ಡಾ. ಯೋಗೀಶ್ ಕೈರೋಡಿ
ಕನ್ನಡದ ಮಹತ್ವದ ಬರಹಗಾರರಲ್ಲಿ ದೇವನೂರು ಮಹದೇವರೂ ಒಬ್ಬರೂ. ದಲಿತರ ಬದುಕು ಅವರ ಕತೆಗಳ ಜೀವಾಳ. ಅಸಮಾನತೆಯೆಂಬುದು ಕೂಡ ವಿಶ್ವಾತ್ಮಕವಾದುದು. ಆದರೆ ಭಾರತದ ಅಸಮಾನತೆಯ ಸ್ವರೂಪ ತೀರ ಸಂಕೀರ್ಣವಾದುದು. ಸಾಮಾಜಿಕ ಅಸಮಾನತೆಯೇ ಇಲ್ಲಿಯ ಕೇಂದ್ರ. ಅದರ ಸುತ್ತ ಆರ್ಥಿಕ ಅಸಮಾನತೆ, ಹಸಿವು, ಮೌಢ್ಯ, ಶೋಷಣೆ ಎಲ್ಲವೂ ತುಂಬಿದ ಸಂಕೀರ್ಣ ಸ್ವರೂಪ. ಇಂತಹ ವಾತಾವರಣದಿಂದ ರೂಪುಗೊಂಡ ದಲಿತಲೋಕದ ಸೂಕ್ಷ್ಮಗಳೇ ದೇವನೂರು ಕೃತಿಗಳ ಅಂತರಂಗ. ದಲಿತರ ವೇದನೆಯನ್ನೇ ಸಂವೇದನೇಯಾಗಿ ಯಶಸ್ವಿ ಕಂಡವರು ದೇವನೂರು ಮಹಾದೇವರು. ಇವರ ಬರಹಗಳು ಆಶಯದ ನೆಲೆಯಲ್ಲಿ ಗೆದ್ದಿರುವಂತೆ ಕತೆೆಯಾಗಿಯೂ ಗೆದ್ದಿರುವುದು ಗಮನಾರ್ಹ. ದಲಿತ ಲೋಕದ ಸೂಕ್ಷ್ಮಗಳ ಗಾಢ ಪರಿಚಯ ಇರುವ ಹಾಗೆಯೇ ಅದನ್ನು ಕತೆಯಾಗಿಸುವ ತಂತ್ರಗಾರಿಕೆಯೂ ಅವರಿಗೆ ಸಿದ್ಧಿಸಿದೆ. ಆದುದರಿಂದ ಅವರ ಕತೆ – ಕಾದಂಬರಿಗಳು ಉಳಿದಿವೆ.
ಇತ್ತೀಚೆಗೆ ಲೇಖಕ ಉದಯಕುಮಾರ್ ಹಬ್ಬು ಅವರು ದೇವನೂರು ಮಹದೇವ ಅವರ ಎಂಟು ಕತೆ ಹಾಗೂ ಎರಡು ಕಾದಂಬರಿಗಳ ವಿಮರ್ಶೆ ಕೃತಿ ‘ದೇವನೂರ ಮಹದೇವರ ಕತೆ – ಕಾದಂಬರಿಗಳು’ಯನ್ನು ಹೊರ ತಂದಿದ್ದಾರೆ. ಇಂಗ್ಲೀಷ್ ಸಾಹಿತ್ಯದ ವಿಪುಲ ಓದು ಇರುವ ಹಬ್ಬು ಅವರು ಸುಮಾರು ಮೂರು ದಶಕಗಳ ಕಾಲ ಇಂಗ್ಲೀಷ್ ಸಾಹಿತ್ಯವನ್ನು ಬೋಧಿಸಿದ ಉಪನ್ಯಾಸಕ. ಈಗಾಗಲೇ ಮೂರು ಕಥಾಸಂಕಲನ, ಒಂದು ಕಾದಂಬರಿ ಹಾಗೂ ಎರಡು ಕವನ ಸಂಕಲನಗಳ ಮೂಲಕ ಓದುಗರಿಗೆ ಪರಿಚಿತರು. ಪ್ರಸ್ತುತ ಅವರ ದೇವನೂರು ಕುರಿತ ಕೃತಿ ತನ್ನ ಪ್ರಬುದ್ಧ ಮತ್ತು ಮುಕ್ತ ವಿಮರ್ಶೆಯ ಮೂಲಕ ಗಮನಾರ್ಹವಾದುದಾಗಿದೆ.
ಎಂಟು ಪುಟಗಳ ಪ್ರಸ್ತಾವನೆಯ ಮಾತುಗಳಲ್ಲಿ ದಲಿತ ಸಾಹಿತ್ಯದ ಸ್ವರೂಪವನ್ನು ವಿವೇಚಿಸುತ್ತಾ ದೇವನೂರು ಅನನ್ಯತೆಯನ್ನು ವಿಶ್ಲೇಷಿಸಿದ್ದಾರೆ. ದಲಿತರ ದಾರುಣ ಬದುಕಿನ ಚಿತ್ರಣ ಇಲ್ಲಿಯ ಬರಹಗಳ ವಸ್ತುವಾಗಿದ್ದರೂ ಕೂಡ ಅದನ್ನು ನಿರೂಪಿಸುವ ಬಗೆ ಧ್ವನಿ ಪೂರ್ಣವಾದುದು. ದೇವನೂರು ಬರಹಗಳಲ್ಲಿ ಉಳ್ಳವರ ಕುರಿತು ಆಕ್ರೋಶ ಕಾಣುವುದಿಲ್ಲ. ಆದರೆ ವಸ್ತುಸ್ಥಿತಿಯನ್ನು ಹೇಳುವುದರಲ್ಲೇ ಶಕ್ತಿ ಅಡಗಿದೆ. ಇದು ಘೋಷಣೆಗಿಂತ ಬೈಯ್ಗುಳಕ್ಕಿಂತ ಪರಿಣಾಮಕಾರಿಯಾದುದು ಎಂಬುದನ್ನು ಚರ್ಚಿಸಿದ್ದಾರೆ. ವೈದಿಕ ವ್ಯವಸ್ಥೆಯ ವಿರುಧ್ಧ ದಲಿತ ಪುರಾಣಗಳನ್ನು ಪ್ರತಿಯಾಗಿ ಕತೆಗೆ ತಂದು ಸಡ್ಡು ಹೊಡೆಯುವ ಬಗೆಯೂ ದೇವನೂರರಲ್ಲಿ ಇಲ್ಲ. ದಲಿತರ ಗತ ಹಾಗೂ ಭವಿಷ್ಯದ ಬಗ್ಗೆ ಆಸಕ್ತಿ ವಹಿಸದೇ ವರ್ತಮಾನವೇ ಇಲ್ಲಿ ಪ್ರಮುಖವಾದುದು ಎಂಬುದನ್ನು ಹಬ್ಬು ಗುರುತಿಸಿದ್ದಾರೆ. ನೀಗ್ರೋ ಸಾಹಿತ್ಯದ ಸ್ವರೂಪವನ್ನು ಚಚರ್ಿಸುತ್ತಾ ದೇವನೂರು ಸ್ವರೂಪ ಯಾವ ರೀತಿ ಭಿನ್ನ ಎಂಬುದನ್ನು ಲೇಖಕ ಇಲ್ಲಿ ಗುರುತಿಸಿದ್ದಾರೆ.
ದಲಿತರ ಬವಣೆಯನ್ನು ಬದುಕನ್ನು ನಿರೂಪಿಸಲು ದೇವನೂರು ತಾನು ಬದುಕಿದ ನಂಜನಗೂಡಿನ ದಲಿತರ ಭಾಷೆಯಲ್ಲೇ ಬರೆಯುತ್ತಾರೆ. ಭಾಷೆಗೂ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಸಾಮಾನ್ಯ ಕನ್ನಡದಿಂದ ನಿರೂಪಿಸಿದಾಗ ಪಾತ್ರಗಳ ಸಹಜತೆಗೆ ದಕ್ಕೆಯಾಗಬಹುದು ಎಂಬ ಎಚ್ಚರಿಕೆ ದೇವನೂರರಿಗೆ ಇದೆ. ಇಲ್ಲಿ ಭಾಷೆ ಕೆಲವರಿಗೆ ಕತೆಯನ್ನು ಗ್ರಹಿಸಲು ತೊಡಕಾಗಬಹುದು. ಕತೆಗೂ ಓದುಗನಿಗೂ ಒಂದು ಬಗೆಯ ಅಂತರ ತರಬಹುದು. ಆದರೆ ಕತೆಯೊಳಗಡೆಯ ಪಾತ್ರಗಳಿಗೂ ಕತೆಗೂ ಅಂತರ ಇರಬಾರದು ಎಂಬ ಸೂಕ್ಷ್ಮ ದೇವನೂರರದ್ದು. ಹೀಗೆ ದೇವನೂರ ಬರಹಗಳ ಹೆಚ್ಚುಗಾರಿಕೆಯೇನು ಎಂಬುದನ್ನು ಕೆಲವೊಂದು ಕತೆಗಳ ಹಿನ್ನೆಲೆಯಲ್ಲಿ ಹಬ್ಬು ಪ್ರಸ್ತಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಮುಂದಿನ ಭಾಗದಲ್ಲಿ ದೇವನೂರರ ಪ್ರತಿಗಳ ಪರಿಚಯಾತ್ಮಕ ವಿವರಗಳನ್ನು ನೀಡಿ ತನ್ನ ನೋಟವನ್ನು ವ್ಯಕ್ತಪಡಿಸಿದ್ದಾರೆ. ವರ್ತಮಾನದಲ್ಲಿ ವಿಮರ್ಶೆ ದಾರಿ ತಪ್ಪುತ್ತಿದೆ ಎಂಬ ಆರೋಪವನ್ನು ಎಲ್ಲೆಡೆ ಕೇಳುತ್ತಿವೆ. ವಿಮರ್ಶೆ ಎಂದರೆ ‘ಟೀಕೆ’ ಎಂಬ ಸೀಮಿತ ಅರ್ಥ ಪಡೆಯುತ್ತಿವೆ. ಕೆಲವೊಮ್ಮೆ ಕತೆಯ ವಿವರಗಳೇ ಇಲ್ಲದೇ ವಿಮರ್ಶೆಗಳು ಮೂಡಿಬರುತ್ತಿವೆ. ಇನ್ನೊಂದೆಡೆ ಬೇರೆ ಬೇರೆ ಸಿದ್ಧಾಂತಗಳಿಗೆ ಬದ್ಧರಾಗಿ ಕೃತಿಯೊಂದನ್ನು ನೋಡುವ ಪರಿಪಾಠವೂ ಇದೆ. ಬಹುತೇಕ ಸಂದರ್ಭಗಳಲ್ಲಿ ಈ ರೀತಿಯ ವಿಮರ್ಶೆಗಳೇ ಮಹತ್ವ ಪಡೆಯುತ್ತದೆ. ಭಾಷೆಯೂ ಪಾರಿಭಾಷಿಕ ಪದಗಳೊಂದಿಗೆ, ಆಕಾಡಮಿಕ್ ಶೈಲಿಯಲ್ಲಿ ಸಂಕೀರ್ಣಗೊಂಡು ಸಂವಹನದ ಸೋಲನ್ನೇ ಗೆಲುವು ಎಂಬ ತೀರ್ಮಾನಕ್ಕೆ ಬರುವುದಿದೆ. ಆದರೆ ಈ ಎಲ್ಲಾ ಆರೋಪಗಳಿಗೆ ಅಪವಾದವೆಂಬಂತೆ ಹಬ್ಬು ಅವರ ವಿಮಶರ್ೆ ನಡೆದಿದೆ. ಸಾಹಿತ್ಯ ವಿಮರ್ಶೆಯ ವಿಸ್ತಾರವಾದ ಓದು ಇದ್ದರೂ ಎಲ್ಲೂ ಬಂಧಿಯಾಗಿ ಮುಕ್ತ ವಿಮರ್ಶೆ ಇಲ್ಲೆ ನಡೆದಿದೆ. ಕತೆ, ಕತೆ ಪ್ರಕಟವಾದ ಕಾಲ ಹೀಗೆ ಪ್ರಾಥಮಿಕ ವಿವರಗಳನ್ನು ಹೇಳುತ್ತಲೇ ಕತೆಯ ವೈಶಿಷ್ಟ್ಯಗಳನ್ನು ತಿಳಿಸಿದ್ದಾರೆ. ಇದೇ ಸ್ವರೂಪದ ಇತರ ಕತೆಗಳನ್ನು ಜೊತೆಗಿಟ್ಟು ಹಬ್ಬು ನೋಡಿದ್ದಾರೆ. ಈಗಾಗಲೇ ದೇವನೂರು ಕೃತಿಗಳ ಕುರಿತು ಬಂದಿರುವ ವಿಮಶರ್ೆಗಳನ್ನು ಸ್ವೀಕರಿಸುವ ಮತ್ತು ನಿರಾಕರಿಸುವ ಕೆಲಸವನ್ನು ಹಬ್ಬು ಮುಕ್ತವಾಗಿ ಮಾಡಿದ್ದಾರೆ. ಹೀಗೆ ದೇವನೂರು ಮಾರಿಕೊಂಡವರು, ಗ್ರಸ್ಥರು, ಒಂದು ದಹನದ ಕತೆ, ದತ್ತು, ಡಾಂಬರು ಬಂದುದು, ಮೂಡಲ ಸೀಮೆಗೆ ಕೊಲೆ, ಗಿಲೆ ಮುಂತಾಗಿ, ಅಮಾಸ, ಇವುಗಳನ್ನು ವಿಮಶರ್ೆಯ ಕಣ್ಣಿನಿಂದ ನೋಡಿದ್ದಾರೆ. ‘ಒಡಲಾಳ’ ಎಂಬ ನೀಳ್ಗತೆಯ ಒಡಲನ್ನು ಪರಿಚಯಿಸಿದ್ದಾರೆ. ಸಾಕವ್ವಳ ಮನೋಜಗತ್ತನ್ನು ರೂಪಿಸಿದ ಸಾಂಸ್ಕೃತಿಕ ಸಂದರ್ಭವನ್ನು ಪರಿಚಯಿಸಿದ್ದಾರೆ. ‘ಕುಸುಮಬಾಲೆ’ಯ ಇತಿಮಿತಿಯನ್ನು ತನ್ನ ಇತಿಮಿತಿಯ ಒಳಗೆ ಮುಂದಿಟ್ಟಿದ್ದಾರೆ.
ದೇವನೂರು ‘ದಲಿತ ಸಮಾಜದ ಒಳ ವಿಮರ್ಶಕ’ ಎಂಬ ಯು. ಆರ್. ಅನಂತ ಮೂರ್ತಿಯವರ ಹೇಳಿಕೆ ಅದೆಷ್ಟು ಅರ್ಥಪೂರ್ಣವಾದುದು ಎಂಬುದನ್ನು ಎಳೆಎಳೆಯಾಗಿ ನಿರೂಪಿಸಿದ್ದಾರೆ. ದಲಿತರ ಬವಣೆ, ಅವರಿಗೆ ಇತರರಿಂದ ಆಗಿರುವ ಶೋಷಣೆಯೊಂದಿಗೆ ದಲಿತರ ನ್ಯೂನತೆಗಳನ್ನು ಕತೆಗಳು ಅನಾವರಣ ಮಾಡಿವೆ ಎಂಬಂಶವನ್ನು ಗುರುತಿಸಿದ್ದಾರೆ. ಒಟ್ಟಿನಲ್ಲಿ ಉದಯಕುಮಾರ್ ಹಬ್ಬು ಅವರ ಈ ವಿಮರ್ಶಕೃತಿ ಪ್ರವೇಶಿಕ ಹಾಗೂ ಪ್ರಬುದ್ಧತೆಯ ಎರಡೂ ಗುಣಗಳನ್ನು ತನ್ನ ಒಡಲೊಳಗೆ ಇರಿಸಿದೆ. ಇದೇ ಈ ಕೃತಿಯ ಹೆಚ್ಚುಗಾರಿಕೆ.




0 Comments