ನಮ್ಮನೆಗೂ ಒಂದು ರೇಡಿಯೋ ಬಂತು..

ನೆನಪು 19

ಸಾಮಾನ್ಯವಾಗಿ ರೆಡಿಯೋ ವಾರ್ತೆ ಕೇಳುವುದು ಅಣ್ಣನ ಹವ್ಯಾಸಗಳಲ್ಲಿ ಒಂದು. ವಿಶೇಷ ಸಂದರ್ಭದಲ್ಲಿ ವಾರ್ತೆಯನ್ನು ಹಚ್ಚಿಕೊಳ್ಳುತ್ತಿದ್ದ. ವಾರ್ತೆ ಕೇಳುವಾಗಲೇ ಅಲ್ಲಿಯ ಕೆಲವು ಇಂಗ್ಲಿಷ್ ಶಬ್ದದ ಉಚ್ಛಾರಣೆಯ ವ್ಯತ್ಯಾಸದ ಕುರಿತು ವಿವರಿಸುತ್ತಿದ್ದ. ಅಂದರೆ ಆತನ ಕಿವಿ ಸುದ್ದಿಗೆ ಮಾತ್ರ ತೆರೆದು ಕೊಂಡಿರುತ್ತಿರಲಿಲ್ಲ. ಏಕ ಕಾಲದಲ್ಲಿ ಭಾಷಾಶಾಸ್ತ್ರ, ಧ್ವನಿ ಶಾಸ್ತ್ರದ ಕುರಿತೂ ಯೋಚಿಸುತ್ತಿತ್ತು.

ಬೆಳಿಗ್ಗೆ 7.05ರ ಪ್ರದೇಶ ಸಮಾಚಾರ, 7.35ರ ವಾರ್ತೆ, ಸಂಜೆ 6.55ರ ಪ್ರದೇಶ ಸಮಾಚಾರ ಮತ್ತು 7.35ರ ವಾರ್ತೆಯನ್ನು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. 8 ಗಂಟೆಗೆ ಬರುವ ಹಿಂದಿ ಮತ್ತು ಇಂಗ್ಲೀಷ್ ವಾರ್ತೆಯನ್ನು ಕೇಳುವಂತೆಯೂ ಕನ್ನಡ ವಾರ್ತೆ ಕೇಳಿದ ನಂತರ ಇಂಗ್ಲಿಷ್ ವಾರ್ತೆ ಕೇಳಿದರೆ ಇಂಗ್ಲಿಷ್ ಕಲಿಕೆ ಸುಲಭವಾಗುತ್ತದೆಂದೂ ಹೇಳುತ್ತಿದ್ದ. ರೇಡಿಯೋ ಒಂದು ಭಾಷೆಯ ಕಲಿಕೆಯ ಸಾಧನವೂ ಆದರೆ ಒಳ್ಳೆಯದು ಎನ್ನುವುದು ಆತನ ಅಂಬೋಣ. ಬಹುಶಃ ಪ್ರತಿ ಬುಧವಾರ ಮಂಗಳೂರು ಕೇಂದ್ರದಿಂದ ಬರುವ ಯಕ್ಷಗಾನವನ್ನು ಕೇಳುತ್ತಿದ್ದ. ಸ್ವಲ್ಪ ಹೊತ್ತು ಕೇಳಿದ ನಂತರ ಆತನಿಗೆ ಓದುವುದು ನೆನಪಾಗಿ, ಮರಿ ( ಆತ ನನಗೆ ಹಾಗೆ ಕರೆಯುವುದು) ನೀನು ಬೇಕಾದರೆ ಕೇಳು…..ಸುಮ್ಮನೆ ಸಮಯ ಹಾಳು ಎನ್ನುತ್ತಿದ್ದ.

ಹಾಗೆ ನೋಡಿದರೆ ನಮ್ಮ ಮನೆಯಲ್ಲಿ ಬೆಳಿಗ್ಗೆಯ ಹೊತ್ತು ಗಡಿಯಾರ ನೋಡಿ ಕೆಲಸ ಮಾಡುವ ಬದಲು ರೇಡಿಯೋದ ಕಾರ್ಯಕ್ರಮದ ಆಧಾರದಲ್ಲಿ ಏಳುವುದು, ತಿಂಡಿ, ಚಹಾ ಇತ್ಯಾದಿ ನಡೆಯುತ್ತಿತ್ತು. (ಮನೆಗೆ ರೆಡಿಯೋ ಬಂದ ಮೇಲೆ. ಅದಕ್ಕಿಂತ ಮೊದಲಲ್ಲ.) ಅಣ್ಣ ದಿನನಿತ್ಯ 6 ಗಂಟೆಗೆ ಏಳುವುದು. ಎಲ್ಲರೂ ಮಲಗಿದ ಮೇಲೆ ಲೈಟ್ ತೆಗೆದು ಹಲ್ಲು ಸೆಟ್ಟು ತೆಗೆದಿಡುತ್ತಿದ್ದ; ಮತ್ತು ಬೆಳಿಗ್ಗೆ ನಾವೆಲ್ಲ ಏಳುವುದರೊಳಗೆ ತಾನು ಎದ್ದು ಆ ಹಲ್ಲು ಸೆಟ್ಟನ್ನು ಸರಿಯಾಗಿ ತೊಳೆದು ಮತ್ತೆ ಹಾಕಿಕೊಂಡು ಕುಳಿತಿರುತ್ತಿದ್ದ. ನನಗಂತೂ ಹಲವು ವರ್ಷಗಳ ಕಾಲ ಇವನು ಹಲ್ಲು ಸೆಟ್ಟು ತೆಗೆದಿಡುತ್ತಿರುವ ಸಂಗತಿಯೇ ಗೊತ್ತಿರಲಿಲ್ಲ. ಅದರಲ್ಲೂ ಕೊನೆಯ ಒಂದು ವರ್ಷ ಹಾಸಿಗೆ ಹಿಡಿದಾಗಲೇ ಹಲ್ಲು ಸೆಟ್ಟಿಲ್ಲದ ಆತನ ಮುಖ ನೋಡಿದ್ದು.

ಮುಖ ತೊಳೆದು ಬಂದವನೇ ರೇಡಿಯೋ ಹಾಕಿಕೊಂಡೇ ಉಳಿದ ಕೆಲಸ. ಹಾಗಾಗಿ ಮಿಲೆಸುರ್ ಮೇರಾ ತ್ಹುಮಾರಾ…….. ವಂದೇ ಮಾತರಂ, “ಹುಟ್ಟಿ ಬಂದೆ ಯಲ್ಲಮ್ಮನಾಗಿ ನಿನ್ನ ಮದುವೆ ಮಾಡಿಕೊಟ್ಟಾರವ್ವ ಜಮsssದಗ್ನಿಗೇ” ಎನ್ನುವ ಚೌಡಿಕೆ ಪದ ಇತ್ಯಾದಿಗಳನ್ನು ಕೇಳಿದ್ದು ಈ ರೇಡಿಯೋದಲ್ಲಿಯೇ.

ವಾರ್ತೆ ಮುಗಿದು ಚಿತ್ರಗೀತೆ ಬರುವುದರೊಳಗೆ ರೆಡಿಯೋವನ್ನು ಆಫ್ ಮಾಡಿ ಆಗುತ್ತಿತ್ತು. “ಅಣ್ಣನಿಗೆ ಒಂದೈದು ನಿಮಿಷ ಚಿತ್ರಗೀತೆ ಇದ್ದರೇನು? ಯಾಕೆ ಅಷ್ಟು ಬೇಗ ನಂದಿಸುತ್ತಾನೆ” ಎಂದು ಮಾಧವಿಗೆ ಸಿಟ್ಟು. ಯಾಕೆಂದರೆ ಆಕೆ ಸಂಗೀತ ಪ್ರಿಯೆ. ಚಿತ್ರಗೀತೆಗಳನ್ನು ಕೇಳುವುದರಲ್ಲಿಯೂ, ಹಾಡುವುದರಲ್ಲಿಯೂ ಆಕೆಗೆ ವಿಶೇಷ ಆಸಕ್ತಿ. ಹಿಂದಿ ಹಾಡನ್ನು ಕೇಳುತ್ತಿದ್ದಳು. ಹಾಗಾಗಿ ವಾರ್ತೆಯ ನಂತರ ರೇಡಿಯೋದ್ದು ಊಟದ ಕೋಣೆಯ ಒಳಕ್ಕೆ ನಡಿದೆ. ಹಾಡಿನ ಶಬ್ದ ಸ್ವಲ್ಪ ದೊಡ್ಡವಾದರೂ ಸ್ವಲ್ಪ ಸಣ್ಣ ಮಾಡು ಎಂದು ಅಣ್ಣನ ಸಂದೇಶ.

ತೀರಾ ಮೊದಲೇನೂ ನಮ್ಮಲ್ಲಿ ರೇಡಿಯೋ ಇರಲಿಲ್ಲ. ಬಹುಶಃ ನಾವು ರೇಡಿಯೋವನ್ನು ತೀರಾ ಹತ್ತಿರದಿಂದ ನೋಡಿದ್ದು ನನ್ನ ಅಜ್ಜನ ಮನೆಯಲ್ಲಿ. ಒಮ್ಮೊಮ್ಮೆ ಅಣ್ಣ ಮತ್ತು ಆಯಿ ಇಬ್ಬರೂ ಮನೆಯಲ್ಲಿ ಇಲ್ಲದಿದ್ದಾಗ ಮಾವ (ಶ್ರೀಧರ ಭಂಡಾರಿ) ಮನೆ ಕಾಯಲು ರಾತ್ರಿ ಬರುತ್ತಿದ್ದ. ಆತನ ಜೊತೆ ರೇಡಿಯೋವೂ ಇರುತ್ತಿತ್ತು. ಮನೆಯಿಂದ ಹೊರಡುವಾಗಲೇ ಚಿತ್ರಗೀತೆಯನ್ನು ಹಚ್ಚಿಕೊಂಡೇ ಬರುತ್ತಿದ್ದ. ಆದರೆ ಒಮ್ಮೊಮ್ಮೆ ಮೋಡವಾದರೆ ಗೊರ್sss ಗುಡುವುದನ್ನು ಬಿಟ್ಟರೆ ಬೇರೆ ಶಬ್ದ ಬರುತ್ತಿರಲಿಲ್ಲ.

ಆಗ ಕನ್ನಡ ಬಿಟ್ಟು ಮರಾಠಿ, ಹಿಂದಿ ಅಥವಾ ಕೇವಲ ಹಾಡು ಹೇಳುವ ವಿವಿಧಭಾರತಿ ಕೇಂದ್ರಗಳನ್ನು ಕಷ್ಟಪಟ್ಟು ತಾಗಿಸುತ್ತಿದ್ದ. ರೆಡಿಯೋದ  ನಾಬ್ ತಿರುಗಿಸಿ ವಿವಿಧ ಸ್ಟೇಶನ್ ತಾಗಿಸುವುದೇ ಒಂದು ಮಹಾವಿದ್ಯೆಯೆಂದೂ ತಿಳಿದ ಕಾಲ ಅದು. ಹಾಗಾಗಿ ನಾವು ಸಣ್ಣವರಿರುವಾಗ ಮಾವನನ್ನು ಮಹಾಮೇಧಾವಿಯಾಗೇ ನೋಡುತ್ತಿದ್ದೆವು. ನಾವು ಅದೇ ವಾರ ಹೊನ್ನಾವರದ ಜ್ಯೋತಿ ಟಾಕೀಸಿನಲ್ಲಿ ನೋಡಿದ ರಾಜಕುಮಾರ, ವಿಷ್ಣುವರ್ಧನರ ಸಿನೆಮಾ ಹಾಡು ರೆಡಿಯೋದಲ್ಲಿ ಮತ್ತೊಮ್ಮೆ ಬರುವ ಸೋಜಿಗಕ್ಕೆ ಮನಸೋತು ಅಣ್ಣ ಈ ರಾತ್ರಿ ಮನೆಗೆ ಬರದಿರುವ ಊರಿಗೆ ತಿರುಗಾಟಕ್ಕೆ ಹೋಗುವುದನ್ನು ಕಾಯುತ್ತಿದ್ದೆ. ಮತ್ತು ಮನೆ ಕಾಯಲು ಮಾವನನ್ನೇ ಕರೆಯಬೇಕೆಂದು ಅಕ್ಕನಿಗೆ ಒತ್ತಾಯಿಸಿದ್ದಿದೆ.

ಅಂತೂ ಕೆಲವು ವರ್ಷದ ನಂತರ ನಮ್ಮ ಮನೆಯಲ್ಲೂ ಒಂದು ರೇಡಿಯೋ ಖರೀದಿಸುವ ನಿರ್ಣಯ ಆಯ್ತು. ನನ್ನ ನೆನಪು ಸರಿ ಇದ್ದರೆ ನಮ್ಮ ಮನೆಯ ಮೊದಲ ರೇಡಿಯೋ ‘ಪಿಲಿಪ್ಸ್ ಕಮಾಂಡರ್.’

ಅದನ್ನು ಕೊಂಡಿದ್ದರ ಹಿಂದೆ ಒಂದು ಸಣ್ಣ ಕತೆಯಿದೆ. ಕತೆ ಸಣ್ಣದೆ. ಆದರೆ ಪೀಠಿಕೆ ಸ್ವಲ್ಪ ಜಾಸ್ತಿ ಆಗಬಹುದು. ಕ್ಷಮಿಸಿ….
ಹನುಮಂತನೆಂದರೆ ರಾಮಾಯಣದ ಹನುಮಂತನಲ್ಲ…….

ನಮ್ಮೂರಲ್ಲಿ ಹನುಮಂತ ನಾಯ್ಕ ಅಂತ ಒಬ್ಬನಿದ್ದ. ಅರೇಅಂಗಡಿಯಲ್ಲಿ ಗಜಾನನ ಭಟ್ಟರ ಸಂತೆಗೆ ಕೆಲಸಕ್ಕೆ ಹೋಗ್ತಿದ್ದ. ಎಲೆ ಚೂಳಿ ಮತ್ತು ತೆಂಗಿನಕಾಯಿ ಚೀಲವನ್ನು ಕಟ್ಟಿ ಬೆಳಿಗ್ಗೆ 6ಕ್ಕೆ ನಮ್ಮೂರ ಹಾಲ್ಟಿಂಗ್ ಬಸ್ಸಿಗೆ ಹಾಕೋದು. ಸಂಜೆ ಹೊನ್ನಾವರ ಬಸ್ಸಿಗೆ ಹಾಕಿ ರಾಣಿಬೆನ್ನೂರಿಗೆ ಕಳಿಸುವುದು ಅವನ ಕೆಲಸ. ಹಗಲಿನಲ್ಲಿ ಬೇರೆ ಮನೆಗೆ ಅಡಿಕೆ ಕೊಯ್ಯಲು, ಕೊಳೆಮದ್ದು ಹೊಡೆಯಲು ಹೋಗುತ್ತಿದ್ದ. ಆತನಿಗೆ ಇದ್ದ ಸಣ್ಣ ಭೂಮಿಯನ್ನೂ ಕಬಳಿಸಿದ ಒಡೆಯರು ಆತನಿಗೆ ಮೋಸಮಾಡಿ ಅವನನ್ನು ನಿರ್ಗತಿಕರನ್ನಾಗಿಸಿದ್ದರು.

ಈ ಹನುಮಂತ ಖಾಯಂ ಆಗಿ ನಮ್ಮ ಮನೆಗೆ ಬರುತ್ತಿದ್ದ. ಅಣ್ಣನೊಂದಿಗೆ ಆತನದು ಜೋರು ಸುದ್ದಿ. ರಾಜಕೀಯದಿಂದ ಹಿಡಿದು ಊರಿನ ಸಣ್ಣ ಪುಟ್ಟ ಸಂಗತಿಯ ಬಗ್ಗೆ ಕೂಡ ಹರಟುತ್ತಿದ್ದ. ಬೇರೆಬೇರೆ ಮನೆಯಿಂದ ಕಡ ತಂದು ಅದಕ್ಕೆ ತಾನೂ ಒಂದಿಷ್ಟು ಕೈಯಿಂದ ಸೇರಿಸಿ ಹೇಳುತ್ತಿದ್ದ. ಇಲ್ಲಿ ಅಣ್ಣ ಹೇಳಿದ್ದನ್ನು ಸರಿಯಾಗಿ ಕೇಳಿಸಿಕೊಂಡು ಅಲ್ಲಿ ಹೋಗಿ ಯಥಾವತ್ತು ಹೇಳುತ್ತಿದ್ದ. ಅಲ್ಲಿದ್ದವರಿಗೆ ಇದು ಭಂಡಾರಿ ಮಾಸ್ತರು ಹೇಳಿದ್ದು ಎಂದು ಗೊತ್ತಾಗದೇ ಇವನೇ ಹೇಳಿದ್ದೆಂದು ತಿಳಿದು ಹಲವರು ಈತ ಬುದ್ದಿವಂತ ಅಂದುಕೊಂಡಿದ್ದರು.

ಹನುಮಂತನ ಭೂಮಿಯನ್ನು ಒಳಗೆ ಹಾಕಲು ಪ್ರಯತ್ನಿಸುತ್ತಿರುವ ಒಡೆಯನ ಕಾರ್ಯತಂತ್ರದ ವಿರುದ್ಧ ಆತನಿಗೆ ಅಣ್ಣನೇ ಅರ್ಜಿ ಬರೆದು ಕೊಟ್ಟು, ಈತ ಕೋರ್ಟಿನಲ್ಲಿ ವಾದಿಸಬೇಕಾದ ಅಂಶಗಳನ್ನೂ ಹೇಳಿಕೊಟ್ಟಿದ್ದ. ಈತ ಎಂಥಾ ಆಸಾಮಿ ಎಂದರೆ ಅದನ್ನೂ ಹೋಗಿ ಒಡೆಯರಿಗೆ ಹೇಳಿದ್ದು ಮಾತ್ರವಲ್ಲ ಅರ್ಜಿ ಬರೆದು ಕೊಟ್ಟಿದ್ದು ಭಂಡಾರಿ ಮಾಸ್ತರರೇ ಎಂದು ಹೇಳಿ ಅವರೊಂದಿಗಿನ ಮನಸ್ತಾಪಕ್ಕೆ ಕಾರಣವಾಗಿದ್ದ. ಆದರೆ ಆತ ಒಡೆಯನೊಂದಿಗೆ ತಾತ್ಕಾಲಿಕವಾಗಿ ಒಳ್ಳೆಯವನಾಗಲು ಹೋಗಿ ಇದ್ದ ಜಮೀನನ್ನೂ ಕಳೆದುಕೊಂಡಿದ್ದ.

ಸಾಮಾನ್ಯವಾಗಿ ಹಣದ ಕೈಗಡ ಬೇಕಾದರೆ ಆತ ಅಣ್ಣನಿಂದಲೇ ಪಡೆಯುತ್ತಿದ್ದ. ಆತ ಹಣ ಪಡೆದದ್ದನ್ನು ಹಲವು ಬಾರಿ ನೋಡಿದ್ದೇನೆ. ಆದರೆ ತಿರುಗಿ ಕೊಟ್ಟದ್ದನ್ನು ನನಗೆ ನೋಡುವ ಭಾಗ್ಯ ಸಿಗಲಿಲ್ಲ.
ನಮ್ಮ ಮನೆಯಿಂದ ಒಂದಷ್ಟು  ದೂರದಲ್ಲಿ ಎರಡು ಎಕರೆಯಷ್ಟು ಗೇರು ಪ್ಲಾಂಟೇಶನ್ (ಗೋಡಂಬಿ ಮರ) ನಮ್ಮದಿದೆ. ಗಿಡ ಗಂಟಿ, ಮುಳ್ಳು ಗಿಡ, ಕಾಂಗ್ರೆಸ್ ಗಿಡ. ಕಾಡುಗಿಡ ಇಲ್ಲದ ಒಂದಿಷ್ಟು ಜಾಗದಲ್ಲಿ ಗೋಡಂಬಿ ಗಿಡಗಳಿದ್ದವು. ವರ್ಷಕ್ಕೆ 2-3 ಕ್ವಿಂಟಲ್ ಗೇರು ಬೀಜ ಆಗುತ್ತಿತ್ತು. ಮೊದಲೆಲ್ಲಾ ನನ್ನ ಆಯಿ, ಅಕ್ಕ ಹೋಗಿ ಗೇರು ಬೀಜ ಕೊಯ್ದು ಬರುತ್ತಿದ್ದರು. ಆದರೆ ಇವರು ಕೊಕ್ಕೆ ಮತ್ತು ಚೀಲ ಹಿಡಿದು ಹೋಗುವುದರೊಳಗೆ ಆಚೀಚೆಯವರು ಬಂದು ಕದ್ದುಕೊಂಡು ಹೋಗುತ್ತಿದ್ದರು. ಕೊನೆಗೂ ವರ್ಷದ ಕೊನೆಗೆ ಲೆಕ್ಕ ಹಾಕಿದರೆ ಸಿಗೋದು 40-50 ಕೆ.ಜಿ. ಮಾತ್ರ. ಮಾರಾಟ ಮಾಡಿದರೆ ಕನಿಷ್ಟ ಕೂಲಿಯೂ ಸಿಗುತ್ತಿರಲಿಲ್ಲ.

ಇಂತಹ ಹೊತ್ತಿನಲ್ಲಿ ಮನೆಗೆ ಬಂದ ಹನುಮಂತ ನಿಮ್ಮ ಗೇರ್ ಪ್ಲಾಂಟೇಶನನ್ನು ನನಗೆ ಗುತ್ತಿಗೆ ಕೊಡಿ. 1500 ನೀಡುತ್ತೇನೆ ಎಂದ. ಮುಂದುವರಿದು “ಆಚೀಚೆ ಮನೆಯವರು ಬೀಜವನ್ನು ಕೀಳುತ್ತಾರೆ. ದಿನನಿತ್ಯ ಕಾಯಬೇಕು. ಹಾಗಿದ್ದರೆ ನಾಲ್ಕಾರು ಬೀಜ ಸಿಗಬಹುದು. ಅಮ್ಮನಿಗೂ ವಯಸ್ಸಾಗಿದೆ. ನಿಮಗೆ ಬರೆಯೋದು-ಓದೋದು ಬಿಟ್ಟರೆ ಬೇರೆ ಏನೂ ಬರೋದಿಲ್ಲ. ವಿಠ್ಠಲ ಶಾಲೆಗೆ ಹೋಗುವವ. ಹಾಗಾಗಿ ನಾನು ಇಷ್ಟು ದಿನ ನಿಮ್ಮನೆ ಚಾ ಕುಡಿದಿದ್ದಕ್ಕೆ ಅಷ್ಟಾದರೂ ಸಹಾಯ ಮಾಡ್ತೇನೆ.” ಎಂದು ನಮಗೆ ಸಹಾಯ ಮಾಡುವ ಇನ್ನೊಂದು ಪೀಠಿಕೆ ಹಾಕಿದ. “ನನಗೇನೂ ಅದರಲ್ಲಿ ಹತ್ತು ಪೈಸೆ ಲಾಭ ಸಿಗುವುದಿಲ್ಲ. ನನ್ನ ಮನೆ ಪಕ್ಕದಲ್ಲೇ ನಿಮ್ಮ ಬೇಣ ಇರೋದರಿಂದ ಬೆಳಗ್ಗೆ ಎದ್ದ ಕೂಡ್ಲೇ ಹೋಗಿ ಕೊಯ್ಕೊಂಡು ಬರಬಹುದು. ಅಷ್ಟೆ” ಎಂದು ಇನ್ನೊಂದು ದಾಳ ಎಸೆದ.

ಆಯಿ, ಅಕ್ಕ ದಿನವೂ ಆ ಬಿಸಿಲಿನಲ್ಲಿ ಗೇರು ಬೀಜ ಕೊಯ್ಯಲು ಹೋಗೋದು ಅಣ್ಣನಿಗೆ ಇಷ್ಟ ಇರಲಿಲ್ಲ. ತನ್ನಿಂದ ಆಗದ ದೈಹಿಕ ಶ್ರಮದ ಕೆಲಸವನ್ನು ಯಾರು ಮಾಡಿದರೂ ಆತನಿಗೆ ಕಿರಿ ಕಿರಿ ಆಗುತ್ತಿದ್ದ. ಮನೆಯ ಕೆಲಸಕ್ಕೆ ಬಂದ ಕೆಲಸಗಾರರೂ ಉರಿ ಬಿಸಿಲಲ್ಲಿ ಕೆಲಸ ಮಾಡುವುದನ್ನು ಆತ ವಿರೋಧಿಸುತ್ತಿದ್ದ. ಹಾಗಾಗಿ ಗೇರು ಬೀಜದ ಗುತ್ತಿಗೆ ಸುಲಭವಾಗಿಯೇ ಹನುಮಂತನ ಪಾಲಾಯ್ತು.

“ಮಾಸ್ತರರೇ, ಒಂದು ವೇಳೆ ಹೆಚ್ಚು ಬೀಜವಾದರೆ ಹೆಚ್ಚು ಹಣ ಕೊಡುತ್ತೇನೆ. ನನಗೆ ರಾಶಿ ಲಾಭ ಬೇಡ. ನಿಮ್ಮ ಕೈಯಿಂದ ಲಾಭಪಡೆದರೆ ದೇವರು ಮೆಚ್ಚ. ಒಂದು ವೇಳೆ ಕಡಿಮೆ ಬೀಜ ಆದರೆ, ರೇಟು ಬಿದ್ದು ಹೋದರೆ ನೀವೂ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳದೇ ಇರುವ ಸ್ವಭಾವದವರಲ್ಲ.” ಎಂದು ಗೇರು ಬೇಣ ತನಗೇ ಕೊಡುವುದು ಗ್ಯಾರಂಟಿ ಆದಾಗ ಒಂದು ಎಕ್ಟ್ರಾ ಮಾತನ್ನು ಇಟ್ಟೇ ಹೋದ. ಒಂದು ರೀತಿಯಲ್ಲಿ ಎಂಟಿಸಿಪೇಟರಿ ಬೇಲ್ ಇದ್ದ ಹಾಗೆ.

ಹಣ ಸರಿಯಾಗಿ ಕೊಡದಿದ್ದರೂ ವರ್ಷಕ್ಕೊಂದು ಬಾಟಲಿ ಗೇರುಹಣ್ಣಿನ ಭಟ್ಟಿ (ಪೆನ್ನಿ) ತಂದು ಕೊಡುತ್ತಿದ್ದ. ಮುಚ್ಚಳ ತೆಗೆದು ಅದರಲ್ಲಿ ತನ್ನ ಬೆರಳಿಟ್ಟು, ಭಟ್ಟಿ ಸರಾಯಿ ಮೆತ್ತಿದ ಕೈ ಬೆರಳನ್ನು ಬೆಂಕಿಗೆ ಹಿಡಿದು, ಅದು ಬಗ್ ಅಂತ ಬೆಂಕಿ ಹಿಡಿಯುವ ಪರಿಯನ್ನು ಒಂದು ಮ್ಯಾಜಿಕ್‍ನಂತೆ ನಮ್ಮೆದುರು ತೋರಿಸಿ ಅಣ್ಣನಿಂದ ಮೆಚ್ಚುಗೆ ಪಡೆಯಲು ಪ್ರಯತ್ನಿಸುತ್ತಿದ್ದ. ಅದರ ರುಚಿ ಗೊತ್ತಿಲ್ಲದಿದ್ದರೂ ಪುಕ್ಕಟೆ ಒಂದು ಮ್ಯಾಜಿಕ್ ನೋಡುವ ಸೌಭಾಗ್ಯ ನಮ್ಮದಾಗಿತ್ತು.

ಈ ಒಂದು ಬಾಟಲಿ ಸರಾಯಿಯೊಂದಿಗೆ ಅವನ ಕಷ್ಟದ ಪರಂಪರೆಯನ್ನು ಹೇಳಲು ತೊಡಗುತ್ತಿದ್ದ. ಮನೆಯಲ್ಲಿಯ ರೋಗ ರುಜಿನ, ಮಕ್ಕಳ ಖಾಯಿಲೆ-ಕಸಾಲೆ, ಮಳೆ ಮೊದಲೇ ಬಂದು ಕೊಳೆ ಮದ್ದು ಹೊಡೆಯಲು ಆಗದ ಸಮಸ್ಯೆ; ಕಷ್ಟದ ದಿನದ ಪರಿಹಾರಕ್ಕೆ ಚಿನ್ನವನ್ನೇ ಬ್ಯಾಂಕಿನಲ್ಲಿ ಇಟ್ಟಿದ್ದು….. ಹೀಗೆ ಹೇಳಿ ಈ ಬಾರಿ ಅಂದುಕೊಂಡಷ್ಟು ಗೇರು ಬೆಳೆ ಬರದಿರುವುದು…. ಬೀಜ ನೆನೆದು ಹೋಗಿದ್ದು ಇತ್ಯಾದಿಗಳನ್ನು ತೇಜಸ್ವಿಯವರ ‘ಗೊಲ್ಲರ ಎಂಕ್ಟ’ನು ಹೇಳುವ ಕತೆಗಿಂತ ಇನ್ನಷ್ಟು ಸುಂದರವಾಗಿ ಹೇಳುತ್ತಿದ್ದ.

ಅಂತೂ ಕೊನೆಗೆ “ನೀವೇ ಆಗಿರುವುದರಿಂದ ನಾನು ಬಚಾವಾದೆ. ಮಾತಾಡಿದ್ದಕ್ಕಿಂತ ಕಡಿಮೆ ಹಣ ಕೊಟ್ಟರೂ ನೀವು ಏನೂ ಹೇಳುವುದಿಲ್ಲವೆಂದು ನನಗೆ ಗೊತ್ತು. ಬೇರೆಯವರಾಗಿದ್ದರೆ ನಾನು ಮಳೆಗಾಲದಲ್ಲಿ ಉಪವಾಸ ಬೀಳುವುದೇ ಆಗಿತ್ತು. ನನ್ನ ಹೆಂಡತಿಯೂ ಹಾಗೆ ಹೇಳಿದಳು “ಮಾಸ್ತರರೂ ಮತ್ತು ಸುಬ್ಬಕ್ಕ ಎಷ್ಟು ಒಳ್ಳೆಯವರು ಎಂದರೆ ನಮ್ಮ ಕಷ್ಟ ಹೇಳಿ ಕೊಂಡ್ರೆ ದುಡ್ಡು ಕೊಡದಿದ್ರೂ ಏನೂ ಹೇಳೋರಲ್ಲ” ಅಂದ್ಲು, “ಆದ್ರೆ ನೀವೇ ಹೇಳಿ ಮಾಸ್ತರರೆ ಏನೂ ಕೊಡದೇ ಇರೋದು ಸರಿ ಅಲ್ಲ ಅನ್ನ ಉಂಬ ಬದಲು ಗಂಜಿ ಉಂಬ ಎಂದು ನಾನು ಹೇಳಿದೆ” ಅಂತ ಅಣ್ಣನ ಸುತ್ತ ಒಂದು ನೈತಿಕತೆಯ ಬೇಲಿ ಹಾಕಿ 500-600 ರೂ. ಹಣಕೊಟ್ಟು, ಮುಂದಿನ ಬಾರಿ ಈ ವರ್ಷದ್ದೂ ಸೇರಿಸಿ ಕೊಡ್ತೆ ಅಂತ ಸಿಂಗಲ್ ಚಾ ಕುಡಿದು, ನಮ್ಮನೆಯದೇ ಸೂಡಿ ಹಚ್ಚಿಕೊಂಡು ಅಂಗಳ ಇಳಿದು ಪರಾರಿ.

ಮುಂದಿನ ವರ್ಷಕ್ಕೂ ನನಗೇ ಕೊಡಬೇಕೆಂದು ಒಂದು ಸಣ್ಣ ಅವಕಾಶ ಕಲ್ಪಿಸಿಕೊಂಡೇ ಹೋದ ಹನುಮಂತನ ಕತೆ ಒಂದೇ ವರ್ಷದ ಕತೆಯಲ್ಲ. ಹನುಮಂತನ ಬಾಲದಂತೆ ಅದು ಹಲವು ವರ್ಷ ಬೆಳೆದಿತ್ತು. ತಾನು ಮೋಸ ಹೋಗುತ್ತಿರುವುದು ಅಣ್ಣನಿಗೆ ಗೊತ್ತಿದ್ದೂ ಹನುಮಂತನ ಮಾತಿನ ಮೋಡಿಗೆ, ಕಥನ ಶಕ್ತಿಗೆ, ಸುಳ್ಳಿನ ಕಲಾತ್ಮಕತೆಗೆ ತಾನು ಕೊಡಬಹುದಾದ ಕಾಣಿಕೆ ಇದೆಂದು ಬಿಟ್ಟು ಬಿಡುತ್ತಿದ್ದನೇನೋ. “ಇವರಿಗೂ ಶಿಕ್ಷಣ ಸಿಕ್ಕಿದ್ದರೆ ಎಂಥೆಂತಾ ಲೇಖಕರಾಗುತ್ತಿದ್ದರು” ಎನ್ನುತ್ತಿದ್ದ.

ಈತ ಕಡಿಮೆ ಹಣ ಕೊಟ್ಟಾಗಲೆಲ್ಲಾ ಆಯಿ ಮತ್ತು ಅಕ್ಕ ಅಣ್ಣನಿಗೆ “ಹೇಳಿದ್ದೆ ನಿಮ್ಗೆ, ಅವನಿಗೆ ಕೊಡಬೇಡ. ಆತ ಸರಿ ಇಲ್ಲ ಅಂದ್ರೆ ಕೇಳಲಿಲ್ಲ. ಹಣ ಕೊಡುವಾಗ ನಾವಿಲ್ಲದಿದ್ದಾಗೇ ಬರ್ತಾ ನಾವು ಬಯ್ತೇವೆ ಅಂತ. ಮುಂದಿನ ಸಾರಿ ಹಣ ಕೊಡುವ ದಿನ ಬರಲಿ. ಪೂರ್ತಿ ವಸೂಲಿ ಮಾಡ್ತೆ” ಎಂದು ಸಂಕಲ್ಪ ಮಾಡುತ್ತಿದ್ದರು. ಆದರೆ ಎಂದೂ ಆತ ಇವರಿಬ್ಬರಿರುವಾಗ ಬರಲೇ ಇಲ್ಲ. ಉಳಿದ ದಿನ ಕೇಳಿದರೆ ಈ ಬಾರಿ ಪೂರ್ಣ ಹಣ ಕೊಡುವುದಾಗಿ ಭರವಸೆ ನೀಡುತ್ತಿದ್ದ.

ಪ್ರತಿ ವರ್ಷ ಇದೇ ಕತೆ ಹೇಳುವುದು ಸರಿಯಲ್ಲ ಎಂದು ಆತನಿಗೆ ಅನ್ನಿಸಿರಬೇಕು. ಒಂದು ದಿನ ತನ್ನಲ್ಲಿರುವ ‘ಫಿಲಿಪ್ಸ್ ಕಮಾಂಡರ್’ ಎನ್ನುವ ರೇಡಿಯೋ ತೆಗೆದುಕೊಂಡು ಬಂದ. ಆತ ತೆಗೆದುಕೊಂಡಿದ್ದೂ ಸೆಕೆಂಡ್ ಹ್ಯಾಂಡ್ ಸೆಟ್ಟು. ಒಂದು ವರ್ಷದ ಗೇರು ಬೀಜದ ಲೆಕ್ಕಕ್ಕೆ ಈ ರೇಡಿಯೋ ಕೊಟ್ಟು ವಜಾ ಮಾಡಿದ. ಬೇಡ ಎಂದರೆ ಇದರ ದುಡ್ಡೂ ಹೋಯಿತು. ಹೇಗೂ ಮನೆಯಲ್ಲಿ ಒಂದು ರೇಡಿಯೋದ ಆಸೆ ಹುಟ್ಟಿತ್ತು. ಅಕ್ಕ ಮಾಧವಿಗೆ ಹಾಡು ಇಷ್ಟವಾಗಿರುವುದರಿಂದ ಆಕೆ ಯಾರದೋ ಮನೆಯ ಪಕ್ಕ ನಿಂತು ರೇಡಿಯೋದಲ್ಲಿ ಪ್ರಸಾರ ಆಗುವ ಹಾಡು ಕೇಳಿ, ಕಲಿತು, ಶಾಲೆ ಕಾಲೇಜಿನಲ್ಲಿ ಹಾಡಿ ಬಹುಮಾನ ಗಳಿಸುತ್ತಿದ್ದಳು. ರೇಡಿಯೋದ ಹಾಡಿಗೆ ಡ್ಯಾನ್ಸ್ ಮಾಡಿ ಸೈ ಅನಿಸಿಕೊಂಡಿದ್ದಳು. ಅಣ್ಣನಿಗೆ ವಾರ್ತೆ ಕೇಳುವ ಹಂಬಲ. ನನಗೆ ಕ್ರಿಕೆಟ್ ಕಾಮೆಂಟರಿ ಕೇಳುವ ಉತ್ಸಾಹ, ಹೀಗೆ ಥರ್ಡ್ ಹ್ಯಾಂಡ್ ಸೆಟ್ಟೊ, ಫೋರ್ಥ್ ಹ್ಯಾಂಡ್ ಸೆಟ್ಟೊ ಮನೆಗೊಂದು ರೇಡಿಯೋ ಬಂತು.

ತುಂಬಾ ವರ್ಷ ಅದು ಚೆನ್ನಾಗಿಯೇ ಹಾಡುತ್ತಿತ್ತು. ಜ್ಯೋತ್ಸ್ನಾ ಕಾಮತರ ಪ್ರಬಂಧದಲ್ಲಿ ಬರೋ ರೆಡಿಯೋದಂತೆನೂ ಇರಲಿಲ್ಲ. ಚೆನ್ನಾಗೇ ಇತ್ತು. ಒಮ್ಮೆ ಕ್ರಿಕೆಟ್ ಕಾಮೆಂಟರಿ ಹಚ್ಕೊಂಡು ರೆಡಿಯೋವನ್ನು ಬಾವಿಯ ದಂಡೆಯ ಮೇಲಿಟ್ಟು ನೀರೆತ್ತುತ್ತಿದ್ದೆ. ಆಯ ತಪ್ಪಿ ಅದು ಬಾವಿಗೆ ಬಿದ್ದು ಬಿಟ್ಟಿತ್ತು. ಸದ್ಯ ಬೇಸಿಗೆ ಆಗಿರುವುದರಿಂದ ನೀರು ಬಾವಿಯಲ್ಲಿ ಕಡಿಮೆ ಇತ್ತು. ಎರಡು ದಿನ ಬಿಟ್ಟು ಅಮಾಸೆ ಗೌಡನ ಕರೆ ತಂದು ಹೆಕ್ಕಿ ತೆಗೆದೆವು. ‘ರಾತ್ರಿ ಎದ್ದು ಬಂದಾಗ ಬಾವಿಯಿಂದ ಕ್ರಿಕೆಟ್ ಕಾಮೆಂಟರಿ ಬರುತ್ತಿತ್ತು’ ಎಂದು ಅಣ್ಣ ತಮಾಷೆ ಮಾಡುತ್ತಿದ್ದ.

ರೇಡಿಯೋ ನೀರಿನಿಂದ ತೆಗೆದು ಬಿಸಿಲಿಗೆ ಎರಡು ದಿನ ಒಣಗಿಸಿ ತೆಗೆದ ಮೇಲೂ ಯಾವ ರಿಪೇರಿ ಇಲ್ಲದೆ ವಾರ್ತೆ, ಹಾಡು ಬರುತ್ತಿತ್ತು. ಬಾವಿಗೆ ಬಿದ್ದು ಕೆಲವು ಭಾಗ ಒಡೆದದ್ದರಿಂದ, ಅದರ ಬಿಡಿ ಸಾಮಾನು ಎಲ್ಲಾ ಹಾಕಿದರು. ತಿಂಗಳಲ್ಲಿ ಅದನ್ನು ಕೊಟ್ಟು ಬೇರೆ ರೇಡಿಯೋ ತರಲಾಯಿತು. ಬಹುಶಃ ನಾನು ಡಿಗ್ರಿ ಓದುವಾಗ ನ್ಯಾಶನಲ್ ಪೆನಾಸಾನಿಕ್ ಕಂಪನಿಯ ರೇಡಿಯೋ ವಿತ್ ಟೇಪ್ ರೆಕಾರ್ಡ್ ತಂದೆವು. ಆಗ 2 ಇನ್ 1 ಬಾರಿ ಪ್ರಚಾರದಲ್ಲಿತ್ತು. ಇದಕ್ಕೆ ಅಣ್ಣ ಅರ್ಧ ಹಣ ಮತ್ತು ಮಾಧವಿ ಅರ್ಧ ಹಣ ಕೊಟ್ಟಿದ್ದರು.

ಭಟ್ಕಳದ ಚೋರ್ ಬಜಾರ್ ಎನ್ನುವುದು ಆ ಕಾಲದ ವಿದೇಶಿ ವಸ್ತುಗಳ ಸಂಗ್ರಹಾಲಯವಾಗಿತ್ತು. 10-12 ಅಡಿ ಒಳಹೊಕ್ಕರೆ ಹೊಸದೊಂದು ಲೋಕವನ್ನೆ ತೆರೆದು ಇಡುವ ಈ ಚೋರ್ ಬಜಾರ್ ಬಹುತೇಕ ದುಬೈ ಮೂಲಕ ಬರುವ ವಿದೇಶಿ ವಸ್ತುಗಳ ತಾಣ. ಅಲ್ಲಿಂದಲೇ ಅದನ್ನು ತಂದಿದ್ದು. ಈಗಲೂ ಅದು ಹಾಗೇ ಇದೆ.

ಹೇಳಿದ್ದನ್ನು ಮತ್ತೆ ನಮಗೆ ಹೇಳುವ ಟೇಪ್ ರೆಕಾರ್ಡ ಕೂಡ ನಮಗೆಲ್ಲಾ ಹೊಸ ಅನುಭವವೇ ಆಗಿತ್ತು. ಮನೆಗೆ ಬಂದವರ ಮಾತುಗಳನ್ನು ಅವರಿಗೆ ಗೊತ್ತಿಲ್ಲದಂತೆ ರೆಕಾರ್ಡ್ ಮಾಡಿ, ಅವರಿಗೆ ಹಚ್ಚಿ ತೋರಿಸಿ ಅವರನ್ನು ದಿಗ್ಭ್ರಾಂತರನ್ನಾಗಿ ಮಾಡುವ ಮಜಾಕ್ಕಿಂತ ಅವರಿಂದ ಬೈಸಿಕೊಳ್ಳುವ ಥ್ರಿಲ್ ಇನ್ನೂ ಮಜವಾದದ್ದು.

ಮಾಧವಿಯ ಮನೆಯಲ್ಲಿ ಈಗಲೂ ಫಿಲಿಪ್ಸ್ ರೇಡಿಯೋ ಇದೆ. ನಮ್ಮ ಮನೆಯಲ್ಲಿ ಕೂಡ ಸಣ್ಣ ರೇಡಿಯೋ ಇದೆ. ಯಮುನಾ ಜಪಾನಿನಿಂದ ತಂದಿದ್ದು, ಟಿ.ವಿ. ತೆಗೆಸಿ ಹಾಕಿದ್ದೇನೆ.

ಬೆಳಗ್ಗೆದ್ದು ರೆಡಿಯೋದ ಚಿಂತನ….
ಪ್ರದೇಶ ಸಮಾಚಾರ
ವಾರ್ತೆ…ಕಥಾ ಕಣಜ…ಕೇಳುತ್ತಾ ಕೇಳುತ್ತಾ
ಅದು ಮತ್ತೆಮತ್ತೆ ಬಾಲ್ಯವನ್ನು ನೆನಪಿಸಿಕೊಡುತ್ತಿದೆ.

‍ಲೇಖಕರು avadhi

July 28, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಶ್ರೀರಂಗ ಯಲಹಂಕ

    ನಾನು ಟಿ.ವಿ.ನೋಡುವುದಿಲ್ಲ ಎಂದು ನನ್ನ ಕೆಲವು ಜನ ಸ್ನೇಹಿತರು ಮತ್ತು ಕಥೆ, ಪ್ರಬಂಧಗಳ ಮೂಲಕ ಪರಿಚಿತರಾದ ಕನ್ನಡದ ಒಬ್ಬ ಹೆಸರಾಂತ ಲೇಖಕರು ಬರೆದುಕೊಂಡಿರುವುದನ್ನು ನಾನು ಓದಿರುವೆ. ವಿಠ್ಠಲ ಭಂಡಾರಿಯವರು ಸಹ ‘ತಾವು ಟಿ.ವಿ.ತೆಗೆಸಿಹಾಕಿದ್ದೇನೆ’ ಎಂದು ಹೇಳಿದ್ದಾರೆ. ಸರಿಯೆ. ನಮ್ಮ ಮನೆಯಲ್ಲಿ ಟಿ.ವಿ. ಇದೆ. ನಾನು ಸರ್ಕಾರಿ ಕೆಲಸದಿಂದ ನಿವೃತ್ತನಾಗಿರುವೆ. ದಿನವೆಲ್ಲಾ ಬಿಡುವೆ!. ಹಾಗೆಂದು ಟಿ.ವಿ.ಮುಂದೆಯೇ ಯಾವಾಗಲೂ ಕುಳಿತಿರುವುದಿಲ್ಲ. ನಾವು ಕನ್ನಡ, ಇಂಗ್ಲಿಷ್. ಹಿಂದಿ ನ್ಯೂಸ್ ಚಾನೆಲ್ ಗಳ ಬಗ್ಗೆ ಸಾಕಷ್ಟು ಟೀಕೆ ಮಾಡಬಹುದು. ಆದರೆ ರಾಜ್ಯದ, ದೇಶದ ಸುದ್ದಿಯನ್ನು ತಿಳಿಯಲು ಸರ್ಕಾರಿ ಒಡೆತನದ ರೇಡಿಯೋಗಿಂತ ಟಿ.ವಿ. ಉತ್ತಮ ಎಂದು ನನ್ನ ಅನಿಸಿಕೆ.ಟಿ.ವಿ.ಯಲ್ಲಿ ನಿನ್ನೆ ಇಡೀ ದಿನ, ರಾತ್ರಿ
    ಪ್ರಸಾರವಾದ ಜ್ಯೋತಿಷಿಗಳ ‘ ರಕ್ತ ಚಂದಿರ ಗ್ರಹಣ’ದಂತಹ ಕೆಲಸಕ್ಕೆ ಬಾರದ ಕಾರ್ಯಕ್ರಮ ನೋಡುವುದು ಸಮಾಜದ ಸ್ವಾಸ್ಥ್ಯಕ್ಕೆ ಅನಾರೋಗ್ಯ ಎಂಬುದು ನನ್ನ ಅಭಿಪ್ರಾಯ. ಹಾಗೆಂದು ಟಿ.ವಿ.ಯೇ ಬೇಡವೆನ್ನುವುದು ಸರಿಯಲ್ಲ.’ನಾನು ಟಿ.ವಿ.ನೋಡುವುದಿಲ್ಲ ‘ಎನ್ನುವುದು ಈಗಿನ ಕಾಲದಲ್ಲಿ ಒಂದು fashion, ಹೆಮ್ಮೆಯ ವಿಷಯವಾಗುತ್ತಿದೆಯೆ?.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: