ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವರೆಡೆಗೆ ನಡೆದ ಓ ನಡೆದಾಡಿದ ದೇವರೇ…

ನಂದಿನಿ ಹೆದ್ದುರ್ಗ

ದೇವರೆಡೆಗೆ ನಡೆದ ಓ
ನಡೆದಾಡಿದ ದೇವರೇ
ಕ್ಷಮಿಸಿ ನಾ ನಿಮ್ಮ ಭಕ್ತಳಾಗಲಾರೆ.
ಅಂಗವಿದೆ, ಲಿಂಗವಿದೆ, ಭಂಗವಿಲ್ಲದೇ ಸಾಂಗವಾಗಿ
ಪೂಜೆಯೂ ನಡೆಯುತಿದೆ.
ಕ್ಷಮಿಸಿ ದೇವರೇ
ನಾ ನಿಮ್ಮ ಭಕ್ತಳಾಗಲಾರೆ.

ಕಳಬೇಡವೆಂದಿರಿ, ಕೊಲಬೇಡವೆಂದಿರಿ
ನುಡಿಯೆಲ್ಲಾ ಹುಸಿಯೇ ನಮ್ಮದು
ತನ್ನ ಬಣ್ಣಿಸಿಕೊಳ್ಳದ ಹೊರತು ನನ್ನಲ್ಲಿ ಮಾತು ಮುಗಿಯುವುದಿಲ್ಲ
ಅವರ ಜರಿಯದಿರೆ ನನ್ನ ದೊರೆತನವು ತಿಳಿಯುವುದಿಲ್ಲ
ಇದು ಕಾರಣ
ಕ್ಷಮಿಸಿ ದೇವರೆ.
ನಾ ನಿಮ್ಮ ಭಕ್ತಳಾಗಲಾರೆ.

ಮೂರು ಮೂರು ಬಾರಿ ಮೀಯುವೆ, ಬಹಿರಂಗ ಶುದ್ದಿಗೆ
ಪೂಸಿಕೊಂಡು ಅತ್ತರು ನಿಮ್ಮ ಗಂಧ ವಿಭೂತಿಗೆಂತಲೂ
ಘಮ್ಮೆನ್ನುವೆ.
ಅಂತರಂಗದ ಕೊಳೆ ಕಂಡೀತೆ ಹೊರಗೆ.
ಇರಲಿಬಿಡಿ ಇದ್ದಷ್ಟು, ಬರಲಿಬಿಡಿ ಮತ್ತಷ್ಟು
ಅಡಗಿಸುವುದೇನಂತ ಹೊಸತಲ್ಲ ನನಗೆ
ಇದು ಕಾರಣ,
ಕ್ಷಮಿಸಿ ದೇವರೆ
ನಾ ನಿಮ್ಮ ಭಕ್ತಳಾಗಲಾರೆ.

ನುಡಿಯ ಲಿಂಗ ಮೆಚ್ಚಿ ಅಹುದಹುದೆನಬೇಕೆಂದಿರಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚನೆಂದಿರಿ.
ನೆರೆಮನೆಯ ಸುಖಕ್ಕೆ ಅಳುವವರು ನಾವು ತಂದೆ
ಯಾಕೆ ಬಂದಿರಿ, ಹದುಳವಿಲ್ಲವೇ ಎಂದರೂ ತಂದೆ
ನಿಮ್ಮ ಲಿಂಗ ಮೆಚ್ಚಿ ಅಹುದಹುದೆನಲೇ ಇಲ್ಲ ತಂದೆ
ಇದು ಕಾರಣ.
ಕ್ಷಮಿಸಿ ದೇವರೆ
ನಾ ನಿಮ್ಮ ಭಕ್ತಳಾಗಲಾರೆ.

ಎನಗಿಂತ ಕಿರಿಯರಿಲ್ಲವೆಂದಿರಿ, ತುಸುವೆ ಹಿರಿತನವ ಮೆರೆದೆ
ಹತ್ತಿದ ಒಲೆಯಿಂದ ಹಿರಿದು ಕೊಳ್ಳಿಯೊನೊಂದ
ಅವನ ಬಣವೆಗೆ ಹಿಡಿದೆ.
ಒಲೆ ಹೊತ್ತಿ ಉರಿದೊಡೆ ಅವನ ಬಣವೆಯೂ ನಿಲಬಹುದೆಂದುಕೊಂಡೆ.
ನೀವು ನಿಲ್ಲಿಸಲಿಲ್ಲ ದೇವರೆ.
ಇದು ಕಾರಣ.
ಕ್ಷಮಿಸಿ ದೇವರೆ
ನಾ ನಿಮ್ಮ ಭಕ್ತಳಾಗಲಾರೆ.

ನನ್ನ ಡೊಂಕು ಸಾವಿರವಿರಲಿ ದೇವರೆ.
ಲೋಕದ ಡೊಂಕು ತಿದ್ದುವವರು ಯಾರಿದ್ದಾರೆ ತಂದೆ
ಪಾಪಿಯ ಧನ ಠೇವಣಿಯಿಡಲಲ್ಲದೆ ಪ್ರಾಯಶ್ಚಿತ್ತಕೆ ಸಲ್ಲುವುದೆ ತಂದೆ
ಉಳ್ಳವರ ಕೊರೆದು ಇಲ್ಲದವರ ಬಡಿದು ಒಂದು ಶಿವಾಲಯವ ಕಟ್ಟಿದೆ.
ಅಲ್ಲಿ ನನ್ನ ದೇಹವೇ ಹುಂಡಿಯಾಗುವುದನು ನೀವು ತಡೆದಿರಿ ತಂದೆ.
ಇದು ಕಾರಣ.
ಕ್ಷಮಿಸಿ ದೇವರೆ
ನಾ ನಿಮ್ಮ ಭಕ್ತಳಾಗಲಾರೆ.

ದೇವರೆಡೆಗೆ ನಡೆದ ಓ ನಡೆದಾಡಿದ ದೇವರೆ
ಮರ್ತ್ಯ ಲೋಕವೆಂಬುದು ಭ್ರಷ್ಟರ ಕಮ್ಮಟ ತಂದೆ
ಅಲ್ಲಿ ಸಲ್ಲದವರು ಮಾತ್ರ ಇಲ್ಲಿ ಸಲ್ಲುವರಯ್ಯ ತಂದೆ
ಸಿರಿಗರ ಹೊಡೆಯದ ಮೇಲೆ ನಾನು ಶ್ವಾನಕ್ಕಿಂತಲೂ ಕೀಳೆನ್ನ ತಂದೆ
ದೇವರಾದ ಕಾರಣ ನಿಮಗಿದರ ಅರಿವಿಲ್ಲ ತಂದೆ.
ಇದು ಕಾರಣ.
ಕ್ಷಮಿಸಿ ದೇವರೆ
ನಾ ನಿಮ್ಮ ಭಕ್ತಳಾಗಲಾರೆ.

‍ಲೇಖಕರು Avadhi

17 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading