ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಾದಾಪೀರ್ ಜೈಮನ್ ಕವಿತೆ- ಅರಮನೆ…

ದಾದಾಪೀರ್ ಜೈಮನ್

ರಾಜರು ಕಟ್ಟಿ ಬಿಟ್ಟು ಹೋದ
ಅರಮನೆಗಳಲ್ಲೀಗ
ಸಾಮಾನ್ಯ ಪ್ರಜೆಗಳು ಸುಳಿದಾಡುವಾಗ
ಅಂದಿಂದಿಗೂ ಅವುಗಳ ಮೇಲೆ ಹಿಕ್ಕೆ ಹಾಕುತ್ತಾ
ಹಾರಾಡಿಕೊಂಡಿರುವ ಪಾರಿವಾಳ ಪಕ್ಷಿ ಚಿಟ್ಟೆಗಳೆಲ್ಲಾ
ಪಿಸುಗುಟ್ಟಿಕೊಳ್ಳುತ್ತಾ ಅಣಕವಾಡುತ್ತವೆ.

ಭಾನುವಾರದ ಬೆಳಗುಗಳಲ್ಲಿ
ರಜೆಗೆ ಪೇಟೆಗೆ ಬಂದ ತವರ ಮಕ್ಕಳ ಹಿಂಡು ಕಟ್ಟಿ
ಟಿಪ್ಪುವಿನದೊ ಒಡೆಯರದೋ ಮತ್ಯಾವ ಬಹಾದ್ದೂರನ
ಬೇಸಿಗೆ ಅರಮನೆಗಳ ಗೇಟು ತಲುಪಿದಾಗ
ಅಲ್ಲಿನ ಕಾವಲುಗಾರ
ಟಿಕೆಟ್ ಟಿಕೆಟ್
ಎಂದು ಗುಟುರುಹಾಕುತ್ತಾನೆ.

ಅರಮನೆಯ ನೂರು ಕಂಬಗಳು
ಬಾಗಿಲು ಕಿಟಕಿ ಕಮಾನುಗಳು
ಕಂಬಗಳ ಮೇಲಿನ ಎಂಟು ದಳದ ಕಮಲಗಳು
ಅಲ್ಲೇ ಕಾಣುವ ಈಜುಗೊಳ
ಗೋಡೆಚಿತ್ರದ ಕಲಾಕೃತಿ ವಾಸ್ತುಶಿಲ್ಪಗಳು
ಎಲ್ಲವನೂ ಬೆರಗುಗಣ್ಣುಗಳಲ್ಲಿ ತುಂಬಿಕೊಂಡು
ಸಿರಿತನಕ್ಕೊಂದು ಸಲಾಂ ಹೊಡೆದು
ರಾಜರ ಕೊಡುಗೆಗಳನ್ನು ಕೊಂಡಾಡಿ
ಪರಾಕ್ರಮ ಆಕ್ರಮಣಗಳ ನಿಕಷಕ್ಕೊಡ್ಡಿ
ದರ್ಬಾರುಗಳಲ್ಲಿ ನಡೆದಾಡಿ
ತಾನೂ ಒಂದು ಅರಮನೆಯಂಥ ಮನೆಮಾಡುವ ಕನಸು ಕಟ್ಟಿ
ಅಲ್ಲೇ ಹಿತ್ತಲ ಪಕ್ಕದ ತೋಟದಲ್ಲಿರುವ
ರಾಜನ ಸಮಾಧಿಯ ಮುಂದೆ
ಒಂದು ಘನ ಮೌನ

ಆ ಮೌನವ ತಡವಲದೇನೋ ವ್ಯಾಕುಲತೆ  
ಸುತ್ತ ಸುಳಿಯುವ ಗಾಳಿ ಬೆಳಕುಗಳ
ಒಳಗೆಳೆದುಕೊಳ್ಳುತ್ತಾ  
ಅಲ್ಲೇ ಮತ್ಯಾರನ್ನೋ ಕರೆದು
‘ಒಂದು ಫೋಟೋ ತೆಕ್ಕೊಡಿ’
ಎಂದು ವಿನಂತಿಸಿ
ಬೆನ್ನಹಿನ್ನಲೆಗೊಂದೊಳ್ಳೆ ಜಾಗ ಹುಡುಕಿ
ಇಷ್ಟದ ಭಂಗಿ ಧರಿಸಿ
ಆವಾಹಿಸಿಕೊಂಡೊಂದು ಮುಗುಳ್ನಗೆ
ತಡೆಹಿಡಿದು ಮತ್ತೊಂದು ಕ್ಷಣ
ಬಿಟ್ಟರೆ ಹಾರಿ ಹೋಗುವ ಜೀವದಂತೆ
ನಿಲ್ಲಿಸಿ
ನಿಂತು
ಕಾಯುವಾಗ…

ದಕ್ಕುವ ಖಾಲಿತನದಲ್ಲಿ
ನೆನಪು ಇತಿಹಾಸ ಭವಿಷ್ಯ ವರ್ತಮಾನ ನಿರರ್ಥಕತೆ
ಎಲ್ಲವೂ ಕಲಕಿ ಆಗುವ ಜ್ಞಾನೋದಯದ
ಅವ್ಯಕ್ತ ಫೆಟಿಷ್ ಸಾಕಾರಗೊಳ್ಳುವ ಹೊತ್ತು

ಆಗಲೇ
ಕ್ಲಿಕ್ ಕ್ಲಿಕ್ ಕ್ಲಿಕ್
ಸದ್ದು ಮುಗಿಸಿ
ಅರಮನೆ ತನ್ನ ಹಳೆಯ ಗಾಂಭೀರ್ಯದ
ಮುದ್ರೆ ಒತ್ತಿಕೊಂಡು
ಮಗ್ಗುಲು ಬದಲಿಸಿ
ನಿದ್ದೆ ಹೋಗುತ್ತದೆ!

‍ಲೇಖಕರು avadhi

16 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading