ದಿವಾನಾ ಕಾಟ್ ಮಾಡಿಸಿದ್ದು…

ಡಾ ಎಸ್ ಬಿ ರವಿಕುಮಾರ್

ಕೃಶವಾಗಿ ಕಂಡ ನಾಯಿಯನ್ನು ನೋಡುತ್ತ ‘ನೀವು ಆಹಾರ ಏನುಕೊಡ್ತೀರಿ ಇದಕ್ಕೆ?’ ತಮ್ಮನ್ನು ತಾವು ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದ ಮಾಲೀಕರನ್ನು ಕೇಳಿದೆ. ಎಂಥದೋ ಸಿಂಗ್ ಎಂದು ಹೇಳಿದ್ದು ಕೇಳಿಸಿತ್ತೇ ಹೊರತು ಅವರ ಹೆಸರು ಸರಿಯಾಗಿ ಕೇಳಿಸಿರಲಿಲ್ಲ. 

ಸಿಡುಕು ಮುಖದ, ಕೃಶವಾದ, ಎತ್ತರವಾದ ನಿಲುವಿನ ವ್ಯಕ್ತಿಯ ದಪ್ಪ ಪೊದೆ ಮೀಸೆ ವಿಲಕ್ಷಣವಾಗಿ ಕಾಣುತ್ತಿದ್ದುದರಿಂದ ಆ ಮನುಷ್ಯನ ಹೆಸರನ್ನು ಮತ್ತೆ ಕೇಳಲು ಮನಸ್ಸಾಗಲಿಲ್ಲ. ಸಿಂಗ್ ಎಂದರೆ ಸಿಂಹ ಎಂದು ಅರ್ಥವಂತೆ ಹಾಗಾಗಿ ಹೆಸರಿಗನುಗುಣವಾಗಿ ಹೆದರಿಕೊಳ್ಳಲಿ ಎಂದು ಪೊದೆ ಮೀಸೆ ಬಿಟ್ಟಿದ್ದರೇನೋ? ಸಿಂಗ್ ಹೆಸರಿನ ಅಡ್ಡ ಹೆಸರಿನವರು ಈ ಭಾಗದಲ್ಲಿ ಅನೇಕರು ಇರುವುದು ಗಮನಕ್ಕೆ ಬಂದಿತ್ತು. ಮೂಲತಃ ಉತ್ತರ ಭಾರತದ ಕಡೆಯವರಂತೆ. ಹಿಂದಿನ ಯಾವುದೋ ತಲೆಮಾರು ಇಲ್ಲಿಗೆ ಬಂದಿರಬೇಕು.

‘ಇನ್ನೇನು ಕೊಡ್ತಾರೆ ಎಲ್ಲರೂ ಕೊಟ್ಟಂತೆ ನಾವೂ ಕೊಡ್ತೀವಿ ಅಷ್ಟೇ’ ಗಡುಸಾದ ದನಿಯಲ್ಲಿ, ಅಸಹನೆ, ಅಸಡ್ಡೆಯಿಂದ ಸಿಂಗ್ ಉತ್ತರಿಸಿದರು. ನಮ್ಮ ವೃತ್ತಿಯಲ್ಲಿ ಇಂಥ ವ್ಯಕ್ತಿಗಳು ಅಪರೂಪವೇನಲ್ಲ. ‘ಸರಿ ಆಯ್ತು ಸಮಸ್ಯೆ ಏನು ಹೇಳಿ’ ಎಂದು ತಾಳ್ಮೆಯಿಂದಲೇ ಕೇಳಿದೆ. ಮೋಟು ಬಾಲದ ಡಾಬರ್ಮನ್ ನಾಯಿಗೆ ಒಂದು ವಿಚಿತ್ರವಾದ ಸಮಸ್ಯೆ ಇತ್ತು. ಮೊದಲೇ ಬಾಲವನ್ನು ಕತ್ತರಿಸಿದ್ದರಿಂದ ಹಿಂಭಾಗ ಸ್ಪಷ್ಟವಾಗಿ ಕಾಣುತ್ತಿತ್ತಷ್ಟೇ. ಒಂದೊಂದು ದಿನ ಬಾಲದ ಕೆಳಗೆ ಊತ ಕಾಣಿಸುತ್ತಿತ್ತು ಅದೂ ದೂರದಿಂದಲೇ ಅಸಹ್ಯವಾಗಿ ಕಾಣುವಷ್ಟು ದೊಡ್ಡದಾಗಿ. ಊತ ಹೆಚ್ಚಿದ್ದಾಗ ಸರಿಯಾಗಿ ಊಟಮಾಡುವುದಿಲ್ಲ. ಆನಂತರ ಒಂದೆರಡು ದಿನಗಳ ನಂತರ ಸರಿಯಾಗುತ್ತದೆ. 

ಊತ ಯಾವ ದಿನ ಇರುತ್ತದೆ ಯಾವ ದಿನ ಇರುವುದಿಲ್ಲ ಎಂದು ಹೇಳಲಾಗುವುದಿಲ್ಲ ಎಂದು ವಿವರವಾಗಿ ಹೇಳಿದ ಸಿಂಗ್ ಕೊನೆಗೆ ‘ಚಿಕಿತ್ಸೆ ಕೊಡಿಸಿ ಕೊಡಿಸಿ ಸಾಕಾಗಿದೆ’ ಸ್ವಗತವೇನೋ ಎಂಬಂತೆ ಆದರೆ ನನಗೆ ಸ್ಪಷ್ಟವಾಗಿ ಕೇಳುವಂತೆ ಉದ್ಗರಿಸಿದರು. ನಾಯಿಯನ್ನು ಟೇಬಲ್ ಮೇಲೆ ಹಾಕಿಸಿ ಪರೀಕ್ಷಿಸುತ್ತಿರುವಾಗ ‘ಯು ಹ್ಯಾವ್ ಟು ಸಾಲ್ವ್ ದಿಸ್ ಪ್ರೊಬ್ಲೆಂ. ಐ ಷಾಲ್‌ ಸಿ ವಾಟ್ ಯು ವಿಲ್ ಡೂ’ ಎಂದು ವಿಚಿತ್ರವಾದ ಗತ್ತಿನಿಂದ ನಾಯಿಯ ಚಿಕಿತ್ಸೆಯ ಹೊಣೆಗಾರಿಕೆಯನ್ನು ನನ್ನ ಹೆಗಲಿಗೇರಿಸಿದರು. ಅವರ ಮಾತಿನಲ್ಲಿ ಯೋಗ್ಯ ಡಾಕ್ಟರಾದರೆ ಇದನ್ನು ಸರಿಮಾಡು ಎಂಬ ಪರೋಕ್ಷ ಸವಾಲು ಧ್ವನಿಸಿದಂತಾಯಿತು.

ಪರೀಕ್ಷಿಸಿದ ಮೇಲೆ ‘ಪೆರಿನಿಯಲ್ ಹರ್ನಿಯ ಆಗಿದೆ. ಇದಕ್ಕೆ ಶಸ್ತ್ರ ಚಿಕಿತ್ಸೆ ಆಗಬೇಕು’ ಹೇಳಿದೆ. ಚಕಿತರಾದಂತೆ ಕಂಡಸಿಂಗ್ ‘ಹಿಂದೆ ನೋಡಿದ್ದ ಡಾಕ್ಟರು ಯಾರೂ ಈ ರೀತಿ ಹೇಳಲೇ ಇಲ್ಲ…’ ಎಂದು ಸಿಂಗ್ ಎಳೆದರಾಗದಲ್ಲಿ‘ ನೀವು ಈ ರೀತಿ ಹೇಳುತ್ತಿದ್ದೀರಲ್ಲ?’ ಆಕ್ಷೇಪಿಸುವ ವಾಕ್ಯ ನನ್ನ ಮನದಲ್ಲೇ ಸಂಪೂರ್ಣಗೊಂಡಿತು. ‘ಇಲ್ಲ ಇದು ಶಸ್ತ್ರ ಚಿಕಿತ್ಸೆ ಕೇಸು. ಐಯಾಂ ಶೂರ್ ಅಬೌಟಿಟ್. ಹಿಂದೆ ಸಾಮಾನ್ಯ ಬಾವು ಎಂದು ಚಿಕಿತ್ಸೆ ನೀಡಿರಬಹುದು. ಇರಲಿ ಪರವಾಗಿಲ್ಲ, ಈಗ ಡಯಾಗ್ನೋ ಸಿಸ್ ಆಗಿದೆಯಲ್ಲ. ಶಸ್ತ್ರ ಚಿಕಿತ್ಸೆ ಮಾಡೋಣ ಸರಿ ಆಗುತ್ತದೆ’ ಎಂದೆ.

ಸಿಂಗ್‍ಗೆ ಏನೋ ಅನುಮಾನ. ‘ಆಪರೇಷನ್ ಮಾಡಿದರೆ ಗ್ಯಾರಂಟಿ ಸರಿ ಹೋಗುತ್ತದೆ ತಾನೆ? ನನಗೆ ಬಹಳ ದಿನಗಳಿಂದ ಈ ಸಮಸ್ಯೆ ನೋಡಿ ನೋಡಿ ಸಾಕಾಗಿ ಹೋಗಿದೆ. ಹಿಂದಿನ ಡಾಕ್ಟರೂ ಸರಿಯಾಗುತ್ತದೆ ಎಂದೇ ಚಿಕಿತ್ಸೆ ನೀಡಿದ್ದರು’ ಎಂದು ಮತ್ತೊಮ್ಮೆ ಅಸಹನೆ ವ್ಯಕ್ತಪಡಿಸಿದರು. ಶಸ್ತ್ರಚಿಕಿತ್ಸೆಗೆ ಬೇಕಾದ ಕ್ಯಾಟ್‌ಗಟ್, ಅರಿವಳಿಕೆ ಔಷಧಿ ಮುಂತಾದುವುಗಳನ್ನು ಬರೆದು ಕೊಟ್ಟಾಗ ‘ಯಾಕೆ ನಿಮ್ಮ ಆಸ್ಪತ್ರೆಯಲ್ಲಿ ಸಪ್ಲೈ ಇಲ್ಲವೇ?’ ಆಶ್ಚರ್ಯದಿಂದ ಕೇಳಿದರು.

ಆಗೆಲ್ಲ ಶಸ್ತ್ರಚಿಕಿತ್ಸೆ ಮಾಡುವವರೇ ಕಡಿಮೆ ಇದ್ದುದರಿಂದ ಅದಕ್ಕೆ ಸಂಬಂಧಿಸಿದ ಔಷಧಿಗಳ ಸರಬರಾಜು ಇರಲಿಲ್ಲ. ನಾನು ‘ಇಲ್ಲ ಶಸ್ತ್ರಚಿಕಿತ್ಸೆಗೆ ಬೇಕಾದವುಗಳು ಸರಬರಾಜು ಆಗುವುದಿಲ್ಲ.’ ‘ಯಾಕೆ ಆಗುವುದಿಲ್ಲ. ಮತ್ತೆ ಆಸ್ಪತ್ರೆ ಏಕಿದೆ?’ ಕುತೂಹಲ ಭರಿತ ಪ್ರಶ್ನೆ. ಸರಿಯಾಗಿ ಔಷಧಿ ಸರಬರಾಜು ಇಲ್ಲದಿದ್ದರೆ ಆಸ್ಪತ್ರೆ ಇದ್ದು ಪ್ರಯೋಜನವೇನು ಎನ್ನುವುದು ಅವರ ಅನುಮಾನ. ‘ಇಲ್ಲ ನಾಯಿಗಳಿಗೆ ಬೇಕಾದ ಔಷಧಿ, ವಿಶೇಷವಾಗಿ ಶಸ್ತ್ರಚಿಕಿತ್ಸೆಗೆ ಬೇಕಾದವುಗಳನ್ನು ಹೊರಗಡೆಯಿಂದಲೇ ತರಬೇಕು.

ಆಸ್ಪತ್ರೆಯಲ್ಲಿ ದನ ಎಮ್ಮೆ ಎತ್ತುಗಳ ಮೂಲಭೂತ ಚಿಕಿತ್ಸೆಗೆ ಬೇಕಾದ ಔಷಧಿಗಳಷ್ಟೇ ಸರಬರಾಜಾಗುತ್ತವೆ’ ಎಂದು ಅವರಿಗೆ ಪಶುಆಸ್ಪತ್ರೆಗಳ ಉದ್ದೇಶ ಮನವರಿಕೆ ಮಾಡುವಷ್ಟರಲ್ಲೆ ಸಾಕಾಗಿ ಹೋಯಿತು. ಬ್ಯಾಂಕಿನ ಅಧಿಕಾರಿ ಎನ್ನುತ್ತಾರೆ. ಅತ್ಯಂತ ಪ್ರೀತಿ ಪಾತ್ರ ನಾಯಿ ಎನ್ನುತ್ತಾರೆ. ಆದರೆ ಅದಕ್ಕೆ ಖರ್ಚುಮಾಡಲು ತಯಾರಿಲ್ಲದ ಜಿಪುಣತನವೋ ಅಥವಾ ಸರ್ಕಾರ ಸರಬರಾಜು ಮಾಡಿದ ಔಷಧಿ ಇತ್ಯಾದಿಗಳನ್ನು ಅಧಿಕಾರಿಗಳು ಮಾರಿಕೊಂಡು ನಮಗೆ ಬರೆದು ಕೊಡಬಹುದು ಎಂಬ ಗುಮಾನಿಯೋ? ಎರಡೂ ಇದ್ದರೂ ಇರಬಹುದೆನಿಸಿತು.  

ಶಸ್ತ್ರಚಿಕಿತ್ಸೆ ನಂತರ ಪ್ರತಿದಿನ ಡ್ರೆಸ್ಸಿಂಗಿಗೆ ಬರುಬರುತ್ತಾ ಸಿಂಗ್ ದನಿಯಲ್ಲಿ ವ್ಯತ್ಯಾಸ ಕಾಣತೊಡಗಿತು. ಆಪರೇಷನ್ನಿನ ನಂತರ ನಂಬಿಕೆ ಬಂದಿರಬಹುದು. ಮೊದಲಿನ ಅಸಹನೆ, ಗತ್ತು ಕಾಣುತ್ತಿರಲಿಲ್ಲ. ಏಳನೇ ದಿನ ಹೊಲಿಗೆ ಬಿಚ್ಚಿ, ಇನ್ನು ಕೆಲವು ದಿನ ಇಷ್ಟು ದಿನ ನೋಡಿಕೊಂಡಂತೆ ಹುಷಾರಾಗಿ ನೋಡಿಕೊಳ್ಳಿ. ಆಮೇಲೆ ಏನೂ ತೊಂದರೆಯಿಲ್ಲ ಎಂದು ಹೇಳಿ ಕಳಿಸಿದೆ. ಸಿಂಗ್ ಪ್ರಸನ್ನ ಚಿತ್ತರಾಗಿದ್ದುದು ಅವರ ನಗುಮುಖದಿಂದಲೇ ತಿಳಿಯುತ್ತಿತ್ತು.

ಒಮ್ಮೆ ಬ್ಯಾಂಕಿಗೆ ಹೋಗಿ, ಅಕೌಂಟ್ ತೆರೆಯಲು ಬೇಕಾದ ಫಾರಂಗಳನ್ನು ತೆಗೆದುಕೊಂಡು, ಏನೇನು ದಾಖಲೆಗಳನ್ನು ತರಬೇಕು ಎಂಬುದರ ಬಗ್ಗೆ ವಿಚಾರಿಸುತ್ತಿದ್ದೆ. ‘ಡಾಕ್ಟರ್ಸಾಬ್’ ಎಂಬ ಪರಿಚಿತ ದನಿ ಕೇಳಿತು. ಎರಡು ಕೌಂಟರ್ ಆಚೆಯಿಂದ ಸಿಂಗ್ ನಿಂತುಕೊಂಡು ನನ್ನನ್ನು ಕರೆಯುತ್ತಿದ್ದರು. ಹೋದೆ. ‘ಏನು ಸಮಾಚಾರ ನಮ್ಮ ಬ್ಯಾಂಕಿಗೆ ಬಂದಿದ್ದೀರಿ?’ ಬ್ಯಾಂಕಿಗೆ ಬಂದ ಉದ್ದೇಶ ಹೇಳಿ ‘ಹೇಗಿದೆ ನಿಮ್ಮ ನಾಯಿ?’ ನನ್ನ ರೋಗಿಯ ಬಗ್ಗೆ ವಿಚಾರಿಸಿದೆ ‘ಓ ಫಸ್ಟ್‌ ಕ್ಲಾಸ್. ಕುಳಿತುಕೊಳ್ಳಿ’ ಎಂದು ತಮ್ಮ ಎದುರಿನ ಕುರ್ಚಿ ತೋರಿಸಿದರು. ‘ನನಗಂತೂ ತೋರಿಸಿ ತೋರಿಸಿ ಸಾಕಾಗಿ ಹೋಗಿತ್ತು. ಈಗ ಬಹಳ ಚನ್ನಾಗಿದೆ. ಆಪರೇಷನ್ ನಂತರ ಮತ್ತೆ ಎಂದೂ ಊತ ಬಂದಿಲ್ಲ ಅಲ್ಲದೆ ಊಟ ಕೂಡಾ ಚನ್ನಾಗಿ ಮಾಡುತ್ತಿದ್ದಾನೆ’ ಎಂದರು ಹರ್ಷದಿಂದ. ಅವರ ಕಣ್ಣುಗಳಲ್ಲಿ ಕೃತಜ್ಞತೆ ಸೂಸುತ್ತಿತ್ತು. 

ನನ್ನ ಕೈಯಲ್ಲಿನ ಫಾರಂ ನೋಡಿದವರೆ ‘ತೆಗೆದು ಕೊಂಡಿರಾ ಫಾರಂಗಳನ್ನು?’ ಎನ್ನುತ್ತ ಅವುಗಳನ್ನು ತೆಗೆದುಕೊಂಡು ಪರಿಶೀಲಿಸಿ, ‘ಇವನ್ನೆಲ್ಲಾ ತುಂಬಿ ನಿಮ್ಮ ಜವಾನನ ಹತ್ತಿರ ನನ್ನ ಬಳಿ ಕೊಡಲು ಹೇಳಿ. ನಾನು ಅಕೌಂಟ್ ಓಪನ್ ಮಾಡಿಸಿಕೊಡುತ್ತೇನೆ’ ಎಂದದ್ದಲ್ಲದೆ ಬೇಡ ಎಂದರೂ ಟೀ ತರಲು ಸಹಾಯಕನನ್ನು ಕಳಿಸಿದರು. ಬ್ಯಾಂಕಿನ ನಂಬರು ಕೊಟ್ಟು, ಏನೇ ಬ್ಯಾಂಕಿನ ಕೆಲಸವಿದ್ದರೂ ಫೋನು ಮಾಡಿ ಎಂದು ಆತ್ಮೀಯತೆ ಮೆರೆದರು. ಮೊದಲ ದಿನ ನಾನು ನೋಡಿದ ಸಿಂಗ್‍ಗೂ ಇಂದಿನ ಸಿಂಗ್‍ಗೂ ಅಜಗಜಾಂತರ ವ್ಯತ್ಯಾಸ ಕಾಣಿಸಿತು. 

ಎರಡು ತಿಂಗಳ ನಂತರ ಸಿಂಗ್ ಅಮ್ಮ ನಾಯಿಯನ್ನು ವ್ಯಾಕ್ಸೀನು ಹಾಕಿಸಲು ತಂದರು. ಆಪರೇಷನ್‍ಗೆ ಬಂದಾಗಲೇ ನಾನು ಕ್ರಮಬದ್ಧವಾಗಿ ಜಂತಿನ ಔಷಧಿ ಕೊಡುವ ಬಗ್ಗೆ, ರೋಗ ನಿರೋಧಕ ಲಸಿಕೆ ಕೊಡಿಸುವ ಅವಶ್ಯಕತೆ, ಅನಿವಾರ್ಯತೆ ಬಗ್ಗೆ ಹೇಳಿ, ‘ಹಾಗೆ ನೋಡಿದರೆ ನೀವು ನಾಯಿಗೆ ಇವುಗಳನ್ನು ಕೊಡಿಸುವುದು ಅದರ ಒಳಿತಿಗೆ ಅನ್ನುವುದಕ್ಕಿಂತ ನಿಮ್ಮ ಒಳಿತಿಗೆ. ಮನೆಯಲ್ಲಿನ ನಿಮ್ಮ ಎಲ್ಲರ ಆರೋಗ್ಯ ರಕ್ಷಣೆಗೆ’ ಎಂದು ನಾಯಿಗಳಿಂದ ಮನುಷ್ಯರಿಗೆ ಬರುವ ಕೆಲವು ರೋಗಗಳ ಬಗ್ಗೆ ವಿವರಿಸಿದ್ದೆ. 

ಲಸಿಕೆ ಕೊಡುವ ಮೊದಲು ಹೊಟ್ಟೆಯಲ್ಲಿರಬಹುದಾದ ಹುಳುಗಳಿಗೆ ಔಷಧಿ ಕೊಡಬೇಕು. ಇಲ್ಲವಾದರೆ ರೋಗ ನಿರೋಧಕ ಶಕ್ತಿ ನಿರೀಕ್ಷಿತ ಪ್ರಮಾಣದಲ್ಲಿ ಆಗುವುದಿಲ್ಲ ಆದ್ದರಿಂದ ‘ಇಂದು ಹುಳುಗಳಿಗೆ ಔಷಧಿ ಕೊಡುತ್ತೇನೆ. ಮುಂದಿನವಾರ ವ್ಯಾಕ್ಸಿನ್ ಹಾಕೋಣ’ ಎಂದು ಔಷಧಿ ಕೊಟ್ಟು ಕಳಿಸಿದೆ. ಕರಾರುವಾಕ್ಕಾಗಿ ಒಂದು ವಾರದ ನಂತರ ಸಿಂಗ್ ನಾಯಿ ತಂದರು. ಇನ್ನು ಒಂದು ವರ್ಷ ನಿಮಗೆ ನಾಯಿಗಳಿಂದ ಬರಬಹುದಾದ ಯಾವ ರೋಗದ ಭಯವೂ ಇರುವುದಿಲ್ಲ, ಮುಂದಿನವರ್ಷ ಇದೇ ದಿನಾಂಕದಂದು ಮತ್ತೆ ಲಸಿಕೆ ಹಾಕಿಸಿ. ಮಾಹಿತಿ ಕೊಟ್ಟೆ. ‘ಸಿಂಗ್ ಇಷ್ಟು ದಿನ ನಾನು ಲಸಿಕೆ ಹಾಕಿಸದೇ ಇಟ್ಟುಕೊಂಡು ಬಿಟ್ಟಿದ್ದೆ. ಸಧ್ಯ ಏನೂ ತೊಂದರೆ ಆಗಲಿಲ್ಲ’ ಎಂದು ಸಮಾಧಾನ ವ್ಯಕ್ತಪಡಿಸಿದರು.

ಬ್ಯಾಕಿನ ಕೆಲಸಗಳಿಗೆ ನಾನು ಮುಂದೆ ಎಂದೂ ಸ್ವತಃ ಹೋಗಲೇ ಇಲ್ಲ. ಫೋನು ಮಾಡಿ ಜವಾನನನ್ನು ಕಳಿಸಿದರೆ ಆದ್ಯತೆಯ ಮೇಲೆ ಕೆಲಸ ಮಾಡಿಕೊಡುತ್ತಿದ್ದರು. ರಸ್ತೆಯಲ್ಲಿ ಆಗಾಗ ಸಿಕ್ಕಾಗ ವಾಹನ ನಿಲ್ಲಿಸಿ ಮಾತನಾಡಿಸುತ್ತಿದ್ದರು. ಅಂತೂ ಸಿಂಗ್ ಆತ್ಮೀಯರಾಗಿಬಿಟ್ಟರು.

ಒಂದು ಸಂಜೆ ಫರ್ನಿಚರ್ ಅಂಗಡಿಯಿಂದ ಹೊರ ಬಂದು ಬೈಕು ಸ್ಟಾರ್ಟ್ ಮಾಡುತ್ತಿದ್ದೆ. ‘ಏನು ಡಾಕ್ಟರು ಇಲ್ಲಿ?’ ಯಾವುದೋ ಪರಿಚಿತ ದನಿ.  ತಿರುಗಿ ನೋಡಿದರೆ ಒಂದು ಕಾಲು ನೆಲಕ್ಕೂರಿ ಸ್ಕೂಟರ್ ಮೇಲೆ ಕುಳಿತಿರುವ ಸಿಂಗ್! ‘ಏನಿಲ್ಲ ಒಂದು ದಿವಾನಾ ಕಾಟ್ ಮಾಡಿಸಬೇಕಿತ್ತು. ವಿಚಾರಿಸಿಕೊಂಡು ಹೋಗೋಣ ಎಂದುಕೊಂಡು ಬಂದಿದ್ದೆ’ ಎಂದು ಹೇಳಿದೆ. ‘ಹೌದಾ ಹಾಗಾದರೆ ಸರಿಯಾದ ಸಮಯಕ್ಕೇ ಸಿಕ್ಕಿದ್ದೀರಿ ಬನ್ನಿ ಟೀ ಕುಡಿಯುತ್ತ ಮಾತನಾಡೋಣ. ಅಶೋಕ ಹೋಟೆಲ್ ಬಳಿ ಬನ್ನಿ’ ಎಂದು ಹೊರಟರು. ನಾನು ಹಿಂಬಾಲಿಸಿದೆ.

ಬಂದ ವೇಟರ್‍ ಗೆ ಎರಡು ಟೀ ತರಲು ಹೇಳಿ, ‘ನೀವು ದಿವಾನಾಕಾಟ್ ಮಾಡಿಸುವುದಾದರೆ ನನಗೆ ಒಬ್ಬ ಕಾರ್ಪೆಂಟರ್ ಗೊತ್ತಿದ್ದಾನೆ. ಒಣಗಿದ ಮರ ಉಪಯೋಗಿಸಿ ತುಂಬಾ ಚನ್ನಾಗಿ ಮಾಡುತ್ತಾನೆ. ಚೀಪಾಗಿಯೂ ಮಾಡಿಕೊಡುತ್ತಾನೆ’ ಎಂದರು. ನನಗೆ ಖುಷಿಯಾಯಿತು. ಎರಡು ಮೂರು ಅಂಗಡಿಗಳಲ್ಲಿ ವಿಚಾರಿಸಿದ್ದೆ. ತಾವು ಮಾತ್ರ ಒರಿಜಿನಲ್ ಬೀಟೆ ಮರದಿಂದ ಮಾಡಿಸೋದು ಎಂದು ಪ್ರತಿಯೊಬ್ಬರೂ ಹೇಳಿದ್ದರು. ಅಲ್ಲದೆ ಒಬ್ಬರು ಒಂದೊಂದು ಬೆಲೆ ಹೇಳಿತಾವೇ ಅತ್ಯಂತ ಕಡಿಮೆದರದಲ್ಲಿ ಮಾಡಿಕೊಡುವವರು ಎಂಬಂತೆ ಮಾತನಾಡಿ ಗೊಂದಲ ಮೂಡಿಸಿದ್ದರು. 

ಇಷ್ಟು ಪರಿಚಯವಿರುವವರು ಈಗ ತಮಗೆ ಗೊತ್ತಿರುವ ಕಾರ್ಪೆಂಟರ್ ಬಳಿ ಮಾಡಿಸಿಕೊಡುತ್ತಾರೆ ಅದೂ ಚೀಪಾಗಿ ಎಂದಾಗ ಹರ್ಷವಾಗದೇ ಇರಲು ಸಾಧ್ಯವೇ? ‘ಏನು ನಿಮ್ಮ ಮನೆಗೆ ಆ ಬಡಗಿ ಬಳಿ ಫರ್ನಿಚರ್ ಮಾಡಿಸಿದ್ದಿರಾ’ ಕಾರ್ಪೆಂಟರ್ ಬಗ್ಗೆ ವಿಚಾರಿಸಿದೆ. ‘ಹೌದು ಮಾಡಿಸಿದ್ದೆ. ಆದರೆ ಅವನು ಬಹಳ ಕ್ಲೋಸ್ ಆಗಲು ಅದು ಕಾರಣವಲ್ಲ. ಒಮ್ಮೆ ಕಳ್ಳ ನಾಟಾ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಬಿಟ್ಟಿದ್ದ. ಆಗ ನನ್ನ ಸ್ನೇಹಿತರೇ ಆರ್‍ಎಫ್‍ಒ ಇದ್ದರು. ಅವರಿಗೆ ಹೇಳಿ ಬಚಾವ್ ಮಾಡಿಸಿದ್ದೆ. ಹಾಗಾಗಿ ಅವನು ಈಗ ನಾನು ಹೇಳಿದಂತೆಯೇ ಕೇಳುತ್ತಾನೆ. ಬಚಾವು ಮಾಡಿಸಿದ ಹಂಗಿನಲ್ಲಿದ್ದಾನಲ್ಲ? ಬೆಲೆಯೂ ಅಷ್ಟೇ. ನಾನು ಕೊಟ್ಟಷ್ಟು ತೆಗೆದುಕೊಳ್ಳುತ್ತಾನೆ. ದೂಸರಾ ಮಾತನಾಡುವುದಿಲ್ಲ.

ಹಾಗಂತ ಅವನಿಗೆ ನಾನು ಮೋಸವನ್ನೇನೂ ಮಾಡುವುದಿಲ್ಲ ಅಂತಿಟ್ಕೊಳ್ಳಿ. ನಿಮಗೆ ಒಂದು ಒಳ್ಳೆಯ ದಿವಾನಾ ಕಾಟ್ ಮಾಡಿಸಿಕೊಡುತ್ತೇನೆ. ಈ ಜವಾಬ್ದಾರಿ ನನಗೆ ಬಿಡಿ’ ಎಂದಾಗ ನಿಶ್ಚಿಂತೆಯಾಯಿತು. ಯಾರಾದರೂ ಬಂದರೆ ಕುಳಿತುಕೊಳ್ಳಲು ಹಾಗೂ ಗೆಸ್ಟ್ ಬಂದರೆ ಮಲಗಿಕೊಳ್ಳಲು ಎರಡೂ ಉದ್ದೇಶಕ್ಕೆ ಒಂದು ದಿವಾನಾ ಕಾಟ್ ಮಾಡಿಸಿ ಎಂದು ಆರು ತಿಂಗಳಿನಿಂದ ಪೀಡಿಸುತ್ತ ಹೆಂಡತಿ ಹಾಕಿದ್ದ ಭಾರವನ್ನು ಸಿಂಗ್ ನನ್ನ ತಲೆಯ ಮೇಲಿನಿಂದ ಕ್ಷಣಗಳಲ್ಲೇ ಇಳಿಸಿಬಿಟ್ಟರು.

ಸಿಂಗ್ ಒಂದು ದಿನ ಒಬ್ಬ ನರಪೇತಲನಾದ ಗಡ್ಡದ ವ್ಯಕ್ತಿಯನ್ನು ಕರೆದುಕೊಂಡು ಬಂದು ‘ಇವನೇ ಅಬ್ಬಾಸ್. ನಾನು ಹೇಳಿದ್ದೆನಲ್ಲ ಕಾರ್ಪೆಂಟರ್’ ಎಂದು ಪರಿಚಯಿಸಿ ‘ನಿಮಗೆ ಯಾವ ಮರದಲ್ಲಿ ದಿವಾನಾ ಕಾಟ್ ಬೇಕು?’ ಕೇಳಿದರು. ಮರಗಳ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲದಿದ್ದುದರಿಂದ ನನ್ನಷ್ಟಕ್ಕೇ ನಾನು ‘ಯಾವ ಮರ ಉತ್ತಮ?’ ಎಂದು ಗೊಣಗುತ್ತ ಅಬ್ಬಾಸ್ ಕಡೆ ನೋಡಿದೆ. ‘ಟೀಕ್‍ದು ಮಾಡಿಸಬೌದು ಇಲ್ಲಾಂದ್ರೆ ಬೀಟೆಮರದಲ್ಲೂ ಮಾಡಿಸಬೌದು. ನಿಮ್ಮ ಖಾಯಿಷ್ ಸಾಬ್’ ಎಂದ. ಸಿಂಗ್ ‘ಟೀಕ್ಬೇಡ. ಬೀಟೆಮರದಲ್ಲಿ ತುಂಬಾ ಚನ್ನಾಗಿರುತ್ತದೆ’ ಎಂದು ನನ್ನನ್ನು ಉದ್ದೇಶಿಸಿ ಹೇಳಿ, ಅಬ್ಬಾಸ್ ಕಡೆ ತಿರುಗಿ ‘ಬೀಟೆ ಮರದಲ್ಲೇ ಮಾಡು’ ಎಂದು ಆದೇಶಿಸಿದರು.

ನಾನು ಇವರು ಬರುತ್ತಾರೆಂದು ಗೊತ್ತಿಲ್ಲದಿದ್ದುದರಿಂದ ಅಡ್ವಾನ್ಸ್ ಕೊಡಲು ಹಣತಂದಿರಲಿಲ್ಲ. ಇರುವಷ್ಟನ್ನೇ ಕೊಟ್ಟರಾಯಿತು ಎಂದುಕೊಂಡು ಪ್ಯಾಂಟಿನ ಜೇಬಿನಿಂದ ಪರ್ಸ್ ತೆಗೆಯುತ್ತ ‘ಅಡ್ವಾನ್ಸ್ ಎಷ್ಟು ಕೊಡಬೇಕು?’ ಎಂದೆ. ಅಬ್ಬಾಸ್ ಏನನ್ನೋ ಹೇಳುವುದಕ್ಕೆ ಬಾಯಿ ತೆಗೆಯುವುದರೊಳಗೆ ಸಿಂಗ್ ‘ಛೇ ನಿಮ್ಮ ಹತ್ತಿರ ಅಡ್ವಾನ್ಸ್ ತೆಗೆದುಕೊಳ್ಳುತ್ತಾನಾ ಅಬ್ಬಾಸ್. ನೋನೋನೋ’ ಎಂದು ಅಬ್ಬಾಸ್ ಕಡೆ ತಿರುಗಿ ‘ದೇಖೋ ಬಾ ಅಚ್ಛಾಲ ಕಡಿಮೇ ಖೂಬ್ ದಿವಾನಾ ಕರ್ನಾ ಸಾಬ್ಕೊ. ಏ ದಿವಾನಾ ಕಾಟ್ ಮೇರೇ ಲಿಯೇ ಸಮಜೋ. ಎ ಮೆರಾ ಅಚ್ಛಾ ದೋಸ್ತ್’ ಎಂದು ಅಬ್ಬಾಸನಿಗೆ ಅಡ್ವಾನ್ಸ್ ಎಷ್ಟು ಎಂದು ಹೇಳುವುದಕ್ಕೇ ಅವಕಾಶ ಕೊಡದೆ ನಿರಾಸೆ ಮಾಡಿದರು. ನಂತರ ‘ಅಡ್ವಾನ್ಸೆಲ್ಲಾ ಏನೂ ಬೇಡ ಬಿಡಿ. ಮಾಡುತ್ತಾನೆ. ಒಂದೇ ಬಾರಿ ಕೊಟ್ಟರಾಯಿತು’ ಎಂದು ಅಕಸ್ಮಾತ್ ಅವನು ಕೇಳಿದ ಮೊತ್ತ ನನ್ನ ಬಳಿ ಇಲ್ಲದ್ದರಿಂದ ಆಗುವ ಮುಜುಗರದಿಂದ ಪಾರು ಮಾಡಿದರು. ಜೊತೆಗೆ ಬೇರೆ ಎಲ್ಲಾ ಕೆಲಸ ಬಿಟ್ಟು ಒಂದು ವಾರದಲ್ಲಿ ದಿವಾನಾ ರೆಡಿಯಾಗಬೇಕು ಎಂದು ಅಬ್ಬಾಸನಿಗೆ ತಾಕಿತು ಮಾಡುವುದನ್ನು ಮರೆಯಲಿಲ್ಲ.

ಸರಿಯಾಗಿ ಎಂಟನೇ ದಿನ ಸಿಂಗ್ ಫೋನು. ದಿವಾನಾ ಕಾಟ್ ರೆಡಿಯಾಗಿರುವುದಾಗಿಯೂ, ಮನೆಯ ವಿಳಾಸ ಹೇಳಿದರೆ ಅಲ್ಲಿಗೆ ಕಳಿಸುವುದಾಗಿಯೂ ಹೇಳಿ, ‘ದಿವಾನಾ ಚನ್ನಾಗಿ ಮಾಡಿದ್ದಾನಾ ಅಷ್ಟು ನೋಡಿಕೊಳ್ಳಿ. ಅವನು ಹಣ ಕೇಳಿದರೆ ದುಡ್ಡು ಕೊಡಲು ಹೋಗಬೇಡಿ. ನಾನು ಚೌಕಾಸಿ ಮಾಡಿ ಕಡಿಮೆ ಮಾಡಿಸುತ್ತೇನೆ. ಈಗಾಗಲೇ ಹಣವನ್ನು ಸಿಂಗ್‍ಗೆ ಕೊಟ್ಟಿರುವುದಾಗಿ ಹೇಳಿ ನನ್ನ ಹತ್ತಿರ ಇಸಿದುಕೊಳ್ಳಲು ಹೇಳಿ. ನಾನು ಆ ಮೇಲೆ ನಿಮ್ಮ ಹತ್ತಿರ ತೆಗೆದುಕೊಳ್ಳುತ್ತೇನೆ. ನನ್ನ ಹತ್ತಿರ ಆದರೆ ಅವನು ಮಾತನಾಡುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡಿಸುತ್ತೇನೆ’ ಎಂದು ಮತ್ತೊಮ್ಮೆ ಆಶ್ವಾಸನೆ ನೀಡಿದರು.

ಮಧ್ಯಾಹ್ನ ಊಟಕ್ಕೆ ಬಂದಾಗ ದಿವಾನಾ ಕಾಟ್ ಬಂದಿತು. ಅಬ್ಬಾಸ್ ತನ್ನ ಸಹಾಯಕನೊಂದಿಗೆ ಹತ್ತೇ ನಿಮಿಷದಲ್ಲಿ ದಿವಾನ ಫಿಟ್ ಮಾಡಿದ. ಬೇಟೆ ಮರದಲ್ಲಿ ಮಾಡಿದ ಮಿರಿಮಿರಿ ಮಿಂಚುವ ದಿವಾನಾ ನೋಡಿ ನನ್ನ ಶ್ರೀಮತಿ ‘ಇಷ್ಟು ದಿನ ಬಡ್ಕೋ ಬೇಕಾಯಿತು ನಿಮ್ಮ ಹತ್ತಿರ ಒಂದು ದಿವಾನಾ ಕಾಟ್ ಮಾಡಿಸಲು’ ಎಂದು ಕೊಂಕು ನುಡಿದರೂ, ದಿವಾನಾ ಕಂಡು ಆನಂದದಿಂದ ಸಂಭ್ರಮಿಸಿದಳು.

ಅಬ್ಬಾಸ್ ತನ್ನ ಜೊತೆ ಬಂದಿದ್ದ ಹುಡುಗನಿಗೆ ‘ಏಕ್ ಮಿನಿಟ್ ಬಾಹರ್ ಕಡೋ, ಪೈಸೆ ಲೇಕೆ ಆತೂ’ ಆದೇಶಿಸಿದ. ತಾನು ಎಷ್ಟು ಹಣ ತೆಗೆದುಕೊಳ್ಳುತ್ತೇನೆ ಎಂದು ಅವನಿಗೆ ಗೊತ್ತಾಗ ಬಾರದೆಂದು ಇರಬಹುದೇನೋ ಅವನು ಹೊರಗೆ ಹೋದ ನಂತರ ‘ಒಳ್ಳೆ ಒಣ ಮರ ಹಾಕಿ ಮಾಡಿರಾದು ಸಾಬ್, ಎಷ್ಟು ವರ್ಷ ಆದರೂ ಏನೂ ಆಗಲ್ಲ. ಒಂದು 3-4 ವರ್ಷ ಬಿಟ್ಟು ಪಾಲಿಷ್ ಹಾಕಿಸಿ ಬಿಟ್ಟರೆ ಮತ್ತೆ ನಿಮ್ ದಿವಾನಾ ಹೊಸದಾಗಿ ಬಿಡ್ತದೆ’ ಎಂದು ತಾರೀಫು ಮಾಡಿ ನನ್ನ ಹೆಂಡತಿಯ ಆನಂದವನ್ನು ಇನ್ನಷ್ಟು ಹೆಚ್ಚಿಸಿ ನನ್ನ ಕಡೆ ಹಣಕೊಡಿ ಎಂಬಂತೆ ನೋಡುತ್ತ ನಿಂತ. ನಾನು ‘ದುಡ್ಡು ಈಗಾಗಲೇ ಸಿಂಗ್‍ಗೆ ಕೊಟ್ಟಿದ್ದೇನೆ. ಅವರ ಬಳಿ ಇಸಿದುಕೊಳ್ಳಿ’ ಎಂದೆ. ‘ಓ ಹೌದಾ ಸಾಬ್ ಸರಿಬಿಡಿ’ ಮೆಲ್ಲಗೆ ತಲೆ ಕೆರೆದುಕೊಂಡ ಅಬ್ಬಾಸ್ ನಿರಾಶನಾಗಿದ್ದು ಸ್ಪಷ್ಟವಾಗಿತ್ತು. ಅರ್ಜೆಂಟ್ ಹಣಬೇಕಾಗಿತ್ತೇನೋ ಎನ್ನಿಸಿ, ‘ಈಗಾಗಲೇ ಅವರ ಬಳಿ ಕೊಟ್ಟಿದ್ದೇನೆ ನೀವು ಈಗಲೇ ಹೋಗಿ ಇಸಿದುಕೊಳ್ಳಬಹುದು’ ಎಂದು ಸಮಾಧಾನ ಮಾಡಿದೆ. 

ಅಷ್ಟರಲ್ಲೇ ನನ್ನ ಶ್ರೀಮತಿ ‘ಹಾಗೇ ಒಂದು ಡಬಲ್ ಕಾಟ್ ಕೂಡಾ ಮಾಡಿಸಿಬಿಡೋಣರೀ. ಅದೊಂದು ಆದರೆ ಎಲ್ಲ ಫರ್ನಿಚರ್ ಆದ ಹಾಗೆ ಆಗುತ್ತದೆ’ ಎಂದಳು. ನನಗೂ ಈ ಸಲಹೆ ಸರಿ ಎನ್ನಿಸಿತು. ಹೇಗೂ ಸಿಂಗ್ ಹಿಡಿತದಲ್ಲೇ ಇರುವ ಬಡಗಿ ಸಿಕ್ಕಿದ್ದಾನೆ. ಈಗಲೇ ಮಾಡಿಸಿಕೊಂಡು ಬಿಡೋಣ. ಮಾರ್ಕೆಟಿಗಿಂತ ಚೀಪಾಗಿ ಮಾಡಿಸಿಕೊಡುತ್ತೇನೆ ಎಂದು ಬೇರೆ ಹೇಳಿದ್ದಾರಲ್ಲ ಎಂದು ಯೋಚಿಸಿದೆ. ತಲೆ ಕೆರೆದುಕೊಳ್ಳುತ್ತ ನಿಧಾನವಾಗಿ ಹಿಂತಿರುಗುತ್ತಿದ್ದ ಅಬ್ಬಾಸನನ್ನು ಕರೆದು ಒಂದು ಡಬಲ್ ಕಾಟ್ ಮಾಡಲು ಎಷ್ಟು ದಿನಬೇಕು ಎಂದು ಕೇಳಿ ಅವನು 15-20 ದಿನ ಎಂದಾಗ ‘ಬೀಟೆ ಮರದಲ್ಲೇ ಇದೇ ರೀತಿ ಚನ್ನಾಗಿ ಒಂದು ಡಬಲ್ ಕಾಟ್ ಮಾಡಿಕೊಡಿ’ ಎಂದು ಕೆಲಸದ ಆದೇಶ ಕೊಟ್ಟೇಬಿಟ್ಟೆ. ಡಬಲ್ ಕಾಟ್ ಮಾಡಿಸಲು ಇಷ್ಟು ಬೇಗ ನಾನು ಒಪ್ಪಿಕೊಳ್ಳಬಹುದೆಂದು ನಿರೀಕ್ಷಿರದ ನನ್ನ ಶ್ರೀಮತಿಗೆ ಅತ್ಯಾನಂದವಾಯಿತು.

ಆಸ್ಪತ್ರೆಗೆ ಹೋದ ತಕ್ಷಣ ಸಿಂಗ್‍ಗೆ ಫೋನು ಮಾಡಿ, ದಿವಾನಾ ಕಾಟ್ ಬಂತೆಂದೂ, ಚನ್ನಾಗಿರುವುದಾಗಿಯೂ ಹೇಳಿದೆ. ‘ನೀವು ಹೇಳಿದ ಹಾಗೆ ಅಬ್ಬಾಸನಿಗೆ ದುಡ್ಡು ಕೊಟ್ಟಿಲ್ಲ. ನೀವು ಕೊಟ್ಟು ಎಷ್ಟು ಎಂತ ಹೇಳಿ ಸಂಜೆಯೇ ತಂದುಕೊಡುತ್ತೇನೆ ಹಾಗೆಯೇ ಒಂದು ಡಬಲ್ ಕಾಟ್ ಮಾಡಿಸಿಕೊಡಿ. ಅಬ್ಬಾಸನಿಗೆ ನಾನು ಹೇಳಿದ್ದೇನೆ’. ಎಂದೆ. ಸಿಂಗ್ ‘ಸರಿ ಬಿಡಿ ಸಂಜೆ ನಾನೇ ನಿಮ್ಮ ಬಳಿ ಬಂದು ಹಣ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದ್ದಲ್ಲದೆ ಡಬಲ್ ಕಾಟ್ ಮಾಡಿಸಿಕೊಡುವುದಾಗಿಯೂ ಒಪ್ಪಿಕೊಂಡರು. 

ಮೂರು ವಾರಗಳ ನಂತರ ನನ್ನ ಶ್ರೀಮತಿ ಇನ್ನೂ ಡಬಲ್ ಕಾಟ್ ಬರದಿರುವ ಬಗ್ಗೆ ಜ್ಞಾಪಿಸಿದಳು. ಸಿಂಗ್‍ಗೆ ಫೋನು ಮಾಡಿದೆ. ‘ಹೇಳಿದ್ದೇನೆ. ಮಾಡುತ್ತಾನೆ. ಒಣ ಮರ ಸಿಗಬೇಕಲ್ಲ. ತಡ ಆದರೂ ಪರವಾಗಿಲ್ಲ ಅವನು ನನಗೆ ಎಂದರೆ ಒಣ ಮರಸಿಗದೇ ಕಾಟ್ ಮಾಡುವುದಿಲ್ಲ’ ಎಂದು ಅಬ್ಬಾಸನನ್ನು ಮತ್ತೊಮ್ಮೆ ಹೊಗಳಿದರು.

ಅದಾದ ಎರಡು-ಮೂರುವಾರದ ನಂತರ ಒಮ್ಮೆ ಅಬ್ಬಾಸ್ ತಹಸಿಲ್ದಾರ್ ಕಛೇರಿ ಬಳಿ ಸಿಕ್ಕಾಗ ಕಾಟ್ ಎಲ್ಲಿಯವರೆಗೆ ಬಂದಿದೆ ಎಂದು ವಿಚಾರಿಸಿದೆ. ‘ಮಾಡುತ್ತಾ ಇದ್ದೀನಿ ಸಾಬ್. ಇನ್ನೊಂದು ಸ್ವಲ್ಪ ದಿನ. ಒಣಮರ ಸಿಗಬೇಕಲ್ಲ ತಡವಾಯಿತು’ ಎಂದ. ಈಗ ಮರಸಿಕ್ಕಿದೆಯೋ ಅಥವಾ ಇನ್ನೂ ಸಿಗಬೇಕೋ ಎಂದದ್ದಕ್ಕೆ ‘ಇಲ್ಲಾ ಸಾಬ್ ಸಿಕ್ಕಿದೆ ಮಾಡುತ್ತೀನಿ’ ಎಂದು ಹೇಳಿ ನಮಸ್ಕರಿಸಿ ಹೊರಟ. 

ಮತ್ತೆ ಹದಿನೈದು ದಿನಗಳಾದರೂ ಕಾಟ್ ಪತ್ತೆ ಇಲ್ಲ. ಸಿಂಗ್‍ಗೆ ದೂರವಾಣಿ ಮಾಡಿದೆ. ‘ನೀವು ಗಡಿಬಿಡಿ ಮಾಡಬೇಡಿ. ಅವನು ವಾತಾವರಣ ನೋಡಿಕೊಂಡು ಮರ ತಂದು ಮಾಡಬೇಕಲ್ಲ. ಮೊನ್ನೆ ಕರೆಸಿದ್ದೆ. ಮರಸಿಕ್ಕಿದೆಯಂತೆ. ಇನ್ನು ಕೆಲಸ ಪ್ರಾರಂಭಿಸಬೇಕು ಎಂದಿದ್ದ. ಮತ್ತೊಮ್ಮೆ ಹೇಳುತ್ತೇನೆ ಬೇಗ ಮಾಡಿಕೊಡಲು’ ಎಂದರು. ಈ ಮಧ್ಯೆ ಒಂದು ಬಾರಿ ಅಬ್ಬಾಸ್ ಸಿಕ್ಕಿದ್ದ. ಕೇಳಿದಾಗ ಮಾಡುತ್ತಿದ್ದೇನೆ ಸಾಬ್. ಇನ್ನೊಂದು ಹದಿನೈದು ದಿನ ಎಂದಿದ್ದು ಜ್ಞಾಪಕವಾಗಿ ಸುಮ್ಮನಾದೆ.

ಸುಮಾರು ತಿಂಗಳಾಯಿತು. ನನಗೆ ಮೇಲಿಂದ ಮೇಲೆ ಸಿಂಗ್‍ಗೆ ಫೋನು ಮಾಡುವುದಕ್ಕೆ ಮುಜುಗರವಾಗಿ ನಿಧಾನವಾಗಿಯೇ ಮಾಡಿಸಲಿ ಏನು ಅರ್ಜೆಂಟಿದೆ ಎಂದುಕೊಂಡು ಸುಮ್ಮನಾದೆ. ಆದರೆ ಆಗಾಗ ತಹಸಿಲ್ದಾರ್ ಕಛೇರಿಯಲ್ಲಿಯೋ ಅಥವಾ ಬೇರೆ ಎಲ್ಲಿಯಾದರೂ ಅಬ್ಬಾಸ್ ಸಿಕ್ಕಾಗ ವಿಚಾರಿಸುವುದೂ ಅವನು ಏನಾದರೂ ನೆವ ಹೇಳುವುದೂ ಅಭ್ಯಾಸವಾದಂತಾಯಿತು. ‘ಮಾಡ್ತೀನಿ ಸಾಬ್. ಮಗೀಗೆ ಹುಷಾರಿಲಿಲ್ಲ’ ಎಂದು ಒಮ್ಮೆ ಹೇಳಿದವನು ಮತ್ತೊಮ್ಮೆ ತನಗೇ ಹುಷಾರಿರಲಿಲ್ಲವೆಂದು ಹೇಳುತ್ತಿದ್ದ!

ಅಬ್ಬಾಸನನ್ನು ಕಾಟ್ ಬಗ್ಗೆ ಕೇಳಿಕೇಳಿ ನನಗೆ ರೋಸಿ ಹೋಯಿತು.  ನಾನು ಅಡ್‍ವಾನ್ಸ್ ಕೊಡದಿರುವುದಕ್ಕೆ ಏನಾದರೂ ಕುಂಟು ನೆಪ ಹೇಳುತ್ತಿರಬಹುದೇ ಎಂದುಕೊಂಡು ಒಮ್ಮೆ ‘ಅಬ್ಬಾಸ್ ನನ್ನು ಸುಮ್ಮನೇ ಕತೆ ಹೇಳಬೇಡ. 15 ದಿನ ಎಂದು ಹೇಳಿದವನು ನಾಲ್ಕು ತಿಂಗಳಾಯಿತು. ನಾನು ಅಡ್ವಾನ್ಸ್ ಕೊಟ್ಟಿಲ್ಲ ಅಂತ ನಿರ್ಲಕ್ಷ್ಯ ಮಾಡುತ್ತಿದ್ದೀಯಾ’ ಎಂದು ದಬಾಯಿಸಿ, ‘ತಗೋ ನಿನ್ನ ಅಡ್ವಾನ್ಸ್ ಎಷ್ಟು ಕೊಡಬೇಕು ಹೇಳು’ ಎಂದು ಜೇಬಿನಿಂದ ಪರ್ಸ್ ತೆಗೆದೆ. ‘ನಕೋ ಸಾಬ್ ಅದಕ್ಕಲ್ಲ. ನೀವು ಸಿಂಗ್ ದೋಸ್ತ್, ನಿಮ್ಮ ಹತ್ತಿರ ಯಾಕೆ ಅಡ್ವಾನ್ಸು?’ ಎಂದು ಅಡ್ವಾನ್ಸ್ ತೆಗೆದುಕೊಳ್ಳಲು ನಿರಾಕರಿಸಿದ. ‘ಹಾಗಾದರೆ ಸರಿ. ಆದರೆ ಬೇಗ ಮಾಡಿಕೊಡು ಮಾರಾಯ’ ಎಂದು ಹೇಳಿ ಕಳಿಸಿದೆ .

ಇತ್ತೀಚೆಗೆ ಅಬ್ಬಾಸ್ ನನ್ನ ಕಣ್ಣು ತಪ್ಪಿಸಿ ತಿರುಗುತ್ತಾನೇನೋ ಎಂಬ ಅನುಮಾನವಾಯಿತು. ಎದುರು ಬಂದರೆ ಬೇಕೆಂದೇ ತಕ್ಷಣ ಬೇರೆಕಡೆ ತಿರುಗಿ ಸರಸರನೇ ಹೊರಟು ಬಿಡುತ್ತಿದ್ದ. ಒಮ್ಮೆಯಂತೂ ಮಾರ್ಕೆಟ್ಟಿನಲ್ಲಿ ಅವನನ್ನು ನೋಡಿ ಬೈಕುನಿಲ್ಲಿಸುವಷ್ಟರಲ್ಲೇ ಮಂಗಮಾಯವಾಗಿಬಿಟ್ಟ.

ಯಾಕೋ ಇವನು ಕಾಟ್ ಮಾಡಿಕೊಡುವುದಿಲ್ಲವೆಂದು ಅನಿಸತೊಡಗಿತು. ಈ ಬಡಗಿಗಳೇ ಹೀಗೆ. ಒಮ್ಮೆ ಯಾವುದಾದರೂ ಒಂದು ಕೆಲಸ ಮಾಡಿಕೊಟ್ಟು ನಂತರ ಸತಾಯಿಸುತ್ತಾರೆ. ತಮ್ಮ ಕೈಯಲ್ಲಿ ಆಗುವುದಿಲ್ಲ ಎಂದು ಹೇಳುವುದೂ ಇಲ್ಲ. ಒಪ್ಪಿಕೊಂಡು ಬಿಡುತ್ತಾರೆ ಆದರೆ ಮಾಡಿಕೊಡುವುದಿಲ್ಲ. ಮನೆಯಲ್ಲಿ ಶ್ರೀಮತಿಯೂ ಕೇಳಿಕೇಳಿ ಸಾಕಾಗಿ ಅದು ಬಂದಾಗ ಬರಲಿ ಎಂದು ಸುಮ್ಮನಾಗಿ ಬಿಟ್ಟಳು. ಡಬಲ್ ಕಾಟಿನ ಆಸೆ ಅವಳಲ್ಲಿ ಅಲ್ಲದೆ ನನ್ನಲ್ಲಿಯೂ ಕ್ಷೀಣವಾಗತೊಡಗಿತು.

ಒಂದು ದಿನ ಸರ್ಕಾರಿ ಆಸ್ಪತ್ರೆಯ ಬಳಿ ಅಬ್ಬಾಸ್ ಕಂಡಾಗ ಚುರುಕಾಗಿ ಬೈಕು ನಿಲ್ಲಿಸಿದವನೇ ಅವನನ್ನು ಹಿಡಿದುಬಿಟ್ಟೆ. ಅವನದು ಮತ್ತೆ ಅದೇ ರಾಗ. ‘ನೋಡು ಅಬ್ಬಾಸ್. ನೀನು ಆದರೆ ಮಾಡಿಕೊಡು. ಇಲ್ಲಾ ಅಂದರೆ ಆಗುವುದಿಲ್ಲ ಎಂದು ಹೇಳು. ಎಷ್ಟು ಸಾರಿ ಸುಳ್ಳು ಹೇಳುತ್ತೀಯಾ. ಆಗೋದಿಲ್ಲ ಎಂದರೆ ಹೇಳಿಬಿಡು ನಾನು ಬೇರೆ ಕಾರ್ಪೆಂಟರಿಗೆ ಹೇಳಿ ಮಾಡಿಸಿಕೊಳ್ಳುತ್ತೇನೆ. ಏನು ನೀನು ಒಬ್ಬನೇನಾ ಬಡಗಿ ಈ ಊರಿನಲ್ಲಿ?’ ಎಂದು ತರಾಟೆಗೆ ತೆಗೆದುಕೊಂಡೆ. ತಲೆ ಕೆರೆದುಕೊಳ್ಳುತ್ತಾ ಮತ್ತೆ ಅದೇ ಹೇಳಲು ಬಂದ. ‘ಅದೆಲ್ಲಾ ಬೇಡ ಇಂದು ಒಂದು ತೀರ್ಮಾನ ಆಗಿಬಿಡಲಿ. ನೀನು ಮಾಡಿಕೊಡುತ್ತೀಯೋ ಇಲ್ಲಾ ಬೇರೆಯವರಿಗೆ ಹೇಳಬೇಕೋ ಅಷ್ಟು ಹೇಳಿ ಬಿಡು. ನೀನು ಮಾಡಿಕೊಡುವುದಿಲ್ಲ ಎಂದರೂ ನನಗೆ ಏನು ಬೇಜಾರು ಇಲ್ಲ ನಿನ್ನ ಬೆನ್ನು ಹತ್ತಿ ನಾನು ಓಡಾಡಲು ಸಾಧ್ಯವಿಲ್ಲ’ ಎಂದು ಅವನನ್ನು ಹೋಗಗೊಡದೆ ಅಡ್ಡ ಹಾಕಿದೆ. 

ಬಲೆಗೆ ಬಿದ್ದ ಮಿಕದಂತೆ ಇನ್ನೇನೂ ನೆಪ ಹೇಳಲಾರದೆ ಒಂದೆರಡು ಕ್ಷಣ ಮಂಕಾಗಿ ನಿಂತ ಅಬ್ಬಾಸ್ ಏನೋ ನಿರ್ಧಾರಕ್ಕೆ ಬಂದವನಂತೆ ಕಂಡ. ನನ್ನ ಕೈಲಿ ಆಗುವುದಿಲ್ಲ ಬೇರೆಯವರ ಬಳಿ ಮಾಡಿಸಿಕೊಳ್ಳಿ ಎಂದು ಹೇಳುತ್ತಾನೇನೋ ಎನಿಸಿತು. ಹೇಳಿದರೆ ಹೇಳಲಿ ಯಾರು ಇವನ ಹಿಂದೆ ತಿರುಗುವವರು ಎನ್ನಿಸಿ ಆ ಉತ್ತರ ಕೇಳಲು ಸಿದ್ಧನಾದೆ. 

ಅಬ್ಬಾಸ್ ನಿಧಾನವಾಗಿ ‘ಸಾಬ್ ನಾನು ಎಷ್ಟು ದಿನ ಅಂತ ನಿಮ್ಗೆ ಸುಳ್ಳು ಹೇಳಲಿ? ಇಂದು ನಿಜ ಹೇಳಿಬಿಡುತ್ತೇನೆ. ನಾನು ಸಿಂಗ್ ಹತ್ತಿರ ಸಾಲ ಮಾಡಿದೀನಿ. ಅದು ಬಡ್ಡಿ ಬೆಳೆದು ಸಿಕ್ಕಾಪಟ್ಟೆ ಆಗಿದೆ. ವ್ಯಾಪಾರ ನೋಡಿದ್ರೆ ಕಮ್ಮಿ. ಏನು ಮಾಡಲಿ ಸಾಬ್. ಮರ ತರಬೇಕು ಅಂದ್ರೂ ನನ್ನ ಬಳಿ ಹಣವಿಲ್ಲ. ನಾನು ಏನೋ ಮಾಡಿ ಮರ ತಂದು ನಿಮಗೆ ಕಾಟ್ ಮಾಡಿಕೊಟ್ಟೆ ಅಂತಿಟ್ಟುಕೊಳ್ಳಿ. ಅದರ ಬಾಬ್ತು ಸಿಂಗ್ ಸಾಲಕ್ಕೆ ವಜಾ ಹಾಕಿಕೊಂಡುಬಿಡ್ತಾರೆ. ನಾನು ಏನು ಅಂತ ಸಾಯಲಿ?’ ಎಂದು ಅಲವತ್ತುಕೊಂಡ. ನನಗೆ ಇದು ಹೊಸ ಬಗೆಯ ನಾಟಕ ಇರಬಹುದೆನ್ನಿಸಿತು.  ‘ಅಲ್ಲ ಮಹರಾಯಾ ದಿವಾನಾ ಕಾಟ್ ಅಷ್ಟು ಬೇಗ ಮಾಡಿಕೊಟ್ಟೆ. ಅವಾಗ ಎಲ್ಲಿತ್ತು ಹಣ ಮರತರೋಕೆ ?’ ಪ್ರಶ್ನಿಸಿಯೇ ಬಿಟ್ಟೆ.  ‘ಇಲ್ಲ ಸಾಬ್ ನಾನು ದಿವಾನಾ ಕಾಟ್ ಮಾಡಿಕೊಡಲಿಲ್ಲ’ ಎಂದ ಮೆಲ್ಲಗೆ. ನಾನು ದಂಗು ಬಡಿದು ಹೋದೆ. ತಾನೇ ಖುದ್ದಾಗಿ ನನ್ನ ಮನೆಯವರೆಗೂ ದಿವಾನಾ ಕಾಟ್ ಮಾಡಿ ತಂದು ನನ್ನ ಕಣ್ಣೆದುರೇ ಫಿಟ್ ಮಾಡಿಕೊಟ್ಟಿದ್ದಾನೆ. ಈಗ ನಾನು ಮಾಡಿಲ್ಲ ಎನ್ನುತ್ತಿದ್ದಾನೆ. ‘ಏನು ಹಾಗೆಂದರೆ?’ ಅಚ್ಚರಿಯಿಂದ ಗದರಿಸಿ ಕೇಳಿದೆ.

‘ಹೌದು ಸಾಬ್. ನಿಮಿಗೆ ದಿವಾನ್ ತಂದುಕೊಟ್ಟೆ ನಿಜ. ಆದ್ರೆ ಅದು ನಾನು ಮಾಡಿದ್ದು ಅಲ್ಲ. ಸಿಂಗ್ ಮನೇಲಿ ಒಂದು ದಿವಾನಾ ಇತ್ತು, ಪುರಾನಾ. ಅದನ್ನೇ ಪಾಲಿಷ್ ಮಾಡಿಕೊಡು ಅಂದ್ರು. ಪಾಲಿಷ್ ಮಾಡಿ ತಂದುಕೊಟ್ಟೆಅಷ್ಟೇ. ನಂದೇನೂ ತಪ್ಪಿಲ್ಲ ಸ್ವಮೀ ಇದ್ರಲ್ಲಿ.  ಸಾಲ ಮಾಡಿದಮ್ಯಾಗೆ ಅವರು ಹೇಳಿದಂತೆ ಕೇಳಬೇಕು ಅಲ್ಲ. ಬಡವ ನಾನು ಏನು ಮಾಡಲಿ ಹೇಳಿ. ಆದ್ರೆ ನಿಮ್ ಹತ್ತಿರ ಸುಳ್ಳು ಹೇಳಿಕೊಂಡು ತಲೆತಪ್ಪಿಸಿಕೊಂಡು ತಿರುಗಬೇಕಾಯಿತಲ್ಲ’ ಎಂದು ಬೇಜಾರಿನಿಂದ ಅಳು ಮುಖ ಮಾಡಿಕೊಂಡು ನಿಂತ !

‍ಲೇಖಕರು Avadhi

May 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: