ಕಣ್ಣಾಮುಚ್ಚಾಲೆ
ವೈ ಕೆ ಸಂಧ್ಯಾಶರ್ಮ
ಕನಸುಗಳ ಪಲ್ಲಕ್ಕಿ ಹೊತ್ತ
ಸಿಂಗರದ ಮೆರವಣಿಗೆ
ಅಂಕುಡೊಂಕಿನ
ಯೌವ್ವನ ಚಿಮ್ಮಿಸುತ
ಭರತನಾಟ್ಯದ ಭಂಗಿಯ
ಆ ಒಂಟಿಮರ
ಜೋಡಿರಸ್ತೆಯ
ಹಸುರಿಗೆ ಮಿಂದು
ಫಲವತಿಯಾದವಳು!
ಬಸ್ಸ್ಟಾಪಲಿ ನಿಂತವರು
ಹೋಟೆಲತ್ತ ನಡೆದವರು
ಲಿಫ್ಟೇರಿಸಿಕೊಳ್ಳಲು ಕಾತರಿಸಿ
ನಿಂತ ಕಾರು,ಬೈಕಿನವರು
ಸರ್ಕಲಲಿ ಕಣ್ತಂಪಿಸಿಕೊಳ್ಳ
ಬಯಸಿ ಹವಣಿಸಿದವರು
ಕೊರಳು ಕೊಂಕಿಸಿದರೆ
ನೋಟ ಅಂಚಿಸಿದರೆ
ಕಂಡೇ ಕಾಣುವ
ನಗುವ ಹೂಗೊನೆ ಹೊತ್ತ
ಆ ಮರಕೆ
ದೃಷ್ಟಿಶೂಲ !

`ಆಹಾ ಎಂಥ ಚೆಂದದ ಮರ
ಕಣ್ಕುಕ್ಕುವ ಹೂ ರಾಶಿ’
ಸೌಂದರ್ಯಾಸ್ವಾದದ ಬುರುಗು
ಕೆನೆಗಟ್ಟಿದಾಗ
ಕಣ್ಣು ಹಸಿಯಾಗುತ್ತದೆ
ಚಿತ್ತ ಮಸಿಯಾಗುತ್ತದೆ
ದನಿ ಕುಸಿದು ಬಿಕ್ಕುತ್ತದೆ
ನೋವು ನಿಟ್ಟುಸಿರಾದ
ದೈನ್ಯ ನಿಶ್ಶಬ್ದ ಕನಲಿ
ಅಸಹಾಯದಿ ಕೈಯೆತ್ತಿ
ನುಲಿವ
ಕಂಗೆಟ್ಟ ಹರಿಣಿ
ಖೂಳ ವ್ಯಾಘ್ರರ
ದಿಟ್ಟಿ ತಿವಿಯುತ್ತದೆ
ಟಾರು ಕಾಣದ
ಇಕ್ಕೆಲದ ರಸ್ತೆ
ಜಲ್ಲಿಪಲ್ಲಿ
ಹೆಬ್ಬಂಡೆ ಬಿರುಕು
ಪರ್ವಕಾಲದ ಹಾದಿ
ಸಿಬುರ ಮೂಳೆ ಮೈಗೆ
ಸಿಗಿಸಿದಾಭರಣಗಳ
ಎರ್ರಾಬಿರ್ರಿ ಎಡತಾಕಿ
ಕೆದರಿ ಉದುರಿಸುವ
ಗುಜರಿ ವಾಹನಗಳಿಗೆ
ಯಾರದೇನು ಆಕ್ಷೇಪ?
ಯಾರೋ ಕೆಡವಿದ
ಬೀದಿ ಹೂಗಳ ತುಳಿಯಲು
ಯಾರಪ್ಪನ ಮುಲಾಜು?
ಇಷ್ಟಕ್ಕೂ
ಮುಚ್ಚಟೆಯಿಂದಪ್ಪುವ
ಹಸಿರು ಗರಿಗಳೇ
ಆ ನವೆದ ಮರದಲಿ
ಪತ್ತೆಯಿಲ್ಲವಲ್ಲ!
ಕತ್ತೆತ್ತಿ ನೋಡಿದರೆ
ಮಲೆತ ಗುಮ್ಮುವಾಗಸ
ಬೆನ್ನ ಕುಕ್ಕುವ
ಗರಗಸದ ಮುಳ್ಳುಗಳು
ಇರಿವ ಕೊಳೆತ ಕಣ್ಣುಗಳು
ಕಣ್ಣು ಕುರುಡಾಗಿ
ಮೈಯಿ ಮರಗಟ್ಟಿ
ಮನಸ ಮುಷ್ಠಿಗಟ್ಟಿಸಿ
ಬ್ಯೂಟಿಪರೇಡಿಗೆ ತಾಲೀಮೆನ್ನಲಿ
ಮುಗಿಲಿಗೆ ಕೈಯೆತ್ತಿ ಬೇಡುವ
ಅನಾಥಪ್ರಜ್ಞೆಯೆ ಇರಲಿ
ದಿನ ಬಾಡುವವರೆಗೆ
ಕಣ್ ಮಿಟುಕಿಸಲೇಬೇಕಲ್ಲವೇ?






channagide madam kavite
ತುಂಬಾ ಚೆಂದದ ಪದ್ಯ.
ಕಣ್ಣಮುಚ್ಚಾಲೆಯ ಕಂಬನಿಯಲಿ ಮಿಡಿದ ಈ ಕವಿತೆಯ ಅರ್ಥ ಓದುಗರಿಗೆ ಒಂದೊಂದು ರೀತಿ…ಒಂದೊಂದು ರೀತಿಯಲೂ ಒಂದೊಂದು ಭಾವ ಹುಟ್ಟಿಸಿ ಸ್ಪೂರ್ತಿ ತುಂಬುವ ನಿಮ್ಮ ಕವಿತೆ ಚೆನಾಗಿದೆ…..
nice..