ದಿಲಾವರ್ ರಾಮದುರ್ಗ ನೋಡಿದ ‘ಕಸಂದ್ರಾ’

ದಿಲಾವರ್ ರಾಮದುರ್ಗ

ನಾಟಕ: ಕಸಂದ್ರಾ
ರಚನೆ/ನಿರ್ದೇಶನ: ಹೆಚ್.ಎಸ್. ಶಿವಪ್ರಕಾಶ್

ಗ್ರೀಕ್‌ನ ಮೊಟ್ಟಮೊದಲ ನಾಟಕಕಾರ ‘ಏಸ್ಕಲಸ್’. ಅವನ ಹೆಸರಾಂತ ದುರಂತನಾಟಕ ‘ಅಗೆಮೆಮ್ನಾನ್’. ಇದು ಅವನ ‘ಒರೆಸ್ಥಸ್’ ತ್ರಿವಳಿ ನಾಟಕದ ಮೊದಲ ಭಾಗ. ಈ ಮೊದಲ ಭಾಗವನ್ನು ಆಧರಿಸಿದ ಹೆಚ್.ಎಸ್. ಶಿವಪ್ರಕಾಶ್ ರಚನೆಯ ಕಸಂದ್ರಾ ನಾಟಕ ಇತ್ತೀಚೆಗೆ ರಂಗಕ್ಕೇರಿದೆ.

ಆಗ್ರೋಸ್‌ನ ದೊರೆ ಅಗೆಮೆಮ್ನಾನ್ ತ್ರೋಯಾ ವಿಜಯದ ನಂತರ ತ್ರೋಯಾದ ರಾಜಕುಮಾರಿ ಕಸಂದ್ರಾಳೊಂದಿಗೆ ತನ್ನ ರಾಜಧಾನಿಗೆ ಹಿಂತಿರುಗುತ್ತಾನೆ. ಈ ವಿಜಯೋತ್ಸಾಹದ ಕ್ಷಣವೇ ಆತನಿಗೆ ಮೃತ್ಯುವಾಗುವುದು ನಾಟಕದೊಳಗಿನ ದುರಂತ ವಸ್ತು.

ದೊರೆ ಅಗೆಮೆಮ್ನಾನ್, ತ್ರೋಯಾದವರ ಮೇಲೆ ಯುದ್ಧಕ್ಕೆ ಹೋಗುವ ಮುನ್ನ ತನ್ನ ನೌಕಾದಳಕ್ಕೆ ಪ್ರತಿಕೂಲವಾಗಿದ್ದ ವಾಯುದೇವತೆಯ ಮನವೊಲಿಕೆಗೆ ತನ್ನ ಪುಟ್ಟ ಮಗಳು ‘ಇಫಿಜೀನಿಯಾ’ಳನ್ನು ಬಲಿಕೊಟ್ಟಿರುತ್ತಾನೆ. ಇದರಿಂದ ಅವನ ರಾಣಿ ಕ್ಲೈಟೆಮ್ನೆಸ್ಟ್ರಾ ಕುಪಿತಳಾಗಿ ತನ್ನ ಗಂಡನ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಿಯಕರ ಏಸ್ಥಗಸ್ ಜೊತೆ ಸಂಚು ಹೂಡಿ ದೊರೆಯನ್ನು ಮತ್ತವನ ಪ್ರಿಯತಮೆ ಕಸಂದ್ರಾಳನ್ನು ವಧೆ ಮಾಡುತ್ತಾಳೆ.

ಯುದ್ಧ ಮತ್ತದರ ಕ್ರೌರ್ಯವನ್ನು ವಿರೋಧಿಸುವ, ವಿಜಯದ ಗುಂಗಿನಲ್ಲಿ ಮುಳುಗಿ ಹೋಗುವ ಗಂಡಿನ ಮದವನ್ನು, ಹೆಣ್ಣಿನ ಹಾದರವನ್ನು ಬಗ್ಗುಬಡಿಯುವ ಮೂಲಕ ಕ್ಲೈಟೆಮ್ನೆಸ್ಟ್ರಾ ಹೆಣ್ಣು ಜನನಿ ಎಂದು ನಿರೂಪಿಸಲೆತ್ನಿಸುವಂತೆ ಅನಿಸುತ್ತಾಳೆ. ಹಾಗೆ ನೋಡಿದರೆ ಅದೊಂದು ಸೇಡಿನ ಮನೋಭಾವವಷ್ಟೆ. ಆದರೆ, ಕಸಂದ್ರಾ ಗಂಡು ಮೌಲ್ಯಗಳ ಬರಡುತನಕ್ಕೆ ಸಾಕ್ಷಿಪ್ರಜ್ಞೆಯಾಗುತ್ತಾಳೆ. ಹೀಗಾಗಿ ಕಸಂದ್ರಾ ಪಾತ್ರದ ಮೇಲೆ ಹೆಚ್ಚು ಒತ್ತು ನೀಡುವ ಮೂಲಕ ಹೆಣ್ಣಿನ ಜೀವಪರ ಆಶಯಗಳನ್ನು ಎತ್ತಿಹಿಡಿಯುವ ಯತ್ನ ಎಂಬಂತೆ ಪ್ರಯೋಗ ಧ್ವನಿಸಲೆತ್ನಿಸುತ್ತದೆ.

ಗ್ರೀಕ್ ರಾಜ ರಾಣಿಯರು, ಪುರಾಣ ಕಲ್ಪನೆಗಳು ಮತ್ತು ಹೆಣ್ಣು ದೇವರುಗಳ ಕಥನಗಳು ತುಂಬ ಆಸಕ್ತಿದಾಯಕವಾಗಿರುತ್ತವೆ. ಸೋಫೋಕ್ಲಿಸ್‌ನ ‘ಅಂತಿಗೋನೆ’ ನಮಗೆ ಅತ್ಯಂತ ಪರಿಚಿತ ದುರಂತ ನಾಟಕ. ಹೀಗಾಗಿ ಕಸಂದ್ರಾ ತರಹದ ಗ್ರೀಕ್ ದುರಂತ ಕಥನ ಇಂಡಿಯನ್ ಥಿಯೇಟರ್‌ಗೆ ಹೊಸ ಪರಿಚಯವೇನಲ್ಲ.
ಪ್ರಯೋಗದ ದೃಷ್ಟಿಯಿಂದ ನೋಡಿದರೆ ಕಸಂದ್ರಾ ಸ್ವಲ್ಪ ಭಿನ್ನ ಎನಿಸುತ್ತದೆ. ಪಂಜಿನ ಬೆಳಕಲ್ಲಿ ಒಟ್ಟು ಪ್ರಸ್ತುತಿ ಇದ್ದುದರಿಂದ ಭಿನ್ನದಂತೆನಿಸಿತು. ಆದರೆ, ಹೀಗೆ ಪಂಜಿನ ಬೆಳಕಲ್ಲಿ ನಾಟಕವಾಡುವುದು ಒಂದು ಕಾಲದ ಲಭ್ಯ ಅಥವಾ ಅನಿವಾರ್ಯದ ವ್ಯವಸ್ಥೆ ಆಗಿತ್ತು.

ಈಗ ವಿದ್ಯುತ್ ಬೆಳಕಿನ ಜಗತ್ತೇ ಸೃಷ್ಟಿಸಿಯಾಗಿದೆ. ಈಗಲೂ ಪಂಜಿನ ಬೆಳಕಿನ ನಡುವೆ ನಾಟಕವಾಡುವುದು ಹೊಸತು ಎನ್ನುವ ಭ್ರಮೆ ಮೂಡಿಸುತ್ತದೆ. ನಮ್ಮ ಜನಪದ ರಂಗಭೂಮಿ ಪಂಜಿನ ಬೆಳಕನ್ನು ಯಾವತ್ತೋ ಬಳಸಿಕೊಂಡಿದೆ. ಒಂದು ಸರ್ಕಲ್‌ನಲ್ಲಿ ಅದರ ಸೀಮೆ ಮೀರದಂತೆ ಒಳಗೇ ಹರಿದಾಡುತ್ತ ವಸ್ತುವಿನ ಆಶಯ ಅಭಿವ್ಯಕ್ತಿಸುವ ಪಾತ್ರಗಳು ವಿಶೇಷ ಎನ್ನುವಂಥ ಅನುಭವ ಕಟ್ಟಿಕೊಡುತ್ತವೆ. ಗ್ರೀಕ್ ಆಂಪಿ ಥಿಯೇಟರ್, ಬೀದಿ ರಂಗ ತಂತ್ರಗಳು ಕೂಡ ಹೀಗೆಯೇ ಅಲ್ಲವೆ?

ಕಸಂದ್ರಾ ಪ್ರಯೋಗದಲ್ಲಿ ಬರಿಯ ಮಾತುಗಳೇ ಇರುವುದರಿಂದ ದೃಶ್ಯ ವೈವಿಧ್ಯತೆ ಇಲ್ಲದೇ ನಾಟಕೀಯತೆ ಸೊರಗಿದಂತೆನಿಸುತ್ತದೆ. ವಸ್ತ್ರವಿನ್ಯಾಸ, ಮುಖವಾಡ, ಪಂಜಿನ ಬೆಳಕು, ಕೈಯಲ್ಲಿ ಕೋಲು ಮತ್ತಿತರ ಪರಿಕರಗಳನ್ನು ಬಳಸಿ ದುರಂತ ಕಥನವನ್ನು ಸಂಭಾಷಣೆ, ಹಾಡು, ಕೊಳಲ ದನಿಯ ಮೂಲಕ ಕಟ್ಟಿಕೊಡುವ ಯತ್ನ ಭಿನ್ನವಾಗಿತ್ತು. ಆದರೆ ತೀರ ಹೊಸತೇನು ಅಲ್ಲ.

‘ಐಸ್ ವೈಡ್ ಶಟ್’ ಎನ್ನುವ ಒಂದು ಇಂಗ್ಲಿಷ್ ಚಿತ್ರವಿದೆ. ಟಾಮ್ ಕ್ರೂಸ್ ಮತ್ತು ನಿಕೋಲಾ ಕಿಡ್ಮನ್ ಅಭಿನಯದ ೯೦ರ ದಶಕದ ಈ ಚಿತ್ರ ಲೈಂಗಿಕ ಸಾಹಸಕ್ಕೆ ತೆರೆದುಕೊಳ್ಳಲು ಅನ್ವೇಷಣೆಗೆ ಇಳಿವ ಗಂಡ ಹೆಂಡತಿ ಕೊನೆಯಲ್ಲಿ ಸಹಜದ ಅನುಭೂತಿಗೆ ಒಳಗಾಗುವ ವಸ್ತುವನ್ನು ಹೊಂದಿದೆ. ಸರ್ಜನ್ ಆಗಿರುವ ಗಂಡ ತನ್ನ ಹೆಂಡತಿಯ ಹೊಸ ಲೈಂಗಿಕ ಅನುಭವಕ್ಕೆ ತೆರಕೊಳ್ಳುವ ಬಗೆಗಿನ ಕಥನ ಕೇಳಿ ತಾನೂ ಅಂಥ ಸಾಹಸಕ್ಕಿಳಿಯುವ ಹಂಬಲದಿಂದ ಸೀಕ್ರೆಟ್ ಕೋಡ್ ಇಟ್ಟುಕೊಂಡು ನಡೆಯುವ ಒಂದು ಭೂಗತ ಗುಂಪಿನ ತೀರ ಭಿನ್ನ ಮತ್ತು ಅಷ್ಟೇ ನಿಗೂಢ ಸಭೆಗೆ ತೆರಳುತ್ತಾನೆ. ಅಲ್ಲಿ ಆತ ಬಹುತೇಕರು ಕಡುಕಂದು, ಕಪ್ಪು ಬಣ್ಣದ ಪೋಷಾಕು ಹಾಗೂ ಮುಖವಾಡಗಳನ್ನು ಹಾಕಿಕೊಂಡು ಒಂದು ಸರ್ಕಲ್‌ನಲ್ಲಿ ಸುತ್ತುತ್ತ ಮಧ್ಯದಲ್ಲಿ ಒಂದೆರಡು ಪಾತ್ರಗಳು ನಟಿಸುತ್ತಿರುವ ದೃಶ್ಯ ನೋಡಿ ಬೆಚ್ಚಿಕೊಳ್ಳುತ್ತಾನೆ. ಕಸಂದ್ರಾ ನಾಟಕದಲ್ಲಿನ ಪಾತ್ರಗಳ ಪೋಷಾಕು, ಮುಖವಾಡ, ಕೈಯಲ್ಲಿನ ಕೋಲು ಮತ್ತು ಸರ್ಕಲ್‌ನಲ್ಲಿ ಸುತ್ತುವ ಹಾಗೂ ನಡುವೆ ಪಾತ್ರಗಳು ನಿಂತು ನಟಿಸುವ ದೃಶ್ಯ ಸಿನಿಮಾದ ಆ ದೃಶ್ಯವನ್ನು ನೆನಪಿಸುವಂತಿವೆ.

ಇದರಾಚೆಗೂ ರಂಗಪ್ರೇಕ್ಷಕರಿಗೆ ಒಂದು ಭಿನ್ನ ಎನಿಸುವಂಥ ಅದರಲ್ಲೂ ರಂಗಾಸಕ್ತಿ ಮೂಡಿಸಿಕೊಳ್ಳುತ್ತಿರುವ ನವ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಬಹುದಾದ ಪ್ರಯೋಗ ಇದೆನ್ನಬಹುದು.

ನಾಟಕಕಾರ ಹೆಚ್.ಎಸ್. ಶಿವಪ್ರಕಾಶ್ ನಿರ್ದೇಶನ ಮತ್ತು ಸಾಲಿಯಾನ್ ಉಮೇಶ್ ನಾರಾಯಣ್ ಅವರ ಸಹ ನಿರ್ದೇಶನ ಮತ್ತು ಮಂಗಳಾ ಮತ್ತು ಶಿಲ್ಪಾ ಅವರ ವಸ್ತ್ರ ವಿನ್ಯಾಸದ ಸಾಂಘಿಕ ರಂಗಯತ್ನದಲ್ಲಿ ಪ್ರಯೋಗ ರೂಪುಗೊಂಡಿದೆ.

ನಟ ನಟಿಯರು ಕಥನವನ್ನು ಮತ್ತು ಪಾತ್ರಗಳ ಅಂತಃಸತ್ವವನ್ನು ತಮ್ಮತನದ ಸ್ಪರ್ಶದೊಂದಿಗೆ ಅಭಿವ್ಯಕ್ತಿಸಲು ಮುಕ್ತ ಅವಕಾಶ ಪಡೆದುಕೊಂಡವರಂತೆ ಅನಿಸಿದರು. ಇದೊಂದು ತರಹದ ಲಿಬರೇಟೆಡ್ ನಟ ನಟಿಯರ ಅಭಿವ್ಯಕ್ತಿಯ ಪ್ರಯೋಗದ ಹಾಗೆನಿಸಿತು. ಬಹುಶಃ ಈ ಕಾರಣದಿಂದ ಒಂದು ಮಟ್ಟಿನ ತಾಜಾತನವಿತ್ತು.
ಆದರೂ ಕಡೆಗೆ ನಾಟಕ ಏನನ್ನು ಹೇಳಲು ಯತ್ನಿಸಿತು? ದೇಶದ ಪ್ರಸಕ್ತ ಸಮಾಜೋ-ರಾಜಕೀಯ ಸ್ಥಿತಿಗೆ ಏನನ್ನು ಸಂವಾದಿಸಲು ಹೆಣಗುತ್ತಿದೆ ಎನ್ನುವುದು ಪ್ರೇಕ್ಷಕರಲ್ಲಿ ಕೊಂಚ ಕನ್‌ಫ್ಯುಶನ್ ಮೂಡಿಸಿತು.

ಹೆಣ್ಣು ಪಾತ್ರಗಳು ಪದೇ ಪದೇ ‘ಪ್ರವಾದಿ ಹೊದಿಕೆ ಹೋಗುತ್ತಲೇ ಇಲ್ಲ ..’ ಎನ್ನುವುದು ಯಾವುದರತ್ತಲಿನ ತೋರುಬೆರಳು? ಉಕ್ರೇನ್ ಯುದ್ಧ ಮತ್ತು ಇಂಡಿಯಾ ತನ್ನ ಸುತ್ತಲಿನ ದೇಶಗಳ ಜೊತೆ ಸಂಘರ್ಷಕ್ಕಿಳಿಯುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಕಸಂದ್ರಾ ಮೂಲಕ ಜೀವಪರ ನಿಲುವುಗಳನ್ನು ಪ್ರತಿಪಾದಿಸಲು ಯತ್ನಿಸಿತೆ ಎನ್ನುವಂಥ ಜಿಜ್ಞಾಸೆಗಳು ನನ್ನೊಳಗೆ.

(ಇಲ್ಲಿನ ಕೆಲವು ಚಿತ್ರಗಳು ಐಸ್ ವೈಡ್ ಶಟ್ ಚಿತ್ರದ ದೃಶ್ಯಗಳು)

‍ಲೇಖಕರು Admin

June 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: