‘ದುಡಿಮೆ’ ಎಂದರೆ..

ಕಾವ್ಯ ಎಂ ಎನ್

**
ಬೇಸಿಗೆ ರಜೆ ಬಂದ್ರೆ ಅಕ್ತಗೀರು ನಾವ್ ಮೂವರು ಅಮ್ಮನ ಊರಿಗೆ ಹೋಗ್ಬಿಡ್ತಿದ್ವಿ. ಸಣ್ಣ ವಯಸಿಂದ್ಲು, ದುಡಿಯೊಕೆ ಹೋದ ಅಪ್ಪ‌ಅಮ್ಮ ಇಬ್ರೂ ಮನೆಗ್ ಬರೋತನಕ ಕದ ಹಾಕೊಂಡು ಒಳಗೇ ಇರ್ತಿದ್ ನಮಗೆ ಹೊರಜಗತ್ತಿನ ಮುಖ ಕಾಣ್ತಿದ್ದದ್ದು ಊರಿಗೆ ಹೋದಾಗ ಮಾತ್ರ. (ಗೊತ್ತಿಲ್ಲದ ಊರಿಗೆ ಹೊಟ್ಟೆಹೊರೆಯಲು ಬಂದೊರು. ಹಂಗಾಗಿ ಸ್ನೇಹಿತ್ರು ಅವರ ಒಟ್ಟಿಗಿನ ಆಟ ಅಂಥದ್ದು ಇಂಥದ್ದು ಇವೆಲ್ಲಾ ಏನೂ ಇರ್ಲಿಲ್ಲ ಈ ಇದ್ದೂರಲ್ಲಿ) ಆಡಿದ್ರೂ ಮೂವರೇ.. ಅತ್ರು ಮೂವರೇ.. ನಕ್ರೂ ಅಷ್ಟೆನೇ. ಹಂಗಾಗಿ ಬೇಸಿಗೆ ರಜೆನ ಮಾತ್ರ ವ್ಯರ್ಥ ಆಗೊಕೆ ಬಿಡ್ತಿರ್ಲಿಲ್ಲ. ಪಟ್ಟು ಹಿಡಿದು ಊರಿಗೆ ಹೋಗ್ತಿದ್ವಿ.

ಅಮ್ಮನ ಊರು ಚನ್ನಗಿರಿ ಹತ್ರಾ ಐದಾರು ಕಿಲೋಮೀಟರ್ ದಾಟಿದ್ರೆ ನೆರಕೆ ಗುಡಿಸ್ಲೆ ಹೆಚ್ಚು ಇರೋ ಆ ಊರಿನ ನಮ್ ಕೇರಿಲಿ ಇದ್ದೋರೆಲ್ಲ ಹೆಚ್ಚುಕಮ್ಮಿ ಚಿಕ್ದೊಡ್ಡಪ್ಪ ಅತ್ತೆಮಾವ ಅನ್ನೊ ನೆಂಟರೆ. ವರ್ಷಕೊಂದ್ಸಲ ಎರಡ್ಸಲ ಊರು ಮುಖ ನೋಡೊ ನಮ್ಮನ್ನ ಅಲ್ಲಿ ಎಲ್ಲರೂ ಪ್ರೀತಿ ಆದರಗಳಿಂದ ಕಾಣೋರು. “ಎಪ್ಪಾರ್ ವಂದ್ರಿ,, ನಿಂಗಮ್ಮ ವಂದಿದಾ ?” ಅಂತ ಮಂಜು ಮಂಜು ದೃಷ್ಟಿ ಕಾಣೊ ಕಣ್ ತಿಕ್ಕೊಂಡು ಮುಖಮುಸುಡಿ
ಮುಟ್ಟಿಮುಟ್ಟಿ, ಗುರುತು ಸಿಕ್ಕಂಗೆ ಮಾತಾಡ್ಸೊ ಹಣ್ಣಾದ ಮುದ್ಕೀರು ಮುದ್ಕುರು, “ಮಾದಮನ್ ಮಕ್ಕ್ಯಾ ?” ಅಂತ ಪ್ರಶ್ನಿಸ್ತಾ, ನಲ್ಲಗಿರ್ಯಾ ? ಕಳಿ ತಿಂಡ್ರ್ಯಾ? ಅಂದ್ರೆ ದೂರದ ಭೇಟಿ ಸಮಾಚಾರ ಹೆಚ್ಚುಕಮ್ಮಿ ಮುಗ್ದಂಗೇನೆ. ಅಲ್ಲಿನ್ ನಂತ್ರಾ ಊಟಕ್ಕೆ ಕಾಫಿ ತಿಂಡಿಗೆ ಎಲ್ಲರೂ ಕರಿಯೋರು.

ಒಂದ್ ರೌಂಡ್ ಊರಿಗೆಲ್ಲಾ ನಾವು ಬಂದಿರೊ ಸುದ್ದಿ ತಿಳಿಯಂಗೆ ತಿರುಗಾಡಿ ಸವಾರಿ ಮುಗ್ಸಿ ಊಟೋಪಚಾರ ಸ್ವೀಕರಿಸಿ ಮನೆಬಾಗಿಲು ಹೊಕ್ಕೊ ಅಷ್ಟೊತ್ತಿಗೆ ಕತ್ಲಾಗೋದು. (ಕತ್ಲಾಗೋದು ಅಂದ್ರೆ ಏನ್ ಗೊತ್ತಾ ಏಳು ಗಂಟೆಗೆ ಊಟಗೀಟ ಮುಗಿಸಿ ಎಂಟಕ್ಕೆಲ್ಲಾ ಮಲಗೋದು ಅಂತ.) ಎಷ್ಟು ಸಲ ಹೋಗಿದ್ದೀನಿ. ಅಮ್ಮನ ಊರಿನ ಬೆಳಗು ಈ ಇದ್ದೂರಿನಂಗೆ ಇರ್ತಿರಲಿಲ್ಲ ಯಾವಾತ್ತಿಗೂ. ಬೆಳಕು ಹರಿಯೊ ಮುಂಚೆ ಕೇರಿ ಎಚ್ರಾ ಆಗ್ತಿತ್ತು. ಹಿಂದಿನ ಇಡೀ ದಿನ ನಡ – ಮೈ ಬಗ್ಗಿಸಿ ಪುಟ್ಟಿ ಚಾಪೆ ಹೆಣಿದ್ ಉಳ್ದಿದ್ದ ಸೆತ್ಲುನೆಲ್ಲಾ ಒಂದ್ಕಡೆ ಗುಡ್ಡೆ ಹಾಕಿ ಬೆಂಕಿ ತಾಗ್ಸಿ ಮೈ ಕೈ ಕಾಯಿಸ್ತಾ ಕೂತ್ಬಿಡೋರು ಮಕ್ಕಳುಮರಿ ಮುದುಕ್ರು. ಆದ್ರೆ ಹೆಂಗಸ್ರು ಮಾತ್ರ ಈ ಸುದ್ದಿಗೆ ಬಂದಿದ್ ಎಂದೂ ನೋಡಿದ್ದು ನೆನಪಿಲ್ಲ ನಂಗೆ. ತಿಕ್ಕೋದು ತೊಳೆಯೋದು, ಕಸ ಮುಸುರೆ, ಹಂದಿಗೂಡು, ಪುಟ್ಟಿ- ದೆಬ್ಬೆ ಅಂತ ತಮ್ ತಮ್ ಬ್ಯೂಸಿ ಸ್ಕೆಡಲ್ ಲಿ ಮುಳುಗಿ ಹೋಗ್ತಿದ್ರು ಅವರೆಲ್ಲಾ.

ಪ್ರತಿದಿನ ಬಿಸಿ ಜ್ವಾಳದ ಮುದ್ದೆ ಒಣಮೆಣಸಿನಕಾಯಿ ಗೊಜ್ಜು ಅದ್ರ ಜತೆ ಮೋಟೀರುಳ್ಳಿ ನೆಂಚಿಕೆ ಇದ್ರೆ ಒಟ್ಟು ಊಟ ಸಡಗರ ಮುಗಿತಿತ್ತು. ಸಿಟಿಗೆ ಬಂದು ಅನ್ನದ ರೂಢಿ ಇದ್ರೂ ತಿನ್ನೊವಾಗ ಅನ್ನ ಬೇಕು ಅಂತ ಎಂದೂ ಅನ್ನಿಸ್ತಿರಲಿಲ್ಲ ಅಲ್ಲಿ ನಮಗೆ. ಆದ್ರೆ ಅಕ್ಕಿ ಮುಖನ‌ ಹಬ್ಬದ್ ದಿನಗಳಲಿ‌ ಮಾತ್ರ ನೋಡ್ತಿದ್ದ ನಮ್ ಕೇರಿ ನೆಂಟ್ರೆಲ್ಲಾ ಕಸಿವಿಸಿ ಮಾಡ್ಕೊಂಡು ಮುದ್ದೆ ಬಡಿಸುವಾಗ ಮುಖಮುಖ ನೋಡೋರು. ಅವಕಾಶ ಸಿಕ್ಕಾಗೆಲ್ಲಾ ಅತ್ತೆ ಜತೆ ಎರೆನೆಲದ ಹೊಲಕ್ಕೆ ಊಟ ಒಯ್ಯೊದನ್ನ, ದೊಡ್ಡಮ್ಮನ ಜತೆ ಶುಕ್ರವಾರದ ಚನ್ನಗಿರಿ ಸಂತೆ ಮಾಡೊದನ್ನ, ಮಾವ ಅಣ್ಣರ ಜತೆ ವರ್ಷಕ್ಕೊಮ್ಮೆ ನಡೆಯೊ ಜುಂಜಪ್ಪನ ಜಾತ್ರೆಗೆ ಹೋಗೊದನ್ನ ಈ ಯಾವುದನ್ನೂ ಯಾವ ಕಾರಣಕ್ಕೂ ಮಿಸ್ ಮಾಡ್ತಿರಲಿಲ್ಲ.

ಶಿವಮೊಗ್ಗದಲ್ಲೆ ಇರ್ಬೇಕಂತಾಗಿ, ಹೀಂಗೆ ಅವಾಗೊಮ್ಮೆ ಇವಾಗೊಮ್ಮೆ ಊರಿಗೆ ಹೋದ್ರು ಅಲ್ಲಿ ನಂದೇ ಆದ ಸ್ನೇಹದ ಬಳಗ ಇತ್ತು. ಸಿಟಿ ಇಂದ ಹೋದ ನನ್ನ ನೋಡ್ತಾನೆ ಅವರು ಸಿಟಿ ಬಗ್ಗೆ, ಅಲ್ಲಿ ನನ್ ಮನೆ ಶಾಲೆ ಸ್ನೇಹಿತರ ಬಗ್ಗೆ ಎಲ್ಲಾ ವಿಚಾರಿಸಿ “ನೀ ಊರಿಗೆ ಹೋದ್ರೆ ನನ್ನ ಮರೀತೀಯ?” ಅಂತ ಮುಗ್ಧವಾಗಿ ಕೇಳೊ ಸ್ನೇಹಿತ್ರು ಅಲ್ಲಿದ್ರು. ನನ್ನ ವಯಸ್ಸಿನ ಅವರೆಲ್ಲ ವರ್ಷ ವರ್ಷ ಕಳಿತಿದ್ದಂಗೆ ಮದುವೆ ಆಗಿ ಒಬ್ಬೊಬ್ರೆ ಗಂಡನ ಮನೆಗೆ ಹೋದ್ರೆ, ನಾನು ಊರಿಗೆ ಹೋದಾಗೆಲ್ಲಾ ಅವರನ್ನ ಹುಡುಕಿ ನೆನಪು ಮಾಡ್ಕೊತಿದ್ದೆ. ಆಗ ಶುರು ಆಗೋದು ಹಿರಿಕರ ವಿಚಾರಣೆ “ನೀಟಾದು ಇನ್ನೂ ಕಲ್ಯಾಣಂ ಆಗಿಲ್ಯೆ ?”, ಎಮನು ಸೇಂದ್ಗರೆ ? ಇಂತೆಲ್ಲಾ ಪ್ರಶ್ನೆಗಳು ನನ್ನ, ಅಪ್ಪ ಅಮ್ಮನ ಕಿವಿಗೆ ಬಿದ್ರು ಓದಿನ ಕಾರಣಕ್ಕೆ ಇಂಥಾ ಕೆಲವು ವಿಷಯದಲ್ಲಿ ರಿಯಾಯಿತಿ ಇತ್ತು.

ದೊಡ್ಡಮ್ಮ ಅಂಗಡಿ ನೆಡೆಸ್ತಿದ್ರು ಮನೆ ಆದಾಯಕ್ಕಂತ ಪುಟ್ಟಿ ಹೆಣಿಯೋಳು. ಸಣ್ ಪುಟ್ಟಿ ದೊಡ್ಡ ಪುಟ್ಟಿ ಮೊರ ತೊಟ್ಲು ಚಾಪೆ ಎಲ್ಲವೂ. ಗಟ್ಟಿಗಿತ್ತಿ ಬಿದಿರಿನಿಂದಲೇ ಹೆಣಿತಿದ್ದದ್ದು, ಸುಲಭದ ಕೆಲಸ ಏನಲ್ಲ.. “ಕೋಲಾ ಎತ್ತೆಂದ್ಯಾ ?” ಅಂತ ಮಾತಿಗಿಳಿತಾ ಗಳನ ನಾಲ್ಕು ಭಾಗ ಸೀಳಿ, ಸವರಿ, ದಬ್ಬೆ (ಬೆಂಡ್ಲು) ತಗೆದು ಅದನ್ನ ಪುಟ್ಟಿ ಗಾತ್ರದ ಅನುಕೂಲಕ್ಕೆ ಒಂದುನೇರಕ್ಕೆ ಕಳಿತು (ಕತ್ತರಿಸಿ), ತೀರಾ ಒಣಗಿದ್ದನ್ನ ನೆನಸಿಟ್ರೆ ಅರ್ಧ ಕೆಲಸ ಆಗೋದು. ನಂತರ ‘ಅಡಿಸುತ್ತು’ ನ ‘ಬಜ್ಜೀನ ( ದೊಡ್ಡ ದಿಂಡು) ಸಣ್ಣೀನ’ ನ ಪುಟ್ಟಿ ಅಂದ ಅಗತ್ಯಕ್ಕೆ ತಕ್ಕಂತೆ, ಜೋಡುಸ್ಕೊಂಡು ನೂಲಿನಂತ ‘ಇನ್ಲ ಪಿಚ್ಯಾ’ ಅಂದ್ರೆ ಬಿದಿರ್ನಾ ಉದ್ದಕ್ಕೆ ಸಣ್ಣಗೆ ಸೀಳಿ ತಯಾರಿಸ್ತಿದ್ದ ಕಡ್ಡಿನ ಬಳಸಿ ಪುಟ್ಟಿನ ಬಗ್ಗಿಸ್ತಾ ಬಡಿತಾ ಕ್ರಮವಾಗಿ ಹೆಣಿದ್ರೆ ದುಂಡಗೆ ಪುಟ್ಡಿ ಸಿದ್ದ ಆಗೋದು. ದಿನಕ್ಕೆ ಏನಿಲ್ಲಾ ಅದ್ರು ಏಳರಿಂದ ಎಂಟು ಪುಟ್ಟಿ ಹೆಣಿಯೋರು. ಆ ಕಾಲಕ್ಕೆ ಸಣ್ಣಪುಟ್ಟಿಗೆ ನಲವತ್ತು ರುಪಾಯಿ, ದೊಡ್ಡದಕ್ಕೆ ಎಂಭತ್ತು ರುಪಾಯಿ ಸಿಗೋದು. ಊರೂರು ಸಮಾಚಾರ ಮಾತಾಡ್ತಾ ಹೆಣಿತಿದ್ರೆ ಕೆಲಸ ಸಾಗಿದ್ದೆ ತಿಳಿತಿರಲಿಲ್ಲ. ಹಿಂಗೆ ಈ ಕಸುಬು ಮಾಡೊ ಕಾರಣ ನಮ್ಮನ್ನ ದಬ್ಬೆಕೊರಚ್ರು ಅನ್ನೋರು.

ಮದುವೆ ಮುಂಜಿ ಅಷ್ಟೇ ಅಲ್ಲ ಮನೆ ಪಾತ್ರೆ ಬಟ್ಟೆ ಸಮಾನು ತಗ್ದಿಡೊಕೂ ಪುಟ್ಟಿನೇ ಬಳಸ್ತಿದ್ರು ಆಗಿನ ಜನ. ದುಡಿಮೆ‌ ಆದಾಯ ಎಲ್ಲಕ್ಕೂ ಮೂಲವಾಗಿದ್ದ ಹೀಗೊಂದು ಕಸುಬು, ಆಧುನಿಕರಣದ ನಾಜೂಕಿನಲ್ಲಿ ಕ್ರಮೇಣ ಮರೆಯಾಯ್ತು. ನಮೂನೆ ನಮೂನೆ ಪ್ಲಾಸ್ಟಿಕ್ ಟಬ್ ಗಳು, ವಸ್ತುಗಳು ಪುಟ್ಟಿ ಜಾಗನ ಆಕ್ರಮಿಸಿದ್ವು. ಮಾರುಕಟ್ಟೆಲಿ ಕೊರಚರ ಬಿದಿರನ ಮಾಲು ಬೇಡಿಕೆ ಇಲ್ಲದೆ ಸಸ್ತಾ ಆಯ್ತು ಬೆಲೆ ಕಳಕೊತು. ಬೆಂಗಳೂರಲ್ಲೋ ಮುಂಬೈಯಲ್ಲೊ ಮತ್ತೆಲ್ಲೋ ಶೇರು ಮಾರುಕಟ್ಟೆ ಕುಸುದ್ರೆ ಮಾತಾಡೊ ಎಕನಾಮಿಸ್ಟ್ಗಳು ರಾಜಕಾರಣಿಗಳು ಈ ಜನ ದುಡಿಮೆ ಕಳಕೊಂಡಾಗ ಕುರುಡಾಗಿದ್ರು. ಇದು ಕೊರಚರ ಕಥೆ ಅಷ್ಟೇಏನಲ್ಲ ಹೊಸಕಾಲದ ಅಭಿವೃದ್ದಿ ಭಾಷೆಯಲ್ಲಿ ಬದುಕು ಕಳದುಕೊಂಡು ಸದ್ದಿಲ್ಲದೆ ಮರೆಯಾದ ಹಲವು ಜಾತಿಗಳ ಕಥೆಯೂ ಕೂಡ. ದುಡಿಮೆನ ಅರ್ಥಶಾಸ್ತ್ರ ಶ್ರಮದ ಭಾಷೆಯಲ್ಲೇನೊ ವಿವರಿಸತ್ತೆ. ಆದ್ರೆ ನನ್ನ ಜನ ದುಡಿದ್ದದ್ದು ಹಸಿವಿಗೆ. ಈಗಲೂ ಊರಿಗೆ ಹೋಗ್ತಿರ್ತಿನಿ. ಅಲ್ಲೊಬ್ರು ಇಲ್ಲೊಬ್ರು ಹೆಣಿತಾ ಕೂತಿರ್ತಾರೆ. ಈಗ ಪುಟ್ಟಿ ಬೆಲೆ ಇನ್ನೂರರ ಗಡಿ ಏನೊ ದಾಟಿದೆ. ಆದ್ರೆ ದುಡಿಯೊ ಕೈ ಮಾತ್ರ ಮತ್ತೆಲ್ಲೋ ಚಾಚಿದೆ.

‍ಲೇಖಕರು Admin MM

April 15, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: