ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೀಕ್ಷಿತ್ ನಾಯರ್ ಕವಿತೆ- ಮಗುವಿನ ಅಳಲು…

(ಮಲಯಾಳಂ ಕವಿತೆಯಿಂದ ಸ್ಪೂರ್ತಿ)

ದೀಕ್ಷಿತ್ ನಾಯರ್

ಹೊತ್ತಲ್ಲದ ಹೊತ್ತಿನಲ್ಲಿ ಅಮ್ಮ ಬರುತ್ತಾಳೆ;
ಪೂರಾ ದಣಿದಿರುತ್ತಾಳೆ
ಬಾಯಿ ತೆರೆದು ಮಾತನಾಡುವಷ್ಟೂ ತ್ರಾಣ ಇರುವುದಿಲ್ಲ ಅವಳಿಗೆ!
ಸೀರೆ ನಡುವಿನಿಂದ ಕೆಳ ಜಾರಿರುತ್ತದೆ
ತೆರೆದುಕೊಂಡ ಕುಪ್ಪಸದ ಗುಂಡಿಗಳತ್ತಲು ಅವಳಿಗೆ ಲಕ್ಷ್ಯವಿರುವುದಿಲ್ಲ;
ಪಾಪ ಅವಳಿಗೆ ಅವಳದ್ದೇ ವೇದನೆ!

ಅರೆ! ಅಮ್ಮನದ್ದು ಯಾವ ಕೆಲಸ?
ದೇಹ ದಂಡಿಸುತ್ತಾಳೆ ಎಂಬುದು ಮಾತ್ರ ಗೊತ್ತು
ಅಮ್ಮನ ದೇಹ ದಂಡನೆ ಯಾರಿಗಾಗಿ?
ಹಸಿವಿನಿಂದ ಕಿರ್ರೋ ಎನ್ನುವ
ನನಗೆ ಬಾಟಲಿ ಹಾಲು ತರುವುದಕ್ಕಾಗಿರಬಹುದ?
ಅಮ್ಮನ ಮೊಲೆ ಹಾಲೇ ಸಾಕಿತ್ತಲ್ಲ ಎಳೆಗೂಸಾದ ನನ್ನ ಪಾಲಿಗೆ
ಹೋ.. ಊರ ಗೌಡ ಹೀರಿ ಹಾಕಿ
ಬತ್ತಿ ಹೋಗಿದೆ ಅಮ್ಮನ ಮೊಲೆಯೂ!

ಅಮ್ಮ ಯಾಕೆ ರಾತ್ರಿ ಮಾತ್ರ ದುಡಿಯುತ್ತಾಳೆ ಹಗಲೆಂದರೆ ಅವಳಿಗೆ ಭಯವೇ?
ಕಡು ಕತ್ತಲಲ್ಲಿ ನನ್ನನ್ನು ಒಬ್ಬಂಟಿಯಾಗಿಸಿ ಮಲಗಿಸಿ ಹೋಗುತ್ತಾಳಲ್ಲ ನನಗೆ ಭಯವಿಲ್ಲವೇ?
ಕೆಲಸ ಮುಗಿಸಿ ಬಂದಾಗಲೂ ಅಮ್ಮ ನನ್ನನ್ನು ಮುದ್ದುಗರೆಯುವುದಿಲ್ಲ;
ಅವಳದ್ದೇ ಸಂಕಟಕ್ಕೆ ಮರುಗುತ್ತಿರುತ್ತಾಳೆ
ಆಕೆಯ ಕೆನ್ನೆ ಮತ್ತು ಎದೆಯಲ್ಲಿನ ತರಚಿದ ಗಾಯಗಳಿಗೆ ಔಷಧಿ ಹಚ್ಚಿ ಒರಲುತ್ತಾಳೆ

ಅಮ್ಮ ನಕ್ಕಿದ್ದನ್ನು ಕಂಡೇ ಇಲ್ಲ
ಅವಳು ನಗುವುದನ್ನೇ ಮರೆತಿದ್ದಾಳ?
ಕೊಬ್ಬಿ ಶಾಖವಾಗಿ ಉನ್ಮಾದದಿಂದ ಹೂಂಕರಿಸುವವರಿಗೆ ಅಮ್ಮ ವ್ಯಾಪಾರವಾಗಿದ್ದಾಳ?
ಅಮ್ಮನಿಗೊಂದಿಷ್ಟು ವಿರಾಮ ಕೊಡು ದೇವರೇ ಒಮ್ಮೆಯಾದರೂ ಅವಳ ಮಡಿಲಲ್ಲಿ ಮಗುವಾಗುತ್ತೇನೆ
“ಅಮ್ಮ ನಾನು ನಿನ್ನ ಮಗ” ಎಂದು ಕೂಗಿ ಕೂಗಿ ಹೇಳುತ್ತೇನೆ

ಅಯ್ಯೋ! ದೇವರೇ ನೀನೆಷ್ಟು ಕ್ರೂರಿ
ನನ್ನ ಮಗ್ಗುಲಲ್ಲೇ ಮಲಗಿದ್ದ ಅಮ್ಮ ಈಗ ಕಾಣೆಯಾಗಿದ್ದಾಳಲ್ಲ!
ಕಚ್ಚೆ ಹರುಕ ಸೇಠುವಿನ ಮನೆಯ ಬಾಗಿಲು ತಟ್ಟುತ್ತಿರಬಹುದ?

‍ಲೇಖಕರು Admin

18 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading