ಶೀಲಾ ಪೈ ಅನುವಾದಿತ ಕಥೆ – ತೊಗಲು ಭಾಗ 1…

ಮೂಲ : ರೋ ಆಲ್ಡ್ ಡಾಲ್
ಅನುವಾದ : ಶೀಲಾ ಪೈ

ರೋ ಆಲ್ಡ್ ಡಾಲ್ (೧೯೧೬-೧೯೯೦) ಬ್ರಿಟಿಷ್ ಬರಹಗಾರ.  ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡವರು. ಮೊದಲು ಬರೆದ ಹನ್ನೆರಡು ಸಣ್ಣಕಥೆಗಳು ಯುದ್ಧದ ಅನುಭವಗಳನ್ನು ಆಧರಿಸಿದ್ದವು. ಮುಂದೆ ಮಕ್ಕಳಿಗಾಗಿ ಬರೆದ “ಚಾರ್ಲಿ ಅಂಡ್ ದಿ ಚಾಕಲೇಟ್ ಫ್ಯಾಕ್ಟರಿ”, “ಮೆಟಿಲ್ಡಾ”, “ಬಿ ಎಫ್ ಜಿ”, “ದಿ ಮ್ಯಾಜಿಕ್ ಫಿಂಗರ್”, “ಜೇಮ್ಸ್ ಅಂಡ್ ದಿ ಜಯಂಟ್ ಪೀಚ್” ಜಗತ್ತಿನ್ನೆಲ್ಲೆಡೆಯ ಮಕ್ಕಳು ಓದಿ ಮೆಚ್ಚಿದ ಪುಸ್ತಕಗಳು.   ದೊಡ್ಡವರಿಗಾಗಿ ಬರೆದ “ಟೇಲ್ಸ್ ಆಫ್ ದಿ ಅನ್ಎಕ್ಸ್ಪೆಕ್ಟೆಡ್” ಕಥಾಸಂಕಲನದ ಪ್ರತಿಯೊಂದು ಕಥೆಯೂ ವಿಶಿಷ್ಟ ಕಥಾವಸ್ತು, ನಿರೂಪಣೆಯ ಜೊತೆಗೆ ಅನಿರೀಕ್ಷಿತ ತಿರುವುಗಳಿಂದ ಕೂಡಿದ್ದು ಕ್ಲಾಸಿಕ್ ಕಥೆಗಳ ಸಾಲಿಗೆ ಸೇರಿಸಲ್ಪಟ್ಟಿವೆ. ಪ್ರಸ್ತುತ “ಸ್ಕಿನ್” ಕಥೆಯನ್ನು ಈ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.    

ಆ ವರ್ಷ -೧೯೪೬- ಚಳಿಗಾಲ ಮುಗಿಯುವ ಲಕ್ಷಣ ಕಾಣಿಸುತ್ತಿರಲಿಲ್ಲ. ಆಗಲೇ ಏಪ್ರಿಲ್ ತಿಂಗಳು ಮೊದಲಾಗಿದ್ದರೂ ಹೆಪ್ಪುಗಟ್ಟಿಸುವಂತಹ ಚಳಿ ಗಾಳಿ ಊರು ಕೇರಿಗಳಲ್ಲಿ  ಹಾಯುತಿತ್ತು.  ಆಗಸದುದ್ದಗಲಕ್ಕೂ  ಮಂಜು ಭರಿತ ಮೇಘಗಳು ಚಲಿಸುತ್ತಿದ್ದವು 

ರು ಡಿ  ರಿವೊಲಿಯ ಫುಟ್ ಪಾತ್‌ನಲ್ಲಿ  ಪ್ರಯಾಸದಿಂದ ಕಾಲೆಳೆಯುತ್ತಾ ಡ್ರಿಯೋಲಿ ಎನ್ನುವ ಹೆಸರಿನ ಮುದುಕ  ನಡೆಯುತ್ತಿದ್ದ. ಹೆಪ್ಪುಗಟ್ಟಿಸುವ ಚಳಿ ಮತ್ತು ದೀನ ಸ್ಥಿತಿ. ಕೊಳಕಾದ ಕಪ್ಪು ಕೋಟಿನೊಳಗೆ ಮುಳ್ಳುಹಂದಿಯಂತೆ  ಅವುಚಿಕೊಂಡಿದ್ದವನ ನೆಟ್ಟಗಿರಿಸಿಕೊಂಡಿದ್ದ ಕಾಲರಿನ ಮೇಲಿಂದ ಬರೀ ಅವನ ಕಣ್ಣುಗಳು ಮತ್ತು ತಲೆಯ ಮೇಲ್ಭಾಗ ಕಾಣಿಸುತ್ತಿತ್ತು. 

ಕೆಫೆಯೊಂದರ ಬಾಗಿಲು ತೆರೆಯಿತು. ಹಗೂರ ತೇಲಿ ಬಂದ  ಹುರಿಯುವ ಕೋಳಿ ಮಾಂಸದ  ಪರಿಮಳ ಅವನ ಹೊಟ್ಟೆಯ ಮೇಲ್ಭಾಗದಲ್ಲೆಲ್ಲೋ ಭಗ್ಗನೆ ಅಸೆ ಮೂಡಿಸಿತು. ಅಂಗಡಿಗಳ ಕಿಟಕಿಗಳಲ್ಲಿ ಪ್ರದರ್ಶಿತವಾಗುವ ವಸ್ತುಗಳನ್ನು ಯಾವುದೇ ಆಸಕ್ತಿ ಇಲ್ಲದೇ ನೋಡುತ್ತಾ ಅವನು ಮುಂದೆ ಹೋಗುತ್ತಿದ್ದನು. ಅತ್ತರ್, ರೇಷ್ಮೆಯ ಟೈಗಳು, ಅಂಗಿಗಳು, ವಜ್ರಗಳು, ಪಿಂಗಾಣಿ, ಪುರಾತನ ಪೀಠೋಪಕರಣಗಳು, ಚಂದದ ಬೈಂಡಿನ ಪುಸ್ತಕಗಳು. ಆಮೇಲೊಂದು ಚಿತ್ರಪಟಗಳ ಗ್ಯಾಲರಿ. ಅವನಿಗೆ ಚಿತ್ರಪಟಗಳ ಗ್ಯಾಲರಿಯೆಂದರೆ ಯಾವಾಗಲೂ ಭಾಳ ಇಷ್ಟ. ಇದರ ಕಿಟಕಿಯಲ್ಲಿ ಪ್ರದರ್ಶಿತವಾಗಿದ್ದದ್ದು ಏಕೈಕ  ಕ್ಯಾನ್ವಾಸ್ . ಅದನ್ನು ನೋಡಲೋಸುಗ ಅವನು ನಿಂತುಕೊಂಡ. ಮುಂದೆ ಹೋಗಲು ತಿರುಗಿದ. ಮತ್ತೆ ನಿಂತ, ಹಿಂತಿರುಗಿ ನೋಡಿದ. ಅಚಾನಕ್ಕಾಗಿ ಅಹಿತವೆನ್ನಿಸಿತು ಏನೋ ನೆನಪು, ಹಿಂದೆಂದೋ ಎಲ್ಲೋ ನೋಡಿದ ಯಾತರದ್ದೋ ನೆನವರಿಕೆ. ಮತ್ತೊಮ್ಮೆ ನೋಡಿದ. ಅದೊಂದು ಲ್ಯಾಂಡ್ ಸ್ಕೇಪ್, ಪ್ರಚಂಡ ಬಿರುಗಾಳಿಗೆ ಮರಗಳ ಸಮೂಹವೊಂದು ಒತ್ತಟ್ಟಿಗೆ ಒಂದೇ ಕಡೆ ಬಾಗುವ, ಸುತ್ತಿ ಸುಳಿವ ಅಗಸದ ಚಿತ್ರಣ. ಚಿತ್ರದ ಚೌಕಟ್ಟಿಗೆ ಒಂದು ಪುಟ್ಟ ಫಲಕದಲ್ಲಿ ಶೈಮ್ ಸೂಚಿನ್  (೧೮೯೪-೧೯೪೩) ಎಂದು ನಮೂದಿಸಲಾಗಿತ್ತು .

ಅದರಲ್ಲಿರುವಂತಹ ಏನೋ ಒಂದು ಅದ್ಯಾಕೆ ಅಷ್ಟು ಪರಿಚಿತವೆನಿಸುತ್ತಿದೆ ಎಂದು ಆಶ್ಚರ್ಯ ಪಡುತ್ತಾ ಡ್ರಿಯೋಲಿ ಆ ಚಿತ್ರವನ್ನು  ದಿಟ್ಟಿಸಿ ನೋಡಿದ. ವಿಲಕ್ಷಣ ಚಿತ್ರ ಎಂದುಕೊಂಡ. ಒಂಥರಾ ವಿಚಿತ್ರ ಮತ್ತು ವಿಲಕ್ಷಣ. ಆದ್ರೆ ನಂಗೆ ಇಷ್ಟವಾಯ್ತು….. ಶೈಮ್ ಸೂಚಿನ್….ಸೂಚಿನ್….. ದೇವರಾಣೆಗೂ! ಅಚಾನಕ್ಕಾಗಿ ಉದ್ಗರಿಸಿದ. “ನನ್ನ ಪುಟ್ಟ  ಕಾಲ್ಮಿಕ್, ಇದು ಅವನೇ! ನನ್ನ ಪುಟ್ಟ ಕಾಲ್ಮಿಕ್‌ನ  ಚಿತ್ರ ಪ್ಯಾರಿಸ್‌ನ ಅತ್ಯುತ್ತಮ ಗ್ಯಾಲರಿಯಲ್ಲಿ! ಊಹಿಸಲೂ ಆಗದ್ದು!”

ಮುದುಕ ಕಿಟಕಿಯ ಹತ್ತಿರ ತನ್ನ ಮುಖವನ್ನಿಟ್ಟುಕೊಂಡ. ಅವನಿಗೆ ಹುಡುಗನ ನೆನೆಪಾಯ್ತು -ಹ್ಞೂಂ ಚೆನ್ನಾಗಿಯೇ ಅವನ ನೆನಪಾಯ್ತು. ಆದ್ರೆ ಯಾವತ್ತು? ಬಾಕಿ ವಿಷಯಗಳನ್ನು ನೆನಪಿಸ್ಕೊಳ್ಳೋದು ಅಷ್ಟು ಸುಲಭವಾಗಿರಲಿಲ್ಲ. ಬಹಳ ಹಿಂದೆ  ನಡೆದ್ದದ್ದು . ಎಷ್ಟು ಹಿಂದೆ? ಇಪ್ಪತ್ತು-ಅಲ್ಲ ಮೂವತ್ತು ವರ್ಷಗಳಾಗಿರಬಹುದು ಅಲ್ವಾ? ಇರಿ ಒಂದ್ನಿಮಿಷ – ಹ್ಞಾಂ   !ಅದು ಯುದ್ಧದ ಹಿಂದಿನ ವರುಷ, ಮೊದಲ ಮಹಾಯುದ್ಧ, ೧೯೧೩. ಅದೇ ಈ ಕಮಕ್, ಕೆಟ್ಟ ಮುಸುಡಿಯ ಪುಟ್ಟ ಕಾಲ್ಮಿಕ್, ವಿಕ್ಷಿಪ್ತ ಹುಡುಗ ಅವನಿಗೆ ಇಷ್ಟವಾದವ ಅಲ್ಲ ಅವನಿಗೆ ಚಿತ್ರ ಬಿಡಿಸಲು ಬರುತ್ತದೆ ಎನ್ನುವದೊಂದೇ ಕಾರಣಕ್ಕಾಗಿ ಪ್ರೀತಿಪಾತ್ರನೇ ಆದವ.  

ಅವನು ಬಿಡಿಸುತ್ತಿದ್ದ ಚಿತ್ರಗಳೆಂದರೆ! ಹೆಚ್ಚು ಸ್ಪುಟವಾಗಿ ನೆನಪಿಗೆ ಬರ್ತಾ ಇತ್ತು ಈಗ – ಆ ರಸ್ತೆ, ಅದರುದ್ದಕ್ಕೂ ಬಿದ್ದಿರುತ್ತಿದ್ದ ಕುಡಿದು ಬಿಸುಟ ಕ್ಯಾನ್‌ಗಳು, ಕೊಳೆತ ವಾಸನೆ, ಬಿಸುಟ ವಸ್ತುಗಳ ಮೇಲಿಂದ ಮೆಲುನಡಿಗೆಯಲ್ಲಿ ಚಲಿಸುತ್ತಿದ್ದ ಕಂದು ಬಣ್ಣದ ಬೆಕ್ಕುಗಳು, ಮತ್ತೆ ಹೆಂಗಸರು, ಮನೆಯ ಬಾಗಿಲ ಮೇಲೆ ಕೂತು ರಸ್ತೆಯ ಚೌಕ ಹಾಸಿನ ಮೇಲೆ ಕಾಲಿಟ್ಟು ಕುಳಿತ ದಪ್ಪನೆಯ ಆರ್ದ್ರ ಹೆಂಗಸರು. ಯಾವ ರಸ್ತೆ? ಅದ್ಯಾವುದದು ಹುಡುಗ ಇರುತ್ತಿದ್ದ ಊರು?

ಫಗೆರ್ ಎಂಬ ಊರು, ಹಾಂ  ಅದೇ! ಹೆಸರು ನೆನಪಾದ ಖುಷಿಯಿಂದ ಮುದುಕ ಹಲವು ಬಾರಿ ತಲೆ ಕುಣಿಸಿದ. ಒಂದೇ ಕುರ್ಚಿಯಿದ್ದ ಸ್ಟುಡಿಯೋ ಒಂದು ಅಲ್ಲಿತ್ತು ಹಾಗೂ ಹುಡುಗ ಮಲಗಲು ಬಳಸುತ್ತಿದ್ದ ಕೆಂಬಣ್ಣದ ಕೊಳಕು ಚಿಕ್ಕ ಸೋಫಾ, ಆಮೇಲೇರಿಸುತ್ತಿದ್ದ ಔತಣಕೂಟಗಳು, ಅಗ್ಗದ ಬಿಳಿ ವೈನ್, ಕೋಪೋದ್ರಿಕ್ತ ವಾಗ್ವಾದಗಳು ಮತ್ತು ಯಾವತ್ತೂ ಯಾವತ್ತೂ ತನ್ನ ಕೆಲಸದಲ್ಲಿಯ ಮಗ್ನನಾಗಿರುತ್ತಿದ್ದ ಕಹಿ ಮುಖದ ವಿಕ್ಷಿಪ್ತ ಹುಡುಗ. 

ಒಂದೊಂದು ಚಿಕ್ಕ ವಿಷಯ ನೆನಪಾದಂತೆ ಅದು ಹೇಗೆ ತಕ್ಷಣವೇ ಇನ್ನೊಂದು ವಿಷಯ ನೆನಪಾಗುತ್ತಿದೆ ಎಂದು ಮುದುಕನಿಗೆ ವಿಚಿತ್ರವೆನಿಸಿತು. 

ಉದಾಹರಣೆಗೆ ಟ್ಯಾಟೂವಿನ  ಹುಚ್ಚುತನವನ್ನೇ ತಗೆದುಕೊಳ್ಳಿ. ಅದು ಮಾತ್ರ ನಿಜಕ್ಕೂ ಒಂದು ಹುಚ್ಚೆ ಸೈ. ಹೇಗೆ ಶುರುವಾಗಿತ್ತದು? ಹಾ ಹೌದು ಬಹಳಷ್ಟು ದುಡ್ಡು ಸಿಕ್ಕಿತ್ತು ಒಂದಿನ. ಸಾಕಷ್ಟು ವೈನ್ ಕೊಂಡಿದ್ದ  ಅವನು. ಬಾಟಲುಗಳನ್ನು ಕಂಕುಳಲ್ಲಿ ಇರಿಸಿಕೊಂಡು ಸ್ಟುಡಿಯೋದ ಒಳಗೆ ಹೋಗುತ್ತಿರುವ ಅವನ ಚಿತ್ರ ಇದೀಗ ಅವನಿಗೇ ಕಾಣಿಸುತ್ತಲಿತ್ತು. ಕ್ಯಾನ್ವಾಸ್‌ನ  ಚೌಕಟ್ಟಿನ ಮುಂದೆ ಕೂತ ಹುಡುಗ, ರೂಪದರ್ಶಿಯಾಗಿ ಕೋಣೆಯ ನಡುಮಧ್ಯ ನಿಂತ ಅವನ (ಡ್ರಿಯೋಲಿಯ) ಹೆಂಡತಿ.  

“ಇವತ್ತು ರಾತ್ರಿ ನಾವು ಗಮ್ಮತ್ತು ಮಾಡುವ“ ಅವನಂದ, “ಒಂದು ಪುಟ್ಟ ಸಂಭ್ರಮದ ಆಚರಣೆ, ನಾವು ಮೂರು ಜನ “

“ಅದೇನು  ಆಚರಿಸೋದು?” ಹುಡುಗ ಮೇಲೆ ನೋಡದೆಯೇ ಕೇಳಿದ “ನೀನೇನು ಹೆಂಡ್ತಿಗೆ ವಿಚ್ಛೇದನ ಕೊಡ್ತಿದ್ದೀಯ ಅವಳು ನನ್ನನ್ನು ಮದ್ವೆಯಾಗಲೆಂದು?”

“ಇಲ್ಲ. ಇವತ್ತು ನಾನು ಬಹಳಷ್ಟು ಸಂಪಾದನೆ ಮಾಡಿದ್ದೇನೆ ನನ್ನ ಕೆಲಸದಿಂದ, ಅದಕ್ಕೆ ಗಮ್ಮತ್ತು ಮಾಡುವ“ ಅಂದ ಡ್ರಿಯೋಲಿ. 

“ಮತ್ತು ನಾನು ಮಾಡಿದ್ದು ಸೊನ್ನೆ, ನಾವು ಅದನ್ನೂ ಸೆಲೆಬ್ರೇಟ್ ಮಾಡಬಹುದು“

“ನಿನ್ನಿಷ್ಟ”  ಮೇಜಿನ ಹತ್ರ ನಿಂತುಕೊಂಡು ಡ್ರಿಯೋಲಿ ಪೊಟ್ಟಣ ಬಿಡಿಸುತ್ತ ಇದ್ದ. ಸುಸ್ತಾಗಿದ್ದ ಅವನಿಗೆ ವೈನ್ ಬೇಕಾಗಿತ್ತು . ಒಂದು ದಿನಕ್ಕೆ ಒಂಭತ್ತು ಗ್ರಾಹಕರು ಸಿಗುವುದು ಖುಷಿಯ ವಿಷಯವೇ ಹೌದು ಆದರೆ ಕಣ್ಣಿಗೆ ಮಾತ್ರ ಸಿಕ್ಕಾಪಟ್ಟೆ ತ್ರಾಸು. ಮೊದಲೆಂದೂ ಅವನು ಒಂದೇ ದಿನ ಒಂಭತ್ತು ಗ್ರಾಹಕರೊಂದಿಗೆ ಕೆಲಸ ಮಾಡಿರಲಿಲ್ಲ. ಒಂಭತ್ತು ಅಮಲೇರಿದ ಸೈನಿಕರು – ಅದಕ್ಕಿಂತ ಆಶ್ಚರ್ಯವೆಂದರೆ ಅದರಲ್ಲಿ ಏಳರಷ್ಟು ಜನ ಕೂಡಲೇ ಕಾಸು ಕೊಟ್ಟಿದ್ದು. ಇದು ಅವನನ್ನು ಬಹಳ ಸಿರಿವಂತನನ್ನಾಗಿಸಿತ್ತು. ಆದರೆ ಕೆಲಸ ಮಾತ್ರ ಕಣ್ಣಿಗೆ ಬಲು ಕೆಟ್ಟದ್ದು. ಡ್ರಿಯೋಲಿಯ ಕಣ್ಣುಗಳು ಸುಸ್ತಾಗಿ ಅರೆಮುಚ್ಚಿಕೊಂಡಿದ್ದವು, ಬಿಳಿಭಾಗದ ಮೇಲೆ ಕೆಂಪು ಗೀಟುಗಳು ಮೂಡಿದ್ದವು. ಎರಡೂ ಕಣ್ಣುಗೊಂಬೆಯ ಒಂದಿಂಚಿನಷ್ಟು ಹಿಂದೆ ನೋವು ತುಂಬಿಕೊಂಡಿತ್ತು. ಆದರೆ ಈಗ ಸಂಜೆಯಾಗಿದೆ. ಅವನು ಸಖತ್ ಸಿರಿವಂತ, ಪೊಟ್ಟಣದಲ್ಲಿ ಮೂರು ಬಾಟಲಿಗಳು – ಒಂದು ಹೆಂಡತಿಗೆ,  ಒಂದು ಗೆಳೆಯನಿಗೆ, ಮತ್ತೊಂದು ಅವನಿಗೆ. ಅವನು ಬಿರಡೆ ತಿರುಗಿಸುವ ಹತ್ಯಾರ ತೆಗೆದುಕೊಂಡು ಬಿರಡೆ ತೆಗೆಯಲು ಮೊದಲಿಟ್ಟ. ಪುಳಕ್ಕನೆ ಸದ್ದು ಮಾಡುತ್ತ ಬಿರಡೆಗಳು ಹೊರಬಂದವು. 

ಹುಡುಗ ಅವನ ಬ್ರಷ್ ಕೆಳಗಿಟ್ಟ  “ಓಹ್ ಏಸುವೇ, ಇಷ್ಟೆಲ್ಲಾ ಗಲಾಟೆಯ ಮಧ್ಯ ಕೆಲಸ ಮಾಡುವುದಾದರೂ ಹೇಗೆ”

ಹುಡುಗಿ ಚಿತ್ರ ನೋಡಲು ಈ ಕಡೆ ಬಂದಳು. ಒಂದು ಕೈಯಲ್ಲಿ ಲೋಟ ಇನ್ನೊಂದು ಕೈಯಲ್ಲಿ ಬಾಟಲು ಹಿಡಕೊಂಡು ಡ್ರಿಯೋಲಿ ಕೂಡ ಬಂದ. 

“ಬೇಡ” ಹುಡುಗ ಕಿರಿಚಿದ “ಬೇಡ ದಯವಿಟ್ಟು”  ಅವನು ಕ್ಯಾನ್ವಾಸ್ ಅನ್ನು ಚೌಕಟ್ಟಿನಿಂದ ಎಳೆದು ಗೋಡೆಯ ಕಡೆ ಮುಖ ಮಾಡಿ ಇಟ್ಟ. ಅಷ್ಟರೊಳಗೆ ಡ್ರಿಯೋಲಿ  ನೋಡಿಯಾಗಿತ್ತು . 

“ನಂಗಿಷ್ಟ ಆಯ್ತು”

“ಭಾಳ ಕೆಟ್ಟದಾಗಿದೆ”

“ಅದ್ಭುತವಾಗಿದೆ, ನೀನು ಮಾಡಿದ ಇನ್ನುಳಿದವುಗಳಂತೆಯೇ. ನಂಗೆ ತುಂಬಾ ಇಷ್ಟವಾಗುತ್ತೆ“

“ಒಂದೇ ತೊಂದ್ರೆ“ ಹುಡುಗ ಮುಖ ಗಂಟಿಕ್ಕುತ್ತ ಅಂದ “ಅವೇನು ಹೊಟ್ಟೆ ತುಂಬಿಸುತ್ತವೆಯೇ? ನಾನು ಅವನ್ನೇನೂ  ತಿನ್ನುವಂತಿಲ್ಲ“

“ಆದ್ರೂ ಅವು ಅದ್ಭುತವಾಗಿವೆ “ ತಿಳಿ ಹಳದಿ ಬಣ್ಣದ ವೈನ್ ಅನ್ನು  ಲೋಟದಲ್ಲಿ ಹಾಕಿ ಅವನ ಕೈಗೆ ಕೊಡುತ್ತ ಡ್ರಿಯೋಲಿ  ಅಂದ. “ಕುಡಿ ಖುಷಿ ಕೊಡತ್ತೆ ನೋಡು”. 

ಇವನಿಗಿಂತ ಹೆಚ್ಚು ಅತೃಪ್ತ, ನಿರ್ವಿಣ್ಣ ಮುಖದವನನ್ನು ಯಾವತ್ತೂ  ನೋಡಿಯೇ ಇಲ್ಲ ಎಂದೆನಿಸಿತು ಡ್ರಿಯೋಲಿಗೆ. ಕೆಲವು ತಿಂಗಳ ಹಿಂದೆ ಕೆಫೆಯೊಂದರಲ್ಲಿ ಒಬ್ಬನೇ ಕುಳಿತು ಕುಡಿಯುತ್ತಿದ್ದವನನ್ನು ಅವನು ನೋಡಿದ್ದ. ಅವನು ರಶಿಯನ್ ಅಥವಾ ಏಶಿಯನ್ ಇರಬೇಕು ಎಂದೆನಿಸಿದ್ದರಿಂದ ಡ್ರಿಯೋಲಿ ಅವನ ಮೇಜಿನ ಬಳಿ ಕೂತು ಮಾತಾಡಿದ್ದ . 

“ರಶಿಯನ್‌ನ ನೀನು?”

“ಹ್ಞೂ”

 “ಎಲ್ಲಿಯವನು?”

“ಮಿನ್ಸ್ಕ”

ಡ್ರಿಯೋಲಿ ಕುಣಿಯುತ್ತ ಎದ್ದು ಅವನನ್ನು ಅಪ್ಪಿಕೊಂಡಿದ್ದ. “ನಾನೂ ಅದೇ ಊರಲ್ಲಿ  ಹುಟ್ಟಿದವನು” . 

“ಮಿನ್ಸ್ಕ್ಅಲ್ಲ ಅದ್ರ ಹತ್ತಿರದ ಊರು” ಹುಡುಗ ಹೇಳಿದ್ದ

 “ಯಾವುದು?”

“ಸ್ಮಿಲೋವಿಶಿ, ಸುಮಾರು ೧೨ ಮೈಲಿ ದೂರ” 

“ಸ್ಮಿಲೋವಿಶಿ” ಡ್ರಿಯೋಲಿ ಅವನನ್ನು ಮತ್ತೊಮ್ಮೆ ಅಪ್ಪಿಕೊಳ್ಳುತ್ತ ಕಿರುಚಿದ್ದ. “ನಾನು ಹುಡುಗನಾಗಿದ್ದಾಗ ಎಷ್ಟೋ ಸರ್ತಿ ಅಲ್ಲಿಗೆ ಹೋಗುತ್ತಿದ್ದೆ” ಇನ್ನೊಬ್ಬನ ಮುಖವನ್ನು ಅಪ್ಯಾಯತೆಯಿಂದ ನೋಡುತ್ತಾ ಮತ್ತೆ ಕೂತುಕೊಂಡ “ಗೊತ್ತಾ ನಿಂಗೆ, ನೀನು ಪಶ್ಚಿಮದ ರಶಿಯನ್ ಥರ ಕಾಣಲ್ಲ, ನೀನು ಟಾರ್ಟರ್ ಅಥವ ಕಾಲ್ಮಿಕ್*  ತರಹ ಕಾಣಿಸ್ತಿ “

ಈಗ ಸ್ಟುಡಿಯೋದಲ್ಲಿ ನಿಂತ್ಕೊಂಡು ಹುಡುಗ ವೈನ್ ಲೋಟ ತಗೊಂಡು ಒಂದೇ ಗುಟುಕಿಗೆ ಗಂಟಲಲ್ಲಿ ಹುಯ್ಯಿಕೊಳ್ಳೋದನ್ನ ಡ್ರಿಯೋಲಿ ನೋಡ್ತಾ ನಿಂತ. ಹೌದು ಅವನ ಮುಖ ಕಾಲ್ಮಿಕ್ ತರಹಾನೇ ಇತ್ತು – ಅಗಲ ಮುಖ, ಉಬ್ಬಿದ ಕೆನ್ನೆಯ ಎಲುಬು, ಒರಟಾದ ಅಗಲ ಮೂಗು. ತಲೆಯ ಪಕ್ಕ ನೆಟ್ಟಗೆ ನಿಂತಿದ್ದ ಕಿವಿಗಳಿಂದಾಗಿ ಕೆನ್ನೆಗಳು ಇನ್ನೂ ಅಗಲವೆನಿಸುತ್ತಿದ್ದವು. ಅವನ ಕಣ್ಣುಗಳು ಕಿರಿದಾಗಿದ್ದವು, ಕಪ್ಪು ಕೂದಲು, ದಪ್ಪ ಉಮ್ಮೆನ್ನುವ ಕಾಲ್ಮಿಕ್ ತುಟಿಗಳು, ಆದ್ರೆ ಅವನ ಕೈಗಳು – ಕೈಗಳನ್ನು ನೋಡಿದ್ರೆ ಮಾತ್ರ  ಆಶ್ಚರ್ಯವಾಗುವುದೆ ಸೈ. ಸಪೂರ ಚಿಕ್ಕ ಬೆರಳುಗಳುಳ್ಳ,  ಬೆಳ್ಳನೆಯ ನಾಜೂಕಿನ ಹೆಣ್ಣಿನ ಕೈಗಳಂತಿದ್ದವು. 

“ಇನ್ನೂ ಸ್ವಲ್ಪ ಕೊಡು” ಹುಡುಗ ಅಂದ “ಸೆಲೆಬ್ರೇಟ್ ಮಾಡೋದೇ ಅಂದ್ಮೇಲೆ ಸರ್ಯಾಗೇ ಮಾಡೋಣ”

ಎಲ್ಲರಿಗೂ ವೈನು ಹಂಚಿದ ಡ್ರಿಯೋಲಿ  ಕುರ್ಚಿಯ ಮೇಲೆ ಕೂತ. ಹುಡುಗ ಡ್ರಿಯೋಲಿಯ ಹೆಂಡತಿಯ ಪಕ್ಕ ಸೋಫಾದ ಮೇಲೆ ಕೂತ. ಅವರ ಮುಂದಿನ ನೆಲದ ಮೇಲೆ ಮೂರೂ ಬಾಟಲುಗಳನ್ನು ಇಡಲಾಗಿತ್ತು.

“ಇವತ್ತು ನಾವು ನಮ್ಮಿಂದ ಎಷ್ಟಾಗುತ್ತೋ ಅಷ್ಟು ಕುಡಿಯೋಣ” ಡ್ರಿಯೋಲಿ ಅಂದ “ಸಖತ್ ದುಡ್ಡಿದೆ ನನ್ಹತ್ರ, ಹೊರಗೆ ಹೋಗಿ ಇನ್ನಷ್ಟು ಬಾಟಲುಗಳನ್ನು ತರ್ಬೇಕು ಅನ್ನಿಸ್ತಾ ಇದೆ, ಎಷ್ಟು ತರ್ಲಿ?”

“ಇನ್ನೂ ಆರು”  ಹುಡುಗ ಅಂದ “ಒಬ್ಬೊಬ್ಬರಿಗೆ ಎರೆಡೆರಡು”

“ಸರಿ ನಾನು ಹೋಗಿ ತರ್ತೀನಿ”

“ನಾನೂ ಬರ್ತಿನಿ ಬಾಟಲ್‌ ತರಲು”

ಹತ್ತಿರದ ಕೆಫೆಯಲ್ಲಿ ಡ್ರಿಯೋಲಿ ಬಿಳಿ ವೈನಿನ ಆರು ಬಾಟಲುಗಳನ್ನು ಕೊಂಡ. ಇಬ್ಬರೂ ಸೇರಿ ಅವುಗಳನ್ನು ಸ್ಟುಡಿಯೋಕ್ಕೆ ತಂದರು. ಎರಡು ಸಾಲಿನಲ್ಲಿ ಅವುಗಳನ್ನು ನೆಲದ ಮೇಲೆ ಇಟ್ಟರು. ಡ್ರಿಯೋಲಿ ಬಿರಡೆಯ ತಿರುಗಣೆಯ ಮೂಲಕ ಎಲ್ಲ ಆರು ಬಾಟಲಿಯದ್ದೂ ಬಿರಡೆ ತೆಗೆದ ಮತ್ತು ಅವರು ಕೂತು ಕುಡಿಯುವುದನ್ನು ಮುಂದುವರಿಸಿದರು. “ಬಹಳ ದೊಡ್ಡ ಮನುಷ್ಯರು ಮಾತ್ರ ಈ ಥರ ಸೆಲೆಬ್ರೇಟ್ ಮಾಡಲು ಸಾಧ್ಯ” ಡ್ರಿಯೋಲಿ  ಅಂದ. 

 “ಅದು ನಿಜ” ಹುಡುಗ ಅಂದ “ನಿಜ ಅಲ್ವಾ ಜೋಸಿ ?”

“ಅಲ್ಲದೆ ಮತ್ತೆ?”

“ಹೇಗನ್ನಿಸ್ತಾ ಇದೆ ನಿಂಗೆ ಜೋಸಿ?”

“ಚೆನ್ನಾಗಿದೆ”

“ಡ್ರಿಯೋಲಿನ ಬಿಟ್ಟು ನೀನು ನನ್ನ ಮದ್ವೆ ಮಾಡ್ಕೊತೀಯ”

 “ಇಲ್ಲ”

“ಅತ್ಯುತ್ತಮ ವೈನ್. ಇದನ್ನು ಕುಡಿಯೋದೇ ಒಂದು ಭಾಗ್ಯ.“ ಅಂದ ಡ್ರಿಯೋಲಿ. 

ನಿಧಾನಕ್ಕೆ, ಕ್ರಮವಾಗಿ ಆಮೇಲೇರಿಸಿಕೊಳ್ಳುವ ಕೆಲಸ ಶುರುವಾಯಿತು. ಹಳೆಯ ಕ್ರಮವೇ, ಆದರೂ ಅದಕ್ಕೂ ಒಂದು ರೀತಿ ರಿವಾಜು ಇತ್ತು, ಘನತೆಯಿಂದ ನಡಕೊಳ್ಳೋದು, ಬಹಳಷ್ಟು ಸಂಗತಿಗಳನ್ನು ಹೇಳೋದು, ಹೇಳಿದ್ದನ್ನೇ ಹೇಳೋದು, ವೈನನ್ನು ಹೊಗಳೋದು, ನಿಧಾನ ಗತಿ ಕೂಡ ಮುಖ್ಯವಾದ್ದದ್ದೇ, ಯಾಕಂದ್ರೆ ಮಾರ್ಪಾಡಿನ ಮೂರು ಸೊಗಸಾದ ಹಂತಗಳನ್ನು ಅನುಭವಿಸುವ ಸಮಯವಿರಬೇಕಲ್ಲ ಮುಖ್ಯವಾಗಿ ಡ್ರಿಯೋಲಿಗೆ ಅವನು ತೇಲುವಂತೆ ಅನ್ನಿಸುವಾಗ ಅವನ ಕಾಲ್ಗಳು ಅವನದ್ದಲ್ಲ ಅಂತನ್ನಿಸೋದು.. ಇದು ಮಾತ್ರ ಎಲ್ಲಕ್ಕಿಂತ ಒಳ್ಳೆಯ ಹಂತ – ಅವನು ತನ್ನ ಕಾಲ್ಗಳನ್ನು ನೋಡಿಕೊಂಡಾಗ   ಅವುಗಳೆಲ್ಲೋ ದೂರವಿದ್ದಂತೆ ಕಾಣಿಸಿ ಅವನಿಗೆಯೇ ಯಾವ ತಲೆಸರಿಯಿಲ್ಲದವನ ಕಾಲ್ಗಳು ಇಷ್ಟು ದೂರ ನೆಲದ ಮೇಲೆ ಬಿದ್ಕೊಂಡಿವೆಯಪ್ಪಾ ಅಂತ ಆಶ್ಚರ್ಯವಾಗುವುದು  . 

ಸ್ವಲ್ಪ ಹೊತ್ತಿನ ಮೇಲೆ ದೀಪ ಹತ್ತಿಸಲು ಅವನು ಎದ್ದ. ಅವನ ಕಾಲು ನೆಲಕ್ಕೆ ತಾಗ್ತಾ ಇರುವುದು ಗೊತ್ತಾಗ್ದೇ ಇರೋದ್ರಿಂದ, ಎದ್ದಾಗ ಕಾಲುಗಳು ತನ್ನ ಜೊತೆಯೇ ಬರ್ತಾ ಇರೋದು ನೋಡಿ ಆಶ್ಚರ್ಯಪಟ್ಕೊಂಡ. ಗಾಳಿಯಲ್ಲಿ ತೇಲುವ ಖುಷಿ ಆಗ್ತಾಯಿತ್ತು ಅವನಿಗೆ. ಗೋಡೆಗೆ ಆನಿಸಿಟ್ಟಿದ್ದ ಕ್ಯಾನ್ವಾಸುಗಳನ್ನು ಕೊನೆಗಣ್ಣಿನಿಂದ ನೋಡುತ್ತಾ ಕೋಣೆಯಲ್ಲಿ ಶತಪಥ ಹಾಕಲಾರಂಭಿಸಿದ 

“ಇಲ್ಕೇಳು, ನಂಗೊಂದು ಐಡಿಯಾ ಬರ್ತಾ ಇದೆ” ಕೋಣೆಯ ಈ ಕಡೆ ಬಂದು ಸೋಫಾದ ಮುಂದೆ ಸ್ವಲ್ಪ ತೂಗಾಡುತ್ತಾ  ಅಂದ “ಇಲ್ಕೇಳು  ನನ್ನ ಪುಟ್ಟ ಕಾಲ್ಮಿಕ್”

“ಏನು?”

“ನಂಗೊಂದು ಅದ್ಭುತ ಐಡಿಯಾ ಹೊಳೆದಿದೆ. ಕೇಳ್ತಾಯಿದ್ದೀಯ?”

“ನಾನು ಜೋಸಿ ಹೇಳೋದನ್ನ ಕೇಳ್ತೀನಿ” 

“ನಾನು  ಹೇಳೋದನ್ನು ಕೇಳು, ದಯವಿಟ್ಟು. ನನ್ನ ಗೆಳೆಯ ನೀನು – ನನ್ನ ಕೆಟ್ಟ ಮುಸುಡಿಯ ಮಿನ್ಸ್ಕ್ ಕಾಲ್ಮಿಕ್- ನಂಗಂತೂ ನೀನು ಎಷ್ಟು ದೊಡ್ಡ ಚಿತ್ರಕಾರನೆಂದ್ರೆ ನಂಗೆ ಒಂದು ಚಿತ್ರ, ಚಂದದ ಚಿತ್ರ… 

“ಎಲ್ಲ ತಗೋ. ನಿಂಗೆ ಬೇಕಾದ್ದು ತಗೋ, ಆದ್ರೆ ನಿನ್ನ ಹೆಂಡ್ತಿ ಹತ್ರ ಮಾತಾಡ್ತಾ ಇರೋವಾಗ ಮಧ್ಯ ಬಾಯಿ ಹಾಕ್ಬೇಡ”

“ಇಲ್ಲ ಇಲ್ಲ, ಸ್ವಲ್ಪ ಕೇಳು. ನಾನು ಹೇಳ್ತ ಇರೋದು ಯಾವಾಗ್ಲೂ ಎಲ್ಹೋದ್ರೂ, ಏನೇ ಆದ್ರೂ ನಂಜೊತೇನೇ ಇರೋಂಥಹ ಚಿತ್ರ… ಯಾವಾಗ್ಲೂ ನನ್ಹತ್ರ …ನೀನು ಬಿಡಿಸಿದ ಚಿತ್ರ”  ಅವನು ಕೈ ಮುಂದೆ ಮಾಡಿ ಹುಡುಗನ ಮೊಣಕಾಲು ಅಲ್ಲಾಡಿಸಿದ. “ದಯವಿಟ್ಟು ನಾನು ಹೇಳೋದನ್ನು ಕೇಳು ನೀನು”.

“ಅವನ ಮಾತು ಕೇಳು” ಅಂದಳು ಹುಡುಗಿ. 

“ನೋಡು ನಾನು ಹೇಳೋದು ಇಷ್ಟೇ, ನನ್ನ ಬೆನ್ನಿನ ಚರ್ಮದ ಮೇಲೆ ನೀನು ಚಿತ್ರವನ್ನು ಬಿಡಿಸಬೇಕು. ಅದರ ನಂತ್ರ ಅದು ಯಾವತ್ತಿಗೂ ಅಳಿಸಿ ಹೋಗದ ಹಾಗೆ ಚಿತ್ರದ ಮೇಲೆ ಟ್ಯಾಟೂ ಮಾಡಬೇಕು.”

“ಇದು ಹುಚ್ಚುತನವೇ ಸೈ”

“ಟ್ಯಾಟೂ ಹಾಕೋದನ್ನ ನಾನು ನಿಂಗೆ ಕಲಿಸ್ತೇನೆ. ಅದು ಬಹಳ ಸುಲಭ. ಚಿಕ್ಕ ಮಗು ಕೂಡ ಮಾಡಬೋದು”

“ನಾನು ಮಗುವಲ್ಲ”

“ದಯವಿಟ್ಟು… 

“ನಿಂಗೆ ಹುಚ್ಚು ಹಿಡ್ದಿದೆ. ಏನ್ಬೇಕು ನಿಂಗೆ?” ಚಿತ್ರಕಾರ ಕಪ್ಪಗಿನ, ವೈನಿನ ಮತ್ತು ತುಂಬಿದ ಇನ್ನೊಬ್ಬನ ಕಣ್ಣುಗಳನ್ನೇ ನೋಡುತ್ತಾ ಕೇಳಿದ. “ದೇವ್ರಾಣೆಗೂ ಏನು ಬೇಕಾಗಿದೆ ನಿಂಗೆ?”

“ನೀನು ಭಾಳ ಸುಲಭ್ವಾಗಿ ಮಾಡಬೋದು, ನಿಂಗಾಗುತ್ತೆ, ಆಗುತ್ತೆ”

“ನೀನು ಟ್ಯಾಟೂ ಬಗ್ಗೆ ಹೇಳ್ತಿದ್ದೀಯ?”

“ಹ್ಞೂ ಟ್ಯಾಟೂ, ನಿಂಗೆ ಎರಡೇ ನಿಮಷದಲ್ಲಿ ಕಲಿಸ್ತೀನಿ”

“ಅಸಾಧ್ಯ” 

“ನಾನೇನು ಮಾತಾಡ್ತಾ ಇದ್ದೀನಿ ಅಂತ ನಂಗೆ ಗೊತ್ತಿಲ್ಲಾಂತೀಯ ?”

ಇಲ್ಲ, ಅದನ್ನಂತೂ ಹುಡುಗ ಹೇಳುವ ಹಾಗಿರಲಿಲ್ಲ, ಟ್ಯಾಟೂ ಬಗ್ಗೆ ಯಾರಿಗಾದ್ರೂ ಚೆನ್ನಾಗಿ ಗೊತ್ತಿದೆ ಅಂದರೆ ಅದು ಡ್ರಿಯೋಲಿಗೆ ಮಾತ್ರ. ಕಳೆದ ತಿಂಗಳಷ್ಟೇ ಅವನು ಒಬ್ಬನ ಇಡೀ ಹೊಟ್ಟೆಯ ಭಾಗವನ್ನು ಅದ್ಭುತ ಹಾಗೂ ನಾಜೂಕಾದ ಹೂವುಗಳ ಚಿತ್ರಗಳಿಂದ ಪೂರ್ತಿಯಾಗಿ ಮುಚ್ಚಿರಲಿಲ್ಲವೇ? ಮತ್ತೆ ಆ ಇನ್ನೊಬ್ಬ ಗ್ರಾಹಕ? ಎದೆ ತುಂಬಾ ಕೂದಲುಗಳಿದ್ದವನ ಮೈಮೇಲೆ ಕಂದು ಕರಡಿಯ ಚಿತ್ರ ಯಾವ ತರಹ ಬಿಡಿಸಿದ್ದನೆಂದರೆ ಎದೆಯ ಕೂದಲುಗಳು ಆ ಕರಡಿಯ ಮೈಮೇಲಿನ ತುಪ್ಪಳವೇ ಆಗಿಬಿಟ್ಟಿತ್ತಲ್ಲ? ಹೆಣ್ಣಿನಂತೆ ಕಾಣುವ ಚಿತ್ರವನ್ನು ಗಂಡೊಬ್ಬನ ತೋಳುಗಳ ಮೇಲೆ ಎಷ್ಟು ನಾಜೂಕಾಗಿ ಬಿಡಿಸಿದ್ದ ತೋಳುಗಳ ಮಾಂಸಖಂಡಗಳು ಅಲುಗಾಡಿದಾಗ ಹೆಣ್ಣಿನ ಚಿತ್ರಕ್ಕೆ ಜೀವ ಬಂದಂತಾಗಿ ಆಶ್ಚರ್ಯಕರ ರೀತಿಯಲ್ಲಿ ಮೈಮಣಿಸಿದ ಹಾಗೆ ಮಾಡಬಲ್ಲವನಾಗಿದ್ದನಲ್ಲವೇ?

“ನಾನು ಹೇಳುವುದಿಷ್ಟೇ” ಹುಡುಗ ಅವನಿಗೆ ಹೇಳಿದ “ನೀನು ಅಮಲಿನಲ್ಲಿದ್ದೀ ಮತ್ತು ಈ ಐಡಿಯಾ ಅದರದ್ದೇ ಪರಿಣಾಮ “

“ನಾವು ಜೋಸಿಯನ್ನು ರೂಪದರ್ಶಿಯಾಗಿಟ್ಟುಕೊಳ್ಳಬಹುದು. ನನ್ನ ಬೆನ್ನ ಮೇಲೆ ಜೋಸಿಯ ಚಿತ್ರ. ನನ್ನ ಹೆಂಡ್ತಿಯ ಚಿತ್ರವನ್ನು  ನನ್ನ ಬೆನ್ನಮೇಲೆ ಹಾಕಿಸ್ಕೊಳ್ಳೋ ಹಾಗಿಲ್ವಾ ?” 

“ಜೋಸಿದಾ?”

“ಹ್ಞೂ” ಡ್ರಿಯೋಲಿಗೆ ಗೊತ್ತಿತ್ತು, ತನ್ನ ಹೆಂಡತಿಯ ಹೆಸರು ಹೇಳಿದೊಡನೆ ಹುಡುಗನ ದಪ್ಪ ಕಂದು ತುಟಿಗಳು ಜೋತುಬಿದ್ದು ಸಣ್ಣಗೆ ಕಂಪಿಸುತ್ತಿದ್ದವು ಎಂದು.

“ಬೇಡ” ಅಂದಳು ಹುಡುಗಿ. 

“ಜೋಸಿ ಡಾರ್ಲಿಂಗ್ ಪ್ಲೀಸ್. ಈ ಬಾಟಲು ತಗೋ ಕುಡಿ. ಅಮೇಲಾದ್ರೂ ನಿನ್ನ ಮನಸು ಬದಲಾಯಿಸ್ತೀ. ಇದು ನಿಜಕ್ಕೂ ಅದ್ಭುತ ಯೋಜನೆ. ನಂ ಜೀವನದಲ್ಲೇ ಇಂಥ ಐಡಿಯಾ ಯಾವತ್ತೂ ಬಂದಿರಲಿಲ್ಲ ನೋಡು”

“ಯಾವ ಐಡಿಯಾ?”

“ಅದೇ ನನ್ನ ಬೆನ್ನ ಮೇಲೆ ಅವನು ನಿನ್ನ ಚಿತ್ರ ಬಿಡಿಸಬೇಕು ಅನ್ನೋದು. ಅಷ್ಟೂ ಹಕ್ಕಿಲ್ವಾ ನಂಗೆ?”

“ನನ್ನ ಚಿತ್ರ?”

“ನಗ್ನ ವ್ಯಕ್ತಿಚಿತ್ರ” ಹುಡುಗನೆಂದ “ಅದಾದ್ರೆ ಒಳ್ಳೆಯ ಐಡಿಯಾ” 

“ನಗ್ನ ಬೇಡ” ಅಂದಳು ಹುಡುಗಿ. 

“ಇದೊಂದು ಅದ್ಭುತ ಯೋಜನೆ” ಡ್ರಿಯೋಲಿ ಅಂದ.  

“ಇದೊಂದು ಹುಚ್ಚು ಯೋಜನೆ” ಅಂದಳು ಹುಡುಗಿ. 

“ಹೇಗಿದ್ದರೂ ಇದೊಂದು ಯೋಜನೆ“ ಹುಡುಗನೆಂದ “ಇಂಥಾ ಯೋಜನೆಗಳನ್ನ ಸೆಲೆಬ್ರೇಟ್ ಮಾಡ್ಬೇಕು”  

ಎಲ್ರೂ  ಒಟ್ಟು ಸೇರಿ ಇನ್ನೊಂದು ಬಾಟಲು ಖಾಲಿ ಮಾಡಿದ್ರು. ಆಗ ಹುಡುಗ ಹೇಳ್ದ. “ಇದೆಲ್ಲ ಪ್ರಯೋಜನ ಇಲ್ಲ. ನನ್ನ ಕೈಲಿ ಟ್ಯಾಟೂ ಮಾಡೋದು ಸಾಧ್ಯ ಇಲ್ಲ. ಒಂದ್ ಕೆಲಸ ಮಾಡಬೋದು, ನಾನು ಈ ಚಿತ್ರ ನಿನ್ನ ಬೆನ್ನ ಮೇಲೆ ಬಿಡಿಸ್ತೀನಿ, ನೀನು ಸ್ನಾನ ಮಾಡ್ದೆ ಇರೋತನ್ಕಾ ಅದು ನಿನ್ ಬೆನ್ನ ಮೇಲೆ ಇರ್ತದೆ. ನೀನು ಜೀವನ ಇಡೀ ಸ್ನಾನ ಮಾಡ್ದೆ ಇದ್ರೆ ನಿನ್ನ ಜೀವ ಇರೋತನ್ಕಾ ಅದೂ ಇರತ್ತೆ “

“ಇಲ್ಲ” ಡ್ರಿಯೋಲಿ  ಅಂದ . 

“ಹ್ಞೂ, ನಿಂಗೆ ಯಾವತ್ತಾದ್ರೂ ಸ್ನಾನ ಮಾಡಬೇಕು ಅಂತ ಅನ್ನಿಸಿದ್ರೆ ನಿಂಗೆ ನನ್ನ ಚಿತ್ರಕಲೆಯ  ಮೇಲಿನ  ಅಭಿಮಾನ ಹೊರಟು ಹೋಗಿದೆ  ಅಂತಾನೆ ಅಂದ್ಕೋತೀನಿ. ಇದು ನನ್ನ ಕಲೆಯ ಮೇಲೆ ನಿನ್ನ ಅಭಿಮಾನದ ಪರೀಕ್ಷೆ”

“ನಂಗೆ ಇದ್ಯಾವುದೂ ಇಷ್ಟ ಆಗ್ತಿಲ್ಲ. ಅವನಿಗೆ ನಿನ್ನ ಚಿತ್ರ ಎಷ್ಟು ಇಷ್ಟ ಅಂದ್ರೆ ಆವ ವರ್ಷಗಟ್ಲೆ ಸ್ನಾನ ಮಾಡ್ಲಿಕ್ಕಿಲ್ಲ, ನಾವು ಟ್ಯಾಟೂನೆ ಮಾಡೋಣ, ಆದರೆ ನಗ್ನ ಅಲ್ಲ.”

“ಹಾಗಾದ್ರೆ ಬರಿ ತಲೆಯ ಭಾಗ ಮಾತ್ರ “ ಡ್ರಿಯೋಲಿ ಅಂದ. 

“ನನ್ನಿಂದ ಸಾಧ್ಯವಿಲ್ಲ”

 “ನಿಜಕ್ಕೂ ಭಾಳ ಸುಲಭ. ನಿಂಗೆ ಎರಡು ನಿಮಿಷದಲ್ಲೇ ಹೇಳಿಕೊಡಬಲ್ಲೆ. ಗೊತ್ತಾಗತ್ತೆ ನೋಡು ನಿಂಗೆ. ನಾನು ಹೋಗಿ ನನ್ನ ಸಾಮಾನು ತರ್ತೇನೆ. ಸೂಜಿ ಮತ್ತು ಶಾಯಿ. ನನ್ನ ಹತ್ರ ಬೇಕಾದಷ್ಟು ಬಣ್ಣದ ಶಾಯಿಗಳಿವೆ, ನಿನ್ನ ಹತ್ರ ಬಣ್ಣಗಳಿದ್ದ ಹಾಗೆಯೆ.  ಇನ್ನೂ ಚಂದದ್ದೇ”

“ಅಸಾಧ್ಯ” 

“ನನ್ಹತ್ರ ತುಂಬಾ ಶಾಯಿಗಳಿವೆ, ಬೇರೆ ಬೇರೆ ಬಣ್ಣಗಳ ಶಾಯಿ ಇಲ್ವಾ ಜೋಸಿ ನನ್ಹತ್ರ ?”

“ಹ್ಞೂ” 

“ನೋಡ್ತಿರು, ಡ್ರಿಯೋಲಿ ಅಂದ “ನಾನು ಹೋಗಿ ತರ್ತೀನಿ. ಅವನು ಕುರ್ಚಿಯಿಂದ ಎದ್ದು ಜೋಲಾಡುತ್ತಲೇ ಗಟ್ಟಿ ಮನಸ್ಸಿನಿಂದ ಕೋಣೆಯಿಂದ ಹೊರಹೋದ .

ಅರ್ಧ ಗಂಟೆಯೊಳಗೆ ಡ್ರಿಯೋಲಿ ವಾಪಾಸ್ ಬಂದ. ಕಂದು ಬಣ್ಣದ ಸೂಟಕೇಸ್ ತೋರಿಸುತ್ತ ನಾನೆಲ್ಲ ತಂದಿದ್ದೇನೆ ಎಂದು ಸಾರಿದ. “ಒಬ್ಬ ಹಚ್ಚೆ  ಹಾಕುವವನಿಗೆ ಬೇಕಾದ್ದೆಲ್ಲ ಈ ಚೀಲದೊಳಗಿದೆ”

ಅವನು ಚೀಲವನ್ನು ಮೇಜಿನ ಮೇಲಿಟ್ಟು , ಅದರೊಳಗಿನ ವಿದ್ಯುತ್ ಚಾಲಿತ  ಸೂಜಿಗಳನ್ನೂ ಬಣ್ಣದ ಶಾಯಿಗಳ ಸಣ್ಣ ಶೀಷೆಗಳನ್ನೂ ಹೊರತೆಗೆದ. ವಿದ್ಯುತ್ ಚಾಲಿತ ಸೂಜಿಯನ್ನು ಪ್ಲಗ್ಗಿಗೆ ಅಳವಡಿಸಿ ಅವನ ಕೈಗೆತ್ತಿಕೊಂಡು ಸ್ವಿಚ್ಚು ಒತ್ತಿದ. ಅದು ಗುಂಯ್ಞೆಂದು ಶಬ್ದ ಮಾಡುವುದರೊಡನೆ ಅದರ ತುದಿಯಿಂದ ಹೊರಬಂದ ಕಾಲಿಂಚಿನ ಸೂಜಿ ಜೋರಾಗಿ ಮೇಲೆ ಕೆಳಗೆ ಹಂದಾಡಲಾರಂಭಿಸಿತು. ಅವನ ಕೋಟು ತೆಗೆದು ಬಿಸುಟು, ಅಂಗಿಯ ಎಡ ತೋಳನ್ನು ಮೇಲಕ್ಕೆ ಮಡಿಸಿಕೊಂಡ. “ನೋಡಿಲ್ಲಿ, ನನ್ನನ್ನೇ ನೋಡು, ಎಷ್ಟು ಸುಲಭ ಎಂದು ತೋರಿಸ್ತೇನೆ ನಿಂಗೆ,. ನನ್ನ ತೋಳಿನ ಮೇಲೆ ಚಿತ್ರ ಬಿಡಿಸ್ತೇನೆ ನೋಡು”

ಅದಾಗಲೇ ಸಾಕಷ್ಟು ನೀಲಿ ಹಚ್ಚೆಯ ಗುರುತುಗಳು ತುಂಬಿಕೊಂಡದ್ದ ಮುಂಗೈ ಮೇಲೆ ಚೂರು ಜಾಗವನ್ನು ಆರಿಸಿ ಅವನು ಹಚ್ಚೆ  ಹಾಕುವ ವಿಧಾನವನ್ನು  ತೋರಿಸಲನುವಾದ. 

“ಮೊದಲಿಗೆ, ನಾನು ಶಾಯಿ ಆರಿಸಿಕೊಳ್ತೇನೆ, ನೀಲಿ ಬಣ್ಣವನ್ನೇ ತೆಕ್ಕೊಳ್ಳುವ- ಸೂಜಿಯ ತುದಿಯನ್ನ ಶಾಯಿಯೊಳಗೆ ಅದ್ದಿ ….. ಹೀಗೆ …. ಮತ್ತೆ ಸೂಜಿ ನೋಡು ನೆಟ್ಟಗೆ ಹಿಡ್ಕೊಂಡು ಹಗೂರಕ್ಕೆ ಚರ್ಮದ ಮೇಲೆ ಓಡಿಸ್ತೇನೆ…. ನೋಡು ಈ ಥರ ….. ಚಿಕ್ಕ ಮೋಟಾರು ಮತ್ತು ವಿದ್ಯುತ್‌ನ ಸಹಾಯದಿಂದ ಸೂಜಿ ಮೇಲೆ ಕೆಳಗೆ ಹೋಗಿ ಚರ್ಮದಮೇಲೆ ತೂತು ಕೊರೀತದೆ. ಅದರೊಳಗೆ ಶಾಯಿ ಹೋಗ್ತದೆ, ನೋಡು ಎಷ್ಟು ಸುಲಭ ಅಂತ ….. ನಾನೀಗ ಮುಂಗೈ ಮೇಲೆ ಒಂದು ಬೇಟೆನಾಯಿಯ ಚಿತ್ರ ಬಿಡಿಸ್ತೇನೆ, ನೋಡ್ತಿರು “

ಹುಡುಗನ ಕುತೂಹಲ ಕೆರಳಿತು  “ ನಂಗೊಂಚೂರು ನಿನ್ನ ಕೈಮೇಲೆ ಬಿಡಿಸ್ಲಿಕ್ಕೆ  ಕೊಡು ನೋಡೋಣ”

ಗುಂಯಿಗುಡುವ ಸೂಜಿಯೊಂದಿಗೆ ಅವನು ಡ್ರಿಯೋಲಿಯ ಮುಂಗೈ ಮೇಲೆ ನೀಲಿ ಗೆರೆಗಳನ್ನು ಬಿಡಿಸಲಾರಂಭಿಸಿದ . “ಭಾಳ ಸುಲಭ” ಅವನಂದ. “ಇದು ಮಸಿ ಮತ್ತು ಪೆನ್ ನಿಂದ ಬಿಡಿಸಿದ ಹಾಗೇ. ಸ್ವಲ್ಪ ನಿಧಾನ ಅನ್ನೋದು ಬಿಟ್ರೆ ಬೇರೆ ಏನೂ ವ್ಯತ್ಯಾಸ ಇಲ್ಲ”

“ಅದ್ರಲ್ಲೇನೂ ಇಲ್ಲ. ನೀನು  ಸಿದ್ಧವಾಗಿದ್ದಿಯ? ಶುರು ಮಾಡೋಣ್ವಾ?”

“ಈವಾಗ್ಲೆ”

“ರೂಪದರ್ಶಿ…ಜೋಸಿ ಬಾ ಬೇಗ “ ಡ್ರಿಯೋಲಿ ಕೂಗಿದ. ಮಗುವೊಂದು ಸಂಭ್ರಮದಿಂದ ಆಟದ ಸಿದ್ಧತೆ ಮಾಡಿಕೊಳ್ಳುತ್ತಿರುವ ಉಮೇದಿನಿಂದ ಅವನು ಕೋಣೆಯೆಲ್ಲ ಓಡಾಡಿ ಎಲ್ಲವನ್ನೂ ಸಿದ್ದ ಪಡಿಸಿದ. 

“ಎಲ್ನಿಂತ್ಕೋಬೇಕು ಅವಳು?”

“ಈ ನಿಲುವುಗನ್ನಡಿಯ ಹತ್ರ ನಿಂತ್ಕೊಳ್ಳಲಿ. ಕೂದ್ಲು  ಬಾಚ್ಕೊಳ್ತಾ ಇರ್ಲಿ. ಅವಳು ಕೂದ್ಲು ಇಳಿ ಬಿಟ್ಕೊಂಡು ಬಾಚ್ತಾ ಇರೋ ಚಿತ್ರಾನ  ಬಿಡಿಸ್ತೀನಿ.”

“ಅದ್ಬುತ , ನೀನೊಬ್ಬ ಜೀನಿಯಸ್”

ನಿರಾಸಕ್ತಿಯಿಂದಲೇ ಹುಡುಗಿ ಕೈಯಲ್ಲಿ ವೈನ್ ಲೋಟ ಹಿಡಕೊಂಡು ನಿಲುವುಗನ್ನಡಿಯ ಪಕ್ಕ ನಿಂತುಕೊಂಡಳು.  ಡ್ರಿಯೋಲಿ  ತನ್ನ ಪ್ಯಾಂಟು ಶರ್ಟು ಕಳಚಿ ಒಳಗಿನ ಚಡ್ಡಿ ಸಾಕ್ಸು, ಬೂಟುಗಳಲ್ಲಿ ನಿಧಾನಕ್ಕೆ ಓಲಾಡುತ್ತಾ ನಿಂತುಕೊಂಡ. ಅವ ಚಿಕ್ಕ ದೃಢಕಾಯದ, ಬೆಳ್ಳಗಿನ ಮನುಷ್ಯ, ಮೈ ರೋಮರಹಿತ. “ನೋಡು” ಅವನಂದ “ನಾನೇ ನಿನ್ನ ಕ್ಯಾನ್ವಾಸ್, ಎಲ್ಬೇಕು ನಿಂಗೆ ನಿನ್ನ ಕ್ಯಾನ್ವಾಸ್?”

“ಯಾವತ್ತಿನಂತೆ, ಚೌಕಟ್ಟಿನ ಮೇಲೆ”

“ತಲೆ ಇಲ್ಲ ನಿಂಗೆ, ನಾನು ಕ್ಯಾನ್ವಾಸ್”

“ಹಾಗಾದ್ರೆ ನೀನು ಚೌಕಟ್ಟಿನ ಮೇಲೆ ಇರು ಅದೇ ನಿನ್ನ ಜಾಗ “

“ಅದ್ಹೇಗೆ ಆಗತ್ತೆ?”

“ನೀನು ಕ್ಯಾನ್ವಾಸ್ ಹೌದ ಅಲ್ವಾ ಅಂತ ಮೊದ್ಲು ಹೇಳು?”

“ನಾನೆ ಕ್ಯಾನ್ವಾಸ್‌. ನಂಗಾಗ್ಲೇ ಕ್ಯಾನ್ವಾಸ್ ತರಹಾನೇ ಅನಿಸ್ತಾ ಇದೆ”

“ಚೌಕಟ್ಟಿನ ಮೇಲೆ ಏರು, ಅದೇನ್ ಕಷ್ಟ ನಿಂಗೆ ?”

“ನಿಜಕ್ಕೂ, ಸಾಧ್ಯವಿಲ್ಲದ್ದು” 

“ಹಾಗಾದ್ರೆ ಕುರ್ಚಿ ಮೇಲೆ ಕೂತ್ಕೋ. ತಿರುಗಮುರುಗ ಕೂತ್ಕೋ. ನಿನ್ನ ಅಮಲೇರಿದ ತಲೇನ ಅದರ ಬೆನ್ನಿಗೆ ಒರಗಿಸ್ಕೊಬೋದು. ಬೇಗ, ನಾನು ಶುರು ಮಾಡ್ತಿದ್ದೇನೆ.”

“ಸರಿ, ನಾನು ರೆಡಿ” 

“ಮೊದ್ಲು” ಹುಡುಗ ಅಂದ “ನಾನು ಮಾಮೂಲು ಚಿತ್ರ ಬಿಡಿಸ್ತೇನೆ, ನಂತ್ರ ಅದು ನಂಗಿಷ್ಟ ಆದ್ರೆ ಟ್ಯಾಟೂ ಮಾಡ್ತೇನೆ”. ಅಗಲವಾದ ಬ್ರಷ್‌ನಿಂದ ಅವನ ಬರಿ ಬೆನ್ನ ಮೇಲೆ ಚಿತ್ರ ಮೂಡಿಸಲಾರಂಭಿಸಿದ. 

“ಅಯ್ಯೋ ಅಯ್ಯೋ” ಡ್ರಿಯೋಲಿ ಕಿರುಚಿದ “ನನ್ನ ಬೆನ್ನ ಮೇಲೆ ರಾಕ್ಷಸ ಗಾತ್ರದ ಜರಿಹುಳು ಓಡಾಡ್ತಾ ಇದೆ”

“ಅಲ್ಲಾಡಬೇಡ, ಸುಮ್ನೆ ಕೂತ್ಕೋ”, ತಿಳಿನೀಲಿ ಬಣ್ಣದ, ಮುಂದೆ ಟ್ಯಾಟೂ ಮಾಡುವಾಗ ತೊಂದರೆಯಾಗದಂತೆ ನೀರಿನಂತಹ ತೆಳ್ಳಗಿನ ಬಣ್ಣ ಉಪಯೋಗಿಸುತ್ತ ಹುಡುಗ ಚುರುಕಾಗಿ ಕೈ ಓಡಿಸುತ್ತಿದ್ದ. ಚಿತ್ರ ಬಿಡಿಸಲು ಮುಂದಾದೊಡನೆ ಅವನ ಏಕಾಗ್ರತೆ ಕುಡಿತದ ಅಮಲನ್ನೂ ಮರೆಯಿಸಿಬಿಡುವಷ್ಟು ಗಾಢವಾಗಿದ್ದಿತು.   

ಮಣಿಕಟ್ಟನ್ನು ಬಿಗಿಯಾಗಿರಿಸಿ ಮುಂಗೈಯಿಂದ ವೇಗವಾಗಿ ಕುಂಚದಿಂದ ಲಘುವಾದ ರೇಖೆಗಳನ್ನು ಮೂಡಿಸುತ್ತ ಅರ್ಧ ಗಂಟೆಯೊಳಗೆ ಮುಗಿಸಿಬಿಟ್ಟ. 

“ಸರಿ, ಆಯ್ತು” ಅವನು ಹುಡುಗಿಗೆಂದ. ಅವಳು ತಕ್ಷಣ ಸೋಫಾ ಮೇಲೆ ಬಿದ್ದುಕೊಂಡು ನಿದ್ದೆಹೋಗಿಬಿಟ್ಟಳು. 

ಡ್ರಿಯೋಲಿ ಎಚ್ಚರವಾಗಿಯೇ ಇದ್ದ. ಹುಡುಗ ಸೂಜಿ ತಗೊಂಡು ಶಾಯಿಯೊಳಗೆ ಅದ್ದುವುದನ್ನು ನೋಡುತ್ತಲೇ ಇದ್ದ. ಅದು ಬೆನ್ನಿಗೆ ತಾಕಿದಾಕ್ಷಣದ ಚುಚ್ಚುವಿಕೆ ಅನುಭವಕ್ಕೆ ಬಂತು. ಅಹಿತಕರ ಆದರೆ ತಡಕೊಳ್ಳುವಷ್ಟಿದ್ದ ನೋವು ಅವನನ್ನು ನಿದ್ದೆ ಮಾಡದಂತಿರಿಸಿತ್ತು . ಸೂಜಿಯ ಚಲನೆಯನ್ನು ಗಮನಿಸುತ್ತಾ, ಹುಡುಗ ಬಳಸುತ್ತಿದ್ದ ವಿವಿಧ ಬಣ್ಣದ ಶಾಯಿಗಳನ್ನು ಗಮನಿಸುತ್ತಾ ಡ್ರಿಯೋಲಿ ತನ್ನ ಬೆನ್ನ ಮೇಲೆ ಮೂಡುತ್ತಿರುವ ಚಿತ್ರದ ಕಲ್ಪನೆ ಮಾಡಿಕೊಳ್ಳುತ್ತ ಸಮಯ ಕಳೆಯುತ್ತಿದ್ದ. ಹುಡುಗ ತೀವ್ರವಾಗಿ ತನ್ನ ಕೆಲಸದಲ್ಲಿ ಮಗ್ನನಾಗಿದ್ದ. ಕೈಯಲ್ಲಿನ ಮಷೀನು ಮತ್ತು ಅದು ಮೂಡಿಸುತ್ತಿದ್ದ ಪರಿಣಾಮಕಾರಿ ಚಿತ್ರದಲ್ಲಿ ಪೂರ್ತಿಯಾಗಿ ಕಳೆದುಹೋಗಿಬಿಟ್ಟಿದ್ದ. 

ಬೆಳಕು ಮೂಡುವ ತನಕ ಗುಂಯೆನ್ನುವ ಮಷೀನಿನ ಸದ್ದಿನೊಂದಿಗೆ ಹುಡುಗ ಕೆಲಸ ಮಾಡುತಿದ್ದ . ಅಂತೂ ಕೊನೆಗೊಮ್ಮೆ ಕಲಾವಿದ ಕೈ ಹಿಂತೆಗೆದು “ಪೂರ್ತಿಯಾಯಿತು” ಎಂದಾಗ ಹೊರಗೆ ಬೆಳಕು ಹರಿದು ರಸ್ತೆಯ ಮೇಲೆ ಜನರ ಓಡಾಟ ಶುರುವಾಗಿತ್ತು ಎಂದು ಡ್ರಿಯೋಲಿಗೆ ನೆನಪಿತ್ತು.    

“ನಾನು ನೋಡ್ಬೇಕು “ ಡ್ರಿಯೋಲಿ  ಅಂದ . ಹುಡುಗ ಒಂದು ಕೋನದಿಂದ ಕನ್ನಡಿ ಎತ್ತಿ ಹಿಡಕೊಂಡ ಡ್ರಿಯೋಲಿ  ಕತ್ತು ಎತ್ತಿ ನೋಡಿದ . 

“ಅಬ್ಬಾ ದೇವರೇ”  ಡ್ರಿಯೋಲಿ ಅಂದ. ಅದೊಂದು ಆಶ್ಚರ್ಯಚಕಿತಗೊಳಿಸುವ ನೋಟವಾಗಿತ್ತು. ಅವನ ಇಡೀ ಬೆನ್ನಮೇಲೆ  , ಭುಜಗಳಿಂದ ಹಿಡಿದು ಪೂರ್ತಿ ಬೆನ್ನು ಹುರಿಯ ಕೆಳತನಕ ಬಣ್ಣಗಳ ಓಕುಳಿಯಾಟವಿತ್ತು – ಸ್ವರ್ಣ, ಹಸಿರು, ನೀಲ, ಕೆಂಪು. ಟ್ಯಾಟೂ ಬಳಸಿದ ರೀತಿಯಿಂದ ಇಂಪ್ಯಾಸ್ಟೊ ಚಿತ್ರದಂತೆ ಕಾಣಿಸುತಿತ್ತು. ತಾನು ಕುಂಚದಿಂದ ಮೂಡಿಸಿದ ಚಿತ್ರದ ಮೇಲೆ ಸಾಧ್ಯವಾದಷ್ಟೂ ಕುಶಲತೆಯಿಂದ ಬಣ್ಣ ತುಂಬಿಸಿದ್ದ. ಬೆನ್ನ ಹುರಿ ಮತ್ತು ಬೆನ್ನೆಲುಬುಗಳನ್ನು ಚಿತ್ರದ ಒಂದು ಅಂಗವಾಗಿ ಚಾಕಚಕ್ಯತೆಯಿಂದ ಬಳಸಿಕೊಂಡಿದ್ದ. ಅದಕ್ಕಿಂತಲೂ ಹೆಚ್ಚಿನದೆಂದರೆ ಈ ನಿಧಾನ ಪ್ರಕ್ರಿಯೆಯಲ್ಲಿಯೂ ಒಂದು ಸಹಜತೆಯನ್ನು ಮೂಡಿಸಿದ್ದ. ಜೀವಂತಿಕೆಯಿಂದ ಕೂಡಿದ ಈ ಚಿತ್ರ ಸೂಚಿನ್ ನ ಇನ್ನುಳಿದ ಚಿತ್ರಗಳಲ್ಲಿ ಕಾಣುವ ವಿಲಕ್ಷಣ ವಿಚಿತ್ರತೆಯನ್ನು ಹೊಂದಿತ್ತು. ಚಿತ್ರ ತದ್ರೂಪವಾಗಿರಲಿಲ್ಲ. ಅದೊಂದು ಭಾವ, ರೂಪದರ್ಶಿಯ ಅಸ್ಪಷ್ಟ, ಅಮಲೇರಿದ ಮುಖ, ಕಡು ಹಸಿರು ಬಣ್ಣದ ಸುರುಳಿಯಂತಹ  ರೇಖೆಗಳು ತಲೆಯ ಸುತ್ತು ಹಿನ್ನೆಲೆಯಲ್ಲಿ  ಸುಳಿಯಂತಿದ್ದವು. 

“ಅತ್ಯದ್ಭುತ!”

“ನಂಗೂ ಇಷ್ಟ ಆಯ್ತು” ಹುಡುಗ ಹಿಂದೆ ಹೋಗಿ ವಿಮರ್ಶಾತ್ಮಕವಾಗಿ ದಿಟ್ಟಿಸಿ ನೋಡಿದ. ಆಮೇಲಂದ “ನಾನು ಸಹಿ ಹಾಕುವಷ್ಟು ಚೆನ್ನಾಗಿದೆ ಅಂತ ಅನ್ನಿಸ್ತಿದೆ.” ಮತ್ತೆ ಮಷೀನನ್ನು  ಕೈಗೆತ್ತಿಕೊಂಡು ಡ್ರಿಯೋಲಿಯ ಬೆನ್ನ ಬಲಭಾಗದಲ್ಲಿ  ಕಿಡ್ನಿ ಇರುವ ಜಾಗದಲ್ಲಿ ತನ್ನ  ಸಹಿಯನ್ನು ಕೆಂಪು ಶಾಯಿಯಿಂದ ಕೊರೆದ. 

* ಕಾಲ್ಮಿಕ್ – ಸೈಬೀರಿಯಾದ ಒಂದು ಜನಾಂಗ. 

| ಮುಂದುವರೆಯುವುದು |

‍ಲೇಖಕರು Admin

October 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: