. ಆದರೆ ಹೊಸ ಶಸ್ತ್ರಾಸ್ತ್ರಗಳ ಜ್ಞಾನ, ಯುದ್ಧ ತಂತ್ರಗಳು, ವಾಣಿಜ್ಯದ ತಂತ್ರಗಳು, ವಾಣಿಜ್ಯದಲ್ಲಿ ದೊರಕುವ ನೂರೆಂಟು ವಿಧ ವಿಧವಾದ ವಸ್ತುಗಳ ಜ್ಞಾನ ತರುವ ಹೆಚ್ಚಿನ ಸಂಪತ್ತು ಮಹಿಳೆಯರ ಮೂಲಕ ಗಳಿಸಿದ ನಿತ್ಯ ಬದುಕಿನ ಮತ್ತು ಬದುಕಿನ ಅವಶ್ಯಕತೆಗಳನ್ನು ಪಡೆದುಕೊಳ್ಳುವ, ಬೆಳೆದುಕೊಳ್ಳುವ ಜ್ಞಾನಕ್ಕಿಂತ ಮೇಲ್ ಸ್ತರದ್ದು ಎಂಬ ಭಾವನೆ ಬೆಳೆಯಿತು. ಅದರ ಫಲವಾಗಿ ಮೊದಲ ಘಟ್ಟದಲ್ಲಿ ಬುಡಕಟ್ಟುಗಳ ತಾಯಂದಿರ ನಾಯಕತ್ವಕ್ಕೆ ಬದಲಾಗಿ ಸೇನಾ ನಾಯಕರು, ಯುದ್ಧ ವೀರರುಗಳ ಪ್ರಾಧಾನ್ಯತೆಗೆ ಎಡೆ ಮಾಡಿಕೊಟ್ಟಿತು. ಹೀಗೆ ಬುಡಕಟ್ಟಿಗಾಗಿ ಪ್ತಾಣ ತೆತ್ತ ಅಥವಾ ಯಶಸ್ಸು ಪಡೆದ ವೀರರುಗಳೇ ದೈವಗಳಾದರು. ಆ ದೈವಗಳನ್ನು ಮೈದುಂಬಿಸಿಕೊಂಡು ಮಾಡುವ ದೇವರ ಪೂಜೆಯೂ ಮಹಿಳೆಯಿಂದ ದೂರಾಯಿತು. ಬುಡಕಟ್ಟಿನ ಹೊಸ ನಾಯಕರಾಗಿ ಬುದ್ವಂತ, ದೇವರ ಗುಡ್ಡ, ಒಡೆಯರು, ಕುಂಜುಕಾರ, ಚೆಮ್ಮಕಾರ ಮುಂತಾಗಿ ವಿವಿಧ ಹೆಸರುಗಳಿಂದ ಕರೆಯಲ್ಪಡುವವರು ಆಚರಣೆಗಳು, ಕಟ್ಟಲೆಗಳ ಹೊಣೆಯನ್ನು ಹೊತ್ತರು. ವೀರರು, ಗೌಡರು ಕಾದಾಟಗಳ ಹೊಣೆಯನ್ನು ಹೊತ್ತುಕೊಂಡರು. ಈ ರೀತಿ ಎರಡು ಬಗೆಯ ನಾಯಕತ್ವ ಬುಡಕಟ್ಟುಗಳಿಗೆ ಪ್ರಾಪ್ತವಾಯಿತು.

ದಶರಥ, ದಶ ಶಿರಗಳ ಉಗಮ.

ಈ ಕಾದಾಟಗಳು ಹೆಚ್ಚಿದಂತೆಲ್ಲ ಸಣ್ಣ ಸಣ್ಣ ಬುಡಕಟ್ಟುಗಳು ತಮ್ಮ ರಕ್ಷಣೆಗೆ ಬೇರೆ ಬುಡಕಟ್ಟುಗಳೊಂದಿಗೆ ಸೇರಿಕೊಂಡು ಬಲಿಷ್ಟರಾಗುವುದು ಅವಶ್ಯಕವಾಗಿತ್ತು. ದಟ್ಟವಾದ ಅರಣ್ಯಗಳನ್ನು ಕಡಿಯಲು ,ಬೇಸಾಯಕ್ಕೆ ಪರಿವರ್ತಿಸಲು ಕೂಡಾ ಹೆಚ್ಚು ಜನರ ಅಗತ್ಯ ಬಿತ್ತು. ನೆರೆ ಹೊರೆಯ, ಸಂಬಂಧಗಳು ಬಿಗಡಾಯಿಸಿಲ್ಲದ ಬುಡಕಟ್ಟುಗಳು ಒಂದಾಗಿ ಸೇರಲಾರಂಭಿಸಿದವು.

ಈ ಪ್ರಕ್ರಿಯೆಯ ಸೂಚಕವೇ ಒಂದೇ ರಥದಲ್ಲಿ ಪಯಣಿಸಿದರೂ ದಶರಥನೆಂದು ಹೆಸರಾದ ರಾಮನ ತಂದೆ, ಎಲ್ಲರಂತೆ ಒಂದೇ ಶಿರ ಮಾತ್ರ ಇರಲು ಸಾಧ್ಯವಾದರೂ ದಶಶಿರನೆಂಬ ರಾವಣರು, ಸಪ್ತ ಮಾತೃಗಳು, ಅಕ್ಕ ತಂಗಿಯರಾದ ಅಮ್ಮ ದೇವತೆಗಳು ಇತ್ಯಾದಿ.

ಹೀಗೆ ಹಲವು ಬುಡಕಟ್ಟುಗಳು ಸೇರಿ ಕುಲಗಳು ರೂಪುಗೊಂಡವು. ಒಂದೊಂದು ಕುಲವೂ ಒಂದೊಂದು ಪ್ರದೇಶದ ಮೇಲೆ ಹಿಡಿತ ಸಾಧಿಸಿ ಕುಲಾಧಿಪತ್ಯಗಳು ರೂಪುಗೊಂಡವು.
ಇವುಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ.

‍ಲೇಖಕರು Admin

October 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: