ತೇಜಾವತಿ ಎಚ್ ಡಿ
ಸೋತು ಸುಣ್ಣವಾದಾಗ
ಮನಸ್ಸಿಗೆ ಮಬ್ಬು ಕವಿದಾಗ
ಎದೆಯಲ್ಲಿ ಸಣ್ಣದೊಂದು ಕಂಪನ ಆರಂಭವಾದಾಗ
ಜಗತ್ತು ತನ್ನತ್ತ ಬೆರಳು ಮಾಡಿ ತೋರುವಾಗ
ನೆನಪು ಮರುಕಳಿಸುತ್ತದೆ
ನೀನಿರಬೇಕಿತ್ತು
ಕಂಬನಿಯ ಸಾಗರವನ್ನೊಮ್ಮೆ ಹಿಂಗಿಸಲು
ಲೆಕ್ಕವಿಲ್ಲದ ರಾತ್ರಿಗಳ ಅಗಾಧ ಹಸಿವನ್ನು
ಕೈತುತ್ತಿನಿಂದ ಮರೆಸಲು
ಅಣಕವು ವಿಜೃಂಭಿಸುವಾಗ
ಕಾಲುಗಳು ನಿತ್ರಾಣವಾದಾಗ ಲೋಪಗಳ ಲೇಪನವಾದಾಗ
ನಾಲ್ಕು ಗೋಡೆಗಳೇ ಬಂಧಿಸಿಟ್ಟಾಗ
ಮತ್ತೆ
ನೆನಪು ಆವರಿಸುತ್ತದೆ

ನೀನಿರಬೇಕಿತ್ತು
ಬಳಲಿದ ಹೆಜ್ಜೆಗಳಿಗೆ ಗೆಜ್ಜೆ ಕಟ್ಟಲು
ನೋವಿನೆದೆಯ ಮೇಲೂ ಹೂವಿನ ದಾರಿ ಮಾಡಿಕೊಡಲು
ಭವದ ಬೆವರು ಬಸಿದು ಯುಗದ ಹಾದಿಗೆ ತಂಪು ಬೀಸಲು
ಜನ್ಮಾಂತರದ ಶಾಪಗಳು ಬೆನ್ನು ಹತ್ತಿ ಬೇತಾಳವಾದಾಗ
ಮುಳ್ಳುಹಾಸಿಗೆಯಲ್ಲಿ ರುಧಿರದ ಹೊದಿಕೆ ಜೋಗುಳ ಹಾಡುವಾಗ
ಹಕ್ಕಿಗಳ ಗೂಡಿಗೆ ಗುಂಡು ಹಾರಿಸಿದಾಗ
ನವ ರಾಕ್ಷಸತ್ವದ ಆಲಿಂಗನವಾಗಿ ನರಳುವಾಗ
ಥಟ್ಟನೆ ನೆನಪು ಎದುರಾಗುತ್ತದೆ
ನೀನಿರಬೇಕಿತ್ತು
ಸೆರಗ ಮರೆಯಲಿ ತಬ್ಬಿ ಸುರಕ್ಷತೆಯ ಕಾವು ಕೊಡಲು
ಬಾಡುತ್ತಿರುವ ಎಳೆ ದಸಿಗಳ ಅರಳಿಸಲು
ಭವಿಷ್ಯದ ಮಹಾನ್ ಚಿಂತನೆಗಳು ಅವನಿಯನ್ನು ತೂಗಿ ಗಿರಿ ಶೃಂಗಗಳನ್ನೇರಿ ದಿಗಂತದವೆರೆಗೆ ದೂರದೃಷ್ಠಿ ಬೀರಿ ಪ್ರಖರ ಬೆಳಕನೂಡಲಿ
ಯುಗ ಯುಗಾಂತರಗಳ ಕೊಳಕು ಕೊಚ್ಚಿ ಹೋಗುವಂತೆ
ಆ ಪವಿತ್ರ ಪ್ರಸವ






0 Comments