ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಿನ್ಕಕೊಂದು ಜಿಪಿ ಕವಿತೆ- ಬಳ್ಳಾರಿ ಸಂಗಮ…

ಜಿ ಪಿ ಬಸವರಾಜು

ಅಟ್ಟ ಅಡಿಗೆಗೆ ಹಲವು ರೂಪ
ನಾಲಿಗೆಯ ರುಚಿ ನೂರಾರು
ಊರು ಬೇರೆಯಾದರೂ ರುಚಿ
ಅದೇ, ಅವರವರ ಚಾಪಲ್ಯಕ್ಕೆ

ಚಿತ್ತಕ್ಕೆ ಬಳ್ಳಾರಿಯೊ ಧಾರವಾಡವೊ
ಕಾವ್ಯ ಚಿಗುರೊಡೆಯುವುದು ಒಡಲ
ತುಡಿತಕ್ಕೆ; ಬಿಸಿಲೊ ಚಳಿಯೊ ಬೀಸಿದ
ಗಾಳಿ ಹೊತ್ತು ತರುವುದು ಪರಿಮಳವ

ಬಳ್ಳಾರಿಯೂ ತಂಪಾಗಿತ್ತು ಹತ್ತು
ದಿಕ್ಕುಗಳಿಂದ ಬೀಸಿದ ಗಾಳಿಗೆ, ತುಂಗ-
ಭದ್ರೆಗೂ ಸೆಳವಿತ್ತು ಬೇಸಿಗೆಯಲ್ಲೂ
ಯೂರೋಪು, ಅಮೆರಿಕ, ಅರ್ಜೆಂಟೈನಾ
ಚಿಲಿ, ಇರಾನೂ ಇತ್ತು, ಈಜಿಪ್ಟು ಇಂಗ್ಲೆಂಡು

ಹೊತ್ತು ತಂದಿದ್ದರು ಎಲ್ಲ ತಂತಮ್ಮ ಬ್ಯಾಗು
ಬಟ್ಟೆ ಕ್ಯಾಮರಾ, ಬೆರಳ ತುದಿಯಲ್ಲಿತ್ತು ಊರು
ದೇಶ, ಭಾಷೆ, ಬೆಡಗು, ನೆಲದ ಪರಿಮಳ, ಹಾಡಿ,

ಹಾಡಿದರು ಮಾತಾಡಿದರು ಮೌನದಲಿ ಎದೆಯ
ತೆರೆದು ತೋರಿಸಿದರು ನೋವಿನಾಳವನು- ಖಾಲಿ
ತಳವನು, ನಿಟ್ಟುಸಿರು ಏರಿತು ಬಳ್ಳಾರಿ ಮುಗಿಲಿಗೆ
ತುಂಗಭದ್ರೆ ತುಳುಕಿತು ನೀರು ಕಣ್ಣೀರನು ಬೆರಸಿ

ರಕ್ತ ಎಲ್ಲ ನೆಲ ನಾಡುಗಳಲ್ಲೂ ಕೆಂಪೇ ಕೆಂಪು
ಹಾಡುವ ಕೋಗಿಲೆಯ ಕತ್ತು ಮುರಿದರೆ ಚೀರುವುವು
ಸಾವಿರ ಕೊರಳು ನೆಲ ಮುಗಿಲು ನಡುಗುವಂತೆ

ಸಂಗಮದಲ್ಲಿ ಬಿದ್ದನೊ ಎದ್ದನೊ ಬಸವಣ್ಣ
ಅವನ ಗಂಟಲ್ಲಿ ಅಕ್ಕ ಅಲ್ಲಮ ಸಿದ್ಧರಾಮಣ್ಣ
ಹರಳಯ್ಯ ಮಧುವರಸ ಮೋಳಿಗೆಯ ಮಾರಯ್ಯ

ಮಾರುತ್ತದೆ ಬಳ್ಳಾರಿಯ ಮಾರುಕಟ್ಟೆ ಉರಿ
ಬಿಸಿಲಲ್ಲಿ ಬೆವರು ಹರಿಸುತ್ತ ಇತಿಹಾಸವನು
ಒರೆಸಿ ಹಾಕುತ್ತ ವರ್ತಮಾನದ ಗಣಿಯ ಗುಂಡಿ-
ಯಲ್ಲಿ ವಿಲವಿಲ ಒದ್ದಾಡುತ್ತ ಉಸಿರುಗಟ್ಟಿ

ಹಾಡು ಹಿಡಿದು ಬಂದಿದ್ದಾರೆ ಪರದೇಶಿ
ನಾಡುಗಳಿಂದ, ಕೊಳ್ಳಿರಿ, ನೆಟ್ಟುಬಿಡಿ ನಿಮ್ಮ
ನಿಮ್ಮ ಅಂಗಳದಲ್ಲಿ ಉಳಿದಷ್ಟೆ ಜಾಗದಲ್ಲಿ
ನಾಳೆಗಾದರೂ ಮೊಳಕೆ ಚಿಗುರು ನೆರಳು

ನೆಲ ನಗಲಿ ಮತ್ತೆ ತೆರೆಯಲಿ ಹಂಪೆಯಲಿ
ಮುತ್ತು ರತ್ನಗಳ ಬೀದಿ ವ್ಯಾಪಾರವಲ್ಲ
ನಳನಳಿಸುವ ಕೊತ್ತಂಬರಿ ಸೌತೆ ಬದನೆ
ಮೂಲಂಗಿ ಉಳ್ಳಾಗಡ್ಡೆ ಬೆಳ್ಳುಳ್ಳಿ ಭರಪೂರ

‍ಲೇಖಕರು avadhi

14 April, 2023

1 Comment

  1. ಗಣಪತಿ ಬಾಳೆಗದ್ದೆ

    ಅವಧಿಯ ಕವಿತೆಗಳು ಸುಂದರವಾಗಿರುತ್ತವೆ.

    -ಗಣಪತಿ ಬಾಳೆಗದ್ದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading