ದೀಪ್ತಿಯ ದೊಡ್ಡ ಅಸ್ತ್ರ ಅವರ ಸಂವೇದನಾಶೀಲತೆ ಹಾಗೂ ನಿರೂಪಿಸುವ ತಾಕತ್ತು..

ಒಂದೆರಡು ವರ್ಷಗಳ ಹಿಂದಿನ ಮಾತು.  ಒಂದು ಹಸುಗೂಸು ರಾತ್ರೋ ರಾತ್ರಿ ಸಾವಿಗೀಡಾಗಿತ್ತು. ಆ ಸಾವಿನ ಕುರಿತಾಗಿ ಅಕ್ಕಪಕ್ಕದವರು ಸಂಶಯ ವ್ಯಕ್ತಪಡಿಸಿದ್ದರು. ಆ ಮಗುವನ್ನು ಅದರ ತಾಯಿಯೇ ಕೊಂದಿದ್ದಾಳೆ ಎನ್ನುವ ಮಾತು ಸುತ್ತೆಲ್ಲ ಹರಿದಾಡ ತೊಡಗಿತ್ತು. ವಿಚಾರಿಸಲಾಗಿ ಅದು ನಿಜ ಎನ್ನುವ ಮಾತುಗಳು ಕೇಳಿ ಬರತೊಡಗಿದ್ದವು.

ಆಕೆ ಎಲ್ಲಿಂದಲೋ ಕೂಲಿಗೆಂದು ಬಂದವಳು. ಈಕೆಯದ್ದೊಂದು ಚಂದದ ಸಂಸಾರವಿತ್ತು. ಗಂಡ ಮತ್ತು ಇನ್ನೂ ವರ್ಷವೂ ತುಂಬದ  ಮಗುವಿನೊಂದಿಗೆ ಹಾಯಾಗಿದ್ದಳು. ಗಂಡ ಕಟ್ಟಡ ನಿರ್ಮಾಣವಿದ್ದಲ್ಲಿ ಕೂಲಿ ಮಾಡಿ ತಂದು ಹಾಕುತ್ತಿದ್ದ. ಹೊಟ್ಟೆ ಬಟ್ಟೆಗೆ ಕೊರತೆ ಇಲ್ಲದ ಹದವಾದ ಜೀವನ. ಆದರೆ  ಹಠಾತ್ ಆಗಿ ಒಂದು ದಿನ ಅವಳ ಗಂಡ ಕಟ್ಟಡ ಕಟ್ಟುವಾಗ ಮೂರನೇ ಅಂತಸ್ತಿನಿಂದ ಬಿದ್ದು ಸತ್ತು ಹೋದ. ಆ ಹೆಂಗಸು ಅತಂತ್ರೆಯಾದಳು.

ಮಗುವನ್ನು ಕಟ್ಟಿಕೊಂಡು ತಿರುಗಿ ಊರಿಗೆ ಹೋಗುವಂತೆಯೂ ಇಲ್ಲ. ಹಾಗಂತ ಬದುಕನ್ನು ಕೊನೆಗಾಣಿಸಿಕೊಳ್ಳುವಂತೆಯೂ ಇಲ್ಲ. ಅನಿವಾರ್ಯತೆ ಎಲ್ಲವನ್ನೂ ಕಲಿಸುತ್ತದೆ. ಹೀಗಾಗಿಯೇ ಮಗುವನ್ನು ಎತ್ತಿಕೊಂಡು ಆಕೆ ಅದೇ ಕಟ್ಟಡ ಕೆಲಸಕ್ಕೆ ಬರತೊಡಗಿದಳು. ಮಗುವನ್ನು ಅಲ್ಲೆ ನೆರಳಲ್ಲಿ ಮಲಗಿಸಿ ಕೆಲಸ ಮಾಡತೊಡಗಿದಳು. ಅಷ್ಟರಲ್ಲೇ ಆತ ಪರಿಚಯವಾದ. ಅವನೂ ಕೂಡ ಮತ್ತೆಲ್ಲಿಂದಲೋ ಅದೇ ಕೂಲಿಗೆಂದು ಬಂದವನು. ಇವಳು ಮಗುವನ್ನು ಸಾಕಲು ಕಷ್ಟ ಪಡುವುದನ್ನು ಕಂಡು ಸ್ಪಂದಿಸುವ ನೆಪದಲ್ಲಿ ಹತ್ತಿರವಾದ.  ಇವಳಿಗೂ ಆಸರೆ ಬೇಕಿತ್ತು.

ಒಂದಾದರು. ಒಂದಿಷ್ಟು ದಿನ ಇಬ್ಬರೂ ಖುಷಿಯಿಂದಲೇ ಇದ್ದರು. ಆತನೂ ಮಗುವನ್ನು ಅಚ್ಚೆಯಿಂದಲೇ ನೋಡಿಕೊಂಡ. ಹೊರಗಡೆ ಕರೆದೊಯ್ದು ಬೇಕಾದುದನ್ನು ಕೊಡಿಸಿದ.  ಒಂದು ವರ್ಷದ ಒಳಗಿನ ಮಗು ಅದು. ಅಪ್ಪನನ್ನು ಕಳೆದುಕೊಂಡಿದ್ದನ್ನು ಅರ್ಥ ಮಾಡಿಕೊಳ್ಳುವಷ್ಟು ದೊಡ್ಡದಾಗಿಲ್ಲದಿದ್ದರೂ ದುಃಖದ ನೆರಳನ್ನಂತೂ ಅನುಭವಿಸಿತ್ತು. ಹೀಗಾಗಿ ಅಮ್ಮನನ್ನು ಅಂಟಿಕೊಂಡೇ ಇರುತ್ತಿತ್ತು.  ಹಗಲೂ ರಾತ್ರಿ. ಹಗಲಿಡೀ ಮಗುವನ್ನು ಎತ್ತಿಕೊಂಡು ಆಡಿಸುತ್ತಿದ್ದರೂ ರಾತ್ರಿಗಳಲ್ಲಿ ಮಾತ್ರ ಸಹಜವಾಗಿ ಆತ ಮುಖ ಉಬ್ಬಿಸತೊಡಗಿದ.

ಗಂಡ ಹೆಂಡಿರ ನಡುವಿನ ಏಕಾಂತದಲ್ಲಿ ಮಗು ಅಳುವುದು, ಹೊತ್ತಲ್ಲದ ಹೊತ್ತಿನಲ್ಲಿ ಎದ್ದು ಕುಳಿತು ಹಠ ಹಿಡಿದು ಬಿಡುವುದು ಅಷ್ಟೇನೂ ಅಸಹಜವಲ್ಲ. ಇದು ಎಲ್ಲರ ಮನೆಯ ಮಾಮೂಲಿ ವಿಷಯವೇ. ಅಪ್ಪ ಕೆಲವೊಮ್ಮೆ ಕೊಸರಾಡಿದರೂ ಅಮ್ಮ ಮುಸಿನಕ್ಕು, ಬಟ್ಟೆ ಧರಿಸಿ ಮಗುವಿನ ಕೆನ್ನೆ ತಟ್ಟಿ ಮಲಗಿಸುವುದು ಅಂತಹ ದೊಡ್ಡ ವಿಷಯ ಎನ್ನಿಸಿಕೊಳ್ಳುವುದಿಲ್ಲ. ಆದರೆ ಇಲ್ಲಿ ಹಾಗಾಗಲಿಲ್ಲ..  ಹೊಸದಾಗಿ ಅಪ್ಪ ಎನ್ನಿಸಿಕೊಂಡವನು ಹೊಸದಾಗಿ ಮದುವೆ ಆದವನೂ ಕೂಡ. ಅವನಿಗೆ ಇದಾವುದರ ಅರಿವಿರಲಿಲ್ಲ. ಕೊಸರಾಟ ದುಸುಮುಸು ಜಾಸ್ತಿಯಾಯಿತು. ಅಮ್ಮನಿಗೋ ಹೊಸದಾಗಿ ಮದುವೆ ಆದವನನ್ನು ಸರಿಯಾಗಿ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತು.

ಅಂದೂ ಕೂಡ ಹಾಗೇ ಆಗಿದೆ. ಮೊದಲೇ ಮಲಗಿದ್ದ ಮಗು ಅಮ್ಮನ ಬೆಚ್ಚನೆಯ ಅಪ್ಪುಗೆ ಇಲ್ಲದೇ ರಾತ್ರಿ ಎದ್ದು  ಅಳಲಾರಂಭಿಸಿದೆ. ಪ್ರತಿದಿನವೂ ಎಂಬಂತೆ ಸರಿಯಾಗಿ “ಅದೇ”  ಸಮಯಕ್ಕೆ  ಅಳುವ ಮಗುವಿನ ಬಗ್ಗೆ ಆತನಿಗೆ ರೋಸಿ ಹೋಗಿದೆ.  ತೀರಾ ಕಿರಿಕಿರಿ ಎನ್ನಿಸಲು ತೊಡಗಿದೆ. ತನ್ನ ಸುಖಕ್ಕೆ ಪ್ರತಿ ದಿನ ಎರವಾಗುವ ಮಗುವಿನ ಬಗ್ಗೆ  ಎಲ್ಲಿಲ್ಲದ ಕೋಪ ಬಂದಿದೆ. ಆದರೂ ಮುಖ ದುಮ್ಮಿಸಿಕೊಳ್ಳುವುದರಲ್ಲಷ್ಟೇ ಆತ ತನ್ನ ಕೋಪ ತೋರಿಸಿ ಕೊಳ್ಳಬೇಕಿದೆ. ಗಂಡನ ಅಸಹನೆ ಅವಳಿಗೂ ಅರ್ಥವಾಗಿದೆ. ಮಗುವನ್ನು ಆದಷ್ಟು ಬೇಗ ಸುಮ್ಮನಿರಿಸಲು ನೋಡಿದ್ದಾಳೆ.

ಆದರೆ ಅದೇಕೋ  ಆ ದಿನ ಮಗು ಸುಮ್ಮನಾಗಲೇ ಇಲ್ಲ. ಮಗುವನ್ನು ಮಲಗಿಸುವ ಯಾವ ಪ್ರಯತ್ನವೂ ಸಫಲವಾಗಲಿಲ್ಲ. ಅತ್ತ ಆತ ತನ್ನ ಸುಖ ಅರ್ಧಕ್ಕೇ ನಿಂತ ಕೋಪದಲ್ಲಿದ್ದ. ಮಗುವಿನ ಬಾಯಿ ಒತ್ತಿ ಹಿಡಿದಷ್ಟೂ ಮಗು ಕೊಸರಾಡಿ ಅಳತೊಡಗಿದಾಗ ಆಕೆ ಸಿಟ್ಟಿನಿಂದ ಮಗುವನ್ನು  ಗೊಡೆಯತ್ತ ತಳ್ಳಿದಳು. ಒಂದಿಷ್ಟು ಕೊಸರಾಡಿ ಮಗು ಸುಮ್ಮನಾಯಿತು. ಮಗು ಮಲಗಿತೆಂದೇ ಭಾವಿಸಿದರು.  ತಮ್ಮದೇ ಹಸಿವಿನಲ್ಲಿದ್ದವರು ಮಗುವಿನ ಕಡೆ ಗಮನ ನೀಡಲಿಲ್ಲ. ಆದರೆ ತಲೆ ಗೋಡೆಗೆ ಅಪ್ಪಳಿಸಿ ಮಗು ಆಗಲೇ ಕೊನೆಯುಸಿರೆಳೆದಿತ್ತು.  ಬಹುಶಃ ಮಗು ಹೀಗೆ ಕೊಸರಾಡುವುದು ಮತ್ತು ಈಕೆ ಅಸಹಾಯಕಳಾಗಿ ಮಗುವನ್ನು ಹೊಡೆಯುವುದು ಬಹಳ ದಿನಗಳಿಂದ ನಡೆದಿತ್ತೋ ಏನೋ…. ಅಕ್ಕಪಕ್ಕದವರು ಮಗುವು ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂಬುದನ್ನು ಒಪ್ಪಲು ತಯಾರಿರಲಿಲ್ಲ. ಅದನ್ನು ಪೋಲಿಸರಿಗೆ ತಿಳಿಸಿ ತಾವೇ ಕರೆಸಿದ್ದಲ್ಲದೇ  ಅವರ ಮೇಲೆ ಕಂಪ್ಲೇಟ್ ಕೊಟ್ಟಿದ್ದರು.

ಅದಾಗಿ ವರ್ಷಗಳ ನಂತರ ನ್ಯಾಯಾಲಯ ಮಗುವನ್ನು ಕೊಂದ ಅಪರಾಧಕ್ಕಾಗಿ ಆ ಅಮ್ಮನಿಗೆ ಶಿಕ್ಷೆ ವಿಧಿಸಿತು. ಆ ಕೊಲೆಗೆ ಪ್ರೇರಣೆಯಾದ  ಆತನಿಗೂ ಶಿಕ್ಷೆ ಆಯಿತು ಎಂಬುದನ್ನು  ಪೇಪರ್ ನಲ್ಲಿ ಓದಿ ನಿಟ್ಟುಸಿರು ಬಿಟ್ಟಿದ್ದೆ.  ಮೊನ್ನೆ ದೀಪ್ತಿ ಭದ್ರಾವತಿಯವರ ಆ ಬದಿಯ ಹೂವು ಸಂಕಲನ ಓದುವಾಗ ಇದು  ಮತ್ತೆ ನೆನಪಾಯ್ತು. ಸಂಕಲನದ ಎರಡನೆಯ ಕಥೆಯೇ ಆ ಬದಿಯ ಹೂವು. ಅಮ್ಮನ ಮಾತನ್ನು ಧಿಕ್ಕರಿಸಿ ಆತನ ಜೊತೆ ಓಡಿ ಬಂದ ಶಾರಿಗೆ ಆಗ ಹತ್ತಿರ ಹತ್ತಿರ ಐದು ತಿಂಗಳು. ಆದರೆ  ಆತ ಅವಳನ್ನು “ಅಮ್ಮಿಯ ಸಲುವಾಗಿ ಇನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ “ ಎಂದು ನಂಬಿಸಿ ಹೋದವನು ಇವಳನ್ನು ಶಾಶ್ವತವಾಗಿ ಬಿಟ್ಟು ದುಬೈಗೆ ಹೊರಟು ಹೋಗಿದ್ದಾನೆ. ಇತ್ತ ಇವಳು ಹಿಂದಿರುಗಿ ಮನೆಗೂ ಹೋಗುವಂತಿಲ್ಲ. ಯಾಕೆಂದರೆ ಇವಳು ಮಾಡಿದ ಅವಮಾನ ತಡೆಯಲಾರದೆ ಅಮ್ಮ ಕೂಡ ಇಹಲೋಕ ತ್ಯಜಿಸಿದ್ದಾಳೆ.   ಇನ್ನು ಎಲ್ಲಿ ಎಂದು ಹೋಗುವುದು?

ಇದಷ್ಟು ಸಾಲದು ಎಂಬಂತೆ ಹೊಟ್ಟೆ ಪಾಡಿಗಾಗಿ ಕತ್ತಲೆಯ ರಾತ್ರಿ ಪಾಳಿಯನ್ನೂ ಆರಂಭಿಸಿದ್ದಳು. ಯಾವನೋ ತುಂಬಿ ಹೋದ ಜೀವವನ್ನು ಹೊಟ್ಟೆಯಲ್ಲಿಟ್ಟುಕೊಂಡು ತನಗೆ ಆಸರೆಯಾದೀತೆಂದು ಕನಸು ಕಂಡಿದ್ದಳು. ಆದರೆ ಸುಳ್ಳಿನ ಮಹಲಿನಲ್ಲಿ ಹುಟ್ಟಿದ ಮಗುವಿನ ಭವಿಷ್ಯ ನೆನೆದು ಬೇಡ ಎಂದು ನಿರ್ಧರಿಸುವ ಹೊತ್ತಿಗೆ  ಹೊಟ್ಟೆಯಲ್ಲಿರುವ ಪಿಂಡ ತೀರಾ ಬೆಳೆದು ಬಿಟ್ಟಿತ್ತು. ಈಗ ಕಳಚಿಕೊಳ್ಳ  ಬೇಕೆಂದರೆ ಕೈಯ್ಯಲ್ಲಿ ಬಿಡಿಗಾಸೂ ಇರಲಿಲ್ಲ.  ನಾಲ್ಕು ದಿನದಿಂದ ಖಾಲಿ ಹೊಟ್ಟೆ. ಅಕ್ಕಪಕ್ಕದವರ ಕುಹಕದ ಮಾತು ಮಾತ್ರ ಮೈತುಂಬ ತುಂಬಿಕೊಂಡಿದ್ದು. ಕೊನೆಗೂ ಆಕೆ ನಿರ್ಧರಿಸಿ ಹೊರಟಾಗ ಅಂದು ಮನೆಯಿಂದ ಹೊರಟ ಹೊತ್ತಲ್ಲಿ ಅಮ್ಮ “ಶಾರಿ ಹೋಗಬೇಡವೇ…” ಎಂದ ಮಾತು ಮತ್ತೆ ಮತ್ತೆ ಕಿವಿಯಲ್ಲಿ ಮೊಳಗುತ್ತಿತ್ತು.

ಅಮ್ಮ ಆದವಳು ಮಗುವನ್ನು ಕೊಲ್ಲುವುದು ನೈತಿಕವಾಗಿ  ಅದೆಷ್ಟು ಸರಿ ಎಂದು ನೀವೆಲ್ಲ ಪ್ರಶ್ನಿಸಬಹುದು. ಆದರೆ ತನ್ನ ಅಸ್ತಿತ್ವವೇ ಗಟ್ಟಿ ಇಲ್ಲದಿರುವಾಗ ಇನ್ನೊಂದು ಜೀವವನ್ನು ಭೂಮಿಗೆ ತಂದು, ಸಾಕಿ ಸಲಹುವ ಸಂಕಷ್ಟ ಅನುಭವಿಸಿದವರಿಗೇ ಗೊತ್ತು. ಸಿಂಗಲ್ ಪೇರೆಂಟ್ ಎಂಬುದು, ಉಂಡುಟ್ಟು ಹೊಟ್ಟೆ ತುಂಬಿದವರ ಶೋಕಿಯಾಗಬಹುದು. ಆದರೆ ಕೂಲಿ ಮಾಡುವ ಇಂತಹ ಅಸಂಖ್ಯಾತ  ಹೆಣ್ಣುಗಳ ಪಾಲಿಗೆ ತಾಯ್ತನ ಎಂಬುದು ಸಂಭ್ರಮದ ವಿಷಯವಲ್ಲ. ಅದರಲ್ಲೂ ಗಂಡನಿಗೆ ಒಲ್ಲದ ಮಗುವನ್ನು ಪಾಲಿಸುವುದು ಸಾಧ್ಯವೂ ಇಲ್ಲ. ಅದಕ್ಕೆಂದೇ ನಮ್ಮ ಹಳ್ಳಿಯ ಮನೆ ಮನೆಗಳಲ್ಲೂ ಹುಟ್ಟಿದ ಎರಡೇ ದಿನಕ್ಕೆ  ಕಳ್ಳಿ ಹಾಲು ಎರಡಸಿಕೊಂಡು ಜೀವತೆತ್ತ, ಅಕ್ಕಿಯನ್ನೋ ಭತ್ತವನ್ನೋ ತುಂಬಿಸಿಕೊಂಡು ಈ ಲೋಕಕ್ಕೆ ಕಣ್ಣು ಬಿಡುವ ಮೊದಲೇ ಇಹಲೋಕ ತ್ಯಜಿಸಿದ ಅದೆಷ್ಟೋ ಗಂಧರ್ವ ಕನ್ಯೆಯರ ಕಥೆಗಳನ್ನು ಕೇಳಬಹುದು.

ಅಷ್ಟವಸುಗಳಿಗೆ ಭೂ ಲೋಕದಲ್ಲಿ ಜನ್ಮ ತಾಳುವ ಶಾಪ ದೊರೆತಾಗ ಅವರು ಗಂಗೆಯ ಬಳಿ ಬಂದು ಪ್ರಾರ್ಥಿಸಿದರಂತೆ. ತಾವು ಹುಟ್ಟಿದ ತಕ್ಷಣ ತಮ್ಮನ್ನು ಕೊಂದು ಬಿಡಲು. ತಾನು ಏನೇ ಮಾಡಿದರೂ ಪ್ರಶ್ನಿಸುವಂತಿಲ್ಲ ಎಂದು ಶಂತನುವಿಂದ ವರ ಪಡೆದ ಗಂಗೆ ಹುಟ್ಟಿದ ಮಕ್ಕಳು ಹುಟ್ಟುತ್ತಲೇ ನೀರು ಪಾಲು ಮಾಡಿದಳಂತೆ. ಎಂಟನೆಯ ವಸು ಭೀಷ್ಮ ಮಾತ್ರ ಶಂತನುವಿನ ಮಧ್ಯ ಪ್ರವೇಶದಿಂದ ಬದುಕಿಕೊಂಡ ಕಥೆ ನನಗೆ ಹಳ್ಳಿಗಳಲ್ಲಿ, ಅಸಹಾಯಕ ಹೆಣ್ಣುಗಳ ಬಾಯಲ್ಲಿ ಇಂತಹ ಕಥೆಗಳನ್ನು ಕೇಳಿದಾಗಲೆಲ್ಲ ನೆನಪಾಗುತ್ತಿರುತ್ತದೆ.

ದೀಪ್ತಿ ತೀರಾ ಸೂಕ್ಷ್ಮ ಮನಸ್ಸಿನ ಗೆಳತಿ. ಹೊರಗಿನವರಿಗೆ ಹೊಸ ಪರಿಚಯದವರಿಗೆ ಮಾತು ತೀರಾ ಕಡಿಮೆ ಎನ್ನಿಸಿದರೂ ಆತ್ಮೀಯ ವಲಯದಲ್ಲಿ ಬೆರೆವ ಮಾತುಗಾತಿ. ಮಾತಿನಲ್ಲಿಯೇ ಮನಸ್ಸನ್ನು ಅಳೆಯಬಲ್ಲ ಚತುರೆ. ಎಷ್ಟೋ ಸಲ ತೀರ ಬೇಸರವಾದಾಗ ಅವಳಿಗೆ ಫೋನಾಯಿಸಿದ್ದಿದೆ. “ಏನಾಯ್ತೋ….? ಬೇಜಾರಲ್ಲಿದ್ದೀಯಾ?” ಎಂದು ಮಾತು ಕೇಳಿದ ತಕ್ಷಣವೆ ಕೇಳುವಷ್ಟು ಸಂವೇದನಾಶೀಲೆ.  ಸುಲಭಕ್ಕೆ ಯಾರನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳದ, ಹಚ್ಚಿಕೊಂಡರೆ ಯಾವತ್ತೂ ಜೊತೆಗೆ ನಿಲ್ಲುವ, ನೇರ ಮತ್ತು ಖಡಕ್ ಮಾತಿನ ಅವಳ ನಿಲುವು ಅವರೇನೆಂದು ಕೊಂಡಾರೋ, ಇವರೇನೆಂದುಕೊಂಡಾರೋ ಎಂದು ಸಂದಿಗ್ಧಕ್ಕೆ ಬಿದ್ದು ಕೊನೆಗೆ ಯಾವಾಗಲೂ ನೊಂದುಕೊಳ್ಳುವ ಸ್ಥಿತಿ ತಂದುಕೊಳ್ಳುವ ನನಗೆ ಯಾವಾಗಲೂ ತುಂಬಾ ಇಷ್ಟ.  ಒಂದು ರೀತಿಯಲ್ಲಿ  ಒಳಗೊಳಗೇ ಅವಳ ಫ್ಯಾನ್ ನಾನು.

ಯಾವತ್ತೂ ತನ್ನ ಬಗ್ಗೆ ಹೆಚ್ಚುಗಾರಿಕೆ ತೋರಿಸದೇ ಸುಲಭವಾಗಿ ಬೆರೆಯುವ ದೀಪ್ತಿಯ ಕಥೆಗಳೂ ಹಾಗೆಯೇ. ಯಾವುದೇ ಕಿರೀಟವನ್ನು ತಲೆಗೇರಿಸಿಕೊಳ್ಳದೇ ಸಹಜವಾಗಿ ಓದಿಸಿಕೊಂಡು ಹೋಗುತ್ತದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಇದು ದೀಪ್ತಿಯವರ ಮೊದಲ ಕಥಾ ಸಂಕಲನವಾದರೂ ಎಲ್ಲಿಯೂ ಅಂತಹುದ್ದೊಂದು ವಿನಾಯಿತಿಯನ್ನು ಬೇಡುವುದಿಲ್ಲ. ಮೊದಲೆರಡು ಕವನ ಸಂಕಲನವನ್ನು ಪ್ರಕಟಿಸಿರುವ ದೀಪ್ತಿಯವರು ಕಥಾ ಮಾಧ್ಯಮವನ್ನು ತಮ್ಮದೆಂದು ಆರಿಸಿಕೊಂಡ ಈ ಹೊರಳು ದಾರಿ ನಿಜಕ್ಕೂ ಅವರಿಗೆ ಅವರ ಮಾರ್ಗವನ್ನು ತೋರಿಸಿಕೊಟ್ಟಿದೆ ಎಂಬುದಕ್ಕೆ ಈ ಸಂಕಲನ ಪುರಾವೆಯಾಗಿದೆ. ಮೊದಲ ಕಥೆ ತಿಮ್ಮಯ್ಯ ಮಾರ್ಕೆಟ್ ಎಂಬ ಕಥೆಯೇ ದೀಪ್ತಿಯವರ ಕಥಾಯಾನದ ಹೆದ್ದಾರಿ  ಹೇಗಿರಬಹುದೆಂದು ತಿಳಿಸುತ್ತದೆ. ಕೊಲೆ ಮಾಡಿದ ಮಾದೇಶನ ಹೆಂಡತಿ ಜಾಂಬವತಿ ಮತ್ತು  ಕೊಲೆಗೀಡಾದ ಇಳಂನ ಪತ್ನಿ ಮಾರಿಮುತ್ತುವಿನ ಸ್ನೇಹದ ವಿವರಣೆಯೇ ಸಾಕು.  ಗಂಡಂದಿರು, ಕೊಲೆಯಾಗಿ, ಕೊಲೆಮಾಡಿ ಜೈಲು ಸೇರಿದರೂ ಇವರಿಬ್ಬರು ತಮ್ಮ ತಮ್ಮ ಹಣೆಬರೆಹಕ್ಕೆ ಇವರೇನು ಮಾಡಿಯಾರು ಎಂಬಂತೆ ಜೊತೆಯಾಗಿ ಬದುಕುವ ಪ್ರಸಂಗ ಕಣ್ಣಂಚನ್ನು ಒದ್ದೆಯಾಗಿಸುತ್ತದೆ. ಭದ್ರಾವತಿಯ ಸುತ್ತಲಿನ ಪರಿಸರದ ಈ ಕಥೆಯನ್ನು ದೀಪ್ತಿಯವರು ತುಂಬು ಅನುಭವಿಸಿ ಬರೆದದ್ದು ಅಲ್ಲಿನ ಸಣ್ಣ ಪುಟ್ಟ ವಿವರಣೆಗಳಿಂದಲೇ ಅರಿವಾಗುತ್ತದೆ. ಇದರಂತೆಯೇ ನೀಲಾಂಬರ ಕಥೆ ಕೂಡ ಅವರು ವಾಸಿಸುವ  ಭದ್ರಾವತಿಯ ಸುತ್ತುಮುತ್ತಲಿನ ಪರಿಸರವನ್ನೇ ಒಳಗೊಂಡಿದೆ.

ಮಾತು ಮಾತಿಗೂ ಸ್ಟ್ರೈಕು ಮುಷ್ಕರಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಬದುಕೇ ಕಳೆದು ಹೋದ  ಊರಿನಲ್ಲಿ ಮತ್ತೆ ಹೊಸದಾಗಿ ಬದುಕನ್ನು ಕಟ್ಟಿಕೊಳ್ಳಲು ಹೊರಟ ನೀಲಾಂಬರ ತನ್ನ ಅಪ್ಪನಂತೆಯೇ ಪ್ರಾಮಾಣಿಕತೆ ಹಾಗೂ ಮುಗ್ಧತೆಯಿಂದಲೇ ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿಯನ್ನು ತಂದುಕೊಳ್ಳುವುದು ಮನಸ್ಸನ್ನು ಕಲಕುತ್ತದೆ. ಕಂಪನಿಯ ದುಡ್ಡನ್ನು ಅಪರಾತಪರಾ ಮಾಡಿದ, ಪೆಟ್ರೋಲ್ ಕದ್ದ ಆಪಾದನೆ ಹೊತ್ತು ಕೆಲಸದಿಂದ ತೆಗೆದು ಹಾಕಲ್ಪಟ್ಟ ಅಪ್ಪನ ಮುಗ್ಧತೆ ಅವನಿಗೇ ಮುಳುವಾದದ್ದು ಗೊತ್ತಿದ್ದೂ ತನ್ನ ಕೆಲಸವೂ ಅದೇ ಕಾರಣದಿಂದ ಹೋದಾಗ ಅಪ್ಪನ ವಿರುದ್ಧ ರೇಗುವ ನೀಲಾಂಬರ ಕೊನೆಗೂ ತಾನೂ ಅಂತಹುದ್ದೇ ಮುಗ್ಧತೆಯ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾನೆ.

ದೇವರ ಕಲ್ಲು ಮತ್ತು ಇರುಳುಗಣ್ಣಿನ ಬೆಳಕು  ಎಂಬ ಎರಡು ಕಥೆಗಳು ಸೂಕ್ಷ್ಮವಾಗಿ ನಮ್ಮ ಧಾರ್ಮಿಕ ಶೃದ್ಧೆಯನ್ನು ಕೆಣಕುತ್ತದೆ. ಕಾಲು ಜಾರಿ ಬೀಳುವಂತಾದಾಗ ಲಮೇಲುವಿಗೆ  ಕೆರೆಯಲ್ಲಿ ಸಿಕ್ಕ ಕಲ್ಲೊಂದು ದೇವಿಯ ಸ್ವರೂಪ ತಳೆಯುತ್ತದೆ. ಯಾರೂ ಮುಟ್ಟಿಸಿ ಕೊಳ್ಳಬಾರದ ಜಾತಿಯ ಅಲಮೇಲಮ್ಮ ದೇವಿಯ ಆರಾಧಕಿಯಾಗಿ ರೂಪುಗೊಳ್ಳುವುದಷ್ಟೇ ಅಲ್ಲ, ಕವಡೆ ಹಾಕಿ ಶಾಸ್ತ್ರ ಹೇಳುವುದು, ಕಣಿ ಹೇಳುವುದು, ಭವಿಷ್ಯದ ಬಗ್ಗೆ ಹೇಳುವುದನ್ನು ಮಾಡಿ ಅದನ್ನೇ ವೃತ್ತಿಯಾಗಿಸಿಕೊಂಡ ಬ್ರಾಹ್ಮಣ ಶಾಸ್ತ್ರಿಯ ಮತ್ಸರಕ್ಕೆ ಕಾರಣಳಾಗುತ್ತಾಳೆ. ಕೆರೆ ದುರ್ಗಮ್ಮ ಎಂಬ ಹೆಸರಿನಿಂದ ಆ ಕೆರೆಯಲ್ಲಿ ಸಿಕ್ಕ ಕಲ್ಲು ಪೂಜೆಗೊಳಗಾಗುವುದೇ ಊರ ನಾಶಕ್ಕೆ ಕಾರಣ ಎಂದು ಪೂಜಾರಿ ಬಿಂಬಿಸಿ ಅಲಮೇಲಮ್ಮನ ಮನೆಯನ್ನೇ ದೇವಸ್ಥಾನಕ್ಕೆಂದು ಬಿಟ್ಟು ಕೊಡಲು ಅವಳ ಮೇಲೆ ಒತ್ತಡ ಹೇರಲಾಗುತ್ತದೆ. ಆದರೆ ಅಲಮೇಲಮ್ಮ ಮನೆಯನ್ನು ಉಳಿಸಿಕೊಂಡು ದೇವರನ್ನೇ ಬಿಡುವ ತೀರ್ಮಾನ ಮಾಡುತ್ತಾಳೆ. ಕೊನೆಯಲ್ಲಿ ನಿಂಗಾದ್ರೆ ನೂರಾರು ಮನೆ ಸಿಗ್ತದೆ ತಾಯಿ, ನಂಗಿರೋದು ಇದೊಂದೇ ಮನೆ” ಎಂಬ ಮಾತು ಮನಸ್ಸನ್ನು ಅದೇ ವಾಕ್ಯದ ಮೇಲೆ ನಿಂತು ಬಿಡುವಂತೆ ಮಾಡುತ್ತದೆ.

ಇರುಳುಗಣ್ಣಿನ ಬೆಳಕಿನಲ್ಲಿ  ಕೂಡ ತನ್ನ ಮೇಳದ ಕೀರ್ತಿ ಹೆಚ್ಚಿಸಿಕೊಳ್ಳಲು ಶೆಟ್ಟಿ ಕೈದುವನ್ನು ದೇವರ  ಹೆಸರಿನಲ್ಲಿ ಬಳಸಿಕೊಳ್ಳುತ್ತಾನೆ. ದೇವಿ ಮಹಾತ್ಮೆ ಮುಗಿಸುವ ಸಂದರ್ಭದಲ್ಲಿ ಕೈದುವಿನ ಮೈಮೇಲೆ ಸ್ವತಃ ದೇವಿಯ ಆವಾಹನೆ  ಆದಂತೆ ತೋರಿಸಿ ಮೇಳದ ಆದಾಯವನ್ನು ಹೆಚ್ಚಿಸಿಕೊಲ್ಳುವ ಉದ್ದೇಶವನ್ನು ಹೊಂದಿದ್ದ ಶೆಟ್ಟು ಕೈದುವಿನ ಬದುಕಿನ ಸಂಪೂರ್ಣ ಹಕ್ಕನ್ನೇ ಕಿತ್ತುಕೊಳ್ಳಲು ಗೋಚರಿಸುತ್ತದೆ.  ಇವೆರಡೂ ಕಥೆಗಳಲ್ಲಿ ದೇವರನ್ನು ತ ಮ್ಮಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಮೇಲ್ವರ್ಗದ ಹುನ್ನಾರವನ್ನು ಕಾಣ ಬಹುದು.

ಈ ಮೇಲ್ವರ್ಗದ ಹುನ್ನಾರವನ್ನು ಎತ್ತಿ ಹಿಡಿಯುವ ಕಥೆಗಳಲ್ಲಿ ಬೆವರ ಸಂತೆ ಮತ್ತು ಕ್ಲೈಮಾಕ್ಸ್ ಕಥೆಗಳು ಪ್ರಮುಖ ಸ್ಥಾನದಲ್ಲಿವೆ.

ನನ್ನ ಊರು ಹಿರೇಗುತ್ತಿಯ ಹಿಂದೆ ಅಘನಾಶಿನ ನದಿಯ ಮುಖಜ ಪ್ರದೇಶವಿದೆ. ಅಲ್ಲಿ ಯ ಸಮುದ್ದ ಸೇರುವ ಅಘನಾಶಿನಿ ನದಿಯ ಹಿನ್ನೀರಿನ ಪ್ರದೇಶವನ್ನು ಗಜನಿ ಎಂದು ಕರೆಯುತ್ತೇವೆ. ಆ ಗಜನಿಯಲ್ಲಿ ಹಿಂದೆ ಕಗ್ಗ ಎನ್ನುವ ಅತಿ ರುಚಿಕರವಾದ ಕಪ್ಪು ಅಕ್ಕಿಯ ಭತ್ತವನ್ನು ಬೆಳೆಯುತ್ತಿದ್ದರಂತೆ. ನಾನು ಹುಟ್ಟುವ ಕಾಲಕ್ಕೆ ನಾವು ನಮ್ಮೆಲ್ಲ ಗಜನಿಯನ್ನು ಕಳೆದು ಕೊಂಡಾಗಿದ್ದರಿಂದ ಅದು ನನಗೆ ಗೊತ್ತಿಲ್ಲ. ಆದರೆ ನನ್ನ ಅಜ್ಜ, ಅಂದರೆ ಅಪ್ಪನ ಚಿಕ್ಕಪ್ಪ ಪದೇ ಪದೇ ಅದನ್ನು ಹೇಳುತ್ತಿದ್ದರು. ಸರಕಾರ ಅತಿ ಕಡಿಮೆ ಬೆಲೆಗೆ ಅಂದರೆ ಇಪ್ಪತ್ನಾಲ್ಕು ರೂಪಾಯಿಗೆ ಗುಂಟೆಯಂತೆ ಇಡೀ ಗಜನಿಯನ್ನು ಖರೀದಿಸಿ ತನ್ನ ವಶ ಮಾಡಿಕೊಂಡು ಬಿಟ್ಟಿತ್ತು. ಯಾರೂ ತಮ್ಮ ಭೂಮಿಯನ್ನು ಕೊಡುವುದಿಲ್ಲ ಎಂಬ ಮಾತನ್ನೇ ಹೇಳಲು ಅಲ್ಲಿ ಆಸ್ಪದವಿರಲಿಲ್ಲ. ಕೊಂಡ ಭೂಮಿಯನ್ನು ಕಾಸ್ಟಿಕ್ ಸೋಡಾ ತಯಾರಿಸುವ ಕಂಪನಿಯೊಂದಕ್ಕೆ ಲೀಸ್ ಆಧಾರದ ಮೇಲೆ ಕೊಟ್ಟೂ ಬಿಟ್ಟಿತ್ತು.

ನಾನು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಆ ಕಂಪನಿಯ ಲೀಸ್ ಮುಗಿದು ಸರಕಾರ ಅದನ್ನು ರೈತರಿಗೆ ಹಿಂದಿರುಗಿಸುವ ತನ್ನ ಮಾತನ್ನು ಮರೆತು ತನ್ನ ಹಿಡಿತ ಸಾಧಿಸಿತ್ತು.  ಆದರೆ ಅತಿ ಕಡಿಮೆ ಬೆಲೆಗೆ ಕೊಂಡ ಭೂಮಿಯನ್ನು ಏನೂ ಮಾಡದೆ ಬಂಜರು ಬಿಟ್ಟಿರುವುದರಿಂದ ಅದನ್ನು ನಮಗೆ ಹಿಂದಿರುಗಿಸ ಬೇಕೆಂದು ನನ್ನ ಚಿಕ್ಕಪ್ಪ ಉದಯ ಕೆರೆಮನೆ ಹೋರಾಟ ಪ್ರಾರಂಭಿಸಿದ್ದರು. ಅವರ ಸುಮಾರು ಮುವತ್ತು ವರ್ಷಗಳ ಹೋರಾಟ ಯಾವ ತಾರ್ಕಿಕ ಅಂತ್ಯಕ್ಕೂ ಬರದೆ ಅವರ  ತೀವ್ರ ಅನಾರೋಗ್ಯದ ಮರಣದೊಂದಿಗೆ ನಿಂತು ಹೋಯಿತು. ಇಂದಿಗೂ ಸರಕಾರ ಆ ಭೂಮಿಯಲ್ಲೊಂದು ಮೀನುಗಾರಿಕಾ ಬಂದರ ನಿರ್ಮಾಣವೋ, ಕ್ರೂಸರ ತಂಗುದಾಣವೋ, ಜಲ ಪ್ರವಾಸೋಧ್ಯಮವೋ ಅಭಿವೃದ್ಧಿಯೋ, ಮೀನುಗಾರಿಕಾ ಪ್ರವಾಸಿ ತಾಣವೋ ಮುಂತಾದ ಜನೋಪಯೋಗಿ  ಯೋಜನೆಯನ್ನು ಕೈಗೆತ್ತಿ ಕೊಳ್ಳದೇ ಒಮ್ಮೆ ತದಡಿ ಬಂದರಿನ ಡಕ್ಕೆಯಾಗಿಸಿ ಮ್ಯಾಂಗನಿಸ್ ಅದಿರನ್ನು ತುಂಬುವ ಸ್ಥಳ ಮಾಡುತ್ತೇವೆಂದು ಹೊರಟರೆ, ಇನ್ನೊಮ್ಮೆ ಥರ್ಮಲ್ ಉಷ್ಣ ವಿದ್ಯುತ್ ಸ್ಥಾವರವನ್ನು ನಿರ್ಮಿಸಿ ಸುತ್ತಲಿನ ಸಹ್ಯಾದ್ರಿಯ ಪರಿಸರವನ್ನು ಹಾರು ಬೂದಿಯಿಂದ ತುಂಬಿಸುತ್ತೇವೆಂಬ ಮಾತನಾಡುತ್ತ ಅಲ್ಲಿನ ಜನರನ್ನು ಅತಂತ್ರತೆಗೆ ತಳ್ಳುತ್ತಲೇ ಇದೆ.

ಬೆವರ ಸಂತೆಯಲ್ಲಿ ಹಸಿರು ಮಕ್ಕಿ ಊರಿನ ಜನರಿಗೆ ಎರಡು ಹನಿ ಬೆವರಿಗೆ ಇನ್ನೂರು ರೂಪಾಯಿಯ ಆಮಿಷ ಒಡ್ಡಿ, ಜನರನ್ನು ದುಡಿಮೆಯಿಲ್ಲದೇ ತಿಂದುಣ್ಣುವ ಅಸಹಾಯಕರನ್ನಾಗಿಸಿ, ಕೊನೆಗೆ ಅದೇ ಜನರಿಗೆ ಸಾಲ ನೀಡಿ, ಸಾಲದ ವಸೂಲಿಗೆಂದ ಜಮೀನಿನ ಕಾಗದ ಪತ್ರ ಅಡವಿಟ್ಟುಕೊಂಡು, ಬೆವರಿನ ಬದಲು ರಕ್ತ ಹೀರಿ ಅವರನ್ನೆಲ್ಲ ನಾಪತ್ತೆಯಾಗಿಸಿ, ಆ ಹಸಿರು ಮಕ್ಕಿ ಊರನ್ನು ಸೈಟ್ ಗಳನ್ನಾಗಿಸಿ ಮಾರುವ ಹುನ್ನಾರವು ನನ್ನ ಊರಿನ ಗಜನಿ ಭೂಮಿಯ ವ್ಯಥೆಯ ಡಿಟ್ಟೋ ಕಥೆ ಎನ್ನಿಸಿ ಬಿಡುತ್ತದೆ.

ತದಡಿಯಲ್ಲಿ ಮೀನುಗಾರಿಕಾ ಬಂದರಿನ ನಿರ್ಮಾಣದ ಬದಲು ವಾಣಿಜ್ಯ ಬಂದರಿನ ನಿರ್ಮಾಣಕ್ಕಾಗಿ ಕರೆದ ಸಭೆಯಲ್ಲಿ ಪರಿಸರವಾದಿಗಳು, ಅಂಕಿ ಅಂಶ ತಜ್ಞರು ಇಲ್ಲಿನ ರಸ್ತೆಗಳಿಗೆ, ಊರುಗಳಿಗೆ ದಿನಕ್ಕೆ ಸಾವಿರಗಟ್ಟಲೆ ಓಡಾಡುವ ವಾಹನ ದಟ್ಟಣೆಯನ್ನು ಸಹಿಸುವ ಧಾರಣ ಶಕ್ತಿ ಇಲ್ಲ ಎಂದಿದ್ದಕ್ಕೆ ಸ್ಥಳಿಯ ಯುವಕರು ಪರಿಸರ ತಜ್ಞರ ಮೇಲೆಯೇ ಹಾರಾಡಿ ತಮ್ಮ ಉದ್ಯೋಗ ತಪ್ಪಿಸುವ ಆರೋಪ ಮಾಡಿದ್ದು ನನಗೆ ಈ ಕಥೆಯ ಪುನರಾವರ್ತನೆ ಎನ್ನಿಸುತ್ತಿದೆ.  ಹೀಗಾಗಿಯೇ ದೀಪ್ತಿ ನನಗೆ ಮತ್ತಷ್ಟು ಆಪ್ತಳಾಗುತ್ತಾಳೆ.  ಜನಪರ ಹೋರಾಟದ ಅಂತ್ಯ ಕೇವನ ಬರ್ಬರ ಸಾವಿನಲ್ಲಿ ಕೊನೆಗೊಳ್ಳುತ್ತದೆಯೇನೋ ಎಂಬ ಹೆದರಿಕೆ ಗಟ್ಟಿಯಾಗುವಂತೆ ಮೊನ್ನೆಯಷ್ಟೇ ನಡೆದ ಹೊಸ ದಾಂಡೇಲಿ ತಾಲೂಕಿನ ರುವಾರಿ ಅಜಿತ್ ನಾಯಕರ ಭೀಕರ ಕೊಲೆ ನಡೆದಿದೆ. ಸಾತ್ವಿಕತೆ, ಜನಪರ ಕೆಲಸಗಳು ದುಡ್ಡು ಮತ್ತು ಅಧಿಕಾರದ ಮದದ ಎದುರು ಸೋಲುತ್ತಲೇ ಹೋಗುವುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ.

ಕ್ಲೈಮಾಕ್ಸ ಕಥೆಯೂ ಕೂಡ ಹಸಿವಿನಿಂದ ಸಾಯುವ ಮಗುವಿನ  ಸಿನೇಮಾ ಮಾಡ ಹೊರಟ ನಿರ್ದೇಶಕನೊಬ್ಬ ಬಡ, ಹಸಿದ ಮಗುವಿನ ಅಳುವಿನೊಂದಿಗೆ ಆಟ ಆಡುವುದನ್ನು ಚಿತ್ರಿಸುತ್ತದೆ.ಉಳ್ಳವರು ಯಾವಾಗಲೂ ಶೋಷಣೆ ಮಾಡುವ ಕಾಯಕವನ್ನು ಬಿಡುವುದೇ ಇಲ್ಲ ಎಂಬುದನ್ನು ದೀಪ್ತಿ ಸೂಕ್ಷ್ಮವಾಗಿ ಚಿತ್ರಿಸುತ್ತಾರೆ.

ನನ್ನ  ಅಜ್ಜಿಯ ಚಿಕ್ಕಮ್ಮ ಒಬ್ಬರಿದ್ದರು. ವೆಂಕಮ್ಮ. ಅವರ ಊರು  ಅಲ್ಲಿಯೇ ಸ್ವಲ್ಪ ದೂರದ್ದು. ಚಿಕ್ಕಂದಿನಲ್ಲಿಯೇ ಗಂಡನನ್ನು ಕಳೆದುಕೊಂಡವರು. ಮಕ್ಕಳು ಮರಿ ಏನೂ ಇರಲಿಲ್ಲ. ಕೊನೆಯ ದಿನಗಳಲ್ಲಿ ತನ್ನವರು ಯಾರಾದರೂ ಜೊತೆಗಿದ್ದಾರು ಅಂತಾ ನನ್ನ ಅಜ್ಜಿ ಇರುವ ಊರಿಗೆ ಬಂದಿದ್ದರು. ಅಲ್ಲೇ ಒಂದು ಚಿಕ್ಕ ಗುಡಿಸಲು ಕಟ್ಟಿಕೊಂಡಿದ್ದರು. ಆಗ ತೀರಾ ಚಿಕ್ಕವಳು ನಾನು. ಪ್ರತಿ ದಿನ ನನ್ನ ಅಜ್ಜಿ ಇದ್ದಲ್ಲಿ ಬರುತ್ತಿದ್ದ ಅವರಿಗೆ ಬೇಕಾದ ಮನೆ ಸಾಮಾನನ್ನು ನನ್ನ ಮಾವ ಅಥವಾ ಅದೇ ಊರಲ್ಲಿದ್ದ ನನ್ನ ಅಮ್ಮನ ಮಾವ ಅಂದರೆ ನನ್ನ ಅಜ್ಜಿಯ ಅಣ್ಣ ಒದಗಿಸುತ್ತಿದ್ದರು. ಆ ಊರಿನಲ್ಲಿದ್ದ ಇಪ್ಪತ್ತೈದು ಮನೆಯವರೂ ಸಂಬಂಧಿಗಳೇ. ಅವರಿವರ ಮನೆಯಲ್ಲಿ ಬಾಣಂತಿಯರನ್ನು ನೋಡಿಕೊಳ್ಳುತ್ತ, ಸಲಹೆ ನೀಡುತ್ತ ಕುಳಿತಿರುತ್ತಿದ್ದರು.

ಹಣ್ಣು ಹಣ್ಣು ಮುದುಕಿಯಾಗಿ ಬೆನ್ನೆಲ್ಲ ಬಾಗಿದರೂ ನಡುಗುವ ಕೈಯ್ಯಲ್ಲಿ ಹಸುಗೂಸುಗಳನ್ನು ಎತ್ತಿಕೊಳ್ಳುತ್ತಿದ್ದುದು ನನಗಿನ್ನೂ ನೆನಪಿದೆ. ಆದರೆ ಅವರ ಕೊನೆಯ ದಿನಗಳು ಮಾತ್ರ ಅಷ್ಟೊಂದು  ನಿರಾಳವಾಗಿರಲಿಲ್ಲ. ತನ್ನ ಸ್ವಂತ ಕೆಲಸವನ್ನೂ ಮಾಡಿಕೊಳ್ಳಲಾಗದೇ, ಎಲ್ಲಾ ವಿಸರ್ಜನೆಗಳೂ ಅಲ್ಲಲ್ಲಿಯೇ ಆಗುವಾಗ ಯಾರೂ ಹತ್ತಿರ ಬರಲು ಸಿದ್ಧವಾಗುತ್ತಿರಲಿಲ್ಲ. “ಆ ದ್ಯಾವ್ರಿಗೆ ಗೊತ್ತೂ ಆಗೂದಿಲ್ಲೇನೆ? ನನ್ನಂತವಳಿಗೆ ಇಷ್ಟ್ ಆಯಸ್ಯಾಕೆ?” ಎಂದು ಪ್ರತಿ ಸಲ ನಾನು ಊರಿಗೆ ಹೋದಾಗಲೂ  ಕಣ್ಣೀರು ಹಾಕುತ್ತಿದ್ದುದು ನನಗೆ ನೆನಪಿದೆ. ಪ್ರತಿದಿನ ಅವರನ್ನು ಶುಚಿಗೊಳಿಸುತ್ತಿದ್ದ ನನ್ನ ಮಾವ ಅತ್ತೆಗೂ ಒಮ್ಮೊಮ್ಮೆ ಇದು ರೋಸಿ ಹೋಗುತ್ತಿತ್ತು.  ಕೊನೆ ಕೊನೆಯ ದಿನಗಳಲ್ಲಂತೂ ಬೆನ್ನ ತುಂಬೆಲ್ಲ  ಹಾಸಿಗೆ  ಹುಣ್ಣು ವ್ಯಾಪಿಸಿಕೊಂಡು ಇಡೀ ದೇಹಕ್ಕೆ ಹಬ್ಬುವಂತಾಗಿ ಬಿಟ್ಟಿತ್ತು.

ದೀಪ್ತಿಯವರ ಕನ್ನಡಿಗಳು ಕಥೆ ನನಗೆ ಮತ್ತೆ ಮತ್ತೆ ವೆಂಕಮ್ಮಜ್ಜಿಯನ್ನು ನೆನಪಿಸಿಕೊಳ್ಳುವಂತೆ ಮಾಡಿತು. ಅಮ್ಮನ ಬಗ್ಗೆ ಅಸೂಯೆ ಹೊಂದಿದ್ದಳು ಎಂಬ ಅಪ್ಪನ ಮಾತಿನ ಅನುಸಾರ ದೊಡ್ಡಮ್ಮನನ್ನು ನಿರೂಪಕಿ ಅಷ್ಟಾಗಿ ಹಚ್ಚಿಕೊಳ್ಳದಿದ್ದರೂ ಆ ದೊಡ್ಡಮ್ಮನಿಗೆ ಅವಳೆಂದರೆ ಅತೀ ಪ್ರೀತಿ. ಊರಿನ ತಿಂಡಿ ತಿನಿಸುಗಳನ್ನೆಲ್ಲ ಹೊತ್ತು ತಂದರೂ ನಿರೂಪಕಿಗೆ ಅನಾದಾರವೇ. ಇಬ್ಬರು ಗಂಡು ಮಕ್ಕಳು ಪಾಲು ಹಾಕಿದಂತೆ ಆರಾರು ತಿಂಗಳು ನೋಡಿಕೊಳ್ಳುವಾಗ ದೊಡ್ಡಮ್ಮನಿಗೆ ಹಿಡಿ ಜೀವ. ಾದರೂ ಆಗೀಗ ನಿರುಪಕಿಗಾಗಿ ತಳಮಳಿಸುವ ಜೀವ. ನಿರೂಪಕಿಯ ಬಾಣಂತನವನ್ನು ಚಂದಾಗಿ ನಿಭಾಯಿಸಿ ಹೋದ ದೊಡ್ಡಮ್ಮ ಅನಾರೋಗ್ಯದಿಂದ ಹಾಸಿಗೆ ಹಿಡಿಯುತ್ತಾರೆ. ಆಗ ನೋಡಲು ಹೋದ ನಿರೂಪಕಿಗೆ ಅದು ಉಸಿರುಗಟ್ಟುವ  ಅನಾದಾರದ ಭಾವ . ಆದರೆ ಅವರ ಮಗನ ಮಗಳ ಮದುವೆಗೆ ಹೋದಾಗ ದೊಡ್ಡಮ್ಮನನ್ನು ಸೊಸೆಯಂದಿರು ಹೊಗಳುತ್ತಿರುತ್ತಾರೆ, ಮನೆಗೋಸ್ಕರ ಜೀವ ತೇದವರು ಎಂಬ ಹೊಗಳಿಕೆ. ಅವರು ಕೊಟ್ಟ ಎರಡೆಳೆ ಅವಲಕ್ಕಿ ಸರವನ್ನು ಅಲ್ಲಿಯೇ ಇಟ್ಟು ಬರುವ ನಿರೂಪಕಿ ಮದುವೆಯ ದಿನ ಆ ಸರ ಸಿಕ್ಕಿದ್ದಕ್ಕೆ ಖುಷಿ ಪಡುವುದನ್ನು ಕಂಡುಏನೋ ಒಂಥರಾ ಸಮಾಧಾನ.

ತಾನು ಎಂದೂ ಹಡೆಯದಿದ್ದರೂ ಊರಿನವರ ಬಾಣಂತನದಲ್ಲಿ ಕೈ ಜೋಡಿಸಿ ಬಾಣಂತಿ ಪಥ್ಯ ಹೇಳಿಕೊಡುತ್ತ, ಬಾಣಂತನ ಸುಸೂತ್ರವಾಗಿ ನಡೆಯುವಂತೆ ಮಾಡುತ್ತಿದ್ದ ವೆಂಕಮ್ಮಜ್ಜಿ ಕೂಡ ಅಷ್ಟೆ. ನಡುಗುವ ಕೈಗಳಿಂದಲೇ ಲೋಕವನ್ನೇ  ಒಂದಾಗಿಸುವಂತೆ ಅಳುತ್ತಿದ್ದ ಹಸುಗೂಸುಗಳನ್ನೆತ್ತಿಕೊಂಡು ಸಮಾಧಾನ ಮಾಡುತ್ತಿದ್ದ ನನ್ನ ವೆಂಕಮ್ಮಜ್ಜಿಯೂ ಇರುವಷ್ಟು ದಿನ ಬೇಡದವಳಾಗಿಯೇ ಬದುಕಿದವಳು. ಆದರೂ ಸತ್ತ ನಂತರ ಮತ್ರ ಎಲ್ಲರ ಕಣ್ಣಲ್ಲೂ ಸಾದ್ವಿ, ಸನ್ಯಾಸಿ, ಮಹಾಮಹಿಮಳು ಎನ್ನಿಸಿಕೊಂಡವಳು. ವೃದ್ದಾಪ್ಯ ಎಂಬುದು ಶಾಪವೇ?

ಗ್ರಾಸ ಎಂಬ ಇನ್ನೊಮದು ಕಥೆಯಲ್ಲಿಯೂ ಹೀಗೆಯೇ. ಸೀತಾರಾಮ ಆಸ್ಪತ್ರೆಯೊಂದರ ಸಿಬ್ಬಂದಿ.  ಅಲ್ಲಿಗೆ ಬರುವ  ಅನಾಥ ವೃದ್ದರ ಬಗ್ಗೆ ಅತಿಯಾದ ಕಾಳಜಿ. ಆದರೆ ಉಳಿದ ಸಿಬ್ಬಂಧಿಗಳು ಇದನ್ನು ಒಪ್ಪುತ್ತಲೇ ಇರಲಿಲ್ಲ. ಅವರಿಗೆ ಹೊಟ್ಟೆ ತುಂಬ ಊಟ ಹಾಕಿದರೆ ಹೇಲು ಉಚ್ಚೆ ಬಳಿಯುವವರಾರು ಎಂಬ ಅಸಹನೆ. ವೈದ್ಯರೂ ಕೂಡ ಇದನ್ನೇ ಹೇಳುತ್ತಿದ್ದರು.  ಇಂತಹುದ್ದೇ ಒಬ್ಬ ಮುದುಕ ಅನಾಥ ಎಂದು ಬಂದಿದ್ದರೂ ಆತನಿಗೆ ಮನೆ ಇರುವುದು ಗೊತ್ತಾಗಿತ್ತು. ಅಂತೂ ಅವನ ಮನೆ ಸೇರಿಸುವುದಾಗಿ ಪೋಲೀಸರು ಕರೆದೊಯ್ದಿದ್ದರು. ಆದರೆ ಸಿತಾರಾಮ ಮಾತ್ರ ಪೋಲಿಸರು ಬಂದಾಗ ತನ್ನ ಆಶ್ರಯ ಸಿಗುವುದೆಂದು ತನ್ನನ್ನು ಹುಡುಕಿ ಅಲೆದಾಡಿದ ಮುದುಕನ ಚಿತ್ರವನ್ನೇ ಮನದಲ್ಲಿಟ್ಟುಕೊಂಡು  ಬಸವಳಿದು ಹೋಗಿದ್ದ. ಕೂತಲ್ಲಿ, ನಿಂತಲ್ಲಿ ಆ ಮುದುಕ ಬಂದು “ಯಾಕೋ ಸೀತಾರಾಮ ಹೀಗೆ ಮಾಡಿದೆ”  ಎಂದು ಕುತ್ತಿಗೆ ಪಟ್ಟಿ ಹಿಡಿದು ಜಗ್ಗಿಸಿ ಕೇಳಿದಂತೆ ಕನವರಿಸುತ್ತಿದ್ದ.

ನಿದ್ದೆಯಿಲ್ಲದೆ ಪೂರ್ತಿಯಾಗಿ ಖಿನ್ನತೆಗೊಳಗಾಗಿ ಮಾನಸಿಕ ರೋಗಿಯಂತಾದ ಸೀತಾರಾಮನಿಗೆ ಮನೋ ವೈದ್ಯರೊಬ್ಬರು ಹೇಳಿದ್ದೂ ಅದೇ ಮಾತು. ನಿಮಗೆ ಆ ಮುದುಕನಲ್ಲಿ ನಿಮ್ಮ ತಂದೆಯ ಹೋಲಿಕೆ ಕಂಡಿದೆ. ಅದಕ್ಕೆ ಅಷ್ಟು ನೋವಾಗುತ್ತದೆ ಎಂದು. ಅಸಲಿ ಹಕಿಕತ್ ಏನೆಂದರೆ ಸೀತಾರಾಮ ತನ್ನ ತಂದೆಯ ಕೊನೆಯ ದಿನಗಳಲ್ಲಿ ಊಟ ಮಾಡಿದರೆ ತನ್ನ ಹೆಂಡತಿ ಹೊಲಸು ಬಳಿಯ ಬೇಕಾಗುತ್ತದೆಂದು ಊಟವನ್ನೇ ಮಾಡದೆ ಉಳಿದ ಅಪ್ಪನಿಗೆ ಒಂದು ತುತ್ತು ಉಣ್ಣಿಸಲಾಗದ ತನ್ನ ಹೇಡಿತನ ಚುಚ್ಚುತ್ತದೆ.  ತಾನು ಊಟ ಮಾಡಿದರೆ ಉಳಿದವರಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕಾಗಿ ಊಟವನ್ನೇ ಬಿಟ್ಟ ವೆಂಕಮ್ಮಜ್ಜಿ ನನಗೆ ಈ ಕಥೆಯಲ್ಲೂ ಮತ್ತೆ ಮತ್ತೆ ಕಾಡುವಂತಾಗಿ, ಸಂಕಲನದ ಓದಿನ ನಡುವೆಯೇ ಅಮ್ಮನಿಗೆ ಫೋನಾಯಿಸುವಂತಾಗಿದ್ದು, “ಎಲ್ಲಾ ಬಿಟ್ಟು ಈ ಅಪರಾತ್ರಿಲಿ ಫೋನ್ ಮಾಡಿ ವೆಂಕಮ್ಮಜ್ಜಿಯ್ಯನ್ನು ಯಾಕೆ ಕೇಳ್ತಿದ್ದೀಯಾ?” ಎಂದು ಅಮ್ಮ ಗಾಬರಿಗೊಳ್ಳುವಂತೆ ಮಾಡಿದ್ದು ಈ ಸಂಕಲನದ ವಿಶೇಷತೆ. ಸೀತಾರಾಮ ತನ್ನ ಮನದ ತಲ್ಲಣಗಳನ್ನು ನಿಯಂತ್ರಿಸಲಾಗದೇ  ಕೊನೆಗೊಂದು ದಿನ ಆ ಮುದುಕನನ್ನು ಹುಡುಕಲು ಹೊರಟವನ ಅಸಲಿ ಬಣ್ಣಕ್ಕಾಗಿ ನೀವು ಕತೆಯ ಕ್ಲೈಮಾಕ್ಸ್ ನ್ನೇ ಓದಬೇಕು.

ಆಸ್ಪತ್ರೆಯಲ್ಲಿ ಕೆಲಸ ಮಾಡುವ ದೀಪ್ತಿಗೆ ಆಸ್ಪತ್ರೆಯ ಒಳ ಹೊರಗೆಲ್ಲ ತುಂಬಾ ಚೆನ್ನಾಗಿ ಪರಿಚಯವಿದೆ. ಹೀಗಾಗಿ  ಈ ಕಥೆಯನ್ನು ಹೊರತುಪಡಿಸಿ ಇನ್ನೆರಡು ಕಥೆಗಳು ಆಸ್ಪತ್ರೆಯ ಸುತ್ತ ಮುತ್ತಲೇ ಸುಳಿಯುತ್ತದೆ. ಅಂಚು ಕಥೆಯಲ್ಲಿ ಕಥಾ ನಾಯಕ ವಿಶ್ವೇಶ್ವರ ತನ್ನ ತೀರಾ ಪ್ರಾಮಾಣಿಕತೆಯಿಂದಲೇ ಸಂಕಷ್ಟ ತಂದು ಕೊಂಡವ. ಇರುವ ಒಂದು ಬಾಟಲ್ ರಕ್ತವನ್ನು ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಬರುವ ಪುಟ್ಟಿಗೆ ಕೊಡಲೊಪ್ಪದೆ ತನ್ನ ಮೇಲಾಧಿಕಾರಿ ತನ್ನ ಸಂಬಂಧಿಕರಿಗೆಂದು ಇಟ್ಟಾಗ ದನ್ನು ಆಕೆಗೆ ನೀಡಿ, ಮೇಲಾಧಿಕಾರಿಗಳ ಮಾತು ಉಲ್ಲಂಘಿಸಿದ್ದಕ್ಕಾಗಿ ಕಡ್ಡಾಯ ರಜೆಯ ಮೇಲೆ ಹೋಗುವ ಶಿಕ್ಷೆಗೆ ಗುರಿಯಾದವ. ಆದರೆ ಸತ್ತು ಹೋದ ಆ ಪುಟ್ಟಿ ಕೊನೆಯ ಕ್ಷಣದಲ್ಲೂ ತನ್ನನ್ನೇ ನೆನಸುತ್ತಿದ್ದುದನ್ನು ಕೇಳಿ ತಾನು ಮಾಡುವ ಕೆಲಸದ ಬಗ್ಗೆ ಹೆಮ್ಮೆ ಪಟ್ಟು ರಾಜಿನಾಮೆ ಪತ್ರ ಹರಿದು ಹಾಕಿದ್ದು ಒಂದು ಪೊಸಿಟಿವ್ ಥಿಂಕಿಂಗ್ ಆಗಿ ಒಳ್ಳೆಯತನಕ್ಕೆ ನಮ್ಮನ್ನು ಪ್ರಚೋದಿಸುತ್ತದೆ.

ಕೊನೆಯ ಮತ್ತು ಸಂಕಲನದ ಅತ್ಯುತ್ತಮ ಕಥೆಯೆಂದರೆ ಅದು ನೆವ. ಸಾವು ಮತ್ತು ಶವಾಗಾರ ಮುಖ್ಯ ಭೂಮಿಕೆಯಲ್ಲಿ ಬರುವ ಈ ಕಥೆಯನ್ನು ದೀಪ್ತಿ ಬಿಟ್ಟು ಮತ್ಯಾರೂ ಬರೆಯಲು ಸಾಧ್ಯವಿಲ್ಲ  ಎಂಬಷ್ಟು ಚಂದವಾಗಿ ನಿರೂಪಿತವಾಗಿದೆ. ಸಾವು ಮತ್ತು ಶವಾಗಾರದ ಸಂಭಾಷಣೆಗಳು ನಮ್ಮಲ್ಲಿ ವಿಶಿಷ್ಟ ಸಂಚಲನವನ್ನು ಮೂಡಿಸುತ್ತದೆ. ಪರ್ಸೋನಿಫಿಕೇಶನ್ ಮಾದರಿಯಲ್ಲಿ ಹಣೆದ ಕಥೆ ಇಡೀ ಸಂಕಲನವನ್ನು ಇನ್ನೊಮದು ಮಗ್ಗಲಿಗೆ ಸಾಗಿಸಿದೆ. ಈ ಕಥೆಯ ಬಗ್ಗೆ ನಾನೇನೂ ಹೇಳಲಾರೆ.ಬರೀ ಓದಲು ರೆಕಂಮಡ್ ಮಾಡುತ್ತಿದ್ದೇನೆ. ಈ ಕಥೆಯನ್ನು ಓದಲೆಂದಾರೂ ನೀವು ದೀಪ್ತಿ ಭದ್ರಾವತಿಯವರ ಆ ಬದಿಯ ಹೂವು ಕಥಾ ಸಂಕಲನವನ್ನು ಓದಲೇ ಬೇಕು.

ದೀಪ್ತಿಯ ಬಹು ದೊಡ್ಡ ಅಸ್ತ್ರ ಅವರ ಸಂವೇದನಾಶೀಲತೆ ಮತ್ತು ಎಲ್ಲಿಯೂ ತಾನು ಅತಿಯಾಗಿ ಒಳ ಪ್ರವೇಶ ಮಾಡದೇ ನಿರೂಪಿಸುವ ತಾಕತ್ತು. ಶಬ್ಧ ಬಂಢಾರವನ್ನೇ ಕೈಯ್ಯಲ್ಲಿ ಹಿಡಿದಿರುವ ದೀಪ್ತಿಯ ಕಥೆಗಳು ಇನ್ನೂ ಓದಬೇಕೆಂಬ ಭಾವನೆಯನ್ನು ಕೊಡುವುದನ್ನು ಅಲ್ಲಗಳೆಯಲಾಗುವುದಿಲ್ಲ.

‍ಲೇಖಕರು avadhi

July 29, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

5 ಪ್ರತಿಕ್ರಿಯೆಗಳು

  1. ಧನಪಾಲ ನಾಗರಾಜಪ್ಪ, ನೆಲವಾಗಿಲು

    ದೀಪ್ತಿ ಭದ್ರಾವತಿ ಮೇಡಮ್ ಅವರ “ಆ ಬದಿಯ ಹೂ” ಕಥಾ ಸಂಕಲನದ ಬಗ್ಗೆ ನಿಮ್ಮ ವಿಶ್ಲೇಷಣೆ ಅತ್ಯಂತ ಆಪ್ತವಾಗಿ ಮೂಡಿಬಂದಿದೆ. ಧನ್ಯವಾದಗಳು
    ಕೃತಿಯನ್ನು ಓದುವ ಮನಸ್ಸಾಗುತ್ತಿದೆ.

    ಪ್ರತಿಕ್ರಿಯೆ
  2. Deepthi bhadravathi

    ಧನ್ಯವಾದ ಶ್ರೀ ತುಂಬಾ ಸಂಯಮದಿಂದ ಓದಿ ಬರೆದಿದ್ದೀರಿ….ನಿಮ್ಮ ಓದಿಗೆ ನನ್ನದೊಂದು ಅಕ್ಕರೆಯ ಸಲಾಂ.,.

    ಪ್ರತಿಕ್ರಿಯೆ
  3. ಸುಜಾತ ಲಕ್ಷೀಪುರ

    ದೀಪ್ತಿ ಅವರ ಕಥೆಗಳ ಸ್ಥೂಲ ಪರಿಚಯ ವಿಸ್ತಾರವಾದ ಜೀವನಾನುಭವ ಮತ್ತು ತೀಷ್ಣ ಆಲೋಚನೆಯ ಮೂಲಕವೇ ಕಟ್ಟಿಕೊಟ್ಟಿದ್ದಾರೆ ಶ್ರೀದೇವಿ. ಪುಸ್ತಕ ಪರಿ ಚಯಕ್ಕೆ ಜೊತೆಯಾದ ಕಥೆಗಳು ಮತ್ತು ಪುಸ್ತಕದೊಳಗಿನ ಕಥೆಗಳು ಎರಡೂ ಏಕಕಾಲಕ್ಕೆ ಓದುಗರನ್ನು ಸೆಳೆದು, ಓದಿನತ್ತ ಮನ ವಾಲುವಂತೆ ಮಾಡಿವೆ..ಧನ್ಯವಾದಗಳು

    ಪ್ರತಿಕ್ರಿಯೆ
  4. Sangeeta Kalmane

    ಕಥಾ ಸಾರಾಂಶವನ್ನು ವಾಸ್ತವದ ಸತ್ಯದೊಂದಿಗೆ ವಿಮರ್ಶಿಸಿ ಕೊನೆಯಲ್ಲಿ ಒಂದು ಕಥೆ ನೀವೇ ಓದಿ ಎಂದು ಕುತೂಹಲ ಮೂಡಿಸಿದ್ದು ಸೂಪರ್

    ಪ್ರತಿಕ್ರಿಯೆ
  5. Ravi sanikop

    ನಾನು ಇನ್ನೂ ಈ ಕಥಾ ಸಂಕಲನವನ್ನು ಓದಿಲ್ಲ . ನಿಮ್ಮ ವಿಮರ್ಶೆ ಬಹಳ ಚನ್ನಾಗಿದೆ . ಧನ್ಯವಾದಗಳು
    ರವಿ ಸಾಣಿಕೊಪ್ಪ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: