ದಿಲ್ಲಿಯಲ್ಲೊಂದು ಗುಡಿಯಾಗಳ ದುನಿಯಾ..

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಒಂದೆರಡು ದಶಕಗಳ ಹಿಂದೆ ‘ಏನಂತೀರಿ?’ ಎಂಬ ಶೀರ್ಷಿಕೆಯಡಿಯಲ್ಲಿ ನನಗೆ ಸಿಕ್ಕಿದ್ದು ನಾಡಿಗ್ ಎಂಬ ಅಚ್ಚರಿ! 

ಅವು ನನ್ನ ಬಾಲ್ಯದ ದಿನಗಳಾಗಿದ್ದವು. ಓದಿಗೆಂದು ‘ಉದಯವಾಣಿ’ ನಿತ್ಯವೂ ಮನೆಗೆ ಬರುತ್ತಿತ್ತು. ಆಗ ಪತ್ರಿಕೆಯು ಕೈಗೆ ಸಿಕ್ಕಾಗಲೆಲ್ಲಾ ನಾನು ಮೊಟ್ಟಮೊದಲಿಗೆ ಹುಡುಕಿ ಕಣ್ಣಾಡಿಸುತ್ತಿದ್ದಿದ್ದು ನಾಡಿಗ್ ವ್ಯಂಗ್ಯಚಿತ್ರಗಳತ್ತ. ಸುದ್ದಿಗಳಿಗೆಲ್ಲಾ ನಂತರ ಸ್ಥಾನ. ಪ್ರಚಲಿತ ವಿದ್ಯಮಾನಗಳನ್ನು ರೇಖೆಗಳ ರೂಪದಲ್ಲಿ, ವಿಡಂಬನಾತ್ಮಕವಾಗಿ ಹೀಗೂ ತೋರಿಸಬಹುದು ಎಂಬ ಸಂಗತಿಯು ಆ ದಿನಗಳಲ್ಲಿ ನನಗೊಂದು ದೊಡ್ಡ ಸೋಜಿಗದ ಸಂಗತಿಯಾಗಿತ್ತು. 

ಬಾಲ್ಯದಲ್ಲಿ ವರ್ಷಗಟ್ಟಲೆ ನೋಟ್ಸ್ ಪುಸ್ತಕಗಳ ಹಿಂದೆ ಇನ್ನಿಲ್ಲದಂತೆ ಗೀಚಿ, ಈ ಬಗ್ಗೆ ಸಾಕಷ್ಟು ಬೈಸಿಕೊಂಡು, ರೇಖೆಗಳನ್ನು ತಕ್ಕಮಟ್ಟಿಗೆ ಒಲಿಸಿಕೊಂಡಿದ್ದೆ. ನನಗೆ ನೆನಪಿರುವಂತೆ ಕೇಂದ್ರದಲ್ಲಿ ವಾಜಪೇಯಿಯವರ ಸರಕಾರವಿದ್ದಾಗ ‘ಇಂಡಿಯಾ ಶೈನಿಂಗ್’ ಎಂಬ ಕ್ಯಾಂಪೇನ್ ಚಾಲ್ತಿಯಲ್ಲಿತ್ತು. ನಾನಾಗ ಅದನ್ನು ವ್ಯಂಗ್ಯಚಿತ್ರದ ರೂಪದಲ್ಲಿ ಇಳಿಸಿ, ನಮ್ಮ ಶಿಕ್ಷಕರೊಬ್ಬರಿಗೆ ನೀಡಿದ್ದೆ. ಅದರಲ್ಲಿ ವಾಜಪೇಯಿ-ಅಡ್ವಾಣಿ ಇಬ್ಬರೂ ಕ್ಯಾರಿಕೇಚರ್ ಆಗಿ ಮೂಡಿಬಂದಿದ್ದರು. 

ಇದಾಗಿ ಕೆಲವೇ ತಾಸುಗಳೊಳಗೆ ನನ್ನ ಕಾರ್ಟೂನು ಶಾಲಾ ನೋಟೀಸ್ ಬೋರ್ಡಿನಲ್ಲಿ ಜಾಗವನ್ನು ಪಡೆದುಕೊಂಡಿತ್ತು. ನನ್ನ ಸಹಪಾಠಿಗಳಿಗೆ ವ್ಯಂಗ್ಯಚಿತ್ರವು ಅದೆಷ್ಟು ಅರ್ಥವಾಯಿತೋ ಗೊತ್ತಿಲ್ಲ. ಆದರೆ ನಮ್ಮ ಶಾಲೆಯ ನೋಟೀಸುಬೋರ್ಡಿನಲ್ಲಿ ಪ್ರಚಲಿತ ರಾಜಕೀಯ ವಿದ್ಯಮಾನದ ಬಗ್ಗೆ ವ್ಯಂಗ್ಯಚಿತ್ರವೊಂದು ಬಂದಿದ್ದು ಅದೇ ಮೊದಲಾಗಿದ್ದರಿಂದ ಅದು ಸಾಕಷ್ಟು ಮಂದಿಯನ್ನು ಆಕರ್ಷಿಸಿತ್ತು.  

ಇಂಟರ್ನೆಟ್ ಎಂಬುದು ನಮ್ಮ ಹಳ್ಳಿಗಳಿಗೆ ಆಗಿನ್ನೂ ಬಂದಿರಲಿಲ್ಲ. ಹೀಗಾಗಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಕಾರ್ಟೂನುಗಳೇ ಆಗ ನನ್ನ ಕಣ್ಣಿಗೆ ಹಬ್ಬ. ನಾಡಿಗ್, ಜೇಮ್ಸ್ ವಾಜ್, ಹರಿಣಿ, ಜೀವನ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಶ್ರೀಧರ ಹುಂಚ… ಹೀಗೆ ಹಲವು ಖ್ಯಾತ ವ್ಯಂಗ್ಯಚಿತ್ರಕಾರರ ರೇಖೆಗಳು ಆಗ ಪತ್ರಿಕೆಗಳಲ್ಲಿ ದಂಡಿಯಾಗಿ ಪ್ರಕಟವಾಗುತ್ತಿದ್ದವು. ಮುಂದೆ ಹರಿಣಿಯವರನ್ನು ನಮ್ಮದೇ ಕಾಲೇಜಿನ ವ್ಯಂಗ್ಯಚಿತ್ರಗಳ ತರಬೇತಿ ಶಿಬಿರವೊಂದಕ್ಕಾಗಿ ಅತಿಥಿಯಾಗಿ ಆಹ್ವಾನಿಸುವಾಗ ಅಚ್ಚರಿ, ಖುಷಿ, ರೋಮಾಂಚನಗಳೆಲ್ಲವೂ ಒಟ್ಟೊಟ್ಟಿಗೇ ಆಗಿದ್ದವು. ‘ಹರಿಣಿ’ ಎಂಬ ಹೆಸರಿನ ಹಿಂದಿರುವ ಅಸಲಿ ಕಾರ್ಟೂನಿಸ್ಟ್ ಹರಿಶ್ಚಂದ್ರ ಶೆಟ್ಟಿ ಎಂದು ನನಗೆ ಗೊತ್ತಾಗಿದ್ದು ಕೂಡ ಆಗಲೇ. ಈ ಸಂದರ್ಭದಲ್ಲಿ ಹರಿಣಿಯವರು ಸ್ವತಃ ರಚಿಸಿ ನೀಡಿದ್ದ ನನ್ನ ದೊಡ್ಡದೊಂದು ಕ್ಯಾರಿಕೇಚರ್ ಕಲಾಕೃತಿಯು ಕಾಲೇಜು ದಿನಗಳ ಬೆಲೆಕಟ್ಟಲಾಗದ ನೆನಪುಗಳಲ್ಲೊಂದು.  

ಇತ್ತ ದಿಲ್ಲಿ ದಿನಗಳಲ್ಲಿ ಎಂದಿನಂತೆ ತಿರುಗಾಟದ ತಲಾಶೆಯಲ್ಲಿ ಹೊರಟಿದ್ದ ನಾನು ಮತ್ತೊಮ್ಮೆ ಕಾರ್ಟೂನಿಸ್ಟ್ ಒಬ್ಬರ ಮೋಡಿಯಲ್ಲಿ ಸಿಕ್ಕಿಹಾಕಿಕೊಂಡುಬಿಟ್ಟಿದ್ದೆ. ಅದು ಮತ್ಯಾರೂ ಅಲ್ಲ. ‘ಶಂಕರ್’ ಎಂಬ ಹೆಸರಿನಲ್ಲಿ ಖ್ಯಾತರಾಗಿದ್ದ ಕೆ. ಶಂಕರ್ ಪಿಳ್ಳೈ. ದಿಲ್ಲಿಯ ಐ.ಟಿ.ಒ ಮೆಟ್ರೋ ಸ್ಟೇಷನ್ನಿನ ಬಳಿಯಿರುವ ಗೊಂಬೆಗಳ ಮ್ಯೂಸಿಯಮ್ಮಿಗೆ ಅಂದು ಸುಮ್ಮನೆ ಕುತೂಹಲಕ್ಕೆಂದು ಹೋಗಿರದಿದ್ದರೆ ಶಂಕರ್ ಎಂಬ ದೈತ್ಯಪ್ರತಿಭೆಯ ಬಗ್ಗೆ ತಿಳಿದುಕೊಳ್ಳುವುದು ಅದೆಷ್ಟು ತಡವಾಗುತ್ತಿತ್ತೋ ಏನೋ. 

ಕೇರಳ ಮೂಲದವರಾದ ಶಂಕರ್ ಪಿಳ್ಳೈ ನಲವತ್ತು-ಐವತ್ತರ ದಶಕದಲ್ಲಿ ತಮ್ಮ ಕಾರ್ಟೂನುಗಳಿಂದ ದೇಶದಾದ್ಯಂತ ಸುದ್ದಿ ಮಾಡಿದವರು. ಅಂಬೇಡ್ಕರ್ ಬಗ್ಗೆ ಶಂಕರ್ ಬರೆದಿದ್ದ ವ್ಯಂಗ್ಯಚಿತ್ರವೊಂದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಭಾರತದ ಪ್ರಥಮ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರೂರವರನ್ನು ಟೀಕಿಸಿಯೇ ಅವರು ಸುಮಾರು ನಾಲ್ಕು ಸಾವಿರ ಕಾರ್ಟೂನುಗಳನ್ನು ಬರೆದಿದ್ದರಂತೆ. ನೆಹರೂ ಸ್ಥಾನದಲ್ಲಿ ಬೇರೆ ಯಾರಿದ್ದಿದ್ದರೂ ಈ ಬಗ್ಗೆ ತೀರಾ ಸಿಡಿಮಿಡಿಗೊಂಡು ಕಾರ್ಟೂನಿಸ್ಟ್ ಬಗ್ಗೆಯೋ, ಕಾರ್ಟೂನುಗಳು ಪ್ರಕಟವಾಗುತ್ತಿದ್ದ ಪತ್ರಿಕೆಯ ಬಗ್ಗೆಯೋ ದ್ವೇಷದ ಭಾವವನ್ನಿಟ್ಟುಕೊಂಡು ವಿಷಕಾರುತ್ತಿದ್ದರು. ಆದರೆ ನೆಹರೂ ಧಾಟಿ ಅದಾಗಿರಲಿಲ್ಲ. 

ಬದಲಾಗಿ ಶಂಕರ್ ರಚಿಸುತ್ತಿದ್ದ ವ್ಯಂಗ್ಯಚಿತ್ರಗಳನ್ನು ನೆಹರೂರವರು ಆರೋಗ್ಯಕರ ಟೀಕೆಯಾಗಿ ಸ್ವೀಕರಿಸಿ, ಅವರೊಂದಿಗೆ ಗೆಳೆತನದ ಬಾಂಧವ್ಯವನ್ನಿಟ್ಟುಕೊಂಡಿದ್ದರು. ತಮ್ಮ ರಾಜಕೀಯ ನಡೆಗಳ ತಪ್ಪು-ಒಪ್ಪುಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ನಿಟ್ಟಿನಲ್ಲಿ ಶಂಕರ್ ಸೃಷ್ಟಿಸುತ್ತಿದ್ದ ಖಾರದ ಕಾರ್ಟೂನುಗಳನ್ನು ಮುಕ್ತ ಮನೋಭಾವದಿಂದ ಸ್ವೀಕರಿಸುವ ದೊಡ್ಡಗುಣ ನೆಹರೂರವರಿಗಿತ್ತು. ಅವರು ಆಯೋಜಿಸುತ್ತಿದ್ದ ಸಾರ್ವಜನಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಿದಾಗಲೆಲ್ಲಾ ಅತಿಥಿಯಾಗಿ ತಪ್ಪದೆ ಆಗಮಿಸುತ್ತಿದ್ದರು.

ಶಂಕರ್ ಮೊದಲಿನಿಂದಲೂ ತಮ್ಮ ನೇರಾನೇರ ಮಾತುಗಳಿಗೆ, ಮುಲಾಜಿಲ್ಲದ ಟೀಕೆಗಳಿಗೆ ಹೆಸರಾದವರು. ತಮ್ಮ ನಿರ್ಭೀತ-ನಿಷ್ಠುರ ಸ್ವಭಾವಗಳಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಕಿಂಚಿತ್ತು ಅಂಜಿಕೆಯೂ ಇಲ್ಲದೆ, ತಾನು ನಡೆದಿದ್ದೇ ದಾರಿ ಎಂಬಂತೆ ಬದುಕಿದವರು. ಹೀಗಿದ್ದ ಶಂಕರ್ ಪಂಡಿತ್ ನೆಹರೂರವರಿಂದ ಇಂತಹ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ ಎಂದನಿಸುತ್ತದೆ. 

ಇದರಿಂದ ಆಗಿದ್ದೇನೆಂದರೆ ತಮ್ಮ ಕುಟುಕುವ ವ್ಯಂಗ್ಯಚಿತ್ರಗಳನ್ನು ಮುಕ್ತಮನೋಭಾವದಿಂದ ಸ್ವೀಕರಿಸಿದ್ದ ನೆಹರೂರವರ ನಡೆಯು, ಅವರಲ್ಲಿ ನೆಹರೂ ಬಗೆಗಿದ್ದ ಗೌರವದ ಭಾವನೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ‘ಡೋಂಟ್ ಸ್ಪೇರ್ ಮಿ, ಶಂಕರ್’, ಎಂದು ನೆಹರೂ ಹೇಳಿದ್ದ ಮಾತು ಮುಂದೆ ಇತಿಹಾಸವೇ ಆಗಿಬಿಟ್ಟಿತು. ಸದ್ಯದ ರಾಜಕಾರಣಿಗಳಿಂದ ಇಂತಹ ದೊಡ್ಡಗುಣ ಮತ್ತು ಈ ಬಗೆಯ ಸನ್ನಿವೇಶಗಳನ್ನು ನಿರೀಕ್ಷಿಸುವುದು ಕನಸಿನ ಮಾತು. 

ಇಂತಿಪ್ಪ ಶಂಕರ್ ಪಿಳ್ಳೈಗೆ 1950 ರ ಆರಂಭದಲ್ಲಿ ಹಂಗೇರಿಯನ್ ರಾಜತಾಂತ್ರಿಕ ಅಧಿಕಾರಿಯೊಬ್ಬರು ಪುಟ್ಟ ಗೊಂಬೆಯೊಂದನ್ನು ನೀಡಿದ್ದರಂತೆ. ಆಗ ಆಯೋಜಿಸಲಾಗುತ್ತಿದ್ದ ‘ಶಂಕರ್ ಅಂತಾರಾಷ್ಟ್ರೀಯ ಮಕ್ಕಳ ಸ್ಪರ್ಧೆ’ಯಲ್ಲಿ ಬಹುಮಾನವಾಗಿ ಆ ಗೊಂಬೆಯನ್ನು ವಿಜೇತರಿಗೆ ನೀಡಬೇಕಿತ್ತು. ಆದರೆ ಶಂಕರ್ ಅದನ್ನು ಅದೆಷ್ಟು ಇಷ್ಟಪಟ್ಟಿದ್ದರೆಂದರೆ ಆ ಅಧಿಕಾರಿಯ ಅನುಮತಿಯ ಮೇರೆಗೆ ಗೊಂಬೆಯನ್ನು ತಾನೇ ಇರಿಸಿಕೊಂಡರು. ಅಲ್ಲಿಂದ ಶುರುವಾಯಿತು ನೋಡಿ; ಗೊಂಬೆಗಳನ್ನು ಸಂಗ್ರಹಿಸುವ ಹುಚ್ಚು. ಶಂಕರ್ ಪಿಳ್ಳೈ ತಾನು ಎಲ್ಲೆಲ್ಲಿಗೆ ಹೋದರೋ, ಅಲ್ಲಿನ ವಿಶೇಷತೆಗಳನ್ನು ಸಾರುವ ಗೊಂಬೆಗಳನ್ನು ತರಲಾರಂಭಿಸಿದರು. ಸಂಗ್ರಹವು ದಿನೇ ದಿನೇ ಬೃಹದಾಕಾರವನ್ನು ತಾಳುತ್ತಾ ಹೋಯಿತು. ಒಂದಿದ್ದಿದ್ದು ನೂರಾಯಿತು. ನೂರು ಐನೂರಾಗಿ ಸಾವಿರವಾಯಿತು. 

ಈ ಮಧ್ಯೆ ಮಕ್ಕಳ ಚಿತ್ರಕಲಾ ಪ್ರದರ್ಶನಗಳ ಜೊತೆ, ಶಂಕರ್ ಸಂಗ್ರಹಿಸಿದ ವಿವಿಧ ದೇಶಗಳ ಬೊಂಬೆಗಳೂ ಕೂಡ ಆಗಾಗ ಪ್ರದರ್ಶನಗಳನ್ನು ಕಾಣುತ್ತಿದ್ದವು. ಅವುಗಳು ನಿರೀಕ್ಷೆಗೂ ಮೀರಿದ ಜನಪ್ರಿಯತೆಯನ್ನು ಪಡೆದುಕೊಂಡಿದ್ದೂ ಆಯಿತು. ಕ್ರಮೇಣ ಶಂಕರ್ ರವರ ಸಂಗ್ರಹದಲ್ಲಿದ್ದ ವಿಶಿಷ್ಟ ಬೊಂಬೆಗಳ ಜನಪ್ರಿಯತೆಯು ಅದೆಷ್ಟು ಹೆಚ್ಚಿತೆಂದರೆ, ಬೊಂಬೆಗಳ ಸಂಖ್ಯೆಗಳೊಂದಿಗೆ ಅವುಗಳ ಸಾಗಾಣಿಕೆ ಮತ್ತು ರಕ್ಷಣೆಯ ಜವಾಬ್ದಾರಿಗಳು ಹೊಸ ತಲೆನೋವಾಗಿ ಬದಲಾಗಿದ್ದವು. ಕೊನೆಗೂ ಈ ಸಮಸ್ಯೆಗೊಂದು ಮಂಗಳ ಹಾಡಿದ್ದು ಇಂದಿರಾಗಾಂಧಿಯವರು. ಗೊಂಬೆಗಳಿಗಷ್ಟೇ ಮೀಸಲಾದ ಒಂದು ವಿಶೇಷ ಮ್ಯೂಸಿಯಂ ಬಗೆಗಿನ ಪರಿಕಲ್ಪನೆಯು ಜೀವತಾಳಿದ್ದು ಹೀಗೆ. 

ಅದು 1965 ನೇ ಇಸವಿ. ಆಗ ಭಾರತದ ರಾಷ್ಟ್ರಪತಿಗಳಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮ್ಯೂಸಿಯಂ ಅನ್ನು ಅಧಿಕೃತವಾಗಿ ಉದ್ಘಾಟಿಸಿ, ಲೋಕಾರ್ಪಣೆ ಮಾಡಿದ್ದ ಸಂದರ್ಭದಲ್ಲಿ ಶಂಕರ್ ರವರ ಸಂಗ್ರಹದಲ್ಲಿ ಒಟ್ಟು ಒಂದು ಸಾವಿರ ಬೊಂಬೆಗಳಿದ್ದವು. ಅವುಗಳಲ್ಲಿ ನೆಹರೂ ಸೇರಿದಂತೆ ಜಗತ್ತಿನ ಹಲವು ದೇಶಗಳ ರಾಷ್ಟ್ರಾಧ್ಯಕ್ಷರು, ಅವರ ಪತ್ನಿಯರು, ರಾಜಮನೆತನದ ಸದಸ್ಯರು, ಹಿರಿಯ ಅಧಿಕಾರಿಗಳು, ರಾಜತಾಂತ್ರಿಕ ಸಿಬ್ಬಂದಿಗಳಂತಹ ಗಣ್ಯಾತಿಗಣ್ಯರು ಉಡುಗೊರೆಯಾಗಿ ನೀಡಿದ್ದ ಬೊಂಬೆಗಳ ಸಂಗ್ರಹವಿತ್ತು. ಮುಂದಿನ ದಶಕಗಳಲ್ಲಿ ಕ್ರಮೇಣ ಈ ಸಂಖ್ಯೆಯು ಐದು ಸಾವಿರದಷ್ಟು ತಲುಪಿದ್ದು ಶಂಕರ್ ಮತ್ತು ಅವರ ಬೊಂಬೆಗಳು ಗಳಿಸಿದ್ದ ಅಪಾರ ಖ್ಯಾತಿಗೆ ಒಂದೊಳ್ಳೆಯ ನಿದರ್ಶನ. 

ಶಂಕರ್ ಅಂದು ಸ್ಥಾಪಿಸಿದ್ದ ಅಂತಾರಾಷ್ಟ್ರೀಯ ಗೊಂಬೆಗಳ ವಸ್ತುಸಂಗ್ರಹಾಲಯದಲ್ಲಿ ಇಂದು ಎಂಭತ್ತೈದು ದೇಶಗಳಿಂದ ಬಂದ ಸುಮಾರು ಆರು ಸಾವಿರದ ಐನೂರು ಗೊಂಬೆಗಳಿವೆ. ಈ ಸಂಖ್ಯೆಗೆ ಮತ್ತಷ್ಟು ಹೊಸ ಗೊಂಬೆಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತಿವೆ ಕೂಡ.

ಆಯಾ ದೇಶಗಳ ಸಾಂಸ್ಕøತಿಕ ಶ್ರೀಮಂತಿಕೆಗೆ ಕನ್ನಡಿ ಹಿಡಿಯುವ, ಚಂದದ ಉಡುಗೆ-ತೊಡುಗೆಗಳನ್ನು ತೊಡಿಸಲಾಗಿರುವ ಇಂತಹ ಗೊಂಬೆಗಳ ವಿಶಿಷ್ಟ ಸಂಗ್ರಹವು ಜಗತ್ತಿನ ಬೇರೆಲ್ಲೂ ಸಿಗುವುದು ಕಷ್ಟ. ಮ್ಯೂಸಿಯಮ್ಮಿನ ಒಂದು ಭಾಗವು ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಗಳಂತಹ ಪಾಶ್ಚಾತ್ಯ ದೇಶಗಳ ಗೊಂಬೆಗಳಿಗೆ ಮೀಸಲಾದರೆ, ಉಳಿದ ಭಾಗವನ್ನು ಏಷ್ಯಾ, ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ದೇಶಗಳಿಗೆ ಮೀಸಲಿಡಲಾಗಿದೆ. 

ಹಾಗೆ ನೋಡಿದರೆ ಹಲವು ದೇಶಗಳ ಸಂಸ್ಕøತಿ, ಜೀವನಶೈಲಿಗಳನ್ನು ಗೊಂಬೆಗಳ ರೂಪದಲ್ಲಿ ಪ್ರಸ್ತುತಪಡಿಸುವುದೇ ಒಂದು ವಿಶಿಷ್ಟ ಸಂಗತಿ. ಮ್ಯೂಸಿಯಂ ಭೇಟಿಯ ದಿನದಂದು ಪ್ರತಿಯೊಂದು ಗಾಜಿನ ಗೂಡಿನಲ್ಲೂ ನನಗೆ ಕಂಡಿದ್ದು ವಿವಿಧ ದೇಶಗಳ ಪುಟ್ಟ ಮಿನಿಯೇಚರ್ ನೋಟಗಳು. ಈ ಬೊಂಬೆಗಳ, ಅವುಗಳಿಗೆ ತೊಡಿಸಲಾದ ಉಡುಗೆಗಳ, ಸುತ್ತಲಿರುವ ಪರಿಕರಗಳನ್ನು ಅದೆಷ್ಟು ಆಸ್ಥೆಯಿಂದ ಸಿದ್ಧಪಡಿಸಲಾಗಿದೆಯೆಂದರೆ ಹಲವು ದೇಶಗಳ ಇಣುಕುನೋಟಗಳು, ಕೆಲವೇ ಕೆಲವು ಅಡಿಗಳ ಪುಟ್ಟ ಗಾಜಿನಗೂಡುಗಳಲ್ಲಿ ನೈಜತೆಗೆ ಸವಾಲೊಡ್ಡುವಂತೆ ರೂಪತಾಳಿವೆ. ಶಂಕರ್ ರವರ ಗೊಂಬೆಗಳು ಮಕ್ಕಳ ರಂಜನೆಗಷ್ಟೇ ಸೀಮಿತವಾಗದೆ ಇತಿಹಾಸ-ಸಾಮಾಜಿಕ ವಿಷಯಾಸಕ್ತರಿಗೆ, ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಮುಖ್ಯವಾಗುವುದು ಹೀಗೆ. 

ಇಲ್ಲಿರುವ ಅತ್ಯಂತ ಹಳೆಯ ಗೊಂಬೆಯು ಸ್ವಿಟ್ಝಲ್ರ್ಯಾಂಡ್ ಮೂಲದ ಸುಮಾರು 18 ನೇ ಶತಮಾನದ ಕೊನೆಯ ಭಾಗದ್ದು. ಇನ್ನು ಮುಖ್ಯವಾಹಿನಿಯ ದೇಶಗಳಾದ ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾಗಳನ್ನು ಸೇರಿದಂತೆ ಬೊಲಿವಿಯಾ, ಕ್ಯೂಬಾ, ಜಾರ್ಜಿಯಾ, ಕಿರ್ಗಿಸ್ತಾನ್, ಬೆಲ್ಜಿಯಂ, ಡೆನ್ಮಾರ್ಕ್, ಹಂಗೇರಿ, ಪನಾಮಾ, ಗ್ವಾಟೆಮಾಲಾ, ಗ್ರೀನ್ ಲ್ಯಾಂಡ್, ಘಾನಾ, ಬಲ್ಗೇರಿಯಾ, ತೈವಾನ್, ಬೋತ್ಸ್ವಾನಾಗಳಂತಹ ಪುಟ್ಟ ದೇಶಗಳಿಂದಲೂ ದಿಲ್ಲಿಯ ಈ ಮ್ಯೂಸಿಯಮ್ಮಿಗಾಗಿ ಗೊಂಬೆಗಳು ಬಂದಿವೆ.

ಇಲ್ಲಿನ ಗಮನಾರ್ಹ ಅಂಶವೆಂದರೆ ಶಂಕರ್ ಸಂಗ್ರಹದಲ್ಲಿರುವ ನೂರಾರು ಗೊಂಬೆಗಳು ಹಲವು ದೇಶಗಳ ಗಣ್ಯರಿಂದ ಈ ಮ್ಯೂಸಿಯಂಗಾಗಿಯೇ ವಿಶೇಷ ಕೊಡುಗೆಯಾಗಿ ನೀಡಲ್ಪಟ್ಟವುಗಳು. ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಗಿದ್ದ ಯು. ಥಾಂಟ್, ಯುಗೋಸ್ಲಾವಿಯಾದ ಫಸ್ಟ್ ಲೇಡಿ ಆಗಿದ್ದ ಮೇಡಂ ಟಿಟೋ, ಗ್ರೀಸ್ ದೇಶದ ಮಹಾರಾಣಿ ಫ್ರೆಡೆರಿಕಾ, ಪೋಲಂಡಿನ ಪ್ರಧಾನಿ, ಥಾಯ್ಲೆಂಡಿನ ಮಹಾರಾಣಿ… ಹೀಗೆ ಮ್ಯೂಸಿಯಂ ನೋಡಲು ಬಂದಿದ್ದ ಗಣ್ಯಾತಿಗಣ್ಯರ ಪಟ್ಟಿಯು ಸಾಕಷ್ಟು ದೊಡ್ಡದಿದೆ.  

ಶಂಕರ್ ಪಿಳ್ಳೈ ತಮ್ಮ ಯಾವ ಮಹಾತ್ವಾಕಾಂಕ್ಷಿ ಯೋಜನೆಗಳನ್ನೂ ಕಾಟಾಚಾರಕ್ಕೆಂದು ಮಾಡಿದವರಲ್ಲ. ಇದಕ್ಕೆ ಈ ಅಂತಾರಾಷ್ಟ್ರೀಯ ಗೊಂಬೆಗಳ ವಸ್ತುಸಂಗ್ರಹಾಲಯವೂ ಹೊರತಲ್ಲ. ಹಳೆಯ ಗೊಂಬೆಗಳ ರಿಪೇರಿಗೆ ಇಲ್ಲಿ ‘ಗೊಂಬೆಗಳ ಕ್ಲಿನಿಕ್’ ಇದೆ. ಇಲ್ಲಿರುವ ಪುಟ್ಟ ಪ್ರೊಡಕ್ಷನ್ ಹೌಸೊಂದರಲ್ಲಿ ಹೊಸ ಬೊಂಬೆಗಳನ್ನು ಆಸ್ಥೆಯಿಂದ ಸಿದ್ಧಪಡಿಸಲಾಗುತ್ತದೆ.

ಪ್ರತಿಯೊಂದು ಗೊಂಬೆಯ ಕಣ್ಣರೆಪ್ಪೆಯಿಂದ ಹಿಡಿದು, ಬಟ್ಟೆಯ ದಾರದಲ್ಲಿರುವ ಸೂಕ್ಷ್ಮ ವಿನ್ಯಾಸದವರೆಗೂ ಇಲ್ಲಿನ ಡೀಟೈಲಿಂಗ್ ನಂಬಲಸಾಧ್ಯವೆನಿಸುವಷ್ಟು ಅದ್ಭುತ. ಇಲ್ಲಿ ತಯಾರಿಸಲಾಗುವ ಗೊಂಬೆಗಳನ್ನು ಮ್ಯೂಸಿಯಂ ಭೇಟಿಗೆಂದು ಬರುತ್ತಿದ್ದ ಕೆಲವು ಗಣ್ಯಾತಿಗಣ್ಯರಿಗೆ ರಿಟರ್ನ್ ಗಿಫ್ಟ್ ಗಳಾಗಿ ಕೊಡುವ ಪರಿಪಾಠವೂ ಇತ್ತಂತೆ. 

ಭಾರತದ ರಾಜಕೀಯ ಲೋಕವನ್ನು ತಮ್ಮ ಮೊನಚು ಗೆರೆಗಳಲ್ಲಿ ಸಮರ್ಥವಾಗಿ ಮೂಡಿಸಿದ್ದ ಶಂಕರ್ ಪಿಳ್ಳೈ ಹಿಂದೂಸ್ತಾನ್ ಟೈಮ್ಸ್ ತೊರೆದ ನಂತರ ‘ಶಂಕರ್ಸ್ ವೀಕ್ಲಿ’ ಎಂಬ ಕಾರ್ಟೂನ್ ಮ್ಯಾಗಝೀನ್ ಒಂದನ್ನು ಆರಂಭಿಸಿದ್ದರು. ಇಂದು ಹೆಮ್ಮರವಾಗಿ ಬೆಳೆದಿರುವ ಚಿಲ್ಡ್ರನ್ಸ್ ಬುಕ್ ಟ್ರಸ್ಟ್ (ಸಿ.ಬಿ.ಟಿ) ಅವರದ್ದೇ ಕನಸಿನ ಕೂಸು. ಭಾರತದಾದ್ಯಂತ ಬಾಲಸಾಹಿತ್ಯಕ್ಕೆ ಸಿ.ಬಿ.ಟಿ ನೀಡಿರುವ ಕೊಡುಗೆಯು ದೊಡ್ಡದು.

ಮಕ್ಕಳ ಬಗ್ಗೆ ಅಪಾರ ಒಲವಿದ್ದ ಪಿಳ್ಳೈ ಮಕ್ಕಳಿಗಾಗಿ ವಿವಿಧ ಚಿತ್ರಕಲಾ ಸ್ಪರ್ಧೆಗಳ ಮತ್ತು ಮಕ್ಕಳ ಓದಿಗಾಗಿಯೇ ಮೀಸಲಾದ ಸಾಹಿತ್ಯವನ್ನು ಪ್ರೋತ್ಸಾಹಿಸುವುದಕ್ಕೂ ಕಾರಣವಾದರು. ಮ್ಯೂಸಿಯಂನ ಭಾಗವಾಗಿ ಮೂಡಿಬಂದ ಡಾ. ಬಿ.ಸಿ. ರಾಯ್ ಸ್ಮರಣಾರ್ಥ ಮಕ್ಕಳ ಗ್ರಂಥಾಲಯ ಮತ್ತು ಓದಿನ ಕೊಠಡಿಯು ಇದರದ್ದೇ ಫಲ. 

ಗೊಂಬೆಯನ್ನು ಹಿಂದಿಯಲ್ಲಿ ‘ಗುಡಿಯಾ’ ಎನ್ನುತ್ತಾರೆ. ಮುದ್ದಾದ ಹೆಣ್ಣುಮಕ್ಕಳಿಗೂ ಕೂಡ ಸಾಮಾನ್ಯವಾಗಿ ಹೀಗೆ ಹೇಳುವುದುಂಟು. ‘ಲೇ ಗಯೀ ದಿಲ್ ಗುಡಿಯಾ ಜಾಪಾನ್ ಕೀ’, ಎಂದು ಬರೆದಿದ್ದರು ಖ್ಯಾತ ಕವಿ ಹಸ್ರತ್ ಜೈಪುರಿ. ‘ಗುಡಿಯಾ, ಹಮ್ಸೇ ರೂಠೀ ರಹೋಗಿ, ಕಬ್ ತಕ್ ನ ಹಸೋಗಿ’, ಎಂಬ ಮಜ್ರೂಹ್ ಸುಲ್ತಾನ್ ಪುರಿಯವರ ಗೀತೆಗೆ ಮಧುರ ದನಿಯಾದವರು ಲತಾ ಮಂಗೇಶ್ಕರ್. ಅವರಿವರ್ಯಾಕೆ? ನಮ್ಮ ನಾದಬ್ರಹ್ಮ ಹಂಸಲೇಖರವರೇ ಹಲವು ಬಾರಿ ಸೌಂದರ್ಯವನ್ನು ಬೊಂಬೆಗಳ ರೂಪಕದಲ್ಲಿ ಆವಾಹಿಸಿದವರು.

ಸೌಂದರ್ಯಕ್ಕೆ ಬಾರ್ಬಿ ಗೊಂಬೆಗಳು, ಅಪ್ಪುಗೆಗೆ ಟೆಡ್ಡಿಬೇರ್ ಗೊಂಬೆಗಳು, ಮಾಟಮಂತ್ರಗಳಿಗೆ ವುಡೂ ಬೊಂಬೆಗಳು, ಹಾರರ್ ಸಿನೆಮಾಗಳಿಂದಾಗಿ ವಿಲನ್ ಆಗಿಬಿಟ್ಟ ವಿಲಕ್ಷಣ ಬೊಂಬೆಗಳು… ಹೀಗೆ ಹೇಳುತ್ತಾ ಹೋದರೆ ಬೊಂಬೆ ಕತೆಗಳಿಗೆ ಆದಿಅಂತ್ಯಗಳಿಲ್ಲ. 

ಶಂಕರ್ ರವರ ಬೊಂಬೆಗಳ ಮ್ಯೂಸಿಯಮ್ಮಿಗೆ ಹೋಗುವುದೆಂದರೆ ನನಗೊಂದು ಬಗೆಯ ಮಿನಿ ವಿಶ್ವಪರ್ಯಟನೆಯಿದ್ದಂತೆ. ಭಾರತದ ರಾಮಾಯಣ-ಮಹಾಭಾರತದ ದೃಶ್ಯಗಳನ್ನು ಸಾರುವ ಬೊಂಬೆಗಳು, ಭಾರತೀಯ ನೃತ್ಯಗಳು, ಜನಪದ ಕಲೆಗಳನ್ನು ಸೇರಿದಂತೆ ಸೋವಿಯತ್ ಕಾರ್ಮಿಕರು, ಜಪಾನಿ ಸಮುರಾಯಿಗಳು, ಆಫ್ರಿಕನ್ ಬುಡಕಟ್ಟುಗಳು, ಡೆನ್ಮಾರ್ಕಿನ ಕೃಷಿಕರು… ಹೀಗೆ ಹಲವು ದೇಶಗಳ ಸೊಬಗನ್ನು ಒಂದೇ ಕಡೆ ನೋಡುವ ಭಾಗ್ಯವು ನಮಗಿಲ್ಲಿ ಲಭ್ಯ. ಶಂಕರ್ ಪಿಳ್ಳೈಯವರಿಗಿದ್ದ ಕನಸು ಮತ್ತು ದೂರದೃಷ್ಟಿ ನನ್ನನ್ನು ಕಾಡುವುದು ಇದೇ ಕಾರಣಕ್ಕಾಗಿ. 

ಶಂಕರ್ ರವರನ್ನು ಮಹಾತ್ಮಾಗಾಂಧಿಯವರು ಒಮ್ಮೆ ಹೀಗೆ ಕೇಳಿದ್ದರಂತೆ: ‘ನಿಮ್ಮಿಂದ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ಖ್ಯಾತಿ ಬಂತೋ? ಅಥವಾ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಿಂದಾಗಿ ನಿಮಗೆ ಖ್ಯಾತಿ ಬಂದಿತೋ?’, ಎಂದು. ತಮ್ಮ ಅಗಾಧ ಕಲಾಪ್ರತಿಭೆಯಿಂದ ಶಂಕರ್ ಮೂಡಿಸಿದ್ದ ಸಂಚಲನವೇ ಹಾಗಿತ್ತು.

ಶಂಕರ್ ಪಿಳ್ಳೈ ತಮ್ಮ ಎಂಭತ್ತೇಳು ವರ್ಷಗಳ ಜೀವಿತಾವಧಿಯಲ್ಲಿ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣಗಳನ್ನೂ ಸೇರಿದಂತೆ ಹಲವು ಜಾಗತಿಕ ಮಟ್ಟದ ಪುರಸ್ಕಾರಗಳಿಗೂ ಪಾತ್ರರಾಗಿದ್ದ ಮಹಾಸಾಧಕ. ಅಪ್ಪಟ ಕನಸುಗಾರ. ಹೇಳಿಕೊಳ್ಳಲು ದಿಲ್ಲಿ ಮ್ಯೂಸಿಯಮ್ಮಿನಲ್ಲಿರುವುದು ಕೇವಲ ಬೊಂಬೆಗಳಾಗಿರಬಹುದು. ಆದರೆ ಬೊಂಬೆಗಳ ರೂಪದಲ್ಲಿ ಪಿಳ್ಳೈಯವರು ದಿಲ್ಲಿಯಲ್ಲಿ ಕಟ್ಟಿಕೊಟ್ಟ ಕಲಾಪರಂಪರೆಯು ಮಕ್ಕಳಾಟವೇನಲ್ಲ.

‍ಲೇಖಕರು Admin

June 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: