ದುರಂತ ನಾಯಕಿ…

ಜೆ ವಿ ವಿ ಮೂರ್ತಿ

ದುರಂತ ಮತ್ತು ಸುಖಾಂತ ಎಂಬ ತಲೆಪಟ್ಟಿಗಳನ್ನು ಸಾಹಿತ್ಯ ಸೃಷ್ಟಿಕರ್ತರೋ ಇಲ್ಲ ಪುರಾಣಗಳೋ ತಾವೇ ಕಟ್ಟಲಿಲ್ಲ… ಸಾಹಿತ್ಯ ಅಧ್ಯಯನ ಒಂದು ಬೌದ್ಧಿಕ ಹವ್ಯಾಸವಾದ ಮೇಲೆ ವಿಮರ್ಶಕ ಮತ್ತು ವಿಶ್ಲೇಷಣಕಾರರ ಒಂದು ಹೊಸ ಗುಂಪು ಈ ವರ್ಗೀಕರಣಕ್ಕೆ ತಳಹದಿ ಹಾಕಿರಬೇಕು!…
ಪ್ರಕೃತಿಯಲ್ಲೂ ನಾವು ವೀಕ್ಷಿಸಿದಾಗ ಅತ್ಯಂತ ಹಳೆಯ ಒಂದು ವಿಂಗಡಣೆ-ಕತ್ತಲೆ ಬೆಳಕು!… ವೈಜ್ಞಾನಿಕವಾಗಿ ಕತ್ತಲೆ ಎಂಬ ಬೇರೆ ಭೌತಿಕ ಅಸ್ತಿತ್ವವೇ ಇಲ್ಲ… ಬೆಳಕು ಸ್ವಾಭಾವಿಕ… ಅದರ ಅಸ್ವಾಭಾವಿಕತೆ, ಕತ್ತಲು… ಬೆಳಕು ಇಲ್ಲದ ಸ್ಥಿತಿ ಕತ್ತಲು ಅಷ್ಟೇ!… ಮನುಷ್ಯ ಹುಟ್ಟುವಾಗ ರಾಕ್ಷಸನಾಗಿ ಹುಟ್ಟುತ್ತಾನೆಯೇ?… ಎಲ್ಲ ‘ಶುದ್ಧ’ ದೇಹ ಮತ್ತು ಮನಸ್ಸಿನವರಾಗೇ ಜನನ… ಬೆಳೆಯುತ್ತಾ ಎಲ್ಲ ವಿಧದ ಗುಣಗಳು ಗಳಿಸಿಯೋ ಇಲ್ಲ ಅಂಟಿಕೊಂಡೋ ಇಲ್ಲ ಪಡೆದುಕೊಳ್ಳುವ ಪ್ರಕ್ರಿಯೆ…

ಭಾರತೀಯ ಸಂಸ್ಕೃತಿ ಮತ್ತು ಪುರಾಣಗಳಿಗೆ ಸಮೀಪವೆನಿಸಿಕೊಳ್ಳುವ ‘ಗ್ರೀಕ್’ ಸಾಹಿತ್ಯ ಸಂಪ್ರದಾಯದಲ್ಲಿ ‘ದುರಂತ ನಾಯಕಿಯರು’ ಎನಿಸಿಕೊಂಡವರು ಹೇಗಿದ್ದರು ಸ್ವಲ್ಪ ನೋಡಿ… ಒರೆಸ್ಥಿಸ್ ಪುರಾಣದಲ್ಲಿ ಒರೆಸ್ಥಿಸನ ತಂಗಿ ಇಲೆಕ್ಟ್ರಾ ತನ್ನ ಅಣ್ಣನನ್ನು ಪ್ರಚೋದಿಸಿ ತಾಯಿಯ ಕೊಲೆ ಮಾಡಿಸುತ್ತಾಳೆ-ಅಂತಿಗೊನೆ ತನ್ನ ಅಣ್ಣ ಪಾಲಿನೀಸಸ್ಸಿನ ದೇಹವನ್ನು ತನ್ನ ಚಿಕ್ಕಪ್ಪ, ಕ್ರಿಯಾನನ ಇಚ್ಛೆ ಮತ್ತು ಥೀಬ್ಸ್ ದೇಶದ ಕಾಯಿದೆಗೆ ವಿರುದ್ಧವಾಗಿ ಸಮಾಧಿಗೇರಿಸುತ್ತಾಳೆ.

ಇನ್ನೊಂದು ಕಥೆಯಲ್ಲಿ ರಾಣಿ ಕ್ಲೈಟೆಮ್ನೆಸ್ಟ್ರಾ ತನ್ನ ಗಂಡ ಆಗಮೇಮನ್ ಟ್ರಾಯ್ ರಾಜ್ಯಕ್ಕೆ ಒಳ್ಳೆಯ ಗಾಳಿ ಬೀಸಲು ತನ್ನ ಮಗಳ ಬಲಿ ನೀಡಿದಾಗ ತಾನೇ ಸಿಂಹಾಸನವನ್ನು ತನ್ನದಾಗಿಸಿಕೊಂಡು ಒಬ್ಬ ಹೊಸ ಪ್ರಿಯತಮನನ್ನು ಹುಡುಕಿಕೊಂಡು ನಂತರ ಆಗಮೇಮನ್ ಹತ್ತು ವರುಷಗಳ ಕಠಿಣ ಯುದ್ಧದಲ್ಲಿ ದಣಿದು ವಾಪಸಾದಾಗ ಸ್ನಾನದ ಮನೆಯಲ್ಲಿ ಕೊಡಲಿಯಿಂದ ಕೊಲ್ಲುತ್ತಾಳೆ!…

ಇಲೆಕ್ಟ್ರಾ,ಅಂತಿಗೊನೆ, ಕ್ಲೈಟೆಮ್ನೆಸ್ಟ್ರಾ… ಇವರೆಲ್ಲ ಸಾಹಿತ್ಯದಲ್ಲಿ ‘ದುರಂತ’ ನಾಯಕಿಯರು ಎಂದು ವಿಮರ್ಶಕರ ಪರಿಗಣನೆ!
ಆದ್ದರಿಂದ ‘ದುರಂತ ಸ್ತ್ರೀ’ ಪಾತ್ರಗಳು ಎಂಬ ಒಂದು ವರ್ಗ ಸೃಷ್ಟಿಸಿದ್ದೇ ವಿವಾದಾತ್ಮಕ ಎಂದನಿಸಿದೆ ನನಗೆ… ನಮ್ಮ ಪುರಾಣದ ‘ಪಂಚಕನ್ಯೆಯರು’ ಎಂದು ಕರೆಸಿಕೊಳ್ಳುವ ಅಹಲ್ಯೆ, ದ್ರೌಪದಿ, ಸೀತೆ ಅಥವಾ ಕುಂತಿ, ತಾರಾ, ಮಂಡೋದರಿ… ಎಲ್ಲ ಅಧಿಕೃತವಾಗಿ ‘ವಿವಾಹಿತರೇ!’.. ಆದರೂ ‘ಕನ್ಯೆಯರು’ ಎಂದು ಎನಿಸಿಕೊಂಡಿದ್ದಾರೆ!… ಕಾರಣ ಪ್ರತಿಯೊಬ್ಬರೂ ಒಂದು ರೀತಿಯಲ್ಲಿ ವಿವಾಹ ಬಂಧನದಲ್ಲಿದ್ದರೂ ‘ಕನ್ಯೆʼಯಂತೆ ಮಾನಸಿಕವಾಗಿ ಪ್ರಬಲರು,ಸ್ವತಂತ್ರರು…

ದ್ರೌಪದಿ ಐದೂ ಪಾಂಡವರ ಹೆಂಡಿರಾಗಿಯೂ ನಿರ್ಭಯ ಸ್ತ್ರೀವಾದಿಯಾಗಿ ಪ್ರತಿ ಗಂಡಂದಿರೂ ವಚನಬದ್ಧರಾಗಿ ತಮ್ಮ ಕಾರ್ಯ ನಡೆಸುತ್ತಾರೆ, ಅವಳು ತನ್ನನ್ನು ಅವಮಾನಿಸಿದ, ಕೀಳಾಗಿಸಿದ ಎಲ್ಲರ ನಿರ್ನಾಮಕ್ಕೆ ಕಾರಣಳಾಗುತ್ತಾಳೆ… ಶೂರ್ಪಣಖಿ ತನ್ನ ಕಾಲವನ್ನು ಮೀರಿದ ಆಧುನಿಕಳು, ರಾವಣನ ತಂಗಿಯಾದರೂ ತೀವ್ರ ಭಾವುಕ ಜೀವನ ನಡೆಸಿ ಧೈರ್ಯದಿಂದ ನೇರ ರಾಮಲಕ್ಷ್ಮಣರ ಪ್ರೇಮಭಿಕ್ಷೆ ಬಯಸುತ್ತಾಳೆ… ಸಾವಿತ್ರಿ ಅತ್ಯಂತ ಬುದ್ಧಿವಂತಳು… ಒಳ್ಳೆಯ ಮಾತುಗಾರ್ತಿ, ತರ್ಕದಲ್ಲಿ ತಜ್ಞೆ,.. ಯಮನನ್ನು ವಾದದಲ್ಲಿ ಸೋಲಿಸಿ ಸತ್ಯವಾನನನ್ನು ಬದುಕಿಸಿಕೊಳ್ಳುತ್ತಾಳೆ…

ರಾವಣನ ಹೆಂಡತಿ ಮಂಡೋದರಿ ರಾವಣನಂಥ ಬಲಿಷ್ಠ,ದುಶ್ಚಿಂತಕ,ಯಾರ ಬುದ್ಧಿವಾದಕ್ಕೂ ಕಿವಿಗೊಡದವ… ಅಂಥವನನ್ನು ಧೈರ್ಯದಿಂದ ಎದುರಿಸಿ ನೈತಿಕತೆಯನ್ನು ಬೋಧಿಸಿ ಕಡೆಯವರೆಗೂ ನ್ಯಾಯಮಾರ್ಗವನ್ನೇ ರಾವಣನ ತಲೆತುಂಬಲು ಪ್ರಯತ್ನಿಸಿದ ಧೀಮಂತೆ…
ಹಿಡಿಂಬಿ ಸ್ವಂತ ಇಚ್ಛಾನುಸಾರ ಭೀಮನನ್ನು ಪ್ರೇಮಿಸಿ ಯಾವ ಹಂಗಿಲ್ಲದೆ ಅವನ ಪತಿತ್ವ ಬಯಸಿ ಅವನು ಬರೇ ಅವಳಿಗೊಂದು ಸಂತಾನ ನೀಡಿ ಮರೆಯಾಗುತ್ತೇನೆಂಬ ಷರತ್ತನ್ನು ಒಪ್ಪಿ ಒಬ್ಬಂಟಿಗ ತಾಯಿಯಾಗಿ ಮಗನನ್ನು ಬೆಳೆಸಿ ಯಾವ ಕಾನೂನಿನ ಅನುಬಂಧವಿಲ್ಲದೆ ಘಟೋತ್ಕಜ ಪಾಂಡವರ ಮಕ್ಕಳೆಲ್ಲರಲ್ಲೂ ಹಿರಿಯನಾದರೂ ಅದರ ದುರುಪಯೋಗ ಮಾಡದೆ ವೈಯಕ್ತಿಕ ಸ್ವಾತಂತ್ರ್ಯ ಪ್ರದರ್ಶಿಸಿದ ವನವಾಸಿಯಾಗಿಯೂ ನಾಗರೀಕಳು…

ಸೀತೆಯಂತೂ ಅಸಾಮಾನ್ಯ ಶಕ್ತಿಯ ಹೆಂಗಸು, ತನ್ನ ಮನಸ್ಸಿನ ಅನಿಸಿಕೆಗಳನ್ನು ಸ್ಪಷ್ಟವಾಗಿ ಮಂಡಿಸಿದವಳು, ಸ್ವಾಭಿಮಾನಿ, ಅಧ್ಭುತ ವಾದಶಕ್ತಿ… ರಾವಣನು ಇನ್ನಿಲ್ಲದ ಅಮಿಷಗಳನ್ನು ಒಡ್ಡಿದಾಗ ಅತಿಸೂಕ್ತವಾಗಿ ಪ್ರತಿವಾದಿಸಿ ದೂರದಲ್ಲಿಟ್ಟು ಸಹನೆಯಿಂದ ಕಾದು ರಾವಣನ ಅಂತ್ಯ ಕಾಣಿಸಿದ ಸಮಯಸಾಧಕಿ, ಒಂಟಿ ತಾಯಿ, ಮನೋದಾರ್ಢ್ಯ ಮತ್ತು ಚಾರಿತ್ರ್ಯ ಶಕ್ತಿಗೆ ಇನ್ನೊಂದು ಹೆಸರು…

ಇನ್ನೂ ಅನೇಕ ಸ್ತ್ರೀಪಾತ್ರ ಮತ್ತವುಗಳ ಸಮರ್ಥನೆಗಳನ್ನು ಮಂಡಿಸಬಹುದು!… ಒಟ್ಟಾರೆ ನಾನು ಯಾವ ಪುರಾಣ ಸ್ತ್ರೀಯನ್ನು ‘ದುರಂತ ನಾಯಕಿ’ಯಾಗಿ ಕಾಣಲಿಚ್ಛಿಸುವುದಿಲ್ಲ… ವಾಸ್ತವದಲ್ಲಿ ಅವರು ಶಕ್ತಿವಂತರೇ! ಬಲಿಷ್ಠರೇ! ಇದು ನಮ್ಮ ಮಾನವ ಸಮಾಜದಲ್ಲಿಯೂ ಎಲ್ಲ ‘ವಿವಾಹಿತ’ ಪುರುಷೋತ್ತಮರೂ ಒಪ್ಪಿಕೊಳ್ಳಲೇ ಬೇಕಾದ ಸತ್ಯ!… ಬಹಿರಂಗದಲ್ಲಿ ದುಃಖತಪ್ತರಾಗಿ ಒಪ್ಪಿಕೊಳ್ಳದಿದ್ದರೂ ಆಂತರಿಕದಲ್ಲಿ ಅದು ನಿಜ ಅನುಭವ ಎಂಬುದು ನಿರ್ವಿವಾದ!…

‍ಲೇಖಕರು Avadhi

April 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: