ದೀಪಾ ಹಿರೇಗುತ್ತಿ ಕುಪ್ಪಳಿಯಲ್ಲಿ..

ದೀಪಾ ಹಿರೇಗುತ್ತಿ ಬರಹಗಳೇ ಹಾಗೆ. ಒಂದು ಕ್ಷಣ ಓಡುವವರನ್ನು ನಿಲ್ಲಿಸಿ ಮಾತನಾಡಿ ಚಿಂತನೆಗೆ ಹಚ್ಚುತ್ತದೆ. ದೀಪಾ ಅವರ ವಿಸ್ತಾರ ಓದು ಹಾಗೂ ಸಮಾಜದ ಅರಿವು ಅವರ ಬರಹಗಳ ಆಳವನ್ನು ಹೆಚ್ಚಿಸಿದೆ.

‘ವಿಜಯವಾಣಿ’ಗೆ ಇವರು ಬರೆದ ಅಂಕಣ ‘ನಾನು, ನೀವು ಮತ್ತು..’. ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ ವಸುಂಧರಾ ಭೂಪತಿ ಅವರು ಮುನ್ನುಡಿ ಬರೆದಿದ್ದಾರೆ.

ಆ ಮುನ್ನುಡಿ ಮತ್ತು ಕುಪ್ಪಳ್ಳಿಯಲ್ಲಿ ಜರುಗಿದ ಕೃತಿ ಬಿಡುಗಡೆಯ ಆಪ್ತ ನೋಟವನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ   

ಡಾ ವಸುಂಧರಾ ಭೂಪತಿ

ಅಂಕಣ ಬರಹ ಆಧುನಿಕ ಸಾಹಿತ್ಯದ ಆವಿಷ್ಕಾರ. ಪತ್ರಿಕಾರಂಗದಲ್ಲಿ ವಸಾಹತೋತ್ತರ ಬೆಳವಣಿಗೆಯಾಗಿ ನಮ್ಮ ಕನ್ನಡ ಸಾಹಿತ್ಯದಲ್ಲಿ ಕಾಣಿಸಿಕೊಂಡ ಹೊಸ ಪ್ರಕಾರ. ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ತ್ರೈಮಾಸಿಕ ಹೀಗೆ ಎಲ್ಲ ನಿಯತಕಾಲಿಕಗಳಲ್ಲಿ ನಿರ್ದಿಷ್ಟ ವಿಷಯ ಪರಿಧಿಯನ್ನು ಇಟ್ಟುಕೊಂಡಂತೆ ಬರೆಯುವ ಬರೆಹವೇ ಅಂಕಣಬರಹ.

ಒಂದು ಕಾಲದಲ್ಲಿ ಅಂದರೆ ಪ್ರಾರಂಭಿಕ ಹಂತದಲ್ಲಿ ಅಂಕಣ ಬರಹಕ್ಕೆ ಬಹಳ ಪರಿಮಿತವಾದ ಅವಕಾಶವಿತ್ತು. ಆದರೆ ಪತ್ರಿಕೋದ್ಯಮದ ಸವಾಲುಗಳು, ಸಮಸ್ಯೆಗಳು, ಅವಕಾಶಗಳು ಹೆಚ್ಚು ಹೆಚ್ಚು ತೆರೆದುಕೊಂಡಂತೆ ಅಂಕಣ ಬರಹದ ಬೇಡಿಕೆಯು ಹೆಚ್ಚು ಹೆಚ್ಚು ವಿಸ್ತಾರಗೊಳ್ಳುತ್ತಾ ಹೋಯಿತು.

ದಿನಪತ್ರಿಕೆಗಳಲ್ಲಿಯೇ ವಿಷಯವಾರು ವಿಂಗಡಣೆಗೆ ಬಗೆಗೊಂಡಂತೆ ನಿರ್ದಿಷ್ಟ ವಿಷಯ ತಜ್ಞರುಗಳಿಂದ ವಿಚಾರ ಮಂಡನೆ, ವಿಶ್ಲೇಷಣೆ, ಬೆಳಕಿಗೆ ಬಂದಿದ್ದು ಇದರಿಂದಾಗಿ ಕೇವಲ ಸುದ್ದಿಮಾಧ್ಯಮಗಳಾಗಿದ್ದ ಪತ್ರಿಕೆಗಳು ವಿಚಾರ ಪ್ರಸಾರದ ಮಾಧ್ಯಮಗಳಾಗಿ ವಿಸ್ತಾರಗೊಂಡವು. ಶಿಕ್ಷಣ, ಆರ್ಥಿಕ ನೀತಿ, ರಾಜಕೀಯ, ಕೃಷಿ, ವಿಜ್ಞಾನ, ಆರೋಗ್ಯ, ಹೀಗೆ ವಿವಿಧ ಕ್ಷೇತ್ರಗಳ ತಜ್ಞರುಗಳು ಅಂಕಣ ಬರಹಕ್ಕೆ ತೊಡಗಿಕೊಂಡರು. ಪತ್ರಿಕೆಗಳ ಸೌಂದರ್ಯವನ್ನು ಪ್ರೌಢಿಮೆಯನ್ನು ಹೆಚ್ಚಿಸಿದರು.

ಕನ್ನಡದ ಪತ್ರಿಕೋದ್ಯಮದಲ್ಲಿ ಅಂಕಣ ಬರಹವನ್ನೇ ಬರೆದು ತಮ್ಮ ಬರೆಹಕ್ಕೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದುಕೊಂಡವರು ಡಾ. ಹಾ.ಮಾ. ನಾಯಕ ಅವರು. ಆರ್ಥಿಕ ಚಿಂತನೆಯನ್ನು ದೈನಂದಿನ ಪುಟಗಳಲ್ಲಿ ಹಲವು ದಶಕಗಳ ಕಾಲ ಬರೆದು ದಾಖಲೆ ಸ್ಥಾಪಿಸಿದವರು ಎಚ್ಚೆಸ್ಕೆ. ಸುಧಾದಂತಹ ಪತ್ರಿಕೆಯಲ್ಲಿ ಕಾವ್ಯನಾಮದಿಂದ ವಿಚಾರಗಳನ್ನು ಹಂಚಿದವರು ಜಿ.ಪಿ.ರಾಜರತ್ನಂ.

ಆದರೆ ಬಹಳ ದೊಡ್ಡ ವಿಶೇಷವೆಂದರೆ ಅಂಕಣ ಬರಹಕ್ಕೆ ವಿಸ್ತರಣೆಯನ್ನು ಕೊಟ್ಟಿದ್ದು ಪಿ.ಲಂಕೇಶ್‍ರವರು. ಲಂಕೇಶ್ ಪತ್ರಿಕೆಯಲ್ಲಿ ಟೀಕೆ-ಟಿಪ್ಪಣಿ,’ ‘ಮರೆಯುವ ಮುನ್ನ’ ಇಂತಹ ಅಂಕಣಗಳ ಮುಖಾಂತರ ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಿದರು. ಬೇರೆಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಹೆಚ್ಚು ಓದುಗರನ್ನು ಒಳಗೊಂಡ ಪ್ರಕಾರ ಈ ಅಂಕಣ ಬರಹ. ಪತ್ರಿಕಾರಂಗದಲ್ಲಿ ಇದೊಂದು ವೈಚಾರಿಕ ಬರಹ ಮಾದರಿ.

ಇಂಗ್ಲಿಷ್‍ನಲ್ಲಿ ‘ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದ ಆರ್. ಕೆ. ನಾರಾಯಣ್‍ರವರ ಅಂಕಣಬರಹ ನಂತರ ‘ಮಾಲ್ಗುಡಿ ಡೇಸ್’ ಆಗಿ ಪ್ರಖ್ಯಾತಿಗೊಂಡಿರುವುದನ್ನು ನಾವು ಮರೆಯುವಂತಿಲ್ಲ. ಸಮಕಾಲೀನ ಹಾಗೂ ವಿಜ್ಞಾನ ವಿಷಯಗಳನ್ನು ತಳುಕು ಹಾಕಿ ಬರೆಯುವ ವಿಶಿಷ್ಟ ಶೈಲಿ ನಾಗೇಶ ಹೆಗಡೆ ಅವರ ಅಂಕಣದ್ದಾಗಿದೆ. ವಿಮರ್ಶಕಿ ಎಂ.ಎಸ್. ಆಶಾದೇವಿಯವರ ‘ನಾರೀಕೇಳಾ’ ಅಂಕಣ ಮಹಿಳಾ ಸಾಹಿತ್ಯ ಚರಿತ್ರೆಯಲ್ಲಿ ಮಾತ್ರವಲ್ಲ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಒಂದು ಮೈಲ್ಲಿಗಲ್ಲು.

ಕವಯತ್ರಿ ದೀಪಾ ಹಿರೇಗುತ್ತಿಯವರ ‘ನಾನು, ನೀವು ಮತ್ತು…’ ಅಂಕಣ ಬರಹದ ಕೃತಿಯು ಮಾನವೀಯ ನೆಲೆಯಲ್ಲಿ ರೂಪುಗೊಂಡಿದೆ. ಈ ಬರೆಹಗಳು ಸಮಯಾತೀತವಾಗುವ ಎಲ್ಲ ಲಕ್ಷಣಗಳನ್ನು ಹೊಂದಿವೆ. ಇಲ್ಲಿರುವ ಹೆಚ್ಚಿನ ಲೇಖನಗಳು ಯುವಜನಾಂಗಕ್ಕೆ ಎಚ್ಚರಿಕೆ ಗಂಟೆಗಳಾಗಿವೆ.

ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ಕ್ರೀಡೆ, ಹೀಗೆ ವಿವಿಧ ಕ್ಷೇತ್ರಗಳ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಸೊಗಸಾಗಿ ನಿರೂಪಿಸಿದ್ದಾರೆ. ಕಥೆಗಳು, ಗಾದೆಗಳು, ವ್ಯಕ್ತಿಗಳು, ಕವಿತೆಗಳನ್ನು ಸಮರ್ಥವಾಗಿ ಬಳಸಿಕೊಂಡು ಕಾವ್ಯಮಯವಾದ ಭಾಷೆಯಲ್ಲಿ ತಲಸ್ಪರ್ಶಿಯಾಗಿ ರಚಿಸಿದ್ದಾರೆ. ಲೇಖಕಿ ದೀಪಾರವರ ಅಧ್ಯಯನಶೀಲತೆ ಅಚ್ಚರಿ ಹುಟ್ಟಿಸುತ್ತದೆ. ಜನತೆ ಭೌತಿಕ ಜಗತ್ತಿನ ಕಡೆಗೆ ವಾಲುತ್ತಿರುವ ಈ ಸಂಧರ್ಭದಲ್ಲಿ ಕಳೆದುಹೋಗುತ್ತಿರುವ ಮಾನವೀಯತೆಯನ್ನು ಉಳಿಸಿಕೊಳ್ಳುವ ಬಗೆಯನ್ನು ‘ನಾನು, ನೀವು ಮತ್ತು …’ ಕೃತಿ ಕಟ್ಟಿಕೊಡುತ್ತದೆ.

ಈ ಬರೆಹಗಳ ಸಂಗ್ರಹ ಆಪ್ತಸಲಹಾ ಕೈಪಿಡಿಯ ರೀತಿಯಲ್ಲಿ ಮೂಡಿಬಂದಿದೆ. ಈ ಕೃತಿ ಅಮ್ಮನಂತೆ ಅಂತಃಕರಣ, ಅಕ್ಕನಂತೆ ಧೈರ್ಯ, ಗೆಳತಿಯಂತೆ ಬೆಚ್ಚನೆಯ ಸ್ಪರ್ಶ ನೀಡಿ ಮನಸ್ಸನ್ನು ಮುದಗೊಳಿಸುತ್ತದೆ.

ಲೇಖಕಿಯೇ ಹೇಳುವಂತೆ ‘ಬದುಕೆಂದರೆ ಭರವಸೆಯ ಬೆಳಕು, ಬೆಳಕು ಅಂದ್ರೆ ಭರವಸೆ’. ಜೀವನದಲ್ಲಿ ಅತ್ಯಮೂಲ್ಯ ಸಂಬಂಧಗಳು ಇಲ್ಲವಾದಾಗೆಲ್ಲ ಸಕಾರಾತ್ಮಕ ಚಿಂತನೆಗಳನ್ನು ಹುಟ್ಟುಹಾಕುವ ಬೆಳಸುವಂತಹ ಮಹತ್ವದ ಕಾರ್ಯವನ್ನು ಇಲ್ಲಿನ ಲೇಖನಗಳು ಮಾಡುತ್ತವೆ. ಈ ನಿಟ್ಟಿನಲ್ಲಿಯೇ ‘ನಾನು, ನೀವು ಮತ್ತು…’ ಕೃತಿಯ ಬರಹಗಳು ರೂಪಗೊಂಡಿವೆ.

ಈ ಕೃತಿಯನ್ನು ಓದುತ್ತಿದ್ದರೆ ವಿಶ್ವದ ಕಥಾಸಾಹಿತ್ಯ ನಮ್ಮ ಕಣ್ಣೆದುರು ಬರುತ್ತದೆ. ಲಿಂಗತಾರತಮ್ಯ ನಮ್ಮ ದೇಶದ ಸಮಸ್ಯೆ ಮಾತ್ರವಲ್ಲ ಎಲ್ಲ ದೇಶಗಳ ಸಮಸ್ಯೆಯೂ ಹೌದು ಎಂಬುವುದಕ್ಕೆ 17ನೇ ಶತಮಾನದಲ್ಲಿ ಇಂಗ್ಲೆಂಡ್‍ನಲ್ಲಿ ಕವಯತ್ರಿ ಜೋನ್ ತನ್ನ ಹೆಸರಿನಿಂದ ಕಳುಹಿಸಿದ ಕವನ ಪತ್ರಿಕೆಗಳಿಂದ ತಿರಸ್ಕೃತವಾದಾಗ ಜಾನ್ ಎಂಬ ಹೆಸರಿನಿಂದ ಕಳುಹಿಸಿದಾಗ ಪ್ರಕಟವಾಗಿತ್ತಂತೆ.

ಈ ಕೃತಿಯ ವಿಷಯಗಳ ಆಯ್ಕೆ ಬಹುನೆಲೆಯದಾಗಿದ್ದು ಮನುಷ್ಯ ಸಂಬಂಧಗಳ ತೀವ್ರತೆಯನ್ನು ಕಟ್ಟಿಕೊಡುತ್ತದೆ. ನೂರಾರು ಪುಸ್ತಕಗಳನ್ನು ಓದಿದಷ್ಟು ಅನುಭವವನ್ನು ಓದುಗರಿಗೆ ನೀಡುತ್ತದೆ. ವಿಷಯ ಜ್ಞಾನದೊಂದಿಗೆ ಬದುಕಿನ ಸಣ್ಣ ಸಣ್ಣ ವಿಚಾರಗೂ ಮಹತ್ವ ನೀಡುವುದು, ಗಮನ ಹರಿಸುವುದು ಯಶಸ್ಸಿಗೆ ಹೇಗೆ ಕಾರಣವಾಗುತ್ತದೆಂಬುದನ್ನು ದೀಪಾ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

ದೀಪಾ ಹಿರೇಗುತ್ತಿಯವರು ಕನ್ನಡದ ಸಶಕ್ತ ಅಂಕಣಗಾರ್ತಿ ಎಂಬುದನ್ನು “ನಾನು, ನೀವು ಮತ್ತು …..” ಕೃತಿ ಸಾಬೀತು ಪಡಿಸುತ್ತದೆ. ಇಲ್ಲಿನ ವೈಚಾರಿಕತೆ ಎಷ್ಟರಮಟ್ಟಿಗಿದೆ ಅಂದರೆ ವಿಷಯವಿಚಾರ ಓದುಗರ ಭಾವಕೋಶದೊಳಕ್ಕೆ ಆಳವಾಗಿ ಇಳಿದು ಬುದ್ಧಿಕೋಶವನ್ನು ಪ್ರವೇಶಿಸಿಬಿಡುತ್ತದೆ.

‍ಲೇಖಕರು admin

January 17, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Anonymous

    ”ಈ ಕೃತಿ ಅಮ್ಮನಂತೆ ಅಂತಃಕರಣ, ಅಕ್ಕನಂತೆ ಧೈರ್ಯ, ಗೆಳತಿಯಂತೆ ಬೆಚ್ಚನೆಯ ಸ್ಪರ್ಶ ನೀಡಿ ಮನಸ್ಸನ್ನು ಮುದಗೊಳಿಸುತ್ತದೆ” ಈ ಗುಣಗಳು ದೀಪಾಳ ವ್ಯಕ್ತಿತ್ವದ ಭಾಗವೇ ಆಗಿವೆ! ಶುಭಾಶಯಗಳು-ರಾಜೀವ

    ಪ್ರತಿಕ್ರಿಯೆ
  2. Sagar

    Hatsoff to Deepa Akka May god give strength to you to write many more books and share the knowledge across the nation Good Luck Akka
    Sagar

    ಪ್ರತಿಕ್ರಿಯೆ
  3. kitty Vijapure

    pusthak vodalu thumba utsukanagiddene akka ….
    nimm prati mathinallu manviya sparshviruthade..

    ಪ್ರತಿಕ್ರಿಯೆ
  4. Ramachandra Hegade

    ದೀಪಾ.. ಕಡಲು ಮತ್ತು ಮೀನಿನ ಕುರಿತು ಅಮೋಘ ಅನಿಸುವಷ್ಟು ಅಧ್ಬುತಗಳು ಈ ನಿನ್ನ ಲೇಖನದಲ್ಲಿವೆ..
    ಬಿಸಿ ಬಿಸಿ ಗಂಜಿಯನ್ನು ಮುದ್ದೆಕಟ್ಟಿ ಘಮ್ಮೇನ್ನುವ ಸಾರಿನಲ್ಲಿ ಮುಳಗಿಸಿ ತಿನ್ನುತ್ತಿದ್ದರೆ ಜಗತ್ತಿನ ವೈಭೋಗಗಳೆಲ್ಲೂ ತೃಣ ಸಮಾನ ಏಂಬ ಸಾಲುಗಳನ್ನು ಗೀರಿಶ್ ಓದಿದರೆ ಹೊಟ್ಟೇ ಉರಿಯಿಸಿ ಕೋಳ್ಳತ್ತಾರೆ..
    ನಿನ್ನ ಜೀವನದ ಅತ್ಯಂತ ದುರ್ಬರ ದಿನಗಳು ಎಂದರೆ ಧಾರವಾಡದಲ್ಲಿ ಎಂ ಎ ಮಾಡಲು ಕಳೆದ ಎರಡು ವರ್ಷಗಳು ಅಂತಾ ಓದಿದ ಮೇಲೆ ಸ್ವಲ್ಪ ಬೇಜಾರಾಯ್ತು.
    ನಮಗೆ ಓಮ್ಮೆಯಾದರು ತಾರಲೆ ಮೀನು ಸಾರ್ ತಿನ್ಸಬೇಕ ದೀಪಾ… really nice article.. sunday special..
    ಇಂದು ಪ್ರಜಾವಾಣಿಯಲ್ಲಿ ಪ್ರಕಟವಾದ ವಿನಯಾ ಒಕ್ಕುಂದ ಮತ್ತು ಡಾ ಎಚ್ ಎಸ್ ಅನುಪಮಾ ಅವರ ಲೇಖನಗಳು ವಿಸ್ಮಯ ಅನ್ನುವಷ್ಟರ ಮಟ್ಟಿಗೆ ಅದ್ಭುತ….!..!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: