ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೀಪಾ ಗೋನಾಳ ಹೊಸ ಕವಿತೆ – ಅಪ್ಪನ ಒಂದು ಪುಟ್ಟ ಪೆಟ್ಟಿಗೆ…

ದೀಪಾ ಗೋನಾಳ

ಅಪ್ಪನ ಬಳಿ ಒಂದು ಪುಟ್ಟ ಪೆಟ್ಟಿಗೆ ಇತ್ತು
ನಾನು ಕೈ ಇಟ್ಟಾಗಲೆಲ್ಲ ಅದರಲ್ಲಿ ಪೆಪ್ಪರುಮೆಂಟು,
ಚಾಕಲೇಟು, ಹಣ್ಣು, ಖಾರದ ಗೋಡಂಬೆ, ಕೊಬ್ಬರಿ ಬೆಲ್ಲದ ಉಂಡೆ ಕನಕಾಂಬರ ಹೂ, ಬಣ್ಣದ ಫ್ರಾಕು
ಗಾಜಿನ ಬಳೆ, ತುಂಡು ಜುಟ್ಟಲಿಗೆ ಟೇಪು
ಬೊಟ್ಟಿಡಲು ಟಿಕಳಿ ಪಾಕೀಟು
ಎಷ್ಟೆಲ್ಲ ಇತ್ತು ನಾನು ಜಗಮಗಿಸುವ ಮಗಳು

ಯಾವಾಗಂದರೆ ಆವಾಗ ಡಬ್ಬದಲ್ಲಿ ಕೈ
ಹಾಕಕೂಡದೆಂದು ಅಪ್ಪ ಹೇಳಿದ ನೆನಪಿಲ್ಲ
ನನಗೇನಾದರು ಬೇಕೆನಿಸಿದಾಗ ಮಾತ್ರ
ಡಬ್ಬದ ಹತ್ತಿರ ಹೋಗಿ ಇದರಲ್ಲೀಗ ಒಂದು
ಪೆನ್ಸಿಲ್ ಇದ್ದರೆ ಚೆನ್ನಿತ್ತು ಅಂದುಕೊಳ್ಳುತ್ತಿರುವಾಗ
ಅದರಲ್ಲಿ ಪೆನ್ಸಿಲ್ಲು ಸಿಗುತ್ತಿತ್ತು

ಅಪ್ಪನ ಸಂಬಳದ ದಿನ ಆ ಮ್ಯಾಜಿಕ್ ಡಬ್ಬದಲ್ಲಿ
ತಿನಿಸುಗಳ ದೊಡ್ಡ ಕೊಟ್ಟೆ ಇರುತ್ತಿತ್ತು
ಅಕ್ಕ ನಾನು ಆ ದಿನ ಊಟ ಮಾಡದೆ ತಿನಿಸುಗಳಲ್ಲೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ದಿನವದು

ಅಪ್ಪ ಮತ್ತು ಮ್ಯಾಜಿಕ್ ಡಬ್ಬ ಎರಡಿದ್ದರೆ
ಬದುಕೆಲ್ಲ ಹಬ್ಬವೇ ಹಬ್ಬ ಅಂದುಕೊಂಡೆ ಬೆಳೆದೆ
ವಸಂತ ಮಾವು ಚಿಗುರು ಕೋಗಿಲೆ ಮಧುವೆ
ಅಪ್ಪ ಎಂತದೋ ಹಾಡು ಗುನುಗುತ್ತಿದ್ದ
ಕೇಳಿದರೆ ಆ ಡಬ್ಬದೊಳಗಿಂದ ರಾಜಕುಮಾರ
ಹೊರಬರುವ ಅವನೊಂದಿಗೆ ನಿನ್ನ ಮಧುವೆ
ಅಂದಿದ್ದ

ಅಪ್ಪನ ಕಣ್ಣ ನೊಡುತ್ತ,, ಅವನ ಬಳಿಯು
ಇಂತ ಮ್ಯಾಜಿಕ್ ಡಬ್ಬ ಇದ್ದರೆ ಅವನನ್ನೆ ಮಧುವೆ ಆಗುವೆ ಅಂದಿದ್ದೆ

ಒಂದಿನ ಅಪ್ಪ ಎದೆ ಹಿಡಿದು ನೆಲಕ್ಕೊರಗಿದ
ಅಮ್ಮ ಮ್ಯಾಜಿಕ್ಕ ಡಬ್ಬವನ್ನು ಅಪ್ಪನೊಂದಿಗೆ
ಹುಗಿದು ಹಾಕಿದಳು
ನಾನು ರಾಜಕುಮಾರನನ್ನಾದರೂ ಹೊರ
ತೆಗೆ ಅಂದೆ
ಅಮ್ಮ ಬಿಕ್ಕುತ್ತಿದ್ದಳಷ್ಟೆ

ನಾನೀಗ ನನ್ನ ಮಗಳಿಗೆ ಒಂದು ಮ್ಯಾಜಿಕ್ ಬಾಕ್ಸ್ ನಲ್ಲಿ
ಅಪ್ಪ ತಂದಿಟ್ಟಂತೆ ಅವಳ ಬದುಕಿನ ಬಯಕೆಗಳ ಹೆಣೆದೆಣೆದು ತಂದಿಡುತ್ತಿರುವೆ
ಆದರೂ ಅಪ್ಪನ ಆ ಡಬ್ಬದಂತೆ ಇದು ಜಗಮಗಿಸುವುದಿಲ್ಲ.

‍ಲೇಖಕರು Admin

19 June, 2022

1 Comment

  1. Basavaraj

    Adbutha aste helabahudu, adaralli ondu salu barutte appa magic dabba hididu nelakkoragidaga magalu tayiya bali hogi nanage aa rajakumaranannu kodu andaga tayi bikkalisidalu aha enu adbutha alva appa andre hage kanri ava jeevana ella namgoskar sevesiruttane adre enu bayasode illa

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading