ದೆವ್ವಗಳ ಊರಿನಲ್ಲೊಂದು ಮಟಮಟ ಮಧ್ಯಾಹ್ನ..

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

೮೪ ಹಳ್ಳಿಗಳ ಒಂದು ರಾತ್ರಿಯ ಕಥೆ!

ನಿಮ್ಗೊಂದು ವಿಷ್ಯ ಗೊತ್ತಾ? ನಮ್ಮ ರಾಜಸ್ಥಾನದಲ್ಲೊಂದು ಹಿಂಗೊಂದು ಹಳ್ಳಿಯಿದೆ! ಅಲ್ಲಿ ರಾತ್ರಿ ತಂಗಿದವರು ಬೆಳಗ್ಗೆ ಬದುಕಿ ಬರುವುದು ಡೌಟೇ ಅಂತೆ, ಯಾರೆಲ್ಲ ಕೂರೋದಕ್ಕೆ ಟ್ರೈ ಮಾಡಿದರೂ ಆಗದೆ, ಜೀವ ಉಳಿದ್ರೆ ಬೇಡಿಯಾದ್ರೂ ತಿಂದೇನು ಅಂದ್ಕೊಂಡು ಎದ್ನೋ ಬಿದ್ನೋ ಅಂತ ಓಡಿ ಬಂದ್ರಂತೆ, ರಾತ್ರಿ ವಿಚಿತ್ರ ಶಬ್ದಗಳು ಬರುತ್ತವಂತೆ, ಹೋದವರು ರಕ್ತ ಕಾರಿ ಸಾಯೋದು ಗ್ಯಾರೆಂಟಿ ಅಂತೆ. ಆ ಹಳ್ಳಿಯ ಹತ್ತಿರದಿಂದ ರಾತ್ರಿ ಹಾದುಹೋದ್ರೂ ಸಾಕಂತೆ ಅವ್ರು ದಾರಿ ತಪ್ಪಿ ಎಲ್ಲಿಗೋ ಹೋಗ್ಬಿಡ್ತಾರಂತೆ, ಬೆಳಗ್ಗೆವರೆಗೂ ದಾರಿ ಹುಡುಕಿ ಹುಡುಕಿ ತಲೆಸುತ್ತಿ ಬಿದ್ದರಂತೆ, ಬೆಳಗ್ಗೆದ್ದು ನೋಡಿದರೆ ಅಲ್ಲೇ ಇದ್ದರಂತೆ, ಆದರೆ ರಾತ್ರಿ ಏನು ನಡೆಯಿತೆಂದು ಹೇಳಲು ತಿಳಿದಿಲ್ವಂತೆ…!

ಹೀಗೆ ಅಂತೆಕಂತೆಗಳು ಉಪ್ಪುಕಾರ ಮಸಾಲೆ ಎಲ್ಲ ಸೇರಿಸಿ ಆಕೆ ಚಪ್ಪರಿಸಿ ಚಪ್ಪರಿಸಿ ಹೇಳಿದಾಗ ನಾನು ಪೆಕಪೆಕಾಂತ ನಕ್ಕಿದ್ದೆ.

ʻನೀನು ಹೋಗಿದ್ಯಾ ಮಾರಾಯ್ತಿ?ʼ ಅಂತ ಅವಳ ಕಾಲೆಳೆದಿದ್ದೆ. ʻನಾನಿನ್ನೂ ಹೋಗಿಲ್ಲಪ್ಪ, ಆದ್ರೆ ಹೇಳೋದು ಕೇಳಿ ಗೊತ್ತುʼ ಅಂತ ಆಕೆ ವಿಷಯವನ್ನು ಹಾರಿಸಿಬಿಟ್ಟಿದ್ದಳು. ಇಂಥ ಕಥೆಗಳನ್ನೆಲ್ಲ ಕೇಳೋ ಕಾಲ ಒಂದಿತ್ತು. ಆಗೆಲ್ಲ ಮೈಯೆಲ್ಲ ಕಿವಿಯಾಗಿ ಕೇಳಿಸಿಕೊಂಡು ಆಮೇಲೆ ಮನೆಯೊಳಗೆ ಒಂದು ರೂಮಿಂದ ಇನ್ನೊಂದು ರೂಮಿಗೆ ಹೋಗಲು ಭಯಪಡುತ್ತಿದ್ದುದು ನೋಡಿ ಅಮ್ಮನ ಕೈಯಿಂದ ಸನ್ಮಾನ ಮಾಡಿಸಿಕೊಳ್ಳುತ್ತಿದ್ದೆ. ಸೆರಗು ಹಿಡಿದು ಜಗ್ಗಿ, ಆ ರೂಮಿನಲ್ಲಿ ಕತ್ಲಿದೆ, ಪ್ಲೀಸ್‌ ಪ್ಲೀಸ್ ಜೊತೆಗೆ ಬಾ ಅಮ್ಮ‌ʼ ಅಂತ ಗೋಳು ಹೊಯ್ದುಕೊಳ್ಳುತ್ತಿದ್ದ ನನಗೆ, ʻಭಯ ಆಗುತ್ತೆ ಅಂತ ಗೊತ್ತಿದ್ದೂ ಗೊತ್ತಿದ್ದೂ ಕೇಳೋ ಸುಖ ಯಾಕೇಂತ?ʼ ಅಂತ ದಬಾಯಿಸುತ್ತಿದ್ದಳು. ಅವೆಲ್ಲ ನೆನಪಾಗಿ ನಾವಿಬ್ಬರೂ ನಾಸ್ಟಾಲ್ಜಿಕ್‌ ಆಗಿ ನಕ್ಕಿದ್ದೇ ನಕ್ಕಿದ್ದು.

ಅದೊಮ್ಮೆ ನಾವು ದೆಹಲಿಯಿಂದ ಕಾಠ್ಮಂಡುವರೆಗೆ ಡ್ರೈವ್‌ ಮಾಡಬೇಕೆಂಬ ಭರ್ಜರಿ ಪ್ರಯಾಣದ ಪ್ಲಾನೊಂದನ್ನು ಮಾಡಿ ನೀಲನಕ್ಷೆ ಎಲ್ಲ ರೆಡಿ ಮಾಡಿ ಇನ್ನೇನು ಪ್ಯಾಕ್‌ ಮಾಡಿಕೊಳ್ಳೋದಷ್ಟೇ ಬಾಕಿ ಎಂದಾದಾಗ ಉತ್ತರ ಪ್ರದೇಶ, ಬಿಹಾರ, ನೇಪಾಳದಲ್ಲೆಲ್ಲ ಭಾರೀ ಮಳೆಯಾಗಿ ನೆರೆ ಬಂದು ನಮ್ಮ ಪ್ಲಾನನ್ನು ಕೈಬಿಟ್ಟು, ಈಗ ಹೋಗೋದೆಲ್ಲಿಗೆ ಅಂತ ಗಲ್ಲದ ಮೇಲೆ ಕೈಯಿಟ್ಟು ಕೂತವರನ್ನು ಕರೆದದ್ದು ರಾಜಸ್ಥಾನ. ಜೈಸಲ್ಮೇರ್‌ ಎಂಬ ಹೊಂಬಣ್ಣದ ನಗರಿ. ಥಾರ್‌ ಎಂಬ ಬಿಸಿಲೂರು. ಅಷ್ಟರವರೆಗೂ ನೆನಪಾಗದಿದ್ದ ಈ ʻಹಾಂಟೆಡ್‌ ವಿಲೇಜ್‌ʼ ಸಡನ್ನಾಗಿ ನೆನಪಾಗಿ, ನಮ್ಮನ್ನು ಪಕ್ಕದಲ್ಲಿ ಕೂರಿಸಿಕೊಂಡು ಹೀಗೊಂದು ರೋಚಕವಾದ ಕಥೆಯೊಂದನ್ನು ನಮ್ಮ ಮುಂದೆ ಬಿಚ್ಚಿಟ್ಟಿತು.

ಅಂದಹಾಗೆ, ಇದು ರಾಜಸ್ಥಾನದ ಕೇವಲ ಒಂದು ಹಳ್ಳಿಯ ಕಥೆಯಲ್ಲ! ೮೪ ಹಳ್ಳಿಗಳ ಕಥೆ. ದೆವ್ವದ ಕಥೆಯಾಗಿ ಇದು ಆಕರ್ಷಕವಾಗಿ ಕಂಡರೂ, ಈ ಹಳ್ಳಿಗಳೆಲ್ಲ ಹಾಗಾಗಲು ಕಾರಣವಾದ ಇದರ ಹಿನ್ನೆಲೆ ಕೇಳಿದರೆ ಎಂಥವರಿಗಾದರೂ ಅಬ್ಬಾ! ಎನಿಸದಿರದು. ಇದೊಂದು ಅಪ್ಪಟ ಸ್ವಾಭಿಮಾನದ, ಆತ್ಮವಿಶ್ವಾಸದ ಕಥೆ. ಊರಿನ ಹೆಣ್ಣುಮಗಳೊಬ್ಬಳಿಗಾಗಿ ೮೪ ಹಳ್ಳಿಗಳು ಒಗ್ಗೂಡಿದ ಕಥೆ!

ಆಸ್ತಿ ಪಾಸ್ತಿ, ಅಂತಸ್ತು, ಐಶ್ವರ್ಯಕ್ಕಿಂತಲೂ ಮಿಗಿಲಾದದ್ದು ಯಾವುದು ಎಂಬ ಸಂದೇಶ ಸಾರುವ ಕಥೆ. ಕಲರ್ ಫುಲ್‌ ಆಗಿ ಲಕಲಕ ಹೊಳೆಯುವ ರಾಜಸ್ಥಾನದಲ್ಲಿ ಸುಮಾರು ೫೫೦ ವರ್ಷಗಳ ಕಾಲ ಉಚ್ಛ್ರಾಯ ಸ್ಥಿತಿಯಲ್ಲಿದ್ದು ಆಮೇಲೆ ಇದ್ದಕ್ಕಿದ್ದಂತೆ ಮಂಕು ಕವಿದು ಪಾಳು ಬಿದ್ದ ಹಳ್ಳಿಗಳ ಕಥೆ.

ಕುಲ್ಧಾರಾ! ಇದು ಈ ಕಥೆಯ ಮುಖ್ಯ ಲೊಕೇಶನ್ನು. ಜೈಸಲ್ಮೇರ್‌ನಿಂದ ೧೮ ಕಿಮೀ ಅಷ್ಟೇ. ಈಗ ಈ ಕಥೆಯ ಕಾಲಘಟ್ಟ ಹತ್ತಿರ ಹತ್ತಿರ ೨೦೦ ವರ್ಷಗಳಷ್ಟು ಹಿಂದಕ್ಕೋಡುತ್ತದೆ. ಅದು ೧೯ನೇ ಶತಮಾನ. ಕುಲ್ಧಾರಾವೂ ಸೇರಿ ಸುತ್ತಮುತ್ತಲಿನ ಒಟ್ಟು ೮೪ ಹಳ್ಳಿಗಳಲ್ಲಿ ವಾಸವಿದ್ದವರು ಆಗ ಪಲಿವಾಲ್‌ ಬ್ರಾಹ್ಮಣರು. ೧೨೯೧ರಿಂದಲೇ ಈ ಹಳ್ಳಿಯ ಅಸ್ಥಿತ್ವವಿದ್ದುದು ಚರಿತ್ರೆಯ ಪುಟಗಳಲ್ಲಿದೆ. ಇಂಥ ಅಗಾಧ ಇತಿಹಾಸವಿರುವ ಹಳ್ಳಿಗಳ ಗುಂಪು ೧೮೨೫ರಲ್ಲಿ ಇದ್ದಕ್ಕಿದ್ದಂತೆ ಖಾಲಿಯಾಗಲು ಕಾರಣವೇನು ಎಂದು ಕೆದಕಲು ಹೊರಟರೆ ಈ ಅದ್ಭುತ ಕಥೆಯೊಂದು ತೆರೆದುಕೊಳ್ಳುತ್ತದೆ.

ಈ ಪಲಿವಾಲ್‌ ಬ್ರಾಹ್ಮಣರು ಮೂಲತಃ ಕೃಷಿಕರು. ಥಾರ್‌ನಂತಹ ಒಣ ಮರುಭೂಮಿಯಲ್ಲೇ ಗೋಧಿಯ ಚಿನ್ನದ ಬೆಳೆ ತೆಗೆಯುವುದು ಇವರಿಗೆ ಕರಗತವಾಗಿತ್ತು. ಮಣ್ಣಿನ ಗುಣದ ಅರಿವು ಚೆನ್ನಾಗಿದ್ದ ಅವರಿಗೆ ಈ ಭೂಮಿಯೆಂದರೆ ಅವರ ಹೊಟ್ಟೆ ತುಂಬಿಸುವ ಮಾತೃಹೃದಯಿ. ಹೀಗೆ ಭರ್ಜರಿ ಬೆಳೆ ಬೆಳೆಯುತ್ತಿದ್ದ ಇವರಿಂದ ಜೈಸಲ್ಮೇರ್‌ ರಾಜನಿಗೆ ಸಿಗುವ ತೆರಿಗೆಯೇ ಆತನ ಬೊಕ್ಕಸದ ಜೀವಾಳ.

ಹೀಗಿದ್ದಾಗ ಅಲ್ಲಿನ ಪ್ರಧಾನ ಮಂತ್ರಿಯ ಕಣ್ಣು ಈ ಹಳ್ಳಿಯೊಂದರ ಮುಖ್ಯಸ್ಥನನೊಬ್ಬನ ಮಗಳ ಮೇಲೆ ಬಿತ್ತು. ಪಲಿವಾಲ್‌ ಬ್ರಾಹ್ಮಣ ಹೆಣ್ಣುಮಕ್ಕಳು ತಮ್ಮ ಚೆಲುವಿಗೆ ಹೆಸರುವಾಸಿ. ಈಕೆಯೂ ಅದೆಂಥ ಸುಂದರಿಯಾಗಿದ್ದಳೆಂದರೆ, ಮಂತ್ರಿಗೆ ಆಕೆಯ ಸೌಂದರ್ಯ ಹುಚ್ಚೇ ಹಿಡಿಸಿತ್ತು. ಏನೆಲ್ಲ ಪ್ರಯೋಗಗಳನ್ನು ಮಾಡಿದರೂ ಆಕೆ ಒಲಿಯುವುದು ಅಷ್ಟರಲ್ಲೇ ಇದೆ ಎಂಬುದು ತಿಳಿಯಲು ಆತನಿಗೆ ಹೆಚ್ಚು ಸಮಯಬೇಕಾಗಲಿಲ್ಲ. ತನ್ನ ಪ್ರಭಾವ, ಶಕ್ತಿ ಸಾಮರ್ಥ್ಯದಿಂದಲೇ ಆಕೆಯನ್ನು ಪಡೆಯುವೆ ಎಂದು ಆತ ಹೊರಟಾಗ ಆಕೆ ಕಂಗಾಲಾದಳು.

ಪ್ರಧಾನ ಮಂತ್ರಿಯೊಬ್ಬನನ್ನು ನಿರಾಕರಿಸಲು ಗುಂಡಿಗೆ ಗಟ್ಟಿಯೇ ಬೇಕು. ನಿರಾಕರಿಸಿದರೆ ಆಗುವ ಪರಿಣಾಮಗಳ ಬಗ್ಗೆಯೂ ಅರಿವಿದೆ. ಇಂಥ ಸಂದರ್ಭ ಆ ಪ್ರಧಾನಮಂತ್ರಿ ಈ ಗ್ರಾಮದ ಮಂದಿಗೆ, ಇನ್ನು ೧೦ ದಿನಗಳೊಳಗಾಗಿ ನಿಮ್ಮ ಮಗಳನ್ನು ನನಗೊಪ್ಪಿಸದೆ ಇದ್ದರೆ ಭಾರೀ ತೆರಿಗೆ ವಿಧಿಸುವುದಾಗಿ ಬೆದರಿಕೆ ಒಡ್ಡುತ್ತಾನೆ. ಈಗಾಗಲೇ ಬರೋಬ್ಬರಿ ತೆರಿಗೆ ನೀಡುತ್ತಿದ್ದ ಗ್ರಾಮಸ್ಥರಿಗೆ ಇದು ಇಕ್ಕಟ್ಟಿನ ಪರಿಸ್ಥಿತಿ. ಆತ ವಿಧಿಸಲಿರುವ ತೆರಿಗೆ ಪಾವತಿಸಿದರೆ ಉಣ್ಣಲು ಗತಿಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತದೆಂಬ ಸತ್ಯದ ಅರಿವೂ ಇತ್ತು. ಆದರೆ ತಮ್ಮ ತೆರಿಗೆಯಿಂದ ತಪ್ಪಿಸಿಕೊಳ್ಳಲು ಮನೆ ಮಗಳನ್ನು ಬಲಿಕೊಡಲು ಸಿದ್ಧರಿಲ್ಲ.

ಕಥೆಯನ್ನು ಮತ್ತಷ್ಟು ಅದ್ಭುತವನ್ನಾಗಿ ಮಾಡುವುದು ಈ ಗ್ರಾಮಸ್ಥರ ನಿರ್ಧಾರ. ಅವರ ಒಗ್ಗಟ್ಟು. ಊರಿನ ಒಬ್ಬ ಹೆಣ್ಣು ಮಗಳಿಗಾಗಿ ಇಷ್ಟರವರೆಗೆ ಮಾಡಿಟ್ಟ ತಮ್ಮೆಲ್ಲಾ ಆಸ್ತಿ ಪಾಸ್ತಿ ಬಿಟ್ಟು ಗೊತ್ತುಗುರಿಯಿಲ್ಲದೆ ನಡೆದುಬಿಡುವುದು! ಈ ೮೪ ಗ್ರಾಮಗಳಲ್ಲಿ ಒಬ್ಬನೂ/ಳೂ ಕೂಡಾ ಇಷ್ಟು ಜನರ ಬದುಕಿನ ಮುಂದೆ ಒಬ್ಬಳ ಬದುಕೇನು ಮಹಾ ಅಂತ ಯೋಚಿಸಲಿಲ್ಲ. ಕಥೆ ಎತ್ತರಕ್ಕೇರೋದೇ ಇಲ್ಲಿ!

ಅದು ೧೮೨೫. ಈ ಹಳ್ಳಿಗರೆಲ್ಲರ ಪಾಲಿಗೆ ಕರಾಳ ದಿನ.  ಆ ದಿನ ರಕ್ಷಾಬಂಧನ. ನಿಜವಾದ ಅರ್ಥದಲ್ಲಿ ಅದು ರಕ್ಷಾಬಂಧನವಾಗಿ ಹೋಯಿತು. ತಾವು ನಿರ್ಧರಿಸಿದಂತೆ, ಅಷ್ಟೂ ಗ್ರಾಮಗಳ ಮಂದಿ ರಾತ್ರೋರಾತ್ರಿ ಊರು ತೊರೆದರು. ಹೀಗೆ ೮೪ ಗ್ರಾಮಗಳ ಸುಮಾರು ೧೫೦೦ ಮಂದಿ ಒಂದೇ ರಾತ್ರಿಯಲ್ಲಿ ಕೈಗೆ ಬಂದದ್ದನ್ನು ತುಂಬಿಸಿಕೊಂಡು ೫೫೦ ವರ್ಷಗಳ ಇತಿಹಾಸವಿದ್ದ, ತಮ್ಮ ತಾತ ಮುತ್ತಾತ ಹುಟ್ಟಿ ಬೆಳೆದು ಕಟ್ಟಿದ್ದ ಊರನ್ನೇ ತೊರೆದು ನಾಲ್ಕು ದಿಕ್ಕುಗಳಲ್ಲಿ ಚದುರಿಹೋದರು.  ಹೀಗೆ ರಾತ್ರೋರಾತ್ರಿ ಗುಳೇ ಎದ್ದು ಹೋದವರು ಎಲ್ಲಿ ಹೋಗಿ ಬದುಕ ಕಟ್ಟಿಕೊಂಡರು ಎಂಬುದು ಇಂದಿಗೂ ಯಾರಿಗೂ ಗೊತ್ತಿಲ್ಲ.

ಬಹುಶಃ ಜೈಸಲ್ಮೇರದ ಮಂತ್ರಿ ಈ ರೀತಿಯ ಪ್ರತಿಕ್ರಿಯೆಯನ್ನಂತೂ ಗ್ರಾಮಸ್ಥರಿಂದ ಊಹಿಸಿರಲಿಕ್ಕಿಲ್ಲ. ಹೆಚ್ಚೆಂದರೆ ವಿರೋಧಿಸಿದರೆ ಸದ್ದಡಗಿಸಿಯೇನು ಎಂಬ ಆತನ ದಾರ್ಷ್ಠ್ಯಕ್ಕೆ ಸರಿಯಾದ ಉತ್ತರವನ್ನೇ ಗ್ರಾಮಸ್ಥರು ನೀಡಿದ್ದರು. ಆತನಿಗೆ ಮೈ ಪರಚದೆ ವಿಧಿಯಿರಲಿಲ್ಲ.

ಆ ಕಾಲದಲ್ಲೇ ಅದೆಷ್ಟು ವ್ಯವಸ್ಥಿತವಾಗಿ ಊರು ಕಟ್ಟಿಕೊಂಡಿದ್ದರೆಂದರೆ ಆ ಜಾಗಕ್ಕೇ ಹೋಗಿ ನೋಡಬೇಕು. ನಾಲ್ಕಾರು ಗಲ್ಲ, ಸಾಲು ಸಾಲು ಮನೆಗಳು, ಊರಿಗೊಂದು ಬಾವಿ, ಅಗಲವಾದ ರಸ್ತೆಗಳು, ದೇವಸ್ಥಾನ… ಹೀಗೆ ಮುರಿದು ಬಿದ್ದ ಊರೊಂದು ತನ್ನ ಈ ದುರಂತ ಕಥೆಯನ್ನು ಮೌನವಾಗಿ ಹೇಳುತ್ತದೆ.

ಅಂದಹಾಗೆ, ಈಗ ನಾನು ಹೇಳೀದ ಇದಿಷ್ಟೂ ಕಥೆ ಜನಪದ! ಇದಕ್ಕೆ ಯಾವುದೇ ದಾಖಲೆಗಳಿಲ್ಲ. ಇತಿಹಾಸ ತಜ್ಞರು ಈ ಹಿನ್ನೆಲೆಯಲ್ಲಿ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದರೂ, ಪಕ್ಕಾ ವಿವರಗಳು ದೊರೆತಿಲ್ಲ. ಹಾಗಾಗಿ, ಜೈಸಲ್ಮೇರ್ ನ ಪ್ರಧಾನ ಮಂತ್ರಿ ಸಲೀಂ ಸಿಂಗ್‌ನ ದುರ್ನಡತೆಯೋ, ಭೂಕಂಪವೋ, ಬರಗಾಲವೋ… ಯಾವುದೋ ಒಂದು ಕಾರಣ ಈ ಹಳ್ಳಿಗಳನ್ನು ಈ ಸ್ಥಿತಿಗೆ ತಂದುಬಿಟ್ಟಿದೆ ಎಂದು ಚುಟುಕಾಗಿ ವಿವರಿಸುತ್ತದೆ.

ಇನ್ನು ದೆವ್ವಗಳ ಸರದಿ!:

ಊರು ಬಿಡುವುದೇನೋ ಬಿಟ್ಟರು. ಆದರೆ ಸುಮ್ಮನೆ ಬಿಡಲಿಲ್ಲ. ಹೋಗುವಾಗ, ʻಈ ಊರಿನಲ್ಲಿ ಯಾರೇ ರಾತ್ರಿ ತಂಗಿದರೂ ಅವರಿಗೆ ಮರಣ ಬರಲಿʼ ಎಂಬುದಾಗಿ ಶಾಪ ಕೊಟ್ಟು ಹೋಗಿದ್ದರು ಎಂಬುದೂ ಕೂಡಾ ಈ ಕಥೆಯಲ್ಲಿ ಬರುವ ಅಡಿಶನಲ್‌ ಪಾಯಿಂಟು. ಹೀಗಾಗಿ ಖಾಲಿಯಾದ ಆ ಜಾಗವನ್ನು ಯಾರೂ ತುಂಬಲು ಸಾಧ್ಯವಾಗದೆ, ಹಾಗೆಯೇ ೨೦೦ ವರ್ಷಗಳಿಂದ ಉಳಿದುಕೊಂಡು ದೆವ್ವ ಪಿಶಾಚಿಗಳನ್ನೆಲ್ಲ ಕರೆದಿದೆ ಎನ್ನುತ್ತವೆ ಬಾಯಿಕಥೆಗಳು. ಹೀಗೆ ಹಾಳು ಬಿದ್ದ ಗ್ರಾಮಗಳಲ್ಲಿ ಕುಲ್ಧಾರಾ ಸೇರಿದಂತೆ ಒಂದೆರಡನ್ನು  ಕೈಗೆತ್ತಿಕೊಂಡು ರಾಜ್ಯ ಪ್ರವಾಸೋಧ್ಯಮ ಇಲಾಖೆ ಸಾಕಷ್ಟು ಅಭಿವೃದ್ಧಿಗೊಳಿಸಿ ಕಳೆದ ೧೦ ವರ್ಷಗಳಿಂದ ಪ್ರವಾಸಿಗರಿಗೆ ಭೇಟಿನೀಡಲು ಅನುಕೂಲವಾಗುವಂತೆ ಅವಕಾಶ ಕಲ್ಪಿಸಿದೆ.

ಅಂದಹಾಗೆ ಈ ಅಂತೆಕಂತೆಗಳನ್ನೆಲ್ಲ ನಂಬಿಕೊಂಡು ಸುಮ್ಮನೆ ಕೂರಲು ಹೇಗೆ ಆಗತ್ತೆ ಹೇಳಿ? ಕೆಲವರಾದರೂ ಗುಂಡಿಗೆ ಗಟ್ಟಿ ಮಾಡಿಕೊಂಡು ಒಂದು ಕೈ ನೋಡೇ ಬಿಡೋಣ ಅಂತ ಹೊರಟಿರುತ್ತಾರೆ. ಹೀಗೆ ಹೊರಟವರಲ್ಲಿ ಕೆಲವರು, ʻಏನೋ ಇರೋದಂತೂ ನಿಜʼ ಅನ್ನುತ್ತಾ ಭಯಪಟ್ಟು ಓಡಿಬಂದರೆ, ಇನ್ನೂ ಕೆಲವರು ʻಎಂಥ ಮಣ್ಣೂ ಇಲ್ಲ ಬಿಡಿ, ಎಲ್ಲ ಕಟ್ಟುಕಥೆʼ ಎಂದರು. ಹೀಗೆ ಅಂತೆಕಂತೆಗಳ ನಡುವೆ ಆಜ್‌ ತಕ್‌ ವಾಹಿನಿ, ದೆಹಲಿ ಮೂಲದ ಪ್ರಖ್ಯಾತ ಪ್ಯಾರಾನಾರ್ಮಲ್‌ ಸಂಸ್ಥೆಯೊಂದರ ಜೊತೆ ಒಂದಿಡೀ ಇರುಳು ಕುಲ್ಧಾರಾದಲ್ಲಿ ಕಳೆದು ಕೆಲವು ವಿಚಾರಗಳನ್ನು ಹೊರಹಾಕಿತ್ತು.

೧೮ ಜನರ ತಂಡವೊಂದು ಈ ಜಾಗದ ಬಗೆಗಿನ ದೆವ್ವಗಳ ಸತ್ಯಾಸತ್ಯತೆ ಪರೀಕ್ಷಿಸಲು ಸಾಕಷ್ಟು ತಯಾರಿಯೊಂದಿಗೆ, ಎಲೆಕ್ಟ್ರಾನಿಕ್‌ ಉಪಕರಣದೊಂದಿಗೆ ಬಂದ ಇವರ ತಂಡ ನಂತರ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದರು. ಈ ಮೂಲಕ ನಾವು ಅವೈಜ್ಞಾನಿಕ ವಿಚಾರಗಳಿಗೆ ಇಂಬು ಕೊಡುತ್ತೇನೆಂದು ಭಾವಿಸಬೇಡಿ ಎನ್ನುವ ಒಕ್ಕಣೆಯೊಂದಿಗೇ, ʻಇದು ವಿಚಿತ್ರವಾದರೂ ಸತ್ಯ, ಆ ದಿನ ಕೆಲವು ವಿಸ್ಮಯವೆನಿಸುವ ಘಟನೆಗಳು ನಡೆದವು. ಲೇಸರ್‌ ಬೆಳಕಿನ ಉಪಕರಣಗಳಲ್ಲಿ ದಾಖಲಾದ ಕೆಲವು ನೆರಳುಗಳ ಚಲನೆ, ಹಿಂದಿನಿಂದ ಯಾರೋ ಭೂಜದ ಮೇಲೆ ಕೈಯಿಟ್ಟ ಅನುಭವ, ಮಧ್ಯರಾತ್ರಿಯಲ್ಲಿ ಕೇಳಿದ ವಿಚಿತ್ರ ಧ್ವನಿಗಳು, ಕಾರಿನ ಮೇಲೆ ಮೂಡಿದ ಮಕ್ಕಳ ಕೈಯಚ್ಚುಗಳು, ಇದ್ದಕ್ಕಿದ್ದಂತೆ ನಮ್ಮ ಎಲೆಕ್ಟ್ರಾನಿಕ್‌ ಉಪಕರಣದಲ್ಲಿ ಕೆಲವೇ ಅಡಿಗಳ ಅಂತರದಲ್ಲಿ ದಾಖಲಾದ ಉಷ್ಣತೆಯ ಏರುಪೇರು ಎಲ್ಲವೂ ನಮ್ಮನ್ನು ಕಂಗೆಡಿಸಿದ್ದು ಸುಳ್ಳಲ್ಲ ಎಂದಿದ್ದರು.

ಅಂದಹಾಗೆ ವಿಷಯ ಏನಪ್ಪಾ ಎಂದರೆ, ಇಂತಹ ಎಲ್ಲ ಪ್ರಯೋಗಗಳ ನಂತರ ಪ್ರವಾಸೋದ್ಯಮ ಇನ್ನೂ ರೆಕ್ಕೆಪುಕ್ಕ ಬಿಚ್ಚಿಕೊಂಡು ಹತ್ತಿರ ತಲೆಯೆತ್ತಿಕೊಂಡಿರುವ ರೆಸಾರ್ಟು, ದುಬಾರಿ ಹೊಟೇಲುಗಳು, ಇಲ್ಲಿಗೆ ಭಾರೀ ಸಂಖ್ಯೆಯಲ್ಲಿ ಬರುವ ವಿದೇಶೀಯರನ್ನೇ ಗಮನದಲ್ಲಿಟ್ಟುಕೊಂಡು ಅತಿರಂಜಿತ ಕಥೆಗಳನ್ನು ಹೇಳುತ್ತಾ, ರಾತ್ರಿ ಒಂದು ರೌಂಡು ಈ ಹಳ್ಳಿಗಳಲ್ಲಿ ಒಂದರ್ಧ ಗಂಟೆ ತಿರುಗಾಡಿಸಿ, ಭಾರೀ ಬಿಲ್ಡಪ್ಪು ಕೊಟ್ಟು ʻಗೋಸ್ಟ್‌ ಸಫಾರಿʼ ಹೆಸರಿನಲ್ಲಿ ದುಡ್ಡು ಮಾಡುತ್ತಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ಎಲ್ಲಾ ದೆವ್ವಗಳ ಮಹಿಮೆ!

ವಿಷಯ ಇದಪ್ಪಾ!:‌

ವಿಷಯ ಏನಪ್ಪಾ ಅಂದ್ರೆ, ನಾವು ಈ ಕುಲ್ಧಾರಾವೆಂಬ ಕುಲ್ಧಾರಾಕ್ಕೆ ಹೋಗಿದ್ದು ಮಟಮಟ ಮಧ್ಯಾಹ್ನ. ಇಂಥ ಪ್ರಖರ ಸೂರ್ಯನ ಬೆಳಕಿನಲ್ಲೂ ಕೂಡಾ ನಾಲ್ಕೂ ದಿಕ್ಕುಗಳಲ್ಲಿ ಕಣ್ಣು ಹಾಯಿಸಿದರೂ ಮರುಭೂಮಿಯೆಂಬ ಬಟಾಬಯಲೇ ಕಾಣುವಾಗ, ಈ ಗೂಗಲಮ್ಮ ಕರೆಕ್ಟಾಗಿ ಹೇಳ್ತಿದಾಳೋ ಇಲ್ಲವೋ ಎಂದು ಡೌಟಾಗಿ ಪರೀಕ್ಷೆ ಮಾಡಿಕೊಳ್ಳೋಣವೆಂದು ಕೇಳೋಣವೆಂದರೆ ನಮಗೆ ಒಂದೇ ಒಂದು ನರಪಿಳ್ಳೆಯೂ ಕಾಣಸಿಗಲಿಲ್ಲ! ಬೆಳ್ಳಂಬೆಳಗ್ಗೇ ಹೀಗೆ ಹಾಂಟೆಡ್‌ ಆಗಿ ಕಂಡ ಈ ಜಾಗಗಳು ರಾತ್ರಿಯಾದರೆ ಹಾಗೆ ಕಂಡರೆ ಯಾವುದೇ ವಿಶೇಷವಿಲ್ಲಪ್ಪ!

‍ಲೇಖಕರು ರಾಧಿಕ ವಿಟ್ಲ

September 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ರಾಧಿಕಾ ವಿಟ್ಲ

    ಧನ್ಯವಾದಗಳು
    ರಾಧಿಕಾ ವಿಟ್ಲ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: