ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ದುಃಸ್ವಪ್ನ ಸತ್ಯವಾಗುತ್ತಿದೆ..

ನಾಗೇಶ್ ಹೆಗಡೆ 

ತೇಜಸ್ವಿ ದುಃಸ್ವಪ್ನ ಸತ್ಯವಾಗುತ್ತಿದೆ:

‘ಗೋಹತ್ಯೆಯನ್ನು ನಿರ್ಬಂಧಿಸಿದರೆ ಬೀದಿ ಬೀದಿಗಳಲ್ಲಿ ಮುದಿ ದನಗಳ ನಿತ್ಯಸಂತೆ ಆದೀತು’ ಎಂಬರ್ಥದಲ್ಲಿ ಪೂರ್ಣ ಚಂದ್ರ ತೇಜಸ್ವಿ ೨೦ ವರ್ಷಗಳ ಹಿಂದೆಯೇ ಹೇಳಿದ್ದರು. ಇದೀಗ ಉತ್ತರ ಪ್ರದೇಶದಲ್ಲಿ ಅದೇ ಆಗುತ್ತಿದೆ. ಗೋಹತ್ಯೆಯನ್ನು ಯೋಗಿ ಆದಿತ್ಯನಾಥ್ ಸರಕಾರ ಬಿಗಿಗೊಳಿಸಿದ 10 ಪರಿಣಾಮಗಳು ಹೀಗಿವೆ : (‘ಇಕಾನಾಮಿಕ್ಸ್ ಟೈಮ್ಸ್’ ಮತ್ತು ‘ಇಂಡಿಯಾ ಟುಡೇ’ ವರದಿ ಆಧರಿಸಿ)

೧. ರೈತರು ತಮ್ಮ ನಿರುಪಯುಕ್ತ ದನಗಳನ್ನು ಸಾಕಲೂ ಆಗದೆ ಮಾರಲೂ ಆಗದೆ ಬಯಲಿಗೆ ಬಿಡುತ್ತಿದ್ದಾರೆ.

೨. ಈ ದನಗಳು ನೀರು-ಮೇವನ್ನು ಹುಡುಕುತ್ತ ಹೊಲ-ಗದ್ದೆಗಳಿಗೆ ಬೇಲಿ ಮುರಿದು ನುಗ್ಗುತ್ತಿವೆ. ಹೊಲಗಳ ಮಾಲೀಕರು ಈ ಚಳಿಯಲ್ಲೂ ರಾತ್ರಿ ಪಾಳಿಯಲ್ಲಿ ಹೊಲದ ಸುತ್ತ ಗಸ್ತು ತಿರುಗುತ್ತಿದ್ದಾರೆ. ಬೆಳೆ ಹಾನಿ ಅನುಭವಿಸುವವರ ಸಂಖ್ಯೆ ಹೆಚ್ಚುತ್ತಿದೆ. ಮೇಯಲು ಹೋಗಿ ಸಿಕ್ಕಿ ಬಿದ್ದ ಬಡಪಾಯಿ ದನಗಳು ಏಟು ತಿಂದು, ಹಸಿವೆ ನೀರಡಿಕೆಯಿಂದ ಮತ್ತೆ ರಸ್ತೆಗೆ ಬರುತ್ತಿವೆ.

೩. ಈ ಮಧ್ಯೆ ದನ ಸಾಕಿದ ಅನೇಕ ಕರುಣಾಳುಗಳು ಪ್ರತಿ ದನಕ್ಕೆ ಮೂರುವರೆ, ನಾಲ್ಕು ಸಾವಿರ ರೂಪಾಯಿ ಕೊಟ್ಟು ‘ಕರುಣಾಳು’ ಸಂಘ ಸಂಸ್ಥೆಗಳಿಗೆ ಹಸ್ತಾಂತರ ಮಾಡುತ್ತಿದ್ದಾರೆ.

೪. ದನಗಳನ್ನೂ ಹಣವನ್ನೂ ಪಡೆದ ಕೆಲವು ಸಂಘಟನೆಗಳು ದನಗಳನ್ನು ಆಂಬುಲೆನ್ಸ್ ಮೇಲೆ ಹೇರಿ ದೂರದ ಬಯಲಲ್ಲಿ ಇಳಿಸಿ, ಹಣವನ್ನು ಜೇಬಿಗಿಳಿಸಿ ನಾಪತ್ತೆ ಆಗುತ್ತಿವೆ.

೫. ಕೆಲವು ಗ್ರಾಮಗಳಲ್ಲಿ ಕುಪಿತ ರೈತರು ಬೀಡಾಡಿ ದನಗಳನ್ನು ಶಾಲೆಗಳಲ್ಲಿ, ಪಂಚಾಯ್ತಿ ಕಟ್ಟಡಗಳಲ್ಲಿ ಕೂಡಿ ಹಾಕಿ ಹೋಗುತ್ತಿದ್ದಾರೆ. ಅವುಗಳಿಗೆ ಮೇವಿಲ್ಲ, ನೀರಿಲ್ಲ. ಸೆಗಣಿ-ಗಂಜಲ ಬಾಚುವವರಿಲ್ಲ.

೬. ಗೋವುಗಳ ರಕ್ಷಣೆಗೆಂತಲೇ ಯೋಗಿ ಸರಕಾರ ದನಗಂದಾಯ ಹೇರಿದ್ದು, ಹಾಗೆ ಸಂಗ್ರಹವಾದ ಹಣದಿಂದ ಗೋಶಾಲೆ ತೆರೆಯುವ ಕೆಲಸ ತೀರಾ ಹಿಂದೆ ಬಿದ್ದಿದೆ. ಈಗಿರುವ ಗೋಶಾಲೆಗಳಲ್ಲಿ ದನದಟ್ಟಣೆ ಮೂರು ನಾಲ್ಕು ಪಟ್ಟು ಜಾಸ್ತಿ ಆಗಿದ್ದು, ನರಕಸದೃಶ ಸ್ಥಿತಿ ಎದುರಾಗಿದೆ.

೭. ಸಣ್ಣ ಪುಟ್ಟ ಗೋಸಂಬಂಧಿ ಪೊಲೀಸ್ ಪ್ರಕರಣದಿಂದಾಗಿ ಎರಡೂ ಧರ್ಮಗಳಿಗೆ ಸೇರಿದ ಜನ ಲಾಕ್ ಅಪ್ ಸೇರಿದ್ದಾರೆ. ಶಾಲೆಗಳಲ್ಲಿ , ಗೋಶಾಲೆಗಳಲ್ಲಿ ದನದಟ್ಟಣೆ ಹೆಚ್ಚಿದ ಹಾಗೆ ಲಾಕ್ ಅಪ್ ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ.

೮. ಪ್ರತಿದನಕ್ಕೆ, ಪ್ರತಿದಿನಕ್ಕೆ ೩೦ ರೂಪಾಯಿ ಅನುದಾನವನ್ನು ಸರಕಾರ ಘೋಷಿಸಿದ್ದು ಕಳೆದ ಆರು ತಿಂಗಳಿಂದ ಹಣ ಬಿಡುಗಡೆ ಆಗಿಲ್ಲ. ಗೋ ಸೇವಾ ಆಯೋಗಕ್ಕೆ ಅಧ್ಯಕ್ಷರೇ ಇಲ್ಲ.

೯. ಅನೇಕ ರೈತರು ಗೋಸಾಕಣೆಯ ರಗಳೆಯೇ ಬೇಡ ಎಂದು ಎಮ್ಮೆ ಸಾಕಣೆಗೆ ತೊಡಗಿದ್ದಾರೆ (ಮುದಿ ಎಮ್ಮೆಗಳನ್ನು ಕಸಾಯಿಖಾನೆಗೆ ಕಲಿಸಲು ಯಾವುದೇ ನಿರ್ಬಂಧ ಇಲ್ಲ). ಹಸುಗಳ ಮಾರಾಟ ಸಾಗಾಟ ಎರಡೂ ನೆಲಕಚ್ಚಿವೆ.

೧೦. ಹಳ್ಳಿಯ ಜನರ ಕೋಪ ಎದುರಿಸಲಾರದೆ ಗೋ ರಕ್ಷಕರು ನಗರ ಬಿಟ್ಟು ಹಳ್ಳಿಕಡೆ ಬರುವುದನ್ನೇ ಬಿಟ್ಟಿದ್ದಾರೆ.

‍ಲೇಖಕರು avadhi

21 January, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading