ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೀಕ್ಷಿತ್ ನಾಯರ್ ಕವಿತೆ- ನನ್ನ ಅಮ್ಮ ರೂಪವತಿ…

ದೀಕ್ಷಿತ್ ನಾಯರ್

ನಾನು ಆಗಿನ್ನು ಗರ್ಭಸ್ಥ ಶಿಶು
ಅಪ್ಪ ಅಮ್ಮನ ಮಾತುಗಳಿಗೆ ಕಿವಿಯಾಗುತ್ತಿದ್ದೆ; ನನಗೆ ಆಗಾಗ್ಗೆ “ಅರೆ! ಅಪ್ಪ ಕವಿ  ಇರಬಹುದೇ?” ಎನಿಸುತ್ತಿತ್ತು: ಅಮ್ಮನನ್ನು ಹೊಗಳಲು ಅವನು ಎಲ್ಲೆಲ್ಲಿಂದಲೋ ಪದಗಳನ್ನು ಹೆಕ್ಕಿ ತಂದು ಕವಿತೆಗಳನ್ನು ಹೆಣೆಯುತ್ತಿದ್ದ

“ನಿನ್ನ ಹಣೆಯ ಸಿಂಧೂರ ನಾನಾಗಬಾರದೆ?
ಘಲ್ಲೆನ್ನುವ ನಿನ್ನ ಕೈಗಳ ಬಳೆ ನಾನಾಗಬಾರದೆ?
ನಿನ್ನ ನೀಳ ಜಡೆಗೆ ಹೂವು ನಾನಾಗಬಾರದೆ?
ನಿನ್ನ ಸೌಂದರ್ಯ ಆಗಸದ ತಾರಾಂಗಣವನ್ನು ಹೋಲುತ್ತದೆ”
ಅಪ್ಪ ಹೀಗೆ ಅಮ್ಮನ ಮುಂದೆ ಕಾವ್ಯ ಕುಸುರಿ ಕೆಲಸ ಶುರು ಹಚ್ಚಿಕೊಳ್ಳುತ್ತಿದ್ದ;
ಅಮ್ಮನದ್ದೇನೂ ಪ್ರತಿಕ್ರಿಯೆ ಇರುತ್ತಿರಲಿಲ್ಲ
ಅವಳು ಉಗುರು ಕಚ್ಚುತ್ತಾ ನಾಚಿಕೊಂಡು ತಲೆ ತಗ್ಗಿಸುತ್ತಿದ್ದಳ?
ಅಬ್ಬಾ! ಅಮ್ಮ ಅದೆಂತಹ ಅನುರೂಪ ಸುಂದರಿ ಇರಬೇಕು?
ನನಗೆ ನಾನೇ ಅಂದುಕೊಳ್ಳುತ್ತಿದ್ದೆ

ದಿನ ಕಳೆಯುತ್ತಾ ಅಪ್ಪನ ಕವಿತೆಗಳೇ ಕಿವಿಗೆ ಬೀಳಲಿಲ್ಲ
ಹೊರಗೆನೋ ಪ್ರಲಾಪದ ಸದ್ದು;
ಇದೇಕೆ ಹೀಗಾಯಿತು? ಎಂದುಕೊಂಡೆ
ಈಗ ನಾನು ಅಂಬೆಗಾಲಿಡುವ ಕೂಸು
ಅಮ್ಮನನ್ನು ಪಿಳಿಪಿಳಿ ನೋಡಿದೆ
ಅದೆಲ್ಲೋ ಮೂಲೆಯಲ್ಲಿ ಕುಳಿತ್ತಿದ್ದಾಳೆ
ಆಕೆಯ ಕಣ್ಣೀರು ಕೆನ್ನೆಗಿಳಿದಿವೆ
ಕಾರಣ ತಿಳಿಯಲಿಲ್ಲ;
ಅಪ್ಪ ಹೇಳುತ್ತಿದ್ದಂತೆ ಅಮ್ಮ ನಿಜಕ್ಕೂ ರೂಪವತಿ

ಅಯ್ಯೋ! ಅಪ್ಪ ಅದೆಷ್ಟು ಹುಸಿ ನುಡಿದಿದ್ದ;
ಅಮ್ಮನ ಬಂಗಾರದಂತಹ ಹಣೆಯಲ್ಲಿ ಈಗ ಕುಂಕುಮವಿಲ್ಲ
ಬರೀ ಬೋಳು ಬೋಳು
ಕೈಯಲ್ಲೂ ಒಂಟಿ ಬಳೆ ಇಲ್ಲ
ಜಡೆಯೂ ಜಾಳು ಜಾಳಾಗಿದೆ
ಆಸೆ ಬುರುಕ ಅಪ್ಪ ಅವನಿಗೆ ಇಷ್ಟವೆಂದು ಅಮ್ಮನ ಹೂವು ಬಳೆ ಸಿಂಧೂರವನ್ನು ಕೊಂಡು ಹೋಯ್ದನೆ?
ಅವುಗಳಿಲ್ಲದಿದ್ದರೂ  ನನ್ನ ಅಮ್ಮ ಸೌಂದರ್ಯವತಿ!

‍ಲೇಖಕರು Admin

25 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading