ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಿನ್ಕಕೊಂದು ಜಿಪಿ ಕವಿತೆ- ಆಗಸ್ಟ್‌ ೧೫, ೨೦೨೨…

ಜಿ ಪಿ ಬಸವರಾಜು

ನಡು ಹಗಲಿಗೇ ಕವಿದಿದೆ ಮಬ್ಬುಗತ್ತಲು
ಭಯಭೀತ ರಸ್ತೆಗಳಲ್ಲಿ ಬೂಟು ಸದ್ದು
ನಡೆದು ಹೋಗುವ ಆಕಾರಕ್ಕೆ ನೆರಳಿಲ್ಲ
ಸತ್ಯದ ಮಾತು ಬಹಳ ದುಬಾರಿ
ಆಡಿದವರ ಗಂಟಲನ್ನು ಒತ್ತಿಹಿಡಿವ
ಕೈಗಳು ಚಾಚಿಕೊಂಡಿವೆ ಎಲ್ಲಿಂದ ಎಲ್ಲಿಗೋ

ಎಲೆ ಉದುರಿ ಬೋಳಾದ ಮರದಲ್ಲಿ ಹಕ್ಕಿಗಳಿಲ್ಲ
ಗೂಡುಗಳಿಲ್ಲ ಮೊಟ್ಟೆಗಳಿಲ್ಲ ನಾಳಿನ ಕನಸು
ಹೊತ್ತ ಜೀವಗಳು ದೇಶಾಂತರ ಹೋಗಿವೆ, ಇದು
ಯಾವ ಋತು, ಮರ ಚಿಗಿತು ಮತ್ತೆ ಹಸಿರು ಬೀಗು-
ವುದೇ?- ಹೇಳುವವರಿಲ್ಲ ಪ್ರಶ್ನೆಯೂ ಈಗ ನಿಷಿದ್ಧ

ನಿನ್ನ ಬೆರಳ ಗುರುತೂ ಬೇಡ, ದಾಖಲೆಗಳಲ್ಲಿ
ನಿನ್ನ ಮುಖವಿದೆ, ದೇಶ ನಡೆಯಲು ಅಷ್ಟೆ ಸಾಕು
ಮತದಾನಕ್ಕೆ ಗುಂಡಿ ಒತ್ತು ಉಳಿದದ್ದನ್ನೆಲ್ಲ
ನೋಡಿಕೊಳ್ಳುತ್ತಾರೆ, ಯಂತ್ರಕ್ಕೂ ಅಧಿಕಾರವಿದೆ

ಜೈಲಿನ ಗೋಡೆಗಳು ಎತ್ತರವೇನಲ್ಲ, ಉಣ್ಣಲು
ತಿನ್ನಲು ಮಲಗಲು ಎಲ್ಲವೂ ಇದೆ, ಬೇಸರಾದರೆ
ಮೇಲೆ ನೋಡು ಚಚ್ಚೌಕ ಆಕಾಶ ತೆರೆದಿದೆ ನೀಲಿ
ನೆನೆದುಕೋ ಬೇಕಾದವರ, ಕಟ್ಟಿಕೊ ಕನಸುಗಳನು

ಎಷ್ಟೊಂದು ಭಾಗ್ಯಗಳು, ಬ್ಯಾಂಕುಗಳು, ಖಾಲಿ ಕೈ-
ಯಲ್ಲಿ ತಿರುಗಾಡು ಡಿಜಿಟಲ್‌ ವ್ಯವಹಾರ ಕರೆದಿದೆ
ಪಾಕ್‌ ಎಂದರೆ ಪಾಕು, ಚೀನಾ ಎಂದರೆ ಚೀನಾ
ನಿನಗೇಕೆ ಅದರ ಚಿಂತೆ, ತಿನ್ನು ಮೈಸೂರು ಪಾಕು
ಹಿಜಾಬು ಹಲಾಲು ಮಸೀದಿ ಚರ್ಚು ನಾವೆ
ನೋಡಿಕೊಳ್ಳುತ್ತೇವೆ, ಕೈಮುಗಿ, ಮನಸಿನ
ತುಂಬ ತುಂಬಿಕೊಳ್ಳಲಿ ಆಕಾರ ನಿರಾಕಾರ
ಬಣ್ಣಗಳ ಗೊಡವೆ ಬೇಡ ನಾವೆ ಕೊಡುತ್ತೇವೆ

ದೇಶವೆಂದರೆ ಭಾಷೆ, ಭಾಷೆ ಎಂದರೆ ಧರ್ಮ
ನಾವೆಲ್ಲ ಒಂದು, ಒಂದೇ ಧರ್ಮ ಒಂದೇ ಭಾಷೆ
ಚೌಕಾಶಿ ಯಾಕೆ, ನಾವೆಲ್ಲ ಒಂದೇ, ಬಂಧು ನಾವೆ
ತೇಲಬೇಕೆಂದರೆ ಭಾರ ಕಡಿಮೆಯಾಗಬೇಕಲ್ಲವೇ?

ನೆನೆದುಕೋ ಸುವರ್ಣ ಯುಗಗಳನು ನಾವೆ ಕಟ್ಟಿ
ಆಳಿ, ವಿಸ್ತರಿಸಿ, ಚರಿತ್ರೆ ಬರೆದೆವು, ಅಳಿಸಿಹೋದ
ಚರಿತ್ರೆಯನ್ನು ಮತ್ತೆ ಬರೆಯುತ್ತೇವೆ, ನೋಡಿಕೋ
ನೀನು, ಒಳಗಿನವನೋ ಹೋರಗಿನವನೋ

‍ಲೇಖಕರು avadhi

11 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading