‘ದಿಲ್ಲಿ ಮುಪ್ಪಿಲ್ಲದ ಮೋಹಕತೆಯಲ್ಲಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಶತಮಾನಗಳನ್ನು ಕಂಡ ಕೋಟೆ-ಕೊತ್ತಲಗಳಿಂದ ಹಿಡಿದು, ಆಧುನಿಕ ವಾಸ್ತುಶಿಲ್ಪವೂ ಕೂಡ ನಿಮ್ಮ ಕಣ್ಣಿಗೆ ಆಹ್ಲಾದವನ್ನು ತರುತ್ತಿದ್ದರೆ ನೀವು ದಿಲ್ಲಿಯಲ್ಲಿರುವುದು ಖಚಿತ. 

ದಿಲ್ಲಿಯ ಆರಂಭದ ದಿನಗಳಲ್ಲಿ ಇಂಡಿಯನ್ ಹ್ಯಾಬಿಟಾಟ್ ಸೆಂಟರಿಗೆ (ಐ.ಎಚ್.ಸಿ) ನಾನು ಮೊದಲಬಾರಿ ಭೇಟಿಯನ್ನು ನೀಡಿದಾಗ ಅಲ್ಲಿಯ ಸೊಬಗಿಗೆ ಮನಸೋತಿದ್ದೆ. ಸಂಸ್ಥೆಯೊಂದು ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವೊಂದಕ್ಕಾಗಿ ಹ್ಯಾಬಿಟಾಟ್ ಸೆಂಟರಿಗೆ ಹೋಗಿದ್ದ ನನಗೆ, ಕ್ರಮೇಣ ಅದೊಂದು ಅಡ್ಡಾಡುವ ತಾಣವೇ ಆಗಿಹೋಗಿತ್ತು. ಸುಮಾರು ಒಂಭತ್ತು ಎಕರೆ ವಿಸ್ತೀರ್ಣದ ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಐ.ಎಚ್.ಸಿ ಯನ್ನು ವಿನ್ಯಾಸಗೊಳಿಸಿ, ಈ ಸಂಪೂರ್ಣ ಪ್ರಾಜೆಕ್ಟ್ ತಲೆಯೆತ್ತಿ ನಿಲ್ಲುವಂತೆ ಮಾಡಿದ ಪ್ರತಿಭಾವಂತ ಮಹನೀಯರಲ್ಲಿ ಜೋಸೆಫ್ ಅಲೆನ್ ಸ್ಟೈನ್ ಪ್ರಮುಖರು. 

ಅಮೆರಿಕಾದ ಮೂಲದ ಜೋಸೆಫ್ ಸ್ಟೈನ್ ಓರ್ವ ವಾಸ್ತುಶಿಲ್ಪ ವಿನ್ಯಾಸಕಾರರಾಗಿ ಜಾಗತಿಕ ಮಟ್ಟಿನಲ್ಲಿ ದೊಡ್ಡ ಹೆಸರನ್ನು ಗಳಿಸಿದವರು. ಈ ದೇಶದ ಕಳೆದ ಶತಮಾನದ  ಹಲವು ಪ್ರಮುಖ ಕಟ್ಟಡಗಳನ್ನು ಸ್ವತಃ ವಿನ್ಯಾಸಗೊಳಿಸಿರುವ ಜೋಸೆಫ್ ಇಂದು ದಿಲ್ಲಿಯ ಲೋಧಿ ಎಸ್ಟೇಟಿನಲ್ಲಿ ಕಾಣುವ ಸುಂದರ ಭವನಗಳ ಸೃಷ್ಟಿಯ ಹಿಂದಿರುವ ಜೀನಿಯಸ್ ಕೂಡ ಹೌದು. ಸ್ಟೈನ್ ಕೊಡುಗೆಯು ದಿಲ್ಲಿಯ ಆಧುನಿಕ ವಾಸ್ತುಶಿಲ್ಪಕ್ಕೆ ಅದೆಷ್ಟು ಮುಖ್ಯವೆಂದರೆ, ದಿಲ್ಲಿಯಲ್ಲಿ ರಸ್ತೆಯೊಂದಕ್ಕೆ ಜೋಸೆಫ್ ಸ್ಟೈನ್ ಲೇನ್ ಎಂಬ ಹೆಸರನ್ನೂ ಕೂಡ ಇವರ ಗೌರವಾರ್ಥ ಇರಿಸಲಾಗಿದೆ. ಅಂದಹಾಗೆ ಸ್ಟೈನ್ 1992 ರ ಪದ್ಮಶ್ರೀ ಪುರಸ್ಕೃತರು. 

ಸ್ಟೈನ್ ಕಂಡ ಕನಸಾದ ಐ.ಎಚ್.ಸಿ ಇಂದು ದಿಲ್ಲಿಯ ಪ್ರಮುಖ ತಾಣಗಳಲ್ಲೊಂದು. ಸರಕಾರಿ ಇಲಾಖೆಗಳ ಚರ್ಚೆಗಳಿಂದ ಹಿಡಿದು ವಿಶ್ವಸಂಸ್ಥೆಯ ಅಂಗಸಂಸ್ಥೆಗಳ ಸಮಾಲೋಚನೆಗಳವರೆಗೆ ಇಲ್ಲಿ ಹಲವು ಚಟುವಟಿಕೆಗಳು ನಡೆಯುತ್ತವೆ. ದಿಲ್ಲಿಯ ಪ್ರಮುಖ ಸಾಂಸ್ಕøತಿಕ ಕೇಂದ್ರಗಳನ್ನು ಪಟ್ಟಿ ಮಾಡುವುದಾದರೆ ಐ.ಎಚ್.ಸಿ ಎಂದಿಗೂ ಅಗ್ರಸ್ಥಾನದಲ್ಲಿ ನಿಲ್ಲುವ ಸ್ಥಳ. ಸಿನೆಮಾ, ರಂಗಭೂಮಿ, ವ್ಯವಹಾರ, ಹಚ್ಚಹಸಿರು, ಕಲೆ… ಹೀಗೆ ಎಲ್ಲವನ್ನೂ ತನ್ನೊಳಗಿಟ್ಟುಕೊಂಡಿರುವ ವಿಶಿಷ್ಟ ತಾಣ.

ಬಾಲಿವುಡ್ ಗೀತರಚನಾಕಾರ ಗುಲ್ಝಾರ್ ರಿಂದ ಹಿಡಿದು, ಸೌಂಡ್ ಟ್ರಿಪಿನ್ ಮತ್ತು ಗ್ಯಾಂಗ್ಸ್ ಆಫ್ ವಸೀಪುರ್ ಖ್ಯಾತಿಯ ಸಂಗೀತ ನಿರ್ದೇಶಕಿ ಸ್ನೇಹಾ ಕನ್ವಲ್ಕರ್ ರವರನ್ನು ನಾನು ಐ.ಎಚ್.ಸಿ ಕ್ಯಾಂಪಸ್ಸಿನಲ್ಲೇ ಭೇಟಿಯಾಗಿದ್ದೆ. ಉಳಿದವುಗಳು ಹಾಗಿರಲಿ; ಇಲ್ಲಿನ ಒಂದೊಂದು ಕುಂಡದಲ್ಲಿರುವ ಅಪರೂಪದ ಹೂವುಗಳು ಐ.ಎಚ್.ಸಿ ಆಡಳಿತ ವ್ಯವಸ್ಥೆಯ ಸೌಂದರ್ಯಪ್ರಜ್ಞೆಗೆ ಮತ್ತು ಅತ್ಯುತ್ತಮ ನಿರ್ವಹಣಾ ವ್ಯವಸ್ಥೆಗೆ ಸಾಕ್ಷಿ.    

ಇಂದು ವಿಶೇಷವಾಗಿ ದಿಲ್ಲಿಯ ಹೈ-ಎಂಡ್ ವಲಯಗಳಲ್ಲೊಂದಾದ ಲೋಧಿ ಎಸ್ಟೇಟಿನಲ್ಲಿ ನಮಗೆ ಕಾಣಸಿಗುವ ಹಲವು ಆಕರ್ಷಕ ಮತ್ತು ಪ್ರತಿಷ್ಠಿತ ಕಟ್ಟಡಗಳಲ್ಲಿ ಜೋಸೆಫ್ ಸ್ಟೈನ್ ರವರ ಛಾಪನ್ನು ಕಾಣಬಹುದು. ತನ್ನ ಪ್ರಾಮುಖ್ಯತೆಯಲ್ಲಿ ಇಂದು ಇಂಡಿಯನ್ ಹ್ಯಾಬಿಟಾಟ್ ಸೆಂಟರಿನಷ್ಟೇ ಸರಿಸಮನಾಗಿ ನಿಲ್ಲುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಲ್ಚರ್ (ಐ.ಐ.ಸಿ) ಕೂಡ ಇವರ ವಿನ್ಯಾಸದ ನಿರ್ಮಾಣವೇ. 1962 ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಗಳಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ರವರು ಈ ಸಾಂಸ್ಕøತಿಕ ಕೇಂದ್ರವನ್ನು ಅಧಿಕೃತವಾಗಿ ಉದ್ಘಾಟಿಸಿದ್ದರು. 

ಇಂದು ಐ.ಐ.ಸಿ ಎಂಬುದು ಹಲವು ಸಾಧಕರು ಮತ್ತು ಖ್ಯಾತನಾಮರು ಆಗಾಗ ಬಂದುಹೋಗುವ ದಿಲ್ಲಿಯ ಅದ್ಭುತ ತಾಣ. ಖ್ಯಾತ ಲೇಖಕರು, ಪತ್ರಕರ್ತರು, ವಾಗ್ಮಿಗಳು, ನಟರು, ಕಲಾವಿದರು, ಆಕ್ಟಿವಿಸ್ಟ್ ಗಳು, ರಾಜಕಾರಣಿಗಳು, ಐ.ಎ.ಎಸ್ ಅಧಿಕಾರಿಗಳು, ಬುದ್ಧಿಜೀವಿಗಳು… ಹೀಗೆ ನೂರಾರು ಪ್ರತಿಭಾವಂತರು ಕಾರ್ಯಕ್ರಮ, ಸಮಾಲೋಚನೆ, ವಿಚಾರ ಸಂಕಿರಣ, ಭಾಷಣಗಳೆಂದು ಒಂದಿಲ್ಲೊಂದು ಕಾರಣಗಳಿಂದ ಇಲ್ಲಿ ಹೋಗಿಬರುತ್ತಿರುತ್ತಾರೆ.

ಹೀಗಾಗಿ ಐ.ಐ.ಸಿ ಕ್ಯಾಂಪಸ್ಸಿನಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದರೆ ಅಚಾನಕ್ಕಾಗಿ ನಮಗೆ ಸುಹೇಲ್ ಸೇತ್ ಸಾಹೇಬರೋ, ಶೋಭಾ ಡೇಯವರೋ ಥಟ್ಟನೆ ಕಣ್ಣೆದುರಿಗೆ ಸಿಕ್ಕರೆ ಅಚ್ಚರಿಪಡುವ ಅಗತ್ಯವೇನಿಲ್ಲ. ಐ.ಐ.ಸಿ ಆವರಣಕ್ಕಿದು ಎಂದಿನ ದಿನಚರಿ. ಐ.ಐ.ಸಿ ಯ ರೆಸ್ಟೊರೆಂಟಿನಲ್ಲಿ ಕುಳಿತು ತಮ್ಮ ಚಳುವಳಿಯ ದಿನಗಳ ಮರೆಯಲಾರದ ನೆನಪುಗಳನ್ನು ಸಿದ್ಧಲಿಂಗಯ್ಯನವರು ತಾಸುಗಟ್ಟಲೆ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಿದ್ದು ನನ್ನ ಪಾಲಿನ ಸವಿನೆನಪುಗಳಲ್ಲೊಂದು.  

ದಿಲ್ಲಿಯ ಈ ಭಾಗದಲ್ಲಿ ಐ.ಎಚ್.ಸಿ, ಐ.ಐ.ಸಿ ಸೇರಿದಂತೆ ಸುತ್ತಮುತ್ತಲ ವಲಯದಲ್ಲೂ ಪ್ರತಿಷ್ಠಿತ ಸಾಂಸ್ಕøತಿಕ ಕೇಂದ್ರಗಳಿದ್ದು, ಅವುಗಳಲ್ಲೂ ಸ್ಟೈನ್ ರವರ ವಿನ್ಯಾಸದ ಕುರುಹಿದೆ. 1952 ರ ನಂತರದ ಅವಧಿಯಲ್ಲಿ ಭಾರತಕ್ಕೆ ಬಂದ ಜೋಸೆಫ್ ಸ್ಟೈನ್, 1955 ರ ನಂತರ ದಿಲ್ಲಿಯನ್ನೇ ತಮ್ಮ ಕ್ಯಾನ್ವಾಸಾಗಿ ಬಳಸಿಕೊಳ್ಳುತ್ತಾ ಯಶಸ್ವಿಯಾದರು. ದಶಕಗಳ ಕಾಲ ಇಲ್ಲಿ ಶ್ರದ್ಧೆಯಿಂದ ದುಡಿದರು. ಹೀಗೆ ತಮ್ಮ ಜ್ಞಾನ, ಅನುಭವಗಳನ್ನು ಇಲ್ಲಿಯ ಪ್ರಮುಖ ಕಟ್ಟಡಗಳ ವಿನ್ಯಾಸಕ್ಕೆ ಧಾರೆಯೆರೆದ ಸ್ಟೈನ್ ರವರು ಅದೆಷ್ಟು ಖ್ಯಾತಿಯನ್ನು ಗಳಿಸಿದ್ದರೆಂದರೆ ಈ ಪ್ರದೇಶವನ್ನು “ಸ್ಟೈನ್ ಬಾದ್” ಎಂದೂ ಕರೆಯಲಾಗುತ್ತಿತ್ತಂತೆ. 

ಜೋಸೆಫ್ ಸ್ಟೈನ್ ರಂತಹ ವಾಸ್ತುಶಿಲ್ಪ ವಿನ್ಯಾಸಕರು ದಿಲ್ಲಿಗೆ ಏಕೆ ಮುಖ್ಯವಾಗುತ್ತಾರೆಂದರೆ, ಶಹರದ ವಾಸ್ತುಶಿಲ್ಪ ವಿಕಾಸದ ಪಯಣವನ್ನು ತಮ್ಮ ವಿಶಿಷ್ಟ ಪ್ರಯೋಗಗಳಿಂದ ಶ್ರೀಮಂತಗೊಳಿಸಿದ ಖ್ಯಾತಿ ಇವರದ್ದು. ಇಂದಿಗೂ ದಿಲ್ಲಿಯಲ್ಲಿರುವ ಅದೆಷ್ಟೋ ಹಲವು ಸರಕಾರಿ ಕಾರ್ಯಾಲಯಗಳು ನೋಡಲು ಅದೆಷ್ಟು ಅದ್ಭುತವಾಗಿವೆಯೆಂದರೆ, ಅವುಗಳು ನಮ್ಮ ಕಣ್ಣೆದುರು ತಲೆಯೆತ್ತಿರುವ ಸುಂದರ ಕಲಾಕೃತಿಗಳಂತೆಯೇ ನಮಗೆ ಕಾಣುತ್ತವೆ. ಅದರಲ್ಲೂ ಹಚ್ಚಹಸಿರು, ವಿಶಾಲವಾದ ರಸ್ತೆಗಳು ಮತ್ತು ನಿರ್ವಹಣೆಯ ವಿಚಾರದಲ್ಲಿ ವ್ಯವಸ್ಥಿತವಾಗಿ ಕಾಣುವ ಚಾಣಕ್ಯಪುರಿ, ಲೋಧಿ ಎಸ್ಟೇಟ್ ಮತ್ತು ರೈಸಿನಾ ಹಿಲ್ ಪ್ರದೇಶದ ಸುತ್ತಮುತ್ತಲಿನ ಭಾಗಗಳನ್ನು ನೋಡಿದರೆ ಅವುಗಳು ಯಾವ ಸ್ವರ್ಗಕ್ಕೂ ಕಮ್ಮಿಯಿಲ್ಲ. 

ಕೆಲವೊಮ್ಮೆ ಹೀಗೂ ಆಗುವುದುಂಟು. ಅದೇನೆಂದರೆ ಜನಸಾಮಾನ್ಯರಿಗೆ ಮೇಲ್ನೋಟಕ್ಕೆ ಕಾಣುವ ದೃಶ್ಯಗಳೂ, ಒಳಗಿನ ಅಸಲಿ ನೋಟಕ್ಕೂ ಹಲವು ವ್ಯತ್ಯಾಸಗಳಿರುತ್ತವೆ. ಉದಾಹರಣೆಗೆ ದಿಲ್ಲಿಯ ಆಯಕಟ್ಟಿನ ಭಾಗಗಳಲ್ಲಿ ರಸ್ತೆಯ ಇಬ್ಬದಿಗಳಲ್ಲೂ, ಉದ್ದಕ್ಕೆ ಕಾಣಸಿಗುವ ಕೇಂದ್ರ ಸಂಪುಟ ಸಚಿವರ, ಸಂಸತ್ ಸದಸ್ಯರ ನಿವಾಸಗಳು. ಸಾಮಾನ್ಯವಾಗಿ ಒಂದು ನಾಮಫಲಕ, ದೊಡ್ಡದೊಂದು ಗೇಟು, ಶಸ್ತ್ರಧಾರಿ ಸೈನಿಕರ ಒಂದು ಪುಟ್ಟ ಬರಾಕು ಮತ್ತು ಎತ್ತರದ ಆವರಣಗಳನ್ನು ಹೊರತುಪಡಿಸಿದರೆ ಬೇರೇನೂ ಇಲ್ಲಿ ಜನಸಾಮಾನ್ಯರಿಗೆ ಮೇಲ್ನೋಟಕ್ಕೆ ಅಷ್ಟಾಗಿ ಕಾಣಸಿಗದು. ಆದರೆ ಒಳಭಾಗದಲ್ಲಿ ಹಳೆಯ ಬಂಗಲೆಗಳ ಶೈಲಿಯಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳು ಇಂದು ನಮ್ಮನ್ನಾಳುವ ಪ್ರಭುಗಳ ಅಧಿಕೃತ ನಿವಾಸಗಳಾಗಿ ಅವರಿಗೆ ನೀಡಲ್ಪಟ್ಟಿವೆ. ವಾಸ್ತುಶಿಲ್ಪ ಸೌಂದರ್ಯದ ಜೊತೆಗೇ, ಅಧಿಕಾರದ ಗತ್ತನ್ನೂ ಉಸಿರಾಡುವ ಈ ಶ್ವೇತವರ್ಣದ ಕಟ್ಟಡಗಳು ನೋಡಲು ಸೊಗಸು.

ಹಿಂದೊಮ್ಮೆ ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದ ಹಿರಿಯ ಸಚಿವೆಯೊಬ್ಬರನ್ನು ಭೇಟಿ ಮಾಡುವ ಸಂದರ್ಭವು ನನಗೊದಗಿ ಬಂದಿತ್ತು. ದೇಶದ ಫೈರ್ ಬ್ರಾಂಡ್ ಮಹಿಳಾ ರಾಜಕಾರಣಿಗಳಲ್ಲೊಬ್ಬರಾದ ಆಕೆಯ ದಿನವೊಂದನ್ನು ಹತ್ತಿರದಿಂದ ಕಾಣುವ ಅವಕಾಶವನ್ನು ನಾನಂದು ಆಕಸ್ಮಿಕವಾಗಿ ಪಡೆದುಕೊಂಡಿದ್ದೆ. ಹಲವು ಕೋಣೆಗಳನ್ನು ಹೊಂದಿರುವ ದೊಡ್ಡ ಬಂಗಲೆಯಂತಹ ಅಧಿಕೃತ ನಿವಾಸ, ವಿಶಾಲವಾದ ಹೊರಾಂಗಣ, ಉದ್ಯಾನ, ಅಧಿಕಾರಿಗಳು ಬಂದುಹೋಗುವ ಆಯ್ದ ಜನರೊಂದಿಗಿನ ಕಾರ್ಯಕಲಾಪಗಳನ್ನು ನೋಡಿಕೊಳ್ಳಲು ಅನುಕೂಲವಾಗುವಂತಹ ಆಫೀಸು… ಹೀಗೆ ಅದೊಂದು ವಿವಿಧ ಯೂನಿಟ್ಟುಗಳನ್ನು ಹೊಂದಿರುವ ವ್ಯವಸ್ಥಿತವಾದ ಕ್ಯಾಂಪಸ್ಸು. ನಿರ್ದಿಷ್ಟವಾಗಿ ಸ್ವಾತಂತ್ರ್ಯಾನಂತರದ ಈ ನಿರ್ಮಾಣಗಳು ದೇಶದ ರಾಜಕೀಯ ಶಕ್ತಿಕೇಂದ್ರವಾಗಿರುವ ದಿಲ್ಲಿಯ ಗತ್ತಿಗೆ ಮತ್ತಷ್ಟು ಇಂಬು ಕೊಡುವಂತಿವೆ.      

ಇಂತಹ ತಾಣಗಳಲ್ಲಿ ಕಾಣುವ ಮತ್ತೊಂದು ಪ್ರಮುಖ ಅಂಶವೆಂದರೆ ರಾಜ್ಯಗಳಿಂದ ಆರಿಸಿ ದಿಲ್ಲಿಗೆ ಹೋದ ರಾಜಕಾರಣಿಯೊಬ್ಬನ ಚಟುವಟಿಕೆಗಳ ನಿಜವಾದ ವೈಖರಿ. ಒಮ್ಮೆ ಹಿರಿಯ ಸಂಸದರೊಬ್ಬರ ನಿವಾಸಕ್ಕೆ ತೆರಳಿದ್ದ ನಾನು ಆ ಸಂಸದರ ಬಗ್ಗೆ ಅವರದ್ದೇ ಆಪ್ತ ಸಿಬ್ಬಂದಿಯೊಬ್ಬರ ಮಾತನ್ನು ಕೇಳಿ ದಂಗಾಗಿದ್ದೆ. ಆ ವ್ಯಕ್ತಿ ಹಲವು ಬಾರಿ, ಸತತವಾಗಿ ತಮ್ಮ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿದ್ದರು. ಆದರೆ ಸೋಜಿಗದ ಸಂಗತಿಯೆಂದರೆ ಆ ಹಿರಿಯ ರಾಜಕಾರಣಿಯ ಹೆಸರನ್ನು ನಾನು ಮುಖ್ಯವಾಹಿನಿಯ ರಾಜಕಾರಣದಲ್ಲಿ ಹಿಂದೆಂದೂ ಅಷ್ಟಾಗಿ ಕೇಳಿರಲಿಲ್ಲ.  

ಸಂಸತ್ ಅಧಿವೇಶನಗಳಿಗೆ ನಿರಂತರವಾಗಿ ಚಕ್ಕರ್ ಹೊಡೆಯುವವರು, ಒಂದು ಪಕ್ಷ ಹೋದರೂ ತಮ್ಮ ಸೀಟನ್ನಷ್ಟೇ ಬಿಸಿ ಮಾಡಿ ಎದ್ದು ಬರುವವರು, ಸಂಸತ್ತಿನ ಒಂದೇ ಒಂದು ಜನಪರ ಚರ್ಚೆಯಲ್ಲಿ ಆಸಕ್ತಿಯಿಂದ ಭಾಗವಹಿಸದಿರುವವರು, ಪ್ರಶ್ನೆಗಳಿಗೂ ತಮಗೂ ಸಂಬಂಧವಿಲ್ಲವೆಂಬಂತೆ ತೂಕಡಿಸುತ್ತಾ ಕೂರುವವರು, ಒಮ್ಮೆ ಆಯ್ಕೆಯಾಗಿ ಹೋದ ನಂತರ ಮುಂದಿನ ಚುನಾವಣೆಯಲ್ಲಷ್ಟೇ ಕಾಣಸಿಗುವವರು…

ಹೀಗೆ ನಾಮ್ ಕೇ ವಾಸ್ತೇ ಸಂಸದರ ಸಂಖ್ಯೆ ನಮ್ಮ ದೇಶದಲ್ಲಿ ಕಮ್ಮಿಯೇನಿಲ್ಲ. ನಾನಂದು ಭೇಟಿಯಾಗಲು ಹೋಗಿದ್ದ ಸಂಸದರೂ ಈ ಕೆಟಗರಿಯವರೇ ಆಗಿದ್ದರು. ಅಂದು ಭಣಗುಡುತ್ತಿದ್ದ ಆಫೀಸಿನಲ್ಲಿ ನೊಣ ಹೊಡೆಯುತ್ತಿದ್ದ ಸಹಾಯಕನೊಬ್ಬನನ್ನು ಮಾತನಾಡಿಸಿದರೆ ‘ಸಾಹೇಬ್ರು ಏನೋ ಅಪರೂಪಕ್ಕೊಮ್ಮೆ ಬಂದು ಹೋಗುತ್ತಾರಪ್ಪಾ… ಹೆಸರಿಗೊಂದು ಅಧಿಕಾರವಿದೆ. ಅದೇನು ಜನಸೇವೆ ಚಲಾಯಿಸುತ್ತಾರೋ ದೇವರೇ ಬಲ್ಲ’, ಎಂದಿದ್ದ.  

ಹೀಗೆ ದಿಲ್ಲಿಯ ವಾಸ್ತುಶಿಲ್ಪದ ವಿಚಾರದ ಬಗ್ಗೆ ದಾಖಲಿಸಹೊರಟರೆ ಹಳೇದಿಲ್ಲಿಯ ಹವೇಲಿ ಶೈಲಿಯ ಕಟ್ಟಡಗಳಿಂದ ಹಿಡಿದು, ರೈಸಿನಾ ಹಿಲ್ ನಲ್ಲಿರುವ ಗಣ್ಯಾತಿಗಣ್ಯರ ಬಂಗಲೆಯವರೆಗೂ ಕಣ್ಣುಹಾಯಿಸಬೇಕಾಗುತ್ತದೆ. ಇತಿಹಾಸದಲ್ಲಿ ದೇಶದ ಪ್ರಮುಖ ರಾಜಕಾರಣಿಗಳ ನಿವಾಸವಾಗಿದ್ದು ಪ್ರಸ್ತುತ ವಸ್ತುಸಂಗ್ರಹಾಲಯಗಳಾಗಿ ಅಥವಾ ಸಕ್ರಿಯ ಕಾರ್ಯಾಲಯಗಳಾಗಿ ಬದಲಾಗಿರುವ ಕಟ್ಟಡಗಳಲ್ಲೂ ನಾವಿಂದು ದೇಶವಿದೇಶಗಳ ಹಲವು ವಾಸ್ತುಶಿಲ್ಪ ಶೈಲಿಗಳ ಅದ್ಭುತ ಮಿಶ್ರಣವನ್ನು ಕಾಣಬಹುದು.

ಅಪಾರ ಗ್ರಂಥಸಂಗ್ರಹವನ್ನು ಹೊಂದಿರುವ ತೀನ್ ಮೂರ್ತಿ ಭವನ್ ಇದಕ್ಕೊಂದು ಅತ್ಯುತ್ತಮ ನಿದರ್ಶನ. ಬ್ರಿಟಿಷ್ ಆಡಳಿತ ಕಾಲದಲ್ಲಿ ಖ್ಯಾತ ವಿನ್ಯಾಸಕಾರನಾಗಿದ್ದ ರಾಬರ್ಟ್ ರಸೆಲ್ ನೇತೃತ್ವದಲ್ಲಿ ನಿರ್ಮಿಸಲ್ಪಟ್ಟಿದ್ದ ಈ ಭವ್ಯ ಕಟ್ಟಡವು ಪಂಡಿತ್ ಜವಾಹರಲಾಲ್ ನೆಹರೂರವರ ಪಾಲಿಗೆ ಹದಿನಾರು ವರ್ಷಗಳ ಕಾಲ ನಿವಾಸವಾಗಿತ್ತು. ಇನ್ನು ದಿಲ್ಲಿಯಲ್ಲಿರುವ ಇಂದಿರಾಗಾಂಧಿ ಮೆಮೋರಿಯಲ್ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಮೆಮೋರಿಯಲ್ ಕಟ್ಟಡಗಳೂ ಕೂಡ ತಜ್ಞರಿಂದ ಆರಿಸಲಾದ ಶೈಲಿಗಳ ಅದ್ಭುತ ಮೂರ್ತರೂಪಗಳು. 

ಇಂದು ದಿಲ್ಲಿಯ ಪ್ರಮುಖ ವಾಣಿಜ್ಯ ಮತ್ತು ಆರ್ಥಿಕ ಕೇಂದ್ರವಾಗಿರುವ ಕನೌಟ್ ಪ್ಲೇಸ್ (ಸಿ.ಪಿ) ಕೂಡ ತನ್ನ ವಾಸ್ತುಶಿಲ್ಪದ ಶೈಲಿಯಿಂದಾಗಿಯೇ ವಿಭಿನ್ನವಾಗಿ ನಿಲ್ಲುವಂತಹ ಪ್ರದೇಶ. ಇಲ್ಲಿಯ ಬೃಹತ್ ಒಳ ಮತ್ತು ಹೊರವೃತ್ತಗಳಲ್ಲಿ ತಾಸುಗಟ್ಟಲೆ ಅಡ್ಡಾಡುವುದೆಂದರೆ ಶಾಪಿಂಗ್ ಪ್ರಿಯರಿಗೆ ಸ್ವರ್ಗಕ್ಕೊಂದು ಟೂರ್ ಪ್ಯಾಕೇಜ್ ಕೊಟ್ಟಂತೆಯೇ. ಇನ್ನು ಸಿ.ಪಿ.ಯ ಶ್ವೇತವರ್ಣದ ಕಂಬಗಳು ಹಳೆಯ ಕಾಲದ ಐರೋಪ್ಯ ವಾಸ್ತುಶಿಲ್ಪ ಶೈಲಿಯನ್ನು ನೆನಪಿಸಿದರೆ, ವಿವಿಧ ಭಾಷೆಗಳ ಚಿತ್ರರಂಗದ ದಿಗ್ಗಜರಿಗೊಂದು ಮೆಚ್ಚಿನ ಶೂಟಿಂಗ್ ತಾಣವೂ ಕೂಡ ಹೌದು. ವಿಶೇಷವೆಂದರೆ ಜನಪ್ರಿಯ ಕನೌಟ್ ಪ್ಲೇಸ್ ವಿನ್ಯಾಸದ ಹಿಂದಿರುವ ಹೆಸರೂ ಕೂಡ ಇದೇ ರಾಬರ್ಟ್ ರಸೆಲ್ ನದ್ದು. 

ಅಂದಹಾಗೆ ದಿಲ್ಲಿಯ ಬಹಳಷ್ಟು ನಿರ್ಮಾಣಗಳು ಸೌಂದರ್ಯಕ್ಕಷ್ಟೇ ಸೀಮಿತವಾಗಿರದೆ ಉತ್ಕøಷ್ಟ ಮಟ್ಟಿನ ತಾಂತ್ರಿಕ ದೂರದೃಷ್ಟಿಗಳನ್ನೂ ಹೊಂದಿವೆ. ಬ್ರಿಟಿಷ್ ರಾಜ್ ಕಾಲದ ಕೆಲ ಕಟ್ಟಡಗಳು ಇಂದು ಸರ್ಕಾರಿ ಮಂತ್ರಾಲಯಗಳ ಸಕ್ರಿಯ ಕಾರ್ಯಾಲಯಗಳೂ ಆಗಿವೆ. ದೈತ್ಯಗಾತ್ರದ ಮಾರ್ಬಲ್ ಗಳಿಂದ ರೂಪುತಾಳಿರುವ ಇಪ್ಪತ್ತೇಳು ಎಸಳುಗಳು ಇಂದು ದಿಲ್ಲಿಯ ‘ಲೋಟಸ್ ಟೆಂಪಲ್’ (ಕಮಲ ಮಂದಿರ) ಎಂಬ ಭವ್ಯ ಧ್ಯಾನಮಂದಿರವನ್ನು ಸೃಷ್ಟಿಸಿರುವುದು ಎಲ್ಲರೂ ಬಲ್ಲ ಮಾತು. ಅಂದಹಾಗೆ ಬಹಾಯಿ ಮಂದಿರವೆಂಬ ಹೆಸರಿನಲ್ಲೂ ಖ್ಯಾತವಾಗಿರುವ ಕಮಲ ಮಂದಿರವನ್ನು ಮೊಟ್ಟಮೊದಲ ಬಾರಿ ಕಂಡಾಗ ನನಗೆ ತಕ್ಷಣ ನೆನಪಾಗಿದ್ದು ಆಸ್ಟ್ರೇಲಿಯದ ಸಿಡ್ನಿಯಲ್ಲಿರುವ ಓಪೆರಾ ಹೌಸ್. ಹೀಗಿದ್ದರೂ ಒಟ್ಟಾರೆ ವಿನ್ಯಾಸ ಮತ್ತು ಸಂಕೀರ್ಣತೆಯ ನಿಟ್ಟಿನಲ್ಲಿ ದಿಲ್ಲಿಯ ಬಹಾಯಿ ಮಂದಿರದ್ದೇ ಮೇಲುಗೈ. 

ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ವಾಸ್ತುಶಿಲ್ಪ ವಿನ್ಯಾಸದ ಹಲವು ಪ್ರಯೋಗಗಳಿಗೆ ತೆರೆದುಕೊಳ್ಳುತ್ತಾ ಹೋದ ದಿಲ್ಲಿಯು ಕ್ರಮೇಣ ಇದನ್ನು ತನ್ನ ನಾಡಿಮಿಡಿತದ ಒಂದು ಭಾಗವನ್ನಾಗಿಸಿತ್ತು. ಇದರಿಂದಾಗಿ ದೇಶದಲ್ಲಿಯೇ ಅತ್ಯುತ್ತಮ ಅನ್ನಬಹುದಾದ ಅದ್ಭುತ ಶೈಲಿಯ ಕಟ್ಟಡಗಳಿಗಿಂದು ದಿಲ್ಲಿ ಮಹಾನಗರಿಯು ತವರುಮನೆಯಾಗಿದೆ.

ಸದ್ಯ ಖಾಲಿಯಿರುವ ದಿಲ್ಲಿಯ ದೈತ್ಯ ಗೋಡೆಗಳನ್ನು ನಿಧಾನವಾಗಿ ಸಿಂಗರಿಸುತ್ತಿರುವುದು ಗ್ರಾಫಿಟಿ ಕಲಾಪ್ರಕಾರ. ಇನ್ನು ಸ್ಟ್ರೀಟ್ ಆರ್ಟ್ ಎಂಬ ಹೆಸರಿನಲ್ಲಿ ಕೆಲ ಗಲ್ಲಿಗಳೇ ಇಂದು ವರ್ಣರಂಜಿತವಾಗುತ್ತಿವೆ. ಸದ್ಯ ನಾವಿರುವ ಸೂಪರ್ ಫಾಸ್ಟ್ ಯುಗದಲ್ಲಿ ಇಂದಿನ ಟ್ರೆಂಡ್ ನಾಳೆಗೆ ಹಳತು. ಇಷ್ಟಿದ್ದರೂ ಶಹರದ ಕಲಾತ್ಮಕತೆಯು ಮಸುಕಾಗದೆ ಹೋಗಿದ್ದು ದಿಲ್ಲಿಯ ಸೊಗಸು. ಪ್ರಯೋಗಗಳಿಗೆ ಮೈಯೊಡ್ಡುತ್ತಾ ಮುಂದುವರಿಯುವಷ್ಟು ಕಾಲ ದಿಲ್ಲಿಯ ಮೋಹಕತೆಗೆ ಮುಪ್ಪಿಲ್ಲ.

‍ಲೇಖಕರು Admin

August 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: