ನೆನಪಿನಲ್ಲಿ ಮರುಗುತ್ತಿರಬೇಕು

ಕೊಡೆಯ ಮೇಲೆ ಟಪ್ ಟಪೆಂದು
ಬೀಳುತ್ತಿದ್ದ ಒಂದೊಂದು ಹನಿಗಳು
ನನ್ನದೇ ಅಳುವಿನ ಸದ್ದಿನಾಗುತ್ತಿತ್ತು
ಅವುಗಳನ್ನು ಆರಿಸಿ, ಎಣಿಸಿ
ಜೇಬಿನೊಳಗೆ ತುಂಬಿಕೊಂಡು
ತಂದಿದ್ದೆ
ತಂದು ಹುಲ್ಲು ಹಾಸಿನ ಮೇಲೆ
ಕೂತು ಮತ್ತೆ ಎಣಿಸಿದೆ
ಲೆಕ್ಕ ಸರಿಯಾಗಿಯೇ ಇತ್ತು
ಅವುಗಳದ್ದು ಎಂಥ ನಿಯತ್ತು
ಒಂದೂ ತಪ್ಪಿಸಿಕೊಂಡಿರಲಿಲ್ಲ
ಕಂಗಳಲ್ಲಿ ದಿಗಿಲಿತ್ತು
ಪಾಪ, ಹೆದರಿಕೊಂಡಿದ್ದವೊ ಏನೊ!
ಮೋಡ, ಮುಟ್ಟಬೇಕಾದ ನೆಲದ
ನೆನಪಿನಲ್ಲಿ ಮರುಗುತ್ತಿರಬೇಕು,
ಎರಡು ದಿನ ಸರಿ ಹೋದಾವು!
ಎಂದು ನಿರ್ಧರಿಸಿ
ಸಾಕಿಕೊಳ್ಳಲು ತೀರ್ಮಾನಿಸಿದೆ

ನನಗೇನು ಬೇಕಿರಲಿಲ್ಲ
ಬೇಸರಕ್ಕೆಂದು ಕೂತಾಗ
ಕೊಡೆಯ ಮೇಲೆ ಸುರಿಯುತ್ತಿದ್ದಂತ
ಒಂದು ಹಾಡು; ಇಲ್ಲವೇ
ಕವಿಗೋಷ್ಠಿಯಲ್ಲಿ ಹೊಸ ಕವಿಯೊಬ್ಬ
ವಾಚಿಸುವ ಕವನದಂತೆ
ಉಲಿದರೆ ಸಾಕಿತ್ತು!
ಬೊಗಣಿಯಲ್ಲಿ ಸುಮ್ಮನಿದ್ದ ಸದ್ದುಗಳು
ಮಧ್ಯರಾತ್ರಿಗೆ ಎದ್ದು ಅಳತೊಡಗಿದ್ದವು
ಉಣಿಸಲು ನನ್ನ ಎದೆಯಲ್ಲಿ
ಯಾವ ಕಪ್ಪು ಮೋಡವಿತ್ತು?
ಮಿಂಚು ಸಿಡಿಲುಗಳ
ಹಿತ ಆಹಾರವಾದರೂ ಎಲ್ಲಿತ್ತು?
ಬೆಳಗ್ಗೆ ಎದ್ದಾಗ ಬೊಗಣಿ
ಖಾಲಿಯಿತ್ತು,
ಯಾವ ಮಾಯೆಯಲ್ಲಿ ಎದ್ದು
ಹೊರಟು ಹೋಗಿದ್ದವೊ!
ಹುಡುಕ ಹೊರಟವನಿಗೆ ಕಂಡಿದ್ದು
ದಾರಿ ಮರೆತು ನಡುರಸ್ತೆಯಲ್ಲಿ
ಬಿಕ್ಕುತ್ತಲೇ ಇರುವ ಸದ್ದುಗಳು
ಮತ್ತು
ಅವತ್ತು ಕೊಡೆಯಿಂದ ಹೊರನಡೆದಿದ್ದ
‘ಅವಳ’ ನೆನಪಿನ ತುಣುಕುಗಳು.






ಒಳ್ಳೆಯ ಕವಿತೆ