ಪ್ರಕಾಶ್ ಪೊನ್ನಾಚಿ
ನನಗೆ ಗೊತ್ತು ನನ್ನದೇ ವಿಳಾಸ
ಹುಡುಕುತ್ತಾ ನೀವು ಬಂದಿರಬಹುದು
ಜ್ಙಾಪಿಸಿಕೊಂಡು ಮುಂದಡಿಯಿಟ್ಟು
ದುರ್ಬೀನಿನ ಲೆನ್ಸಿನ ಧೂಳು ಒರೆಸಿಕೊಳ್ಳಿ
ಪೀನ ನಿಮ್ನವೆಂದರಿಯದ ಫಲಕಗಳು
ನಿಮ್ಮನ್ನು ತಪ್ಪು ವಿಳಾಸಿಸಿ ದಾರಿ ತಪ್ಪಿಸಬಹುದು
ನಿಮ್ಮ ಜೇಬಿನಲಿ ಉದುರಿದ
ಗಾಂಧೀ ನೋಟಿನಲಿ
ಬಿಲ್ವಪತ್ರೆ ವಾಸನೆ ಮೂಗು ಬಡಿಯಿತೆಂದು
ಅದು ನೀವೇ ಎಂದು ನಾನು ಊಹಿಸಲಾರೆ
ಆದರೂ
ಫಕೀರನೊಬ್ಬನ ಚಪ್ಪಲಿ ಗುರುತು ಹುಡುಕಿ
ಇಂಚುಗಳ ಎಣಿಸುತ್ತೀರೆಂದು
ಓಣಿಯಲಿ ಮುರಿದ ಅಳತೆಪಟ್ಟಿಗಳು ಪುರಾವೆ ಇಟ್ಟಿವೆ
ಯಾರೋ ಸುಟ್ಟ ತರಗು ಎಲೆಯ ಬೂದಿ
ಮೆತ್ತಿಕೊಂಡ ನಿಮ್ಮ ಪಾದ
ಮಿಂದ ಮಳೆಗೆ ಮಾಸಿ ಪಳೆಯುಳಿಕೆಯಂತಾದ
ನಿಮ್ಮ ಊರುಗೋಲಿನ ಹಸಿ ಗುರುತು
ನನ್ನ ಮನೆಯ ದಾರಿ ಕಾಣವೇ..?

ಹೂವೊಂದು ಮೈನರೆದು ಬಿದ್ದ ಸದ್ದ್ಧಿಗೆ
ನೀವು ಹೆದರಿದಿರಿ
ದಾರಿಯಲಿ ದುಂಬಿಯೊಂದರ ಕಾಲಿಡಿದ ನೂಲು
ಸೀದಾ ನನ್ನದೇ ಗೋಡೆಯ ಕವಲುಗಳಿಗೆ
ಎಳೆದು ಬಂದುದ ನೋಡಿ ನಿಂತಿರಿ
ಇಗೋ
ನೀವು ಬಂದ ದಾರಿ ಗುರಿಯ ಮುಟ್ಟಿದೆ
ನನಗೂ ಒಂದು ಧಿಮಾಕಿದೆ ಈಗೀಗ
ನೀವಿಡುವ ಬಂದೂಕಿನ ತೂತಿನಲಿ
ಹುಲ್ಲೊಂದು ಹುಟ್ಟಬಹುದು
ತೂರಿಬಿಟ್ಟ ಗುಂಡಿನಲಿ ಮೊಗ್ಗೊಂದು ಅರಳಬಹುದು
ಮತ್ತೆ ಸರಿ ರಾತ್ರಿಯಲಿ
ಎದೆಯ ಎವೆಗೆ ಬಿದ್ದ ಹನಿ
ನಿಮ್ಮ ಕೋಪ ತಂಪಿಸಬಹುದು
ನನ್ನ ಸಾವಿಗೆಂದೇ ನೀವು ಲಗ್ಗೆ ಇಟ್ಟಿರೆ
ಇದೋ ನನ್ನ ಬೆಂಕಿಯ ಕಣ್ಣುಗಳನ್ನೀಗ
ನಂದಿಸಿಬಿಡುತ್ತೇನೆ ಒಪ್ಪಿಸಿಕೊಳ್ಳಿ
ನನ್ನ ಸ್ಥಬ್ಧ ಹೃದಯದಲಿ ಉಸಿರಿಕ್ಕಿಕೊಂಡ ಆತ್ಮದ
ಪಾದಗಳು ಇನ್ನಾದರೂ ಸಾಯಲಿ..






Super JP
ತುಂಬಾ ಇಷ್ಟವಾಯಿತು