ಓ ನನ್ನ ದೇವರೇ! ನನಗೆ ನೋವುಗಳಷ್ಟೇ ಇರಲಿ!
ಓ ನನ್ನ ದೇವರೇ!
ನನ್ನ ದುಃಖಗಳನ್ನು ನುಂಗಿಕೊಳ್ಳಲು
ನಾನು ಅವೆಷ್ಟು ಮುಖವಾಡಗಳನ್ನು ಹಾಕಿಕೊಳ್ಳಲಿ
ಅತ್ತು ಅತ್ತು ಕೊನೆಗೊಂದು ದಿನ ಕಣ್ಣೀರಿಗೆ
ಬದಲು
ರಕ್ತ ಬರುವುದೆಂದು ಅಂದುಕೊಂಡಿದ್ದೆ
ಅಥವಾ
ಕಣ್ಣೀರೆಲ್ಲಾ ಬತ್ತಿಹೋಗುವುದೆಂದು ಅಂದುಕೊಂಡಿದ್ದೆ
ಬದುಕನ್ನೇ ಅಡಾ ಇಟ್ಟಿದ್ದಾಯ್ತು!
ಮುಖವಾಡಗಳನ್ನೆಲ್ಲಾ ಕಳಚಿದ್ದೂ ಆಯ್ತು!
ಮನದ ಎಲ್ಲ ಕೊಳಕುಗಳನ್ನು ಕಕ್ಕಿದ್ದಾಯ್ತು!
ದುಃಖದ ಸೆಲೆ ಮಾತ್ರ ದಕ್ಕುತ್ತಿಲ್ಲ
ನೋವುಗಳ ಭಾರ ನನ್ನನ್ನು ಮನುಷ್ಯನನ್ನಾಗಿಸಿದ್ದಂತೂ
ಸತ್ಯ!
ಓ ನನ್ನ ದೇವರೇ!
ನಿನ್ನ ಎದೆಯನ್ನು ಬಗೆದುನೋಡುವ ಆಸೆ ನನಗೆ!
ಅದೆಂಥ ದುರಂತ ಮತ್ತು ಬೆಳಕುಗಳನ್ನು
ನೀನು ಒಳಗೊಂಡಿದ್ದೀಯಾ?
ಒಂದೇ ಒಂದು ಬೆಳಕಿನ ಕಿಡಿಯನ್ನು
ನಿನ್ನೆದೆಯಿಂದ ಬಗೆದು ಪಡೆವ ಆಸೆ ನನಗೆ!
ಬೇಡ; ಖಂಡಿತಾ ಬೇಡ!
ನನಗೆ ನೋವುಗಳಷ್ಟೇ ಇರಲಿ
ನೀನು ಇದ್ದೀಯಾ ಎನ್ನುವುದಾದರೆ ನನಗೆ ನೋವುಗಳಷ್ಟೇ ಇರಲಿ
ನೀನು ಇಲ್ಲಾ ಎನ್ನುವುದಾದರೂ ನನಗೆ ನೋವುಗಳಷ್ಟೇ ಇರಲಿ
ಬದುಕಿನ ಎಲ್ಲ ಏರಿಳಿತಗಳನ್ನು ನನ್ನ ಒಂದೇ ಒಂದು ಹನಿ ಕಣ್ಣೀರು
ನನಗೆ ದರ್ಶನಮಾಡಿಸಿದೆ!
ಓ ನನ್ನ ದೇವರೇ!
ನನ್ನ ಹಳೆಯ ನೋವುಗಳನ್ನು ಮರೆಯಲು
ನನಗೆ
ಇನ್ನಷ್ಟು ಹೊಸ ನೋವುಗಳನ್ನು ಕೊಡು!
ಆದರೆ ಹಳೆಯ ನೋವುಗಳನ್ನು ಮಾತ್ರ
ನವೀಕರಿಸಬೇಡ!
ಹೃದಯಕ್ಕೂ ಇಂತಿಷ್ಟೇ ಭಾರ!
ಹೊಸ ಹೊಸ ನೋವುಗಳ ಆಗಮನದಿಂದ
ಹಳೆಯ ನೋವುಗಳೆಲ್ಲಾ
ಸರ್ವನಾಶವಾಗಲಿ!
ಓ ನನ್ನ ದೇವರೇ!
ಸಾಧ್ಯವಾದರೆ ಮತ್ತೊಂದಿಷ್ಟು ಕಣ್ಣುಗಳನ್ನೂ
ನನಗೆ ದಯಪಾಲಿಸು!
ಏನು ಬರೆಯಲಿಕ್ಕೇ ಹೋದರೂ…
ಏನು ಬರೆಯಲಿಕ್ಕೇ ಹೋದರೂ
ಅದು ಬರೀ ಸುಳ್ಳನ್ನಷ್ಟೇ ಬರೆದಂತಾಗುವುದು
ಅದು ಹೇಗೆಂದರೆ
ಒಂದು ಹಗಲಿಗೆ ಒಂದೇ ಇರುಳೆಂಬ
ಅದ್ವೈತ ಭ್ರಮೆಯನ್ನು
ಪಠಿಸಿದಂತೆ
ಸಾವಿರ ಸಾವಿರ ಸುಳ್ಳುಗಳನ್ನು
ಸತ್ಯವೇ ಎಂಬಂತೆ;
ಸಾವಿರ ಸಾವಿರ ಸತ್ಯಗಳನ್ನು
ಸುಳ್ಳೇ ಎಂಬಂತೆ;
ನನ್ನನ್ನು ನಾನೇ ಇನ್ನಷ್ಟು ಹುರಿಗೊಳಿಸಿಕೊಂಡು
ನನ್ನನ್ನು ನಾನೇ ಇನ್ನಷ್ಟು ಜಡಗೊಳಿಸಿಕೊಂಡು
ಸುದೀರ್ಘ ನಿಟ್ಟುಸಿರು ಬಿಟ್ಟು
ಹೊಸ ಶೋಧನೆಯೊಂದಕ್ಕೆ
ತೊಡಗಿಕೊಂಡಂತೆ
ಇಂಥ ಎಷ್ಟೋ ಸುಳ್ಳುಗಳನ್ನು
ಬರೆದು ಬರೆದು
ಸತ್ಯಗಳನ್ನು ಅಖಂಡ ಮೋಸಗಳಲ್ಲಿ ಮಣೆಹಾಕಿ
ಅವಿಶ್ರಾಂತ ಅಂತ್ಯಗಳಿಗೆ ಜೀವಬರಿಸಿಕೊಂಡು
ಅವುಗಳನ್ನು ಕೆಣಕಿದ್ದೇನೆ
ಕೆಲವು ಸತ್ಯಗಳಿಗೆ ಸುಳ್ಳುಗಳನ್ನು ಸೋಲಿಸುವ ಶಕ್ತಿಯಿರುತ್ತದೆ
ಹಾಗೇ
ಕೆಲವು ಸುಳ್ಳುಗಳಿಗೆ ಸತ್ಯಗಳನ್ನು ಸೋಲಿಸುವ ಶಕ್ತಿಯಿರುತ್ತದೆ
ಅವಳಿಗಿಂತ ದೊಡ್ಡ ಸುಳ್ಳು
ಮತ್ತು
ಅವಳಿಗಿಂತ ದೊಡ್ಡ ಸತ್ಯ
ಇಂದು
ಇಲ್ಲಿ
ಕಾವ್ಯದ ರೂಪವನ್ನು ಹೊತ್ತು
ನನ್ನೊಳಗಿನ ಪೆನ್ನಿನ ಶಾಯಿಯನ್ನು ಕೆಣಕುತ್ತಿದೆ
ಸುಳ್ಳು ಮತ್ತು
ಸುಳ್ಳಷ್ಟೇ!
ಏನು ಬರೆಯಲಿಕ್ಕೇ
ಹೋದರೂ
ಅದು ಬರೀ ಸುಳ್ಳು
ಮತ್ತು ಸುಳ್ಳಷ್ಟೇ!








0 Comments