ದೀಪಾ‌ ಗೋನಾಳ ಓದಿದ ʼಉಪ್ಪುಚ್ಚಿ ಮುಳ್ಳುʼ

ಈ ಕತೆಗಳದೊಂದು ಕತೆಯೇ..

ದೀಪಾ‌ ಗೋನಾಳ

ಈ ಕತೆಗಳದೊಂದು ಕತೆಯೇ, ಎಂದೋ ಎಲ್ಲೊ ಬಿದ್ದ ನೋವಿನ ಬೀಜ ಕಾಲಗರ್ಭದಲಿ ಹೂತು, ಎದೆಯೊಳಗೆ ಮೊಳೆತು, ಅನುಭವಗಳ ಜೊತೆಗೆ ಕಳೆತು ಕತೆಯಾಗಿ ಹೊರಬಂದ ಪರಿ ನಿಜಕ್ಕೂ ಗಮನಾರ್ಹ. ಕತೆ‌ ಕವನಗಳು ಕಮರ್ಶಿಯಲ್ ಆಗುತ್ತಿರುವ ಈ ಕಾಲದಲ್ಲಿ, ‘ಗೆದ್ದ ಕತೆ-ಕವನಗಳ ಪುಸ್ತಕ ಮಾತ್ರ ತರಿಸಿಕೊಂಡು ಓಹ್, ಹೀಗೆ ಬರೆದರೆ ಗೆಲ್ಲುತ್ತೇವೆ,’ ಎಂದು ಎತ್ತಲೋ ಹೊರಟು ನಿಂತಿರುವ ಹೊಸ ತಲೆಮಾರಿನ ಎದುರು ಈ ಕಥಾ ಸಂಕಲನ ನಿರಾಡಂಬರಿಯಂತೆ ಎದ್ದು ನಿಲ್ಲುತ್ತೆ. ಭಾಷೆಯ ಹಂಗಿಲ್ಲ ಈ ಮುಳ್ಳಿನ‌ ಕತೆಗಳಿಗೆ, ತನ್ನೂರಲ್ಲಿ ತನ್ನೆದೆಯಲ್ಲಿ ತನ್ನೆದುರಲ್ಲೆ ಇರುವ ತನ್ನೊಂದಿಗೆ ಪ್ರತಿ‌ದಿನ ವ್ಯವಹರಿಸುವ ಭಾಷೆಯಲ್ಲೆ ಕತೆಗಳು ಸಾಗುತ್ತವೆ.

ಎದೆಯಲ್ಲಿ ಲಟಕ್ಕನೆ ಮುರಿವ ಮುಳ್ಳಿನಂತೆ ಒಂದೊಂದು ಕತೆಯು ನೋವಿನ ಮುಳ್ಳು. ಜಗತ್ತಿನ ಆಚೆಕಡೆಗೆ ಎಂದು ತೆರೆದುಕೊಳ್ಳುವ ಕತೆ ಜಗತ್ತಿನ‌ ಒಳಮಗ್ಗಲು ಅದರಲ್ಲೂ ನಸುಕಿನ‌ ನಾಕಕ್ಕೆ ಎದ್ದು ಊರಾಚೆಯ ಬಯಲಿನಲಿ‌ ಶೌಚಕ್ಕೆ ಧಾವಿಸುವ ಹೆಂಗಸರ ಬದುಕಿನ ಆರಂಭ ಎಂತಾ ನೋವಿನ‌ ಮುಳ್ಳಿದು?ಯಾವ ಪಾಪದ ಫಲವಿದು? ಇಂದಿಗೂ ಕೈಯ್ಯಲ್ಲೊಂದು ತಂಬಿಗೆ ಹಿಡಿದು ಮರೆ ಹುಡುಕುತ್ತಾ ಬಯಲಲಿ ಅಲೆಯುವ ಬದುಕಿಗೆ ಕೊನೆ‌ ಎಂದು? ಪ್ರಶ್ನೆಗಳು ಲೇಖಕಿಯವಲ್ಲ ಮುಳ್ಳಾಗಿ ಉಳಿದ ವ್ಯವಸ್ಥೆಯ ಮುಂದಿಟ್ಟ ಓದುಗಳಾದ ನನ್ನವು.

ಅದೇ ಕತೆಯಲ್ಲಿ ತೆರೆದುಕೊಳ್ಳುವ ರಷ್ಯಾದ ಬಸ್ಸಿನ ಓಟದೊಂದಿಗೆ ಮೈಗೆ ಮೈ ತಿಕ್ಕಿಸಿಕೊಂಡು ಕಾಲೇಜು ಸೇರುವ ಹುಡುಗಿಯರ ಮೈಗೆ ಚುಚ್ಚುವ ಮುಳ್ಳುಗಳ ಲೆಕ್ಕ ತೀರಿಸುವುದು ಹೇಗೆ?

ಅಬ್ದುಲಣ್ಣನ ಸಾಮಿಲ್ಲಿನಲ್ಲಿ ಸಿಗುವ ಹೆಣಗಳು, ರೂಡಣ್ಣನ ಬ್ರಹ್ಮಚರ್ಯ ಮತ್ತು ಸುಮ್ಮನಿದ್ದವರಿಗೆ ಎರಡು ಗುದ್ದು ಜಾಸ್ತಿ‌ ಎಂಬಂತೆ ರೂಡಣ್ಣ ಅನುಭವಿಸಿದ ನೋವು. ಸಿದ್ಧನ‌ ಲಚ್ಚಿಯ ಪ್ರೇಮ ಮತ್ತು ಪಲಾಯನ, ಕುರ್ಚಿಯ ಕತೆ ವ್ಯಥೆ, ಹೆಬ್ಳೆಬೆಕ್ಕಿನ ಜಾತಿಯ ಮೈಸವರೊ ಮೇಷ್ಟ್ರು ತಿಂದ ಕಲ್ಲೇಟು, ಇಂದ್ರಾಣಿ ಎಂಬ ಮುಗ್ಧೆಯ ಪ್ರೇಮ ವೈಫಲ್ಯ, ರಿಸರ್ವೇಷನ್ ಎಂಬ ಕತೆಯಲ್ಲಿ ನರ್ಸ್ ಒಬ್ಬಳ ಬದುಕಿನ ಒಳಹೊರಗಿನ ತಾಕಲಾಟಗಳು, ಸಮಾಜದ ಸರ್ಕಾರದ ಅಧಿಕಾರಿಗಳ ಕಲುಷಿತ ವ್ಯವಸ್ಥೆ ಬಡವರ ಜೀವಕ್ಕಿಲ್ಲದ ಬೆಲೆ ದುಡ್ಡಿಗೆ ಮಾರಿಕೊಳ್ಳುವ ನಿಯತ್ತು ಎಷ್ಟೊಂದು ಕಂಟಕಪ್ರಾಯ ಮುಳ್ಳುಗಳು.

ಕಥಾಸಂಕಲನದ ಹೆಸರೇ ‘ಉಪ್ಪುಚ್ಚಿ ಮುಳ್ಳು’ ಈ ಕತೆ ಇಡೀ ಪುಸ್ತಕದಲ್ಲಿ ಅತ್ಯಂತ ಪುಟ್ಟ ಕತೆ ಆದರೆ ತುಂಬ ನೋವಿನ ಸಂಕಟದ ಮುಳ್ಳಿನ ಹೊರೆ ಹೊತ್ತ ಕತೆ ಕೂಡ. ಇದನ್ನ ನಾನು ವಿಮರ್ಶಿಸಲಾರೆ.

ಇಲ್ಲೊಂದು ‘ನೀಲಿ ಬಣ್ಣದ ದನಿ’ ಅನ್ನೋ ಕತೆ ಇದೆ ಇಲ್ಲಿ ಬರುವ ನೀಲಿ ವಿಚಿತ್ರವಾದ ಬದುಕನ್ನ ಅನುಭವಿಸುವ ವಿಷವನ್ನೆ ಕುಡಿದು ಬದುಕ ಕಟ್ಟಿಕೊಳ್ಳುವ, ಕಡೆಗೆ ವಿಷವನ್ನಿಕ್ಕಿ ಬದುಕನ್ನ ಉಳಿಸಿಕೊಳ್ಳುವ ಅನಿವಾರ್ಯತೆಗೆ ಬಿದ್ದ ಹೆಣ್ಣುಮಗಳು. ಕತೆಗಳ ನಾಯಕಿಯ ಹೆಸರು ನೀಲಿ ಅಂತ ಬಂದುಬಿಟ್ಟರೆ ಆ ಕತೆಗೊಂದು ವಿಚಿತ್ರವಾದ ಬಲ ದಕ್ಕಿಬಿಡುತ್ತೇನೊ ಅಂತ ಇತ್ತೀಚೆಗೆ ಅನಿಸ್ತಿದೆ ಅದಕ್ಕೆ ಬಲವಾದ ಕಾರಣವೂ ಇದೆ. ಮಿತ್ರ ಸದಾಶಿವರ ಕಥಾ ಸಂಕಲನ ‘ಅರ್ಧ ಬಿಸಿಲು ಅರ್ಧ ಮಳೆ’ಲೂ ʼನೀಲಿʼ‌ ಅನ್ನೋ ಕತೆ ಬರುತ್ತೆ. ಈ ನೀಲಿ ಕೊಂದು ಬದುಕಿದ್ರೆ ಆ ನೀಲಿ ಸತ್ತು ಕಾಡ್ತಾಳೆ. ಈ ನೀಲಿಯರು ಬೇರೆಯಾದರೂ ಎರಡೂ ಕತೆಗಳು ಮುಗಿಲು ಮುಟ್ಟಿ ತನ್ನ ನೀಲಿಯತೆಯನ್ನ ಉಳಿಸಿಕೊಳ್ಳುವ ಬಗೆ ನನಗೆ ಮೆಚ್ಚುಗೆಯಾಯ್ತು. ನೋವನ್ನ ಅಪ್ಪಿಕೊಳ್ಳುವ ಒಪ್ಪಿಕೊಳ್ಳುವ ಸುಲಭ ಮಾರ್ಗವೇನೊ ಇದು.

ಅಮಿತಾ ಮತ್ತು ಸ್ನೇಹಾ ಅಕ್ಕತಂಗಿರು ಬದುಕನ್ನ ಬೇರೆಬೇರೆಯಾಗಿ ಕಂಡವರು ಆದರೆ ಲಕ್ಕುಗಳು ಅಚಾನಕ್ಕಾಗಿ ಬದಾಲಾಗುತ್ತವೆ ರಾತ್ರಿ ಕಳೆದು ಬೆಳಗಾಗುವುದರೊಳಗೆ.

ಇನ್ನು ಇವೆ ಕತೆಗಳು ಒಟ್ಟು ಹದಿನೇಳು ಕತೆಗಳು. ಅಂದರೆ ಎದೆಗೆ ಚುಚ್ಚಿಕೊಂಡು ಮುರಿದು ಅಲ್ಲೆ ಉಳಿವ ಮುಳ್ಳುಗಳು ಹದಿನೇಳೆ ಅಂತ ಲೆಕ್ಕ.

ಇಲ್ಲಿ ಕೊಲೆಗಳಿವೆ, ರಕ್ತವಿದೆ, ಕುದಿಯುವ ನೋವಿದೆ, ಬೇಯುವ ಭಾವನೆಗಳಿವೆ, ವಿರಹ ಇದೆ, ತುಡಿತ ಇದೆ, ಕಾಮದ ತೃಷೆ ಇದೆ, ಸಿಗದ ಸುಖವಿದೆ, ಮುಗಿಯದ ಮೌನ ಇದೆ. ಹೂವಿದೆ, ನೋವಿದೆ, ಮುಳ್ಳಿದೆ. ಇದು ಹೆಣ್ಣೊಬ್ಬಳು ಕತೆ ಹೇಳುವ ಕತೆಯಾಗುವ ಕತೆಯೊಳಗೆ ಕಳೆದು ಹೋಗುವ ಓದುಗನ‌ ಒಳಗೆ ಕತೆ‌ ಉಳಿಸಿ ಹೋಗುವ ಬಗೆ.

ಓದಿ ಮುಗಿಸಿದರೆ ಮೂರುವರೆ ನಾಲ್ಕು ಗಂಟೆಯೊಳಗೆ ಅಷ್ಟು ಕತೆ‌ ಓದಬಹುದಾಗಿತ್ತು. ಹಾಗೆ ತಂಬಿಗೆ ಎತ್ತಿ ಒಂದೇ ಏಟಿಗೆ ಅರ್ಧ ಲೀಟರ್ ನೀರನ್ನು ಗಳಗಳನೆ ಕುಡಿಯಲಾಗದ ನಮ್ಮಂತ ಹೆಂಗಸರು ಈ ಮುಳ್ಳಗಳನ್ನ ಹ್ಯಾಗಾದರೂ ಒಂದೇ ಏಟಿಗೆ ಎದೆಗೆ ನುಗ್ಗಿಸಬಲ್ಲೆವು ಹೇಳಿ. ಆಗಾಗ ಒಂದೊಂದೇ‌ ಕತೆ ಎತ್ತಿ‌ಕೊಂಡು ಓದಿ ಎಂಟು ದಿನ ಈ‌ ಮುಳ್ಳುಗಳೊಂದಿಗೆ ಉಳಿದೆ.

ಕಾಲಲ್ಲಿ ಚುಚ್ಚಿದ ಜಾಲಿ ಮುಳ್ಳನ್ನ ಪಿನ್ನಿಂದ ಗಿಟಗಾಡಿಸಿದಾಗ ನೋವಿನೊಂದಿಗೆ ಹಿತಾನು ಆಗ್ತಿತ್ತು. ಚಿಮಟಗಿ ಹಾಕಿ ಎಷ್ಟೇ ಜತನದಿಂದ ಮುಳ್ಳು ಮೇಲೆತ್ತಿದ್ರು ತುಸುತುದಿ ಒಳಗೆ ಉಳಿಯೋದು ಅವ್ವ ಎದೆಹಾಲು ಹಿಂಡಿ ಅಜ್ಜನ‌ ಹಳೆ ದೋತ್ರದ ತುದಿ ಹರಿದು ಕಟ್ಟಿದ್ರೆ ಬೆಳಿಗ್ಗೆಗೆ ಮುಳ್ಳು ಆಚೆ ಬಂದಿರೋದು.‌ ಎದೆ ಬತ್ತಿದಾಗ ಕಡಲೆ ಬೇಳೆ ಕಚಕಚ ಜಗಿದು ಹಾಕಿ ಕಟ್ಟೋಳು ಆಗಲು ಮುಳ್ಳು ಹೊರಗೆ ಬರ್ತಿತ್ತು.‌ ಬರದೆ ಇದ್ದ ಮುಳ್ಳು ಅಂಗಾಲಲ್ಲಿ ಆನೆ‌ ಆಗ್ತಿತ್ತು. ಅಮ್ಮ ಪ್ರತಿವರ್ಷ ಹವಾಯಿ ಚಪ್ಪಲಿ ಕೊಡಸ್ತಿದ್ಲು ಆದ್ರೂ ಚಪ್ಪಲಿನ ಒಳಗಾಸಿ ಮುಳ್ಳು ಚುಚ್ತಿದ್ವು.

ಅರೆ, ಅಮ್ಮ ಇಷ್ಟೆಲ್ಲ ಶಿಕ್ಷಣ ಕೊಡ್ಸಿದ್ರು, ಸಮಾನತೆ ಬೆಳಸಿದ್ರು, ನೌಕರಿ ಮಾಡಾಕ ಬಿಟ್ರು ಹವಾಯಿ ಚಪ್ಪಲಿನೊಳಗ ಹಾಸಿ ಚುಚ್ಚೊ‌ ಜಾಲಿ ಮುಳ್ಳಿನ ಹಾಗೆ ಸಮಾಜದೊಳಗೆ ಹೆಣ್ಣಿಗೆ ನೋವುಗಳು ತಪ್ಪಿಲ್ಲ ದಯಾ ಗಂಗನಗಟ್ಟ ಹೇಳುವುದು ಕೂಡ ಇದನ್ನೆ. ಅವರು ಎದೆಲಿ ಮುರಿದ ಮುಳ್ಳಗಳನ್ನ ಕತೆಯಾಗಿಸಿ ಹೇಳ್ತಾ ಹೋಗಿದಾರೆ.

ಇಷ್ಟೊಂದು ಜವಾರಿ ಕತೆಗಳು ಓದಲು ದಕ್ಕಿದ್ದು ಖುಷಿ. ಅಲ್ಲಲ್ಲಿ ಭಾಷೆ ಸ್ವಲ್ಪ ಹಿಡ್ಕೊಂತು ಆದರೂ ಬಿಡದೆ ಎಳೆದು ಹಿಡಿದಿನಿ. ತಮ್ಮದೇ ನೆಲದ ಭಾಷೆಯಲ್ಲಿ ಬರೆದದ್ದು ಸಹ ಕೃತಿಗೆ ಹೆಚ್ಚಿನ ಮೆರಗು ಕೊಟ್ಟಿದೆ.

ಉಳಿದಂತೆ ಇಷ್ಟೆಲ್ಲ ಲಾಬಿಯ ಕತೆಗಾರರ ನಡುವೆ ದಯಾ ಅವರ ಕತೆಗಳು ಗೆಲ್ಲಲಿ ಅರ್ಥಾತ್ ಹೆಚ್ಚು ಜನರನ್ನ ತಲುಪಲಿ.

‍ಲೇಖಕರು Admin

November 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: