ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದರ್ಶನ…

ಶ್ರೀನಿಧಿ ಹೆಚ್ ವಿ

ಬೆಟ್ಟವಿರುವ ಪಟ್ಟಣಗಳೆಂದರೆ
ಬಲು ಪ್ರೀತಿ ನನಗೆ

ಇಬ್ಬನಿ ಬೀಳುವ
ಆ ಮಬ್ಬಿನಲ್ಲಿ
ಹತ್ತಿದರೆ ಆಗದು ಆಯಾಸ,
ಸುತ್ತ ನೋಡಿದರೆ ಆಹ್ಲಾದ

ಏರುತ ಏರುತ
ಮನಸದು ಚಿಗುರುತ, ಕಾಣುವುದೆಲ್ಲ
ಸಣ್ಣದಾಗಿ ಆದರೆ ಸ್ಪಷ್ಟವಾಗಿ!
ವಿಚಿತ್ರವಾಗಿ ಆದರೆ ವಿಸ್ತಾರವಾಗಿ!

ಕಳ್ಳನೋಟದಲಿ ಕತ್ತಲಿನಲ್ಲಿ
ಬಯಲಿಗೆ ಮುತ್ತಿಡುವುದು ಮುಗಿಲು.
ಮುಂಜಾವಿನ ಮಂಜು ಕರಗಲು
ಆ ರಥಬೀದಿ, ಜೋಪಡಿ ಸಾಲು
ಸಂದಿ- ಗೊಂದಿಗಳು, ರಾಜಮಾರ್ಗಗಳು
ಕಾಣಿಸದು ಬೇರೆ ಬೇರೆ
ನೇಸರನ ಆ ಕೇಸರಿ ಬೆಳಕಲಿ
ಹೊಳೆಯುವುದು ಊರಿಗೂರೆ.

ಇಂಥ ಬೆಟ್ಟದ ಮೇಲೆ
ನಾಲ್ಕು ಗೋಡೆಯ ನಡುವೆ
ಕತ್ತಲೆಯ ಕೂಪದಲಿ
ಇರುವನೊಬ್ಬ ಸರ್ವಾಂತರ್ಯಾಮಿ ದೇವರು
ಹೊರಗೊ, ಸಾಲು ಸಾಲು ಜನರು!

ಅವರಿಗೊ ಸಾವಿನ ಭಯ
ಈಡೇರದ ಬಯಕೆ,
ಲೋಕಕ್ಕೆ ಬೆಳಕು ಕೊಟ್ಟ ನೀನು
ಕಾಯುತ್ತಿರುವೆ ಮುಚ್ಚಿದ ಬಾಗಿಲ ಹಿಂದೆ
ಪೂಜಾರಿ ಬಂದು ಹಚ್ಚಲಿರುವ
ಆ ಒಂದು ದೀಪಕ್ಕೆ

ದರ್ಶನವಾಗಿದ್ದು ನಮಗೊ, ಅವರಿಗೊ?
ತಿಳಿಯುವ ಹೊತ್ತಿಗೆ
ಇಳಿಯುವ ಹೊತ್ತಾಗಿರುತ್ತದೆ.

‍ಲೇಖಕರು Admin

10 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading