ಸಂತೆಬೆನ್ನೂರು ಫೈಜ್ನಟ್ರಾಜ್
ಸೂಜಿಯೊಳಗೆ ಬಂದ ದಾರ ಅದೆಷ್ಟು
ದೂರ ಸಾಗಬೇಕೋ ಹರಿದಿರುವುದು ಬಟ್ಟೆ
ಅಲ್ಲ ಎಂಬುದಿಲ್ಲಿ ತಳಗೆರೆ!
ಬಿದ್ದ ಎಲ್ಲವನ್ನೂ ತೆಕ್ಕೆಗಾನಿಸಿ ನದಿ ಒಯ್ಯಬೇಕು;
ಸೋಸುವ ಸಮುದ್ರದ ದೂರ
ಅಳತೆಗೆ ಸಿಕ್ಕ ದಿನ ಪ್ರೀತಿಗೆ ನಾಕಾಬಂಧಿ!
ಬೀಸಿದ ಕಲ್ಲು ಹಣ್ಣ
ತಾಕಿ ಬಿದ್ದದ್ದು ಎಷ್ಟು ದೂರವೋ ನೀ ನೋಡಿದ್ದೀಯಾ….ಕೈಯ ಹಣ್ಣು ಮರದ ಮರಿ ಹಕ್ಕಿಯ ಪಾಲೆಂದರೆ ಜಾನೆ ದೊ!

ಎಷ್ಟು ದಿನ ಒಳಗೇ ಕೂತಿರಲಿ
ಪಕ್ಕದ ಮನೆಯ ಮಗು ಮಾತಾಡಿಸುತಿಲ್ಲ; ಒಂದೇ
ಮೆಟ್ಟಿಲು ಬಹಳ ದೂರ
ಈ ಮೈಲಿಗೆಯ ಕಾಯಿಲೆಗೆ ಬಡಾ ಸಲಾಂ!
ಈಗೀಗ ಊರು, ಹಳದಿ ಕಣ್ಣುಗಳ ಮಾರುವ ಜಾತ್ರೆ…ಒಲವ ಹಸಿರು ಕೊಳ್ಳುವ ಜನ ಬಲು ದೂರ
ಮಡಿಗೂ ಮೈಲಿಗೆಗೂ ಜತನ ಮಾಡುವ ಒಳ ಹುನ್ನಾರ!
ದೂರಗಳು ಮನುಷ್ಯರನ್ನಷ್ಟೇ ಅಲ್ಲ,
ಸೋವಿಯಾಗಿ ಹೋದ ಸಾವನ್ನೂ ದೂ…ರ ಒಯ್ಯುತ್ತಿದೆ;
ಪ್ರೀತಿಸಲು ಮತ್ತೆ ಮತ್ತೆ ಮನುಷ್ಯರಾಗಲು
ಕಾವ್ಯಕ್ಕೂ ತಾಕತ್ತಿಲ್ಲವಂತೆ!






ಒಳ್ಳೆಯ ಕವಿತೆ