ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ, ಶಾಮಣ್ಣ ಮತ್ತು ಜೇನಿನಲ್ಲದ್ದಿದ ಜಿಲೇಬಿ!

ಬಿ.ಆರ್.ಸತ್ಯನಾರಾಯಣ

ಹಳ್ಳಿಯಿಂದ ಬಿ.ಎ. ಕಲಿಯಲು ಮೈಸೂರಿನ ಮಹಾರಾಜ ಕಾಲೇಜಿಗೆ ಬಂದಿದ್ದ ಹುಡುಗ, ಗೌರಿ-ಗಣೇಶ ಹಬ್ಬದ ಸಮಯದಲ್ಲಿ, ಜನರೆಲ್ಲಾ ಗಣಪತಿ ಕೂರಿಸುವುದನ್ನು ನೋಡಿ ತಾನೂ ಗಣಪತಿ ಕೂರಿಸಲು ನಿರ್ಧರಿಸಿದ. ಎಂಟಾಣೆಗೊಂದು ಗಣಪತಿ, ನಾಲ್ಕಾಣೆಗೊಂದು ಗೌರಿ ಹೀಗೆ ಪುಟ್ಟ ಪುಟ್ಟ ವಿಗ್ರಹಗಳನ್ನು ಕೊಂಡು ತಂದು ರೂಮಿನಲ್ಲಿಟ್ಟ. ಮೂರು ದಿನಗಳ ನಂತರ ಜನರು ಗಣಪತಿಯನ್ನು ನೀರಿಗೆ ವಿಸರ್ಜನೆ ಮಾಡುವುದನ್ನು ನೋಡಿ, ತನ್ನ ಗೌರಿ-ಗಣೇಶರನ್ನು ನೀರಿಗೆ ವಿಸರ್ಜಿಸಲು ತೀರ್ಮಾನಿಸಿದ. ಅವುಗಳನ್ನು ತೆಗೆದುಕೊಂಡು ಕುಕ್ಕನಹಳ್ಳಿ ಕೆರೆಗೆ ಹೊರಡಬೇಕನ್ನುವಷ್ಟರಲ್ಲಿ, ಅವನ ಸ್ನೇಹಿತನೊಬ್ಬ ಬಂದು ತನ್ನ ಮನೆಗೆ ಕರೆದ. ಆತನ ಮನೆಗೆ ಹೋಗುವಾಗ ಕುಕ್ಕನಹಳ್ಳಿ ಕೆರೆಯ ಮಾರ್ಗದಲ್ಲೇ ಹೋಗಬೇಕಾಗಿತ್ತು. ಹಾಗೇ ನೀರಿಗೆ ಹಾಕಿದರಾಯ್ತು ಎಂದುಕೊಂಡು ಗೌರಿ-ಗಣೇಶರನ್ನು ಜೇಬಿಗೆ ಇಳಿಸಿ, ಸ್ನೇಹಿತನ ಸೈಕಲ್ಲಿನ ಕ್ಯಾರಿಯರ್ ಏರಿದರು.

ಕುಕ್ಕನಹಳ್ಳಿ ಕೆರೆಯ ಸಮೀಪ ಬಂದವರಿಗೆ, ಏನೋ ಯೋಚಿಸುತ್ತಾ ಸೈಕಲ್ ತುಳಿಯುತ್ತಿದ್ದ ಸ್ನೇಹಿತನಿಗೆ ಸೈಕಲ್ ನಿಲ್ಲಿಸಲು ಹೇಳಲು ಮನಸ್ಸು ಬರಲಿಲ್ಲ. ಹಾಗೇ ನೀರಿಗೆ ಎಸೆಯೋಣ ಎಂದರೆ, ರಸ್ತೆಯಿಂದ ನೀರು ಸ್ವಲ್ಪ ದೂರದಲ್ಲಿದೆ. ತಕ್ಷಣ ಆತನ ಇನ್ನೊಂದು ಜೇಬಿನಲ್ಲಿದ್ದ ತನ್ನ ಚಾಟರ್‌ಬಿಲ್ಲು ನೆನಪಾಯಿತು. ಅದನ್ನು ತೆಗೆದು, ಗಣಪತಿಯ ವಿಗ್ರಹವನ್ನು ಅದಕ್ಕಿಟ್ಟು, ಎಳೆದು ನೀರಿಗೆ ಹಾರಿಸಿಬಿಟ್ಟರು. ಹಾಗೆ ಎಳೆದು ಬಿಟ್ಟ ರಭಸಕ್ಕೆ, ಗಣಪತಿಯೇನೋ ನೀರಿಗೆ ಬಿದ್ದ. ಆದರೆ ಸೈಕಲ್ ಬ್ಯಾಲೆನ್ಸ್ ತಪ್ಪಿ, ಅದನ್ನು ಕಂಟ್ರೋಲಿಗೆ ತಂದು ನಿಲ್ಲಿಸುವಲ್ಲಿ, ಸೈಕಲ್ ತುಳಿಯುತ್ತಿದ್ದಾತನಿಗೆ ಸಾಕುಬೇಕಾಯಿತು. ’ಏನ್ಮಾಡ್ತಾ ಇದ್ರಿ. ಈಗ ಬಿದ್ದು ಹೋಗ್ತಿದ್ದೆವಲ್ಲ’ ಎಂದಾಗ, ’ಗಣಪತಿಯನ್ನು ನೀರಿಗೆ ವಿಸರ್ಜನೆ ಮಾಡುತ್ತಿದ್ದೆ’ ಎಂದರಂತೆ.

 

ಈಗಾಗಲೇ ಈ ಜೋಡಿ ಯಾರಿರಬಹುದೆಂದು ಕೆಲವರಿಗಾದರೂ ಗೊತ್ತಾಗಿರುತ್ತದೆ. ಮೈಸೂರಿನಂತಹ ನಗರದಲ್ಲೂ ಚಾಟರ್ ಬಿಲ್ಲನ್ನು ಜೇಬಿನಲ್ಲಿಟ್ಟುಕೊಂಡು ಓಡಾಡುವ ಹುಡುಗಾಟಿಕೆ ಯಾರಿಗಾದರೂ ಇದ್ದರೆ, ಅದು ಕಡಿದಾಳು ಶಾಮಣ್ಣನವರಿಗಲ್ಲದೆ ಬೇರೆಯವರಿಗಲ್ಲ. ಆಗ ದೀರ್ಘವಾಗಿ ಯೋಚಿಸುತ್ತಾ ಸೈಕಲ್ ತುಳಿಯುತ್ತಿದ್ದಾತ ಅವರ ಜೀವಮಾನದ ಗೆಳೆಯ, ಪೂರ್ಣಚಂದ್ರ ತೇಜಸ್ವಿ! ಆ ಸಂದರ್ಭದಲ್ಲಿ ತೇಜಸ್ವಿಯವರ ಯೋಚನೆಯಲ್ಲಿದ್ದುದು ’ಮಾಯಾಮೃಗ’ ಕಥೆಯ ಬೀಜರೂಪ! ನಾವು ನೋಡುತ್ತಿರುವ ಅಥವಾ ಯೋಚಿಸುತ್ತಿರುವ ಒಂದೇ ವಸ್ತು, ನಮ್ಮ ಮನಸ್ಸಿನಲ್ಲಿ ಯಾವ ಯಾವ ರೀತಿಯ ಆಲೋಚನೆಗಳನ್ನು ಹುಟ್ಟಿಸಬಹುದು ಎಂದು ಯೋಚಿಸುತ್ತಿದ್ದರಂತೆ.

’ಹೀಗೆ ನಿರಂತರ ಓಡಾಟ, ಹರಟೆ ಇವೆಲ್ಲವೂ ತೇಜಸ್ವಿಯವರ ಕಲಾಸೃಷ್ಟಿಗೆ ನೆರವಾಗುತ್ತಿದ್ದವು. ಹರಟೆಯಲ್ಲಿಯೇ ಎಷ್ಟೋ ಗಂಭೀರ ವಿಚಾರಗಳು ಹುಟ್ಟುತ್ತವೆ ಎಂದು ಶಾಂತಾವೇರಿ ಗೋಪಾಲಗೌಡರು ಹೇಳುತ್ತಿದ್ದರಂತೆ. ಅಂತೆಯೇ ತಮ್ಮ ಹರಟೆಯ ನಡುವೆ ಪ್ರಸ್ತಾಪವಾದ ಕೆಲವು ಘಟನೆಗಳೇ ತೇಜಸ್ವಿಯವರ ಹಲವಾರು ಕತೆಗಳಲ್ಲಿ ಕಲಾತ್ಮಕವಾಗಿ ಅಭಿವ್ಯಕ್ತಿ ಗೊಂಡಿವೆ’ ಎಂಬುದನ್ನು ಶಾಮಣ್ಣ ನೆನಪು ಮಾಡಿಕೊಳ್ಳುತ್ತಾ ಹೋಗುತ್ತಾರೆ.

ಸಂದರ್ಭ, ಶನಿವಾರ (೧೫.೦೬.೨೦೧೩) ಸಂಜೆ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ’ಮತ್ತೆ ಮತ್ತೆ ತೇಜಸ್ವಿ’ ಡಿ.ವಿ.ಡಿ. ಬಿಡುಗಡೆಯ ಸಮಾರಂಭ. ಶಾಮಣ್ಣನವರ ಮಾತು ಕೇಳಬೇಕು, ಅವರನ್ನು ಮಾತನಾಡಿಸಿಕೊಂಡು ಬರಬೇಕು ಎಂದು ನಿರ್ಧರಿಸಿದ್ದೆ. ಶಾಮಣ್ಣನವರ ಬಗ್ಗೆ ಕೇಳಿ, ಓದಿ ತಿಳಿದುಕೊಂಡಿದ್ದಲ್ಲದೆ, ಕಳೆದ ಎರಡ್ಮೂರು ವರ್ಷಗಳಿಂದ ಅವರೊಂದಿಗೆ ಹೆಚ್ಚು ಹೆಚ್ಚು ಮಾತನಾಡುವ ಅವಕಾಶ ನನಗೆ ಸಿಕ್ಕಿತ್ತು. ಅಲಿಗೆ ಪುಟ್ಟಯ್ಯನಾಯಕ ಪುಸ್ತಕ ಸಿದ್ಧಪಡಿಸುವಾಗ ಅವರು ನೀಡಿದ ಮಾಹಿತಿ, ಬರೆದುಕೊಟ್ಟ ಲೇಖನ, ಮಳೆಯ ನಡುವೆಯೂ ಪುಸ್ತಕಬಿಡುಗಡೆಗೆ ಅವರೇ ಡ್ರೈವ್ ಮಾಡಿಕೊಂಡು ಬಂದಿದು, ಕಿರಿಯರನ್ನೂ ಸ್ನೇಹಿತರಂತೆ ಸಂಬೋಧಿಸುತ್ತಾ ಮಾತನಾಡುವ ಅವರ ತುಂಟಾಟದ ಮಾತು, ನಿಷ್ಕಲ್ಮಶ ನಗು ಇವನ್ನೆಲ್ಲಾ ಮರೆಯಲು ಸಾಧ್ಯವೇ ಇಲ್ಲ. ಆದರೆ, ಸಂಜೆ ಮಳೆ ಬಂದ ಕಾರಣದಿಂದ ತಡವಾಯಿತು. ಇಂಡಿಯಾ ಪಾಕಿಸ್ಥಾನ ಕ್ರಿಕೆಟ್ ಮ್ಯಾಚ್, ಮಳೆ ಇವೆರಡೂ ಇರುವಾಗ ಕಾರ್ಯಕ್ರಮಕ್ಕೆ ಜನರು ಬರುತ್ತಾರೊ ಇಲ್ಲವೊ ಎಂದುಕೊಂಡು ಪರಿಷತ್ತು ತಲುಪಿದವನಿಗೆ ಆಶ್ಚರ್ಯವಾಗುವಂತೆ ಭರ್ತಿಯಾಗಿದ್ದ ಸಭಾಂಗಣ ಸ್ವಾಗತ ಕೋರಿತ್ತು. ಅಷ್ಟೊತ್ತಿಗೆ, ಕೊನೆಯ ಬಾಷಣಕಾರರಾಗಿ ಶಾಮಣ್ಣ ಮಾತನಾಡುತ್ತಿದ್ದರು.

ನೋಡುವವರಿಗೆ ಗೊತ್ತುಗುರಿಯಿಲ್ಲದಂತೆ ಕಾಣುವ ತೇಜಸ್ವಿ-ಶಾಮಣ್ಣನವರ ತಿರುಗಾಟ, ಹರಟೆಗೆ ಕುವೆಂಪು ಒಮ್ಮೆ ಹೇಗೆ ಪ್ರಿತಿಕ್ರಿಯಿಸಿದ್ದರು? ಇವರಿಬ್ಬರು ಸೈಕಲ್ ಮೇಲೆ, ಸೈಕಲ್ ತಳ್ಳಿಕೊಂಡು, ಇಡೀ ಮೈಸೂರನ್ನು ಸುತ್ತುತ್ತಾ, ಸುತ್ತುತ್ತಲೇ ಹರಟುತ್ತಾ ಇದ್ದರೂ, ಮನೆ ತಲುಪಿದರೂ ಸಮಯ ಸಾಕಾಗುತ್ತಿರಲಿಲ್ಲ. ಆಗ ’ಉದಯರವಿ’ಯ ಸಮೀಪ ಇದ್ದ ಒಂದು ಚಿಕ್ಕ ಬಂಡೆಯ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದರು. ಆಗ ಒಮ್ಮೆ ಕುವೆಂಪು, ’ನಿಮ್ಮಿಬ್ಬರ ಕಾಲುಗಳಿಗೆ ಬೇರೆ ಬೇರೆ ಬಣ್ಣದ ದಾರಗಳನ್ನು ಕಟ್ಟಿಬಿಟ್ಟರೆ, ಸಂಜೆಯ ವೇಳೆಗೆ ಒಂದು ಚಿತ್ತಾರದ ರಗ್ಗು (ಕಂಬಳಿ) ಸಿದ್ಧವಾಗಿಬಿಡುತ್ತದೆ. ಅಷ್ಟೊಂದು ಸುತ್ತುತ್ತೀರಲ್ಲಾ’ ಎಂದಿದ್ದರಂತೆ!

ತೇಜಸ್ವಿ ಶಿವಮೊಗ್ಗಕ್ಕೆ ಓದಲು ಬಂದಾಗ, ಶಾಮಣ್ಣನವರ ಬಳಿಯಿದ್ದ ಬಿ.ಎಸ್.ಎ. ಸೈಕಲ್ಲಿನಿಂದಾಗಿ ತೇಜಸ್ವಿಯವರಿಗೆ ಪರಿಚಯಾಗಿದ್ದಂತೆ, ಅಂತಹ ಸೈಕಲ್ಲನ್ನೇ ತೇಜಸ್ವಿ ತೆಗೆದುಕೊಳ್ಳಬೇಕೆಂದುಕೊಂಡಿದ್ದರೂ, ಏನೋ ಕಾರಣದಿಂದ ರ‍್ಯಾಲಿ ಸೈಕಲ್ ಅವರದ್ದಾಗಿತ್ತು. ಆದರೆ, ಬಿ.ಎಸ್.ಎ. ಸೈಕಲ್ ಮೂಲೆಗೆ ಬಿತ್ತು, ಶಾಮಣ್ಣ ತೇಜಸ್ವಿಯವರಿಗೆ ಹತ್ತಿರವಾದರು! ಒಮ್ಮೆ, ಶಾಮಣ್ಣ ಪಂಚರ್ ಆಗಿದ್ದ ತಮ್ಮ ಸೈಕಲ್ಲನ್ನು ತಳ್ಳಿಕೊಂಡು ಹೋಗುತ್ತಿದ್ದರಂತೆ. ಆಗ ಬಂದ, ತೇಜಸ್ವಿ ’ಅದನ್ನು ಅಲ್ಲೇ ಒಂದು ಕಡೆ ತಳ್ಳಿ ಬನ್ರಿ. ಡಬಲ್ ರೈಡ್ ಹೋಗೋಣ’ ಎಂದರಂತೆ. ಅಂದು ತೇಜಸ್ವಿಯವರ ಸೈಕಲ್ಲಿನ ಕ್ಯಾರಿಯರ್ ಹತ್ತಿದ್ದ ಶಾಮಣ್ಣನವರು, ನಂತರ ತಮ್ಮ ಸೈಕಲ್ಲನ್ನು ಮರೆತೇಬಿಟ್ಟರಂತೆ. ಆ ಕ್ಯಾರಿಯರ್ ಮೇಲೆ ಕುಳಿತೇ ಹರಟೆ ಹೊಡೆಯುತ್ತಾ ಶಿವಮೊಗ್ಗಾದ ಬೀದಿ ಸುತ್ತುವುದು ಇಬ್ಬರಿಗೂ ಇಷ್ಟವಾದ ಕಾಯಕವಾಗಿಬಿಡುತ್ತದೆ.

ಯೌವ್ವನ ಹೊಸ್ತಿಲಲ್ಲಿ ನಿಂತಿದ್ದ ಶಾಮಣ್ಣನವರಿಗೆ ಕವನ ಗೀಚುವ ಅಭ್ಯಾಸ. ವಯಸ್ಸಿಗೆ ಅನುಗುಣವಾಗಿ ಪ್ರೇಮಕವನಗಳೇ ಹೆಚ್ಚು. ತೇಜಸ್ವಿ ಕುವೆಂಪು ಅವರ ಮಗ. ಆದ್ದರಿಂದ ಸಾಹಿತ್ಯದಲ್ಲಿ ಆಸಕ್ತಿ ಇದ್ದೇ ಇರುತ್ತದೆ ಎಂದುಕೊಂಡು ತಾವು ಬರೆದಿದ್ದನ್ನು ತೇಜಸ್ವಿಗೆ ತೋರಿಸುವ ತವಕ. ಆದರೆ ತೇಜಸ್ವಿಯದು ಅದಕ್ಕೆ ನಿರುತ್ಸಾಹದ ಪ್ರತಿಕ್ರಿಯೆ. ತೇಜಸ್ವಿಯವರ ಮೊದಲ ಕತೆ ’ಲಿಂಗ ಬಂದ’ ಪ್ರಜಾವಾಣಿಯಲ್ಲಿ ಪ್ರಕಟವಾದ ದಿನ, ಶಾಮಣ್ಣ ಬಂದು ’ತೇಜಸ್ವಿ ಕತೆ ತುಂಬಾ ಚೆನ್ನಾಗಿದೆ’ ಎಂದರಂತೆ. ಆಗ ತೇಜಸ್ವಿ ’ಏನ್ರಿ, ಪೂರ್ತಿ ಓದಿದರೊ ಅಥವಾ ಬರೀ ಟೈಟಲ್, ನನ್ನ ಹೆಸರು ನೋಡಿ ಹೇಳುತ್ತಿದ್ದೀರೊ’ ಎಂದು ಕಿಚಾಯಿಸಿದರಂತೆ.

ಅದಾದ ಮೇಲೆ, ಶಾಮಣ್ಣ ತಮ್ಮ ಕವನಗಳನ್ನು ತೇಜಸ್ವಿಗೆ ತೋರಿಸುವ ಸಾಹಸ ಮಾಡಿದ್ದಾರೆ. ’ಬಿಡುವಾದಾಗ ಓದಿ, ಅಭಿಪ್ರಾಯ ತಿಳಿಸಿ’ ಎಂಬ ಮಾತನ್ನೂ ಆಡಿದ್ದಾರೆ. ’ಅಯ್ಯೋ. ಈಗಲೇ ಓದುತ್ತೇನೆ ಕೊಡಿರಿ’ ಎಂದು, ತುಂಗಾನದಿಯ ಸೇತುವೆ ಹತ್ತಿರ, ಅದರ ಮೇಲೆ ಹತ್ತಿ ನಿಂತು ಒಂದರ್ಧ ಗಂಟೆಯಲ್ಲಿ ಶಾಮಣ್ಣ ಕೊಟ್ಟಿದ್ದ ಕವಿತೆಗಳನ್ನೆಲ್ಲಾ ಓದಿದ್ದಾರೆ. ನಂತರ, ಅವನ್ನೆಲ್ಲಾ ಪರಪರ ಎಂದು ಸಹಸ್ರ ಚೂರುಗಳನ್ನಾಗಿ ಹರಿದು ನದಿಯೆಡೆಗೆ ತೂರಿಬಿಟ್ಟರಂತೆ. ಪಾಪ, ಶಾಮಣ್ಣ, ತನ್ನ ಕವನದ ಹಾಳೆಯ ಕೊನೆಯ ಚೂರು ನೆಲ ಮುಟ್ಟುವವರೆಗೂ ಅದನ್ನು ನೋಡುತ್ತಾ ನಿಂತಿದ್ದರಂತೆ. ’ಏನ್ರಿ ಶಾಮಣ್ಣ, ನೀವು ಯಾವ್ಯಾವ ಪುಸ್ತಕ ಓದಿದ್ದೀರಿ? ಯಾವ ಕವಿಗಳನ್ನು ಓದಿದ್ದೀರಿ? ಅವರನ್ನು ಓದಿದ್ದೀನಿ, ಇವರನ್ನು ಓದಿದ್ದೀನಿ ಅಂತ ಹೇಳಿದ್ದೆಲ್ಲಾ ನಿಜವೇನ್ರಿ?’ ಎಂದರಂತೆ. ಶಾಮಣ್ಣ ನಕ್ಕು ಸುಮ್ಮನಾದರಂತೆ!

ಶಿವಮೊಗ್ಗದಲ್ಲಿ ನಡೆಸಿದ ಹುಡುಗಾಟಗಳು, ಹಾಸ್ಟೆಲ್ಲಿನಲ್ಲಿ ಮಾಡಿದ ಜಾಯಿಂಟ್ ಸ್ಟಡಿ, ನಿದ್ದೆಗೆಡುವುದಕ್ಕೆಂದು ಅಜ್ಜಿಮನೆಯಿಂದ ಕಾಫಿಗೆ ಹಾಲು, ಡಿಕಾಕ್ಷನ್ ಕದ್ದಿದ್ದು, ಹಾಗೆ ಕದ್ದಿದ್ದನ್ನು, ಟಾಯಲೆಟ್ಟಿಗೆ ನೀರು ತೆಗೆದುಕೊಂಡು ಹೋಗಲು ಇಟ್ಟಿದ್ದ ಅಮುಲ್ ಡಬ್ಬಾದಲ್ಲಿ ಅಡಗಿಸಿಟ್ಟುಕೊಂಡು ತಂದ್ದದ್ದು, ಅದು ಟಾಯಲೆಟ್ಟಿಗಾಗಿ ಇಟ್ಟಿದ್ದ ಡಬ್ಬಾ ಎಂದು ತಿಳಿದು ಪೇಚಾಡಿಕೊಂಡಿದ್ದು, ಮುಂದೆ ಒಳ್ಳೆಯ ಐ.ಎ.ಎಸ್. ಅಧಿಕಾರಿಯಾಗಿ ಹೆಸರು ಮಾಡಿದವರೊಬ್ಬರು ಸೈಕಲ್ಲಿನ ಬಲ್ಪುಗಳನ್ನು ಕದ್ದು ತಮ್ಮ ಪೆಟ್ಟಿಗೆಯಲ್ಲಿ ಸಂಗ್ರಹಿಸಿಕೊಂಡಿದ್ದು, ಸಹಪಾಠಿಯೊಬ್ಬಳನ್ನು ಇವರ ಜೊತೆಗಾರನೊಬ್ಬ ’ಠೊಣಪಿ’ ಎಂದು ಕರೆದು ಇಕ್ಕಿಸಿಕೊಂಡಿದ್ದು ಎಲ್ಲವೂ ಒಂದೊಂದು ರೂಪದಲ್ಲಿ ತೇಜಸ್ವಿಯವರ ಕತೆಗಳಲ್ಲಿ ಅಭಿವ್ಯಕ್ತಗೊಂಡಿರುವುದನ್ನು ಶಾಮಣ್ಣ ನೆನಪಿಸಿಕೊಂಡರು. ’ಡೇರ್ ಡೆವಿಲ್ ಮುಸ್ತಾಪ’ ಕತೆಯ ಮುಸ್ತಾಪ ಪಾತ್ರಧಾರಿಯೂ ಶಾಮಣ್ಣನವರ ಸಹಪಾಠಿಯೇ ಆಗಿದ್ದನಂತೆ.

ತೇಜಸ್ವಿಯವರ ’ಗಾಂಧಿಜಿಯ ದೆಸೆಯಿಂದ’ ಕತೆಯಿದೆಯಲ್ಲ, ಅದರಲ್ಲಿ, ಬೀಡಿತುಂಡನ್ನು ಸೇದಿ, -ಗಾಂಧೀಜಿಯವರ ಪ್ರಬಾವದಿಂದ – ತನ್ನ ತಂದೆಗೆ ಕಾಗದ ಬರೆದು ತಪ್ಪು ಒಪ್ಪಿಕೊಳ್ಳುವ ಹುಡುಗ ಯಾರೆಂದು ಕೊಂಡಿರಿ? ಅದು ನಮ್ಮ ಈ ಶಾಮಣ್ಣನವರೆ! ಗಾಂಧೀಜಿಯವರ ತಂದೆಯೇನೊ ತಮ್ಮ ಮಗನ ನೇರ ನಡುವಳಿಕೆಯನ್ನು ಕಂಡು, ಕ್ಷಮಿಸಿದರು. ಆದರೆ ಇಲ್ಲಿ ಶಾಮಣ್ಣನವರ ತಂದೆ, ’ನೀನು ತುಂಬಾ ಒಳ್ಳೆ ಕೆಲಸ ಮಾಡಿದ್ದೀಯ, ಅದೂ ನನಗೇ ಕಾಗದ ಬರೆದು. ನೀನು ಓದಿದ್ದೇ ಸಾಕು ನಡಿ’ ಎಂದು ಅಬ್ಬರಿಸಿಬಿಟ್ಟಿದ್ದರಂತೆ. ಅದನ್ನೇ ಹರಟೆಯ ನಡುವೆ, ತೇಜಸ್ವಿಗೆ ಹೇಳಿದ್ದರು. ಅದು ತೇಜಸ್ವಿಯವರ ಕತೆಯಲ್ಲಿ ಕಲಾತ್ಮಕವಾಗಿ ಅಭಿವ್ಯಕ್ತಗೊಂಡಿತ್ತು.

ಶಾಮಣ್ಣನವರು ಭಗವತಿಕೆರೆ ಸಮೀಪ ಜಮೀನು ಕೊಂಡು, ಒಂದು ಹುಲ್ಲಿನ ಗುಡಿಸಲು ಹಾಕಿಕೊಂಡು ನೆಲೆಸಿದ್ದರಂತೆ. ಒಮ್ಮೆ ಅಲ್ಲಿಗೆ ಜೀಪಿನಲ್ಲಿ ಲಂಕೇಶ್ ಮತ್ತು ತೇಜಸ್ವಿ ಬಂದರು. ಅಂದು ಅಲ್ಲಿಯೇ ಉಳಿಯುವ ಯೋಜನೆಯೂ ಸಿದ್ಧವಾಗಿತ್ತು. ಆದರೆ ಅವರಿಬ್ಬರು ಬರುವಷ್ಟರಲ್ಲಿ ಹುಲ್ಲಿನ ಮಾಡು ಗಾಳಿಗೆ ಹಾರಿ ಹೋಗಿತ್ತು. ಲಂಕೇಶ್ ಬಂದವರೇ ಅದನ್ನು ನೋಡಿ, ’ನಾನಿಲ್ಲಿ ಉಳಿಯುವುದಿಲ್ಲ’ ಎಂದುಬಿಟ್ಟರು. ಆದರೆ ತೇಜಸ್ವಿ ಬಿಡಬೇಕಲ್ಲ. ’ಇಷ್ಟು ಪುಟ್ಟ ಗುಡಿಸಿಲಿನ ಮಾಡಿಗೆ ಹುಲ್ಲನ್ನು ಮುಚ್ಚುವುದು ಎಷ್ಟು ಹೊತ್ತು’ ಎಂದು ಲಂಕೇಶರನ್ನು ಸುಮ್ಮನಿರಿಸಿ ಶಾಮಣ್ಣವರ ನೆರವಿನಿಂದ ಹುಲ್ಲು ಹೊದೆಸೇ ಬಿಟ್ಟರಂತೆ. ಆದರೂ ಅಲ್ಲಿ ರಾತ್ರಿ ಕಳೆಯಲು ಲಂಕೇಶರಿಗೆ ಇಷ್ಟವಿಲ್ಲ. ’ಒಂದು ಸೊಳ್ಳೆ ಪರದೆಯಾದರೂ ಇದ್ದಿದ್ದರೆ, ಅದನ್ನೇ ಒಂದು ರೂಮು ಎಂದು ಭಾವಿಸಿಕೊಂಡು ನಿದ್ದೆ ಮಾಡಬಹುದಿತ್ತು’ ಎಂಬುದು ಅವರ ಅಭಿಪ್ರಾಯ. ಆದರೆ, ತೇಜಸ್ವಿ ’ಒಂದು ರಾತ್ರಿ ಕಳೆಯುವುದಕ್ಕೆ ಏಕಿಷ್ಟು ಯೋಚಿಸಬೇಕು’ ಎನ್ನುತ್ತಿದ್ದರು. ಲಂಕೇಶರು ಮಲಗುವ ಸಿದ್ಧತೆಯಲ್ಲೊ ಏನೊ ನೆಲಕ್ಕೆ ಕೈಯೂರಿದಾಗ, ಅವರ ಕೈಯಿ ನೆಲದೊಳಕ್ಕೆ ಇಳಿದುಬಿಡುತ್ತದೆ. ಕೆಳಗೆ ಇಲಿಯೊ ಹೆಗ್ಗಣವೊ ಬಿಲ ಹೊಡೆದಿತ್ತೆಂದು ಕಾಣುತ್ತದೆ. ಅದಾದ ಮೇಲೆ ಲಂಕೇಶ್ ’ನಾನಿಲ್ಲಿ ಮಲಗುವುದೇ ಇಲ್ಲ’ ಎಂದು ಜೀಪಿನಲ್ಲೇ ಮಲಗಿದ್ದರಂತೆ.

ಆ ತೋಟದಲ್ಲಿ ಮನೆಯೊಂದನ್ನು ಕಟ್ಟಲು, ಅದಕ್ಕೆ ಬೇಕಾದ ಒಂದು ಪ್ಲಾನ್ ಒದಗಿಸಲು ತೇಜಸ್ವಿಗೆ ಶಾಮಣ್ಣ ಕೇಳಿದ್ದರಂತೆ. ತೇಜಸ್ವಿ ಅದನ್ನು ತಮ್ಮ ಇನ್ನೊಬ್ಬ ಮಿತ್ರ ಶಿವಪ್ರಸಾದರಿಗೆ ಹೇಳಿ, ಸಿದ್ಧಪಡಿಸಿ ಪೋಸ್ಟಿನಲ್ಲಿ ಕಳುಹಿಸಿದರಂತೆ. ಆದರೆ, ಅದು ಶಾಮಣ್ಣನವರಿಗೆ ಎಷ್ಟು ದಿನವಾದರೂ ತಲಪಲೇ ಇಲ್ಲ. ಏಕೆಂದರೆ, ಮೈದೊಳಲು ಪೋಸ್ಟಾಫೀಸಿನ ರನ್ನರ್ ಹುಟ್ಟಾ ಸೋಮಾರಿ. ಜೊತೆಗೆ ಜೂಜುಕೋರ. ಮನಿಆರ್ಡರ್ ಬಂದ ಹಣವನ್ನೆಲ್ಲಾ ಸಂಬಂಧಪಟ್ಟವರಿಗೆ ತಲುಪಿಸುವ ಬದಲು ಇಸ್ಪೀಟು ಆಡಲು ತೆಗೆದುಕೊಳ್ಳುತ್ತಿದ್ದ. ಹಣ ತಲುಪಬೇಕಾದವರಿಗೆ ಅದೃಷ್ಟವಿದ್ದು, ಅವನು ಇಸ್ಪೀಟಿನಲ್ಲಿ ಹಣ ಗೆದ್ದರೆ ಹಣ ಪಡೆಯುತ್ತಿದ್ದರು. ಇಲ್ಲದಿದ್ದರೆ ಇಲ್ಲ! ಯಾರ್ಯಾರ ಕಾಗದಗಳನ್ನು ಯಾರ್ಯಾರಿಗೊ ಕೊಡುವುದು, ಬೇರೆಯವರ ಕೈಯಲ್ಲಿ ಕೊಟ್ಟುಕಳುಹಿಸುವುದು… ಹೀಗೆ ಆತ ಆ ಪೋಸ್ಟಾಫೀಸಿನಲ್ಲಿ ರನ್ನರ್ ಮಾತ್ರವಾಗಿರದೆ, ಸರ್ವಾಧಿಕಾರಿಯೂ ಆಗಿದ್ದ.

ತೇಜಸ್ವಿ ಭಗವತಿಕೆರೆಗೆ ಬಂದಾಗ, ಇನ್ನೂ ಬರದಿರದ ಮನೆಯ ಪ್ಲಾನ್ ಬಗ್ಗೆ ವಿಚಾರಿಸಿದಾಗ, ಈ ರನ್ನರ್ ವಿಷಯವೆಲ್ಲಾ ತಿಳಿಯಿತು. ಅವನನ್ನೊಮ್ಮೆ ನೋಡಬೇಕು, ಅವನನ್ನು ಕೇಳಬೇಕು ಎಂದು ತೇಜಸ್ವಿ ಹೊರಟೇ ಬಿಟ್ಟರು. ’ರೀ ತೇಜಸ್ವಿ ಗಲಾಟೆ ಎಲ್ಲಾ ಬೇಡಾರಿ’ ಎಂದು ಶಾಮಣ್ಣ ಹೇಳಿದರೂ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಲೇ ಇಲ್ಲ. ಮೈದೊಳಲಿಗೆ ಹೋಗಿ ಆತನಿಗೆ ಚೆನ್ನಾಗಿ ಗದರಿಸಿದರು. ಆತ ಅದೇ ಸೋಮಾರಿ ಧ್ವನಿಯಲ್ಲೇ, ’ನಾನು ಎಲ್ಲಾ ಕೊಡುತ್ತೇನೆ. ಇವರ ಮನೆ ದೂರ ಅದಕ್ಕೆ ಲೇಟಾಗಿದೆ’ ಎನ್ನುತ್ತಿದ್ದ. ಶಾಮಣ್ಣ ತಡೆಯುತ್ತಿದ್ದರೂ, ತೇಜಸ್ವಿ ಆತನಿಗೆ ಚೆನ್ನಾಗಿ ಗದರಿ, ಒಂದು ಏಟನ್ನೂ ಕೊಟ್ಟು, ಎಚ್ಚರಿಕೆಯನ್ನೂ ಕೊಟ್ಟರು. ಆಗ ಆ ಊರಿನ ಒಬ್ಬೊಬ್ಬರೇ ಬಂದು, ’ಅವನಿಗೆ ಸರಿಯಾಗಿ ಮಾಡಿದಿರಿ, ನಮ್ಮ ಮನಿಯಾರ್ಡರ್ ಹಣವನ್ನೆಲ್ಲಾ ತಿಂದು ತೇಗಿದ್ದ’ ಎಂದು ಇವರಿಗೆ ಶಹಬ್ಬಾಸ್ ಗಿರಿ ಕೊಡಲಾರಂಭಿಸಿದರಂತೆ! ಈ ಎಲ್ಲಾ ಅನುಭವಗಳೇ ಮುಂದೆ ’ಅಬಚೂರಿನ ಪೋಸ್ಟಾಫಿಸು’ ಎಂಬ ಅದ್ಭುತ ಕತೆಯ ಹುಟ್ಟಿಗೆ ಕಾರಣವಾದವುಗಳು.

ಒಮ್ಮೆ ಕುಪ್ಪಳಿಯಲ್ಲಿ, ಕೆರೆಯ ಬಳಿ ಇವರಿಬ್ಬರೂ ಹೋಗುತ್ತಿದ್ದಾರೆ. ತೇಜಸ್ವಿಯ ಕೈಯಲ್ಲಿ ಬಂದೂಕಿದೆ. ಕೆರೆಯ ಬಳಿ ಒಂದು ಬಾರೀ ಕಾಳಿಂಗ ಸರ್ಪ ಕೆರೆಹಾವನ್ನು ಹಿಡಿದು ನುಂಗುವ ಪ್ರಯತ್ನದಲ್ಲಿದೆ. ಒಳ್ಳೆಯ ಗುರಿಕಾರರಾಗಿದ್ದ ತೇಜಸ್ವಿ ಸರ್ಪಕ್ಕೆ ಗುರಿಯಿಟ್ಟು ಗುಂಡು ಹಾರಿಸಿದ್ದಾರೆ. ಕಾಳಿಂಗ ಸತ್ತುಹೋಗಿದೆ. ಕೆರೆಹಾವು ತಪ್ಪಿಸಿಕೊಂಡಿದೆ. ನಂತರ ತೇಜಸ್ವಿ, ಶಾಮಣ್ಣ ಮೈಸೂರಿನಲ್ಲಿ ಇದರ ಚರ್ಮವನ್ನು ಟ್ಯಾನಿಂಗ್ ಮಾಡುವವರು ಒಬ್ಬರಿದ್ದಾರೆ. ಮಾಡಿಸಿದರೆ ಒಳ್ಳೆಯ ಸಂಗ್ರಹವೂ ಆಗುತ್ತದೆ, ಒಳ್ಳೆಯ ಬೆಲೆಯೂ ಬರುತ್ತದೆ ಎಂದು, ಹೇಗೋ ಮಾಡಿ ಅದರ ಚರ್ಮ ಸುಲಿಸಿ, ಸುರುಳಿಯಾಗಿ ಸುತ್ತಿ ಒಂದು ಡಬ್ಬಾದಲ್ಲಿ ಹಾಕಿ, ’ಶಾಮಣ್ಣ ಕೇರಾಫ್ ತೇಜಸ್ವಿ’ ಎಂದು ಉದಯರವಿ ವಿಳಾಸಕ್ಕೆ ಪಾರ್ಸೆಲ್ ಕಳುಹಿಸಿದ್ದಾರೆ. ಹೀಗೆ ಚರ್ಮವನ್ನು ಸಂಗ್ರಹಿಸುವಾಗ ಅದಕ್ಕೆ ಉಪ್ಪು ಅಥವಾ ಉಪ್ಪು-ಅರಿಷಿಣದ ಮಿಶ್ರಣವನ್ನು ಲೇಪಿಸಬೇಕು. ಆದರೆ, ತೇಜಸ್ವಿ ಶಾಮಣ್ಣ ಇಬ್ಬರೂ ಆ ವಿಷಯವನ್ನು ಮರೆತೇ ಬಿಟ್ಟಿದ್ದಾರೆ. ಆ ಪಾರ್ಸೆಲ್, ತೀರ್ಥಹಳ್ಳಿ ತಲುಪಿ, ಮೈಸೂರಿನ ಪೋಸ್ಟಾಫೀಸು ಸೇರುವಷ್ಟರಲ್ಲಿ ಅದರಿಂದ ದುರ್ಗಂಧ ಹೊರಡಲಾರಂಭಿಸಿದೆ.

ಇವರು ಮೈಸೂರಿಗೆ ಬಂದು ಅದನ್ನು ಬಿಡಿಸಿಕೊಳ್ಳುವಷ್ಟರಲ್ಲಿ ಪೋಸ್ಟಾಫೀಸಿನೊಳಗೆ ಕುಳಿತುಕೊಳ್ಳಲಾರದಷ್ಟು ವಾಸನೆ. ಮೈಸೂರಿಗೆ ಬಂದರೂ ಅದರ ಬಗ್ಗೆ ಯೋಚನೆಯನ್ನೇ ಮಾಡದ ಶಾಮಣ್ಣ ಅರಾಮವಾಗಿದ್ದುಬಿಟ್ಟಿದ್ದಾರೆ. ಪೋಸ್ಟ್‌ಮ್ಯಾನ್ ಶಾಮಣ್ಣನನ್ನು ಹೇಗೋ ಪತ್ತೆ ಹಚ್ಚಿ ಪಾರ್ಸೆಲ್ ಬಿಡಿಸಿಕೊಳ್ಳುವಂತೆ ಕರೆದೊಯ್ದಿದ್ದಾನೆ. ಪೋಸ್ಟಾಫೀಸಿನಲ್ಲಿ ಯಾರೂ ಇಲ್ಲವೇ ಇಲ್ಲ! ವಾಸನೆ ಸಹಿಸಲಾರದೆ, ಅಲ್ಲಿ ಕೆಲಸ ಮಾಡುವವರೆಲ್ಲಾ ಹೊರಗೆ ಕುಳಿತು ಕೆಲಸ ಮಾಡುತ್ತಿದ್ದರಂತೆ! ಪಾರ್ಸೆಲ್ ಬಿಡಿಸಿ, ಚರ್ಮವನ್ನು ಟ್ಯಾನಿಂಗ್ ಮಾಡುವವರ ಬಳಿ ತೆಗೆದಕೊಂಡು ಹೋದರೆ, ’ಇದನ್ನು ಪೂರ್ತಿ ಹಾಳು ಮಾಡಿಬಿಟ್ಟಿದ್ದೀರಿ. ಅದಕ್ಕೆ ಉಪ್ಪು-ಅರಿಷಿಣ ಲೇಪಿಸಿ ತರಬೇಕಿತ್ತು. ಅದು ಉಪಯೋಗಕ್ಕೆ ಬರುವುದಿಲ್ಲ. ತೆಗೆದುಕೊಂಡು ಹೋಗಿ ಹೂತುಹಾಕಿಬಿಡಿ’ ಎಂದರಂತೆ!

ನೆನ್ನೆಯ ಸಮಾರಂಭದಲ್ಲಲ್ಲದೆ, ಹಿಂದೆ ಕುಪ್ಪಳಿಯಲ್ಲಿ ಭೇಟಿಯಾದಾಗ ಹೇಳಿದ್ದ ಎರಡು ಘಟೆನಗಳನ್ನು ಇಲ್ಲಿಯೇ ದಾಖಲಿಸಬಹುದಾಗಿದೆ. ಮೈಸೂರಿನಲ್ಲಿ ತೇಜಸ್ವಿ ಶಾಮಣ್ಣ ಪ್ರೆಸ್ ನಡೆಸುತ್ತಿದ್ದರು. ಹಲವಾರು ಸಾಹಿತಿಗಳ ಪುಸ್ತಕಗಳು ಮುದ್ರಣಕ್ಕೆ ಬರುತ್ತಿದ್ದವು. ಅದರಲ್ಲಿ ಅವರ ಗುರುಗಳಾಗಿದ್ದ ಸುಜನಾ ಅವರ ಒಂದು ಕವನಸಂಕಲನವೂ ಇತ್ತು. ಅದರಲ್ಲಿನ ಒಂದು ಪದ್ಯದ ಹೆಸರು ’ಕುಂಡಗಳೇ ಸಾಕು’ ಎಂದಿತ್ತು. ಇನ್ನೇನು ಅಂತಿಮ ಮುದ್ರಣಕ್ಕೆ ಹೋಗಬೇಕು, ಆಗ ಶಾಮಣ್ಣನವರು ಅದನ್ನು ತೇಜಸ್ವಿಯವರಿಗೆ ತೋರಿಸಿದ್ದಾರೆ. ಅದನ್ನು ಓದಿದ ಇಬ್ಬರೂ, ಅದರ ಶೀರ್ಷಿಕೆಯಲ್ಲಿನ ಡ’ಕಾರವನ್ನು ಡಿ’ಕಾರವನ್ನಾಗಿಸಿ ಮುದ್ರಿಸಿಬಿಟ್ಟಿದ್ದಾರೆ. ಅದರ ಮೊದಲ ಪ್ರತಿಗಳನ್ನು ಸುಜನಾ ಅವರಿಗೆ ಒಪ್ಪಿಸಿ ಏನೂ ನಡೆದಿಲ್ಲವಂತೆ ಬಂದಿದ್ದಾರೆ. ಸ್ವಲ್ಪ ಹೊತ್ತಿನಲ್ಲಿಯೇ ಪ್ರೆಸ್ಸಿನಬಳಿ ಬಂದು, ’ಏನ್ರೊ ಇದು, ಈ ರೀತಿ ಆಗಿಬಿಟ್ಟಿದೆ. ನಾನೂ ಗಮನಿಸಲಿಲ್ಲ; ನೀವು ಗಮನಿಸಲಿಲ್ಲ’ ಎಂದು ಮತ್ತೆ ’ಕುಂಡಗಳೇ ಸಾಕು’ ಎಂದು ಮೊಳೆ ಜೋಡಿಸಿಸಿಕೊಂಡು, ಎಲ್ಲಾ ಪುಸ್ತಕಗಳಲ್ಲೂ ಆ ಶೀರ್ಷಿಕೆಯ ಮೇಲೆ ಕೈಯಿಂದಲೇ ಮುದ್ರಿಸುತ್ತಾ ಹೋಗಿದ್ದಾರೆ. ಇವರಿಬ್ಬರಿಗೂ ತಮ್ಮ ತಪ್ಪಿನ ಅರಿವಾಗಿದೆ ಎನ್ನುವುದಕ್ಕಿಂತ ಗುರುಗಳ ದೊಡ್ಡತನ ಇವರ ಕಣ್ಣು ತೆರೆಸಿದೆ. ಆಗ ಇವರೂ ಸಹಕರಿಸಿ ಎಲ್ಲಾ ಮುದ್ರಿತ ಪ್ರತಿಗಳಲ್ಲೂ ಆ ಶೀರ್ಷಿಕೆಯನ್ನು ಸರಿಪಡಿಸಿದ್ದಾರೆ.

ಮಲೆನಾಡಿನಲ್ಲಿ ಕೃಷಿ ಪರಿಣಿತರಾಗಿದ್ದ ಅಲಿಗೆ ಪುಟ್ಟಯ್ಯನಾಯಕ ಅವರನ್ನು ತೇಜಸ್ವಿ ಮತ್ತು ಶಾಮಣ್ಣ ಇಬ್ಬರೂ ಗುರುಗಳೇ ಎಂದು ಕರೆಯುತ್ತಿರುತ್ತಾರೆ. ಇದು ಸ್ವತಃ ನಾಯಕರಿಗೆ ಇಷ್ಟವಿರಲಿಲ್ಲ. ಆದರೂ ಇವರು ಬಿಟ್ಟಿರಲಿಲ್ಲ. ಇವರಿಬ್ಬರ ಪ್ರೀತಿಯ ಅರಿವಿದ್ದ ನಾಯಕರು ಸುಮ್ಮನಾಗಿದ್ದರಂತೆ. ಇವರಿಬ್ಬರನ್ನು ಕಂಡರೆ ಅವರಿಗೆ ಆನಂದ. ಇವರಿಬ್ಬರೂ ಮನೆಗೆ ಬರುತ್ತಾರೆಂದರೆ ಸಾಕು, ವಿಶೇಷ ಸಿದ್ಧವಾಗಲೇ ಬೇಕು. ಜಿಲೇಬಿಯನ್ನು ಮಾಡಿಸಿ, ಅದನ್ನು ಸಕ್ಕರೆ ಪಾಕಕ್ಕೆ ಅದ್ದುವ ಬದಲು, ನೇರವಾಗಿ ಜೇನುತುಪ್ಪದಲ್ಲಿ ಅದ್ದಿಸಿ ತಿನ್ನಲು ಕೊಡುತ್ತಿದ್ದರಂತೆ. ಅದನ್ನು ಮೊದಲಬಾರಿಗೆ ತಿಂದ ತೇಜಸ್ವಿಗೆ ತುಂಬಾ ಇಷ್ಟವಾಗಿದ್ದರಿಂದ, ಮುಂದೆ ತೇಜಸ್ವಿ ಅಲಿಗೆಗೆ ಬಂದಾಗಲೆಲ್ಲಾ ಆ ಜೇನಿನಲ್ಲದ್ದಿದ ಜಿಲೇಬಿ ಸಿದ್ಧವಾಗಿರುತ್ತಿತ್ತಂತೆ. ಶ್ರೀಮತಿ ರಾಜೇಶ್ವರಿಯವರೂ ನಾಯಕರ ಕುರಿತ ತಮ್ಮ ಲೇಖನದಲ್ಲಿ ಈ ವಿಶೇಷ ಜಿಲೇಬಿಯ ಬಗ್ಗೆ, ಅದರ ಬಗ್ಗೆ ವಿವರಿಸುತ್ತಿದ್ದ ತೇಜಸ್ವಿಯವರ ಬಗ್ಗೆ ಬರೆದಿದ್ದಾರೆ.

ನೆನ್ನೆ ಕಾರ್ಯಕ್ರಮ ಮುಗಿದ ಮೇಲೆ, ನಾನು ಶಾಮಣ್ಣನವರನ್ನು ಸಮೀಪಿಸಿ, ಸರ್ ನಾನು, ಅಲಿಗೆ ಪುಟ್ಟಯ್ಯನಾಯಕರ ಪುಸ್ತಕ…. ಎನ್ನುತ್ತಿದ್ದಂತೆ, ಏ… ಪುಟ್ಟಯ್ಯನಾಯಕರನ್ನು ಹೇಗೆ ಮರೆಯುವ ಆಗಿಲ್ಲವೊ ಹಾಗೆ ಅವರ ಬಗ್ಗೆ ಪುಸ್ತಕ ಮಾಡಿದ ನಿಮ್ಮನ್ನೂ ಮರೆಯುವ ಆಗಿಲ್ಲ ಎಂದು ಪ್ರೀತಿಯಿಂದ ಅಪ್ಪಿಕೊಂಡಾಗ ನಾನು ಕರಗಿ ಹೋಗಿದ್ದೆ.

ತೇಜಸ್ವಿ ಶಾಮಣ್ಣನವರ ನಡುವಿನ ಸ್ನೇಹ ಜೇನಿನಲ್ಲಿ ಅದ್ದಿದ ಜಿಲೇಬಿಯಂತೆ! ಯಾವಾಗಲೂ ವಿಶೇಷವೇ. ಅವರು ನೂರ್ಕಾಲ ನಮ್ಮ ನಡುವೆ ಇರಲಿ, ತಮ್ಮ ನಿಷ್ಕಲ್ಮಶ ಸ್ನೇಹದ ಬೆಳಕನ್ನು ಚೆಲ್ಲುತ್ತಿರಲಿ ಎಂದು ಆಶಿಸೋಣ.

‍ಲೇಖಕರು avadhi

17 June, 2013

6 Comments

  1. shivu K

    ಬಿ.ಅರ್ ಸತ್ಯನಾರಾಯಣ ಸರ್,
    “ಮತ್ತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯ ಬಿಡುಗಡೆಯ ವಿಚಾರವನ್ನು ತಿಳಿಸುವ ನೆಪವಾಗಿ ಇನ್ನಷ್ಟು ನಮಗೆ ಗೊತ್ತಿಲ್ಲದ ತೇಜಸ್ವಿ ಮತ್ತು ಕಡಿದಾಳ್ ಮಂಜಣ್ಣ ನಡುವಿನ ಸಂಗತಿಗಳನ್ನು ತಿಳಿಸಿದ್ದೀರಿ. ಜೇನಿನಲ್ಲಿ ಅದ್ದಿದ ಜಿಲೇಬಿ ವಿಚಾರ ತಿಳಿಸಿ ಬಾಯಲ್ಲಿ ನೀರೂರುವಂತೆ ಮಾಡಿದ್ದೀರಿ. ಖಂಡಿತವಾಗಿಯೂ ಅವರಿಬ್ಬರ ನಿಷ್ಕಲ್ಮಶ ಸ್ನೇಹ ಬೆಳಕನ್ನು ಚೆಲ್ಲಿತ್ತಿರಲಿ ಎನ್ನುವುವುದು ನಮ್ಮ ಆಶಯವೂ ಕೂಡ…ಧನ್ಯವಾದಗಳು.

  2. G Venkatesha

    Shamanna_Tejasvi ravara odanaata, saahasagalu, hudugaatagalannu oduttiddare namage hrudayasparshi mattu spoortidaayakavaada avubhaavavaaguttide.

  3. raju

    ತೇಜಸ್ವಿ ಎಂಬ ಬಳ್ಳಿಯಲ್ಲಿ ಮೊಗೆದಸ್ಟು ಮಲ್ಲಿಗೆ, ಈ ಕಂಪು ಅವದಿಯಲ್ಲಿ ಪ್ರತಿವಾರವೂ ಘಮಘಮಿಸಲಿ.

  4. Girish.S

    ಶಾಮಣ್ಣ ನವರ ಕಾಡು ತೊರೆಯ ಜಾಡು ಪುಸ್ತಕ ಓದಿದ ಮೇಲೆ ಅವರ ದೊಡ್ಡ ಅಭಿಮಾನಿ ಆಗಿಬಿಟ್ಟಿದ್ದೀನಿ .. ಆ ಪುಸ್ತಕ ಓದಿದ ಮೇಲೆ ತೇಜಸ್ವಿ ಮತ್ತು ಅವರ ನಡುವಿನ ಸ್ನೇಹ ಮತ್ತು ಅವರ ತುಂಟಾಟಗಳು ನೋಡಿ ನಕ್ಕು ನಕ್ಕು ಸಾಕಾಗಿದೆ . ಒಳ್ಳೆಯ ಲೇಖನ ಸರ್

  5. Sharanappa Bachalapur

    sada katheyagi kaduva Tejashwi. raith mukhand kadidala Shamanna sambanda adu katheyad riti nenapisiddu Tejaswi aala ariyalu sadyavaguttade

  6. Santhoshkumar LM

    Super article sir. ನಾನು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಶಾಮಣ್ಣರವರು ಈ ಇಳಿವಯಸ್ಸಿನಲ್ಲಿಯೂ ಇಷ್ಟೊಂದು ಕ್ರಿಯಾಶೀಲವಾಗಿರುವುದನ್ನು ನೋಡಿದರೆ ಖುಷಿಯಾಗುತ್ತದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading