ದೇವರೇ, ವಿಳಾಸ ತಪ್ಪಿಹೋಗಲಿ..

ಕೋಪಿಸಿಕೊಂಡ ಕೆಂಪು ಫ್ರಾಕ್‍ನ ಎಳೆಯ ಹುಡುಗಿಯಂತೆ, ಕಡುಗೆಂಪು ಬಣ್ಣದ ಪೋಸ್ಟ್ಬಾಕ್ಸ್ ಒಳಗಿನ ದಿವ್ಯಕತ್ತಲೆಯಲ್ಲಿ ಸಂಭ್ರಮಗಳ ಜತೆಯಲ್ಲಿಯೇ ಮೌನವಾಗಿ ತುಯ್ಯುತ್ತಿತ್ತು ಸಂಕಟವೊಂದು. ಬಗೆಹರಿಯದ ಜಮೀನಿನ ವಾಜ್ಯದ ಕಾಗದಗಳು, ಕೋರ್ಟ್ ಆರ್ಡರ್ಗಳು, ದೀರ್ಘರಜೆಯ ಲೀವ್ ಲೆಟರ್, ಬದುಕಿದ್ದಾಗಲೇ ಸಾವಿನ ಭಯವಾಗಿ ಮಾಡಿಟ್ಟುಕೊಂಡ ಲೈಫ್ ಇನ್ಶೂರೆನ್ಸ್ನ ಅರ್ಜಿಗಳು, ನಾಮಕರಣ, ಉಪನಯನ, ಗೃಹಪ್ರವೇಶದಂತಹ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನಿಸುವ ಗ್ರೀಟಿಂಗ್ ಕಾರ್ಡುಗಳಂತಹ ಆಹ್ವಾನಪತ್ರಿಕೆಗಳ ಜತೆಯಲ್ಲಿ ಡಿವೋರ್ಸ್ ನೋಟಿಸ್‍ವೊಂದು ಬಿಕ್ಕಳಿಸುತ್ತ ಆಗಾಗ ಕಣ್ಣೊರೆಸಿಕೊಳ್ಳುತ್ತಿದೆ.  ಸಂಭ್ರಮಿಸುವವರ ನಡುವೆಯೇ ಅನಿವಾರ್ಯವಾಗಿ ನೋವನ್ನು ಎನ್ವಲಪ್ ಕವರ್ನ ತುದಿಗೆಯೊಂದಕ್ಕೆ ಸರಿಸಿ, ಡಿವೋರ್ಸ್ ನೋಟಿಸು ಹೆಜ್ಜೆಯನ್ನು ಜೋಡಿಸುತ್ತದೆ.

ದಿಗಿಲುಗೊಳಿಸಲೆಂದೇ ಕಳುಹಿಸಿದ ಕೋರ್ಟ್‍ನ ಅರ್ಜಿಗಳು, ಯಾರನ್ನೋ ಎದುರು ನೋಡುವಂತಹ ಆಸೆಗಣ್ಣುಗಳನ್ನು ತೆರೆದಿಡುವ ಗೃಹಪ್ರವೇಶ, ನಾಮಕರಣದ ಆಹ್ವಾನಪತ್ರಿಕೆಗಳು ಸಂಭ್ರಮದ ದಿನವನ್ನು ಎದುರು ನೋಡುತ್ತಿರುವಾಗಲೇ, ಅಜ್ಞಾತ ರಸ್ತೆಯ ತುದಿಯಲ್ಲಿ ನಿಂತು ದೀರ್ಘರಜೆಯ ಲೀವ್ ಲೆಟರ್ ಅನುಮತಿಗಾಗಿ ಬೇಡುತ್ತದೆ. ಈ ಎಲ್ಲಾ ಗೌಜುಗದ್ದಲಗಳು ಹಾಗೂ ಭರವಸೆ, ಸಂಭ್ರಮಗಳ ನಡುವಿನಲ್ಲೇ ಸುಪ್ತವಾಗಿ ಪಿಳಿಪಿಳಿ ಕಣ್ಣುಮಾಡುತ್ತಾ ಲಗ್ನಪತ್ರಿಕೆಯೊಂದು ಉಳಿದಿರುತ್ತದೆ.

ಮೈ ತುಂಬಾ ಬಿಡಿಸಿಕೊಂಡಿರುವ ಹೂವಿನ ಚಿತ್ತಾರಗಳು, ಯಾರದೋ ಅಧಿಕೃತ ಒಪ್ಪಿಗೆಯ ಮೊಹರು, ಭಯಗೊಳಿಸಲೆಂದೇ ಅಚ್ಚುಹಾಕಿಸಿದ ದೇವರನಾಮ, ಅಲ್ಲೆಲ್ಲೋ ಸಿದ್ದವಾಗುತ್ತಿರುವ ಉಳಿದ ತಯಾರಿಗಳ ಸಂಭ್ರಮದಲ್ಲಿ ಒಂಟಿಯಾಗಿ ಚಲಿಸುತ್ತಿರುತ್ತದೆ. ಲಗ್ನಪತ್ರಿಕೆಯ ಬೆರಳನ್ನು ಹಿಡಿದೆ ನಡೆಯುತ್ತಿದೆ ಅದೃಶ್ಯ ಒರಟು ಅಂಗೈ. ಅದಕ್ಕೆ ನೂರು ಕಾನೂನುಗಳು. ಯಾರೊಂದಿಗೂ ಮಾತನಾಡುವಂತಿಲ್ಲ, ಏನಾದರೂ ಹೇಳಲೆಬೇಕು ಎನಿಸಿದರೆ ನಿರ್ಭಯವಾಗಿ ಹೇಳಬಹುದು. ಆದರದು ಯಾರಿಗೂ ಕೇಳಬಾರದು. ನದಿಯ ಇರುಳ ಮೊರೆತದಷ್ಟೇ ಸುಪ್ತವಾಗಿರಬೇಕು. ಬೇಕಾದರೆ ನೂರು ಕನಸುಗಳನ್ನು ಒಡಲಿನಲ್ಲಿ ಹುದುಗಿಟ್ಟಿಸಿಟ್ಟುಕೊಳ್ಳಬಹುದು. ಯಾವ ಆಕ್ಷೇಪಣೆಯಿಲ್ಲ. ಆದರೆ ಆ ಯಾವುದು ತಪ್ಪಿಯೂ ಹೊರಗೆ ಕಾಣಬಾರದು.

ಗೊತ್ತಾ? ಲಗ್ನಪತ್ರಿಕೆಗೆ ನಗು ಎನ್ನುವುದು ಕಡ್ಡಾಯ!

ನಾಲ್ಕು ಮೂಲೆಗಳಿಗೆ ಅರಿಶಿಣ – ಕುಂಕುಮ ಮೆತ್ತಿಸಿಕೊಂಡಿರುವ ಲಗ್ನಪತ್ರಿಕೆಯ ಒಡಲಿನಲ್ಲಿ ಅದೃಶ್ಯ ಗಡಿಯಾರವೊಂದು ತಿರುಗುತ್ತಿದೆ. ಟಿಕ್ ಟಿಕ್ ಸದ್ದು ಮಾಡದ ಹೊಸ ಕಾಲದ ಗಡಿಯಾರದ ಹಿಂದೆ ಕಿರುಚುತ್ತ ಓಡುತ್ತಿದ್ದಾರೆ ಮನೆಮಂದಿಯೆಲ್ಲ. ಎಲ್ಲರ ಮುಖದಲ್ಲೂ ನಗು. ಸಂಭ್ರಮ. .ಯಾರದೋ ಹುಕಂ ಅನುಸರಿಸಿ ವೃತ್ತಾಕಾರವಾಗಿ ಅಲೆಯುತ್ತಿರುವ ಗಡಿಯಾರ ನೂರು ಬಾರಿ ಸುತ್ತಿದರೂ ಗಡಿದಾಟಿ ಹೊರಗೇ ಬರಲಾಗಿಲ್ಲ. ಇದ್ದಲ್ಲೇ ಉಳಿದುಹೋಗಿದೆ. ಗಡಿಯಾದ ಮುಳ್ಳುಗಳು ಗಡಿಯಾರವನ್ನೇ ಇರಿದು ಗಾಯಗೊಳಿಸುತ್ತಿದೆ. ಈಗ ಅದರ ಸುತ್ತಲೂ ಮುಳ್ಳಿನ ತರಚುಗಾಯ. ರಕ್ತದ ಗೀಟುಗಳು. ಗಡಿಯಾರ ಈಗಲೂ ನಿಲ್ಲಲಾಗಿಲ್ಲ.

ಬಹುಶಃ ಲಗ್ನಪತ್ರಿಕೆ ಅವ್ಯಕ್ತವಾಗಿ ನೊಂದುಕೊಳ್ಳುತ್ತಿರಬೇಕು. ಅದಿರದಿದ್ದರೆ ಹೀಗೆ, ಕತ್ತಲೆಯಲ್ಲೂ ಬಿಕ್ಕುತ್ತಿರಲಿಲ್ಲ, ಹೀಗೆ ದೂರದಲ್ಲಿ ಕಣ್ತಪ್ಪಿಸಿ ಕೂತು ಒಂಟಿಯಾಗಿ ಮಿಡುಕುತ್ತಿರಲಿಲ್ಲ. ಯಾರು ಕೇಳದಿದ್ದರೂ ಎಲ್ಲವನ್ನೂ ಹೇಳಿಬಿಡುತ್ತೇನೆ ಎನ್ನುವಂತೆ ತುಡಿಯುತ್ತಿರಲಿಲ್ಲ. ಈಗ ಲಗ್ನಪತ್ರಿಕೆಯ ಸಂಕಟವನ್ನು ಕೇಳುವವರು ಯಾರು? ಅದರ ಎದೆಯ ಭಾಷೆ ಯಾವುದು?  ಅದು ತಿಳಿದಿದ್ದರೆ ಸಾಕಿತ್ತು. ಲಗ್ನಪತ್ರಿಕೆಯನ್ನು ಪೋಸ್ಟ್ಬಾಕ್ಸ್ನ ದಿವ್ಯಕತ್ತಲಿನಿಂದ ಬಿಡುಗಡೆಗೊಳಿಸಬಹುದಿತ್ತು. ಮರದ ನೆರಳಿನಲ್ಲಿ ಕೂತು ತಲೆ ನೇವರಿಸಿ “ಹೇಳು ಮಗಳೇ, ಏನು? ಅಳುತ್ತಿರುವುದು ಏಕೆ? ಅಷ್ಟಕ್ಕೂ ಇಂತಹದೊಂದು  ಅವಸರದ ನಿರ್ಧಾರವನ್ನು ಮಾಡಿದ್ದಾದ್ದರೂ ಹೇಗೆ”ಎಂದು ಕೇಳಬಹುದಿತ್ತು. ಸಂತೈಸಬಹುದಿತ್ತು.

ಆದರೆ ಈಗ ಕೇಳುವುದು ಹೇಗೆ?

ಪೋಸ್ಟ್ಮ್ಯಾನ್ನ ಹೆಗಲ ಮೇಲಿದ್ದ ಶತಮಾನದ ಕೊಳೆತುಂಬಿದ ಬ್ಯಾಗ್‍ನಲ್ಲಿ ಮುಳುಗಿರುವಾಗಲೆ. ಲಗ್ನಪತ್ರಿಕೆಯ ನುಣುಪು ಬೆನ್ನಿನ ಮೇಲೆ ವಿಳಾಸವೊಂದು ದಾಖಲಾಗಿದೆ. ಯಾರೋ ದೂರದ ರಕ್ತಸಂಬಂಧಿಯ ಪುರಾತನ ಮನೆಯ ವಿಳಾಸವದು. ಈಗ ಲಗ್ನಪತ್ರಿಕೆ ವಿಳಾಸವನ್ನು ಹುಡುಕಿ ಹೊರಟಿದೆ. ಒಂಟಿಯಾಗಿ ಹೊರಟಿರುವ ಹಾದಿಯಲ್ಲಿ ಲಗ್ನಪತ್ರಿಕೆಯ ಮಾತುಗಳನ್ನು ಹಂಚಿಕೊಳ್ಳಲು ಯಾರು ಸಿಗಲಿಲ್ಲ. ಲಗ್ನಪತ್ರಿಕೆಯನ್ನು ಕಂಡವರೆಲ್ಲ ವಿಚಿತ್ರವಾಗಿ ನಗುತ್ತಾರೆ. ಬೇಕು ಅಂತಲೇ ಗೌರವದಿಂದ ನಡೆದುಕೊಳ್ಳುವಂತೆ ತೋರುತ್ತಾರೆ. ಏಕೆ ಹೀಗೆ?

ಲಗ್ನಪತ್ರಿಕೆಯ ಬೆನ್ನಿನ ಮೇಲಿರುವ ವಿಳಾಸ ತಲುಪುವುದಕ್ಕೆ ಇನ್ನೂ ಮೂನ್ನೂರು ಕೀಲೋ ಮೀಟರ್ ಬಾಕಿ ಇದೆ. ಈ ರಾತ್ರಿ ಕಳೆದ ನಂತರ ಯಾರಾದರು ಎದುರಾಗಬಹುದಾ? ಹಾಗೊಮ್ಮೆ ಎದುರಾದರೆ, ಒಡಲನ್ನು ಬರಿದು ಮಾಡಿಕೊಂಡುಬಿಡುತ್ತೇನೆ. ಶಾಪ ವಿಮೋಚನೆಯಾಗಬಹುದು. ಎದುರಾದವರೇ, ಕಣ್ಣೋರೆಸಬಹುದು.

ಇಡೀ ದಿನ ಪ್ರಯಾಣಿಸಿದ ಕಾಗದಗಳನ್ನು ಇದೀಗ ಒಂದೇ ರಾತ್ರಿಯ ನಿದ್ರೆಗೆ ಗೋಣಿಚೀಲದಲ್ಲಿ ಕೂಡಿಟ್ಟು, ದೂರದ ಪೋಸ್ಟ್ ಆಫೀಸಿನಲ್ಲಿ ವಿಶ್ರಾಂತಿಗಿಳಿಸಿದ್ದಾರೆ. ಮೈ ತುಂಬಾ ಇದೀಗ ಹೊಸ ಕಡುನೀಲಿ ಸೀಲುಗಳು. ಕೆಲವು ಚೌಕದ ಅಳತೆಗೆ ಮತ್ತೆ ಕೆಲವು ವೃತ್ತಾಕಾರಕ್ಕೆ. ಆ ನಿರ್ಜನ ಒಂಟಿ ಉಳಿದ ಕಾಗದಗಳು ಕಿಸಕಿಸನೇ ನಗೆಯಾಡುತ್ತಿರುವಾಗ, ಲಗ್ನಪತ್ರಿಕೆ ಮಾತ್ರ ಕಣ್ಣೀರು ಸುರಿಸುತ್ತಲೇ ಇತ್ತು. ಅದರ ನೋವಿಗೆ ಕಿವಿಯಾಗುವುದಕ್ಕೆ, ಸಂತೈಸುವುದಕ್ಕೆ ದನಿಯಾಗಲಿಕ್ಕೆ ಯಾರೂ ಬಂದಿರಲಿಲ್ಲ.

ಪೋಸ್ಟ್ಬಾಕ್ಸ್ನ ಸುಪ್ತಕತ್ತಲಿನಲ್ಲಿ ಲಗ್ನಪತ್ರಿಕೆಯ ಭಾಷೆ ತಿಳಿದಿದ್ದವರು ಯಾರೂ ಇರಲಿಲ್ಲ. ಅದು ಸತ್ಯ. ಅಲ್ಲಿದ್ದವರು ಕೇವಲ ಬಹಿರಂಗ ನೋವಿಗೆ ಬಡಿದಾಡುತ್ತಿದ್ದವರು. ಹತ್ತು ಎಕರೆಯ ಅಡಿಕೆ ತೋಟದ ಮೇಲಿನ ಕೇಸು ವಜಾಗೊಂಡಿದ್ದಕ್ಕೆ ಬಂದಿದ್ದ ಕಾಗದ. ಅಪ್ಪನ ಜಮೀನು ಮಾರಿ, ಸೋಮಾರಿ ಮಗ ಕಟ್ಟಿಸಿದ್ದ ಕಂಬದ ಮನೆಯ ಗೃಹಪ್ರವೇಶ ಆಹ್ವಾನಪತ್ರಿಕೆ. ಅನಿವಾರ್ಯ ಎನ್ನುವಂತೆ ಮದುವೆಯಾಗಿ, ಅಗತ್ಯ ಎನ್ನುವಂತೆ ಅಪ್ಪನಾಗಿದ್ದವನ ಮಗುವಿನ ನಾಮಕರಣದ ಆಹ್ವಾನಪತ್ರಿಕೆಯ ಜತೆಯಲ್ಲಿ ರಜೆಯ ಅರ್ಜಿಯೂ ಹರಟೆ ಕೊಚ್ಚುತ್ತಿತ್ತು. ಅದರ ಮೈ ತುಂಬಾ ಬರಿಯ ಸುಳ್ಳುಗಳ ಪಿಚಕಾರಿ.

ಅವೆಲ್ಲದರ ಭಾಷೆಯೂ ಬೇರೆ, ಭಾವವೂ ಬೇರೆ.

ನಡುವಿದ್ದ ಲಗ್ನಪತ್ರಿಕೆ ಮಾತ್ರ ಸಾತ್ವಿಕವಾದದ್ದು. ಯಾರಿಗೂ ತನ್ನ ಸಂಕಟವನ್ನ ಅಷ್ಟು ಸಲೀಸಾಗಿ ಬಿಟ್ಟುಕೊಡುವಂತಿರಲಿಲ್ಲ. ಲೋಕಕ್ಕೆ ಗೊತ್ತಿದೆ, ಲಗ್ನಪತ್ರಿಕೆಗೆ ಹತ್ತು ಕಾನೂನು. ಸಾವಿರ ನಿಯಮಗಳು.  ಸಾವಿರ ಅಘೋಷಿತ ವಕ್ತಾರರು. ಮೈ ಮೇಲಿನ ಅರಿಶಿಣ ಸೋರುವಂತೆ ಕಣ್ಣೀರು ಹರಿಯುವಂತೆ ಲಗ್ನಪತ್ರಿಕೆ ಅಳುವಂತಿರಲಿಲ್ಲ. ಎಲ್ಲರಿಗೂ ಕೇಳುವಂತೆ ನಗುವಂತಿರಲಿಲ್ಲ.  ಕೆಂಪುಬಣ್ಣದ ಪೋಸ್ಟ್ಬಾಕ್ಸ್ನ ಎದೆಯ ನೋವನ್ನು ಹೋಲುವ ಕತ್ತಲಿನಲ್ಲಿ ಬೇಕಾದರೆ ಕಣ್ಣೀರು ಸುರಿಸಬಹುದಿತ್ತು.

ಪೋಸ್ಟ್ಬಾಕ್ಸ್ನೊಳಗೆ ಮೈ ಮುದುರಿಕೊಂಡು ಅರೇ ಮಂಪರುವಿನಲ್ಲಿ ವಿಳಾಸ ತಲುಪಬೇಕು ಎನ್ನುವಾಗಲೇ ಲಗ್ನಪತ್ರಿಕೆ ಬೇಡಿಕೊಳ್ಳುತ್ತದೆ. “ದೇವರೇ, ಬೆನ್ನ ಮೇಲಿರುವ ವಿಳಾಸವೂ ತಪ್ಪಿಹೋಗಲಿ. . . ಯಾರೋ ಗುರುತಿಸಿರುವ ಮೂಹೂರ್ತವೂ ತಪ್ಪಿಹೋಗಲಿ”.

ಅಬ್ಬಾ, ಲಗ್ನಪತ್ರಿಕೆಯಲ್ಲಿ ಅದೆಷ್ಟು ಹೂಗಳು ಅರಳಿಕೊಂಡಿವೆ. ಅವು ಬಾಡುವುದೇ ಇಲ್ಲ. ಬೇಕಾದರೆ ಮುದುರಿ ನೋಡಬಹುದು. ಅದರ ನಡುವಿನಲ್ಲಿ ಬರೆಯಲಾಗಿದೆ ಅಂದವಾಗಿ, ಚಿರಂಜೀವಿ ಸೌಭಾಗ್ಯವತಿ. . . .ಚಿರಂಜೀವಿ ರಾಜೀವ. . .ಆದರೆ ಇವರಿಬ್ಬರು ಬೇರೆ. . .ಲಗ್ನಪತ್ರಿಕೆಯಲ್ಲಿ ಗುರುತಿಸಿ ಬರೆಯಲಾಗಿರುವ ಚಿರಂಜೀವಿ ರಾಜೀವ ಮತ್ತು ಚಿರಂಜೀವಿ ಸೌಭಾಗ್ಯವತಿ ಇಬ್ಬರೂ ದಿಕ್ಕು ತಪ್ಪಿಹೋದವರಂತೆ ಅಲ್ಲೆಲ್ಲೋ ನಿಂತು ಕೈ ಮುಗಿದು ಬೇಡುತ್ತಿದ್ದಾರೆ.

“ದೇವರೇ, ಬೆನ್ನ ಮೇಲಿರುವ ವಿಳಾಸವೂ ತಪ್ಪಿಹೋಗಲಿ. . . ಯಾರೋ ಗುರುತಿಸಿರುವ ಮೂಹೂರ್ತವೂ ತಪ್ಪಿಹೋಗಲಿ”.

ಎಷ್ಟು ವರ್ಷಗಳ ಕಾಲ ಆಸೆಗಳ ಕೆಂಡಸಂಪಿಗೆಯ ದಂಡೆ ಕಟ್ಟಿದವರು ಇವರಿಬ್ಬರು. ಮೆಟ್ರೋ ರೈಲಿನ ಸದ್ದಿಗೆ ಅವನು ಕಿವಿಯಾಗುತ್ತಿರುವಾಗ, ಅವಳು ಊರಿನ ಕೆಂಗರುವಿನ ಕೊರಳ ಗಂಟೆಯನ್ನು ನೆನಯುತ್ತಿದ್ದಳು.

ಅವನನ್ನು ಮಗುವಿನಂತೆ ಮಡಿಲಿನಲ್ಲಿ ಮಲಗಿಸಿ ಮುದ್ದುಗರೆಯುವಾಗ, ಅವನು ಸಿಟ್ಟಾದ ನಂತರ ಪುಸಲಾಯಿಸುವುದಕ್ಕೆ ಒಂದಾಣೆ ನೀಡುತ್ತಿದ್ದ ಅಮ್ಮನನ್ನು ನೆನೆದು ಮುಗೊಳ್ಳುತ್ತಿದ್ದ.
ಈಗ ಎಲ್ಲವೂ ತಪ್ಪಿಹೋಗುತ್ತಿದೆ. ಇಬ್ಬರೂ ಭೀತಿಯಿಂದ ನೋಯುತ್ತಾ  ಕೈ ಹಿಸುಕಿಕೊಳ್ಳುತ್ತಾ ಚಡಪಡಿಸುತ್ತಿದ್ದಾರೆ.

ಲಗ್ನಪತ್ರಿಕೆಗಳು ಸಿದ್ದಗೊಂಡಿವೆ.

ಈಗ ಲಗ್ನಪತ್ರಿಕೆಯ ಮನೆಗೊಂದು ಹೊಸ ಉತ್ಸಾಹ ಬಂದಿದೆ. ಊರಿಗೆ ಬರದ ಹಬ್ಬದ ಕಳೆಯೊಂದು ಸೇರಿಕೊಂಡಿದೆ ಆ ಮನೆಯ ಬಾಗಿಲಿನಲ್ಲಿ ಬಂದು ನಿಂತಿದೆ. ಆ ಮನೆಯ ಎಲ್ಲ ದನಿಗಳೂ ಜೋರು. ನಿಧಾನವೂ ಕೂಡ ಅವಸರ. ಮುನಿಸು ಎನ್ನುವ ಬಿಳಿ ಕುದುರೆಯನ್ನು ಎಲ್ಲರೂ ಮನೆಯ ಗೂಟಕ್ಕೆ ಹಿಡಿದು ಕಟ್ಟಿಹಾಕಿದ್ದಾರೆ. ನಕಲಿಯ ನಗೆಯ ಅಭ್ಯಾಸದ ತರಗತಿ ಬಿರುಸಿನಿಂದ ನಡೆಯುತ್ತಿದೆ. ಈಗ ಅದೇ ಮನೆಯೊಳಗನಿಂದ ಅದೊಂದು ಮಾತು ಮತ್ತೆ ಮತ್ತೆ ಕೇಳಿಬರುತ್ತಿದೆ.

“ಇದನ್ನು ಅವರು ಒಪ್ಪಿಕೊಳ್ಳುತ್ತಾರಾ?
ಇದು ಅವರಿಗೆ ಇಷ್ಟವಾಗುತ್ತದಾ?
ಅಯ್ಯೋ, ಹೀಗೆ ಮಾಡಿದರೆ ಅವರು ನಮ್ಮ ಬಗ್ಗೆ ಏನಂದುಕೊಂಡಾರು?
ಸರಿ, ಇದು ಅವರಿಗೆ ಗೊತ್ತಾಗುವುದು ಬೇಡ?.
ಬೆದರಿದ ಪುಂಡ ಮಗುವಿನಂತೆ ಎಲ್ಲರನ್ನೂ ಬೆಚ್ಚಿಸುವ ಅಪ್ಪನೂ “ಅವರು”ಗಳಿಗೆ ಬೆಚ್ಚುತ್ತಿದ್ದಾನೆ.
ಅಷ್ಟಕ್ಕೂ “ಅವರು” ಎಂದರೆ ಯಾರು?

ಇಡೀ ಲೋಕವನ್ನೇ ಭಯಗೊಳಿಸಿರುವ, ಎಲ್ಲರಿಗೂ ಅದೃಶ್ಯವಾಗಿರುವ ಮೂಲಕವೇ ಅಪರೂಪದ ಶಿಸ್ತಿಗೆ ಒಳಪಡಿಸಿರುವ, ಪ್ರತಿಯೊಬ್ಬರ ಬದುಕಿನಲ್ಲಿಯೂ ಮೊದಲ ಸ್ಥಾನವನ್ನೇ ಕಾಯ್ದುಕೊಂಡಿರುವ, ಎಂದಿಗೂ ಜತೆ ಕೈ ಬೀಸಿ ನಡೆಯದ “ಅವರು” ಯಾರು?

ಸರಿಯಾದ ವಿಳಾಸವಿರದ, ಯಾವತ್ತಿಗೂ ಎದುರು ನಿಂತು ಬದುಕಿನ ಗಮ್ಯತೋರದ, ತಪ್ಪು ಎನ್ನುವುದಾದರೆ ಅದು ಹೇಗೆ ಎಂದು ಹೇಳದ, ಸದಾ ಅಜ್ಞಾತವಾಗಿಯೇ ಉಳಿದಿರುವ “ಅವರು”ಗಳನ್ನು ಈ ಲಗ್ನಪತ್ರಿಕೆ ತಲುಪುವುದು ಹೇಗೆ? ಯಾವತ್ತಿಗೂ ಭೇಟಿಯಾಗದ “ಅವರು”ಗಳನ್ನು ಮೆಚ್ಚಿಸುವುದಕ್ಕೆ ಅಪ್ಪ ಬಡಿದಾಡುತ್ತಿರುವುದು ಏಕೆ? ಎಲ್ಲರೂ ಮದುವೆಯಾಗುವುದು “ಅವರು” ನೋಡುತ್ತಾರೆ ಎನ್ನುವ ಭಯದಿಂದಲಾ?

ಮನೆಯ ಹಿತ್ತಲಿನಂತಹ ಹೂ ತೋಟದಲ್ಲಿ ಚಿರಂಜೀವಿ ರಾಜೀವ ಮತ್ತು ಚಿರಂಜೀವಿ ಸೌಭಾಗ್ಯವತಿ ಕೈ ಕೈ ಹಿಡಿದುಕೊಂಡು ಅರೆಪ್ರಜ್ಞೆಯ ಸ್ಥಿತಿಯಲ್ಲಿ ಜಗವನ್ನು ನೋಡುತ್ತಿದ್ದಾರೆ. ಅವರಿಗೆ ಇದೀಗ ಹೊಸ ವಿಳಾಸದ ಹಾದಿ ಗೋಚರವಾಗುತ್ತಿದೆ.

ಅಲ್ಲೆಲ್ಲೋ ಲಗ್ನಪತ್ರಿಕೆಯ ಹಂಗಿಲ್ಲದ ವಿಳಾಸವೊಂದು ಕಾಯುತ್ತಿದೆ. ಆ ಊರು ಲಗ್ನಪತ್ರಿಕೆಯ ಸಾಮಾಜಿಕ ಅಧಿಕೃತ ಒಪ್ಪಿಗೆಯ ಮುದ್ರೆಯನ್ನು ಎಂದೋ ತಿರಸ್ಕರಿಸಿ ಸುಪ್ತವಾಗಿದೆ. ಆ ಊರಿನ ಮನೆಯ ಎದುರಿನ ತೋಟದಲ್ಲಿ ಗಿಡಗಳು ಋತು ಬದಲಿಸದೆ ಹೂ ಅರಳಿಸುತ್ತವೆ. ತೋಟದ ಹಣ್ಣುಗಳು ಯಾವತ್ತಿಗೂ ಕಹಿ ಎನಿಸುವುದಿಲ್ಲ. ಮನೆಯ ಹಿಂಬಾಗಿಲಿನಲ್ಲಿ ಹಿತ್ತಲಿನ ಮಗ್ಗುಲ್ಲಲ್ಲೇ ಕೈಗೆ ಎಟುಕುವಂತೆ ಹರಿಯುತ್ತದೆ ಸಿಹಿನೀರ ತೊರೆ.  ಮನೆಯ ಒಲೆಗಳಲ್ಲಿ ಹದಗೊಳ್ಳುತ್ತದೆ ಸಂಬಂಧಗಳ ಬಿಸುಪು ಕಾವು.

ಅಲ್ಲಿ ವರ್ಷ ಕೊನೆಗೊಳ್ಳುವ ಮೊದಲೇ ಹೊಸ ವರ್ಷದ ಕ್ಯಾಲೆಂಡರ್ ಮನೆಯ ಗೋಡೆಯನ್ನು ಅಲಂಕರಿಸುತ್ತದೆ. ಕಸೂತಿ ಹಾಕುವುದನ್ನು ಯಾರೂ ಹೇಳಿಕೊಡುವುದಿಲ್ಲ. ಆದರೆ ಕಲಿಕೆಯಾಗುತ್ತದೆ.  ಲಾಲಿ ಹಾಡುಗಳು ರಾಗದ ಚೌಕಟ್ಟುಗಳ ಹಂಗನ್ನು ಧಿಕ್ಕರಿಸಿ ನಂತರವೇ ಇಂಪಾಗಿ ಕೇಳುತ್ತದೆ. ತಿಂಗಳ ಕಂತಿನ ಹಣದಲ್ಲಿ ಕೊಂಡುಕೊಂಡ ಹೂವಿನ ಪಕಳೆಗಳ ಚಿತ್ತಾರದ ಬೆಡ್‍ಶೀಟ್‍ಗಳು ಹೆಚ್ಚು ಇಷ್ಟವಾಗುತ್ತವೆ.

ಅಲ್ಲಿ ಸೋಲುವುದನ್ನು ಕಲಿಸಲಾಗುತ್ತದೆ. ಅವನ ಎದುರು ಅವಳು ಸೋತು ಗೆದ್ದಿರುತ್ತಾಳೆ. ಅವಳ ಎದುರು ಶರಣಾಗಿ ಅವನು ಗೆದ್ದಿರುತ್ತಾನೆ. ಅಲ್ಲಿ ಮುನಿಸು ಎನ್ನುವುದಕ್ಕೆ ಕೇವಲ ಅರ್ಧದಿನದ ಆಯಸ್ಸು. ನಿತ್ಯದ ಸೂರ್ಯ ಕೌಟುಂಬಿಕ ಪ್ರಜ್ವಲತೆಗೆ ನಾಚುತ್ತಲೇ, “ನೀವು ಪ್ರೇಮದ ಹಣತೆಯ ಬೆಳಕಿನಲ್ಲೇ ಬದುಕುವುದಾದರೆ, ನನ್ನ ಹಂಗು ಏಕೆ” ಎಂದು ಸಿಟ್ಟಿನಿಂದ ಅಳುತ್ತ ದೇವರಿಗೆ ದೂರು ನೀಡುವುದಕ್ಕೆ ಓಡಿಹೋಗುತ್ತಾನೆ.

ಕಿಟಕಿಯ ಹೊರಗೆ ನಿಂತು ಕಿರುನಗೆಯನ್ನು ಹೊರಹಾಕುವ ಚಂದ್ರ ಎಲ್ಲವನ್ನೂ ತಾನೇ ಅರ್ಥೈಸಿಕೊಂಡು ಕಣ್ಣುಮುಚ್ಚುತ್ತಾನೆ. ಅವರಿಬ್ಬರು ಒಬ್ಬರೊಳಗೊಬ್ಬರು ಲೀನವಾಗುವ ಪ್ರತಿರಾತ್ರಿಯೂ ಕಡ್ಡಾಯ ಅಮವಾಸ್ಯೆಯಂತಹ ಕತ್ತಲು. ಪ್ರೀತಿ, ಆಸೆ, ಕಿಚ್ಚು, ಕನಸು, ಮೋಹ, ಮಿಲನ ಹಾಗೂ ಮಹತ್ವಾಂಕ್ಷೆಗಳು ಕೈ ಬಿಡದೆ ಇಬ್ಬರನ್ನೂ ನಡೆಸುತ್ತಲೇ ಇರುತ್ತವೆ.

ಭರವಸೆಯ ಬೀದಿಯಲ್ಲಿ ಠೀವಿಯಿಂದ ನಡೆಯುವಾಗ ಸೋಜಿಗದ ಮುದುಕನೊಬ್ಬ “ಅಂತೂ ಎಲ್ಲವನ್ನೂ ಮೀರಿ, ಬರೀ ಪ್ರೀತಿಯಿಂದಲೇ ಗೆದ್ದು ತೋರಿದಿರಿ ಬಡ್ಡಿಮಕ್ಕಳ” ಎಂದು ಕಿಚಾಯಿಸುವಂತೆ ನಗುತ್ತಾನೆ. ಲಗ್ನಪತ್ರಿಕೆ ಚೌಕಟ್ಟು ಮೀರಿದ ನಿಮ್ಮನ್ನು ತಿರಸ್ಕರಿಸಿದ್ದು ತಪ್ಪಾಯ್ತು. ನೋವಾಗಿದ್ದರೆ ಕ್ಷಮಿಸಿ ಎಂದು ಕೇಳುವುದಕ್ಕೆ ಊರಿನ ಅರಳಿಕಟ್ಟೆಯ ಎದುರು ವಿವಿದ ಮುದ್ರೆಯ ಸಾಮ್ರಾಜ್ಯದ ಜನರು ನೆರೆದಿದ್ದಾರೆ. ಬಂದವರ ಎದೆಯ ಮೇಲೆ ಅನೇಕ ಮುದ್ರೆಗಳು.

ಜಾತಿ, ಧರ್ಮ, ಘನತೆ, ಕೋಮು, ಮರ್ಯಾದೆ, ಅಂತಸ್ತು. ಶ್ರೇಷ್ಠತೆ. . .ಹೀಗೆ. . . . .ದಿಟದಲ್ಲಿ ಆ ಯಾವುದನ್ನು ಬಂದಿದ್ದ ಯಾರೂ ಒಮ್ಮೆಯೂ ಭೇಟಿಯಾಗಿಲ್ಲ. ಅವುಗಳ ಕೈ ಕುಲುಕಿ ಮಾತನಾಡಿಸಿರಲಿಲ್ಲ. ನೀವು ನಮ್ಮನ್ನು ಹೇಗೆ ಸಲುಹಬೇಕು ಎಂದುಕೊಂಡಿದ್ದೀರಾ? ಎಂದು ಕೇಳುವುದು ಸಾಧ್ಯವಾಗಿಲ್ಲ.

ಆದರೆ ಸದ್ಯದ ಚಿತ್ರಣ ಬೇರೆ. ಈಗಾಗಲೇ ಲಗ್ನಪತ್ರಿಕೆಯಲ್ಲಿ ಹೆಸರುಗಳು ನಮೂದಾಗಿ ಹೊರಡುತ್ತಿದೆ ಮೂಹೂರ್ತದ ಬಳಿಗೆ. . . ಗುರುತಿಲ್ಲದ ಮುಖಗಳು ಮುಜುಗರದಿಂದಲೇ ಕಾಯುತ್ತಿವೆ ಒಂದು ದಿನದ ಸಂಭ್ರಮಕ್ಕೆ. ಊರಿನ ಜನರು ಒಂದು ಗ್ರೂಫ್ ಫೋಟೋಗೆ ಫೇಶಿಯಲ್ ಮಾಡಿಸಿಕೊಂಡು ಸಿದ್ದವಾಗುತ್ತಿದ್ದಾರೆ. ಅಳತೆ ನೀಡಿದ್ದ ಸ್ಲೀವ್ಲೆಸ್ ಬ್ಲೌಸ್ ತಡವಾಯಿತು ಎಂದು ಅಲ್ಲೊಬ್ಬಳು ಹೆಂಗಸು ಟೈಲರ್ ಎದುರು ಗೊಣಗುತ್ತಿದ್ದಾಳೆ. ಬೆಳಗಿನ ತಿಂಡಿಗೆ ಉಪ್ಪಿಟ್ಟು, ಕೇಸರಿಬಾತು, ತೆಂಗಿನಕಾಯಿ ಚಟ್ನಿ ಸಾಕು. . .ಮಧ್ಯಾಹ್ನದ ಊಟಕ್ಕೆ ಬೇಕಿದ್ದರೆ ಸಂಡಿಗೆ ಮಾಡಿಸಿ ಅಪ್ಪಳ ಬೇಡ ಎಂದು ಮನೆಯ ಹಿರಿಯ ಜೀವವೊಂದು ಭಟ್ಟರೊಂದಿಗೆ ಜಗಳವಾಡುತ್ತಿದೆ.

“ಅವರು” ಏನಂದುಕೊಂಡಾರು ಎನ್ನುವ ಸ್ವಯಂಘೋಷಣೆಯೊಂದಿಗೆ ಮನೆಯ ಮಂದಿ ಹಠಕ್ಕೆ ಬಿದ್ದವರಂತೆ ಕೆಲಸ ಮಾಡುತ್ತಿದ್ದಾರೆ. ಅದೇ ಮನೆಯ ಕೋಣೆಯಲ್ಲಿ ಲಗ್ನಪತ್ರಿಕೆಯಲ್ಲಿನ ಚಿರಂಜೀವಿ ಸೌಭಾಗ್ಯವತಿ ರೂಪಕದ ಹುಡುಗಿ ಕಂಗಾಲಾಗಿ “ಅವರು”ಗಳು ಈಗ ಬರಬಹುದು ಎಂದು ಕಿಟಕಿಯಲ್ಲಿ ನೋಡುತ್ತಿದ್ದಾಳೆ.

ಲಗ್ನಪತ್ರಿಕೆಯಲ್ಲಿ ಹೆಸರು ನಮೂದಾಗದ ಚಿರಂಜೀವಿ ರಾಜೀವ ಪೋಸ್ಟ್ಬಾಕ್ಸ್ನ ಎದುರು ನಿಂತು ವಿಳಾಸ ತಪ್ಪಿಹೋಗಲಿ ಎಂದು ಕೈ ಮುಗಿಯುತ್ತಿದ್ದಾನೆ. ಸೋಜಿಗದ ಮುದುಕನೊಬ್ಬ ಭರವಸೆಯ ಕಣ್ಣುಗಳಿಂದ ಅವರ ತೋಟದ ಹೂ ಅರಳುವುದಕ್ಕೆ ಇನ್ನೆಷ್ಟು ದಿನಗಳು ಬಾಕಿ ಇದೆ ಎಂದು ಬೆರಳು ಮಡಚಿ ಲೆಕ್ಕಹಾಕುತ್ತಿದ್ದಾನೆ.

ಮದುವೆಗಂದು ಬಂದಿರುವ ದೂರದ ನೆಂಟರ ಹುಡುಗಿ ಲಗ್ನಪತ್ರಿಕೆಯನ್ನು ಹರಿದು ದೋಣಿಯಾಗಿಸಿ ಹಿತ್ತಲಿನ ಸಿಹಿನೀರ ಕೊಳದಲ್ಲಿ ಆಟವಾಡುತ್ತಿದ್ದಾಳೆ.

‍ಲೇಖಕರು avadhi

March 27, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: