ಕೆ ಬಿ ಸಿದ್ಧಯ್ಯನವರ ಕೃತಿ ಗಲ್ಲೆಬಾನಿ ಅತ್ಯಂತ ಹೆಸರು ಮಾಡಿತ್ತು.
ಆ ಗಲ್ಲೆಬಾನಿ ಎಂದರೇನು
ಇಲ್ಲಿದೆ ಅದರ ಕಥೆ
ಡಾ.ವಡ್ಡಗೆರೆ ನಾಗರಾಜಯ್ಯ
ಇದು ಗಲ್ಲೆಬಾನಿಯ ಚಿತ್ರ. ನೆಲದಲ್ಲಿ ಹೂತು ಜಗತಿಕಟ್ಟೆ ಕಟ್ಟಲಾಗಿರುವ ಗಲ್ಲೆಬಾನಿಗಳಿವು. ಗಲ್ಲೆಬಾನಿಯನ್ನು ದೇವಿ ಮಾತಂಗಿಯ ಪ್ರತಿರೂಪವೆಂದು ಪೂಜಿಸುವ ಸಂಪ್ರದಾಯ ಮಾದಿಗ ಜನಾಂಗಲ್ಲಿದೆ. ಗಲ್ಲೆಮ್ಮ, ಗಲ್ಲೆಮಾರಮ್ಮ, ನೆಲಗಂಗಮ್ಮ, ಗಂಗಮ್ಮ ಮುಂತಾದ ಹೆಸುರುಗಳಲ್ಲಿಯೂ ಗಲ್ಲೆಬಾನಿಯನ್ನು ಪೂಜಿಸುವ ಸಂಪ್ರದಾಯ ಇವರಲ್ಲಿ ರೂಢಿಗಿದೆ.
ಚಮ್ಮಾರಿಕೆ ಕಸುಬು ನಿರ್ವಹಿಸುವ ಮಾದಿಗರು ಗಲ್ಲೆಬಾನಿಯಲ್ಲಿ ಚರ್ಮವನ್ನು ನೆನೆಹಾಕಿ ಹದಗೊಳಿಸಲು ಗಲ್ಲೆಬಾನಿಯನ್ನು ಬಳಸುತ್ತಿದ್ದರು. ಇದರ ನೀರು ಔಷಧೀಯ ಗುಣವುಳ್ಳದ್ದೆಂದು ಜನರಲ್ಲಿ ನಂಬಿಕೆ ಇದೆ. ಯಾವುದೇ ರೋಗ ತಗುಲಿದವರಿಗೆ ಗಲ್ಲೆಬಾನಿಯ ನೀರು ಕುಡಿಸಿದರೆ ಗುಣಮುಖರಾಗುತ್ತಾರೆಂದು, ವಿಶೇಷವಾಗಿ ಚರ್ಮರೋಗ ತಗುಲಿದವರು ಒಂದು ರಾತ್ರಿ ಒಂದು ಹಗಲು ಮೂರುಮೂರು ಆರು ಜಾವಗಳು ಗಲ್ಲೆಬಾನಿಯ ನೀರಿನೊಳಗೆ ಮಿಂದೆದ್ದು ಮಾತಂಗಿ ದೇವತೆಗೆ ಪೂಜೆ ಸಲ್ಲಿಸಿದರೆ ರೋಗಮುಕ್ತರಾಗುತ್ತಾರೆಂಬುದು ಜನರ ನಾಲಗೆ ಮೇಲಿರುವ ನಂಬಿಕೆ.
ಔಷಧಿಯಾಗಿ ಬಳಕೆಯಾಗುವ ಗಲ್ಲೆಬಾನಿಯ ನೀರನ್ನು ಪವಿತ್ರ ಜಲವನ್ನಾಗಿ ಬ್ರಾಹ್ಮಣರು, ಕೋಮಟಿ ಶೆಟ್ಟರು ಮುಂತಾದವರು ತಮ್ಮ ಮನೆಯ ಶುಭ ಕಾರ್ಯಗಳಲ್ಲಿ ಬಳಸುತ್ತಾರೆ. ವಿವಾಹ ಸಂದರ್ಭದಲ್ಲಿ ನವ ವಧು-ವರರ ನೆತ್ತಿಯ ಮೇಲೆ ಗಲ್ಲೆಬಾನಿಯ ನೀರನ್ನು ಪ್ರೋಕ್ಷಿಸಿ, ಅರುಂಧತಿ ನಕ್ಷತ್ರ ದರ್ಶನ ಮಾಡಿಸುವುದು ಶ್ರೇಯಸ್ಕರವೆಂಬ ನಂಬಿಕೆ ಅವರಲ್ಲಿದೆ. ಆದುದರಿಂದಲೇ ಬ್ರಾಹ್ಮಣರು ಮತ್ತು ಕೋಮಟಿಶೆಟ್ಟರು ಚಮ್ಮಾರನನ್ನು ಕಾಡಿಬೇಡಿ, ಫಲತಾಂಬೂಲ ಕಾಣಿಕೆ ಸಲ್ಲಿಸಿ ಅವನ ಅನುಗ್ರಹದಿಂದ ಈ ಪವಿತ್ರ ಜಲವನ್ನು ಪಡೆದುಕೊಂಡು ಹೋಗುತ್ತಾರೆ.

ಚಮ್ಮಾರನು ಗಲ್ಲೆಬಾನಿಯ ನೀರನ್ನು ಕೊಡಲೊಪ್ಪದಿದ್ದ ಪಕ್ಷದಲ್ಲಿ, ಕಲ್ಲುನೀರು ಕರಗುವ ರಾತ್ರಿ ಹೊತ್ತಿನಲ್ಲಾದರೂ ಸರಿಯೇ ಪವಿತ್ರ ನೀರು ಬೇಕಾಗಿರುವ ಬ್ರಾಹ್ಮಣರು ಮತ್ತು ಕೋಮಟಿಶೆಟ್ಟರು ಗಲ್ಲೆಬಾನಿಯ ಬಳಿ ಬಂದು ಕಾಣಿಕೆಗಳನ್ನಿರಿಸಿ ಈ ನೀರನ್ನು ಕದ್ದೊಯ್ಯುತ್ತಾರೆ ಎಂಬ ನಂಬಿಕೆ ಜನರಲ್ಲಿದೆ.
ಶರಣರಾದ ಮಾದಾರ ಹರಳಯ್ಯ ಮತ್ತು ಕಲ್ಯಾಣಮ್ಮ ತಮ್ಮ ತೊಡೆ ತೊಗಲು ಸುಲಿದು ಚಮ್ಮಾಳಿಗೆ ಹೊಲಿದು ವಚನ ಚಳವಳಿಯ ಮಕುಟಮಣಿಯಾಗಿದ್ದ ಬಸವಣ್ಣನಿಗೆ ಅರ್ಪಿಸಲು ಹೋದಾಗ, ಬ್ರಾಹ್ಮಣ ಮಂತ್ರಿ ಮಧುವರಸನು ಹರಳಯ್ಯನ ಕೈಗಳಿಂದ ಚಮ್ಮಾಳಿಗೆಗಳನ್ನು ಕಸಿದುಕೊಂಡು ಧರಿಸಿಕೊಳ್ಳುತ್ತಾನೆ. ಧರಿಸಿಕೊಂಡ ಬಳಿಕ ಮಧುವರಸನ ದೇಹದ ಚರ್ಮವು ನವೆ ಅಥವಾ ಉರಿಯಿಂದ ಬಾಧಿತವಾಗುತ್ತದೆ. ಗಲ್ಲೆಬಾನಿಯ ನೀರಿನ ಸ್ಪರ್ಶದಿಂದ ಅವನ ದೇಹದ ಉರಿಬೇನೆ ನಿವಾರಣೆಯಾಗಿ ಚರ್ಮವು ತಂಪಾಗುತ್ತದೆ.
ಮಲೆಮಹದೇಶ್ವರನನ್ನು ಕುರಿತ ಜಾನಪದ ಮಹಾಕಾವ್ಯದಲ್ಲಿ ಸಮಣದೊರೆಯು ಹರಳಯ್ಯನ ಕೈಗಳಿಂದ ಉರಿಚಮ್ಮಾಳಿಗೆಗಳನ್ನು ಬಲವಂತವಾಗಿ ಕಿತ್ತುಕೊಂಡು ಧರಿಸುವ ಹಾಗೂ ಗಲ್ಲೆಬಾನಿಯ ದಿವ್ಯೋದಕದಿಂದ ರೋಗಮುಕ್ತನಾಗುವ ಪ್ರಧಾನ ಉಲ್ಲೇಖವಿದೆ. ಕವಿ ಕೆ.ಬಿ.ಸಿದ್ದಯ್ಯ ‘ಗಲ್ಲೆಬಾನಿ’ ಎಂಬ ಹೆಸರಿನಲ್ಲಿಯೇ ಖಂಡಕಾವ್ಯ ರಚಿಸಿ ಪ್ರಕಟಿಸಿರುತ್ತಾರೆ.
ಗಲ್ಲೆಬಾನಿಯ ನೀರನ್ನು ಅಥವಾ ಚಮ್ಮಾರನು ಚರ್ಮಕಾಯಕದಲ್ಲಿ ಬಳಸುವ ನೀರನ್ನು ಪವಿತ್ರ ಜಲವೆಂದು, ಅಘನಾಶಿನಿ (ಪಾಪನಾಶಿನಿ) ಎಂದು ಭಾವಿಸಿರುವ ಅನೇಕ ಜನ ತಮ್ಮ ಮನೆಗಳಿಗೆ ಸೂತಕ ಕಳೆಯಲು ತೆಗೆದುಕೊಂಡು ಹೋಗುತ್ತಾರೆ. ಮದುವೆ, ಗೃಹಪ್ರವೇಶ, ಹೊಸ ಅಂಗಡಿ ತೆರೆಯಲು, ಕೈಗಾರಿಕೆ, ಉದ್ದಿಮೆ, ವ್ಯಾಪಾರ – ಸಾಪಾರ, ಹೊಸಬಾವಿ ತೋಡುವುದು, ಬೇಸಾಯ, ದನಕರುಗಳ ಕಾಯಿಲೆ ನಿವಾರಣೆ, ಕೈಚಿಟುಗು – ಮುಟ್ಟುತಟ್ಟುಗಳ ನಿವಾರಣೆ ಮುಂತಾದ ಶುಭ ಅಶುಭ ಕೆಲಸಗಳಿಗೆ ಗಲ್ಲೆಬಾನಿಯ ನೀರನ್ನು ತೆಗೆದುಕೊಂಡು ಹೋಗಿ ಪವಿತ್ರ ತೀರ್ಥವೆಂದು (ಪಂಚಗವ್ಯದಂತೆ) ಶುದ್ಧೀಕರಣ ಪ್ರಕ್ರಿಯೆಗಳಲ್ಲಿ ಪ್ರೋಕ್ಷಿಸುತ್ತಾರೆ.
ದೇವಿ ಮಾತಂಗಿಯ ಪ್ರತಿರೂಪ 'ಗಲ್ಲೆಬಾನಿ'
ನಿಮಗೆ ಇವೂ ಇಷ್ಟವಾಗಬಹುದು…





0 Comments