ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೀಪಾ ಗೋನಾಳ್ ಹೊಸ ಕವಿತೆ – ಒಂದಿನ ಮನುಷ್ಯರನ್ನೆಲ್ಲ ಕೊಲ್ಲೊ ಆರ್ಡರ್…

ದೀಪಾ ಗೋನಾಳ್

-ಕೆಟ್ಟ ಕನಸು
ಎಚ್ಚರವಾದಾಗ ಸುತ್ತಲು
ಮನುಷ್ಯರು ಸತ್ತು ಬಿದ್ದಿದ್ರು
ನನ್ನೆದುರು ಒಂದು
ಗುಂಪುಜನ, ಗಹಗಹಿಸಿ
ನಗ್ತಿದ್ರು,
ಒಬ್ಬಾತ ಕೇಳಿದ
ಏನು‌ ಮಾಡೋದು
ಈ‌ ಮನುಷ್ಯರ ಹೆಣಗಳನ್ನ!?
ಇನ್ನೊಬ್ಬಾತ ಹೇಳಿದ
ಸಾರ್ವತ್ರಿಕವಾಗಿ
ದಫನ್ ಮಾಡೋಣ
ಇವರಿಗಾಗಿ ಯಾಕೆ
ಪವಿತ್ರ ಅಗ್ನಿಯನ್ನ
ಖರ್ಚು ಮಾಡೋದು..
ನಾಲ್ಕಾರು ಜನ
ಹೌದು ಹೌದು‌ ಹೌದು

ಮೂರನೇಯಾತ
ಅರೆ ಮಣ್ಣಲ್ಲಿ‌ ಹೂತ್ರೆ
ಗಿಡವಾಗಿ‌ ಹುಟ್ಟಿ‌ ಮತ್ತೆ
ಸಮಾನತೆ ಜಾತ್ಯಾತೀತತೆ
ಪ್ರಜಾಪ್ರಭುತ್ವ ಅಂತವೆ
ಮಣ್ಣಲ್ಲಿ ಮಾತ್ರ ಹುಳೋದು
ಬೇಡ..
ನಾಲ್ಕಾರು‌ ಜನ
ಹೌದು‌ ಹೌದು ಹೌದು

ನಾಲ್ಕನೇಯವ
ಮನುಷ್ಯರ ಹೆಣದ ರಾಶಿಸುತ್ತ
ಹಳೆ ಟೈರ್ ಒಟ್ಟಿ‌ ಬೆಂಕಿನೆ ಇಟ್ಟುಬಿಡುವ
ಜೊತೆಗೆ ಇವರ ಪುಸ್ತಕ‌
ಆದರ್ಶ ಇತಿಹಾಸ ಕೂಡ
ಐದನೇಯವ ಅರೆ ಬೇಡ ಬೇಡ
ಮೊದಲೆ ಸತ್ಯವಂತರು ಪ್ರಾಮಾಣಿಕರು
ಇರುವ ರಾಶಿ‌ಇದು
ಆ ಅಗ್ನಿದೇವ ಇವರ ಪಕ್ಷ ಸೇರಿ
ನಮ್ಮನ್ನು ಸುಟ್ಟರೆ!?
ಸುಡುವುದಂತು‌ ಬೇಡವೇ ಬೇಡ
ನಾಲ್ಕಾರು‌ ಜನ ಹೌದು ಹೌದು ಹೌದು

ಹಾಗಿದ್ದರೆ ನದಿಯಲ್ಲಿ
ತೇಲಿ‌ ಬಿಡೋಣವೇ!?

ಯಾರದು
ಈಗಷ್ಟೆ ನದಿ ನೀರು ಸಮುದ್ರ
ಸ್ವಚ್ಛ ಮಾಡಿದ್ದೇವೆ
ನೀರಿನಲ್ಲಿ ಬಿಟ್ಟುಕೊಳ್ಳುವುದು ಹೇಗೆ
ನಾಲ್ಕಾರು ಜನ‌ ಹೌದು ಹೌದು ಹೌದು

ಕೊನೆಗೆ
ಒಟ್ಟಾಗಿ
ನಾವು ಇವರನ್ನು ಕೊಲ್ಲಬಾರದಿತ್ತು..!!
ಅರೆ ನಾವೇಕೆ
ಮನುಷ್ಯರಂತಾದೆವು..!?

ಹೆಣದ ತುಟಿಗಳ ಮೇಲೆ
ಸಣ್ಣ ಕಿರುನಗೆ
ಕಿವಿಗಳ ರೋಮದ
ಮೇಲೆ ಸಣ್ಣ ತಂಗಾಳಿ
ಎದೆಯೊಳಗೆ
ಸತ್ತದ್ದು ಸಾರ್ಥಕವಾಯಿತು.

‍ಲೇಖಕರು Admin

26 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading