ದಸರಾ : ಹೊಸ ರೂಪ ಪಡೆದುಕೊಳ್ಳುವುದೇ?
ಜಿ ಪಿ ಬಸವರಾಜು
ವಿಶ್ವ ವಿಖ್ಯಾತ ಮೈಸೂರು ದಸರಾ ಇನ್ನೂ ದೂರವಿದೆ. ಆದರೆ ಈಗಲೇ ಗೊಂದಲಗಳು ಆರಂಭವಾಗಿವೆ. ಗೊಂದಲಕ್ಕೆ ಮುಖ್ಯ ಕಾರಣ ಅರಮನೆಯಲ್ಲಿರುವ ಶೋಕದ ವಾತಾವರಣ. ಮೈಸೂರು ಅರಸು ಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದಿಂದಾಗಿ ಅರಮನೆಯನ್ನೀಗ ಶೋಕದ ನೆರಳು ಆವರಿಸಿದೆ. ಶೋಕಾಚರಣೆಯನ್ನು ಒಂದು ವರ್ಷ ಕಾಲ ಆಚರಿಸಬೇಕಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ನಡೆಯುವುದೋ ಇಲ್ಲವೋ ಎಂಬ ಬಗ್ಗೆ ಸಂಶಯಗಳು ಹುಟ್ಟಿಕೊಂಡಿವೆ. ಯದುವಂಶದ ಉತ್ತರಾಧಿಕಾರಿಯ ನೇಮಕವನ್ನು ಅರಸು ಮನೆತನದವರು ಇನ್ನೂ ಮಾಡಿಲ್ಲ. ಅದು ಆ ಮನೆತನಕ್ಕೆ ಬಿಟ್ಟ ವಿಚಾರವಾದರೂ, ದಸರಾ ನಡೆಯುವುದು ಅರಮನೆಯ ಆವರಣದಲ್ಲಿಯೇ. ಜೊತೆಗೆ ಜಂಬೂ ಸವಾರಿಗೆ ಅಗತ್ಯವಾದ ಚಿನ್ನದ ಅಂಬಾರಿ ದೊರೆಯಬೇಕಾಗಿರುವುದೂ ಅರಮನೆಯಿಂದಲೇ. ಅರಮನೆ ಶೋಕದಲ್ಲಿರುವಾಗ ಅಂಬಾರಿಯನ್ನು ಕೊಡುತ್ತಾರೆಯೇ ಎಂಬುದು ಒಂದು ಪ್ರಶ್ನೆಯಾದರೆ, ದಸರಾವನ್ನು ಅರಮನೆಯ ಆವರಣದಲ್ಲಿಯೇ ಆಚರಿಸಬೇಕಾಗಿರುವುದರಿಂದ ಆಚರಿಸುವುದು ಸೂಕ್ತವೋ ಅಲ್ಲವೋ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಇಂಥ ಸಂಶಯಗಳು ಬೆಳೆಯದಂತೆ ತಕ್ಷಣ ತಡೆದವರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪತ್ನಿ ಪ್ರಮೋದಾ ದೇವಿ ಅವರು. ಇಂಥ ಸಂಶಯಗಳು ಮಾಧ್ಯಮದಲ್ಲಿ ಪ್ರಕಟವಾಗುತ್ತಿದ್ದಂತೆಯೇ ಪ್ರಮೋದಾ ದೇವಿ ಅವರು, ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ದಸರಾ ನಡೆಯಬೇಕು, ಅದಕ್ಕೆ ನಾವು ತಡೆಯೊಡ್ಡುವುದಿಲ್ಲ ಎಂದು ಹೇಳಿ ಸಂಶಯಗಳನ್ನು ನಿವಾರಿಸಿದ್ದಾರೆ. ಅರಸು ಮನೆತನದವರು ನಡೆಸುವ ಖಾಸಗಿ ದರ್ಬಾರ್, ರತ್ನಖಚಿತ ಸಿಂಹಾಸನ ಮತ್ತು ದರ್ಬಾರ್ಗಳನ್ನು ನೋಡುವವರಿಗೆ ಅವಕಾಶ ಇತ್ಯಾದಿ ಆಚರಣೆಗಳು ನಡೆಯುವ ಸಂಭವ ಕಡಿಮೆ. ಆದರೆ ದಸರಾ ಮಹೋತ್ಸವವಂತೂ ನಡೆಯುತ್ತದೆ ಎಂಬುದು ಇದೀಗ ಖಚಿತವಾಗಿದೆ. ಅರಸು ಮನೆತನದವರಿಂದ ಸಿಕ್ಕಬೇಕಾದ ಎಲ್ಲ ಸಹಕಾರವೂ ದಸರಾ ಆಚರಣೆಗೆ ಸಿಕ್ಕುತ್ತದೆ ಎಂಬ ಮಾತನ್ನು ಪ್ರಮೋದಾ ದೇವಿ ಅವರು ಆಡಿದ್ದಾರೆ.
ದಸರಾ ಆಚರಣೆಯ ಬಗ್ಗೆ ಈಗ ಸರ್ಕಾರಕ್ಕೆ ಗೊಂದಲವಿಲ್ಲ; ಸಂಶಯಗಳೂ ಉಳಿದಂತೆ ಕಾಣುವುದಿಲ್ಲ. ಬರದ ನೆರಳು ರಾಜ್ಯದ ಮೇಲೆ ಬಿದ್ದಂತೆ ಕಾಣುತ್ತಿದೆ. ಆದರೂ ದಸರಾ ನಡೆಯುವುದರ ಬಗ್ಗೆ ಅನುಮಾನವಂತೂ ಇಲ್ಲ ಎಂಬುದು ಸ್ಪಷ್ಟ. ದಸರಾ ನಡೆಯುವುದು ಬೇರೆ ಬೇರೆಯ ಕಾರಣಗಳಿಂದಾಗಿ ಮೈಸೂರಿನ ಜನರಿಗೆ ಪ್ರಯೋಜನಕಾರಿಯೇ. ದಸರಾ ಸಂದರ್ಭದಲ್ಲಿ ಹೋಟೆಲಿನವರು, ವಸತಿಗೃಹಗಳವರು, ಟ್ಯಾಕ್ಸಿ, ಆಟೋ, ಟಾಂಗಾಗಳವರು, ವ್ಯಾಪಾರಿ ವರ್ಗ, ಸಣ್ಣಪುಟ್ಟ ಕಸುಬುಗಳ ಜನ, ಪ್ರವಾಸೋದ್ಯಮ ಹೀಗೆ ಹಲವರಿಗೆ ಹಲವು ರೀತಿಯಲ್ಲಿ ಹಣ ಹರಿದುಬರುವುದರಿಂದ ದಸರಾ ಬೇಡ ಎಂದು ಯಾರೂ ಹೇಳುವುದಿಲ್ಲ.
ಇನ್ನು ರಾಜಕಾರಣಿಗಳಿಗಂತೂ ದಸರಾ ಬೇಕೇ ಬೇಕು. ಆಳುವ ಪಕ್ಷ, ವಿರೋಧ ಪಕ್ಷ ಎಲ್ಲ ಪಕ್ಷಗಳಿಗೂ ದಸರಾ ಎಂದರೆ ಒಂದು ಸುವರ್ಣಾವಕಾಶ. ದರ್ಪ ತೋರಿಸಲು, ಅಧಿಕಾರ ಚಲಾಯಿಸಲು, ಹಣ ಕಮಾಯಿಸಲು ಎಲ್ಲದಕ್ಕೂ ದಸರಾದಲ್ಲಿ ಅವಕಾಶ. ದಸರಾ ಆರಂಭವಾಗುವುದಕ್ಕೆ ಮುನ್ನ ಮೈಸೂರು ನಗರದಲ್ಲಿ ನಡೆಯುವ ಕೊನೆಯ ಕ್ಷಣದ ಕಾಮಗಾರಿಗಳ ಹೆಸರಿನಲ್ಲಿ ಹಣದ ಹೊಳೆಯೇ ಹರಿಯುತ್ತದೆ. ವಸ್ತುಪ್ರದರ್ಶನವೆನ್ನುವುದೂ ಹಣ ಹರಿಯಲು ಇರುವ ದೊಡ್ಡ ಅವಕಾಶ. ಇಂಥ ಅನೇಕ ಮಾರ್ಗಗಳು ದಸರಾ ಹೊತ್ತಿಗೆ ಮೈಸೂರಿನಲ್ಲಿ ಮೊಗದೋರುತ್ತವೆ. ಈ ಕಾರಣಕ್ಕಾಗಿ ದಸರಾ ಬೇಕೇ ಬೇಕು.
ಸರ್ಕಾರ ಯಾವುದೇ ಇರಲಿ, ದಸರಾ ಸ್ವರೂಪದಲ್ಲಿ ಬದಲಾವಣೆ ಎನ್ನುವುದು ಕಾಣುವುದೇ ಇಲ್ಲ. ದಸರಾ ಎಂಬುದನ್ನು ನಾಡಹಬ್ಬ ಎಂದು ಸರ್ಕಾರವೇನೋ ಕರೆಯುತ್ತಿದೆ. ಆದರೆ ನಿಜಕ್ಕೂ ಇದು ನಾಡಿನ ಹಬ್ಬವೇ? ಇಡೀ ನಾಡಿನ ಜನ ಸಂಭ್ರಮದಿಂದ ಈ ದಸರಾವನ್ನು ಆಚರಿಸುವಂತೆ, ಪರಿಭಾವಿಸುವಂತೆ ಮಾಡುವುದು ಹೇಗೆ ಎಂದು ಒಮ್ಮೆಯೂ ಸರ್ಕಾರ ಚಿಂತಿಸಿದಂತೆ ಕಾಣುವುದಿಲ್ಲ. ಹಾಗೆ ನೋಡಿದರೆ ಆರಂಭದ ವರ್ಷಗಳಲ್ಲಿ ದಸರಾ ಒಂದು ಸಾಂಸ್ಕೃತಿಕ ಹಬ್ಬದಂತೆ ನಡೆಯುತ್ತಿತ್ತು. ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಖ್ಯಾತಿಯ ಅನೇಕ ಕಲಾವಿದರು ದಸರೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಸಿಕರ ಮನಸ್ಸನ್ನು ಸೂರೆಗೊಳ್ಳುತ್ತಿದ್ದರು. ಅಂಥ ಕಲಾವಿದರಿಗೆ ತಕ್ಕ ಮನ್ನಣೆಯೂ ರಾಜ್ಯ ಸರ್ಕಾರದಿಂದ ದೊರೆಯುತ್ತಿತ್ತು.
ಆದರೆ ಅದೆಲ್ಲ ಈಗ ಕಳೆದ ದಿನಗಳ ವೈಭವದ ಮಾತಾಗಿದೆ. ದಸರಾ ಆಚರಣೆಗೆಂದು ರಚಿಸಲಾಗುವ ಎಲ್ಲ ಉಪ ಸಮಿತಿಗಳಲ್ಲೂ ರಾಜಕಾರಣಿಗಳೇ, ಮುಖ್ಯವಾಗಿ ಆಳುವ ಪಕ್ಷದವರು, ಅವರ ಹಿಂಬಾಲಕರೇ ತುಂಬಿರುತ್ತಾರೆ. ಸಾಂಸ್ಕೃತಿಕ ಉಪ ಸಮಿತಿಗಳೂ ಇದಕ್ಕೆ ಹೊರತಲ್ಲ. ಎಲ್ಲೆಲ್ಲೂ ನೂಕು ನುಗ್ಗಲು. ಯಾಕಾಗಿ ಇಂಥ ಉತ್ಸಾಹ? ಇದನ್ನು ಸಕರ್ಾರ ಒಂದು ಕ್ಷಣ ಚಿಂತಿಸಬೇಕು. ಇಷ್ಟೂ ವರ್ಷಗಳ ಅವಧಿಯಲ್ಲಿ ಒಮ್ಮೆಯಾದರೂ ಈ ಚಿಂತನೆ ನಡೆಯದಿರುವುದು ಎಂಥ ದುರಂತ!
ಸರ್ಕಾರ ಚಿಂತಿಸಬೇಕಾದ ಇನ್ನೂ ಒಂದು ಮುಖ್ಯ ಸಂಗತಿಯಿದೆ. ಅದು ಜಂಬೂ ಸವಾರಿಯ ಬಗ್ಗೆ. ಜಂಬೂ ಸವಾರಿಯಲ್ಲಿ ಭಾಗವಹಿಸಲೆಂದು ಆನೆಗಳ ದೊಡ್ಡ ಹಿಂಡನ್ನೇ ನಾಗರಹೊಳೆಯ ಅರಣ್ಯದಿಂದ 45 ದಿನ ಮುಂಚಿತವಾಗಿಯೇ ಮೈಸೂರಿಗೆ ಕರೆತರಲಾಗುತ್ತದೆ. ಈ ಆನೆಗಳನ್ನು ಮೈಸೂರಿನಲ್ಲಿ ಅಷ್ಟೂ ದಿನ ಇಟ್ಟುಕೊಂಡು, ಜಂಬೂ ಸವಾರಿಗೆ ತರಬೇತಿಯನ್ನು ಕೊಡಲಾಗುತ್ತದೆ. ಇದಕ್ಕಾಗಿ ಜೇನು ಕುರುಬ ಕುಟುಂಬಗಳು ಬಂದು ಮೈಸೂರಿನಲ್ಲಿ ಬೀಡುಬಿಡುತ್ತವೆ. ಆನೆಗಳ ಮತ್ತು ಮಾವುತರ ದೇಖರೇಖೆಯಲ್ಲಿ ಅನೇಕ ಕೊರತೆಗಳು ಪ್ರತಿವರ್ಷವೂ ಕಾಣಿಸಿಕೊಂಡು ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಳ್ಳುತ್ತವೆ. ಸರ್ಕಾರ ಈ ಕೊರತೆಗಳನ್ನು ನೀಗಿಸಲು ಪ್ರಯತ್ನಿಸುತ್ತಲೇ ಇರುತ್ತದೆ. ಆನೆಗಳಿಲ್ಲದಿದ್ದರೆ ಜಂಬೂ ಸವಾರಿಗೆ ಕಳೆಯೇ ಇರುವುದಿಲ್ಲ. ಹೀಗಾಗಿ ಆನೆಗಳನ್ನು ಕಡ್ಡಾಯವಾಗಿ ಕರೆತರಲಾಗುತ್ತದೆ.
ಈ ಜಂಬೂ ಸವಾರಿಯನ್ನು ಹೊಸ ರೀತಿಯಲ್ಲಿ ರೂಪಿಸುವುದು ಸಾಧ್ಯವಿಲ್ಲವೇ? ಇದನ್ನು ಸರ್ಕಾರ ಯೋಚಿಸಬೇಕು. ಜೊತೆಗೆ ಜಂಬೂ ಸವಾರಿಯಲ್ಲಿ, ಆನೆಯ ಮೇಲೆ ಅಂಬಾರಿಯನ್ನಿಟ್ಟು ಅದರಲ್ಲಿ ಚಾಮುಂಡಿ ದೇವಿಯನ್ನು ಮೆರವಣಿಗೆ ಮಾಡುತ್ತಿರುವ ಕ್ರಮ ಸರಿಯೇ ಎಂಬುದನ್ನೂ ಚಿಂತಿಸಬೇಕು. ಮಹಾರಾಜರ ಕಾಲದಲ್ಲಿ ಅಂಬಾರಿಯಲ್ಲಿ ಚಾಮುಂಡೇಶ್ವರಿ ಇರುತ್ತಿರಲಿಲ್ಲ. ಈಗ ಚಾಮುಂಡಿಯನ್ನು ತಂದದ್ದೇಕೆ? ನಮ್ಮ ಸಂವಿಧಾನ ಜಾತ್ಯತೀತ ತತ್ವಕ್ಕೆ ಬದ್ಧವಾದದ್ದು. ಹೀಗಿರುವಾಗ ಎಲ್ಲ ಧರ್ಮಗಳ ನಾಡವರು ಸೇರಿ ಆಚರಿಸುವ ಈ ಹಬ್ಬದಲ್ಲಿ ಒಂದು ಧರ್ಮದ ನಂಬಿಕೆಯನ್ನು ಇತರರ ಮೇಲೆ ಹೇರುವಂತೆ ಚಾಮುಂಡೇಶ್ವರಿಯನ್ನು ಅಂಬಾರಿಯ ಮೇಲೆ ಕೂರಿಸಿ ಮೆರವಣಿಗೆ ಮಾಡುವುದು ಸರಿಯೇ ಎಂಬ ಪ್ರಶ್ನೆಯನ್ನು ವೈಚಾರಿಕ ನಿಲುವಿನ ಅನೇಕ ಚಿಂತಕರು ಎತ್ತಿದ್ದಾರೆ. ಈ ಪ್ರಶ್ನೆಯನ್ನು ಯಾವ ಸರ್ಕಾರವೂ ಗಂಭೀರವಾಗಿ ಪರಿಗಣಿಸಿರುವ ಉದಾಹರಣೆಯೇ ಕಾಣಿಸುವುದಿಲ್ಲ. ಸಿದ್ಧರಾಮಯ್ಯ ಅವರು ಸಮಾಜವಾದಿ, ವೈಚಾರಿಕ ಹಿನ್ನೆಲೆಯ ವ್ಯಕಿಯಾಗಿರುವ ಕಾರಣ ಈಗಲಾದರೂ ಇಂಥ ಪ್ರಶ್ನೆಗಳ ಬಗ್ಗೆ ಚಿಂತಿಸಬಹುದೆಂದು ಆಶಿಸಬಹುದಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯಲು ಕಾರಣವೇನು? ಅದನ್ನು ಸರಿಪಡಿಸುವುದು ಹೇಗೆ? ಕೋಟ್ಯಂತರ ರೂಪಾಯಿ ಖಚರ್ಾಗುವಾಗ ಗುಣಮಟ್ಟದ ಕಾರ್ಯಕ್ರಮಗಳು ಬೇಡವೇ? ಇಂಥ ಪ್ರಶ್ನೆಗಳನ್ನು ಸಕರ್ಾರ ಕೇಳಿಕೊಳ್ಳಬೇಕಾದ ಅಗತ್ಯವಿದೆ. ದಸರಾ ಇನ್ನೂ ದೂರವಿರುವಾಗಲೇ ಇಂಥ ಪ್ರಶ್ನೆಗಳನ್ನು ಚಚರ್ಿಸಿದರೆ ಅದಕ್ಕೆ ತಕ್ಕ ಪರಿಹಾರಗಳನ್ನು ಕಂಡುಕೊಳ್ಳಬಹುದು.
ದಸರಾಕ್ಕಾಗಿ ಸರ್ಕಾರದ ಬೊಕ್ಕಸದಿಂದ ಕೋಟಿಗಟ್ಟಲೆ ಹಣ ಹರಿಯುತ್ತದೆ. ಈ ಹಣ ಸಾರ್ವಜನಿಕರ ಹಣ. ಅದು ಸರಿಯಾದ ರೀತಿಯಲ್ಲಿ ವಿನಿಯೋಗವಾಗಬೇಕು. ಈ ಎಚ್ಚರವಂತೂ ಸರ್ಕಾರವನ್ನು ನಡೆಸುವವರಲ್ಲಿ ಇರಲೇಬೇಕಾಗುತ್ತದೆ.
ಮೈಸೂರು ದಸರಾಕ್ಕೊಂದು ಅದ್ಭುತ ಪರಂಪರೆಯಂತೂ ಇದ್ದೇ ಇದೆ. ಈ ಪರಂಪರೆಯಲ್ಲಿರುವ ಒಳ್ಳೆಯ ಗುಣಗಳನ್ನು ಉಳಿಸಿಕೊಂಡು, ಆಧುನಿಕ ಸ್ಪರ್ಶನ್ನು ನೀಡಿದರೆ ದಸರಾ ಹೆಚ್ಚು ಅರ್ಥಪೂರ್ಣವಾಗುತ್ತದೆ; ಜನರ ದಸರಾ ಕೂಡಾ ಆಗುತ್ತದೆ. ಇಂಥದೊಂದು ಸಾಧ್ಯತೆಯನ್ನು ಬಳಸಿಕೊಳ್ಳದಿದ್ದರೆ, ಸಕರ್ಾರ ಉತ್ತಮ ಅವಕಾಶವನ್ನು ಕಳೆದುಕೊಂಡಂತಾಗುತ್ತದೆ.
ಸೌಜನ್ಯ: ಸಂಯುಕ್ತ ಕರ್ನಾಟಕ




Sakaalika lekhana.chinthanege olagu madutthade.